ಝುಂಬಾ ತಾಳಕ್ಕೆ ಮೈಮರೆಯುತ್ತಾ…

”ಝುಂಬಾ ತಾಳಕ್ಕೆ ಮೈಮರೆಯುತ್ತಾ…”

ನೀವು ಚಿತ್ರಪ್ರೇಮಿಗಳಾಗಿದ್ದಲ್ಲಿ ‘Notting Hill’ ಎಂಬ ಚಿತ್ರದ ಬಗ್ಗೆ ಕೇಳಿರಬಹುದು.

ಹಾಲಿವುಡ್ ಖ್ಯಾತನಾಮರಾದ ಜೂಲಿಯಾ ರಾಬಟ್ರ್ಸ್ ಮತ್ತು ಹ್ಯೂ ಗ್ರಾಂಟ್ ಮುಖ್ಯಭೂಮಿಕೆಯಲ್ಲಿರುವ ಮುದ್ದಾದ ರೊಮ್ಯಾಂಟಿಕ್ ಕಾಮಿಡಿ ಚಿತ್ರವಿದು. ಬಾಫ್ತಾ ಅವಾರ್ಡ್ ಸೇರಿದಂತೆ ಹಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡ ಈ ಚಿತ್ರಕಥೆಯನ್ನು ಬರೆದವರು ಮತ್ತೋರ್ವ ಖ್ಯಾತನಾಮರಾದ ರಿಚರ್ಡ್ ಕರ್ಟಿಸ್. ಅತ್ಯಂತ ಪ್ರಖ್ಯಾತ ವ್ಯಕ್ತಿಯೊಬ್ಬ ಸಾಮಾನ್ಯನೊಬ್ಬನ ಜೀವನದೊಳಕ್ಕೆ ಹಾಗೆ ಸುಮ್ಮನೆ ನಡೆದುಕೊಂಡು ಬಂದರೆ ಏನೆಲ್ಲಾ ಆಗಬಹುದು ಎಂಬುದನ್ನೇ ಪ್ರೇಮಕಥೆಯ ಧಾಟಿಯಲ್ಲಿ ಮುದ್ದಾಗಿ ಕಟ್ಟಿಕೊಡುತ್ತಾರೆ ಕರ್ಟಿಸ್.

ಅಂದಹಾಗೆ ಈ ಐಡಿಯಾ ಅವರಿಗೆ ಅಚಾನಕ್ಕಾಗಿ ಹೊಳೆದಿದ್ದಂತೆ. ”ಕೆಲವೊಮ್ಮೆ ನಾನು ಯೋಚಿಸುತ್ತಿರುತ್ತೇನೆ. ನಾನು ವಾರಕ್ಕೊಮ್ಮೆ ಅಥವಾ ಸಾಮಾನ್ಯವಾಗಿ ಯಾವಾಗಲೂ ಭೇಟಿ ನೀಡುವ ಗೆಳೆಯರೊಬ್ಬರ ಮನೆಗೆ ಎಂದಿನಂತೆ ಡಿನ್ನರ್ ಗೆಂದು ಹೋದಾಗ ವಿಶ್ವದ ಅತೀ ಪ್ರಖ್ಯಾತ ವ್ಯಕ್ತಿಯೊಬ್ಬರೂ ಕೂಡ ಅಲ್ಲೇ ಊಟಕ್ಕೆ ಕುಳಿತಿದ್ದರೆ ನನ್ನ ತಕ್ಷಣದ ಪ್ರತಿಕ್ರಿಯೆ ಏನಾಗಿರಬಹುದು? ಮಡೋನಾ ಅಥವಾ ಅವರಷ್ಟೇ ವಿಶ್ವವಿಖ್ಯಾತ ವ್ಯಕ್ತಿಯೊಬ್ಬನನ್ನು ಹೀಗೆ ಸಾಮಾನ್ಯನಂತೆ ನಮ್ಮೊಂದಿಗೆ ಡಿನ್ನರ್ ಟೇಬಲ್ ಎದುರು ಕುಳಿತುಕೊಂಡಿರುವುದನ್ನು ಕಂಡು ಅಚ್ಚರಿಯಿಂದ ನನಗೆ ಮಾತು ಹೊರಡಬಹುದೇ? ಅಲ್ಲಿರುವ ನನ್ನ ಆ ಗೆಳೆಯರು ಆ ವೇಳೆಯಲ್ಲಿ ಹೇಗೆ ಪ್ರತಿಕ್ರಯಿಸಬಹುದು? ಎಲ್ಲಾ ಸರಿಯಾಗಿದೆ ಎಂದು ಏನೂ ಆಗಿಲ್ಲವೆಂಬಂತೆ ಊಟ ಮಾಡಲು ಅಂದು ಸಾಧ್ಯವಾಗಬಹುದೇ? ಇಂಥದ್ದೊಂದು ಯೋಚನಾಲಹರಿಯಲ್ಲೇ ‘Notting Hill’ ಹುಟ್ಟಿಕೊಂಡಿತು”, ಅನ್ನುತ್ತಾರೆ ಕರ್ಟಿಸ್.

ವಿಕ್ಟರ್ ಮ್ಯಾಕ್ಸಿಮುಸ್ ಎಂಬ ಸ್ಫುರದ್ರೂಪಿ ತರುಣನೊಬ್ಬನನ್ನು ಲುವಾಂಡಾದಲ್ಲಿ ಭೇಟಿಯಾಗಿದ್ದ ನನಗೆ ಒಂದೆರಡು ದಿನಗಳ ನಂತರ ಇಂಥದ್ದೇ ಅನುಭವವಾಗಿ ನನ್ನನ್ನು ಅಚ್ಚರಿಯಲ್ಲಿ ದೂಡಿತ್ತು. ಅಂದು ಭಾರತದಿಂದ ನಮ್ಮಲ್ಲಿಗೆ ಬಂದಿದ್ದ ಹಿರಿಯ ಸಹೋದ್ಯೋಗಿಯೊಬ್ಬರ ಜೊತೆ ಕುಳಿತುಕೊಂಡು ನಾನು ವೈನ್ ಸವಿಯುತ್ತಿದ್ದೆ. ಇನ್ನೇನು ಸ್ವಲ್ಪ ಹೊತ್ತಿನಲ್ಲಿ ರಾತ್ರಿಯ ಭೋಜನವು ತಯಾರಾಗಿ ಬರಲಿತ್ತು. ರಾಜಧಾನಿಯಾದ ಲುವಾಂಡಾ ಮಹಾನಗರಿಯು ಮೊದಲಿನಿಂದಲೂ ಮನರಂಜನೆಯ ಮತ್ತು ಹೊಸ ಹೊಸ ಪರಿಚಯಗಳನ್ನು ಮಾಡಿಕೊಳ್ಳುವ ನಿಟ್ಟಿನಲ್ಲಿ ನನ್ನ ಮಟ್ಟಿಗೆ ಅಂಗೋಲಾದ ಮುಖ್ಯ ತಾಣಗಳಲ್ಲೊಂದಾಗಿ ಪರಿಣಮಿಸಿದೆ. ಈ ಹಿಂದೆ ಅಂಡಮಾನಿನ ಪೋರ್ಟ್‍ಬ್ಲೇರ್ ನಲ್ಲಿ ಒಂದೆರಡು ತಿಂಗಳುಗಳ ಕಾಲ ತಂಗಿದ್ದ ದಿನಗಳಲ್ಲೂ ಕೂಡ ನನ್ನ ‘socialising’ ಅನುಭವಗಳು ಹೇರಳವಾಗಿದ್ದವು. ಆದರೆ ಅಂಡಮಾನ್ ಸಾಗರತೀರಕ್ಕೆ ಬರುತ್ತಿದ್ದ ಭಾರತೀಯ ಪ್ರವಾಸಿಗರಲ್ಲಿ ಹೆಚ್ಚಿನವರು ಮಧುಚಂದ್ರಕ್ಕೆಂದು ಬರುತ್ತಿದ್ದ ಜೋಡಿಗಳೇ ಆಗಿದ್ದರಿಂದ ಏಕಾಂಗಿ ಹಿಪ್ಪಿಯಂತಿದ್ದ ನಾನು ಬಿಳಿಯರ ಗುಂಪುಗಳಲ್ಲೇ ಬ್ಯುಸಿಯಾಗಿರುತ್ತಿದ್ದೆ. ಇಂಥಾ ನೆನಪುಗಳನ್ನೆಲ್ಲಾ ಲುವಾಂಡಾ ಆಗಾಗ ತಾಜಾಗೊಳಿಸುತ್ತಿತ್ತು.

ಲುವಾಂಡಾದಲ್ಲಿ ನಾವು ಉಳಿದುಕೊಂಡಿದ್ದ ವಸತಿಗೃಹವು ನಮಗೆ ಹೊಸ ಜಾಗವೇನೂ ಆಗಿರಲಿಲ್ಲ. ಹೀಗಾಗಿ ಸುತ್ತಮುತ್ತಲ ಪರಿಸರದ ಮತ್ತು ಸಿಬ್ಬಂದಿಗಳ ಪರಿಚಯವೂ ನನಗಿತ್ತು. ನನ್ನ ಹರಕುಮುರುಕು ಪೋರ್ಚುಗೀಸ್ ಭಾಷೆಯನ್ನು ಇವರೆಲ್ಲರೂ ನಗುನಗುತ್ತಲೇ ಸವಿಯುತ್ತಿದ್ದವರು. ಆದರೆ ಆ ಸಂಜೆ ಮಾತ್ರ ಚಟುವಟಿಕೆಗಳು ಹೆಚ್ಚೇ ನಡೆಯುತ್ತಿದ್ದಂತೆ ಭಾಸವಾಗುತ್ತಿತ್ತು. ಈಜುಕೊಳಕ್ಕಿಂತ ಒಂದಿಷ್ಟು ದೂರದಲ್ಲೇ ಚಿಕ್ಕದೊಂದು ವೇದಿಕೆಯನ್ನು ಹಾಕಿ ‘ಝುಂಬಾ’ ಎಂಬ ದೊಡ್ಡ ಬ್ಯಾನರ್ ಅನ್ನು ಅಲ್ಲಿ ಕಟ್ಟಿದ್ದರು. ನಿಮಿಷಗಳು ಸರಿದಂತೆಯೇ, ನಾವುಗಳು ನೋಡನೋಡುತ್ತಿರುವಂತೆಯೇ ಸುಮಾರು ನೂರು-ನೂರೈವತ್ತು ಜನರು ಆ ಜಾಗದಲ್ಲಿ ಸೇರಿದರು. ನಂತರ ಧ್ವನಿವರ್ಧಕಗಳ ಅಬ್ಬರಗಳೊಂದಿಗೆ ಕಾರ್ಯಕ್ರಮವು ಶುರುವಾಯಿತು. ತೆರೆದ ಅಂಗಳದಂತಿದ್ದ ಆ ಸುಂದರ ಜಾಗದಲ್ಲಿ ಎಲ್ಲರೂ ಝುಂಬಾ ಕುಣಿಯುವವರೇ. ಇನ್ನು ನಮ್ಮಲ್ಲಿ ಫ್ಲ್ಯಾಷ್ ಮಾಬ್ ಕಾರ್ಯಕ್ರಮಗಳಾದಾಗ ಒಬ್ಬೊಬ್ಬರಾಗಿ ನರ್ತಿಸಲು ಬಂದು ಸೇರುತ್ತಾರಲ್ಲವೇ, ಹೀಗೆ ಮಧ್ಯದಲ್ಲಿ ಬಂದು ಸೇರುವ ಜನರೂ ಬೇರೆ. ಒಟ್ಟಾರೆಯಾಗಿ ಒಂದು ತಾಸಿನ ಯಶಸ್ವಿ ಕಾರ್ಯಕ್ರಮವಾಗಿತ್ತದು.

”ನೀವೇನು ನೋಡುತ್ತಲೇ ಇದ್ದೀರಿ? ಬಂದು ಕೊಂಚ ಮೈಸಡಿಲಿಸುವುದಲ್ಲವೇ?”, ಕಾರ್ಯಕ್ರಮದ ಕೊನೆಯಲ್ಲಿ ಏದುಸಿರು ಬಿಡುತ್ತಾ ನಿಂತಿದ್ದ ತರುಣನೊಬ್ಬ ಇವೆಲ್ಲವನ್ನು ನೋಡುತ್ತಲೇ ಇದ್ದ ನನ್ನನ್ನು ಕೇಳಿದ. ”ಅಯ್ಯೋ… ನನ್ನ ಜೀವಮಾನದಲ್ಲಿ ಒಮ್ಮೆಯೂ ನಾನು ನರ್ತಿಸಿದವನೇ ಅಲ್ಲ”, ಎಂದು ಪೆಚ್ಚಾಗಿ ನುಡಿದೆ ನಾನು. “ಹಾಗಾದರೆ ಮುಂದಿನ ಬಾರಿ ನೀವು ಪ್ರಯತ್ನಿಸಲೇಬೇಕು”, ಎಂದ ಆತ. ನಾನು ಆಯಿತೆಂದು ತಲೆಯಾಡಿಸಿದೆ. ಸುಮಾರು ಒಂದು ತಾಸಿನಿಂದ ನರ್ತಿಸುತ್ತಾ ಬೆವರಿನಿಂದ ತೊಯ್ದುಹೋಗಿದ್ದ ಆತ ಮಾತನ್ನು ಮುಂದುವರಿಸದೆ ತನ್ನ ಒದ್ದೆ ಅಂಗಿಯನ್ನು ಪಕ್ಕಕ್ಕೆಸೆದು ಈಜುಕೊಳಕ್ಕೆ ಹಾರಿದ.

ಉಳಿದವರೂ ಕೂಡ ನೀರು ಕುಡಿಯುವುದರಲ್ಲಿ, ಕುಳಿತು ಕೊಂಚ ಸುಧಾರಿಸಿಕೊಳ್ಳುವಲ್ಲಿ ವ್ಯಸ್ತರಾಗಿದ್ದರು. ಇತ್ತ ನನ್ನ ಸಹೋದ್ಯೋಗಿ ಮಾತ್ರ ಇನ್ನೂ ಚಿತ್ರಗಳನ್ನು ಕ್ಲಿಕ್ಕಿಸುವುದರಲ್ಲೇ ಬ್ಯುಸಿಯಾಗಿದ್ದರು. ”ಆಗಲಿ, ನೀವಾದರೂ ಕೆಲ ಚಿತ್ರಗಳನ್ನು ಸೆರೆಹಿಡಿದಿರಲ್ಲಾ, ನಾನಂತೂ ನೋಡುವುದರಲ್ಲೇ ಮಗ್ನನಾಗಿದ್ದೆ”, ಎಂದೆ ನಾನು. ”ನನ್ನ ಈ ಮೊಬೈಲಿನಲ್ಲಿ ನೂರು ಚಿತ್ರಗಳನ್ನು ಕ್ಲಿಕ್ಕಿಸಿದರೆ ನಾಲ್ಕೈದು ಮಾತ್ರ ನೋಡಲು ಲಾಯಕ್ಕಾಗಿರುತ್ತವೆ. ಹೀಗಾಗಿ ಎಲ್ಲವನ್ನೂ ಆದಷ್ಟು ಕ್ಲಿಕ್ ಮಾಡಿದೆ”, ಎಂದರವರು. ಇದೊಳ್ಳೆ ಕಥೆ ಎನ್ನುತ್ತಾ ನಾವು ಮರೆತಿದ್ದ ಭೋಜನದ ಕಡೆಗೆ ತೆರಳಿ ದಿನವನ್ನು ಮುಗಿಸಿದೆವು.

ಇದಾದ ಹತ್ತು ದಿನಗಳ ನಂತರ ವೀಜ್ ನಿಂದ ಮತ್ತೆ ಲುವಾಂಡಾಗೆ ಬರಬೇಕಿದ್ದ ಸಂದರ್ಭವು ಒದಗಿ ಬಂದಿದ್ದರಿಂದ ಈ ಝುಂಬಾ ನೃತ್ಯತಂಡವನ್ನು ಮತ್ತೊಮ್ಮೆ ನಾವು ಕಂಡೆವು. ಈ ಬಾರಿ ನೆರೆದಿದ್ದ ಜನರ ಸಂಖ್ಯೆಯಲ್ಲಿ ಒಂದಿಷ್ಟು ಇಳಿಕೆಯಾಗಿದ್ದರೂ ಉತ್ಸಾಹಕ್ಕೇನೂ ಕಮ್ಮಿಯಿರಲಿಲ್ಲ. ”ನೀವು ಮೊನ್ನೆ ಬಂದಾಗ ಇಲ್ಲಿ ನಡೆಯುತ್ತಿದ್ದಿದ್ದು ಇವರ ಮೊದಲ ಕಾರ್ಯಕ್ರಮ. ಅಂದಿನಿಂದ ಪ್ರತೀ ಮಂಗಳವಾರ ಮತ್ತು ಗುರುವಾರ ಒಂದೊಂದು ತಾಸಿನ ಕಾರ್ಯಕ್ರಮವನ್ನು ಇಲ್ಲಿ ನೀಡುತ್ತಿದ್ದಾರೆ”, ಎಂದು ಪರಿಚಿತ ಸಿಬ್ಬಂದಿಯೊಬ್ಬ ಹೇಳಿದ.

ನೀವೂ ಹೋಗಿ ಮಾರಾಯ್ರೇ ಎಂಬ ಸಲಹೆಯನ್ನು ಬೇರೆ ಕೊಟ್ಟ. ‘ನಾನು ಕೆಟ್ಟದಾಗಿ ಹೆಜ್ಜೆಹಾಕಿದರೂ ನನ್ನನ್ನಿಲ್ಲಿ ನೋಡೋರ್ಯಾರು. ಮುಂದಿನ ಬಾರಿ ಖಂಡಿತ ಪ್ರಯತ್ನಿಸುತ್ತೇನೆ’, ಎಂದು ಒಳಗೊಳಗೇ ಲೆಕ್ಕಹಾಕಿದೆ. ಆ ರಾತ್ರಿಯ ವಿಶ್ರಾಂತಿಯ ಬಳಿಕ ನನ್ನ ಸಹೋದ್ಯೋಗಿಯು ಮರುದಿನವೇ ಭಾರತಕ್ಕೆ ವಾಪಾಸ್ಸಾದರು. ಅಂತೂ ಆ ಪಯಣವೂ ಕೂಡ ಝುಂಬಾ ನಿಟ್ಟಿನಲ್ಲಿ ಬರಖತ್ತಾಗಲಿಲ್ಲ.

ಆದರೆ ಲುವಾಂಡಾದ ನನ್ನ ಮುಂದಿನ ಪ್ರಯಾಣವು ಮಾತ್ರ ಗುರುವಾರವೇ ಬರುವಂತೆ ನಾನು ನೋಡಿಕೊಂಡಿದ್ದೆ. ಹತ್ತು ನಿಮಿಷವಾದರೂ ಸರಿ, ಒಂದಿಷ್ಟು ಹೆಜ್ಜೆಹಾಕಿ ಬೆವರಿಳಿಸಬೇಕು ಎಂಬ ಯೋಚನೆಯು ನನ್ನದಾಗಿತ್ತು. ಅದ್ಹೇಗೋ ಕಷ್ಟಪಟ್ಟು ಸ್ಪೋಟ್ರ್ಸ್ ಶೂ ಒಂದನ್ನು ಬೇರೆ ತರಿಸಿಕೊಂಡಿದ್ದೆ. ಹೀಗಾಗಿ ಇನ್ನಷ್ಟು ತಡಮಾಡುವ ವಿಚಾರವೇ ಇರಲಿಲ್ಲ. ಕೊನೆಗೂ ಸುಮುಹೂರ್ತವು ಕೂಡಿಬಂದು ಸಂಕೋಚದಿಂದಲೇ ಆ ಜನಜಂಗುಳಿಯಲ್ಲಿ ಹೆಜ್ಜೆ ಹಾಕಿದೆ.

ಸೂರ್ಯಾಸ್ತದ ನಂತರ, ತೆರೆದ ಆವರಣದಲ್ಲಿ, ಪೋರ್ಚುಗೀಸ್ ಮತ್ತು ಸ್ಪ್ಯಾನಿಶ್ ಹಾಡುಗಳಿಗೆ ಲ್ಯಾಟಿನ್ ಅಮೆರಿಕನ್ ಶೈಲಿಯಲ್ಲಿ ನರ್ತಿಸುವ ಸಂತಸವೇ ಬೇರೆ. ಅದೂ ಕೂಡ ಗೊತ್ತಿಲ್ಲದ ನಾಡಿನಲ್ಲಿ ಗೊತ್ತಿಲ್ಲದ ಜನರೊಂದಿಗೆ ಗೊತ್ತಿಲ್ಲದ ನೃತ್ಯಶೈಲಿಯನ್ನು ಪ್ರಯತ್ನಿಸುವುದೆಂದರೆ ವಿಶಿಷ್ಟ ಅನುಭವವೇ. ಇತರರಿಗಿಂತ ಬೇಗ ಸುಸ್ತಾಗಿದ್ದನ್ನು ಬಿಟ್ಟರೆ ‘ಪ್ರಥಮಚುಂಬನಂ ದಂತಭಗ್ನಂ’ ಅನ್ನುವಂಥದ್ದೇನೂ ಆಗಲಿಲ್ಲವಾದ್ದರಿಂದ ನಾನು ನಿರಾಳನಾದೆ. ಮುಂದಿನ ಬಾರಿ ಬಂದಾಗ ಮತ್ತೊಮ್ಮೆ ಪ್ರಯತ್ನಿಸಬಹುದು ಎಂಬ ಪುಟ್ಟ ಧೈರ್ಯವು ಮನದಲ್ಲಿ ಕುಣಿದಾಡಿತು.

ಆ ಸಂಜೆಯ ಕಾರ್ಯಕ್ರಮವು ಮುಗಿದ ನಂತರ ನಮ್ಮೆಲ್ಲರಿಗೂ ಝುಂಬಾ ಕಲಿಸುತ್ತಿದ್ದ ಸ್ಫುರದ್ರೂಪಿ ತರುಣನೆಡೆಗೆ ತೆರಳಿ ಪರಿಚಯಿಸಿಕೊಂಡೆ. ”ನಾನು ವಿಕ್ಟರ್ ಮ್ಯಾಕ್ಸಿಮುಸ್”, ಆತ ಕೈಕುಲುಕಿ ತನ್ನನ್ನು ತಾನು ಪರಿಚಯಿಸಿಕೊಂಡ. ಹಾಗೆಯೇ ಮುಂದುವರಿಯುತ್ತಾ ”ಇವರು ಪೌಲಾ ಸಾಂತುಸ್”, ಎನ್ನುತ್ತಾ ಜೊತೆಯಲ್ಲಿದ್ದ ಬಿಳಿಯ ಹೆಂಗಸೊಬ್ಬಳನ್ನೂ ಕೂಡ ಪರಿಚಯಿಸಿದ. ನನಗೆ ತಿಳಿದ ಮಟ್ಟಿಗೆ ವಿಕ್ಟರ್ ಮತ್ತು ಪೌಲಾ ಈ ಝುಂಬಾ ತಂಡದ ಚುಕ್ಕಾಣಿ ಹಿಡಿದಿದ್ದರು. ನನ್ನ, ವಿಕ್ಟರ್ ಮತ್ತು ಪೌಲಾರ ಆರಂಭಿಕ ಮಾತುಗಳು ಇಂಗ್ಲಿಷ್ ಭಾಷೆಯಲ್ಲಿ ನಡೆಯುತ್ತಿದ್ದರಿಂದ ಸುತ್ತ ನೆರೆದಿದ್ದ ಉಳಿದ ಸ್ಪರ್ಧಾಳುಗಳು ಬೇಗಬೇಗನೇ ಅಲ್ಲಿಂದ ಜಾರಿಕೊಂಡರು.

ಇನ್ನು ಕೆಲ ಮಹಿಳಾ ಅಭಿಮಾನಿಗಳು ವಿಕ್ಟರ್ ನನ್ನು ಬಿಡುವ ಮೂಡಿನಲ್ಲಿರುವಂತೆ ಕಾಣದಿದ್ದಾಗ ”ನಿಮಗೆ ಹೋಗಲು ಮನಸ್ಸಿಲ್ಲದಿದ್ದರೆ ಇಲ್ಲೇ ನಮ್ಮ ಜೊತೆ ಕುಳಿತುಕೊಳ್ಳಿ. ನಾನು ಹೆಚ್ಚು ಸಮಯವನ್ನೇನೂ ತೆಗೆದುಕೊಳ್ಳುವುದಿಲ್ಲ”, ಎಂದು ಭರವಸೆಯನ್ನು ಕೊಟ್ಟೆ. ನನ್ನ ಮಾತಿನ ಒಳಾರ್ಥವನ್ನು ಅರ್ಥೈಸಿಕೊಂಡ ಒಂದಿಬ್ಬರು ತರುಣಿಯರು ಗೊಳ್ಳನೆ ನಕ್ಕರು. ನಾನೊಬ್ಬ ಬರಹಗಾರನೆಂದು ತಿಳಿದ ಮೇಲೆ ವಿಕ್ಟರ್ ನ ಉತ್ಸಾಹವು ಇಮ್ಮಡಿಯಾಗಿ ಕುಳಿತು ಮಾತನಾಡಲು ಒಪ್ಪಿಕೊಂಡ. ಹಾಗೆಯೇ ಈ ಸಂಭಾಷಣೆಯು ಬೇಗನೇ ಮುಗಿಯುವಂಥದ್ದಲ್ಲ ಎಂದು ಅರಿವಾದವನಂತೆ ಪೌಲಾರನ್ನು ಉಳಿಸಿಕೊಂಡು ಉಳಿದವರನ್ನು ಕಳಿಸಿಬಿಟ್ಟ. ಸುತ್ತಲೂ ನೆರೆದಿದ್ದ ತರುಣಿಯರು ನಮ್ಮನ್ನು ನೋಡಿ ಕುಲುಕುಲು ನಗುತ್ತಾ ಹೊರಟುಹೋದರು.

ಭೇಟಿಯಾದ ಕ್ಷಣಮಾತ್ರದಲ್ಲೇ ಆಪ್ತನೆಂಬಂತೆ ಮಾತನಾಡಲು ಶುರುಹಚ್ಚಿಕೊಂಡ ವಿಕ್ಟರ್ ತನ್ನ ಬಗ್ಗೆ, ತನ್ನ ತಂಡದ ಬಗ್ಗೆ ಹೇಳುತ್ತಾ ಹೋದ. ಬೆಳ್ಳಿಕೂದಲುಗಳು ಅಲ್ಲಲ್ಲಿ ಇಣುಕುತ್ತಿದ್ದರೂ ಇಪ್ಪತ್ತರ ತರುಣರಲ್ಲಿದ್ದ ಆತನ ಹುಮ್ಮಸ್ಸು ಸಹಜವಾಗಿಯೇ ನನ್ನನ್ನು ಆಕರ್ಷಿಸಿತ್ತು. ಅಂಗೋಲನ್ ನಾಗರಿಕನಾಗಿದ್ದರೂ ತನ್ನ ಜೀವನದ ಬಹುಪಾಲು ವರ್ಷಗಳನ್ನು ತಾನು ಪೋರ್ಚುಗಲ್ ನಲ್ಲೇ ಕಳೆದ ಬಗ್ಗೆ ಆತ ಹೇಳಿದ. ವಿಕ್ಟರ್ ಮತ್ತು ಪೌಲಾ ಅಂಗೋಲಾದಾದ್ಯಂತ ಝುಂಬಾ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಾರೆ ಎಂಬ ಮಾಹಿತಿಗಳು ಆತನಿಂದಲೇ ತಿಳಿದುಬಂದಿತು. ಪೌಲಾ ದೈಹಿಕವಾಗಿ ಅಷ್ಟೇನೂ ಫಿಟ್ ಆಗಿರದಿದ್ದರೂ ಚೆನ್ನಾಗಿ ಲಯಬದ್ಧವಾಗಿ ನರ್ತಿಸುತ್ತಿದ್ದಳು. ಲುವಾಂಡಾದಲ್ಲಿ ಈ ಜಾಗವನ್ನು ಹೊರತುಪಡಿಸಿ ಮೂರು ಪ್ರತ್ಯೇಕವಾದ ಝುಂಬಾ ನೃತ್ಯಶಾಲೆಗಳನ್ನು ಆತ ಖಾಸಗಿಯಾಗಿ ನಡೆಸುತ್ತಿದ್ದು ತನ್ನೊಂದಿಗೆ ಹಲವು ಝುಂಬಾ ತರಬೇತುದಾರರನ್ನು ಇಟ್ಟುಕೊಂಡಿದ್ದ. ಈತನ ಅನುಪಸ್ಥಿತಿಯಲ್ಲಿ ಪೌಲಾ ಇಂಥಾ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದಳು.

”ಅಂಗೋಲಾದಲ್ಲಿರುವ ಹಲವಾರು ಝುಂಬಾ ತಂಡಗಳಲ್ಲಿ ನಮ್ಮದು ಮುಂಚೂಣಿಯಲ್ಲಿ ನಿಲ್ಲುವಂಥದ್ದು”, ಎಂದು ಹೆಮ್ಮೆಯಿಂದ ಹೇಳಿದ ವಿಕ್ಟರ್. ಆಗಾಗ ಸಮುದ್ರತೀರಗಳಂತಹ ಸಾರ್ವಜನಿಕ ಸ್ಥಳಗಳಲ್ಲೂ ಇವರು ಕಾರ್ಯಕ್ರಮಗಳನ್ನು ಆಯೋಜಿಸುತ್ತಾರಂತೆ. ”ಕೆಲವೊಮ್ಮೆ ಇಲ್ಲಿಯ ಟಿ.ವಿ ಚಾನೆಲ್ ಗಳಿಗೂ ಕಾರ್ಯಕ್ರಮಗಳನ್ನು ನೀಡುತ್ತಿರುತ್ತೇನೆ. ಸಾವಿರಾರು ಜನರನ್ನು ಒಂದೇ ಕಡೆ ಸೇರಿಸಿ, ದೊಡ್ಡಮಟ್ಟಿನ ಝುಂಬಾ ನೃತ್ಯ ಕಾರ್ಯಕ್ರಮವನ್ನು ಆಯೋಜಿಸಿ ಗಿನ್ನೆಸ್ ದಾಖಲೆಯನ್ನು ಬರೆಯುವ ಯೋಚನೆಯೂ ತನಗಿದೆ”, ಎಂದ ಆತ.

ವಿಕ್ಟರ್ ಇಂಥಾ ಖಾಸಗಿ ಕಾರ್ಯಕ್ರಮಗಳು ಮತ್ತು ತರಬೇತಿಗಳನ್ನಲ್ಲದೆ ಹಲವು ವಿ.ಐ.ಪಿ. ಗಳಿಗೂ ಖಾಸಗಿಯಾಗಿ ಝುಂಬಾ ತರಬೇತಿಗಳನ್ನು ನೀಡುತ್ತಿದ್ದ. ಹೀಗಾಗಿ ವಿಕ್ಟರ್ ಸ್ವತಃ ಹೇಳುವಂತೆ ಸರಕಾರದ, ಆಡಳಿತದ ಮತ್ತು ಇತರ ಕ್ಷೇತ್ರಗಳಲ್ಲಿನ ಆಯಕಟ್ಟಿನ ಜಾಗದಲ್ಲಿರುವ ಹತ್ತಾರು ವ್ಯಕ್ತಿಗಳೊಂದಿಗೆ ಈತನಿಗೆ ಒಳ್ಳೆಯ ಸಂಬಂಧವಿತ್ತು. ಪರಿಣಾಮವಾಗಿ ಇಂಥದ್ದೊಂದು ಅದ್ದೂರಿ ಕಾರ್ಯಕ್ರಮದ ಆಯೋಜನೆಯು ಆತನಿಗೆ ಕಷ್ಟದ ವಿಷಯವೇನೂ ಆಗಿರಲಿಲ್ಲ.

ಝುಂಬಾ ಬಗೆಗಿನ ತನ್ನ ಅನುಭವಗಳನ್ನೂ ಕೂಡ ಪೌಲಾ ಆಪ್ತವಾಗಿ ನನ್ನೊಂದಿಗೆ ಹಂಚಿಕೊಂಡರು. ”ಪೌಲಾ ಇರದಿದ್ದರೆ ನಾನು ಝುಂಬಾ ಕಡೆ ತಲೆಹಾಕುತ್ತಲೇ ಇರಲಿಲ್ಲ. ಮೊದಲಂತೂ ನಾನು ದಪ್ಪಗಿದ್ದು ವಿಚಿತ್ರವಾಗಿದ್ದೆ. ನಂತರ ಕಿಲೋಗಟ್ಟಲೆ ತೂಕವನ್ನು ಕಳೆದುಕೊಂಡು ಈಗ ಫಿಟ್ ಆಗಿದ್ದೇನೆ. ಈಗಂತೂ ಝುಂಬಾದಿಂದಲೇ ನನ್ನ ಜೀವನ ನಡೆಯುತ್ತಿದೆ”, ಎಂದು ಉತ್ಸಾಹದಿಂದ ಹೇಳಿದ ವಿಕ್ಟರ್. ”ವಾರಕ್ಕೆರಡು ಬಾರಿ ನಾವು ಇಲ್ಲಿರುತ್ತೇವೆ. ನೀವೂ ಕೂಡ ಬಂದು ಭಾಗವಹಿಸಿ”, ಎಂದು ಆತ್ಮೀಯವಾಗಿ ಆಹ್ವಾನಿಸಿದರು ಪೌಲಾ.

”ನಾನು ಲುವಾಂಡಾಗೆ ಬರುವುದು ತಿಂಗಳಿಗೊಮ್ಮೆಯಷ್ಟೇ. ಆದರೆ ಬಂದಾಗಲೆಲ್ಲಾ ಖಂಡಿತ ಭಾಗವಹಿಸುತ್ತೇನೆ”, ಎಂದು ನಾನು ಒಪ್ಪಿಕೊಂಡೆ. ಅಂದಹಾಗೆ ಅಂಗೋಲಾಕ್ಕೆ ಬಂದ ನಂತರ ದೈಹಿಕ ಶ್ರಮದ ಕೆಲಸಗಳು ಏಕಾಏಕಿ ಕಡಿಮೆಯಾದ ಪರಿಣಾಮವಾಗಿ ಝಂಬಾವನ್ನು ಮುಂದುವರಿಸುವ ಬಗ್ಗೆ ನಾನು ಆಗಲೇ ನಿರ್ಧರಿಸಿಯಾಗಿತ್ತು. ವೀಜ್ ನಲ್ಲಿ ಜಿಮ್ ವ್ಯವಸ್ಥೆಯು ಇಲ್ಲದಿದ್ದ ಪರಿಣಾಮವಾಗಿ ಮನರಂಜನೆಯ ಜೊತೆಗೇ ದೈಹಿಕ ಕಸರತ್ತಿನ ನಿಟ್ಟಿನಲ್ಲಿ ಝುಂಬಾ ಒಂದೊಳ್ಳೆಯ ಆಯ್ಕೆಯಾಗುವ ಸಾಧ್ಯತೆಯನ್ನು ನಾನು ಕಂಡುಕೊಂಡಿದ್ದೆ. ಅಂತೂ ಮತ್ತೆ ಭೇಟಿಯಾಗುವ ಭರವಸೆಯೊಂದಿಗೆ ನಮ್ಮ ಅಂದಿನ ಮಾತುಕತೆಯು ಮುಗಿದಿತ್ತು.

ಇದಾದ ಎರಡು ದಿನಗಳ ನಂತರ ದುಭಾಷಿಯ ಬಳಿ ಏನೋ ಮಾತನಾಡುತ್ತಿದ್ದಾಗ ಈ ವಿಷಯವೂ ಕೂಡ ನಮ್ಮ ಮಧ್ಯೆ ಸುಳಿಯಿತು. ”ವಿಕ್ಟರ್ ಮ್ಯಾಕ್ಸಿಮುಸ್ ಒಂದು ರೀತಿಯಲ್ಲಿ ಸೆಲೆಬ್ರಿಟಿಯೇ. ಝುಂಬಾದಲ್ಲಿ ಆತ ಒಳ್ಳೆಯ ಹೆಸರನ್ನು ಮಾಡಿದ್ದಾನೆ. ಇಲ್ಲಿಯ ಟಿ.ವಿ ಚಾನೆಲ್ ಗಳಲ್ಲೂ ಸತತವಾಗಿ ಕಾಣಿಸಿಕೊಳ್ಳುತ್ತಿರುತ್ತಾನೆ”, ಎಂದ ದುಭಾಷಿ. ”ಆವತ್ತೇ ಹೇಳುವುದಲ್ಲವೇ? ಕನಿಷ್ಠ ಪಕ್ಷ ಆತನ ಜೊತೆಯಲ್ಲಿ ಒಂದು ಫೋಟೋ ಆದರೂ ತೆಗೆದುಕೊಳ್ಳುತ್ತಿದ್ದೆ”, ಎಂದು ಗೊಣಗಿದೆ ನಾನು. ಅಸಲಿಗೆ ವಿಕ್ಟರ್ ತನ್ನ ತಂಡದ ಬಗ್ಗೆ ನನ್ನೊಂದಿಗೆ ಪ್ರಮೋಷನ್ ಅಷ್ಟೇ ಮಾಡುತ್ತಿದ್ದಾನೆ ಎಂದು ನನಗ್ಯಾಕೋ ಅನ್ನಿಸಿತ್ತು. ಆದರೆ ನನ್ನ ಎಣಿಕೆ ತಪ್ಪಾಗಿತ್ತು. ನನ್ನ ಮಾತಿಗೆ ನಕ್ಕ ಆತ ಮುಂದಿನ ಬಾರಿ ತೆಗೆದುಕೊಂಡರಾಯಿತು ಬಿಡಿ ಎಂದು ಬಿಟ್ಟಿ ಸಲಹೆಯನ್ನು ಕೊಟ್ಟ. ವಿಕ್ಟರ್ ಗಾಯಕಿ ಮಡೋನಾರಷ್ಟು ಖ್ಯಾತನಾಗಿಲ್ಲದಿರಬಹುದು. ಆದರೆ ಅಂಗೋಲಾದಲ್ಲಂತೂ ಝುಂಬಾ ಕ್ಷೇತ್ರದಲ್ಲಿ ಒಳ್ಳೆಯ ಹೆಸರನ್ನು ಗಳಿಸಿದ್ದ. `ನಾಟ್ಟಿಂಗ್ ಹಿಲ್’ನ ಕರ್ಟಿಸ್ ಮತ್ತೆ ನೆನಪಾದರು.

ಅಂಗೋಲಾದಲ್ಲಿ ಸ್ಥಳೀಯ ಸೆಲೆಬ್ರಿಟಿಯಂತಹ ಸಾಧಕರು ಜನಸಾಮಾನ್ಯರಂತೆಯೇ ಎಲ್ಲರೊಂದಿಗೆ ಬೆರೆತುಕೊಂಡಿರುತ್ತಾರೆ ಎಂಬುದು ಮುಂದೆ ನನಗೆ ತಿಳಿಯಿತು. ಹೀಗಾಗಿ ಟಿ.ವಿ ಪರದೆಯಲ್ಲಿ ಕಾಣಸಿಗುವ ಮುಖಗಳು ಅಕಸ್ಮಾತ್ತಾಗಿ ಬೀದಿಯಲ್ಲಿ ಸಿಕ್ಕರೆ ಇಲ್ಲಿ ಅಷ್ಟಾಗಿ ಜನರೇನೂ ಸೇರುವುದಿಲ್ಲ, ಇರುವೆಗಳಂತೆ ಮುತ್ತಿಕೊಂಡು ಸೆಲ್ಫಿ ಕ್ಲಿಕ್ಕಿಸುವುದಿಲ್ಲ. ಸಾಧಕರೂ ಕೂಡ ತಾವೇನು ಆಕಾಶದಿಂದ ಇಳಿದುಬಂದ ದೇವತೆಗಳೋ ಎಂಬಂತೆ ವರ್ತಿಸುವುದಿಲ್ಲ. ಇದು ಗಾಯಕರು, ಕಲಾವಿದರಿಂದ ಹಿಡಿದು ಟಿ.ವಿ ನಿರೂಪಕರವರೆಗೂ ಸತ್ಯ. ”ಒಂದು ಪಕ್ಷ ಪೀಲೆಯೋ, ಮೆಸ್ಸಿಯೋ, ರಿಹಾನಾಳೋ, ಮಡೋನಾಳೋ ಬಂದರೂ ಹೀಗಾಗುತ್ತದೆಯೋ?”, ಎಂದು ಅಚ್ಚರಿಯಿಂದ ಕೇಳಿದೆ ನಾನು. ”ಇಲ್ಲ ಇಲ್ಲ… ಅವರೆಲ್ಲಾ ಬಂದರೆ ಜನ ಸೇರುವುದಂತೂ ಖಂಡಿತ”, ಎಂದ ದುಭಾಷಿ. ‘ಘರ್ ಕಾ ಮುರ್ಗಾ ದಾಲ್ ಬರಾಬರ್’ (ಮನೆಯಲ್ಲಿ ಬೇಯಿಸಿದ ಕೋಳಿಯೂ ಸಪ್ಪೆ ಬೇಳೆಯಂತೆಯೇ) ಅನ್ನೋ ಮಾತೊಂದು ಹಿಂದಿಯಲ್ಲಿದೆ. ಅದ್ಯಾಕೆ ಹೀಗೆ? ನನಗಂತೂ ಗೊತ್ತಿಲ್ಲ!

ಅಂದಹಾಗೆ ನನ್ನ ಝುಂಬಾ ಪಯಣವು ಹಲವು ತಿಂಗಳುಗಳಿಂದ ಯಶಸ್ವಿಯಾಗಿ ಸಾಗಿದೆ. ಪ್ರತೀಬಾರಿ ಲುವಾಂಡಾಗೆ ಹೋದಾಗಲೂ ಮೈಮುರಿಯುವಂತೆ ಕುಣಿಯುವುದನ್ನು ತಪ್ಪಿಸುವ ಮಾತೇ ಇಲ್ಲ. ಮಕ್ಕಳಿಂದ ಹಿಡಿದು ಹಿರಿಯರವರೆಗೂ, ಫಿಟ್ ಆಗಿರುವವರಿಂದ ಹಿಡಿದು ನಿನ್ನೆ-ಮೊನ್ನೆ ಹೆಜ್ಜೆಹಾಕಲು ಶುರು ಮಾಡಿರುವ ಉತ್ಸಾಹಿಗಳೆಲ್ಲರೂ ಇಲ್ಲಿ ಹುಮ್ಮಸ್ಸಿನಿಂದ ಭಾಗವಹಿಸುತ್ತಿರುವುದು ವಿಶೇಷ. ಓಶೋ ರಜನೀಶ್ ನೃತ್ಯವನ್ನು ಧ್ಯಾನಕ್ಕೆ ಹೋಲಿಸಿದ್ದರು. ಆದರೆ ಅದರ ಅರಿವಾಗಲು ಮಾತ್ರ ನಾನು ಅಂಗೋಲಾವರೆಗೂ ಬರಬೇಕಾಯಿತು. ”ಅಲ್ಲಾರೀ… ವೇದಿಕೆ ಬಿಡಿ, ನಾನು ನನ್ನ ಜೀವಮಾನದಲ್ಲೇ ಮುಚ್ಚಿದ ಕೋಣೆಯಲ್ಲೂ ನರ್ತಿಸಿದವನಲ್ಲ. ನೀವೀಗ ನನಗೆ ಝುಂಬಾ ಹುಚ್ಚು ಹತ್ತಿಸಿಬಿಟ್ರಿ”, ಎಂದು ವಿಕ್ಟರ್ ಸಿಕ್ಕಿದಾಗಲೆಲ್ಲಾ ಅವರಿಗೆ ಹೇಳುತ್ತಿರುತ್ತೇನೆ. ನನ್ನ ಮಾತನ್ನು ಕೇಳುತ್ತಾ ಜೋಕು ಕೇಳಿದವರಂತೆ ವಿಕ್ಟರ್ ಮ್ಯಾಕ್ಸಿಮುಸ್ ಪಕಪಕನೆ ನಗುತ್ತಿರುತ್ತಾರೆ.

*************

Leave a Reply