ಬೂಬಮ್ಮನೂ.. ವಲಯ ಅರಣ್ಯಾಧಿಕಾರಿಗಳ ಕಛೇರಿಯೂ

ರೇಣುಕಾ ರಮಾನಂದ 

ವಲಯ ಅರಣ್ಯಾಧಿಕಾರಿಗಳ ಕಛೇರಿಯ
ಮೊದಲ ಮೆಟ್ಟಿಲ ಮೇಲೆ ನಿಂತರೆ
ನಿಮಗೆ ವಿಶಾಲ
ಟಿಂಬರ್ ಯಾರ್ಡ ಕಂಡುಬರುತ್ತದೆ
ಎಲ್ಲ ಮೆಟ್ಟಿಲುಗಳನ್ನಿಳಿದು ಹಾಗೇ
ಕೊಂಚ ದೂರದವರೆಗೂ ಯಾವ
ಯಾವ ಜಾತಿಯ ಕಟ್ಟಿಗೆಗಳಿವೆ ಎಂಬ ನೆಪದಲ್ಲಿ
ಕೈ ಕಾಲಾಡಿಸುತ್ತ ನಡೆದಿರಾದರೆ
ಅದೋ ಅಲ್ಲಿ ಬೇಲಿಯಂಚಿಗೆ
ಒಂದು ನಾಯಿಯೋ.. ಹಂದಿಯೋ..
ಸರಿದಾಡಿದಂತೆನಿಸಿ ದೃಷ್ಟಿ ನಿಲ್ಲಿಸಿದಿರಾದಿರೆ
ನೀವು ಬಂದ ಕಾರಣಕ್ಕಾಗಿ
ಹೆದರಿಕೊಂಡು ನಿಂತ
ಕೆದರಿದ ತಲೆಯ ಮಾಸಲು ಸೀರೆಯ
ಬೂಬಮ್ಮ ನಿಮಗೆ ಕಾಣಸಿಗುತ್ತಾಳೆ

ಕೆಲಸ ಬಿಟ್ಟು ಮನೆಗೆ ಹೋಗುವಾಗ
ರವಿಕೆ ಬಿಡಿಸಿ,ಸೀರೆ ಕೊಡವಿ ಒಳಗೇನೂ
ಬಚ್ಚಿಟ್ಟುಕೊಂಡಿಲ್ಲ ಎಂದು ತೋರಿಸಿಯೇ
ಹೋಗಬೇಕು ಎಂಬ ಷರತ್ತಿಗೆ ಒಳಪಟ್ಟು
ಬೂಬಮ್ಮ ಸುತ್ತಮುತ್ತಲಿನ ಹೊಲದ
ಗುಳ್ಳಬದನೆ ಬಿಡಿಸಲು
ಒಣಮೆಣಸು ಹರಿಯಲು
ಸೇಂಗಾ ಕೊಯ್ಯಲು ಹೋಗುತ್ತಾಳೆ
ಸಂಜೆ
ಇದೇ ಹಾದಿಯಲ್ಲಿ ಮನೆಗೆ
ಮರಳುವಾಗ ಒಂದು ತೆಕ್ಕೆ
ಮರದ ತೊಗಟೆಗಾಗಿ
ಟಿಂಬರ್‌ಯಾರ್ಡಿನ ಒಳಬರುತ್ತಾಳೆ

ಎಲ್ಲಿಂದಲೋ ಬಂದವರು
ಹೊಸ ಅಧಿಕಾರಿಗಳು
ಅವಳಿಗೆ ಹೆಚ್ಚು ಭಯ ತರಿಸುತ್ತಾರೆ
ಹಾಗಾಗಿ
ಏನಾದರೂ ಅನ್ನುವ ಮೊದಲೇ
ತಪ್ಪಾಯಿತು ಸಾರ್ ಇನ್ನು ಬರುವುದಿಲ್ಲ
ಕತ್ತಿ ಕಸಿಯಬೇಡಿ ಸಾರ್
ಇರೋದು ಇದೊಂದೇ ಕತ್ತಿ
ಹಿಡಿಕೆ ಕೂಡ ಇಲ್ಲ ಇದಕ್ಕೆ
ನಿಮಗೆ ಎಂಥಕ್ಕೂ ಬರೂದಿಲ್ಲ
ಇದು ನನ್ನ ಹೊಟ್ಟೆ ಪಾಡು
ಎಂದು ಬಡಬಡಿಸುತ್ತಾಳೆ

ಸಮಯ ಸಂದರ್ಭ
ನೋಡಿ ಈಗಾಗಲೇ ಅರಿವಾಗಿರಬೇಕು ನಿಮಗೆ
ದಿಮ್ಮಿಗಳನ್ನಂತೂ ಹೊತ್ತೊಯ್ಯಲು
ಸಾಧ್ಯವಿಲ್ಲ ಅವಳಿಗೆ
ಅಂದಿನ ಒಲೆ ಉರಿಗಾಗಿ ಬೂಬಮ್ಮ ಅವುಗಳ
ತೊಗಟೆ ಏಳಿಸಿ ಒಯ್ಯಲು
ಬಂದಿದ್ದಾಳೆ..
ದಿನವೂ ಹೀಗೆ ಬರುತ್ತಾಳೆ
ಒಂದೇ ಒಂದು ಬಾಚು ಚಕ್ಕೆ ಒಯ್ಯುತ್ತಾಳೆ

ಒರಲೆ ಹತ್ತಿ
ದಿಮ್ಮಿಗಳು ಹಾಳಾಗದಿರಲೆಂದು
ತೊಗಟೆಯನ್ನು ಕಿತ್ತು ಎಸೆಯಲು
ಪಾಸಾಗಿದೆ ಠರಾವು ಅರಣ್ಯ ಇಲಾಖೆಯಲ್ಲಿ…
ತಿಂಗಳಿಗೆ ನೂರು ಆಳು
ಲೆಕ್ಕದಲ್ಲಿ ಹಣ ಖರ್ಚಾಗುತ್ತಿದೆ
ಪ್ರತಿತಿಂಗಳೂ ರಿಜಿಸ್ಟರ್‌ನಲ್ಲಿ
ಬೂಬಮ್ಮನಿಗೆ ಇವೆಲ್ಲ ಗೊತ್ತಿಲ್ಲ
ಗೊತ್ತಿದ್ದರೂ ಅಂತಹ
ಬದಲಾವಣೆಯೇನಿರುವುದಿಲ್ಲ..

ನಾಟಕ ಸಾರ್
ತುಂಬ ದುಡ್ಡು ಇದ್ದಿರಬಹುದು ಅವಳ ಹತ್ತಿರ
ಗಂಡ ಸತ್ತರೂ ನಾಲ್ಕು ಗಂಡುಮಕ್ಕಳಿಗೆ
ವಿದ್ಯೆ ಕಲಿಸಿ ಈಗ ಅವರೆಲ್ಲ ಚೆನ್ನಾಗಿ
ಸೆಟಲ್ ಆಗಿದ್ದಾರೆ ಮಹಾನಗರಗಳಲ್ಲಿ
ಇವಳಿಗೇನೂ ಕೊಡದೇ ಇರುತ್ತಾರಾ
ನಂಬಬೇಡಿ ಏನು ಹೇಳಿದರೂ…
ಹೊಸ ಅಧಿಕಾರಿಯನ್ನು
ಬೂಬಮ್ಮಳಿಂದ ದೂರವೇ ಇಡಲು
ನೋಡುತ್ತಿದ್ದಾನೆ ವನಪಾಲಕ
ಹಿಂದಿನಿಂದಲೂ ಅವಳಿಂದ
ಐದೋ ಹತ್ತೋ ಇಸಿದುಕೊಳ್ಳುವ
ರೂಢಿ ಅವನಿಗೆ
ಇಲ್ಲಿ ನಾಟಕ ಯಾರದ್ದೆಂದು
ತಿಳಿಯದವನೇನೂ ಅಲ್ಲ ಅವನು
ಮತ್ತು ಅವನ ನಾಟಕವನ್ನು
ನೀವು

ಎಲ್ಲ ಗೊತ್ತಿದ್ದೂ ಬಾಯಿಮುಚ್ಚಿಕೊಂಡು
ಸುಮ್ಮನಿದ್ದೋ..ಅವಳಿಗೆ ಬಯ್ದಂತೆ ಮಾಡಿಯೋ
ಹೊರಳಿಬರುವ ನಿಮಗೆ
ಇರುವ ಸತ್ಯ ಚುಚ್ಚಿದರೆ
ರಾತ್ರಿ ನಿದ್ದೆ ಬರಲಿಕ್ಕಿಲ್ಲ
ನೀವು ಕರುಂಬುವುದಿಲ್ಲವೆಂದರೆ ಒಂದು
ಮಾತು ಹೇಳುತ್ತೇನೆ
ಏನೂ ಗೊತ್ತಿಲ್ಲದ ಬೂಬಮ್ಮನಿಗೆ
ಎಲ್ಲ ರಾತ್ರಿಗಳಲ್ಲೂ
ಗಡದ್ದಾದ ನಿದ್ರೆ…

4 Responses

  1. ಕೈದಾಳ್ ಕೃಷ್ಣಮೂರ್ತಿ says:

    ಬೆವರಿನಲ್ಲಿ ಒಂದಾಗಿ ಕಾಲ ಎಳೆದುಕೊಂಡು ಹೋದಂತೆ ಜೀವ ಸವೆಸುವ ಎಷ್ಟೋ ಕೂಲಿಗಳ ಆತ್ಮಸುಖವನ್ನು ನಿಮ್ಮ ಕವಿತೆ ಧ್ವನಿಸುತ್ತಿದೆ ಮೇಡಮ್

  2. ಹೃದ್ಯವಾಗಿದೆ. ಬೂಬಮ್ಮನನ್ನು ಕಣ್ಣಾರೆ ಕಂಡಂತಾಯ್ತು.

  3. Lalitha siddabasavayya says:

    ಇಂತಹ ಬೂಬಮ್ಮಗಳಿಗೆ ಸದಾ ಚೆನ್ನಾದ ನಿದ್ರೆ ರೇಣುಕಾ ,,,,,,ಏನೂ ಗೊತ್ತಿಲ್ಲದಿರುವುದು ಒಂದು ವರ

  4. Vinod Kumar V K says:

    Vaastavakke teeera hattiradallide madam… thumba istavayithu…. jotege besara kuuda..

Leave a Reply

%d bloggers like this: