ಓದಲೇಬೇಕು ಇದನ್ನು ‘ಚರ್ಮಾಯಿ’ ಎಂದರೇನು ಎಂದು ತಿಳಿದುಕೊಳ್ಳಲಾದರೂ..

ಕೆಲವು ವರ್ಷಗಳ ಹಿಂದಿನ ಮಾತು.

ಶಾಲಾ ಪ್ರವಾಸಕ್ಕೆ ಹೊರಡ ಬೇಕಿತ್ತು.

ಹೆಣ್ಣು ಮಕ್ಕಳೆಲ್ಲ ತಮಗೆ ಬೇಕಾದ ದಿನಾಂಕ ಸೂಚಿಸುತ್ತಿದ್ದರು. ಈ ಹುಡುಗಿಯರಿಗೆ ಯಾವತ್ತೂ ಅವರದ್ದೇ ಒಂದು ಗೋಳು ಇದ್ದದ್ದೇ. ಅಂತೂ ಇಂತೂ ಒಂದು ತಾರೀಖು ನಿರ್ಣಯವಾಯಿತು.

ಪ್ರವಾಸಕ್ಕೆ ಹೊರಡಲು ಎರಡು ದಿನ ಇದೆ ಎನ್ನುವಾಗ ಒಬ್ಬಳು ಹುಡುಗಿ ಬಿಕ್ಕಿ ಬಿಕ್ಕಿ ಅಳುತ್ತಿದ್ದಾಳೆ. ಕೇಳಿದರೆ ಅವಳಿಗೆ ಪ್ರವಾಸಕ್ಕೆ ಬರಲು ಆಗುವುದಿಲ್ಲ ಎಂಬುದು ಕಾರಣ. ಹಣ ಇರಲಿಕ್ಕಿಲ್ಲ ಎಂದುಕೊಂಡರೂ ಈಗಾಗಲೇ ಆಕೆ ಹಣ ಕೊಟ್ಟಾಗಿದೆ ಎಂದರು ಅವಳ ವರ್ಗ ಶಿಕ್ಷಕರು. ಮನೆಯಲ್ಲಿ ಬೇಡ ಅಂತಾರಾ? ಎಂದರೆ ಅದೂ ಅಲ್ಲ. ಅಂತೂ ಸಮಾಧಾನ ಮಾಡಿ ಕೇಳಿದರೆ ಆಕೆಗೆ ಮಾಸಿಕಸ್ರಾವ ಪ್ರಾರಂಭವಾಗುತ್ತದೆಯಂತೆ.

‘ಟ್ಯಾಬ್ಲೆಟ್ ತಗೊಂಡು ಬಿಡು. ಮುಂದೆ ಹೋಗುತ್ತೆ’ ನಾನು ಸಲೀಸಾಗಿ ಹೇಳಿದೆ.

ಆದರೆ ಆಕೆಯ ಅಳು ಮತ್ತೂ ಹೆಚ್ಚಾಯಿತು. ಮಧ್ಯೆ ತುಂಡು ತುಂಡಾದ ಮಾತಿನಲ್ಲಿ ಅರ್ಥವಾಗಿದ್ದೆಂದರೆ ಆಕೆ ಟ್ಯಾಬ್ಲೆಟ್ ತೆಗೆದುಕೊಂಡಿದ್ದರಿಂದಲೇ ಬೇಗ ಆಗಿ ಬಿಟ್ಟಿದೆ. ಪ್ರವಾಸದ ದಿನ ಮೂರನೇ ದಿನ ಆಗುವುದರಿಂದ ದೇವಸ್ಥಾನದ ಒಳಗೆ ಹೋಗುವಂತಿಲ್ಲ ಎಂಬುದು ಆಕೆಯ ಅಳಲು. ಇರಲಿ ಬಿಡು. ‘ದೇವಸ್ಥಾನದ ಒಳಗೆ ಬರಬೇಡ. ಹೊರಗೇ ನಿಂತುಕೊ.’ ಉಳಿದ ಶಿಕ್ಷಕಿಯರು ಸಮಾಧಾನ ಮಾಡಿದರು. ‘ನಾನು ಆ ದೇವಸ್ಥಾನ ನೋಡಲೇ ಇಲ್ಲ. ಈಗಲೂ ಒಳಗೆ ಹೋಗಲು ಆಗುವುದಿಲ್ಲ.’

ಆಕೆಯ ಬಿಕ್ಕಳಿಕೆ ಹೆಚ್ಚಾಯಿತು. ದೇವರು, ದೇವಸ್ಥಾನದ ವಿಷಯ ಬಂದರೆ ನಾನು ಮಾತನಾಡುವುದಿಲ್ಲ .ಆದರೆ ‘ಅದರಲ್ಲೇನಿದೆ? ದೇವಸ್ಥಾನದ ಒಳಗೆ ಹೋದರಾಯಿತು.’

ಬೇಡ ಬೇಡವೆಂದು ಎಷ್ಟೇ ತಡೆ ಹಿಡಿದರೂ ಈ ಹಾಳಾದ ನಾಲಿಗೆ ನುಡಿದೇ ಬಿಟ್ಟಿತ್ತು. ಒಂದು ಕ್ಷಣ ಎಲ್ಲರೂ ಕರೆಂಟ್ ಹೊಡೆದ ಕಾಗೆಯಂತಾಗಿ ನನ್ನನ್ನೇ ನೋಡತೊಡಗಿದರು. ಆ ಹುಡುಗಿಯೋ ಏನೋ ಅನಾಹುತ ಆದಂತೆ ಕಂಗೆಟ್ಟಿದ್ದಳು. ನಾನೀಗ ಸಮಜಾಯಿಶಿ ಕೊಡಲೇಬೇಕಿತ್ತು. ‘ನೋಡು, ನಮ್ಮನ್ನೆಲ್ಲ ಸೃಷ್ಟಿಸಿದ್ದು ದೇವರೇ ಅಂತಾದ ಮೇಲೆ ಇದನ್ನು ಸೃಷ್ಟಿಸಿದ್ದೂ ದೇವರೇ ಅಲ್ಲವೇ? ದೇವರೇ ಸೃಷ್ಟಿಸಿದ್ದರ ಮೇಲೆ ಅದೇನು ಮುಟ್ಟು-ಮೈಲಿಗೆ? ಹಾಗೇನೂ ಇರೋದಿಲ್ಲ.’ ಎಂದೆ.

ನನ್ನ ಸಹೋದ್ಯೋಗಿಗಳಲ್ಲಿ ಅವರವರಲ್ಲೇ ಕಣ್ಸನ್ನೆ, ಕೊಂಕಿದ ಹುಬ್ಬಿನ ಸಂಜ್ಞೆ. ‘ನಾನು ಹೇಳಿರಲಿಲ್ವಾ? ಇವಳು ಸ್ವಲ್ಪ ಎಡವಟ್ಟು’ ಎಂಬ ಮುಖಭಾವ. ಯಾಕೆಂದರೆ ಅವರೇನಾದರೂ ಪ್ರಸಾದ ಎಂದು ತಂದರೆ, ‘ನೀನು ತಿನ್ನುತ್ತೀಯಲ್ವಾ’ ಎಂಬ ಪ್ರಶ್ನೆ ಕೇಳಿಯೇ ಕೊಡುತ್ತಿದ್ದುದು. ‘ತಿನ್ನದೇ ಇರೋದಕ್ಕೆ ನಂಗೇನಾಗಿದೆ?’ ಎಂದು ನಗುತ್ತ ನಾನು ಪ್ರಸಾದ ತೆಗೆದುಕೊಳ್ಳುತ್ತಿದ್ದೆ. ಅದರಲ್ಲೂ ರುಚಿರುಚಿಯಾದ ಸತ್ಯನಾರಾಯಣ ವೃತದ ಪ್ರಸಾದ ಬಿಡೋದುಂಟೇ? ಹೀಗಾಗಿ ನಂತರ ಸೂಕ್ಷ್ಮವಾಗಿ ವಿಚಾರಿಸಿಕೊಳ್ಳುವುದನ್ನು ಬಿಟ್ಟು ನೇರವಾಗಿಯೇ ವಿಚಾರಿಸಿಕೊಳ್ಳತೊಡಗಿದ ಮೇಲೆ ಸುಳ್ಳು ಹೇಳಲಾಗದೇ ನನಗೆ ಬರುವ ಪ್ರಸಾದದ ಪಾಲು ಕಡಿಮೆಯಾಗಿದ್ದು.

ಆದರೂ ಅವರಿಗೆ ಇವಳಿಗೆ ಮಡಿಮೈಲಿಗೆ ಇಲ್ಲ ಎಂಬ ಗುಮಾನಿ ಸದಾ. ಹೀಗಿರುವಾಗ ನಾನು ಆ ಸಮಯದಲ್ಲಿ ದೇವಸ್ಥಾನಕ್ಕೆ ಹೋದರೆ ಏನಾಗುತ್ತದೆ ಎಂದು ಪ್ರಶ್ನಿಸಿ ಅವರ ಅನುಮಾನಗಳನ್ನೆಲ್ಲ ನಿಜ ಮಾಡಿಬಿಟ್ಟಿದ್ದೆ.

ಇಂತಹುದ್ದೇ ಕಥೆ ಇರುವ ‘ಚರ್ಮಾಯಿ’ ಕಾದಂಬರಿ ನನಗೆ ತೀರಾ ಇಷ್ಟವಾಗಲು ಕಾರಣ.

ಚರ್ಮಾಯಿ ಇಷ್ಟವಾಗಲು ಮತ್ತೊಂದು ಕಾರಣ ‘ಅಕ್ಕ…. ಅಕ್ಕ…’ ಎನ್ನುತ್ತ ಪದೇ ಪದೇ ಪೋನಾಯಿಸುತ್ತ, ಪುಟ್ಟ ತಮ್ಮನಂತೆ ಎಲ್ಲವನ್ನೂ ಹೇಳಿಕೊಳ್ಳುವ ‘ರಾಜು ಅಷ್ಟೆ’ ಎಂಬ ವಿಚಿತ್ರ ಅಡ್ಡ ಹೆಸರನ್ನು ತನ್ನದಾಗಿಸಿಕೊಂಡ ನಮ್ಮ ಹುಡುಗ ಬರೆದದ್ದು ಎಂಬುದಕ್ಕೂ.

ಸುಮಾರು ವರ್ಷದ- ಎರಡು ವರ್ಷಗಳ ಹಿಂದೆ ‘ಮೇಡಂ, ನಾನು ರಾಜು ಅಷ್ಟೇ. ನಾನೊಂದು ಕಾದಂಬರಿ ಬರೆದಿದ್ದೇನೆ. ಅದಕ್ಕೆ ನಾಲ್ಕು ಮಾತು ಅನಿಸಿಕೆ ಬರೆದು ಕೊಡ್ತೀರಾ? ಪಿಡಿಎಫ್ ಕಳುಹಿಸ್ತೇನೆ.’ ಎಂದಾಗ ಈ ಕಾದಂಬರಿಯ ಮಾತು ಹಾಳಾಗಲಿ, ಈ ಹುಡುಗನ ಹೆಸರೇಕೆ ಇಷ್ಟೊಂದು ವಿಚಿತ್ರ ಎಂದು ಯೋಚಿಸಿದ್ದೆ. ‘ಅದೇನದು ಅಷ್ಟೇ ಅಂದರೆ?’ ಕುತೂಹಲ ತಡೆಯಲಾಗದೇ ಕೇಳಿಯೂ ಬಿಟ್ಟಿದ್ದೆ. ನಂತರ ಹಾಗೆ ಕೇಳುವುದು ಆತನಿಗೆ ಮುಜುಗರ ಹುಟ್ಟಿಸಿತೇನೋ ಎಂಬ ಆತಂಕ ಕೂಡ ಕಾಡಿತ್ತು.

ಬಹುಶಃ ನನ್ನಂತೆಯೇ ಕೇಳಿರಬಹುದಾದ ಹಲವಾರು ಜನರಿಗೆ ಉತ್ತರಿಸಿದ್ದ ಆವನಿಗೆ ಅಂತಹ ಮುಜುಗರವೇನೂ ಇರಲಿಲ್ಲ. ನಾನು ನಾಯ್ಕ ಅಂತಾ ಹಾಕಿಕೊಂಡರೆ ಅದು ಜಾತಿ ಸೂಚಕವಾಗಿಬಿಡುತ್ತದೆ ಮೇಡಂ. ಹೀಗಾಗಿ ಅಡ್ಲೂರು ಅಂತಾ ಹಾಕಿಕೊಂಡೆ. ಆದರೆ ಯಾರಿಗೋ ಹೇಳುವಾಗ ‘ರಾಜು ಅಷ್ಟೇ’ ನನ್ನ ಹೆಸರು ಅಂದಿದ್ದು. ‘ಅಷ್ಟೇ’ ಎನ್ನುವ ಹೆಸರು ತೀರಾ ಕ್ಯಾಚಿ ಅಲ್ವಾ? ಹೀಗಾಗಿ ಅಷ್ಟೆ ಎಂಬ ಹೆಸರನ್ನೇ ಉಳಿಸಿಕೊಂಡೆ.’ ಎಂದು ತೀರಾ ಸರಳವಾಗಿ ಹೇಳಿದ್ದರು.

ಅಂಕೋಲಾದವರಿಗೊಂದು ಹಳೇ ರೋಗವಿದೆ. ಸಾಮಾನ್ಯವಾಗಿ ಅಂಕೋಲಾದವರು ಎಂದು ಗೊತ್ತಾದ ತಕ್ಷಣ ಎಲ್ಲಾ ಸಭ್ಯ ಮಾತಿನ ಫಾರ್ಮಾಲಿಟಿಯೂ ಮುಗಿದು ಬಹುವಚನ ಮಾಯವಾಗಿ ಏಕವಚನ ಪ್ರಾರಂಭವಾಗುವುದು. ಹೀಗಾಗಿ ಮಾತುಗಳ ನಡುವೆ ಮೇಡಂ ಮಾಯವಾಗಿ ನಾನು ಅಕ್ಕ ಆದೆ. ತಮ್ಮನಾದ ಆತ ಬಹುವಚನ ಮುಗಿಸಿ ಏಕವಚನಕ್ಕೆ ಜಾರಿದ್ದು.

ಅಂಕೋಲಾ ಎಂದರೆ ಅದೊಂದು ಮಿನಿ ಉತ್ತರಕನ್ನಡವಷ್ಟೇ ಅಲ್ಲ, ಮಿನಿ ಕರ್ನಾಟಕ, ಮಿನಿಮೈಸ್ ಮಾಡಿದ ಭಾರತ ಇದ್ದ ಹಾಗೆ. ಜಾತಿ ಉಪಜಾತಿಗಳೇ ತುಂಬಿರುವ ಊರು ಇದು. ಬೇರೆಡೆಯಂತೆ ಒಂದೋ ಎರಡೋ ಜನಾಂಗಗಳಿಗೆ ಸೀಮಿತವಾಗಿ ಊರು ಮುಗಿದು ಹೋಗುವುದಿಲ್ಲ. ಹತ್ತಾರು ಜಾತಿಗಳು ಮತ್ತು ಪ್ರತಿಯೊಂದು ಜಾತಿ ಜನಾಂಗಕ್ಕೂ ಪ್ರತ್ಯೇಕವಾದ ಕನ್ನಡದ ಉಪಭಾಷೆಗಳು. ಹೊರಗಿನಿಂದ ನೋಡಿದವರಿಗೆ ಎಲ್ಲವೂ ಒಂದೇ ತರಹದ ಎಲ್ಲವನ್ನೂ ಕತ್ತರಿಸಿ ಅರ್ಧ ಅರ್ಧ ಉಚ್ಚರಿಸಿದಂತೆ ವೇಗವಾಗಿ ಆಡುವ ಮಾತಾಗಿ ಕಂಡರೂ ಇಲ್ಲಿಯವರಿಗೆ ಇದು ನಾಡವರ ಕನ್ನಡ, ಇದು ನಾಮಧಾರಿಗಳದ್ದು, ಇದು ಹಾಲಕ್ಕಿ ಒಕ್ಕಲಿಗರ ಮಾತಿನ ಜೊತೆಗೇ ಕರಿ ಒಕ್ಕಲಿಗರ ಮಾತು, ಅದು ಕೋಮಾರ ಪಂಥರು, ಮತ್ತೊಂದು ಹರಿಕಂತ್ರರದ್ದು, ಪಟಗಾರ, ಅಂಬಿಗ, ಆಗೇರ, ಹಳ್ಳೇರ, ಬಂಟ, ಖಾರ್ವಿ, ಗಾಬಿತ್, ಹಳೆಪೈಕ ಎಂದೆಲ್ಲ ವಿಭಾಗಿಸಿ ನೋಡಬಹುದಾದ ಪ್ರತ್ಯೇಕ ಉಚ್ಛಾರ ಮತ್ತು ಶಬ್ಧಭಂಡಾರಗಳೇ ಇವೆ. ಹೀಗೆ ಪ್ರತ್ಯೇಕ ಭಾಷೆಯ ಗಟ್ಟಿತನವನ್ನು ತಮ್ಮ ಕಾದಂಬರಿಯಲ್ಲಿ ಹಿಡಿದಿಡಲು ರಾಜು ಅಷ್ಟೆ ಸಫಲರಾಗಿರುವುದರಿಂದಲೇ ಚರ್ಮಾಯಿ ಗೆದ್ದಿದೆ.

ಒಂದು ಕಥೆ ಅಥವಾ ಕಾದಂಬರಿಯನ್ನು ಬರೆಯುವಾಗ ನೆಲಮೂಲದಲ್ಲಿ ಬರೆಯುವುದು ನಿಜಕ್ಕೂ ಕಷ್ಟದ ಕೆಲಸ. ಒಂದು ಸಮುದಾಯವನ್ನು, ಅದರಲ್ಲೂ ತಾನು ಪ್ರತಿನಿಧಿಸದ ಆದರೆ ತನ್ನ ಸುತ್ತ ಮುತ್ತಲೇ ಇರುವ ಜನಾಂಗವನ್ನು ಇಟ್ಟುಕೊಂಡು ಬರೆಯುವ ಸವಾಲು ನಿಜಕ್ಕೂ ಕಷ್ಟದ ಕೆಲಸ. ಒಂದಿಷ್ಟೇ ಇಷ್ಟು ವ್ಯತ್ಯಾಸವಾದರೂ ಜಾತಿ ಸಂಘರ್ಷಕ್ಕೆ ಕಾರಣವಾಗಿ ಬಿಡಬಹುದಾದ ವಸ್ತವನ್ನು ಆಯ್ದುಕೊಂಡು ಬರೆಯುವ ಸಾಹಸ ಮಾಡಿದ್ದಕ್ಕಾಗಿಯೇ ರಾಜುವಿಗೆ ಮೊದಲ ಹ್ಯಾಟ್ಸ್ ಅಪ್ ಸಲ್ಲುತ್ತದೆ.

ನೆಲಮೂಲದಲ್ಲಿ ಕಾದಂಬರಿ ಬರೆದವರಿದ್ದಾರೆ. ಆಡುಭಾಷೆಯಲ್ಲಿಯೂ ಬರೆದು ಗೆದ್ದವರಿದ್ದಾರೆ. ಆದರೆ ಅದು ಕಷ್ಟದ ಕೆಲಸ ಎಂಬುದನ್ನು ಒಪ್ಪಿಕೊಳ್ಳಲೇ ಬೇಕು. ಪುಸ್ತಕದ ಭಾಷೆಯಲ್ಲಿ ಬರೆದಷ್ಟು ಸುಲಭವಾಗಿ ಆಡು ಮಾತನ್ನು ಅಕ್ಷರಕ್ಕಿಳಿಸುವುದು ಸಾಧ್ಯವಿಲ್ಲ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಕರ್ನಾಟಕದ ಒಂದು ಭಾಗದ ಭಾಷೆ ಇನ್ನೊಂದು ಭಾಗದವರಿಗೆ ಅರ್ಥವೇ ಆಗದ ಹಾಸ್ಯಾಸ್ಪದ ಭಾಷೆಯಾಗಿ ಅಶುದ್ಧ ಕನ್ನಡವಾಗಿ ಗೋಚರಿಸುತ್ತಿರುವಾಗ, ಬೆಂಗಳೂರಿನ ಕನ್ನಡವೇ ಶ್ರೇಷ್ಟ, ಮತ್ತು ಸಾಹಿತಿಯಾಗಿ, ಲೇಖಕನಾಗಿ ಗೆಲ್ಲಬೇಕೆಂದರೆ ಬೆಂಗಳೂರಿನ ಭಾಷೆಯಲ್ಲಿಯೇ ಬರೆಯಬೇಕು ಎಂಬುದೊಂದು ಪೂರ್ವಾಗ್ರಹ ಮನಸ್ಸಿನೊಂಗೆ ತುಂಬಿಕೊಂಡಿರುವುದರಿಂದ ಇತ್ತೀಚೆಗೆ ಗ್ರಾಮ್ಯಭಾಷೆ ಬರೆಯಲಾಗದ, ಬರೆಯಲೊಲ್ಲದ ಭಾಷೆಯಾಗಿ ಬಿಟ್ಟಿದೆ.

ಹೀಗಾಗಿ ಗ್ರಾಮ್ಯ ಭಾಷೆಯನ್ನು ಬಳಸುವುದರಿಂದ ಒಂದಿಷ್ಟು ಎಳೆ ತಪ್ಪಿದರೂ ಋಣಾತ್ಮಕ ಪರಿಣಾಮ ಬೀರುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಆದೆ ಅಂಕೋಲಾದ ತೀರಾ ಗ್ರಾಮ್ಯ, ಹಾಲಕ್ಕಿ ಒಕ್ಕಲಿಗರ ಭಾಷೆಯನ್ನು ಸುಲಲಿತವಾಗಿ ದುಡಿಸಿಕೊಳ್ಳುವಲ್ಲಿ ರಾಜು ಯಶಸ್ವಿಯಾಗಿದ್ದಾರೆ. ಇದರ ಜೊತೆ ಹೆಂಗಸರಿಗೆ ದೇವಾಲಯದ ಗರ್ಭಗುಡಿಯೊಳಗಿನ ಪ್ರವೇಶವೇ ಅಸಾಧ್ಯವಾಗಿರುವಾಗ, ಸಾಮಾಜಿಕವಾಗಿ ತೀರಾ ಕೆಳವರ್ಗ, ಯಾರೂ ಮುಟ್ಟಿಸಿಕೊಳ್ಳದ ಜನಾಂಗದ ಹೆಣ್ಣೊಬ್ಬಳು, ಮುಟ್ಟಾದಾಗ ದೇವಾಲಯದ ಒಳಗೆ ಹೋದರೆ ಏನಾಗುತ್ತದೆ ಎಂಬ ಪ್ರಶ್ನೆಯನ್ನೆತ್ತಿಕೊಂಡು ಕಥೆಯನ್ನು ಮುನ್ನಡೆಸುತ್ತಾಳೆ. ಹೀಗೆ ಬಹು ಚರ್ಚಿತವಾದ, ಸಮಾಜದಲ್ಲಿ ಅಲ್ಲೋಲಕಲ್ಲೋಲವನ್ನೇ ಹುಟ್ಟಿಸಬಹುದಾದ ವಿಷಯದ ಸುತ್ತ ಕಥೆಯನ್ನು ಬಿಡಿಸಿಟ್ಟಿರುವುದಕ್ಕೆ ರಾಜುವಿಗೆ ಎರಡನೇ ಹ್ಯಾಟ್ಸ್ ಆಪ್ ಸಲ್ಲುತ್ತದೆ.

ತೀರಾ ಕೆಳ ಜನಾಂಗದ ಮುಖಂಡನೊಬ್ಬನ ಸಾವಿನಿಂದ ಪ್ರಾರಂಭವಾಗುವ ಕಾದಂಬರಿ ಒಂದು ಪುಸ್ತಕವನ್ನು ಸಾವಿನಿಂದ ಪ್ರಾರಂಭಿಸಬಾರದು ಎಂಬ ನಂಬಿಕೆಯನ್ನು ಬುಡಮೇಲು ಮಾಡಿ ಆರಂಭದಲ್ಲೇ ಎಲ್ಲ ಮಾಮೂಲಿಯನ್ನು ಹೊಸಕಿ ಹಾಕುತ್ತದೆ. ಸತ್ತು ಹೋದ ಅಜ್ಜನಿಗೆ ಬೆಂಕಿ ಇಡುವ ಹೊತ್ತಲ್ಲೇ ಮೈ ಸವರಿ ಸಮಾಧಾನ ಮಾಡಿದ ಊರ ಹಿರಿಯರು ತಮ್ಮನ್ನು ಮುಟ್ಟಿಬಿಟ್ಟರಲ್ಲ ಎಂದುಕೊಂಡ ಪರಿಧಿ ಮುಂದಿನ ಇಡೀ ಕಥೆಯನ್ನು ತನ್ನದೇ ಹಿಡಿತದಲ್ಲಿಟ್ಟುಕೊಂಡು ನಡೆಸಿಕೊಡುತ್ತಾಳೆ.

ನಾನು ಕಾಲೇಜಿಗೆ ಹೋಗುವಾಗ ಸ್ನೇಹಿತನೊಬ್ಬ ಯಾವಾಗಲೂ ಮನೆಗೆ ಬರುತ್ತಿದ್ದ. ನಮ್ಮ ಮನೆಯಲ್ಲಿ ಯಾವತ್ತೂ ಜಾತಿಯ ಪ್ರಶ್ನೆ ಬರುವುದೇ ಇಲ್ಲವಾದ್ದರಿಂದ ಕೆಲವೊಮ್ಮೆ ಹಾಯಾಗಿ ಊಟ ಮಾಡಿಕೊಂಡೂ ಹೋಗುತ್ತಿದ್ದ. ಒಂದು ದಿನ ಏನೋ ಮಾತನಾಡುವಾಗ ಅಜಾನಕ್ ಆಗಿ ಆತನ ಜಾತಿ ಪ್ರಸ್ತಾಪ ಬಂತು. ಅಮ್ಮ ಹೌದಾ? ಹಾಗನ್ನಿಸೋದಿಲ್ವಲ್ಲ..’ ಎಂದು ಮಾಮೂಲಿಯಾಗೇ ಹೇಳಿದ್ದರೂ ಅಪ್ಪನಿಗೆ ಕೋಪ ಬಂದು ಬಿಟ್ಟಿತ್ತು.

‘ಹಾಗನ್ನಿಸೋದಿಲ್ಲ ಎಂದರೆ ಏನರ್ಥ? ನೀನು ಇವಳ ತಲೆಗೆ ಜಾತಿ ಬಗ್ಗೆ ತುಂಬಬೇಡ.’ ಎಂದು ತರಾಟೆಗೆ ತೆಗೆದುಕೊಂಡಿದ್ದರು. ಹಾಗೆ ನೋಡಿದರೆ ಇಂತಹ ವಿಷಯಗಳಲ್ಲಿ ಅಪ್ಪನಿಗಿಂತಲೂ ಆಧುನಿಕವಾಗಿ ಯೋಚಿಸುವ ಅಮ್ಮ, ‘ತಾನು ಜಾತಿ ಬಗ್ಗೆ ಮಾತನಾಡಲಿಲ್ಲ’ ಎಂದರೂ ಅಪ್ಪನ ಕೋಪ ಇಳಿದಿರಲೇ ಇಲ್ಲ.

ಇವತ್ತಿಗೂ ಅಂಕೋಲಾದ ಹಳ್ಳಿಗಳಲ್ಲಿ ಊರ ಹೊರಗೆ ಮುಟ್ಟಿಸಿಕೊಳ್ಳಬಾರದ ಜಾತಿಯವರು ಎಂದು ಕರೆಯಿಸಿಕೊಂಡು ಅವಮಾನಕ್ಕೀಡಾಗುವ ಜನಾಂಗವಿರುತ್ತದೆ. ಆದರೆ ಈಗ ಅಂತಹ ಕಟ್ಟುನಿಟ್ಟಿನ ಆಚರಣೆಗಳೆಲ್ಲ ಕಡಿಮೆಯಾಗಿ ಇಲ್ಲವೇ ಇಲ್ಲ ಎಂಬ ಹಂತ ತಲುಪಿ ಹೊಕ್ಕು ಬಳಕೆಯಾಗುತ್ತಿರುವುದು ಸಮಾಧಾನದ ವಿಷಯ. ಇಂತಹ ಜನಾಂಗದ ಮುಖ್ಯಸ್ಥನ ಮೊಮ್ಮಗಳಾದ ಪರಿಧಿ ತೀರಾ ಆಧುನಿಕ ಮನೋಭಾವದವಳು. ಆಕೆಗೆ ದೇವಸ್ಥಾನದ ಪ್ರವೇಶ ಎನ್ನುವುದು ಕೇವಲ ಹೆಣ್ತನಕ್ಕೆ ಎದುರಾದ ಸವಾಲು ಮಾತ್ರವಲ್ಲ, ಸಾಮಾಜಿಕವಾಗಿ ಎದುರಾದ ಸವಾಲು ಕೂಡ ಹೌದು. ಹೀಗಾಗಿಯೇ ಆಕೆ ಮುಟ್ಟಾದಾಗ ದೇವಸ್ಥಾನದ ಒಳಹೋಗಬೇಕೆಂದು ಬಯಸುತ್ತ, ತನ್ನನ್ನು ಬಹಿಷ್ಕರಿಸುವ ಸಮಾಜಕ್ಕೊಂದು ಪ್ರತಿ ಸವಾಲೆಸೆಯುತ್ತಾಳೆ.

ಹೆಣ್ಣಿಗೆ ದೇವಾಲಯದ ಗರ್ಭಗುಡಿಯೊಳಗೆ ಹೋಗುವುದಕ್ಕೇ ಆಸ್ಪದವಿರದ ನಮ್ಮ ಸಮಾಜದಲ್ಲಿ ಋತುಮತಿಯಾದ ಹೆಣ್ಣು ದೇವರ ಶಿಲೆಯನ್ನು ಮುಟ್ಟಿದರೆ ಏನಾಗುತ್ತದೆ ಎಂಬ ಬಹು ಚರ್ಚಿತ ವಿಷಯದ ಎಳೆಯನ್ನು ಹಿಡಿದುಕೊಂಡು ಕಾದಂಬರಿಯನ್ನು ಬೆಳೆಸಿದ್ದಾರೆ.

ಮಹಾರಾಷ್ಟ್ರದಲ್ಲಿ ಶನಿ ದೇವಾಲಯದ ಒಳಗೆ ಪ್ರವೇಶ ಮಾಡಲು, ಕೇರಳದ ಶಬರಿಮಲೆಗೆ ಹೋಗಲು ಇನ್ನೂ ಹೆಣ್ಣುಮಕ್ಕಳು ಹೋರಾಡುತ್ತಿರುವ ಈ ಸಂದರ್ಭದಲ್ಲಿ ಸಾಮಾಜಿಕವಾಗಿ ಬಹಿಷ್ಟೆ ಎಂದು ಕರೆಯುವ ಆ ಸಂದಿಗ್ಧ ಸ್ಥಿತಿಯಲ್ಲಿ ಜಾತ್ರೆಯ ಹೊತ್ತಿಗೆ ದೇವಾಲಯವನ್ನು ಪ್ರವೇಶಿಸುವ ತೀರ್ಮಾನ ಕಾದಂಬರಿಯ ಮುಖ್ಯ ತಿರುವುಗಳಲ್ಲೊಂದು. ಇತ್ತೀಚಿನ ದಿನಗಳಲ್ಲಿ ಹೆಣ್ಣಿನ ಸ್ವಚ್ಛತೆಗೆ ಅಗತ್ಯವುಳ್ಳ ಸ್ಯಾನಿಟರಿ ಪ್ಯಾಡ್‍ಗಳು ದೊಡ್ಡಮಟ್ಟದ ಸದ್ದು ಮಾಡುತ್ತಿರುವಾಗ ಈ ಕಾದಂಬರಿ ತೀರಾ ಪ್ರಸ್ತುತವೆನಿಸುತ್ತದೆ.

ಹೈಸ್ಕೂಲಿನ ದಿನಗಳಲ್ಲಿ ಬೇಕಾದಾಗ ಆಹ್ವಾನಿಸಿಕೊಂಡು, ಬೇಡ ಎನ್ನಿಸಿದಾಗ ಮುಚ್ಚಿಟ್ಟುಬಿಡುವ ಈ ಮುಟ್ಟು ಎನ್ನುವ ನೈಸರ್ಗಿಕ ಕ್ರಿಯೆಯ ಬಗ್ಗೆ ನನಗೆ ಮೊದಲಿನಿಂದಲೂ ಅದೇನೋ ಕುತೂಹಲ. ನಾನು ಅದನ್ನು ಅನುಭವಿಸುವ ಮೊದಲು ಅದರ ಬಗ್ಗೆ ಏನೇನೂ ಗೊತ್ತಿರಲಿಲ್ಲ. ಶಿಕ್ಷಕಿಯಾಗಿದ್ದ ಅಮ್ಮ ಕೂಡ ಒಂದಿಷ್ಟೂ ಸೂಚನೆ ನೀಡದೇ ಒಮ್ಮೆಲೆ ರಕ್ತ ಕಂಡು ಬೆಚ್ಚಿಬಿದ್ದ ನನ್ನನ್ನು ಅದೇನೂ ದೊಡ್ಡ ವಿಷಯವಲ್ಲ ಎಂಬಂತೆ ಮಾಮೂಲಾಗಿ ವರ್ತಿಸಿದ್ದರು.

ಹೀಗಾಗಿಯೇ ಸುತ್ತಲೂ ತೀರಾ ಮಡಿವಂತಿಕೆಯ ಹವ್ಯಕ ಹುಡುಗಿಯರಿದ್ದರೂ ನನಗೆ ಅದೊಂದು ಹೊರಗಿರಬೇಕಾದ ಪ್ರಕ್ರಿಯೆ ಎನ್ನಿಸಲೇ ಇಲ್ಲ. ಅವರೆಲ್ಲ ತೀರಾ ನಿಶಿದ್ಧ, ಅಪಶಕುನ ಎಂದುಕೊಳ್ಳುವಾಗಲೆಲ್ಲ ನನಗೆ ಅಚ್ಚರಿ. ಯಾಕೆಂದರೆ ಅವರ ನಂಬಿಕೆಗೆ ತೀರಾ ವಿರುದ್ಧವಾದ ನಂಬಿಕೆಯಲ್ಲಿ ನಾನಿದ್ದೆ.

ಪರೀಕ್ಷಾ ಸಮಯದಲ್ಲಿ ಋತುಚಕ್ರವಾದರೆ ನನಗೆ ಆ ಪರೀಕ್ಷೆ ಸುಲಭವಾಗುತ್ತದೆ ಮತ್ತು ಆ ಪರೀಕ್ಷೆಯಲ್ಲಿ ನಾನೇ ಒಂದನೇ ಸ್ಥಾನ ಪಡೆಯುವುದು ಎಂಬ ಮೂಢನಂಬಿಕೆಯನ್ನು ಬೆಳೆಸಿಕೊಂಡು ಬಿಟ್ಟಿದ್ದರಿಂದ ಋತುಸ್ರಾವ ಶಾಪವಾಗಿ ಕಾಡಿದ್ದೇ ಇಲ್ಲ. ಆ ಸಮಯದಲ್ಲಿ ಗೆಳತಿಯರೆಲ್ಲ ಹೊರಗೆ ಚಾಪೆಯ ಮೇಲೆ ಒಂಟಿಯಾಗಿ ಮಲಗಬೇಕಾದ ಮುಜುಗರ ಅನುಭವಿಸುತ್ತಿದ್ದರೆ, ಆ ದಿನಗಳಲ್ಲಿ ನಾನು ಅಮ್ಮ ಬೇಯಿಸಿಕೊಡುತ್ತಿದ್ದ ಮೊಟ್ಟೆ ತಿಂದು ಅಮ್ಮನ ಹೊಟ್ಟೆಯಲ್ಲಿ ಕೈಯಿಟ್ಟು, ಅಪ್ಪನ ಬೆನ್ನ ಮೇಲೆ ಕಾಲು ಹೇರಿ ಮಲಗಿಕೊಳ್ಳುವ ಸುಖ ಅನುಭವಿಸುತ್ತಿದ್ದೆ.

ಆದರೆ ಎಲ್ಲಿಯಾದರೂ ಹೋಗುವ ಮನಸ್ಸಿಲ್ಲದಿದ್ದಾಗ ನನಗೆ ಬರೋಕಾಗಲ್ಲ, ಎಂಬ ನೆಪ ಹೇಳುತ್ತ, ಹೋಗಲೇ ಬೇಕು ಎನ್ನಿಸಿದಾಗ, ಅದು ದೇವಸ್ಥಾನವೇ ಆಗಿರಲಿ, ಯಾವುದೇ ಕಾರ್ಯಕ್ರಮಗಳೇ ಆಗಿರಲಿ, ಮುಚ್ಚಿಟ್ಟು ಹೊರಟುಬಿಡುವ ಸೌಲಭ್ಯ ಅನುಭವಿಸಿಬಿಟ್ಟಿದ್ದೆ. ಹೀಗೆಂದೇ ನನಗೆ ನನ್ನ ವಿದ್ಯಾರ್ಥಿನಿಯರು ಯಾರಾದರೂ ಆ ಸಮಯಕ್ಕೆ ದೇವಸ್ಥಾನಕ್ಕೆ ಹೋಗಬಾರದು ಎಂಬ ಮಾತನಾಡಿದರೆ ತೀರಾ ಅಸಹಜವೆನಿಸಿ ಕಾಡುತ್ತದೆ.

ಈ ಮೊದಲೇ ಹೇಳಿದಂತೆ ರಾಜುವಿಗೆ ಕ್ಯಾಚಿ ಹೆಸರುಗಳ ಬಗ್ಗೆ ತೀರಾ ವ್ಯಾಮೋಹ. ಕಾದಂಬರಿಯಲ್ಲಿ ಬರುವ ಸುಮಕೇತು, ಪರಧಿ, ಕೈವಲ್ಯ ಎಂಬ ಹೆಸರುಗಳು ಕುತೂಹಲ ಹುಟ್ಟಿಸುತ್ತದೆ. ಕುಂಕುಮ ಗ್ರಾಮ ಎಂಬ ಊರು ಅಂಕೋಲಾದ ಭೂಪಟದಲ್ಲಿ ಇಲ್ಲವಾದರೂ ರಾಜು ನೀಡುವ ವಿವರಣೆಯಿಂದ ಅದು ಎಲ್ಲಿರಬಹುದು ಎಂದು ಕಣ್ಣಿಗೆ ಕಟ್ಟಿದಂತಾಗುತ್ತದೆ.

ಅಷ್ಟೇ ಏಕೆ ಕಾದಂಬರಿಯ ಹೆಸರು ‘ಚರ್ಮಾಯಿ’ ಎಂಬುದು ಕೂಡ ಎಲ್ಲೂ ಕೇಳದಂತಹ ವಿಶಿಷ್ಟವಾದ ಹೆಸರೇ. ಸುಮಕೇತುವಿನ ಪಾತ್ರವನ್ನು ಪರಿಚಯಿಸಲೋ ಎಂಬಂತೆ ನಾಲ್ಕು ಪುಟದ ಪತ್ರದೊಂದಿಗೆ ಬರುವ ಕೈವಲ್ಯ, ತನ್ನ ಪತ್ರದ ಮೂಲಕ ತನ್ನ ಆಸೆಯನ್ನು ತಿಳಿಸುತ್ತಲೇ ಸುಕೇತು ಹಾಗೂ ಪರಧಿಯ ನಡುವಣ ಕೊಂಡಿಯಾಗುತ್ತಾಳೆ. ಸುಮಕೇತುವಿನೊಂದಿಗೆ ಮದುವೆ ಆಗುವುದೇ ತನ್ನ ಇಹಲೋಕ ಯಾತ್ರೆಯ ಮೂಲ ಕರ್ತವ್ಯ ಎಂಬಂತೆ ಮದುವೆ ಆಗಿ ಸತ್ತೂ ಹೋಗುತ್ತಾಳೆ.

ಆದರೆ ಸುಮುಖೇತುವಿನೊಂದಿಗೆ ಇರುವುದು ಪರಿಧಿ. ಸುಮಕೇತುವಿನ ಎಲ್ಲಾ ಕೆಲಸಕ್ಕೆ ಜೊತೆಯಾಗುವ ಪರಿಧಿ ಆತನ ಧೀಮಂತತೆಗೆ ಮಾರು ಹೋಗಿ ಆತನ ಯೌವ್ವನಕ್ಕೂ ಜೊತೆಯಾಗುತ್ತಾಳೆ. ಊರಿನ ಎಲ್ಲಾ ಮನೆಗೂ ಭೇಟಿ ನೀಡಿ, ಋತುಸ್ರಾವ ಎಂಬುದು ಮೈಲಿಗೆಯಲ್ಲ ಎಂಬ ತಮ್ಮ ಮಾತನ್ನು ಆಧಾರ ಸಮೇತವಾಗಿ ವಿವರಿಸುತ್ತ ಸಾಗುವ ಸುಮಕೇತು ಮತ್ತು ಪರಿಧಿಯ ಕುರಿತು ಊರಿನ ಜನರಲ್ಲಿ ವಿಪರೀತ ಕುತೂಹಲ. ಹೀಗಾಗಿಯೇ ಊರಿನವರ ದೃಷ್ಟಿಯಲ್ಲಿ ಪರಿಧಿ ಹಾದಿ ತಪ್ಪಿದವಳಾಗಿ ಬಿಡುತ್ತಾಳೆ. ಸುಮಕೇತು ಮಾತ್ರ ಗಂಡಸಾಗಿಯೇ ಊರವರ ಕಣ್ಣಲ್ಲಿ ಉಳಿದು ಗೌರವಸ್ಥನಾಗಿಯೇ ಇರುತ್ತಾನೆ.

ಎಲ್ಲವನ್ನೂ ಎದುರಿಸಿ ನಿಂತು ಜಯಗಳಿಸಿದ ಸುಮಕೇತು ಜಯದ ಕೊನೆಯಲ್ಲಿ ಕೊಲೆಯಾಗಿ ಹೋಗುವುದೂ, ಆತನ ಸಾವಿನ ಜೊತೆಜೊತೆಗೆ, ಆಧುನಿಕ ಮನೋಭಾವದ ಪರಿಧಿ ಬಳೆ ಒಡೆದು, ಕುಂಕುಮ ಒರೆಸಿ ಮತ್ತದೇ ಹಳೆಯ ಸಂಪ್ರದಾಯಕ್ಕೆ ಜೋತು ಬೀಳುವುದು ಒಂದಿಷ್ಟು ಬೇಸರವೆನ್ನಿಸಿದರೂ ಕಾದಂಬರಿ ಎಲ್ಲೂ ಅಡೆತಡೆಯಿಲ್ಲದೇ ಓದಿಸಿಕೊಂಡು ಹೋಗುತ್ತದೆ.

ಏಕತಾನತೆ ಕಾಡದಂತೆ ಮಾಡಲು ಪರಿಧಿ ಮತ್ತು ಸುಮಕೇತುವಿನ ಕಡಲ ತೀರದ ಮಿಲನ ಮಹೋತ್ಸವವಿದೆ. ಪರಿಧಿ ಮತ್ತು ಸುಕೇತುವಿನ ಮಿಲನವನ್ನು ಎಳೆಎಳೆಯಾಗಿ ವಿವರಿಸಲೆಂದೇ ಕನಿಷ್ಟ ಐದಾರು ಪುಟಗಳ ಬಳಕೆಯಾಗಿರುವುದು ಹಿಂದೆಲ್ಲ ಚಂಪೂ ಕಾವ್ಯ ಬರೆಯಬೇಕೆಂದರೆ ಹದಿನೆಂಟು ತರಹದ ವರ್ಣನೆ ಇರಲೇ ಬೇಕೆಂಬ ನಿಯಮವಿತ್ತಂತೆ. ಹೀಗಾಗಿ ಪರಮ ಸನ್ಯಾಸಿ ನಾರದನನ್ನು ವೇಶ್ಯಾ ಪುರದೊಳಗೆ ಓಡಾಡಿಸಿ, ವರ್ಣನೆ ಮಾಡುವ ಸನ್ನಿವೇಶದ ನೆನಪಾಗುವಂತೆ ಮಾಡುತ್ತದೆಯಾದರೂ ಒಂದು ಜನಾಂಗದ ಆಚರಣೆಗಳನ್ನು ತಿಳಿದುಕೊಳ್ಳುವಂತೆ ಮಾಡಲು ಕಾದಂಬರಿ ಯಶಸ್ವಿಯಾಗಿದೆ.

“ಮುಟ್ಟಾದವರ
ಮುಟ್ಟಿಬಿಡು
ಮೆಟ್ಟಲು
ಮಾರಿ
ಮಂತ್ರವ…”

ಎಂಬ ಕೈವಲ್ಯಳ ಪತ್ರದ ಮೊದಲ ಸಾಲುಗಳು ಕಾದಂಬರಿಯ ಉದ್ದಕ್ಕೂ ರಿಂಗಣಿಸುತ್ತಲೇ ಇರುತ್ತದೆ.

ಅಂಕೋಲಾದ ಅಡ್ಲೂರು ಎಂಬ ಪುಟ್ಟ ಊರಿನ ಮೊದಲ ಇಂಜಿನಿಯರಿಂಗ್ ಪದವೀಧರ ಎಂಬ ಹೆಗ್ಗಳಿಕೆ ಹೊತ್ತುಕೊಂಡ ರಾಜು ಸಾಹಿತ್ಯ ಕ್ಷೇತ್ರದ ಕಡೆಗೆ ವಾಲಿದ್ದೇ ಒಂದು ದೊಡ್ಡ ಅಚ್ಚರಿ. ಅಂಕಿ ಸಂಖ್ಯೆಗಳ ನಡುವಣ ಲೆಕ್ಕಾಚಾರದಲ್ಲಿ ಅಕ್ಷರಶಃ ಕಳೆದು ಹೋಗಿಬಿಡಬೇಕಾಗಿದ್ದ ರಾಜು ಅಕ್ಷರಲೋಕದ ನಂಟು ಬೆಳೆಸಿಕೊಂಡಿದ್ದರ ಬಗ್ಗೆ ಖುಷಿಯೆನಿಸುತ್ತದೆ.

ದೃಶ್ಯ ಮಾಧ್ಯಮಗಳ ನೀರಸ ವರದಿ, ಟಿ ಆರ್ ಪಿ ಲೆಕ್ಕಾಚಾರಗಳ ಬಿಡುವಿಲ್ಲದ ಕೆಲಸದ ನಡುವೆಯೂ ಅಕ್ಷರಪ್ರೇಮಿಯಾದ ರಾಜುವಿನ ಚರ್ಮಾಯಿ ಓದುವ ಉಮ್ಮೇದಿ ಇರುವವರು ಓದಲೇಬೇಕಾದ ಪುಸ್ತಕ.

ಚರ್ಮಾಯಿ ಎಂದರೇನು ಎಂದು ತಿಳಿದುಕೊಳ್ಳಲಾದರೂ….

14 Responses

 1. ಧನಪಾಲ ನೆಲವಾಗಿಲು says:

  ಚರ್ಮಾಯಿ ಕಾದಂಬರಿಯ ವಿಶ್ಲೇಷಣೆ ತುಂಬಾ ಆಪ್ತವಾಗಿದೆ. ಮುಟ್ಟಿನ ಬಗ್ಗೆ ತಮಗಿರುವ ಭಾವನೆಗಳು ನನಗೂ ಇರುವುದುವಗ ಅಚ್ಚರಿ ಮತ್ತು ಸಂತಸವನ್ನು ನೀಡಿತು.

  ಚರ್ಮಾಯಿ ಕಾದಂಬರಿ ಎಲ್ಲಿ ಸಿಗುತ್ತದೆ.

  ರಾಜು ಅಷ್ಟೇ ಅವರ ಚರವಾಣಿಯ ಸಂಖ್ಯೆ ಬೇಕಿತ್ತು. ಕೊಡುವಿರಾ?

 2. Raju Ashte says:

  ಧನ್ಯವಾದಗಳು…
  9483763781

 3. ಅಕ್ಕಿಮಂಗಲ ಮಂಜುನಾಥ. says:

  ಚರ್ಮಾಯಿ ಕಾದಂಬರಿಯ ಬಗ್ಗೆ ತುಂಬಾ ಚೆನ್ನಾಗಿ ವಿವರಿಸಿದ್ದೀರಿ.ಕಾದಂಬರಿಯನ್ನು ಓದಬೇಕೆನಿಸುತ್ತಿದೆ.

  • Shreedevi keremane says:

   ಓದಿ ನೋಡಿ ಸರ್. ರಾಜುಗೆ ತಮ್ಮಂತಹ ಬರಹಗಾರರ ಮಾರ್ಗದರ್ಶನ ಅತ್ಯಗತ್ಯ.

 4. Sreedhar says:

  ಚರ್ಮಾಯಿ ಓದಿದೆ. ವಿಶ್ಲೇಷಣೆ ಚೆನ್ನಾಗಿದೆ. ಈ ಕಥೆ ಹತ್ತಿರದಲ್ಲೆ ನಡೆದಿವೆ .ರಾಜು ಅವರಲ್ಲಿ ನನ್ನನ್ನು ಕಾಣುತ್ತೇನೆ .

  ಧನ್ಯವಾದಗಳು .

  • Shreedevi keremane says:

   ಓಹ್ ಖುಷಿಯಾಯ್ತು. ರಾಜುಗೆ ಇದು ದೊಡ್ಡ ಗೌರವ

 5. ಮಂಜುನಾಥ ಬನಸೀಹಳ್ಳಿ says:

  ಚರ್ಮಾಯಿ ಕಾದಂಬರಿ ಬಗ್ಗೆ ನನ್ನಲ್ಲಿ ಸಹ ಕೂತೂಹಲ ಮೂಡಿಸಿದ್ದೀರಾ ತಮಗೆ ಧನ್ಯವಾದಗಳು ಕಾದಂಬರಿ ಏಲ್ಲಿ ಸಿಗುವುದು ಮಾಹಿತಿಯನ್ನು ತಿಳಿಸುವಿರಾ

  • Shreedevi keremane says:

   ಸರ್ ಮೇಲಿನ ಕಾಮೆಂಟ್ ನಲ್ಲಿ ರಾಜು ತನ್ನ ನಂಬರ್ ಕೊಟ್ಟಿದ್ದಾರೆ. ಅವರಿಂದ ಪುಸ್ತಕ ತರಿಸಿಕೊಳ್ಳ ಬಹುದು

 6. Sujatha lakshmipura says:

  ಚರ್ಮಾಯಿ ಪುಸ್ತಕ ಪರಿಚಯ ಮತ್ತು ವಿಮರ್ಶೆ ಸೊಗಸಾಗಿದೆ.ಆಧುನಿಕ ವಿಚಾರಗಳು ಮತ್ತು ಸಾಂಪ್ರದಾಯಿಕಾ ಆಚರಣೆಗಳ ನಡುವಿನ ಸಂಘರ್ಷದ ಕತೆಯ ವಸ್ತುವೇ ಮೊದಲಿಗೆ ಓದುಗರ ಸೆಳೆಯುತ್ತದೆ.

  ಇದು ಅಕ್ಕನು ತಮ್ಮ ರಾಜುನ ಕೃತಿ ಪರಿಚಯಿಸುವ ರೀತಿ ಚನ್ನಾಗಿದೆ.ಬಹುಮುಖ್ಯ ಅಂಶಗಳನ್ನು ಗುರುತಿಸಿ ಮೆಚ್ಚುಗೆ ತೋರಿದ ಪರಿ ಚಂದ.ನಿಮ್ಮ ವಿಮರ್ಶೆ ಓದಿದ ಮೇಲೆ ಕನ್ನಡಕ್ಕೆ ನವಕವಿ ಮತ್ತು ನವೀನ ಕಾದಂಬರಿ ಪ್ರವೇಶಿಸಿದೆ ಎನ್ನಿಸುತ್ತದೆ… ಧನ್ಯವಾದಗಳು ಮೇಡಮ್,ಇಂತಹ ಬರವಣಿಗೆ ಮೂಲಕ ಓದಿನ ಸುಖ ನೀಡಿದ್ದಕ್ಕಾಗಿ.

  • Shreedevi keremane says:

   ಆ ಪುಸ್ತಕದ ಓದು ನಿಮ್ಮಲ್ಲೂ ಹಲವಾರು ಒಳ ಸಾಧ್ಯತೆಗಳನ್ನು ತೆರೆದಿಡಬಹುದು. ಓದಿನೋಡಿ ಮೇಡಂ

 7. ಚರ್ಮಾಯಿ ಕಾದಂಬರಿಯನ್ನು ಒಮ್ಮೆ ಓದಲೇಬೇಕು ಎನ್ನುವಷ್ಟು ಕೌತುಕತೆಯನ್ನು ತುಂಬಿದ ತಮ್ಮ ಪುಸ್ತಕ ಪರಿಚಯ ಆಪ್ತವಾಗಿದೆ ಜೊತೆಗೆ ಸೊಗಸಾಗಿ ಮೂಡಿ ಬಂದಿದೆ.ಶ್ರೀ ಮೇಡಂ
  ಶ್ರೀದೇವಿ ರೆಕ್ಮಂಡ್ಸ್ ಓದಿಗೆ ಕಣ್ಬಿಟ್ಟು ಕಾಯೋ ಹಾಗೆ ಮಾಡ್ತಿದೆ

  ರಾಜು ಅಷ್ಟೇ ಅವರ ವಿಶಿಷ್ಟ ವ್ಯಕ್ತಿತ್ವವೂ ಇಲ್ಲಿ‌ ಅನಾವರಣಗೊಂಡಿದೆ.
  ಅಭಿನಂದನೆಗಳು ಅಷ್ಟೇ ಅವರಿಗೆ

  ಇಂಥ ಅಪರೂಪದ ಪುಸ್ತಕ ಪರಿಚಯದ ಮಾಲೆಯ ಪರಿಮಳವನ್ನು ನಮ್ಮಂಥ ಓದುಗರಿಗೆ ಸಾಧ್ಯವಾಗಿಸುತ್ತಿರುವ ಅವಧಿ ಪತ್ರಿಕಾ ಸಂಪಾದಕರಿಗೆ & ಬಳಗಕ್ಕೆ ಅನಂತಾನಂತ ಧನ್ಯವಾದಗಳು

  ಕೃತಿ ದೊರೆಯುವ ಬಗೆ ತಿಳಿಸಿದರೆ
  ಓದಿಗೆ ಅಣಿಯಾಗಲು ಅನುಕೂಲ

 8. ರಾಜು ಅಷ್ಟೇ ಅವರ ಜೊತೆ‌ ಮಾತಾಡಿ ಚರ್ಮಾಯಿ ಕೈಯಲ್ಲಿ ಹಿಡಿದು ಓದಿ ಆನಂದಿಸುವೆ
  ಧನ್ಯವಾದಗಳು
  ಶ್ರೀ..

 9. ನಂಗೊಂದು ಕೆಟ್ಟ ಭಯವಿದೆ! ಪುಸ್ತಕ ಓದಿ , ಅಕಸ್ಮಾತ್ ಅದು ಇಷ್ಟವಾಗದೇ ಹೋದರೆ ಆಗುವ ನೋವನ್ನು ಸಹಿಸಿಕೊಳ್ಳಲಾಗದ ಭಯ.. ಪುಸ್ತಕದಂಗಡಿಯಲ್ಲಿ ಹೊಸ ಪುಸ್ತಕಗಳನ್ನು ಅಪರೂಪಕ್ಕೊಮ್ಮೆ ಎತ್ತಿಕೊಳ್ಳುತ್ತೇನೆ. ಆ ಪುಸ್ತಕವನ್ನು ಓದಲು ಶುರು ಮಾಡಲು ಸರಿಸುಮಾರು ಒಂದು ವಾರ ಬೇಕು ಬೆನ್ನುಡಿ, ಹಿನ್ನುಡಿ, ಮಧ್ಯದೊಂದಿಷ್ಟು ಪುಟಗಳು ಎಲ್ಲವನ್ನೂ ಓದಿ , ಪುಸ್ತಕ ಇಷ್ಟವಾಗ್ಬೋದು ಅಂತನಿಸಿದರೆ ಮಾತ್ರ ಪೂರ್ತಿ ಓದುತ್ತೇನೆ. ಇಲ್ಲವಾದರೆ ಅಷ್ಟೇ !
  ‘ಶ್ರೀದೇವಿ recommends’ ಸದ್ಯಕ್ಕೆ ಅಂಥದ್ದೊಂದು ಭಯವನ್ನು ಯಶಸ್ವಿಯಾಗಿ ದೂರವಾಗಿಸಿದೆ.
  ಧನ್ಯವಾದ ಮೇಡಂ..
  ಚರ್ಮಾಯಿಯ ಬಗೆಗಿನ ಲೇಖನ ಓದಿದೆ. ಮುಟ್ಟು, ದೇವರು, ದೇವಸ್ಥಾನದ ಬಗ್ಗೆ ನನ್ನೊಳಗೂ ಎಷ್ಟೊಂದು ಕಥೆಗಳಿದೆ ಹೇಳಿಕೊಳ್ಳೋಕೆ. ಪುಸ್ತಕ ಓದ್ತೀನಿ ಸದ್ಯದಲ್ಲೇ..

Leave a Reply

%d bloggers like this: