ಎಲ್ಲರ ‘ತಾಯವ್ವ’

ತಾಯವ್ವ

ನಮ್ಮ ಅಳಲಿನ ಅರ್ಥವೇನು?

ತಾಯವ್ವ ನಾಟಕವು ಸಮಕಾಲೀನ ನಾಗರೀಕತೆಯ ಸಂಕಟಕ್ಕೆ ಸಂಬಂಧಿಸಿದ್ದು. ಇಂದು ಮಾನವ ಸಭ್ಯತೆಯ ಉಳಿವಿಗೆ ಹಿಂದೆಂದೂ ಕಾಣದ ಬದಲಾವಣೆಯನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ.

ಏಕೆಂದರೆ ನಾವೀಗ ನಾಗರೀಕತೆಯ ಅಮಲಿನಲ್ಲಿ ಅತಿಮಾನಸಿಕತೆಯ ರೋಗಕ್ಕೆ ತುತ್ತಾಗಿ ಮನೋದೌರ್ಬಲ್ಯ ಹಾಗೂ ಇಬ್ಬಂದಿತನದಲ್ಲಿ ಎಲ್ಲೋ ಕಳೆದು ಹೋಗಿದ್ದೇವೆ. ನಾವು ಪ್ರಕೃತಿ, ಕಷ್ಟದ ಕಾಯಕ, ಅನುಭವದ ಕಲಿಕೆಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದೇವೆ. ಇದರ ಪರಿಣಾಮವಾಗಿ ಕಾಯಕಜೀವಿಗಳು, ಸಹಜ ಜೀವಿಗಳು, ಪ್ರಾಣಿಕುಲ ಮತ್ತು ಪ್ರಕೃತಿ ಅತೀವ ಸಂಕಟಕ್ಕೆ ಒಳಗಾಗಿವೆ.

ನಮ್ಮ ಈ ಪ್ರವೃತ್ತಿಯಿಂದ ಕೇವಲ ಇತರರು ಮಾತ್ರ ನರಳುತ್ತಿದ್ದಾರೆಂದೇನಲ್ಲ, ನಾವು ಕೂಡ ಭಾದಿತರಾಗುತ್ತಿದ್ದೇವೆ. ಅಧಿಕಾರ, ಹಣ ಮತ್ತು ಬುದ್ಧಿ ಎಲ್ಲವನೂ ಹೊಂದಿರುವ ನಾವು ಬಡ ದೀನ ದಲಿತರ ಹಾಗೆಯೇ ಕೊರತೆಗಳಿಂದ ಹಲವಾರು ನೋವುಗಳನ್ನು ಅನುಭವಿಸುತ್ತಿದ್ದೇವೆ. ನಮ್ಮ ಜೀವನ ಮತ್ತು ಭವಿಷ್ಯಗಳು ವೇಗವಾಗಿ ಕ್ಷಯಿಸಿ ಹೋಗುತ್ತಿವೆ. ಅದು ಕೇವಲ ಬದುಕಿನ ನಿರರ್ಥಕತೆಯ ಸೂಚಕವಾಗಿರದೇ ಸಭ್ಯತೆಯ ಬಂಜರುತನವಾಗಿ ಕಾಣತೊಡಗುತ್ತಿವೆ.

ಹೀಗಿದ್ದರೂ ನಮ್ಮ ಸುತ್ತ ಎಲ್ಲೆಡೆಗೂ ಹಬ್ಬುತ್ತಿರುವ ಈ ಪಿಡುಗನ್ನು ಗುರುತಿಸದೆ ತಂತ್ರಜ್ಞಾನವು ನಮ್ಮನ್ನು ರಕ್ಷಿಸಬಲ್ಲದು, ದೇವರು ನಮ್ಮನ್ನು ಕಾಪಾಡಬಹುದು ಎಂಬ ಭ್ರಮೆಯಲ್ಲಿ ಸಿಲುಕಿಕೊಂಡಿದ್ದೇವೆ. ಈ ದಿಕ್ಕಿನಲ್ಲಿ ಸಾಗುತ್ತಾ ತಂತ್ರಜ್ಞಾನವನ್ನು ದುರ್ಬಳಕೆ ಮಾಡಿ ದೇವರನ್ನು ದೂರ ಮಾಡಿಕೊಂಡಿದ್ದೇವೆ.

ಈ ಮಲಿನತೆಯನ್ನು, ಅಂದರೆ ನಮ್ಮ ಸುತ್ತಮುತ್ತ ಕಲ್ಪಿಸಿಕೊಂಡಿರುವ ತಿಪ್ಪೆಯನ್ನು, ನಾವೇ ಸ್ವಚ್ಚಗೊಳಿಸಬೇಕು,  ಇದು ನಮ್ಮ ಬಡ ಜನತೆಯ ಕೆಲಸವಲ್ಲ. ಹೇಗಿದ್ದರೂ ಈ ಮಾಲಿನ್ಯವನ್ನು ಅವರು ಸೃಷ್ಟಿ ಮಾಡಿಯೂ ಇಲ್ಲ. ಹಾಗೆ ನೋಡಿದರೆ ಈ ದೇಶದ ಬಡ ಮತ್ತು ಸರಳಜೀವಿಗಳನ್ನು ಸೋಮಾರಿಗಳನ್ನಾಗಿ, ಜಡ ಜೀವಿಗಳನ್ನಾಗಿ ಮಾಡಿದವರು ನಾವೇ. ಸರಳವಾಗಿ ಹೇಳಬೇಕೆಂದರೆ ಅವರನ್ನು ದಯನೀಯ ಭಿಕ್ಷುಕರನ್ನಾಗಿಸಿದ್ದೇವೆ. ಈ ಹಾದಿಯಲ್ಲಿಯೇ ಮುಂದುವರೆದು ನಾವು ಕೂಡ ಆಧುನಿಕ ಹೆಡ್ಡರಾಗಿದ್ದೇವೆ.

ನಾವು ಯಾಂತ್ರಿಕತೆಯನ್ನು ಸಂಭ್ರಮಿಸತ್ತಲೇ ಕೈಉತ್ಪನ್ನವನ್ನು ಕೊಲೆಮಾಡಿದ್ದೇವೆ. ನಿಜಕ್ಕೂ  ಈ ಬಿಕ್ಕಟ್ಟಿಗೆ ಮೂಲಕಾರಣವೇ ಸ್ವಯಂಚಾಲಿತ ಯಂತ್ರಗಳು. ಇದು  ಅದ್ಬುತ ಸೃಷ್ಟಿಯೇ ಇರಬಹುದು, ಆದರೆ ಇದು ಕಸಿಯುವ ಸೃಷ್ಟಿಯೂ ಕೂಡ ಹೌದು. ಈ ಯಾಂತ್ರೀಕರಣವು ನಮಲ್ಲಿ ಬದುಕುವ ಬಯಕೆಯನ್ನು  ಕಾಯ್ದಿಡಬಲ್ಲ ಮೂಲ ತತ್ವಗಳಾದ ಕಾಯಕ ಮತ್ತು ಸಹಜ ಜೀವನ ಎರಡನ್ನೂ ಕಿತ್ತುಕೊಳ್ಳುವ ಸಾಧನವಾಗಿಬಿಟ್ಟಿದೆ.

ಬಡವರಿಗೆ ಕೆಲಸವಿಲ್ಲ, ಶ್ರೀಮಂತರು ಕೃತ್ರಿಮ ಜೀವನಶೈಲಿಯನ್ನು ಅನುಸರಿಸುತ್ತಿದ್ದಾರೆ; ಕೊಳ್ಳುವಿಕೆ, ಮಾರುವಿಕೆ, ಕಪಟ ಮೋಸಗಳು, ಕೊಲೆ ಯುದ್ಧಗಳಾಚೆ ಅವರ ಗಮನವೇ ಹರಿಯದು. ಈ ಮಧ್ಯೆ ಯಂತ್ರದ ಮೂಲಕ ಆರಾಮ ಸಿಗಬಹುದೆಂಬ ಭ್ರಮೆಯಲ್ಲಿ ಬಹಳ ಸಮಯದಿಂದ ನಾವು ಮೂರ್ಖರಂತೆ ಪರಿತಪಿಸುತ್ತಿದ್ದರೂ ಈಚಿನ ವರ್ಷಗಳಲ್ಲಿ ಅದು ಜೀವನವನ್ನು ನಿಧಾನಗತಿಯ ಅವನತಿಯತ್ತ ಕರೆದೊಯ್ಯುತ್ತಿದೆಯೆಂದು ಸ್ವಲ್ಪ ಸ್ವಲ್ಪವಾಗಿ ಅರಿಯುತ್ತಿದ್ದೇವೆ.

ಇದುವೇ ತಾಯವ್ವ ನಾಟಕದ ನಿಜ ಸಂದರ್ಭವು.

ಈ ನಾಟಕವು ಆಧುನಿಕತೆಯನ್ನು ತನ್ನದೇ ರೀತಿಯಲ್ಲಿ ಪದರ ಪದರವಾಗಿ ಬಿಚ್ಚಿ ನೋಡುಗರಿಗೆ ತೆರೆದಿಡುತ್ತದೆ. ಇಂದಿನ ಜಗತ್ತಿನಲ್ಲಿ ಎಲ್ಲ ವಿಚಾರಗಳನ್ನೂ ತುಂಡು ತುಂಡಾಗಿ ಭಾಗ ಮಾಡಿಯೇ ಅರ್ಥೈಸಲಾಗುತ್ತದೆ. ಉದಾಹರಣೆಗೆ ಪ್ರಜಾಪ್ರಭುತ್ವವದ ವಿಚಾರವನ್ನು ತೆಗೆದುಕೊಳ್ಳಿ, ಈ ಪರಿಕಲ್ಪನೆಯ ಅರ್ಥವನ್ನು ಸಮಾಜದಲ್ಲಿ ಹೆಚ್ಚಾಗಿ ಕೇವಲ ಆಡಳಿತ ಮತ್ತು ವಿರೋಧಪಕ್ಷಗಳ ರೂಪದಲ್ಲಿ ನಾವು ಕಾಣುತ್ತೇವೆ. ಅದರಾಚೆಗೆ ಮತ್ತೇನೂ ಗ್ರಹಿಸಲಾಗದು. ಅದೇ ರೀತಿ ಸತ್ಯ, ಪ್ರತಿನಿಧಿತ್ವ, ಸಮಾನತೆ ಹಾಗೂ ನ್ಯಾಯ ಇತ್ಯಾದಿ ಸಾರ್ವಜನಿಕ ಜೀವನದ ಮುಖ್ಯ ಆಯಾಮಗಳು ಕೂಡ ಭಾಗವಾಗಿ ಹೋಗಿದೆ, ಗೋಡೆಗಳಿಂದ ಸುತ್ತುವರಿಯಲ್ಪಟ್ಟಿವೆ.

ಇದಕ್ಕೆ ಪರ್ಯಾಯವಾಗಿ ತಾಯವ್ವ ವೈರುದ್ಧ್ಯಗಳ ನಡುವೆ ಸಾಮರಸ್ಯವನ್ನು ತರುವ ವ್ಯಕ್ತಿ – ಶ್ರೀಮಂತರನ್ನು ಉದ್ದೇಶಿಸಿ, ನಿಮ್ಮ ಜೀವನವನ್ನು ಸೂಕ್ಷ್ಮವಾಗಿ ಪರಿಗಣಿಸಿ, ಅದರರ್ಥವನು ಗ್ರಹಿಸಿ ಬಡವರನ್ನು ಮೇಲೆತ್ತುವುದರ ಮೂಲಕ ನಿಮ್ಮನ್ನು ನೀವೇ ಉದ್ಧಾರ ಮಾಡಿಕೊಳ್ಳಿ, ಎಂಬ ಸಂದೇಶವನ್ನು ಸಾರುವ ನಾರಿ. ಉಳ್ಳವರು ಸರಳ ಜೀವನ ಮತ್ತು ಶ್ರಮದ ಜೀವನವನ್ನು ರೂಪಿಸಿಕೊಳ್ಳಬೇಕೆನ್ನುತ್ತಾಳೆ ತಾಯವ್ವ.

ಈ ನಾಟಕದ ಸ್ಫೂರ್ತಿ ಮ್ಯಾಕ್ಸಿಂ ಗಾರ್ಕಿ ರಚಿತ ಹೆಸರಾಂತ ಕಾದಂಬರಿ, ‘Mother’, ಮತ್ತು ಅದೇ ಹೆಸರಿನ ಬರ್ಟೋಲ್ತ್ ಬ್ರೆಕ್ಟ್ ನ ಮೂಲಕ ಪ್ರಸಿದ್ಧವಾದ ನಾಟಕ ಎಂದು ಹೇಳಬಹುದು, ಆದ್ದಾಗ್ಯೂ ಅದು ಇಂದಿನ ಸಂದರ್ಭಕ್ಕೆ ಅನುಗುಣವಾಗಿ ಬರೆದ ಹೊಸ ನಾಟಕವೂ ಹೌದು. ಇಲ್ಲಿ ಸ್ಮರಿಸಬೇಕಾದ ವಿಷಯವೆಂದರೆ ಕೆಲವು ತಿಂಗಳ ಹಿಂದೆ ಯಂತ್ರ ನಾಗರೀಕತೆ ಮತ್ತು ಕೈಉತ್ಪಾದನೆಯ ವೈರುಧ್ಯಗಳು ಮತ್ತು ಸಾಧ್ಯತೆಗಳ ಬಗ್ಗೆ ವಿಚಾರಮಂಥನದಲ್ಲಿ ಗ್ರಾಮಸೇವಾಸಂಘವು ನಿರತವಾಗಿದ್ದ ಸಂದರ್ಭದಲ್ಲಿ ಕೈಉತ್ಪನ್ನಗಳಿಗೆ GST ಕರ ವಿಧಿಸುವ ಕಾನೂನು ಜಾರಿಗೆ ಬಂದಿತು.

ಈಗಾಗಲೇ ಬಲವಾದ ಏಟು ತಿಂದಿದ್ದ ದೇಶದ ಅರ್ಥವ್ಯವಸ್ಥೆಗೆ GSTಯು ಇನ್ನೊಂದು ಆಘಾತವಾಗಿ ಪರಿಣಮಿಸಿತು. ಗ್ರಾಮಸೇವಾಸಂಘವು ಈ ಕರದ ವಿರುದ್ಧ ಹೋರಾಟಕ್ಕೆ ಮುಂದಾಯಿತು. ಈ ಹೋರಾಟವೇ ‘ತಾಯವ್ವ’ನಾಟಕದ ಮತ್ತೊಂದು ಸ್ಪೂರ್ತಿ.

ಕತೆಯ ಮೊದಲಿಗೆ ತಾಯವ್ವ ಒಬ್ಬ ವಿಧವೆ ಹಾಗೂ ಸ್ವಾರ್ಥೀ ಹೆಣ್ಣು. ವೈಯುಕ್ತಿಕವಾಗಿ ಸ್ವಾರ್ಥಿಯಲ್ಲದೇ ಹೋದರೂ ತನ್ನ ಸಂತತಿಯ ಬಗ್ಗೆ ಅತಿ ಹೆಚ್ಚು ಗಮನ ತೋರುವ ಸ್ವಾರ್ಥಿ. ಅವಳ ಮಗ ಕೈಕರ್ಮಿಗಳ ಬಗ್ಗೆ ಕಾಳಜಿಗಳುಳ್ಳ  ಒಬ್ಬ ಕಾರ್ಯಕರ್ತ. ಹೋರಾಟದಲ್ಲಿ ಭಾಗವಹಿಸುತ್ತಿರುವ ಅವನನ್ನು ಕಾಪಾಡಲು ತಾಯವ್ವ ಪ್ರಯತ್ನಿಸುತ್ತಾಳೆ.

ಆದರೆ ಹೋರಾಟದ ಮಾರ್ಗದಲ್ಲಿ ಮಗ ಸಾಯುತ್ತಾನೆ. ಪೊಲೀಸರು ಅವನನ್ನು ಕೊಲ್ಲುತ್ತಾರೆ. ತಾಯವ್ವ ಒಬ್ಬ ಹೋರಾಟಗಾರ್ತಿಯಾಗಿ ಪರಿವರ್ತನೆ ಹೊಂದುತ್ತಾಳೆ. ಒಂದು ಅರ್ಥದಲ್ಲಿ ಪ್ರಕೃತಿ ಮಾತೆಯ ರೀತಿಯಲ್ಲೇ ತಾಯವ್ವಳು ಕೂಡ ಪ್ರತಿಕ್ರಿಯಿಸುತ್ತಾಳೆ.   ಹೀಗಾಗಿ ತಾಯವ್ವ ಕೇವಲ ರೂಪಕವೊಂದೇ ಆಗದೆ, ಗಾಢ ವಾಸ್ತವದ ಸ್ವರೂಪವಾಗುತ್ತಾಳೆ  ಕೂಡ.

ತಾಯವ್ವ ಒಂದು ಸಂಗೀತ ನಾಟಕ ಮಾತ್ರವಲ್ಲ, ಒಂದು ಸಂಭ್ರಮದ ಪ್ರಸಂಗವೂ ಹೌದು. ಸಂಭ್ರಮವೆಂದೊಡನೆ ನೀವು ಸ್ವಾಭಾವಿಕವಾಗಿಯೇ ಕೇಳಬಹುದು, ಈ ಅಂಧಕಾರಮಯ ಸಂದರ್ಭದಲ್ಲಿ ಸಂಭ್ರಮಿಸಲೇನಿದೆ, ಏಕೆ ಸಂಭ್ರಮಿಸಬೇಕು ಎಂದು?

ಸುಮಾರು ನೂರು ವರ್ಷಗಳ ಹಿಂದೆ ಬೇರ್ತೊಲ್ತ್ ಬ್ರೆಕ್ಟ್ ಎಂಬ ಹೆಸರಾಂತ ಜರ್ಮನ್ ನಾಟಕಕಾರನು ಇದೇ ಪ್ರಶ್ನೆಯನ್ನು ಉತ್ತರಿಸಲೆಂದೇ “ತಾಯಿ” ಎಂಬ ತನ್ನ ನಾಟಕದಲ್ಲಿ ತಾಯನ್ನು ಶ್ರಮಜೀವಿಗಳ ಪರವಾಗಿ ದುಡಿಯುವ ಧೀಮಂತ ಹೋರಾಟಗಾರ್ತಿಯಾಗಿ ಚಿತ್ರಿಸುತ್ತಾನೆ.

ಇದೇ ತಾಯಿಯು ಕಾಲಮಾನಕ್ಕೆ ಅನುಗುಣವಾಗಿ ಈಗ ಪ್ರಸನ್ನರ ಕೈಯಲ್ಲಿ ತಾಯವ್ವಳಾಗಿ ಇಂದಿನ ನಾಗರಿಕತೆಯ ಅತಿಮಾನಸಿಕ ವಿಲಾಸಗಳು, ಗೊಡ್ದುತನ, ಶ್ರಮವಿರೋಧಿ ಮನೋಭಾವ ಹಾಗೂ ವಿನಾಶಕಾರೀ ಪ್ರವೃತ್ತಿಗಳೆಲ್ಲವನ್ನೂ ಧೃಡವಾಗಿ ನಿರಾಕರಿಸಿ, ಅವುಗಳಿಗೆ ಪ್ರತಿಯಾದ ಪ್ರಕೃತಿದತ್ತ ಸಹಜತೆ, ಸರಳತೆ ಮತ್ತು ಸಹಬಾಳ್ವೆಗಳನ್ನು ಒಳಗೂಡಿದ ತೃಪ್ತಿಕರ ಜೀವನವನ್ನು ಆನಂದದಿಂದ ಸಂಭ್ರಮಿಸುವ ದಾರಿಯನ್ನು ತೋರುತ್ತಾಳೆ. ಅಷ್ಟೇ ಅಲ್ಲ, ತನ್ನ ಸುತ್ತಲಿನವರನ್ನು ಒಗ್ಗೂಡಿಸಿ ದೈವತ್ವವನ್ನು ಮನವರಿಕೆ ಮಾಡಿಕೊಳ್ಳಬೇಕಾದ ದಾರಿ ಒಂದೇ, ಅದೇನೆಂದರೆ ಕಾಯಕಜೀವಿಗಳನ್ನು ಅನುಸರಿಸುವುದು ಎಂಬ ನಿತ್ಯಸತ್ಯವನ್ನು ಸಾರುತ್ತಾಳೆ.

ಬನ್ನಿ ಈ ನಾಟಕವನ್ನು ನಮ್ಮೊಡನೆ ನೋಡಿ ನೀವೂ ಸಂಭ್ರಮಿಸಿ! ತಾಯವ್ವ ನಾಟಕದ ಎರಡು ಪ್ರದರ್ಶನಗಳನ್ನು ಮಾರ್ಚ್ 18 ರ ಭಾನುವಾರ ರಂಗಶಂಕರದಲ್ಲಿ ಮಧ್ಯಾಹ್ನ 3:30 ಕ್ಕೆ ಹಾಗೂ ಸಂಜೆ 7:30 ಕ್ಕೆ ಆಯೋಜಿಸಲಾಗಿದೆ.

ಪಾತ್ರವರ್ಗ

ತಾಯವ್ವ                                                        M D ಪಲ್ಲವಿ

ಪೋಲಿಸ, ಚೆಲುವ                                       ಚಿಂತನ್ ವಿಕಾಸ್

ಮಲ್ಲಿಗೆ, ಕ್ಷಯ                                ಸಿತಾರ

ವಿದೂಷಕ                                      M C ಆನಂದ್

ಚೆಲುವ                                                            ಶಿವ

ಅಲ್ಲಾ ಬಕ್ಷ್                                   ಶಶಿಕುಮಾರ್

ಕರಿಯ                                             ಪಂಚಾಕ್ಷರಯ್ಯ

ಸಂಗೀತ ಮೇಳದ ನಾಯಕ                          ರಾಮಚಂದ್ರನ್ ಸುಡಲಯಾಂಡಿ

ಮೇಳ                                                ರಾಜ್, ರಂಜಿತ್, ಅನಿಲ್ ಮತ್ತುಮೂನ್

ರಂಗಸಜ್ಜಿಕೆ & ಪರಿಕರ              ಶಶಿಧರ ಅಡಪ

ಬೆಳಕು                                              ರವಿ

ವೇಷಭೂಷ                                   ಶೇಖರ್

ಪ್ರಸಾದನ

ಸಂಗೀತ ಸಂಯೋಜನೆ              M D ಪಲ್ಲವಿ

ಸಹಾಯಕ ನಿರ್ದೇಶನ              ಮಹಾಂತೇಶ, ರಾಗಿಕಣ

ರಚನೆ ಮತ್ತು ನಿರ್ದೇಶನ                             ಪ್ರಸನ್ನ

Leave a Reply