ನನ್ನ ಕೆಲ ವಸ್ತುಗಳು ನಿನ್ನ ಬಳಿಯೇ ಉಳಿದಿದೆ..

ಗುಲ್ಜಾರ್ 
ಅನುವಾದ – ಸುನೀತ ಹೆಬ್ಬಾರ್

ನನ್ನ ಕೆಲ ವಸ್ತುಗಳು
ನಿನ್ನ ಬಳಿಯೇ ಉಳಿದಿದೆ

ಮಳೆಗಾಲದಲ್ಲಿ ತೊಯ್ದು ತೊಪ್ಪೆಯಾದ ಕೆಲ ದಿನಗಳ ಇಟ್ಟಿರುವೆ
ಹಾಗೆ ನನ್ನ ಒಂದು ಪತ್ರಕ್ಕಂಟಿದ ರಾತ್ರಿಯಿದೆ
ಆ ರಾತ್ರಿಯನ್ನು ಆರಿಸು
ನನ್ನ ಆ ವಸ್ತುಗಳನ್ನೆಲ್ಲ ಮರಳಿಸು .

ಎಲೆ ಉದುರುವ ಕಾಲ , ಅಲ್ಲವೇ
ಶರತ್ಕಾಲದಲ್ಲಿ ಕೆಲ ಎಲೆ ಉದುರುವ ಸಪ್ಪಳ
ಕಿವಿಯಲ್ಲಿ ಒಮ್ಮೆ ಧರಿಸಿಕೊಂಡು ಹಿಂತಿರುಗಿದ್ದೆ
ಶರತ್ಕಾಲದ ಆ ರೆಂಬೆಯಿನ್ನೂ ಕಂಪಿಸುತ್ತಿದೆ
ಆ ರೆಂಬೆ ಉರುಳಿಸು
ನನ್ನ ಆ ವಸ್ತುಗಳ ಮರಳಿಸು

ಒಂದೇ ಕೊಡೆಯಲ್ಲಿ ಅರೆ- ಬರೆ ನೆನೆಯುತ್ತಿದ್ದೆವು
ಅರೆ ಒಣಗಿ ,ಅರೆತೊಯ್ದು
ಒಣಗಿದ್ದನ್ನು ನಾನು ತಂದಿದ್ದೆ
ಹಸಿ ಮನಸ್ಸಿನ್ನೂ ಬಹುಶಃ ಹಾಸಿಗೆಯ ಪಕ್ಕದಲ್ಲೇ ಬಿದ್ದಿರಬಹುದು
ಅದ ಕಳುಹಿಸು ,ನನ್ನ ಆ ವಸ್ತುಗಳ ಮರಳಿಸು

ನೂರಹದಿನಾರು ಹುಣ್ಣಿಮೆ ರಾತ್ರಿಗಳು
ನಿನ್ನ ಆ ಒಂದು ಹೆಗಲ ಮಚ್ಚೆ
ಹಸಿ ಮದರಂಗಿಯ ಸುಗಂಧ
ಸುಳ್ಳು – ಸುಳ್ಳೇ ಆರೋಪ
ಸುಳ್ಳು – ಸುಳ್ಳಿನ ಆಣೆ
ಅದೆಲ್ಲವನು ನೆನಪಿಸುವೆ
ಅವನ್ನೆಲ್ಲ ಕಳುಹಿಸು
ನನ್ನ ಆ ವಸ್ತುಗಳ ಮರಳಿಸು

ಒಂದು ಅನುಮತಿ ನೀಡು ಸಾಕು
ಇದನ್ನೆಲ್ಲ ಮಣ್ಣುಮಾಡುವಾಗ
ನಾನು ಅಲ್ಲೇ ಮಲಗಿಬಿಡುವೆ .

 

1 Response

  1. ಕೈದಾಳ್ ಕೃಷ್ಣಮೂರ್ತಿ says:

    ನೆನಪುಗಳ ಮಣ್ಣಾಗಿಸುವುದೆಂದರೆ ನಾವು ಮಣ್ಣಾದಂತೆ ಎಂಬ ಅಭಿಪ್ರಾಯ ಹೊಮ್ಮುವ ಕಡೇಸಾಲುಗಳು ಸಶಕ್ತವಾಗಿವೆ.

Leave a Reply

%d bloggers like this: