“ಮದುವೆ ಅನ್ನೋದು ಹೆಂಡತಿಯನ್ನು ರೇಪ್ ಮಾಡೋಕೆ ಕೊಡೋ license ಆಗಬಾರದಲ್ವಾ?”

ಸಂಜ್ಯೋತಿ ವಿ.ಕೆ.

ಒಂದು ಸರಳ ಪ್ರಶ್ನೆ ಎತ್ತಲಾಯ್ತು. .

“ಮದುವೆ ಅನ್ನೋದು ಹೆಂಡತಿಯನ್ನು ರೇಪ್ ಮಾಡೋಕೆ ಕೊಡೋ license ಆಗಬಾರದಲ್ವಾ?”

ಇದಕ್ಕೆ ನೇರ ಉತ್ತರಗಳು ಬಂದದ್ದಕ್ಕಿಂತ ಹೆಚ್ಚಾಗಿ ಸುತ್ತಿ ಸುತ್ತಿ ಕುಟುಂಬ, ಸಾಮರಸ್ಯ, ಹೊಂದಾಣಿಕೆ ಉತ್ಯಾದಿಗಳ ಸುತ್ತಲೇ ಉತ್ತರಗಳು ಗಿರಕಿ ಹೊಡೆಯುತ್ತಿದ್ದವು.

ಒಪ್ಪಿಗೆ ಇಲ್ಲದ್ದಾಗ ಬಲವಂತವಾಗಿ ಅಗೋದು ಅತ್ಯಾಚಾರ ತಾನೇ.. ಒಬ್ಬ ಪುರುಷ ಮಹಿಳೆಯ ಒಪ್ಪಿಗೆ ಇಲ್ಲದೆ ಬಲವಂತದಿಂದ ಎರಗಿದರೆ ಅದು ಅತ್ಯಾಚಾರ ಎಂದ ಮೇಲೆ ಅದು ಅತ್ಯಾಚಾರವೇ. ಅಷ್ಟೇ.
ಮದುವೆ ಆಗಿಬಿಟ್ಟ ಮಾತ್ರಕ್ಕೆ ಅದು ಒಪ್ಪಿಗೆ ಇಲ್ಲದಿದ್ದರೂ ಅತ್ಯಾಚಾರ ಮಾಡಲು license ಕೊಟ್ಟಂತೆಯೇ?

ಆದರೆ ನಮ್ಮ ದೇಶದ ಕಾನೂನಿನ ಪ್ರಕಾರ ಇದು ಅಪರಾಧ ಅಲ್ಲ! ಇಂತ ಅಂಧ ಕಾನೂನನ್ನು ರಕ್ಷಿಸಲು ನಮ್ಮ ಸಂಸದರ ಸಂಸ್ಕೃತಿ ರಕ್ಷಕ ವಾದ!

“ಎಂತದೇ ಪರಿಸ್ಥಿತಿಯಲ್ಲೂ ಅತ್ಯಾಚಾರ ಅತ್ಯಾಚಾರ ಅಷ್ಟೇ” ಅನ್ನೋ ಸರಳ ಸತ್ಯವನ್ನು ಗ್ರಹಿಸದ ಒಪ್ಪದ ಮನಸ್ಥಿತಿಯ ಸಮಾಜದಲ್ಲಿ ನಾವು ಬರೀ ಕಾನೂನಿ‌ನ ನ್ಯೂನ್ಯತೆಯ ಬಗ್ಗೆ ಮಾತಾಡ್ತದೀವಿ. ಎಂಥ ಮೂರ್ಖರು ನಾವು..

ನಾವೆಂತ ಅಪಾಯಕಾರಿ ಪ್ರಶ್ನೆ ಎತ್ತುತ್ತಾ ಇದೀವಿ! ಅದು ಎಂತ ಆತಂಕ, ತಲ್ಲಣಗಳನ್ನ ಸೃಷ್ಟಿಸ್ತಿದೆ ನೋಡಿ..
ಹೆಣ್ಣು ತನ್ನ ಮೇಲಿನ ಶೋಷಣೆಯ ವಿರುದ್ಧ ದನಿ ಎತ್ತಿದ ಕೂಡಲೇ, ತನ್ನ ಹಕ್ಕಿಗಾಗಿ ದನಿ ಎತ್ತಿದ ಕೂಡಲೇ ಎಲ್ಲಕ್ಕಿಂತ ಮೆದಲು ಬರುವ ಪ್ರತಿಕ್ರಿಯೆ

“ಕುಟುಂಬ ವ್ಯವಸ್ಥೆ ಒಡೆಯಬಾರದು; ಮತ್ತು /ಅಥವಾ ಸಂಸ್ಕೃತಿಯನ್ನು ಕಡೆಗಣಿಸಿಬಿಡಬಾರದು; ಸಂಯಮ/ ಹೊಂದಾಣಿಕೆ ಬೇಕು..” ಇತ್ಯಾದಿ ಉಪದೇಶಾತ್ಮಕ ಹೇಳಿಕೆಗಳು.

ಕುಟುಂಬವ ಒಡೆಯುತ್ತದೆ ಎಂದು ಹೆದರುವಿರಾದರೆ, ಅದು ಹೆಣ್ಣು ಪ್ರಶ್ನಿಸುತ್ತಿರುವುದರಿಂದಲ್ಲ, ಅದರ ಮೂಲದಲ್ಲಿರುವ ಗಂಡಿನ ಶೋಷಣೆಯಿಂದ. ನೇರವಾಗಿ ಮೂಲಕ್ಕೆ ಚಿಕಿತ್ಸೆ ನೀಡಬೇಕಲ್ಲವೇ? ಹಾಗಾಗಿ ನಿಜಕ್ಕೂ #ಇಂತಹ ಸಂದರ್ಭಗಳಲ್ಲಿ ಕುಟುಂಬವನ್ನು ಉಳಿಸುವ ಹೊಣೆ ಗಂಡಿನದ್ದೇ ಅಲ್ಲವೇ?

‘ಹೆಣ್ಣಿನ ಉಡುಗೆ ತೊಡುಗೆಗಳು ಹೇಗಿರಬೇಕು, ಎಷ್ಟು ಹೊತ್ತಲ್ಲಿ, ಎಲ್ಲಿ ಹೇಗೆ ಓಡಾಡಬೇಕು/ಬಾರದು, ಎಲ್ಲಿಗೆ ಹೋಗಬೇಕು/ಬಾರದು, ಯಾರೊಡನೆ ಮಾತಾಡಬೇಕು/ಬಾರದು, ಯಾರನ್ನು ಮದುವೆಯಾಗಬೇಕು ( ಮದುವೆ ಬೇಕೋ ಬೇಡವೋ ಎಂಬ ನಿರ್ಧಾರವು ಅವಳದಾಗಿರಬೇಕೆಂಬುದಂತೂ ದೂರದ ಮಾತಾಯ್ತು) ಎಷ್ಟು ನಗಬೇಕು, ಏನು ಯೋಚಿಸಬೇಕು/ಬಾರದು, ಎಷ್ಟು ಉಸಿರನ್ನು ಒಳಗೆಳೆದುಕೊಂಡು ಎಷ್ಟನ್ನು ಬಿಡಬೇಕು…’

ಹೀಗೆ ಎಲ್ಲವನ್ನೂ ಗೆರೆ ಎಳೆದು ನಿರ್ದೇಶನ ನೀಡುವ ಸಮಾಜಕ್ಕೆ ಆಕೆ ಇವುಗಳನ್ನು ಪ್ರಶ್ನಿಸಲು ಹೊರಡುತ್ತಿದ್ದಂತೆ, ಕುಂಟುಂಬದ ಉಳಿವು, ನಮ್ಮ ಭವ್ಯ ಸಂಸ್ಕೃತಿಯ ಉಳಿವು, ದೇಶದ ಮಾನದ ಉಳಿವಿಗೆ ಸಂಚಕಾರ ಬಂದಂತೆ ಕಾಣುತ್ತದೆ.

ಇದೇ ಧೋರಣೆ ದಲಿತ/ ದಮನಿತರು ತಮ್ಮ ಹಕ್ಕಿಗಾಗಿ ಪ್ರಶ್ನೆ ಎತ್ತಿದಾಗಲೂ ಕಾಣುತ್ತೇವೆ.
ದೇವನೂರು ಮಹಾದೇವ ಅವರು ಒಂದು ಸಂದರ್ಶನದಲ್ಲಿ ಆಡಿದ ಮಾತುಗಳಿವು.

“ಈಗ ನೋಡಿ ನಮ್ಮ ಹಳ್ಳಿ.ಅಲ್ಲಿ ಎಲ್ಲಿಯವರೆಗೆ ಸಮಾನತೆ ಇರಬೇಕು ಅಂತ ಎಚ್ಚರ ಇರೋದಿಲ್ಲವೋ ಅಲ್ಲಿವರೆಗೆ ಸಾಮರಸ್ಯ ಇರುತ್ತದೆ.ಯಾವಾಗ ಎಲ್ಲರೂ ಸಮಾನರು ಅಂತ ಹೊರಡ್ತೀವೋ ಆವಾಗ ಅಲ್ಲಿ ಸಾಮರಸ್ಯ ಕೆಡ್ತದೆ.ಇದು ಇಂಡಿಯಾದ ವಿಚಿತ್ರವಾದ ಸಂಕೀರ್ಣತೆ.ನಾವು ಡಿ ಎಸ್ ಎಸ್ ನಿಂದ ಹಳ್ಳಿ ಕಡೆ ಹೊರಟಾಗ ಇವರೆಲ್ಲ ಊರನ್ನ ವಿಘಟಿಸಕ್ಕೆ ಹೊರಟಿದ್ದಾರೆ ಅನ್ನುವ ಆರೋಪಕ್ಕೆ ಒಳಗಾದೆವು.

ಊರಲ್ಲಿ ಜಗಳ ತಂದು ಹಾಕಕ್ಕೆ ಬರ್ತಾ ಇದೀರಿ ಅಂದ್ರು.ಏಕೆಂದ್ರೆ ಅವರ ನ್ಯಾಯವೇ ಬೇರೆ,ನಾವು ಕೇಳ್ತಿರೋ ನ್ಯಾಯವೇ ಬೇರೆ.ಈ ತರಹ ಬೇರೆ ಬೇರೆ ನ್ಯಾಯಗಳು ಇರೋದು ನಮ್ಮ ದೇಶದಲ್ಲಿ ಮಾತ್ರ ಕಾಣುತ್ತೆ.”

“ನೋಡಿ ಗಣರಾಜ್ಯ ಸುಂದರವಾಗಿದೆ ಅಂತ ನಿಮಗೆಲ್ಲಾ ಅನಿಸುವ ಸಲುವಾಗಿ ಅಸ್ಪ್ರಶ್ಯತೆಯನ್ನು ಅಸ್ಪ್ರಶ್ಯತೆಯಲ್ಲ ಎಂದು ನಾವು ಅಂದುಕೊಂಡು ಬದುಕಬೇಕು,ನಮಗೆ ಅದು ಅಸ್ಪ್ರಶ್ಯತೆ ಅಂತ ಅನಿಸಿದ ತಕ್ಷಣ ನಿಮ್ಮ ಸಾಮರಸ್ಯ ಕೆಡುತ್ತದೆ.”

ಶೋಷಿತರು ಶೋಷಣೆಯನ್ನು ಶೋಷಣೆ ಅಂದುಕೊಳ್ಳಬಾರದು. ಅದರ ಅರಿವಾಗಿ ಅವರು ಪ್ರಶ್ನಿಸಿದರೆ ಅದು ನಮ್ಮ ಸಂಸ್ಕೃತಿಗೆ ಮಾರಕ, ಕುಟುಂಬ ವ್ಯವಸ್ಥೆಗೆ ಧಕ್ಕೆ, ದೇಶದ ಇಮೇಜಿಗೆ ಮಾಡುವ ಅವಮಾನ, ಸಾಮರಸ್ಯಕ್ಕೆ ಕೆಡುಕು…..

ಒಟ್ಟಾರೆ ಶ್ರೇಣೀಕೃತ ವ್ಯವಸ್ಥಯಲ್ಲಿ (ಅದು ಲಿಂಗಾಧಾರಿತವಾಗಿರಲಿ ಅಥವಾ ಜಾತಿ ಆಧಾರಿತವಾಗಿ ರಲಿ) ಶ್ರೇಣಿಯ ಮೇಲಿನ ಮೆಟ್ಟಿಲುಗಳಲ್ಲಿ ನಿಂತ ಫಲಾನುಭವಿಗಳ ಆತಂಕವಿದು. ಹಾಗಾಗೇ ಅವರು ತಮ್ಮ ಯಥಾಸ್ಥಿತಿಯನ್ನು ಕಾಯ್ದಿಟ್ಟುಕೊಳ್ಳಲು ಯಾವಾಗಲೂ ಹೂಡುವ ಅದೇ ವಾದವಿದು.

10 Responses

 1. prathibha nandakumar says:

  PLSE READ – https://en.wikipedia.org/wiki/Marital_rape /http://www.indialawjournal.org/archives/volume2/issue_2/article_by_priyanka.html / https://www.indiatimes.com/news/india/supreme-court-rules-that-sexual-act-with-wife-above-15-years-of-age-is-not-marital-rape-327558.html and many more write ups.

 2. Anasuya M R says:

  ದೇವನೂರರ ಮಾತುಗಳು ವಾಸ್ತವತೆಗೆ ಹತ್ತಿರವಾಗಿವೆ

 3. Renukambike says:

  ಬಹುಶಃ ಇಲ್ಲಿನ ಮಣ್ಣಿನ ಜೀನುಗಳಲ್ಲೇ ದೋಷವಿದೆ. ಯಾವುದನ್ನೂ ಕಡ್ಡಿತುಂಡಾಗುವಷ್ಟು ನೇರವಾಗಿ ನುಡಿಯಬಾರದು., ಅದು ಸೋ ಕಾಲ್ಡ್ ಮೇಲ್ವರ್ಗ ಅಥವಾ ಶ್ರೇಷ್ಠ ವ್ಯಸನಿಗಳ ಬುಡಕ್ಕೆ ಯಾವುದೇ ಹಾನಿ ಮಾಡುವಂತಿರಬಾರದು

 4. ಸಂಜ್ಯೋತಿ, ನಿಮ್ಮ ಚಿಂತನೆ ಶಬ್ದರೂಪದಲ್ಲಿ ಚೆನ್ನಾಗಿ ಅಭಿವ್ಯಕ್ತಿ ಗೊಂಡಿದೆ. ಹೌದು, ಹೆಣ್ಣು ಒಂದು ಸ್ವತಂತ್ರವಾಗಿ ಬದುಕುವ ಜೀವಿ ಯೆಂದು ಪ್ರತಿಪಾದಿಸಿದರೆ ಸಾಕು, ಅದು ಅಕ್ಷಮ್ಯ ಅಪರಾಧವೆಂದು ಪರಿಗಣಿಸಿ, ಪ್ರಶ್ನೆಯೆತ್ತಿದವರನ್ನು ಬಹಿಷ್ಕರಿಸುತ್ತಾರೆ. ಕುಟುಂಬ, ವೈವಾಹಿಕ ಜೀವನದ ಹೆಸರಿನಲ್ಲಿ ನಡೆಯುವ ಅತ್ಯಾಚಾರವನ್ನು, ನಾವು ಮಹಿಳೆಯರು ತಿರಸ್ಕರಿಸುತ್ತೇವೆ, ಎಂದಿಗೂ ಒಪ್ಪಲಾರದ ಸಂಗತಿ ಅದು.

 5. prasad raxidi says:

  ನಮ್ಮ ಹಳೆಯ ತಲೆಮಾರನ್ನು ಗಮನಿಸಿದರೆ ನಮ್ಮಜ್ಜಿಯರ ಕಾಲದಲ್ಲಿ (ಆಕಾಲದ ಕಥೆಗಳನ್ನು ಕೇಳುವಾಗ) ನೂರಕ್ಕೆ ಎಂಬತ್ತು ಪಾಲು ಮದುವೆಗಳು ಹೆಣ್ಣಿನ ಮೇಲೆ ಅತ್ಯಾಚಾರಕ್ಕೆ ಲೈಸನ್ಸ್ ನಂತೇ ಇದ್ದವು.
  ಈಗ ಹೆಣ್ಣಿಗೆ ದೊರತಿರುವ, ವಿದ್ಯಾಬ್ಯಾಸ ಆರ್ಥಿಕ ಸ್ವಾತಂತ್ರ್ಯ ಅದರ ಪ್ರಮಾಣ ಕಡಿಮೆಯಾಗಿದೆ ಎಂದಷ್ಟೇ ಹೇಳಬಹುದು.
  ಕೊನೆಗೂ ನಾಲ್ಕು ಗೋಡೆಗಳನಡುವೆ, (ಭೌತಿಕ ಹಾಗೂ ಮಾನಸಿಕ) ಏನು ನಡೆಯುತ್ತದೆ ಎಂದು ಊಹಿಸಬೇಕಷ್ಟೆ, ಯಾಕೆಂದ್ರೆ ಅತ್ಯಾಚಾರ ಎಂಬುದು ಕೇವಲ ಲೈಂಗಿಕ ಮಾತ್ರವೂ ಅಲ್ಲ, ಭೌತಿಕ ಮಾತ್ರವೂ ಅಲ್ಲ.

 6. ರೇಣುಕಾ ರಮಾನಂದ says:

  ಶೋಷಣೆಗಾಗಿ ಧ್ವನಿಯೆತ್ತಿದ,ಹಕ್ಕಿಗಾಗಿ ಪ್ರಶ್ನೆಯೆತ್ತಿದ ಮಹಿಳೆಯನ್ನು ಪೂರಾ ಹದಗೆಟ್ಟು ಹೋದ ರೀತಿಯಲ್ಲಿ ನೋಡಲಾಗುತ್ತಿದೆ ಈಗಲೂ..ಗ್ರಾಮೀಣ ಪ್ರದೇಶದಲ್ಲಿ ಇದರ ತೀವೃತೆ ಹೆಚ್ಚಿದೆ..ಹೆಣ್ಣು ದೊಡ್ಡ ಧ್ವನಿಯಲ್ಲಿ ಮಾತನಾಡುವುದು ಕೂಡ ಅಪರಾಧ..ಟೂ ವ್ಹೀಲರ್‌ನಲ್ಲಿ ಪೇಟೆಗೆ ಹೋಗಿ ಬರಲು ಕೊಂಚ ಮುಸ್ಸಂಜೆಯಾಗಿಬಿಟ್ರೆ ರಾತ್ರಿ ಕೂಡ ಸಂಚರಿಸ್ತಾಳೆ ಮೂರೂ ಬಿಟ್ಟವಳು ಎಂಬ ಗುಸುಗುಸು ಊರ್ತುಂಬ..ಸಮಾಜ ಏನೆಂದೀತು ಎಂಬುದಕ್ಕೆ ಸಂವಾದಿಯಾಗಿ ಮನೆಯ ಜನ ನಡೆದುಕೊಳ್ಳುತ್ತಾರೆಯೇ ವಿನಃ ಅವಳೂ ನಮ್ಮಂತೆ ಮನುಷ್ಯಳು ಅಂತ ಪರಿಗಣಿಸಲ್ಲ..ಹೀಗಾಗಿ ಹೆಣ್ಣಿಗೆ ಗೌರವ ಕೊಡದ ,ಅವಳನ್ನು ಸದಾ ದಮನಿಸುವ ದಾರಿಗಳ ಹುಡುಕುವ ಸಂಸಾರದಲ್ಲಿ ಪ್ರತೀ ಕೂಡುವಿಕೆಯೂ ಅತ್ಯಾಚಾರವೇ

 7. kiran.s says:

  ನಮಸ್ತೆ! ನಾನ್ ಕಿರಣ್, ವೃತ್ತಿಪರ ಛಾಯಾಗ್ರಾಹಕ, ಸಿನಿಮಾ ಪೋಸ್ಟರ್ ಡಿಸೈನರ್, ನನ್ನ ಛಾಯಾಚಿತ್ರ ಜೀವನದಲ್ಲಿ ನಾನು ಅನೇಕ ಮದುವೆಗಳನ್ನು ನೋಡಿದ್ದೇನೆ. ನನ್ನ ಚಲನಚಿತ್ರೋದ್ಯಮ ಜೀವನದಲ್ಲಿ ನಾನು ಅನೇಕ ಕಥೆಗಳನ್ನು ಕೇಳಿದ್ದೇನೆ, ಪ್ರತಿಯೊಂದು ಕಥೆಯೂ ಅದರ ಸತ್ಯದ ವಿಂಡೊವನ್ನು ಹೊಂದಿದೆ. ನೀವು ಹೇಳಿದಂತೆ ಮಹಿಳೆಯರು ಕುಟುಂಬದ ಶಕ್ತಿ. ಮಹಿಳೆಯರು ರಾಷ್ಟ್ರದ ಶಕ್ತಿ. ಮಹಿಳೆಯರು ಮಾನವ ಜನನಕ್ಕೆ ಕಾರಣ. ನಂತರ ನೀವು ಈ ರೀತಿಯ ಪದಗಳನ್ನು ಏಕೆ ಹೇಳುತ್ತೀರಿ? ಅತ್ಯಾಚಾರ, ಲೈಂಗಿಕ ಕಿರುಕುಳ, ಗಂಡ ಮತ್ತು ಹೆಂಡತಿ ನಡುವಿನ ಅನಗತ್ಯ ಸಂಬಂಧ. ಏನು ನರಕ ? ಅದು ನರಕವಾಗುವುದು ಯಾಕೆ? ಪ್ರತಿ ಕುಟುಂಬದವರು ತಮ್ಮ ಕುಟುಂಬದ ಮಹಿಳೆಯರ ಬಗ್ಗೆ ಕನಸು ಕಾಣುತ್ತಾರೆ. ಅವರು ಸುಂದರವಾದ ಜೀವನವನ್ನು ಹೊಂದಿರಬೇಕು. ಒಂದು ಸಂತೋಷಪೂರ್ಣ ಜೀವನವನ್ನು ಮಾಡಬೇಕು. ನೀವು ಇದನ್ನು “ಹಾರ್ರಾಮೆಂಟ್, ನೀವು ಇದನ್ನು ಅನಪೇಕ್ಷಿತ ಲೈಂಗಿಕ ಸಂಬಂಧ ಎಂದು ಕರೆದುಕೊಳ್ಳುತ್ತೀರಾ?

 8. harishachummi4442@gmail.com says:

  ಮದುವೆ ಎಂಬುದು ಅತ್ಯಾಚಾರಕ್ಕೆ ನೀಡುವ license ಅಂತ ಯಾಕೆ ಕರಿತ ಇದಿರ ಅಂತ ಗೋತ್ತಾಗುತಿಲ್ಲ ….

  ಈ ವಿಚಾರವನ್ನು ಕೊರಳಿಗೆ ತಾಳಿ ಕಟ್ಟುವದಕ್ಕಿಂತ ಮುಂಚೆನೆ ಯೋಚನೆ ಮಾಡಿ ನಿರ್ದಾರ ತಗೊಬೇಕು….

 9. Renukambike says:

  ಬಹುಶಃ ಇಲ್ಲಿನ ಮಣ್ಣಿನ ಜೀನುಗಳಲ್ಲೇ ದೋಷವಿದೆ. ಯಾವುದನ್ನೂ ಕಡ್ಡಿತುಂಡಾಗುವಷ್ಟು ನೇರವಾಗಿ ನುಡಿಯಬಾರದು., ಅದು ಸೋ ಕಾಲ್ಡ್ ಮೇಲ್ವರ್ಗ ಅಥವಾ ಶ್ರೇಷ್ಠ ವ್ಯಸನಿಗಳ ಬುಡಕ್ಕೆ ಯಾವುದೇ ಹಾನಿ ಮಾಡುವಂತಿರಬಾರದು

Leave a Reply

%d bloggers like this: