ಮಹಾರುದ್ರನೇ.. ಬಂದು ಬಾರಿಸೈ ಬಾರುಕೋಲಲಿ ..!!

ಅಣ್ಣಪ್ಪ ಅರಬಗಟ್ಟೆ

ಸಾಲು ಸಾಲು ಗಾಢ ಕತ್ತಲುಗಳೆ
ಸ್ವಾಗತಿಸುತಿವೆ ಶಿವನನ್ನು!
ಸಾವು ನೋವು ಸಾಲಗಳಲೆ
ಬದುಕು ಸವೆಸಿದ ರೈತನ ನೆನಪಿಸಿ!

ಹೊಲ ಗದ್ದೆ ತೋಟದೆಲ್ಲ
ಬದು ಅಂಚು ಮುಂಡಿ
ತ್ರಿಲೋಕಗಳನ್ನೆಲ್ಲ ಶತಪಥ
ತಾಂಡವವಾಡುತ ತಿರುಗಿ !
ಕಳೆ ಕ್ರಿಮಿ ಕೀಟ ಕೊಳೆಗಳನ್ನೆಲ್ಲ
ನಾಶಗೈಯುತ
ಲೋಕದ ಹಸಿವ ನೀಗಿಸುವ !

 

 

 

 

 

 

 

 

ಬ್ರಹ್ಮಸೃಷ್ಟಿಯ ಕಪಾಲ ತಣಿಸಲು
ದೀನವಾಗಿ ಬೇಡುತಿಹನು
ಭೂತಾಯಿಯ ಬಳಿ,
‘ನನ್ನದೆಯ ಭಾರವಿಳಿಸು ತಾಯಿ!’

ಇಲಿ ಹೆಗ್ಗಣ ಕಾರಣಿ ದಲ್ಲಾಳಿ
ಲೇವಾದೇವಿ ಮೃಗ ವೈರಿಗಳ
ಕಾಟವ ತಣಿಸಲು!?
ವಿಷಸರ್ಪದ ಸಖ್ಯದಲೇ
ಸುಖಿಸುತಿಹನು!

ಬೀಜವಿಲ್ಲ ಗೊಬ್ಬರವಿಲ್ಲ
ಯಂತ್ರವಿಲ್ಲ ಮಳೆಯಿಲ್ಲ
ಎಲ್ಲ ಇಲ್ಲಗಳ ಸ್ಮಶಾನದಲೂ
ನಂಜನುಂಡು ಬೆಳಗುತಿಹನು ಜಗವ
ತನ್ನದು ತನ್ನದೆಲ್ಲವನು ಚಿತೆಗ್ಹಾಕಿ
ತಿದಿಯನೊತ್ತುತ !

ಮಳೆ ಚಳಿ ಬೇಸಗೆ
ಅತಿಯಾಗಿ ಮಿತಿಯಾಗಿ
ಕಾಲಕಸವಾಗಿಸಿ ತುಳಿದರೂ…!
ಹಿಡಿದ ತ್ರಿಶೂಲ ಮೊಂಡಾಗಿ
ದುಡಿದ ಬಸವ ಮುದಿಯಾಗಿ
ಒಬ್ಬಂಟಿಯಾಗುಳಿದರೂ…!
ತನ್ನ ಸಿಕ್ಕುಗಳನೇ ನೆಲಕ್ಕೆ ಬಡಿದು
ಮಹಾರುದ್ರನಾಗಿ ಮೆರೆದು
ಎಳೆಯುತಿಹನು ಜಗದ ಬಂಡಿಯ
ನಮ್ಮ ರೈತನು! ಮಹಾಶಿವರುದ್ರದೇವನು!!

ಪಂಡಿತ ವಿದ್ವಾಂಸ ಶೂರರೆಲ್ಲ ಸ್ತುತಿಸಿ
ಮುಡಿಯಲಿಟ್ಟರೂ ಗಂಗೆಯನೇ
ಇವನ ಪಾದವೆಂದಿಗೂ ಕೆಸರು!
ಕವಿ ರಾಜ ಮಂತ್ರಿ ರಸಿಕರೆಲ್ಲ ಹೊಗಳಿ
ತುರುಬಿಗೆ ಕಟ್ಟಿದರೂ ಚಂದ್ರನನೇ
ದೀಪದ ಬುಡ  ಕತ್ತಲು!!

ಹೇ ಪ್ರಭು ನೇಗಿಲಯೋಗಿಯೇ!
ನಿನ್ನ ನೆನೆಯದ ರಾತ್ರಿ ಕರಾಳ
ನಿನ್ನ ಸ್ಮರಿಸದ ಹಗಲು ಭೀಕರ
ಇನ್ನೆಷ್ಟು ದಿನ….?
ಎದ್ದು ಬಂದು ಬಾರಿಸೈ ಬಾರುಕೋಲಲಿ
ಮೊಳಗಲಿ ಢಮರುಗ ನಾದ ಯುವ ಎದೆಗಳಲಿ
ಎದ್ದೇಳಲಿ ಮಹಾರುದ್ರದೇವ!
ಅಂದೆನ್ನ ಶಿವರಾತ್ರಿ! ಮೊಳಗಲಿ ಮಹಾಕ್ರಾಂತಿ!!
ಬೆಳಗಲೆಲ್ಲೂ ಮಹಾಶಿವರಾತ್ರಿ!!!

1 Response

  1. Anasuya M R says:

    ರೈತನ ವ್ಯಥೆಗಳು ಹೆಪ್ಪುಗಟ್ಟಿವೆ

Leave a Reply

%d bloggers like this: