ಅತ್ತಿತ್ತ ಹೊಸಕಾಡುವ ಕೈಗಳ ಎಡ ಬಲದಲ್ಲಿ..

ಸುಷ್ಮಿತಾ.ಎ

ಇಂದು ಅಂದಿಗಿಂತ ಬೇರೆ.
ಅಂದು ಹೊರಗೆ ಬೀಳುತ್ತಿದ್ದ ಮಳೆ
ಇಂದು ಒಳಗೇ ಇಳಿದಿರಬಹುದು.
ಒಮ್ಮೆ ಉತ್ತರವಾಗಿ ಸುಮ್ಮನಾಗಿಸಿದ್ದು
ಈಗ ಹುಡುಕಾಟವಾಗಿರಬಹುದು.
ಆಗ ನನಗರ್ಥವಾದದ್ದು
ಈಗೀಗ ನಿನಗೂ ಅರ್ಥವಾಗದೇ ಇದ್ದಿರಬಹುದು.

ಅಕ್ಷರಗಳ ಆಳಗೊಡದೆ ಜಾರಿಸಿದ್ದ ಹಾಳೆಗಳಲ್ಲಿ,
ಪರೀಕ್ಷೆಕೋಣೆಯ ಸದ್ದಾಗದ ಮೌನದಲ್ಲಿ,
ಉತ್ತರುತ್ತರಿಸಿ ದಿಕ್ಕು ತಪ್ಪಿದ್ದ ಪೆನ್ನಿನಲ್ಲಿ,
ಅಂಕಕ್ಕಾಗಿ ಆಚೀಚೆ ತಡಕಾಡುತ್ತಿದ್ದ ತಿರುವಿನಲ್ಲಿ,
ಕೊನೆಗಳಿಗೆ ಉರುಹೊಡೆವ ಗಡಿಬಿಡಿಯಲ್ಲಿ
ಇದ್ದದ್ದಂದು ಇದೇ ಇರಬಹುದು.

ನಿಲ್ಲಗೊಡದೆ ಮಿಸುಕಾಡಿಸುವ ನಿಲುವಿನಲ್ಲಿ,
ಪರಿಚಿತರನ್ನೇ ಎದುರಿಸುತ್ತಿರುವ ದಿಗಿಲಿನಲ್ಲಿ,
ಪ್ರಯತ್ನದಿಂದ ತೆರೆಯಗೊಡದ ಮಾತಿನಲ್ಲಿ,
ಅತ್ತಿತ್ತ ಹೊಸಕಾಡುವ ಕೈಗಳ ಎಡ ಬಲದಲ್ಲಿ,
ಮೆಟ್ಟಿಲಲ್ಲೇ ಎಡವಿ ಬಿದ್ದಿಹ ಸಾವಧಾನದಲ್ಲಿ,
ಇರುವುದಿಂದು ಅದೇ ಆಗಿರಲೂಬಹುದು.

ಅಂದು ಇಂದಾಗಿರಬಹುದಾದರೂ.
ಇಂದು ಅಂದಾಗಿರಲಾರದೇ ಇರಬಹುದು.
ಇಂದು ಅಂದಿಗಿಂತ ಬೇರೆ;
ಆಗಿರಬಹುದಾದರೂ,
ಆಗಿರಲೇಬಾರದು.

1 Response

  1. Jinson Thomas says:

    Really Nice one sushmitha….. Simply a rear mirror…..!!!! Found it unexpectedly…. Happy to know u are active as u were in college days…… Hope u are in a good position now… I Wholeheartedly Wish you a bright future””””

Leave a Reply

%d bloggers like this: