ದೇವರೇ ನೀನೊಬ್ಬ ನಕ್ಷತ್ರ ಕಳ್ಳ..

ಶಿ.ಜು.ಪಾಶ

ಅವಳು ಸತ್ತದಿನ

ಅವಳು ಸತ್ತದಿನ
ಭೂಮಿಗೆ ಬಿದ್ದು ಚೂರು ಚೂರಾಗಿದ್ದ
ನಕ್ಷತ್ರಗಳ ಮೇಲೆ ನಾನು ಭಾರದ ಹೃದಯದಿಂದ
ನಡೆಯುತ್ತಿದ್ದೆ – ನನ್ನಂತೆ ಕೋಟಿ ಕೋಟಿ ಜನರೂ
ಹಾಗೆ ಕಂಡರು, ಅಕ್ಷರಶಃ ಕಣ್ಣೀರನ್ನೇ ಉಂಡಂತಿದ್ದರು.

ಮುಗುಳ್ನಗುತ್ತಾ ಕಾಣಿಸಿಕೊಂಡ ಹೃದಯಹೀನ
ದೇವರ ಕೊರಳಪಟ್ಟಿ ಹಿಡಿದು ಕೇಳಿದೆ –
ನಿನಗೂ ಅವಳ ಹೃದಯದ ಮೇಲೆಯೇ ಇತ್ತಾ ಕಣ್ಣು?
ಕನಸು ಹಳೆಯದೊಂದು ನೆನಪಾಗಿ ಅವನ್ಯಾರೋ ಅಳುತ್ತಿದ್ದ
ಸಿಡಿಲ ತೊಡೆಗಳ ಸುಂದರಿಯ ಭಾವಚಿತ್ರದ ಕೆಳಗೆ
`ಮತ್ತೆ ಹುಟ್ಟಿ ಬಾ – ಹೃದಯವಿಲ್ಲದೇನೇ ಈ ಬಾರಿ’ ಎಂದು ಬರೆಯುತ್ತಿದ್ದ

ಬಾರದ ಲೋಕಕ್ಕೆ ಹೋಗಿಬಿಟ್ಟ ಬಗ್ಗೆ ಆಘಾತ ತಲುಪಿ
ಹೃದಯ ಚೂರು ಚೂರಾದ್ದೆಷ್ಟೋ? ಅವನೊಬ್ಬ
ಲೆಕ್ಕ ಹಾಕುತ್ತಿದ್ದರೂ ಸಿಗುತ್ತಿಲ್ಲ ಲೆಕ್ಕ ; ಅವೆಲ್ಲದರಲ್ಲಿಯೂ
ಅವಳದೇ ಹನಿ ಮುಂಗಾರು ಮುಖ…

ಈಗೇನು ಮಾಡಲಿ ಅವಳೇ ಇಲ್ಲದ ಈ ಜಗತ್ತಿನಲ್ಲಿ
ಗೈರು ಹಾಜರಾಗಿದ್ದಾನೆ ಚಂದಿರನೂ, ಸ್ಫೋಟಗೊಂಡಿದ್ದಾನೆ ಸೂರ್ಯನೂ
ಇನ್ನು ಸೌಂದರ್ಯಕ್ಕೆ ಜೀವಂತ ಉದಾಹರಣೆಯೂ ಸಿಗದು
ಈ ಶೋಕ ಲೋಕದಲ್ಲಿ…

ಇದ್ದಿಲಲ್ಲಿ ಖುದ್ದು ಬರೆದಿಡುತ್ತಿದ್ದೇನೆ ;
`ದೇವರೇ ನೀನೊಬ್ಬ ನಕ್ಷತ್ರ ಕಳ್ಳ’

 

1 Response

  1. ನೂತನ ದೋಶೆಟ್ಟಿ says:

    ಶೀರ್ಷಿಕೆಯೇ ಬಹಳಷ್ಟನ್ನು ಹೇಳುತ್ತದೆ

Leave a Reply

%d bloggers like this: