ಭವ್ಯ ಕಬ್ಬಳಿಯವರ ಇನ್ನಷ್ಟು ಪದ್ಯಗಳಿಗಾಗಿ ಕಾಯೋಣ..

ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ಅವಧಿಯ ನಂಬಿಕೆ.

ಹಾಗಾಗಿ ಆರಂಭವಾಗಿದ್ದು ‘ಕವಿತೆ ಬಂಚ್’ ಎನ್ನುವ ಪ್ರಯೋಗ

ಆ ಕವಿ ‘ಪೊಯೆಟ್ ಆಫ್ ದಿ ವೀಕ್’ ಕೂಡಾ..

ಅವರು ಬರೆದ ಕವಿತೆಗಳಿಗೆ ಒಂದು ಕನ್ನಡಿ ಹಿಡಿಯಬೇಕೆಂಬ ಕಾರಣಕ್ಕೆ ಪ್ರತೀ ವಾರ ಒಬ್ಬೊಬ್ಬರು ಕಾವ್ಯಪ್ರೇಮಿಯ ಮೊರೆ ಹೋಗಿದ್ದೇವೆ.

ಅವರು ಕವಿತೆಯನ್ನು ಓದಿ ಅದರ ಸ್ಪರ್ಶಕ್ಕೆ ಮನಸೋತ ಬಗೆಯನ್ನು ಬಿಚ್ಚಿಡುತ್ತಾರೆ.

ಕಳೆದ ವಾರ ಹಾಗೆ  ‘ಪೊಯೆಟ್ ಆ ದಿ ವೀಕ್’ ಆದವರು ಭವ್ಯ ಕಬ್ಬಳಿ

ಕಬ್ಬಳಿ ಅವರ ಕವಿತೆಗೆ ಸುನೈಫ್  ಅವರು ಪ್ರತಿಕ್ರಿಯಿಸಿದ ರೀತಿಯನ್ನು ನೋಡಿ..

ಸುನೈಫ್

ದಕ್ಷಿಣ ಕನ್ನಡದ ವಿಟ್ಲ ಸುನೈಫ್ ಊರು. ಹೊಟ್ಟೆಪಾಡು ಅವರನ್ನು ಕಲ್ಲಿಕೋಟೆಗೆ  ಎಳೆದು ತಂದು ಹಾಕಿದೆ. ಏಳೆಂಟು ವರ್ಷಗಳ ಕೇರಳ ಸಹವಾಸ ಮಲಯಾಳ ಸಾಹಿತ್ಯದ ಅನುವಾದದ ತನಕ ತಂದು ನಿಲ್ಲಿಸಿದೆ. ಪುಸ್ತಕ ಸಹಪಾಠಿ.

ಸ್ವಂತ ಉದ್ಯಮಕ್ಕೆ ಕೈ ಹಾಕಿ ಸುಟ್ಟುಕೊಂಡ ಮೇಲೆ, ಕಲ್ಲಿಕೋಟೆ ಕೇಂದ್ರಿತ ಬಹುರಾಷ್ಟ್ರೀಯ ಕಂಪೆನಿಯೊಂದರ ರಿಸರ್ಚ್ ಆಂಡ್ ಡೆವಲಪ್ಮೆಂಟ್ ವಿಭಾಗದಲ್ಲಿ ಅಸಿಸ್ಟಂಟ್ ಮ್ಯಾನೇಜರ್.

ಅನೇಕ ಉತ್ತಮ ಕವಿತೆಗಳನ್ನು ಬರೆದಿರುವ ಗಂಭೀರ ಕಾವ್ಯಾಸಕ್ತಿಯ ಸುನೈಫ್, ಮಲೆಯಾಳಂ ನ ಅತ್ಯುತ್ತಮ ಕವಿಗಳ ಹಲವಾರು ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

 

ಒಂಟಿತನವೊಂದು ಅಧ್ಯಾತ್ಮವೆನ್ನುವ ಭವ್ಯ ಕವಿತೆಗಳು..

ಹಸಿವಿನ ಬಗ್ಗೆ ಪದ್ಯ ಬರೆಯುವಾಗೆಲ್ಲ ನನ್ನ ಕೈ ನಡುಗುತ್ತದೆ. ಕಾರಣ ನಾನಿನ್ನೂ ಹಸಿವಿನ ನಿಜ ರೂಪ ಕಂಡಿಲ್ಲವೆಂದೇ ಹೇಳಬಹುದು. ಸಾಮಾನ್ಯವಾಗಿ ಹಸಿವು ಎಂದರೆ ಹೊಟ್ಟೆಯ ಸಂಗತಿ ಎಂದೇ ಅರ್ಥ. ಆದರೆ ಕವಿಗೆ ಈಡೇರದ ಕನಸುಗಳೆಲ್ಲವೂ ಹಸಿವು. ‘ತೊರೆದದ್ದೊಂದು ದಾರಿ, ತೆರೆಯದ್ದೊಂದು ದಾರಿ’ ಎನ್ನುವಲ್ಲಿ ಅನಾಥ ಭಾವವೇ ಹಸಿವಾಗಿ ಕಾಡುತ್ತದೆ. ಅನಾಥ ಭಾವವೇ ನಿಜವಾದ ಹಸಿವು ಆಗಿರಬಹುದೇನೋ? ನಾನಿನ್ನೂ ಅನುಭವಿಸಿಲ್ಲ.

‘ಕುರುಡು ಕವಿತೆಯನ್ನು ಕಿವುಡಾದ ಗೋಡೆಗಳು ಆಲಿಸುತ್ತಿವೆ.’ ಇಲ್ಲಿ ಯಾರು ಅನಾಥರು! ಮುಗಿದ ಕಥೆಯೊಂದರ ಎಳೆಯನ್ನು ಓದುಗ ತನ್ನಲ್ಲೇ ಮುಂದುವರಿಸಿಕೊಳ್ಳುವ ಹಾಗೆ, ಮುರಿದ ಕನಸುಗಳ ಮರು ಜೋಡಿಸುವ ಪರಿ ಅದ್ಭುತ. ಹೂಗಳನ್ನಾರಿಸುತ್ತಾ ಹೂಗಳು ಮುಗಿದದ್ದೇ ಅವಳ ಅರಿವಿಗೆ ಬರುವುದಿಲ್ಲ. ಒಂಟಿತನವೊಂದು ಅಧ್ಯಾತ್ಮ ಎಂಬುದನ್ನು ನಿರೂಪಿಸುವ ಪ್ರಯತ್ನವಿದು ಎಂದು ಅಂದುಕೊಳ್ಳುವಾಗಲೇ ‘ನೆಲದ ಮೇಲೆ ಅದೆಷ್ಟೋ ಚಿತ್ತಾರಗಳಿವೆ’ ಎಂಬ ಪದ್ಯ ಅಂತಹ ಅಧ್ಯಾತ್ಮದೊಳಗೆ ನೂಕುತ್ತದೆ.

ಕನಸಿನೊಳಗೊಂದು ಕನಸು ಕಾಣುವುದಕ್ಕೆ ಏಕಾಗ್ರತೆ ಬೇಡ. ಬದಲಾಗಿ ಹರಿದಾಡುವ, ಹಾರಾಡುವ ಮನಸು ಬೇಕು. ಕೆಲವೊಮ್ಮೆ ಸಮುದ್ರ ತೀರದಲ್ಲಿ ಕೂತು ಯೋಚಿಸುವಾಗ ಮನಸು ಹೀಗೆ ಹಾರಾಡುವುದನ್ನು ಕಂಡಿದ್ದೇನೆ. ಯೋಚನೆಗಳು ಅರ್ಥಾತ್ ಕನಸುಗಳು ಒಂದರೊಳಗೊಂದು ಬೆಸೆಯುವ ಪರಿ ಚಿಕಿತಗೊಳಿಸಿದೆ. ಕನಸುಗಳು ಈಡೇರದ ಬಯಕೆಗಳ ಪ್ರತಿಫಲನ!

ಪ್ರತಿ ಸಂಜೆಯೂ ಒಂದು ವಿದಾಯ ಬೇಡುತ್ತದೆ. ಸಂತೆಯೊಳಗಿಂದ ಮರಳುವ ಪ್ರತಿ ಗಳಿಗೆಯೂ ಒಂದು ವಿದಾಯ. ಹೊರ ಬಂದರೆ ಮತ್ತೆ ಏಕಾಂಗಿ. ಜೇಬು ಕತ್ತರಿಸುವ ಮಾಲ್’ಗಳ ನಡುವೆ ನನಗೀಗಲೂ ಖಾಲಿ ಜೇಬಿನೊಂದಿಗೆ ಅಲೆಯಬಹುದಾದ, ಬೇಕಾದಷ್ಟನ್ನು ಬಾಚಿಕೊಳ್ಳಬಹುದಾದ ಸಂತೆ ಬೀದಿಯೇ ನನಗೀಗಲೂ ಇಷ್ಟ. ಅಲ್ಲಿ ಯಾವುದೂ ಮುಗಿಯುವುದಿಲ್ಲ. ಪ್ರತಿ ಬಾರಿಯೂ ತಾಜಾತನ. ಬಣ್ಣ ಬಣ್ಣದ್ದು ಮುಖವಾಡಗಳಷ್ಟೇ ಅಲ್ಲ ಎಂಬ ಸಂಗತಿ ನೆನಪಿರಬೇಕು ಎಂದು ಮಾತ್ರ.

‘ಹಗ್ಗದ ಬದಲು ಹಲಗೆಯ ಮೇಲೆ ನಡೆದರೆ ಹೊಟ್ಟೆ ತುಂಬುವುದೇ?’ ಎಂಬ ಪ್ರಶ್ನೆ ಮನಸ್ಸಿಗೆ ನಾಟುತ್ತದೆ. ಬೆನ್ನಿಗೇ ‘ಬಡತನ ಮನುಷ್ಯ ಸೃಷ್ಟಿ’ ಎಂಬ ನೆಲ್ಸನ್ ಮಂಡೇಲಾ ಮಾತೂ ನೆನಪಾಗುತ್ತದೆ. ಆದರೂ ಎಳೆಯ ಕಾಲುಗಳ ಹುಡುಗಿ ಹಗ್ಗದ ಮೇಲೆ ನಡೆದೇ ನಡೆಯುತ್ತಾಳೆ. ಹೊಟ್ಟೆ ತುಂಬಿದ ಲೋಕ ಚಪ್ಪಾಳೆ ತಟ್ಟುತ್ತದೆ. ಸಂಮಾನ್ಯ ಮಾತಿನಲ್ಲಿ ಇದು ‘ಲೋಕ ನಿಯಮ!’

ಭವ್ಯ ಕಬ್ಬಳಿಯವರ ಇನ್ನಷ್ಟು ಪದ್ಯಗಳಿಗಾಗಿ ಕಾಯೋಣ..

Leave a Reply