ನಮ್ಮಿಬ್ರನ್ನೇ ಬೇಕಾದ್ರೆ ತಿನ್ನು ಮಾರಾಯ್ತೀ..ಚೊರೆ ಮಾಡ್ಬೇಡ..!!

ಅದೊಂದು ಕಾಲವಿತ್ತು! ತಿಂದಷ್ಟೂ ತೀರದ ಹಸಿವು.

‘ನಿನ್ ತಮ್ಮ ಇವಾಗ್ ನಿನ್ ಥರಾನೇ ಆಗಿದಾನೆ ಕಣೇ ಚಿನ್ನಿ.. ಮೂರ್ ಹೊತ್ತು ಏನಾದ್ರೂ ತಿನ್ನಕ್ ಕೊಡು ಅಂತಿರ್ತಾನೆ, ನಂಗಂತೂ ಸಾಕಾಗ್ ಹೋಗಿದೆ’ ಅಂತೆಲ್ಲಾ ಫೋನಿನ ಆ ಕಡೆಯಿಂದ ಚಿಕ್ಕಮ್ಮ ಹೇಳುತ್ತಿದ್ದರೆ ನಗಬೇಕೋ ಅಳಬೇಕೋ ತಿಳಿಯದ ಪರಿಸ್ಥಿತಿ ನಂದು.

 

ಅದೊಂದು ಕಾಲವಿತ್ತು! ತಿಂದಷ್ಟೂ ತೀರದ ಹಸಿವು. ಅದೆಲ್ಲಿಗ್ ಹೋಗ್ತಿತ್ತೋ ತಿಂದದ್ದೆಲ್ಲಾ.. ಸ್ಕೂಲಿಗೆ ಹೋಗೋ ಸಮಯದಲ್ಲಿ ನಡೆದು ಹೋಗಬೇಕಾಗಿದ್ದರಿಂದ ತುಂಬಾ ಶಕ್ತಿ ಬೇಕಾಗುತ್ತಿತ್ತು. ತಿಂಡಿಗೆ ಕೂತರೆ ೫-೬ ದೋಸೆಯಂತೂ ಕನಿಷ್ಠ ಬೇಕಾಗುತ್ತಿತ್ತು. ಬಾಕ್ಸಿಗೂ ಅಮ್ಮನೇ ಹಾಕಿಕೊಡುತ್ತಿದ್ದರಿಂದ ಅಲ್ಲಿಯೂ ಕಮ್ಮಿ ತಿನ್ನುವ ಮಾತೇ ಇಲ್ಲ.

ಶಾಲೆಯಿಂದ ಮತ್ತೆ ನಡೆದು ಮನೆ ಸೇರುವಷ್ಟರಲ್ಲಿ ಹೊಟ್ಟೆಯೊಳಗಿನ ಭೂತ ಎದ್ದು ನಿಲ್ಲುತ್ತಿತ್ತು. ತಿನ್ನಲು ಏನು ಸಿಕ್ಕರೂ ಸೈ ಆ ಹೊತ್ತಿಗೆ! ಏನಾದರೂ ಕರಿದ ತಿಂಡಿ ಮನೆಯಲ್ಲಿದ್ದರೆ, ಮೊದಲು ಊಟ ಮಾಡಿದ ನಂತರವೇ ಕುರುಕಲು ತಿಂಡಿ ತಿನ್ನಲು ಸಿಗುತ್ತಿದ್ದುದು.

ಮತ್ತೆ ಆಟಕ್ಕೆ ಹೊರಟರೆ ತಿಂದಿದ್ದು ಅರಗಿದ ಮೇಲೆಯೇ ಮನೆ ಸೇರುತ್ತಿದ್ದುದು. ಮತ್ತೆ ಮನೆಯವರೆಲ್ಲರೂ ಕೂತು ರಾತ್ರಿಯ ನ್ಯೂಸ್ ನೋಡುತ್ತಾ, ಇಡೀ ದಿನದ ಪುರಾಣ ಹೇಳುತ್ತಾ , ಅಮ್ಮ ಹಾಕಿದಷ್ಟು ತಿಂದು ಏಳುತ್ತಿದ್ದ ದಿನಗಳವು. ಇದೆಲ್ಲದರ ನಡುವೆಯೂ ನಂಗೆ ಹಸಿವಾಗುತ್ತಿತ್ತು. ಭಾನುವಾರಗಳಲ್ಲಂತೂ ದಿನ ಕಳೆಯುವುದೇ ಕಷ್ಟವಾಗುವಷ್ಟು ಹಸಿವು.. ಗಂಟೆಗೊಮ್ಮೆ ಅಡಿಗೆ ಮನೆ ಹೊಕ್ಕು ‘ಅಮ್ಮಾ ಏನಾದ್ರೂ ತಿನ್ನಕ್ ಕೊಡೇ’ ಎಂಬ ರಗಳೆ ತಡೆಯಲಾರದ ಅಮ್ಮ, ಸಂಜೆಯವರೆಗೆ ಬಾಯಿ ಮುಚ್ಚಿಕೊಂಡಿದ್ದರೆ ಏನಾದ್ರೂ ಸ್ಪೆಷಲ್ ಮಾಡಿಕೊಡ್ತೀನಿ ಅಂದುಬಿಡ್ತಿದ್ಲು!

ಅಮ್ಮನ ಸಂಜೆಯ ಪಾಡು ದೇವರಿಗೇ ಪ್ರೀತಿ. ಯಾವತ್ತೋ ಕಲಿತ ಮಸಾಲಾ ಮಂಡಕ್ಕಿ, ಭೇಲ್ ಪುರಿಯ ಥರದ್ದೊಂದು ತಿಂಡಿ, ಅವಲಕ್ಕಿ ಹಪ್ಪಳ, ಇಡ್ಲಿ ಉಪ್ಪಿಟ್ಟು, ಯಾರಿಂದಲೋ ಹೇಳಿಸಿಕೊಂಡ ಗೋಬಿ ಮಂಚೂರಿ ಏನಾದರೂ ಮಾಡಲೇಬೇಕಾದ ಅನಿವಾರ್ಯತೆಗೆ ತಾನೇ ಕಂಡುಹಿಡಿದ ಒಂದಷ್ಟು ತಿಂಡಿಗಳು.. ಒಟ್ಟಿನಲ್ಲಿ ತಿನ್ನಲು ಏನಾದರೂ ಕೊಡಬೇಕಿತ್ತು ಅಷ್ಟೇ ಅವಳು. ಕಡೆ ಕಡೆಗಂತೂ ‘ನಾನು ಅಪ್ಪ ಇಬ್ರು ಉಳ್ದಿದೀವಿ, ನಮ್ಮಿಬ್ರನ್ನೇ ಬೇಕಾದ್ರೆ ತಿನ್ನು ಮಾರಾಯ್ತೀ.. ದಯವಿಟ್ಟು ಚೊರ್ರೆ ಮಾಡ್ಬೇಡ’ ಎಂದು ಬೇಡಿಕೊಳ್ಳುವಷ್ಟರ ಮಟ್ಟಿಗೆ ಅಮ್ಮನನ್ನು ಹಿಂಡಿ ಹಿಪ್ಪೆ ಮಾಡಿರುತ್ತಿದ್ದೆ.

ಬೇಸಿಗೆ ಮತ್ತು ದಸರಾ ರಜೆಯ ದಿನಗಳ ಕಥೆಯನ್ನು ಪೂರ್ತಿಯಾಗಿ ಬಿಡಿಸಿಟ್ಟರೆ ಟಿ.ವಿ ಯವರು ‘ಮಗಳಿಂದ ಅಮ್ಮನಿಗೆ ತಿಂಡಿಗಾಗಿ ಮಾನಸಿಕ ಹಿಂಸೆ’ ಅಂತಲೋ ಅಥವಾ ‘ಮಗಳಿಗೆ ಊಟ ತಿಂಡಿ ಕೊಡದೆ ಹಿಂಸಿಸುವ ಅಮ್ಮ’ ಅಂತಲೋ ಒಂದು ಕಾರ್ಯಕ್ರಮ ಮಾಡಿಬಿಟ್ಟಾರು. ಈ ಕಿರಿಕಿರಿಗೇ ಇರಬೇಕು ರಜೆ ಬಂದಾಕ್ಷಣ ಊರಿಗೆ ಕರೆದುಕೊಂಡು ಹೋಗಿಬಿಡುತ್ತಿದ್ದಳು ಅಮ್ಮ. ಆ ಕಾಡಿನಲ್ಲಿ ಮಾವೋ, ಹಲಸೋ , ಪೇರಳೆಯೋ , ಪನ್ನೇರಳೆಯೋ ಯಾವುದೋ ಒಂದು ತಿಂದು ರಗಳೆ ಮಾಡುವುದು ತಪ್ಪಲಿ ಎಂದು..

ಸಂಜೆಯಾದ ತಕ್ಷಣ ತಿಂಡಿ ಗಾಡಿಗಳು ತೆರೆದುಕೊಳ್ಳದ ಜಮಾನದಲ್ಲಿ ಹುಟ್ಟಿದ್ದಾ ನಾನು ಎಂಬ ಪ್ರಶ್ನೆ ನಿಮ್ಮದಾದರೆ , ಉತ್ತರ ‘ಖಂಡಿತಾ ಅಲ್ಲ!’. ಈಗಿನಷ್ಟಲ್ಲದಿದ್ದರೂ ಒಂದಷ್ಟಾದರೂ ಇದ್ದವು. ತಿನ್ನಲು ಸಾಧ್ಯವಾಗದ ಪರಿಸ್ಥಿತಿ ತಂದುಕೊಂಡಿದ್ದೂ ನನ್ನದೇ ಅತಿಯಾಸೆ!

ಅಂಗನವಾಡಿಯೋ, ಯು.ಕೆ.ಜಿ ಯೋ ಸರಿಯಾಗಿ ನೆನಪಿಲ್ಲ.. ತೀರ್ಥಹಳ್ಳಿಗೆ ಹೋದಾಗ ಯಾವತ್ತೋ ಅತ್ತೆ ಕರೆದುಕೊಂಡು ಹೋಗಿ ಪಾನಿಪೂರಿ ಕೊಡಿಸಿದ್ದಳು. ಮೊದಲೇ ತಿಂಡಿಪೋತಿಯಾಗಿದ್ದ ನಂಗೆ ಆಕಾಶಕ್ಕೆ ಮೂರೇ ಗೇಣು. ತಿಂದಿದ್ದೇ ತಿಂದಿದ್ದು ತಿಂದಿದ್ದೇ ತಿಂದಿದ್ದು!!  ಮನೆಗೆ ಬಂದವಳಿಗೆ ಶುರುವಾದ ವಾಂತಿ ನಿಂತದ್ದು ಮಾರನೇ ದಿನ ಡಾಕ್ಟರ್ ಬಳಿ ಹೋದ ಮೇಲೆಯೇ.

ಅವತ್ತಿನಿಂದ ಶುರುವಾದ ಪಾನಿಪುರಿಯ ಭಯ ಹೋಗುವುದಕ್ಕೆ ಸತತ  ೯ ವರ್ಷಗಳು ಬೇಕಾದವು. ಅವತ್ತು ಬಿಟ್ಟ ಪಾನಿಪೂರಿ ಮತ್ತೆ ತಿಂದಿದ್ದು ೯ನೇ ಕ್ಲಾಸಿನಲ್ಲೇ!

ಈಗ ಒಮ್ಮೊಮ್ಮೆ ಯೋಚಿಸಿದಾಗ ಅನಿಸೋದುಂಟು.. ಅಂಥದ್ದೊಂದು ಭಯ ಹುಟ್ಟಿಕೊಂಡಿದ್ದರಿಂದಲೇ ಬೇಕೆನಿಸಿದರೂ ತಿನ್ನಲಾಗುವುದಿಲ್ಲ ಎಂಬ ನೋವು ಬಾಲ್ಯ ಪೂರ್ತಿ ಕಾಡಿ ತದನಂತರದಲ್ಲಿ ದುಃಸ್ವಪ್ನವಾಗುವುದು ತಪ್ಪಿ ಒಳ್ಳೆಯದೇ ಆಯಿತು ಎಂದು. ಅದಿರಲಿ, ನಾನು ಅಕ್ಕ ಮಕ್ಕಳಾಗಿದ್ದಾಗ ಅಪ್ಪ ವಾರಕ್ಕೊಮ್ಮೆಯಾದರೂ ಏನಾದರೂ ಬೇಕರಿಯಿಂದ ತಿಂಡಿ ತರುತ್ತಿದ್ದರು. ಸಮ ಪ್ರಮಾಣದಲ್ಲಿ , ದಿನಕ್ಕಿಷ್ಟು ಅಂತ ಅಮ್ಮ ಕೊಟ್ಟಿದ್ದಷ್ಟನ್ನೇ ತಿಂದು ಸುಮ್ಮನಾಗಬೇಕಿತ್ತು.

ವರ್ಷಕ್ಕೊಮ್ಮೆ ಹುಟ್ಟುಹಬ್ಬದ ಹಿಂದಿನ ದಿನ ಮಾತ್ರ ಅಪ್ಪ ೨ ಸ್ಲೈಸ್  ಕ್ರೀಮ್ ಕೇಕ್ ತರುತ್ತಿದ್ದಿದ್ದು. ಅದರ ರುಚಿ ಇನ್ನೂ ಹಾಗೆಯೇ ನೆನಪಿದೆ. ತಿನ್ನುವುದೊಂದನ್ನು ಬಿಟ್ಟು ಮತ್ತೇನಾದರೂ ತಲೆಯಲ್ಲಿರುತ್ತಿತ್ತಾ ಆಗ ಎಂದರೆ ನಿಜವಾಗಿಯೂ ಇಲ್ಲ!. ರಾತ್ರಿ ಊಟವಾದ ತಕ್ಷಣ ಅಥವಾ ಊಟಕ್ಕೆ ಕೂತಾಗಲೇ ನಾಳೆ ಬೆಳಗ್ಗೆ ತಿಂಡಿ ಏನು ಎಂದು ಅಮ್ಮನಿಗೆ irritate ಮಾಡಲು ಶುರು ಮಾಡಿರುತ್ತಿದ್ದೆ. ಈಗ ನೆನೆಸಿಕೊಂಡರೆ ಅಮ್ಮ ಪಾಪ ಅನಿಸಿಬಿಡುತ್ತೆ.

ಹೈಸ್ಕೂಲ್ ಗೆ ಹೋಗುವಾಗಲೂ ಇದೇ ಕಥೆ. ನಡೆದು ಹೋಗುವುದಿಲ್ಲದಿದ್ದರೂ ೫-೬ ಕಿ.ಮೀ ಸೈಕಲ್‌ ತುಳಿಯಬೇಕಿತ್ತು. ಜೊತೆಗೆ ಸ್ಕೂಲ್ ನವರು ಕೊಡೋ ವಾರಕ್ಕೆರಡು ಪಿ.ಇ ಪೀರಿಯಡ್ ಸಾಲದೆ , ಸ್ಕೂಲ್ ಮುಗಿದ ಮೇಲೆ ಸುಮಾರು ಒಂದು-ಒಂದೂವರೆ ಘಂಟೆ ಲಗೋರಿ ಆಡುವುದೊಂದು ಕಾರ್ಯಕ್ರಮವಿತ್ತು ನಮ್ಮದು. ಮನೆ ಸೇರುವಷ್ಟರಲ್ಲಿ ಹಸಿವು ತಾರಕ್ಕೇರಿರುತ್ತಿತ್ತು. ಎಷ್ಟೇ ದೊಡ್ಡವರಾದರೂ ಅಮ್ಮನ ಹಳೆಯ ನಿಯಮಗಳು ಮಾತ್ರ ಬದಲಾಗುವಂಥದ್ದೇ ಅಲ್ಲ! ಮತ್ತದೇ ಸಂಜೆಯ ಊಟದ ನಂತರ ಕುರುಕಲು ತಿಂಡಿ.

ಅದು ಕ್ವಾರ್ಟರ್ಸ್ ನಲ್ಲಿದ್ದ ದಿನಗಳು. ತಿಂಡಿಯ ನಂತರ ಮತ್ತೆ ಡಬ್ ಡಬಾ ಅಂತಲೋ ಶಟಲ್ ಅಂತಲೋ ಮನೆಯ ಹೊರಗೇ ಇರುತ್ತಿದ್ದುದೇ ಹೆಚ್ಚು. ಎಷ್ಟೋ ದಿನ ಊಟವಾದ ಮೇಲೂ ನಿದ್ದೆ ಕಣ್ಣೆಳೆಯುವವರೆಗೂ ಆಡುತ್ತಲೇ ಕಳೆಯುತ್ತಿದ್ದೆವು. ಅಪರೂಪಕ್ಕೊಮ್ಮೆ ಸಂಜೆ ಪಾನಿಪೂರಿ, ಮಸಾಲೆಪೂರಿಯ ಸೇವನೆಯಾಗುತ್ತಿದ್ದರೂ ಒಂದೊಂದು ಪ್ಲೇಟ್ ಯಾವ ಮೂಲೆಗೂ ಸಾಲುತ್ತಿರಲಿಲ್ಲವಾದ್ದರಿಂದ ಮತ್ತೆ ಮನೆಗೆ ಬಂದು ಅನ್ನ ಹುಳಿಯೋ, ಅನ್ನ ಮಜ್ಜಿಗೆಯೋ ಯಾವುದಾದರೊಂದು ಬೇಕಾಗೇ ಇತ್ತು. ಒಂದು ವಯಸ್ಸಿನವರೆಗೆ ಸಣ್ಣ ಎಂಬ ಪದದ ಅರ್ಥವೇ ಗೊತ್ತಿರಲಿಲ್ಲ. ‘ಗುಂಡ್ ಗುಂಡುಕಿದೆ ಮಗು’ ಎಂಬ compliment ಸಿಕ್ಕಿದ್ದೇ ಜಾಸ್ತಿ ನಂಗೆ.

ಅದ್ಯಾವುದೋ ಕಾಲಘಟ್ಟದಲ್ಲಿ  ‘ಎಷ್ಟ್ ಡುಮ್ಮುಕಿದಿಯೇ’ ಎಂಬಲ್ಲಿಂದ ಸೀದಾ ‘ಫಿಗರ್ ಮೇಂಟೇನ್ ಮಾಡ್ತಿದಿಯೇನೇ?’ ಎನ್ನುವವರೆಗೆ ಬದುಕು ಬದಲಾಗಿದ್ದು ಹೇಗೆಂದೇ ತಿಳಿಯಲಿಲ್ಲ ನಂಗೆ. ಮೊಸರನ್ನ , ಹುಳಿಯನ್ನದ ಸುತ್ತಲೇ ಸುತ್ತುತ್ತಿದ್ದ ದಿನಗಳು ಕಳೆದು, ಕೆಲವೊಂದು ದಿನ ಮನೆಯಲ್ಲಿ ಒಂದು ತುತ್ತೂ ತಿನ್ನದೇ ಬರಿದೇ ಹೊರಗೆ ತಿನ್ನುವ ಪರಿಸ್ಥಿತಿ. ಪಿಜ್ಜಾ ಬರ್ಗರ್ ನಡುವೆ ಅಮ್ಮನ ಅವಲಕ್ಕಿ ಹಪ್ಪಳ ಮಾಯವಾಗಿದ್ದೇ ಗೋಚರವಾಗಲಿಲ್ಲ. ಫಿಂಗರ್ ಚಿಪ್ಸ್ ಬದಲು ಚಕ್ಕುಲಿಯ ಶೇಪ್ ನಲ್ಲಿರುವ ಸಂಡಿಗೆ ಯಾಕ್ ಮಾರಲ್ಲ ಅನಿಸುವಾಗೆಲ್ಲಾ ‘ಅಯ್ಯೋ’ ಎಂಬ ಭಾವವೊಂದು ಸುಳಿಯುತ್ತದೆ ಮನದೊಳಗೆ.

ಮೊನ್ನೆ ಹೀಗೇ ಕಾಯಿಕಡುಬು ತಿನ್ನಬೇಕೆಂಬ ಹುಕಿ ಹತ್ತಿ ಬೆಂಗಳೂರಿನಿಂದಾಚೆಯಿರೋ ದೊಡ್ಡಮ್ಮನ ಮನೆಗೆ ಹೋಗಿದ್ದೆ. ದೊಡ್ಡಮ್ಮ ಕಾಯಿಕಡುಬು ಕಟ್ಟುವಾಗ ‘ಹಿಂಗೇ ಹಿಟ್ಟೊಳಗೆ ತರಕಾರಿ ಇಟ್ಟು ಬೇಯಿಸಿದ್ರೆ ಅದೇನೋ ತಿಂಡಿ ಆಗತ್ತೆ ಕಣೇ.. ನಿಮ್ಮಣ್ಣ ಮೊನ್ನೆ ಹೋಗಿ ಅದ್ಯಾವ್ದೋ ದಾರಿ ಬದಿ ಅಂಗ್ಡಿಲಿ ತಿಂತಿದ್ದ. ನಾನು ಒಂದಿನ ಮಾಡ್ಬೇಕು ಅದ್ನಾ.. ಅವತ್ತು ಬಾ ನೀನು’ ಅಂದ್ರು. ನಂಗೂ ಅಕ್ಕನಿಗೂ ಅರ್ಧ ಘಂಟೆಯ ದೀರ್ಘ ಆಲೋಚನೆಯ ನಂತರ ಹೊಳೆದ ವಿಷಯವೇನೆಂದರೆ ದೊಡ್ಡಮ್ಮ ಹೇಳುತ್ತಿದ್ದ ಆ ತಿಂಡಿ ಮೊಮೋಸ್!

ಯಾಕೋ ಈ ಹೊತ್ತಿಗೆ ಮತ್ತದೇ ಹಸಿವು, ಆಟ , ನಿದ್ದೆ ಬೇಕೆನಿಸೋದು ಬದುಕಿನ ವಿಪರ್ಯಾಸವಾ? ಗೊತ್ತಿಲ್ಲ ನಂಗೆ..

2 Responses

  1. Jithendra says:

    ,, nice write up

  2. Sandhya says:

    Tumba chanagide

Leave a Reply

%d bloggers like this: