ಅನ್ನವೊಂದು ಮಾತ್ರ ನಮ್ಮನ್ನು ಇನ್ನಿಲ್ಲದಂತೆ ಕಾಡುತ್ತಿತ್ತು..!!

ಅಣ್ಣಪ್ಪ ಅರಬಗಟ್ಟೆ

ಹಬ್ಬ ಬಂತೆಂದರೆ ಖುಷಿಯಾಗುತ್ತಿತ್ತು. ಕಾರಣ ಒಂದೇ ಒಂದು! ಅಂದು ಸಿಹಿ ಮಾಡುತ್ತಾರೆಂಬುದಕ್ಕಿಂತ ಅನ್ನ ಉಣ್ಣಬಹುದೆಂಬ ಸಂಭ್ರಮ. ಇಲ್ಲಿಗೆ ಹದಿನೈದಿಪ್ಪತ್ತು ವರ್ಷಗಳ ಹಿಂದೆ ನಮ್ಮೆಲ್ಲ ಬಯಲುಸೀಮೆ ಮಂದಿಯ ಬಾಲ್ಯವೇ ಅಂಥದ್ದು.

ದಿನ ಬೆಳಗಾದರೆ ಅದೇ ರೊಟ್ಟಿ ಅದಕ್ಕೆ ಮೆಂತೆಚಟ್ನಿ, ಜವಳಿಕಾಯಿ ಪಲ್ಯ, ಬೇಸಿದಚಟ್ನಿ, ಕುಟ್ಹಿಂಡಿ, ಕುರುಶೆಣ್ಣಿ/ಶೇಂಗಾ ಪುಡ್ಚಟ್ನಿ,ಇಲ್ಲ ತಂಬ್ಳೆ ಮುದ್ದೆ, ಉತ್ಗ ಮುದ್ದೆ,  ಹಸೆಂಬ್ರ ಮುದ್ದೆ, ಸೀಪಲ್ಯ ಮುದ್ದೆ, ಒಟ್ಟಿನಲ್ಲಿ ಅಕ್ಸಾಲೇರ ಗೋವಿಂದಪ್ಪರ ಬಂಗಾರದಂಥ ಬಣ್ಣದ ಮಲ್ದಂಡೆ ಬಿಳಿಜೋಳದ ಗುಂಡನೆಯ ಮುದ್ದೆಗೆ ಎಂಥದೋ ಒಂದು ಸಾರಿರುತ್ತಿತ್ತು. ಸಾರೆಂದರೆ ಗಂಗೋದಕದಂತೆ ಹರಿಯುವ ನೀರಲ್ಲ, ಪಾನಿಪುರಿ ಪಾನಕವಲ್ಲ ಅದೇನಿದ್ದರು ಹೋಳಿಗೆ ಸಾರಲ್ಲಿ ಮಾತ್ರ. ಇಲ್ಲಿ ಮುದ್ದೆಗೆ ಮಾಡುತ್ತಿದ್ದ ಸಾರೆಂದರೆ ಈಗಿನವರ ಭಾಷೆಯ ಸಾಂಬಾರೇ ಸೈ.

ಹೇರಳವಾಗಿ ಸಾಂಬಾರುಪುಡಿ ಕುರುಶೆಣ್ಣಿ ಪುಡಿ ಹಾಕಿದ ಸಾರು. ಮುದ್ದೆಯನ್ನು ಮುಳುಗಿಸಿದರೆ ಮೆತ್ತಿಕೊಂಡು ಬರುತ್ತಿತ್ತು, ಸ್ನಾನ ಮಾಡಿಕೊಂಡಲ್ಲ. ಹೀಗೇ ಪ್ರತೀದಿನವೂ ಒಂದಿಲ್ಲೊಂದು ಕುರುಶೆಣ್ಣಿ ಮಚ್ಚೆಗಳು ನಮ್ಮ ಹಲ್ಲುಗಳ ಸಂಧಿಯಲ್ಲಿ ದೃಷ್ಟಿಬೊಟ್ಟಿನಂತೆ ಕೂರುತ್ತಿದ್ದವು. ಏಕದಳ ದ್ವಿದಳ ಹೇರಳವಾಗಿ ಬೆಳೆಯುತ್ತಿದ್ದ ನಮ್ಮೂರಲ್ಲಿ ಯಾವ ಅಡುಗೆಗೂ ಬರವಿರಲಿಲ್ಲ. ಗೋಧಿ ಕಡುಬು ತುಪ್ಪ, ಗಾರಿಕೆ, ಕಿಲಾಸ, ಸಂಡ್ಗೆ ಉಗ್ಗಿ, ಗೋಧಿಯುಗ್ಗಿ, ಮಾಲ್ದಿ, ಶೇಂಗಾವುಂಡೆ, ಕರಿಗಡುಬು, ಕರ್ಜಿಕಾಯಿ, ಹಾಲ್ಹೋಳಿಗೆ, ಕಾಯ್ಹೋಳಿಗೆ, ಹೋಳಿಗೆ ಮುಂತಾದ ಸಿಹಿಗಳನ್ನು ಸವಿದಿದ್ದೆವಾದರು ಅನ್ನವೊಂದು ಮಾತ್ರ ನಮ್ಮನ್ನು ಇನ್ನಿಲ್ಲದಂತೆ ಕಾಡುತ್ತಿತ್ತು.

ನಮ್ಮದು ಅಂಕಲುನಾಡು, ಮಳೆಕಂಡ ಬೇಳೆ, ಖುಷ್ಕಿ! ಗದ್ದೆಯೆಲ್ಲಿಂದ ಬರಬೇಕು? ನ್ಯಾಯಬೆಲೆ ಅಂಗಡಿಯೇ ನಮಗೆ ಅಕ್ಕಿಯ ಮೂಲ. ಸಿಗುವ ಎರಡ್ಮೂರು ಕೆಜಿ ಅಕ್ಕಿಯನ್ನೇ ಯುಗಾದಿ ದೀಪಾವಳಿಗೆಂದು ಕಾಪಿಟ್ಟುಕೊಳ್ಳಲಾಗುತ್ತಿತ್ತು. ಇನ್ನು ಶ್ರಾವಣದ ಶನಿವಾರಗಳಂದು ಭಿಕ್ಷಕ್ಕೆ ಹೋಗುತ್ತಿದ್ದಾಗಲೂ ಹೆಚ್ಚು ಹಿಟ್ಟನ್ನೇ ಹಾಕುತ್ತಿದ್ದರು. ಆದರೆ ನಾನು ಅಕ್ಕಿಯನ್ನು ಮಾತ್ರ ನೀಡಿಸಿಕೊಳ್ಳುವುದೆಂದು ಹಠ ಮಾಡಿ ಇಡೀ ಊರನ್ನು ತಿರುಗುತ್ತಿದ್ದೆ.

‘ರಾಮ್ ರಾಮ್ ಗೋವಿಂದ ಗೋssವಿಂದಾ’ ಎಂದೆನ್ನುವ ಜೊತೆಗೆ ‘ಅಕ್ಕಿ ಮಾತ್ರ! ಹಿಟ್ಟು ನೀಡಿಸಿಕೊಳ್ಳಲ್ಲ’ವೆಂಬ ಉದ್ಗಾರವೂ ಜೊತೆಗೂಡಿ ಅನೇಕರ ಗುಸ್ಗುಸು ಪಿಸ್ಪಿಸ ಕೆಂಗಣ್ಣಿಗೆ ಗುರಿಯಾಗಿದ್ದೂ ಉಂಟು! ಹನುಮಂತ ದೇವರ ಪೂಜಾರಪ್ಪನೆಂಬ ಕಾರಣಕ್ಕೆ ಎರಡು ಕಾಳಾದ್ರೂ ತಂದು ಹಾಕಿ ಸುಮ್ಮನಾಗುತ್ತಿದ್ದರು!! ಆ ಶ್ರಾವಣ ಶನಿವಾರಗಳಂದು ದೇವರಿಗೆ ಎಡೆ ಮಾಡಿಟ್ಟ ಹಾಲು ಅನ್ನಕ್ಕೆ ಒಂಚೂರು ಉಪ್ಪೋ ಉಪ್ಪಿನಕಾಯಿಯನ್ನೋ ಸಕ್ಕರೆಯನ್ನೋ ಹಾಕಿಕೊಂಡು ಸವಿಯುತ್ತಿದ್ದ ಸಂತಸ ಹೇಳತೀರದು. ಎಳೆ ಎಳೆ ಬಿಸಿಲಲ್ಲಿ ಹಬ್ಬದ ಹೊಗೆಯಾಡುತ್ತಿದ್ದ ನಮ್ಮೂರಿನ ಕೇರಿಗಳ ಶ್ರಾವಣದ ನೆನಪೂ ಅದರ ಸವಿಯೂ ಇಂದಿಗೂ ಅಚ್ಚಳಿಯದೆ ಉಳಿದಿದೆ!

ಇನ್ನು ನಮ್ಮೂರಿನಿಂದ ಸುಮಾರು ಏಳೆಂಟು ಕಿಲೋಮೀಟರ್ ದೂರದಲ್ಲಿದ್ದ ಬಿಜೋಗಟ್ಟೆಯ ಮಹೇಶ್ವರೀ ಜಾತ್ರೆಯ ಅನ್ನಸಂತರ್ಪಣೆಯ ಕಿಚಡಿ ಸವಿಯನ್ನು ಈ ಕಪ್ಪಕ್ಷರಗಳಲ್ಲಿ ಹಿಡಿದಿಟ್ಟರೆ ಅವಮಾನವೇ ಸೈ. ಅದನ್ನು ವರ್ಣಿಸಲು ಬಣ್ಣಬಣ್ಣದ ಕುಣಿದಾಡುವ ನಲಿದಾಡುವ ಹಾರಾಡುವ ಅಕ್ಷರಗಳೇ ಬೇಕು! ಹತ್ತಾರು ಗೆಳೆಯರು ಅನೇಕ ಗುಂಪುಗಳಾಗಿ ಆ ಊರಿಗೆ ನಡೆದುಕೊಂಡು ಹೋಗಿ ಬರುತ್ತಿದ್ದ ಸಂಭ್ರಮವೇ ಒಂದು ಹಬ್ಬ. ದೇವರಿಗೆ ಹೊಟ್ಯಾಪುರದ ಸ್ವಾಮೇರಿಗೆ ಒಂದು ನಮಸ್ಕಾರ ಹಾಕಿ ಊಟಕ್ಕೆ ಕುಳಿತೆವೆಂದರೆ ಅದೇ ಒಂದು ಉತ್ಸವ.

ನಮಗದು ಊಟದ ಹಬ್ಬ! ಈಚಲು ಚಾಪೆಯ ಮೇಲೆ ಹರಡಿದ ಹಬೆಯಾಡುತ್ತಿದ್ದ ಅನ್ನ, ಪಕ್ಕದಲೆ ಸಾಲು ಸಾಲು ಬಾಳೆಗೊನೆಗಳು, ಕುಟ್ಟಿಪುಡಿ ಮಾಡಿದ ಬೆಲ್ಲದಚ್ಚುಗಳನ್ನು ಕಿರುಗಣ್ಣಲ್ಲೇ ಕಣ್ತುಂಬಿಕೊಂಡು ನಾ ಮುಂದು ತಾ ಮುಂದು ಎಂಬಂತೆ ಒಬ್ಬರಿಗೊಬ್ಬರ ಮೈ ಕೈ ತಾಗಿಸಿಕೊಂಡು ಒತ್ತೊತ್ತಾಗಿ ಕೂತು ಬಿಡುತ್ತಿದ್ದೆವು! ಅಷ್ಟೊಂದು ಜನ! ಮುತ್ತುಗದ ಊಟದೆಲೆಗಳು ಇರುತ್ತಿದ್ದವಾದರೂ ಅದು ಬಾಳೆತೋಟಗಳಿರುವ ಸಮೃದ್ಧ ಊರಾಗಿತ್ತು. ಎಲೆಯ ಮೇಲೆ ಅನ್ನ, ಅನ್ನಕ್ಕೆ  ಹಾಲು, ಅದರ ಮೇಲೆ ಬೆಲ್ಲ ಬಾಳೆಹಣ್ಣು ಬೀಳುತ್ತಿದ್ದಂತೆ ಪೂಜಾರಪ್ಪನವರೊಬ್ಬರು ಊದಿನಕಡ್ಡಿ ಬೆಳಗಿದರೆಂದ ಕೂಡಲೆ ಚೆನ್ನಾಗಿ ಕಲೆಸುವ ಕೆಲಸ ಶುರು, ತುಪ್ಪ ಬಂದು ಬೀಳುವವರೆಗೂ ಸಮಾಧಾನವಿರುತ್ತಿರಲಿಲ್ಲ.

ಒಬ್ಬ ಅಜ್ಜ ಇದ್ದ ಕಣ್ರೀ, ಆತ ಒಳಲೆ ಹಿಡಿದು ತುಪ್ಪ ತಂದರೆ ಖುಷಿಯೋ ಖುಷಿಯಾಗ್ತಿತ್ತು. ತಪತಪನೆ ಸುರಿಯುತ್ತಿದ್ದ! ಇನ್ನೇನು ಊಟ ಮುಗಿದು ಹಳ್ಳ(ಚಾನಲ್)ದಲ್ಲೊಂದಿಷ್ಟು ಆಟವಾಡಿ ಮತ್ತೆ ಮನೆ ಕಡೆ ಪಯಣ. ನೀರು ಹೆಚ್ಚಿರುವ ಕಡೆ ಅನೇಕರು ಡೈ ಹೊಡೆದು ಈಜಾಡುತ್ತಿದ್ದ ದೃಶ್ಯವೇ ನಮಗೆ ಖುಷಿ ಕೊಡುತ್ತಿತ್ತು. ನಮಗೆಲ್ಲ ಈಜು ಬರುತ್ತಿರಲಿಲ್ಲ. ಸುಮ್ಮನೇ ಕಾಲಾಡಿಸಿಕೊಂಡು ಆಟವಾಡಿ ಸಂಭ್ರಮಿಸುತ್ತಿದ್ದೆವು. ವಾಪಾಸ್ಸಾಗುವಾಗ ಮತ್ತೊಂದು ಜಾತ್ರೆ. ಪರಗಿ ಹಣ್ಣು, ಬಿದಿರು ದಬ್ಬೆಯ ಕೊಳಲು, ತಾಳೆಕೊಬ್ಬರಿ, ಕಬ್ಬು ಒಂದೇ ಎರಡೆ! ನಮ್ಮ ನಾಲಗೆಗಳಲ್ಲಿ ಭೂತ ನರ್ತನ! ಸಾಕು ಸಾಕೆಂಬ ಶಬ್ದವನ್ನೇ ತ್ಯಜಿಸಿ ಬಿಟ್ಟಿದ್ದೆವು!! ಸಾಹಸಿಗಳಂತೂ ಹೆಚ್ಚಿನ ಸಂಖ್ಯೆಯಲ್ಲಿ ಸಂಗ್ರಹಿಸುತ್ತಿದ್ದರು. ನಾವೆಲ್ಲ ಅಲ್ಪಸ್ವಲ್ಪದಲ್ಲೇ ತೃಪ್ತರಾಗುತ್ತಿದ್ದೆವು.

ಅಂತೂ ಒಂದೆರಡು ಕಿತ್ತಾಟ ಜಗಳಗಳೊಂದಿಗೆ ನಮ್ಮ ಪಯಣ ಅಂತ್ಯವಾಗುತ್ತಿತ್ತು! ನಮ್ಮೂರಲ್ಲೂ ಮಹೇಶ್ವರೀಯನ್ನು ಮಾಡುತ್ತಿದ್ದರೂ ಬಿಜೋಗಟ್ಟೆಯ ಮಹೇಶ್ವರಿ ಅವಿಸ್ಮರಣೀಯ! ನಮ್ಮೂರಿನ ಮಹೇಶ್ವರಿಯಲ್ಲಿ ಗಂಗಾಳಕ್ಕೆ ಲೋಟ ಬಡಿದುಕೊಳ್ಳುತ್ತ ಕೇರಿಯಲ್ಲಿ ಓಡಿಕೊಂಡು ಹೋಗುವುದೇ ಹೆಚ್ಚು ಖುಷಿ ಕೊಡುತ್ತಿತ್ತು. ಇಂಥವೆಷ್ಟೋ ಘಟನೆಗಳನ್ನು ನೆನಪಿಸಿಕೊಳ್ಳುತ್ತಿದ್ದರೆ ನಾವು ಅಂದು ಶಾಲೆಗೆಲ್ಲ ಹೋಗುತ್ತಿದ್ದೆವೆ? ಎನಿಸುತ್ತದೆ. ನಮಗೆಲ್ಲಾ ಅಂದು ನಮ್ಮ ಬಾಲ್ಯದ ಒಂದು ಪುಟ್ಟ ಭಾಗವಾಗಿ ಶಾಲೆಯಿತ್ತೇ ಹೊರತು, ಈಗಿನಂತೆ ಬಾಲ್ಯವೆಲ್ಲವೂ ಶಾಲೆಯಾಗಿರಲಿಲ್ಲ!

ಗದ್ದೆ ಸೀಮೆಯ ನಮ್ಮ ಅನೇಕ ನೆಂಟರ ಮನೆಗೆ ಅನ್ನದ ಆಸೆಗಾಗಿಯೇ ಹೋಗುತ್ತಿದ್ದದ್ದುಂಟು. ಈ ಅನ್ನವೆಂಬುದು ನಮಗೆ ಬಾಲ್ಯದಲ್ಲಿ ಬ್ರಹ್ಮವೇ ಆಗಿತ್ತು. ಅದರ ಆಸೆಗಾಗಿ ಅದನ್ನು ಎಲ್ಲದರೊಂದಿಗೂ ನೆಂಚಿಕೊಂಡು ತಿಂದದ್ದಿದೆ. ಉಪ್ಪಿನಕಾಯಿ ರಸ, ತುಪ್ಪ ಕಾಯಿಸಿದ ತಳದ ಕರಿ, ಹುಳಿ ಮೊಸರು, ಪುಡ್ಚಟ್ನಿ, ಮೆಂತೆಚಟ್ನಿಯೊಂದಿಗೆಲ್ಲ ಸವಿದದ್ದುಂಟು. ಒಟ್ಟಿನಲ್ಲಿ ಅನ್ನಕ್ಕೆ ಸಾಂಬಾರಿಲ್ಲವೆಂಬ ಕಾರಣಕ್ಕೆ ತಿರಸ್ಕರಿಸುವ ಮಾತೇ ಇರುತ್ತಿರಲಿಲ್ಲ.

ಅವ್ವ ಯಾವುದಾರೂ ಕೂಲಿಕೆಲಸ ಅಥವಾ ತವರೂರಿಗೆ ವಾರಗಟ್ಟಲೆ ಹೋದಳೆಂದರೆ ನಾಲ್ಕಾರು ದಿನಕ್ಕಾಗುವಷ್ಟು ಪುಡ್ಚಟ್ನಿ ಚಪಾತಿ/ರೊಟ್ಟಿ, ಚಿತ್ರಾನ್ನದ ಹುಳಿ ಮಾಡಿಟ್ಟು ಹೋಗುವುದು ಸಾಮಾನ್ಯವಾಗಿರುತ್ತಿತ್ತು. ಕೂಡಿಟ್ಟ ಸೊಸೈಟಿಯ ಅಕ್ಕಿಯೆಲ್ಲ ಈಗ ಹೊರಬರುತ್ತಿದ್ದವು. ಅನ್ನದ ಪಾತ್ರೆಯಲ್ಲಿ ಅಕ್ಕಿ ಹಾಕಿ ನೀರಿನ ಅಳತೆಯನ್ನು ಬೆರಳಿಟ್ಟು ನೋಡಿ ಸೂರ್ಯಕಾಂತಿ ಕಡ್ಡಿಯನ್ನು ಧಗಧಗ ಉರಿಸಿದರೆ ಮುಗೀತು. ತಳ ಸೀದಿದ್ದರೂ ಒಂದಗುಳು ಬಿಡದೆ ಹುಳಿ ಹಾಕಿ ಕಲೆಸಿ ತಿನ್ನುತ್ತಿದ್ದದ್ದೊಂದೇ ಕೆಲಸ. ರೊಟ್ಟಿ ಚಟ್ನಿ ಪಾಪ ಅನಾಥವಾಗಿ ಬಿದ್ದಿರುತ್ತಿದ್ದವು!

ಅಂದು ನಮಗೆ ಅಮೃತವಾಗಿದ್ದ ಅನ್ನವನ್ನು ನಾವಿಂದು ಬೇರೆಯದೇ ರೀತಿಯಲ್ಲಿ ಗ್ರಹಿಸುವಂತಾಗಿದೆ! ಅಂದಿನ ಕಡುಕ್ಲು ರೊಟ್ಟಿ, ಬಳುಕ್ಲು ಮುದ್ದೆಗಳೇ ನಮಗಿಂದು ಗಗನಕುಸುಮವೆನಿಸಿ ಬಿಟ್ಟಿವೆ!!

 

~

6 Responses

 1. Shashikumar Upadhyaya says:

  ಮನೋಜ್ಞವಾಗಿ ವಿವರಿಸಿದ್ದೀರ

 2. Santosh Tamraparni says:

  ತುಂಬಾ ಚೆನ್ನಾಗಿ ಬರೆದಿದ್ದೀರಿ.

 3. nutana doshetty says:

  Annappa avara Anna Puraana sogasagide. Baalyavannu maguchi haakidantaytu nodi.. Thank you

 4. Shashikumar Upadhyaya says:

  ಮನೋಜ್ಞವಾಗಿ ವಿವರಿಸಿದ್ದೀರ

 5. Shashikumar Upadhyaya says:

  ಮನೋಜ್ಞವಾಗಿ ವ್ಯಕ್ತ ಪಡಿಸಿದ್ದೀರ…

 6. ನಾಗರಾಜ್ ಡಿ ಜಿ ಹರ್ತಿಕೋಟೆ says:

  ಅಕ್ಷರಲೋಕದಲ್ಲಿ ಅನ್ನ….ಸೂಪರ್ಬ್ ಸರ್

Leave a Reply

%d bloggers like this: