ಗುಲಾಬಿ ಲಂಗದ ಪುಟ್ಟಿಗೆ ಕತೆಗಳೆಂದರೆ ಬಲು ಇಷ್ಟ..

 ಸಂದೀಪ್ ಈಶಾನ್ಯ

ಬಣ್ಣದ ಕತೆಗಳು
ಗೂಡಂಗಡಿಯಲ್ಲಿ ಪೆಪ್ಪರುಮೆಂಟು ಮಾರುವ ಮುದುಕನ ಅಂಗೈಗೆ ಮೆತ್ತಿಕೊಂಡಿದ್ದ ಬಣ್ಣದ ಪದರುಗಳಲ್ಲಿ ಹೇಳದೇ ಉಳಿದ ಒಂದಿಷ್ಟು ಕತೆಗಳಿವೆಯಂತೆ

ಗುಲಾಬಿ ಬಣ್ಣದ ಲಂಗದ ಪುಟ್ಟಿಗೆ
ಕತೆಗಳೆಂದರೆ ಬಲು ಇಷ್ಟ
ಅಪ್ಪ ಹೆಗಲಿಗೆ ಮಣ್ಣಾದ ಚೌಕವೇರಿಸಿಕೊಂಡು
ಅಮ್ಮ ರೊಟ್ಟಿ ತಟ್ಟಿಟ್ಟು ಕೂಲಿಗೆ ಹೊರಟಾಗ
ಪುಟ್ಟಿ ಮಾತ್ರ ಬಂದುಬಿಡುತ್ತಾಳೆ
ಬಣ್ಣದ ಕತೆ ಕೇಳಲು ಸೀದಾ ಗೂಡಂಗಡಿಗೆ

ಆಗೆಲ್ಲಾ ಮುದುಕ
ನೋಡು ಪುಟ್ಟಿ ಈ ಬಣ್ಣದ ಕತೆಗಳಿವೆಯಲ್ಲಾ ತುಂಬಾ ಮೋಸಗಾರ
ಕೇಳಿದ ಕತೆಯ ರಾಜ, ಮಂತ್ರಿ, ಕಾಲಾಳು, ರಾಣಿ
ಹೀಗೆ ಏನೂ ಬೇಕಾದರೂ ಆಗುವ ನಾವು
ಅದೇ ಕತೆಯೊಳಗಿನ
ಹುಚ್ಚ ತಿರುಕ ಮಡೆಯ ಮಾತ್ರವಾಗುವುದಿಲ್ಲ

ಏಕೆ ಹೇಳು?
ಪುಟ್ಟಿ ಹೇಳುತ್ತಾಳೆ

ಹ್ಹಹ್ಹಹ್ಹಹ್ಹ ಅಜ್ಜ ರಾಜ ಒಳ್ಳೆ ಬಟ್ಟೆ ಹಾಕ್ತಾನೆ, ರಾಣಿನೂ ಒಳ್ಳೆ ಬಟ್ಟೆ ಹಾಕ್ತಾಳೆ ಮಂತ್ರಿ ಹೇಳಿದ್ರೆ ರಾಜನೂ ಕೇಳ್ತಾನೆ ಕಾಲಾಳು ರಾಜಂಗೆ ಸೇವೆ ಮಾಡ್ತಾನೆ
ಆದರೆ ಈ ಹುಚ್ಚ ತಿರುಕ ಮಡೆಯ ಮಾತ್ರ
ಏನೂ ಮಾಡೊದಿಲ್ಲ ಅದಕ್ಕೆ ಅಲ್ವಾ ಅಜ್ಜ

ಹ್ಹಹ್ಹಹ್ಹಹ್ಹ ಇಲ್ಲಾ ಮಗಳೇ
ರಾಜನ ಅರಮನೆ ಜನಗಳಿಗೆ ಹುಚ್ಚು ಹಿಡಿಸುತ್ತೆ
ಆದರೆ ಹುಚ್ಚ ನಿಜವಾಗಲೂ ಅರಮನೆಯನ್ನ ನಿರ್ಲಕ್ಷ್ಯ ಮಾಡ್ತಾನೆ
ರಾಣಿ ರಥದ ಮೇಲೆ ಮಂತ್ರಿ ಕುದುರೆ ಮೇಲೆ ಹೋಗ್ತಾ ಇದ್ರೆ ಕಾಲಾಳು ಈಟಿ ಹಿಡಿದು ನಿಂತ್ರೆ
ಜನಗಳೂ ಚಿಂದಿ ಬಟ್ಟೆಯಾಕೊಂಡು ಸೋಗೆಮನೆಯಲ್ಲಿ ಕೂತು ಕನಸು ಕಾಣ್ತಾರೆ ಥೇಟು ತಿರುಕನ ಹಾಗೆ ಆದರೆ ನಿಜ ತಿರುಕನ ಕನಸೇ ಬೇರೆ
ಅಲ್ಲಿ ಎಲ್ಲವೂ ಸಾಮಾನ್ಯ ಬರೀ ಊಟ ನಿದ್ರೆ
ಮಡೆಯನ ಕನಸು ಅಷ್ಟೇ ಅಲ್ವಾ

ಅಜ್ಜ ಈ ಬಣ್ಣದ ಕತೆಗಳು ತುಂಬಾ ಮೋಸ ಅಲ್ವಾ
ಪುಟ್ಟಿ ಮೆಲ್ಲಗೆ ಪಿಸುನುಡಿಯುತ್ತಾಳೆ
ಕತೆಗಳು ಬಣ್ಣವಾಗಿದ್ರೆ ನಿಜಕ್ಕೂ ಅದು ಮೋಸ ಮಗಳೇ
ಅಜ್ಜ ಪುಟ್ಟಿಯ ಅಂಗೈಗೆ ಬಣ್ಣದ ಪೆಪ್ಪರುಮೆಂಟನ್ನಿಟ್ಟು
ಕಣ್ಣುಮಿಟುಕಿಸುತ್ತಾನೆ

ಬಣ್ಣದ ಕತೆಗಳು ಗೂಡಂಗಡಿಯ ಡಬ್ಬಿಯೊಳಗೆ ಕೂತು
ಇನ್ನಷ್ಟು ಬಣ್ಣ ಮೆತ್ತಿಕೊಳ್ಳುತ್ತವೆ

1 Response

  1. BHUVANESHVARI says:

    ತುಂಬಾ ಇಷ್ಟ ಆಯ್ತು

Leave a Reply

%d bloggers like this: