ರೇಣುಕಾ ಚೌಧುರಿಯವರ ನಗೆ..

ಜಿ ಎನ್ ನಾಗರಾಜ್ 

ಶೂರ್ಪನಖಿ ಮತ್ತು ಹಿಡಿಂಬೆ- ನಿಜ ಶೂರ್ಪನಖಿಯ ಶೋಧ. ಇಬ್ಬರೂ ಬುಡಕಟ್ಟು ಸಂಸ್ಕೃತಿಯ ಪ್ರತೀಕ

ರಾಮಾಯಣದಲ್ಲಿ ನಿಜ ಶೂರ್ಪನಖಿಯ ವ್ಯಕ್ತಿತ್ವವನ್ನು ಕ್ರೂರವಾಗಿ ವಿರೂಪಗೊಳಿಸಲಾಗಿದೆ. ಇದನ್ನು ಅರ್ಥ ಮಾಡಿಕೊಳ್ಳಬೇಕೆಂದರೆ ಮಹಾಭಾರತದ ಹಿಡಿಂಬೆಯನ್ನು, ಉಲೂಪಿ, ಚಿತ್ರಾಂಗದೆಯರನ್ನು ನೆನಪಿಸಿಕೊಳ್ಳಬೇಕು.

ಇವರೆಲ್ಲಾ ವಿವಾಹವೆಂಬ ಪದ್ಧತಿ, ಕುಟುಂಬವೆಂಬ ವ್ಯವಸ್ಥೆ ಅಸ್ತಿತ್ವಕ್ಕೆ ಬರುವ ಮೊದಲಿನ ಬುಡಕಟ್ಟು ಕಾಲದವರು. ಸ್ತ್ರೀ, ಪುರುಷರು ಸಮಾನತೆಯಿಂದಿದ್ದ ಮಾತೃಪ್ರಧಾನ ಸಮಾಜ ಅದು.

ಅಂದು ಸ್ತ್ರೀಯರಾಗಲಿ ಪುರುಷರಾಗಲಿ ತಾವು ಕೂಡಬೇಕೆನಿಸಿದ ವ್ಯಕ್ತಿಗಳೊಡನೆ ನೇರವಾಗಿ ತಮ್ಮ ಮನಸ್ಸನ್ನು ಬಿಚ್ಚಿ ಹೇಳುತ್ತಿದ್ದರು. ಶೂರ್ಪನಖಿ ಸೇರಿದಂತೆ ಈ ನಾಲ್ಕು ಜನರೂ ತಾವು ಇಷ್ಡಪಟ್ಟವರೊಡನೆ ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿರುವುದನ್ನು ಕಾಣಬಹುದು. ಆದರೆ ಅವರ ಈ ಇಚ್ಛೆಗೆ ಸಿಕ್ಕ ಪ್ರತಿಕ್ರಿಯೆಯಲ್ಲಿ ದೊಡ್ಡ ಕಂದರ.

ಇಲ್ಲಿ ಹಿಡಿಂಬೆ, ಶೂರ್ಪನಖಿ ಈ ಎರಡು ಉದಾಹರಣೆಗಳನ್ನು ನೋಡೋಣ.

ಭೀಮ ಹಿಡಿಂಬೆಯ ಅಣ್ಣನೊಡನೆ ಕಾದಿ ಅವನನ್ನು ಕೊಂದ ಮೇಲೆ ಹಿಡಿಂಬೆ ಭೀಮನೊಡನೆ ತನ್ನ ಪ್ರೇಮವನ್ನು ವ್ಯಕ್ತಪಡಿಸುತ್ತಾಳೆ. ಆದರೆ ಭೀಮ ನಿರಾಕರಿಸುತ್ತಾನೆ. ಆಗ ಅವನ ತಾಯಿ ಕುಂತಿ ಮತ್ತು ಅಣ್ಣ ಧರ್ಮರಾಯ ಕೊನೆಗೆ ಸ್ವತಃ ವೇದವ್ಯಾಸ ಮುನಿಯೇ ಬಂದು ಭೀಮನನ್ನು ಒಪ್ಪಿಸುತ್ತಾರೆ. ಒಂದು ಹೆಣ್ಣು ಸಂಗವನ್ನು ಬಯಸಿದರೆ ನಿರಾಕರಿಸಬಾರದು ಎಂಬುದು ಅಂದು ಬುಡಕಟ್ಟುಗಳಲ್ಲಿ ಒಪ್ಪಿತವಾಗಿದ್ದ ತತ್ವ.

ಉಲೂಪಿ, ಚಿತ್ರಾಂಗದೆ ಇಬ್ಬರೂ ಅರ್ಜುನನ ಜೊತೆ ಇದೇ ರೀತಿ ಬೆರೆಯುತ್ತಾರೆ‌

ಆದರೆ ಇದೇ ಪದ್ಧತಿಯನ್ನು ಅನುಸರಿಸಿ ರಾಮ ಅವನ ನಿರಾಕರಣೆಯ ನಂತರ ಲಕ್ಷ್ಮಣನನ್ನು ಬಯಸಿದ ಶೂರ್ಪನಖಿಯ ಬಗ್ಗೆ ಮರ್ಯಾದಾ ಪುರುಷೋತ್ತಮರಾಮನ ವರ್ತನೆ ಎಷ್ಡು ಕ್ರೂರವಾಗಿತ್ತು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ.

ಹಿಡಿಂಬೆ ಮತ್ತು ಶೂರ್ಪನಖಿ ಇಬ್ಬರೂ ಬುಡಕಟ್ಟು ಮೂಲದವರು. ಆದರೆ ಎರಡೂ ಕಾವ್ಯಗಳಲ್ಲಿ ಇವರನ್ನು ರಾಕ್ಷಸರೆಂದು ಚಿತ್ರಿಸಿ ಹೀಗಳೆಯಲಾಗಿದೆ. ಆದರೂ ಈ ಇಬ್ಬರ ಒಂದೇ ರೀತಿಯ ವರ್ತನೆಯ ಬಗ್ಗೆ ತೋರಿಬಂದ ವ್ಯತ್ಯಾಸ ಅಮಾನವೀಯವಾದದ್ದು.

ಪುರುಷಾಧಿಪತ್ಯದ ಕಾಲಘಟ್ಟದಲ್ಲಿ ಅಸ್ತಿತ್ವಕ್ಕೆ ಬಂದ ಆಸ್ತಿ, ಪುರುಷರ ಒಡೆತನ , ಅದಕ್ಕೆ ಈ ಪುರುಷರ ಮಕ್ಕಳೇ ಉತ್ತರಾಧಿಕಾರಿಗಳಾಗಬೇಕು ಎಂಬ ವ್ಯವಸ್ಥೆಯ ಫಲವಾಗಿ ವಿವಾಹ, ಕುಟುಂಬ ವ್ಯವಸ್ಥೆ ಉಗಮವಾಯಿತು.
ರಾಮಾಯಣ ಕಾವ್ಯ ಈ ವ್ಯವಸ್ಥೆಯನ್ನು ಎಲ್ಲೆಡೆ ಅಸ್ತಿತ್ವಕ್ಕೆ ತರುವ ಸಾಧನವಾಗಿ ಸೀತೆಯ ಪಾತಿವ್ರತ್ಯದ ಹೆಸರಿನಲ್ಲಿ ಪುರುಷಾಧಿಪತ್ಯದ ಪಾರಮ್ಯವನ್ನು ಆದರ್ಶವಾಗಿ ಮುಂದಿಟ್ಟಿದೆ.

ಶೂರ್ಪನಖಿಯ ಮೇಲೆಸಗಿದ ಕ್ರೌರ್ಯ ಈ ಅಧಿಪತ್ಯದ ದಬ್ಬಾಳಿಕೆಯ ಭಾಗ.

ಮೋದಿ ರೇಣುಕಾ ಚೌಧುರಿಯವರ ನಗೆಯನ್ನು ಶೂರ್ಪನಖಿಗೆ ಹೋಲಿಸಿದಾಗ ಈ ರಾಜಪ್ರಭುತ್ವ ಕಾಲಘಟ್ಟದ ಪುರುಷಾಧಿಪತ್ಯದ ಕ್ರೌರ್ಯದ ಸಂಕೇತವಾಗಿದ್ದಾರೆ.

ಹೀಗೆ ಹೆಜ್ಜೆ ಹೆಜ್ಜೆಗೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಧಿಕ್ಕರಿಸುತ್ತಿದ್ದಾರೆ. ಜೊತೆಗೆ ಉಪರಾಷ್ಟ್ರಪತಿಗಳೆಂಬ ವೆಂಕಯ್ಯ ನಾಯ್ಡುರವರೂ ಕೂಡಾ‌.

Leave a Reply