ಅವಧಿ recommends..

ಪ್ರೇಮಿಗಳ ದಿನ ಎಲ್ಲಿಂದ ಬಂತು, ಯಾರ ಸಂಸ್ಕೃತಿಯಿಂದ ಬಂತು, ಇಲ್ಲಿ ಅದೆಷ್ಟು ಪ್ರಸ್ತುತ… ಎನ್ನುವ ವಾಗ್ವಾದಗಳನ್ನೆಲ್ಲ ಬದಿಗಿಟ್ಟು ಬರೀ ಪ್ರೀತಿಯ ಬಗ್ಗೆ ಮಾತನಾಡುವುದಾದರೆ ಪ್ರೀತಿ ಎಲ್ಲೆಲ್ಲೂ ಇದೆ.

ಕೃತಿಯ ಸಂಪಾದಕರು: ಜಿ ಎನ್ ನಾಗರಾಜ್ / ಬಿ ರಾಜಶೇಖರ ಮೂರ್ತಿ 

ದಕ್ಷ ಚಕ್ರವರ್ತಿಯ ಮಗಳು ಸತಿ ಎಂಬ ಶಿವನ ಮೊದಲ ಹೆಂಡತಿಯೇ ಮೊದಲ ಅಂತರ್ಜಾತೀಯ ಪ್ರೇಮಿ,

ನಂತರ ಹಿಮಗಿರಿ ರಾಜನ ಮಗಳು ಪಾರ್ವತಿ.

ಜಗತ್ತಿನ ಮೊದಲ ಬರಹ ಋಗ್ವೇದದಲ್ಲಿಯೇ ಮೊದಲ ಪ್ರೇಮ ಪ್ರಕರಣ ಊರ್ವಶಿ- ಪುರೂರವ.

ಮೇಲುಕೋಟೆ ಚೆಲುವರಾಯನನ್ನು ಪ್ರೇಮಿಸಿದ ಬೀಬಿ ನಾಚ್ಚಿಯಾರ್ ದೇವರುಗಳ ಅಂತರ್ಧರ್ಮೀಯ ಪ್ರೇಮ ಕತೆ

…ಇಂತಹ ಜಾನಪದ ಕತೆಗಳ ಜೊತೆಗೆ ಶಿವರಾಮ ಕಾರಂತ, ಅನಂತಮೂರ್ತಿ ಮೊದಲಾದ ಪ್ರಸಿದ್ಧರ ಮತ್ತನೇಕ ಸಾಮಾನ್ಯ ಪ್ರೇಮಿಗಳ ಪ್ರೇಮದ ಪಡಿಪಾಟಲುಗಳ ಕತೆಗಳ ಸಂಗ್ರಹ.

ಎಲ್ಲ ಕನ್ನಡಿಗ ಪ್ರೇಮಿಗಳಿಗಾಗಿ, ಕನ್ನಡದ ಪ್ರೇಮಿಗಳಿಗಾಗಿ ಸಂಕಲಿಸಿದ ಪ್ರೇಮದ ಇತಿಹಾಸ.

“ನಿರ್ಭಯವಾಗಿ ಪ್ರೇಮಿಸಿ, ಹೊಣೆಗಾರಿಕೆಯಿಂದ ವರ್ತಿಸಿ”

ಮಾನವ ಪ್ರೀತಿಯ ಶತ್ರುಗಳು ಹೆಚ್ಚುತ್ತಿರುವ ಅಪಾಯಕಾರಿ ಸಂದರ್ಭದಲ್ಲಿ ಪ್ರೇಮಿಗಳ ದಿನಾಚರಣೆಗೆ ಮತ್ತಷ್ಟು ಮಹತ್ವ.

“ಜಾತಿ ಮತದ ಗುಹೆಗಳಿಂದ ಹೊರಬನ್ನಿರಿ ಬಯಲಿಗೆ
ಕೃತಕ ತಿಮಿರದಾಳದಿಂದ ವಿಸ್ತಾರದ ಬೆಳಕಿಗೆ ” ಎಂಬ ತತ್ವ ವಾಸ್ತವಕ್ಕಿಳಿಯಲು ಪ್ರೇಮ , ಪ್ರೀತಿ ಒಂದು ಮುಖ್ಯ ಸಾಧನ .

ಗಂಡು ಹೆಣ್ಣಿನ ನಡುವೆ ಮಾತ್ರವಲ್ಲದೆ , ಗೆಳೆಯ/ತಿಯರ ನಡುವೆ, ರಕ್ತ ಸಂಬಂಧಿಗಳಲ್ಲದ ಕುಟುಂಬಗಳ ನಡುವೆ ಪ್ರೇಮ , ಪ್ರೀತಿ ಅರಳಲಿ.

ಈ ಪುಸ್ತಕ ಶಿವ- ಸತಿ, ಶಿವ- ಪಾರ್ವತಿ , ಊರ್ವಶಿ- ಪುರೂರವರ ಆದಿ ಪ್ರೇಮ ಪ್ರಕರಣಗಳು, ಜಾನಪದ ಪ್ರೇಮ ಕಥಾನಕಗಳು, ಶಿವರಾಮ ಕಾರಂತ- ಲೀಲಾವತಿ ಶೆಟ್ಟಿ, ಅನಂತಮೂರ್ತಿ- ಎಸ್ತರ್, ಇತ್ತೀಚಿನ ಯುವಕ- ಯುವತಿಯರ ಪ್ರೇಮ ಪ್ರಕರಣಗಳ ಸಂಕಲನ. ಪ್ರೇಮದ ತಾತ್ವಿಕತೆ, ಸಾಮಾಜಿಕ ಪ್ರಕ್ರಿಯೆಗಳ ವಿಶ್ಲೇಷಣೆಯೊಂದಿಗೆ.

ಪ್ರಜಾವಾಣಿ ಕಂಡಂತೆ ಪುಸ್ತಕ

ಪ್ರೇಮ ಉಕ್ಕಿತೋ ಸಾಗರದ್ಹಾಂಗ…
–ಸುಶೀಲಾ ಡೋಣೂರ

ಪ್ರೇಮಿಗಳ ದಿನ ಎಲ್ಲಿಂದ ಬಂತು, ಯಾರ ಸಂಸ್ಕೃತಿಯಿಂದ ಬಂತು, ಇಲ್ಲಿ ಅದೆಷ್ಟು ಪ್ರಸ್ತುತ… ಎನ್ನುವ ವಾಗ್ವಾದಗಳನ್ನೆಲ್ಲ ಬದಿಗಿಟ್ಟು ಬರೀ ಪ್ರೀತಿಯ ಬಗ್ಗೆ ಮಾತನಾಡುವುದಾದರೆ ಪ್ರೀತಿ ಎಲ್ಲೆಲ್ಲೂ ಇದೆ.

ಅದರಲ್ಲೂ ಸಾಹಿತ್ಯ ಮತ್ತು ಪ್ರೀತಿಯನ್ನು ಪರಸ್ಪರ ಬೇರ್ಪಡಿಸಿ ನೋಡುವುದೇ ಮೂರ್ಖತನ. ಕತೆ–ಕವಿತೆ, ಕಾದಂಬರಿ, ಗದ್ಯ–ಪದ್ಯ ಪ್ರಕಾರ ಯಾವುದೇ ಆಗಿರಲಿ, ಯಾವುದೇ ಕಾಲಘಟ್ಟಕ್ಕೆ ಸೇರಲಿ ಅಲ್ಲಿ ಪ್ರೀತಿಯ ಸೆಳವಿರಲೇ ಬೇಕು.

ಇತಿಹಾಸ–ಪುರಾಣಗಳಲ್ಲೂ ಪ್ರೇಮರಾಗ

ಪ್ರೀತಿಸುವವರ ಹೆತ್ತವರು, ಒಡಹುಟ್ಟಿದವರು, ಬಂಧುಗಳು, ಜಾತಿಯವರು… ಇವರಷ್ಟೇ ಅಲ್ಲ, ಅವರಿಗೆ ಸಂಬಂಧವೇ ಇಲ್ಲದವರೂ ಪ್ರೀತಿಯ ಅಪಸ್ವರಕ್ಕೆ ದನಿಗೂಡಿಸುವುದಿದೆ; ಸಂಸ್ಕೃತಿ, ಪರಂಪರೆ, ಆಚಾರ–ವಿಚಾರ ಎನ್ನುವ ವಾದಗಳನ್ನು ಮುಂದಿಟ್ಟುಕೊಂಡು. ನಮ್ಮ ಇತಿಹಾಸ, ಸಂಸ್ಕೃತಿ, ಪರಂಪರೆಯಲ್ಲೂ ಪ್ರೀತಿ ಬೆರೆತು ಕಂಪು ಚೆಲ್ಲಿದೆಯಲ್ಲವೇ? ಆದಿಯಿಂದಲೂ ಪ್ರೀತಿ ತನ್ನ ಇರುವಿಕೆಯನ್ನು ಸಾರುತ್ತಲೇ ಬಂದಿದೆ. ಭಾರತ ಪ್ರೀತಿಯಿಂದ ಹೊರಗುಳಿದಿಲ್ಲ ಎನ್ನುವುದನ್ನು ಮರೆಯುವುದು ತರವೇ? ಎನ್ನುವುದು ಲೇಖಕರಾದ ಜಿ.ಎಸ್.ನಾಗರಾಜ್ ಹಾಗೂ ಬಿ.ರಾಜಶೇಖರ್‌ ಅವರ ಪ್ರಶ್ನೆ.

ಊರ್ವಶಿ–ಪುರು, ದುಷ್ಯಂತ–ಶಾಕುಂತಲೆ, ನಳ–ದಮಯಂತಿ, ಶಿವ–ಪಾರ್ವತಿ, ಕೃಷ್ಣ–ರುಕ್ಮಿಣಿ, ರಾಧಾ–ಕೃಷ್ಣ, ಅರ್ಜುನ–ಸುಭದ್ರೆಯರ ಬದುಕೇ ಪ್ರೀತಿಯಲ್ಲವೇ?

‘ಹೌದು, ವೇದ, ಪುರಾಣ, ಧರ್ಮ ಗ್ರಂಥಗಳಲ್ಲಿಯೇ ಪ್ರೀತಿ ತನ್ನ ಅಸ್ತಿತ್ವವನ್ನು ಸಾರುತ್ತ ಬಂದಿದೆ. ಇನ್ನು ಸಂಸ್ಕೃತ ಸಾಹಿತ್ಯವನ್ನು ತೆಗೆದುಕೊಂಡರೂ ಕಾಳಿದಾಸನ ಸಾಹಿತ್ಯದಲ್ಲಿ ಪ್ರೇಮ ಕಾವ್ಯ ಬಿಟ್ಟರೆ ಸಿಗುವುದೇನು?’ ಎನ್ನುತ್ತಾರೆ ಜಿ.ಎನ್.ನಾಗರಾಜ್.
ಅಷ್ಟೇ ಏಕೆ, ಕುವೆಂಪು–ಕಾರಂತರಿಂದ ಹಿಡಿದು, ಅನಂತಮೂರ್ತಿ–ಕಾರ್ನಾಡರವರೆಗೂ ಎಲ್ಲರ ಬದುಕಲ್ಲೂ–ಬರಹದಲ್ಲೂ ಹರಿದವಳು ಈ ಪ್ರೇಮಗಂಗೆ. ಶಿವರಾಮ ಕಾರಂತರ ‘ಹುಚ್ಚು ಮನಸ್ಸಿನ ಹತ್ತು ಮುಖಗಳು’ ಪ್ರೀತಿಯನ್ನೇ ಸುತ್ತುವರಿದ ಕೋಶ.

‘ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ, ನಿನ್ನೊಳಿದೆ ನನ್ನ ಮನಸ್ಸು’ ಎಂದು ಸಂಭ್ರಮಿಸಿದವರು ಕೆ. ಎಸ್. ನರಸಿಂಹಸ್ವಾಮಿ.
‘ಹಾಲಾಗುವಾ ಜೇನಾಗುವಾ ರತಿ ರೂಪಿ ಭಗವತಿಗೆ ಮುಡಿಪಾಗುವಾ’ ಎಂದರು ಕುವೆಂಪು.

‘ನಾನು ಬಡವಿ, ಆತ ಬಡವ, ಒಲವೆ ನಮ್ಮ ಬದುಕು’ ಎಂದು ಹಾಡಿದರು ದ.ರಾ. ಬೇಂದ್ರೆ. ಹೀಗಿರುವಾಗ ಪ್ರೀತಿಯನ್ನು ಸಂಭ್ರಮಿಸುವುದು ನಮ್ಮ ಪರಂಪರೆ ಅಲ್ಲ ಎಂದು ಗುನುಗುವುದು ಎಷ್ಟು ಸರಿ?

ವೈರುಧ್ಯಗಳ ನಡುವೆ ಅರಳಿ ನಿಂತ ಪ್ರೀತಿ: ಲಕ್ಷ್ಮೀ ಕೆ.ಎಸ್‌.
ಹೌದು, ನಮ್ಮಿಬ್ಬರದು ಎಡ ಚಿಂತನೆ ಎಂಬ ಒಂದು ಸಾಮ್ಯತೆಯನ್ನು ಬಿಟ್ಟರೆ ಶೇ 99ರಷ್ಟು ಎಲ್ಲಾ ವಿಷಯಗಳಲ್ಲೂ ನಾವಿಬ್ಬರೂ ತದ್ವಿರುದ್ಧವೇ. ಹಾಗೆಂದು ಯಾವತ್ತೂ ಮಹೇಶ್ ನನ್ನ ಮೇಲೆ ಅಥವಾ ನಾನು ಅವರ ಮೇಲೆ ನಮ್ಮ ಅಭಿರುಚಿ ಆಸಕ್ತಿಗಳನ್ನು ಹೇರಲು, ಒಬ್ಬರಿಗಾಗಿ ಒಬ್ಬರು ರಾಜಿಯಾಗಲು ಪ್ರಯತ್ನಿಸಲಿಲ್ಲ.

ಪರಸ್ಪರರ ಸಂಸ್ಕೃತಿ, ಪದ್ಧತಿ, ಜೀವನ ವಿಧಾನ, ಆಸಕ್ತಿ–ಅಭಿರುಚಿಗಳನ್ನು ಅರ್ಥ ಮಾಡಿಕೊಂಡು, ಗೌರವಿಸುತ್ತ ಹೋಗುವುದರಲ್ಲಿ ಪ್ರೀತಿಯ ಸುಖವಿದೆ ಎನ್ನುವುದು ನನ್ನ ಅಭಿಮತ.

 

ಅವ್ವನ ಅಳು ಈಗಲೂ ಎದೆಗೆ ಇರಿಯುತ್ತದೆ: ಜೈಕುಮಾರ್ ಎಚ್.ಎಸ್.
ಕವಿತಾಳೇ ನನ್ನ ಬಾಳ ಗೆಳತಿ ಎಂದು ನಾನು ಮೊದಲೇ ತೀರ್ಮಾನಿಸಿ ಆಗಿತ್ತು. ಆದರೆ ಈ ಸಂಗತಿಯನ್ನು ಅವ್ವನ ಮುಂದೆ ಹೇಳಲು ನಿಜಕ್ಕೂ ನನಗೆ ಎರಡೆದೆಯ ಧೈರ್ಯ ಬೇಕಿತ್ತು.

ಅಂದು ಅವ್ವ ನನ್ನ ಕಾಲು ಹಿಡಿದುಕೊಂಡು ‘ಹೊಲೆಯರ ಹುಡುಗಿ ಬ್ಯಾಡ’ ಎಂದು ಗೋಗರೆದರು. ನಾನು ಕ್ಷಣ ಕಂಪಿಸಿ ಹೋದೆ. ಆದರೂ ದೃಢವಾಗಿದ್ದೆ. ಅವ್ವ ಬಹಳ ನೋವಿನಿಂದ ಅತ್ತುಬಿಟ್ಟಳು. ಅವಳ ಅಳು ನನ್ನ ಚೈತನ್ಯವನ್ನೇ ಉಡುಗಿಸಿ ಹಾಕಿತ್ತು. ಕವಿತಾಳಿಗೆ ಹೇಳಿ ಆ ಕ್ಷಣಕ್ಕೆ ಮದುವೆ ಆಗುವ ವಿಚಾರವನ್ನು ಬದಿಗಿಟ್ಟೆ. ಮುಂದೆ ಗೆಲುವು ನಮ್ಮದೇ ಆಯಿತು, ನಮ್ಮ ಜಾತಿಯದ್ದಲ್ಲ. ಆದರೆ ಅವ್ವನ ಅಳು ಇಂದಿಗೂ ಎದೆಗೆ ಇರಿಯುತ್ತದೆ.

ಪ್ರೀತಿಯ ರುಜುವಾತು…
ಪ್ರೀತಿಗೂ–ಸಾಹಿತ್ಯಕ್ಕೂ ಬಿಡಿಸಲಾರದ ನಂಟು. ಯಾವ ಕಾಲಘಟ್ಟದಲ್ಲೂ, ಯಾವ ಪ್ರಕಾರದಲ್ಲೂ, ಯಾವ ದೇಶಗಳಲ್ಲೂ. ಜಾತಿಗಳಲ್ಲೂ ಪ್ರೀತಿಯನ್ನು ಬದಿಗಿಟ್ಟು ಸಾಹಿತ್ಯ ಹೊರಟಿದ್ದು ಕಂಡುಬರುವುದಿಲ್ಲ. ರಾಮಾಯಣ, ಮಹಾಭಾರತ, ಪುರಾಣಕಾಲ, ನವ್ಯಕಾಲ… ಎಲ್ಲಿಂದ ನೋಡಿದರೂ, ಹೇಗೆ ನೋಡಿದರೂ ಎಲ್ಲಾ ಕಡೆ ಸಿಗುವುದು ಪ್ರೀತಿ ಮತ್ತು  ಪ್ರೀತಿಯೇ.

Leave a Reply