ಜಿ ಪಿ ಬಸವರಾಜು ಅವರ ಲೇಟೆಸ್ಟ್ ಕವಿತೆಗಳು

 

ಜಿ.ಪಿ.ಬಸವರಾಜು 

ಬುದ್ಧ ಬಂದ

ಬುದ್ಧನ ಬರವಿಗಾಗಿ ಕಾದು ಕುಳಿತಿದ್ದರು
ಅವರು, ಮೂರು ಹಗಲು ಮೂರು ರಾತ್ರಿ
ಅರಳಿ ಮರದ ಕೆಳಗೆ ಊರಿಗೆ ಊರೇ ನೆರೆದು

ಕೊನೆಯ ಹಗಲು ಕರಗಿ ಇಳಿದಿತ್ತು ಸಂಜೆ
ಬಣ್ಣಬಣ್ಣಗಳಲ್ಲಿ ಅವರ ಕಣ್ಣುಗಳಲ್ಲಿ; ಬುದ್ಧ
ಬರಬಹುದೆಂದು ಕಾದ ಮೈಗಳ ನೇವರಿಸುತ್ತ
ಸುಳಿದ ಸಂಜೆ ಗಾಳಿಯ ತಂಪನ್ನವರೆಂದೂ
ಕಂಡಿರಲಿಲ್ಲ ಹಾಗೆ; ಕೊಂಬೆ ಕೊಂಬೆ ತೂಗಿ
ಎಲೆ ಎಲೆಗಳು ರೆಪ್ಪೆ ಬಡಿದು, ಬಿಡುಗಣ್ಣು
ಬಿಟ್ಟು ನೋಡಿದರು ಅವರು: ಬಾನಲ್ಲಿ ನಡೆದ
ಬಣ್ಣಗಳ ಮೆರವಣಿಗೆ, ಮರುಳಾದರವರು ಅದಕೆ

ಎಲೆಗೊಂದರಂತೆ ಬಂದು ಕುಳಿತವು ಹಕ್ಕಿ
ಎಲ್ಲೆಲ್ಲು ಹೊಮ್ಮಿ ಹಬ್ಬಿತು ಹೊಸ ಹಾಡು
ಆ ಹಾಡು ಕೇಳಿರಲಿಲ್ಲ ಅವರೆಂದೂ, ಬಾನಿಂದ
ಕತ್ತಲಿಳಿಯಿತು ಬುವಿಗೆ ತೆಳು ಪರದೆ ಹರವಿ
ಹೊದ್ದುಕೊಂಡರವರು ಅದನು ಹಿತವಾಗಿ

ಮಾತು ಮರೆಯಾಗಿ ಮೌನ ತೆರೆತೆರೆಯಾಗಿ
ತಬ್ಬಿಕೊಂಡಿತು ಎಲ್ಲವನು, ನೋಡಿದರವರು
ಅಕ್ಕಪಕ್ಕ ಬಿಟ್ಟುಕೊಟ್ಟು ಬಿಗುಮಾನಗಳನು:
ಉಸಿರಾಟ, ಎದೆಬಡಿತ, ಚಿಂತೆಯ ಗೆರೆ
ನೋವಿನ ಬರೆ, ಕಂಡು ಕೇಳಿ ಬೆರಗಾದರು
ತಮ್ಮನು ತಾವೇ ಕಂಡುಕೊಂಡುರವರು

ತೆರೆದವೆದೆಗಳು, ಅರಳಿದವು ಘಮಘಮ
ಹೂವು, ರೆಕ್ಕೆಬಿಚ್ಚಿ ಹಾರಿದವು ಹಕ್ಕಿ
ತೆರೆದ ಬಾನಿಗೆ, ಶುಭ್ರ ನೀಲಿಗೆ; ಉಕ್ಕುಕ್ಕಿ
ಹರಿಯಿತು ಒಳಜಲ, ತುಂಬಿತು ಅಂತರಂಗ

ಬುದ್ಧ ಬಂದ ಒಬ್ಬೊಬ್ಬರಲ್ಲೂ ತಾನೇ
ತಾನಾಗಿ, ಅರಿವಿನ ನಡು ಬಿಂದುವಾಗಿ

 ಬುದ್ಧಗುರು ಹೇಳಿದ್ದು

ಯಜ್ಞಕುಂಡದ ಅಗ್ನಿ
ಧಗಧಗಿಸುವುದ ಕಂಡ
ಬುದ್ಧಗುರು ನುಡಿದ ತಣ್ಣಗೆ:

ಇದು ಹೊರಬೆಂಕಿ, ಉರಿಯುವುದು
ಸಮಿತ್ತು ಇರುವವರೆಗೆ, ಮತ್ತೆ
ಆರುವುದು ಉಳಿಸಿ ಕೆಂಡ
ಕೊನೆಯಲ್ಲಿ ಬೂದಿ ಮಾತ್ರ

ನೆನಪಿಡಿ: ನಿಮ್ಮೊಳಗೆ ಒಂದಲ್ಲ
ಹತ್ತಾರು ಅಗ್ನಿ ಉರಿಯುತ್ತಿವೆ
ನಿರಂತರ: ಕಾಮಾಗ್ನಿ, ದ್ವೇಷಾಗ್ನಿ
ಆಸೆ ಅಸೂಯೆ ಮದ ಮತ್ಸರ
ಹೊರಮೈ ಇಲ್ಲ ಅದಕೆ, ಸುಡುವುದು
ಒಳಗೊಳಗೆ ಇಡಿಯಾಗಿ ನಿಮ್ಮನ್ನು

ನಿಮ್ಮೊಡಲೂ ಸುಡುಸುಡು ಕಡಲು
ಅಲ್ಲೇ ತೇಲಬೇಕು ದೋಣಿ, ಅಲೆ
ಅಪ್ಪಳಿಸಿ, ಕಡಲೆದ್ದು ಕುಣಿಯುವುದು
ದಿಕ್ಕೆಟ್ಟು ಗಾಳಿ ಅಬ್ಬರಿಸುವುದು
ಕಲಕದಿರಲಿ ನಿಮ್ಮ ಚಿತ್ತ ಎಂಥ
ಹೊತ್ತಲ್ಲೂ ಮೊಗಚದಿರಲಿ ದೋಣಿ

ದೂರವೋ ಹತ್ತಿರವೋ
ದಾರಿ ಸಾಗಬೇಕು
ಬಿಸಿಲೋ ಬಿರುಮಳೆಯೋ
ಪಾರುಗಾಣಬೇಕು


 ಬುದ್ಧನ ಗಂಟು

ಗಂಟು ಕಟ್ಟಿದರೆ
ಕದಿಯುತ್ತಾರೆ
ಗಂಟು ಕಳ್ಳರು

ಬುದ್ಧ ಕಟ್ಟಲಿಲ್ಲ
ಯಾವ ಗಂಟನ್ನೂ
ಒಂದು ಹೊತ್ತಿನ ಊಟ
ಅದನ್ನೂ ಕಟ್ಟಲಿಲ್ಲ

ಹಸಿದಾಗ ಉಂಡವರ
ಮನೆಯ
ಬಾಗಿಲಲ್ಲಿ ನಿಂತ

ಕೊಟ್ಟರಷ್ಟೇ ಹಿಟ್ಟು
ಇಲ್ಲವಾದರೆ
ಖಾಲಿ ಹೊಟ್ಟೆ

ಹೊಟ್ಟೆಯನ್ನು ಕಟ್ಟಬಾರದು
ಹಲವು ಆಸೆಗಳ ಕಟ್ಟಿ
ಗಂಟು ದೊಡ್ಡದು ಮಾಡಬಾರದು

ಇದೇ ದಾರಿಯಲ್ಲಿ
ನಡೆದ ಬುದ್ಧ
ದಾರಿಗಳ್ಳರೂ ತಡೆಯಲಿಲ್ಲ

ಅವನ ಗಂಟು ತಲೆಯಲ್ಲಿ
ಅವನ ಮಾತು ಎದೆಯಲ್ಲಿ
ಹಂಚಿದನವನು ಎಲ್ಲ ಲೋಕಕ್ಕೆ

ತುಂಬಿ

ನನ್ನ ಬಟ್ಟಲು ಖಾಲಿ ಖಾಲಿ
‘ತುಂಬು ಬಟ್ಟಲನು’

ಬಟ್ಟಲು ಹಿಡಿದೇ ಹುಟ್ಟಿದರೂ
ಯಾರೂ ತುಂಬಲಿಲ್ಲ ಅದನು
ಕಣ್ಣೆತ್ತಿಯೂ ನೋಡಲಿಲ್ಲ ಯಾರೂ
ಖಾಲಿ ಬಟ್ಟಲ ಕಂದ ನಾನು

ಅತ್ತರೆ ಹನಿ
ಹನಿಗೆಲ್ಲ ತುಂಬುವುದೆ ಬಟ್ಟಲು
ಖಾಲಿ ಬಟ್ಟಲ ಹಿಡಿದು ಅಲೆದೆ
ಬೀದಿ ಬೀದಿ ಊರೂರು

2
‘ತುಂಬು ಬಟ್ಟಲನು’
ನೀನು ಬಂದಿರುವೆ ಮದ್ಯ
ಪಾತ್ರೆಯನು ಹಿಡಿದು
ನೋಡು ನನ್ನನ್ನು
ನನ್ನ ಖಾಲಿ ಬಟ್ಟಲನ್ನು
ಮಧು ಪಾತ್ರೆಯಲ್ಲಿ
ಉಕ್ಕಲಿ ಪ್ರೀತಿ
ತುಂಬಿ ತುಂಬಿ

3
ಈ ಪಾಠ ಇಂದು ನಿನ್ನೆಯದಲ್ಲ
ಕಾಲ ಕಾಲಾಂತರದ್ದು:
ತುಂಬಿದವರು ಹೇಳುತ್ತಾರೆ-
‘ಇಟ್ಟುಕೊ ನಿನ್ನ ಬಟ್ಟಲನ್ನು ಖಾಲಿ.’

ಇದೆಯಲ್ಲ ನನ್ನ ಬಟ್ಟಲು ಖಾಲಿ
ಕಾಲಾಂತರದಿಂದಲೂ

ಕಾದು ಕುಳಿತಿದ್ದೇನೆ
ತುಂಬಿ ಬರಲೆಂದು
ತುಂಬಿ ತುಂಬಿ

ಅದಲು ಬದಲು

ಮಗೂ ಚೆಲ್ಲಬಾರದು ಅನ್ನ
ಹಸಿದ ಹೊಟ್ಟೆಗಳಿಗೆ
ಅದು ಚಿನ್ನ
ನೀಟಾಗಿ ತಿನ್ನು
ಕೈ ಬಾಯಿ ತೊಳೆಸುತ್ತೇನೆ
ಬಾ ಹೀಗೆ-ಒಂದೊಂದೆ ಹೆಜ್ಜೆ

ಮಗಳಿಗೆ ಹೇಳಿದ್ದರು
ಬಾಲ್ಯದಲ್ಲಿ; ಮಗಳು
ಕಲಿತಿದ್ದ ಕಂಡು ಸುಖಿಸಿದ್ದರು
ಜೀವನ ಸಾರ್ಥಕವದಂತೆ ಉಬ್ಬಿದ್ದರು

2
ತುತ್ತನ್ನು ಹತ್ತು ಮಾಡಿ
ಬಾಯಿ ತೆರೆಯಲು ಹೇಳಿ
ಹಗುರಾಗಿ ತಿನ್ನಿಸುತ್ತಾಳೆ ಮಗಳು
ಜಗಿಯಲಾರದು ಹಣ್ಣಾದ ಜೀವ
ನುಂಗುವುದನ್ನೂ ಹೇಳಬೇಕು ಮಗಳು

ಅವರ ಮಗುಮಾಡಿ
ರಮಿಸಿ ತನ್ನಿಸುತ್ತಾಳೆ
ತಂದೆ ತಿಂದರೆ ಹಿಗ್ಗುತ್ತಾಳೆ
ತಾನೆ ತಿಂದಂತೆ
ತುತ್ತು ತುತ್ತಿಗೂ

3
ನುಡಿಯಲಾಗದು ಮಾತಿನಲ್ಲ್ಲಿ
ಉಕ್ಕುವ ಭಾವಗಳು ಎದೆಯಲ್ಲಿ
ಮತ್ತೆ ಬೆಳಗುವವು ಕಣ್ಣಲ್ಲಿ
ಇಬ್ಬರಿಗೂ ಗೊತ್ತು: ಭಾವ-ಭಾಷೆ;

ಅದಲು-ಬದಲು
ಕಂಚೀ ಕದಲು

8 Responses

 1. kvtirumalesh says:

  ಚೆನ್ನಾಗಿವೆ ಬುದ್ಧನ ಪದ್ಯಗಳು!
  ಕೆ.ವಿ. ತಿರುಮಲೇಶ್

 2. Anasuya M R says:

  ಅದಲು ಬದಲು ಉತ್ತಮ ಕವನ

 3. Anasuya M R says:

  ಬುದ್ಧನ ಕವಿತೆಗಳು ಒಂದಕ್ಕಿಂತ ಒಂದು ಮಿಗಿಲಾಗಿವೆ

 4. Nasrin says:

  Super sir……

 5. Basavaraju G P says:

  Thank you very much.

 6. Ramesh says:

  ಬುದ್ಧ ಎನ್ನುವುದೇ ಒಂದು ಸಂವೇದನೆ ಮತ್ತು ಭಾಷೆ.ಅದು ಹಿಂದೆಂದಿಗಿಂತಲು ಇಂದು ತುಂಬ ಅನಿವಾರ್ಯ. ಇವೊತ್ತಿನ ಬದುಕನ್ನು ಅದರ ಮೂಲಕ ನೋಡಿರುವುದು ತುಂಬ ಸೂಕ್ಷ್ಮವಾಗಿ ಮೂಡಿಬಂದಿದೆ.
  ಎಚ್ ಆರ್ ರಮೇಶ ಕವಿತೆ

 7. Dr. Shridhar Hegde Bhadran says:

  ಸರ್ ನಮಸ್ತೆ.
  ಕವಿತೆಗಳು ತುಂಬಾ ಚೆನ್ನಾಗಿವೆ. ನಾನು ಮತ್ತು ನನ್ನ ಮಗ್ಲು ಒಟ್ಟಿಗೆ ಕೂತು ಓದುತ್ತಿದ್ದೆವು. ಅದಲು ಬದಲು ಕಚಿಂ ಕದಲು ಕವಿತೆಯನ್ನು ನನ್ನ ಮಗಳು ತುಂಬಾ ಇಷ್ಟಪಟ್ಟಳು. Thank you sir.
  ~ಶ್ರೀಧರ ಹೆಗಡೆ ಭದ್ರನ್, ಧಾರವಾಡ.

Leave a Reply

%d bloggers like this: