ನನ್ನೊಳಗೆ ಒಂದಲ್ಲ, ನೂರು ಚೇಳುಗಳನ್ನು ಬಿಟ್ಟಿದೆ..!

ಜ್ಯೋತಿ ಅನಂತಸುಬ್ಬರಾವ್

“ಸುಗಂಧದ ಸೀಮೆಯಾಚೆ” ಹೆಸರೇ ವಿಶೇಷವಾಗಿದೆ, ಸುವಾಸನೆಭರಿತವಾಗಿದೆ.

ಇದು ರಂಗಕರ್ಮಿ ಬಿ.ಎಂ.ಗಿರಿರಾಜ್ ಅವರು ರಚಿಸಿ, ನಿರ್ದೇಶಿಸಿರುವ ನಾಟಕದ ಶೀರ್ಷಿಕೆ.

“ಮತಾಂಧ ದುಷ್ಟಶಕ್ತಿಗಳು ಮತ್ತು ಪ್ರಭುತ್ವದ ದಣಿಗಳು” ಒಂದಾದಾಗ ಮನುಷ್ಯತ್ವ ನಾಶವಾಗಿ, ಜನಸಾಮಾನ್ಯರ ಬದುಕು ನರಕವಾಗುವುದನ್ನು ಬಿಂಬಿಸುವ ಈ ನಾಟಕ ಅತ್ಯಂತ ಪ್ರಸ್ತುತವಾಗಿದೆ.

ಇಡೀ ನಾಟಕ ಅತ್ತರ್ ಅಥವಾ ಸುವಾಸನೆಯ ದ್ರವ್ಯದ ಜೊತೆಗೆ ಮನುಷ್ಯನ ಒಳಗಿನ ಸಕಾರಾತ್ಮಕ ಗುಣಗಳ ಪರಿಮಳ ಬೀರುತ್ತಲೇ, ಅದೇ ಮನುಷ್ಯ ಮತಧರ್ಮದ ಅಫೀಮಿನ ನಶೆಯಲ್ಲಿ ಹೊರಸೂಸುವ ದುರ್ನಾತದ ಭೀಕರ ಪರಿಚಯವನ್ನೂ ಮಾಡುತ್ತದೆ.

“ಸುಗಂಧದ ಸೀಮೆಯಾಚೆ” ಮನುಷ್ಯರ ನಡುವಿನ ಸಂಬಂಧಗಳ, ಪ್ರೀತಿ ಪ್ರಣಯಗಳ, ಸ್ನೇಹ ವಿಶ್ವಾಸಗಳ ದ್ಯೋತಕವಾಗುತ್ತಾ ದ್ವೇಷ, ಸಿಟ್ಟು, ಹಿಂಸೆ, ಅಸಹನೆಗಳನ್ನು ಮಾನವನ ಎದೆಯಿಂದಾಚೆ ದೂಡಬೇಕೆನ್ನುವ ಆಶಯವನ್ನು ವೀಕ್ಷಕರಿಗೆ ಪರಿಣಾಮಕಾರಿಯಾಗಿ ತಲುಪಿಸುವಲ್ಲಿ ಯಶಸ್ವಿಯಾಗುತ್ತದೆ.

ಹೆಣ್ಣಿನ ತುಮುಲಗಳು, ಅವಳೊಳಗಿನ ಒಲವಿನ ಸೆಲೆ, ಕರುಳಬಳ್ಳಿಯ ಸಂಬಂಧಗಳು ಎಲ್ಲಾ ಸೀಮೆಗಳನ್ನೂ ಮೀರಿದ್ದು, ಅಂತಹ ಸುವಾಸನೆಯನ್ನು ಈ ಪ್ರಯೋಗ ಬೀರಿದೆ…

ಹಲವು ಸನ್ನಿವೇಶಗಳಲ್ಲಿ ನಾನು ಕಂಬನಿ ಮಿಡಿದೆನೋ ಅಥವಾ ಕಣ್ಣೀರು ತನ್ನಿಂದ ತಾನೇ ಹರಿದು ಬಂದಿತೋ ನಾನು ಸ್ಪಷ್ಟವಾಗಿ ಹೇಳಲಾರೆ.

ತಾಯಿಯ ಪಾತ್ರವನ್ನು ಸಮಾಜಕ್ಕೆ ಆದರ್ಶನೀಯವಾಗಿ ಕಟ್ಟಿಕೊಟ್ಟಿರುವ ನಿರ್ದೇಶಕರಿಗೆ ಅಭಿನಂದನೆಗಳು. ಮತಾಂಧತೆಗೆ ಹೇಗೆ ಹೆಣ್ಣು ಮೊದಲಿಗಳಾಗಿ ಮತ್ತು ಕ್ರೂರ ರೀತಿಯಲ್ಲಿ ಬಲಿಯಾಗುತ್ತಾಳೆ ಎಂಬುದನ್ನೂ ಪ್ರಸಂಗಗಳ ಮೂಲಕ ಹೇಳುವ ರೀತಿ ಅತ್ಯಂತ ಪರಿಣಾಮಕಾರಿ.

ಎರಡು ಗಂಟೆಗಳ ಕಾಲ “ತನ್ನ ಸೀಮೆಯೊಳಗೆ” ವೀಕ್ಷಕರನ್ನು ಸದ್ದಿಲ್ಲದೆ ಹಿಡಿದಿಟ್ಟುಕೊಂಡ ಈ ರಂಗಪ್ರಯೋಗ ಸಂಕೇತಗಳನ್ನು ಬಳಸುತ್ತಾ, ಎದೆಗೆ ಇರಿಯುವ, ನಾಟುವ, ಮೊನಚಾದ ಸಂಭಾಷಣೆಗಳಿಂದ ತುಂಬಿದೆ. ಅಲ್ಲಲ್ಲಿ ಪ್ರಣಯ ಪ್ರಸಂಗಗಳು ಮನುಷ್ಯಸಹಜ ಭಾವನೆಗಳನ್ನು ಮೂಡಿಸಿದ್ದರೆ ತಪ್ಪೇನಲ್ಲ! ಆಗೊಮ್ಮೆ ಈಗೊಮ್ಮೆ “ನಾಗರಿಕ” ಸಮಾಜ “ಥೂ” ಎನ್ನುವಂತಹ ಪದಪ್ರಯೋಗಗಳೂ ಕಿವಿಗೆ ಬಿದ್ದರೆ ಅಚ್ಚರಿಯೇನಿಲ್ಲ… ಅದೂ ನಾಟಕದ ಭಾಗವೇ…

ಪ್ರಸ್ತುತ ಸಾಮಾಜಿಕ-ರಾಜಕೀಯ-ಸಾಂಸ್ಕೃತಿಕ ಸಂದರ್ಭದ ಭಾಗವನ್ನು ರಂಗದ ಮೇಲೆ ತಂದು, ಒಂದು ಬಗೆಯ ಮತೀಯ ಮೂಲಭೂತವಾದದ ಅಪಾಯಗಳನ್ನು ಮನದಟ್ಟು ಮಾಡಿಸುವಲ್ಲಿ ನಾಟಕಕಾರ ಯಶಸ್ವಿಯಾಗಿದ್ದಾರೆ. ಇದು ಎಲ್ಲಾ ಮತಧರ್ಮಗಳ ಮೂಲಭೂತವಾದಕ್ಕೂ ಅನ್ವಯವಾಗುತ್ತದೆ ಎಂಬುದನ್ನು ಪ್ರಜ್ಞಾವಂತರು ಅರ್ಥೈಸಿಕೊಳ್ಳಬಲ್ಲರು.

ಗಹನವಾದ ವಿಚಾರವನ್ನು ಅಲ್ಲಲ್ಲಿ ಹಾಸ್ಯಮಯವಾಗಿ, ಸಂಗೀತಮಯವಾಗಿ, ಹಿನ್ನೆಲೆ ಚಿತ್ರಗಳ, ನೃತ್ಯಗಳ ಮೂಲಕ ವೀಕ್ಷಕರಿಗೆ ಸಮಯ ಕಳೆದದ್ದೇ ತಿಳಿಯದಂತೆ ರಂಗಪ್ರಯೋಗಕ್ಕಿಳಿಸುವುದು ಒಂದು ವಿಶೇಷ ಕಲೆಯೇ. ಇದರಲ್ಲಿ ಅದ್ಭುತವಾದ ಯಶಸ್ಸು ಸಾಧಿಸಿದ್ದಾರೆ ಗಿರಿರಾಜ್ ಅವರು. ಎಲ್ಲಾ ನಟನಟಿಯರೂ ಅಮೋಘವಾಗಿ ಅಭಿನಯಿಸಿದ್ದಾರೆ. ಸಂಗೀತ-ನೃತ್ಯ- ಬೆಳಕು, ಇತ್ಯಾದಿಗಳ ಬಗ್ಗೆ ಎರಡು ಮಾತಾಡುವಂತಿಲ್ಲ… ಬಹುಶಃ ಈ ನಾಟಕದ ಬಗ್ಗೆಯೇ ಒಂದು ಮಹಾಪ್ರಬಂಧವನ್ನೂ ಬರೆಯಲು ಸಾಧ್ಯವಿದೆ!

“ಸುಗಂಧದ ಸೀಮೆಯಾಚೆಗೆ” ನನ್ನೊಳಗೂ ಒಂದಲ್ಲ, ನೂರು ಚೇಳುಗಳನ್ನು ಬಿಟ್ಟಿದೆ… ಅವು ಕುಟುಕುತ್ತಲೇ ಇವೆ… ವಿವಿಧ ವಾಸನೆಗಳುಳ್ಳ ಅತ್ತರ್ ಚಿಮುಕಿಸುತ್ತಾ…. ಸೀಮೆಗಳಾಚೆಗೆ ನನ್ನೊಳಗಿನ ನನ್ನನ್ನು ಕರೆದೊಯ್ದು…. ನನ್ನ ಜೀವಂತಿಕೆಗೆ ಸಾಕ್ಷಿ ಎಂಬಂತಿದೆ!

ನೀವೂ ಈ ಚೇಳುಗಳನ್ನು, ಅತ್ತರ್ ಸಿಂಪಡನೆಯನ್ನೂ, ಸೀಮೆಗಳಾಚೆಗಿನ ಬದುಕನ್ನು ಕಾಣಬೇಕೆನ್ನುವುದಾದರೆ…. ಬಿ.ಎಂ.ಗಿರಿರಾಜ್ ಅವರ ನಿರ್ದೇಶನದ “ಸುಗಂಧದ ಸೀಮೆಯಾಚೆ” ರಂಗ ಪ್ರಯೋಗಕ್ಕೆ ಸಾಕ್ಷಿಯಾಗಿ… ನೋಡಲೇಬೇಕಾದ ನಾಟಕ!

1 comment

  1. ನಾಟಕವನ್ನು ಅನಾವರಣ ಗೊಳಿಸಿದ ಪರಿ ಸೊಗಸಾಗಿದೆ. ಭಿನ್ನ ವಾಗಿದೆ

Leave a Reply