ರೈತರು ಬಂದರು…

ರಾಜೇಂದ್ರ ಪ್ರಸಾದ್ 

 

ಬಂದರಪ್ಪ ಬಂದರೋ ಬೆಟ್ಟವೇ ನಡೆದು ಬಂದಂತೆ
ಬೀದಿ ತುಂಬಾ ಬಂದರೋ ಬೆಂಕಿಯಂತೆ ಬಂದರೊ
ಬಿರುಗಾಳಿಯಂತೆ ಬಂದರೋ ಊರಿಗೂರೇ ಬಂದರೋ
ಬಂದರಪ್ಪ ಬಂದರೋ ನಮ್ಮ‌ ಜನ ಬಂದರೋ

ಹೆದ್ದಾರಿಗಳ ಎದೆ ನಡುಗುವಂತೆ ಹೆಜ್ಜೆಗಳನು ಇತ್ತು
ಬರಿಗಾಲುಗಳ ಮೇಲೆ ಬರಿ ಹೊಟ್ಟೆಗಳನು ಹೊತ್ತು
ನಿಲ್ಲದಂತೆ ನಡುಗದಂತೆ ಜೀವ ಸಾಗಿ ಸಾಗಿ ದೂರ
ಬಂದರಪ್ಪ ಬಂದರೋ ಬಿಟ್ಟು ತಮ್ಮ ದೂರದೂರ

ಕಾಮನಬಿಲ್ಲ ಬೀಜವ ಬಿತ್ತಿ ಕನಸುಗಳ ಹೂ ಬೆಳೆದು
ಕತ್ತಲಿಗೆ ಸಿಕ್ಕಿ ಕೈ ಕತ್ತರಿಸಿಕೊಂಡು ತತ್ತರಿಸಿದವರು
ಲೋಕಕೆಲ್ಲಾ ಅನ್ನ ಉಣಿಸಿ ತಾವು ಹಸಿವ ತಳೆದು
ಮಣ್ಣಿನ ಹೊರೆ ಎಳೆದುಕೊಂಡು ಮಲಗಿದವರು.
ಬಂದರಪ್ಪ ಬಂದರೋ ಬಾನೇ ಕರಗಿ ಸುರಿದಂತೆ

ಸುಡುವ ಬಿಸಿಲು ಚುಚ್ಚಿ, ಕಗ್ಗತ್ತಲ ಚಳಿ ಕೊರೆದು
ದಾರಿ ದುಗುಡ ಎದುರು ನಿಂತು ಬೆದರಿಸಿದರೂ
ಜಗ್ಗಲಿಲ್ಲ ಬಗ್ಗಲಿಲ್ಲ ದಾರಿ ಬಿಟ್ಟು ಕದಲಲಿಲ್ಲ
ಮೈಲು ಮೈಲು ದೂರ ನಡೆದು ಮೈ ಸೋಲಲಿಲ್ಲ
ಹಸಿವು ತಿಂದು ದಾಹ ಕುಡಿದು ದಾರಿ ತಳ್ಳಿ
ಬಂದರಪ್ಪ ಬಂದರೋ ನದಿಯು ನೆರೆ ಬಂದಂತೆ

ಬಂದರಪ್ಪ ಬಂದರೋ ಬೆಟ್ಟವೇ ನಡೆದು ಬಂದಂತೆ
ರಾಜಧಾನಿ ರಾಜಬೀದಿ ರಾಜಭವನಗಳಾಚೆ ನಿಂತರೋ ಮೂರಕಾಸಿನ ಕೋಳವ ಕೊಡವುವಂತೆ ಕೇಳಿ
ಸಾಲಬಡ್ಡಿ ಕಿತ್ತೊಗೆದು ನೇಗಿಲ ಹೊರಲು ಹೇಳಿ
ಬೇಡಿ ಬೇಡಿ ಸಾಕಾಗಿ ಬೆಂಕಿಯಂತೆ, ಬಡಬಾಗ್ನಿಯಂತೆ
ಬಂದರಪ್ಪ ಬಂದರೋ ಬೆಟ್ಟವೇ ನಡೆದು ಬಂದಂತೆ
ಅನ್ನ ಬೆಳೆವ ಜನ, ನೊಂದು ನೋವು ತೊಟ್ಟು ಬಂದರೋ..

2 Responses

  1. Girijashastry says:

    ಗುರುಗಳಾದ ಸಿದ್ಧಲಿಂಗಯ್ಯ ನವರ ” ನಿನ್ನೆ ದಿನ ನನ್ನ ಜನ ಬೆಟ್ಟದಂತೆ ಬಂದರು… ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು” ನೆನಪಿಗೆ ಬಂದಿತು.

  2. ರಘುನಾಥ says:

    ಸಿದ್ದಲಿಂಗಯ್ಯನವರ ಕವಿತೆ ಮರುಕಳಿಸಿತು

Leave a Reply

%d bloggers like this: