ಚಪ್ಪಲಿಗಳೂ ಮಾತಾಡ್ತಾವೆ ಎಂದಾಗ ತಟ್ಟನೆ ಈ ಪುಸ್ತಕ ನೆನಪಾಯ್ತು..

ಒಂದೂರಲ್ಲಿ ಒಬ್ಬ ಬೆಕ್ಕು ಕಾಯುವವನಿದ್ದ..

ಒಂದು ದಿನ ಮಗ ಕಥೆ  ಹೇಳೋದಕ್ಕೆ ಪ್ರಾರಂಭಿಸಿದಾಗ ನನಗೆ ನಗು ತಡೆಯಲಾಗಲಿಲ್ಲ. ಪ್ರತಿ ದಿನ ರಾತ್ರಿ ಮಲಗುವಾಗ ಒಂದು ಕಥೆ ಕೇಳಿಯೇ ಮಲಗುವ  ಅಭ್ಯಾಸ ನನ್ನ ಮಕ್ಕಳಿಗೆ. ನಾನು ಚಿಕ್ಕವಳಿರುವಾಗ ನನ್ನ ಅಪ್ಪನೂ ನನಗೆ ಅದೇ ರೂಢಿ ಮಾಡಿಸಿದ್ದರು. ನಂತರ ಇವತ್ತು ನಿನ್ನ ಪಾಳಿ ನೀನೇ ಒಂದು ಕಥೆ ಹೇಳು ಎಂದು ನನ್ನ ಕಲ್ಪನೆಗೆ ರೆಕ್ಕೆಪುಕ್ಕ  ಒದಗಿಸುತ್ತಿದ್ದರು. ಅದಕ್ಕೇ ನಾನೂ ಮಗನಿಗೆ “ಇವತ್ತು ಕಥೆ  ಹೇಳುವುದು ನಿನ್ನ ಪಾಳಿ” ಎಂದುಬಿಟ್ಟಿದ್ದೆ. ಹೀಗಾಗಿ ಬೆಕ್ಕು ಕಾಯುವವನ ಕಥೆ ಪ್ರಾರಂಭವಾಗಿತ್ತು.

ಬೆಕ್ಕು ಕಾಯುವವನಿಗೆ ಬೆಕ್ಕು ನೆಲ ಗೆಬರಿ ಅಲ್ಲಿ ಚಿನ್ನ ಇರುವುನ್ನು ತೋರಿಸಿಕೊಟ್ಟು ಆತ ದೊಡ್ಡ ರಾಜ ಆಗುವ ಹಾಗೆ ಮಾಡಿಬಿಟ್ಟಿತ್ತು.  ಕೊನೆಗೆ ರಾಜನ ಶತ್ರುಗಳನ್ನೆಲ್ಲ ಹುಡುಕಿಕೊಂಡು ಹೋಗಿ ಅವರನ್ನೆಲ್ಲ ಪರಚಿ, ಕಣ್ಣು ಕಿತ್ತು ಇವನ ಸೆರೆಯಾಳಾಗಿಸಿ, ಇವನು ಇಡೀ ಪ್ರಪಂಚವನ್ನೇ ಆಳುವಂತೆ ಮಾಡಿತ್ತು ಎನ್ನುವಲ್ಲಿಗೆ ಸುಮಾರು ಅರ್ಧ ತಾಸಿನ ಕಥೆ ಮುಗಿದು ನಗುವನ್ನು ಅಡಗಿಸಿಟ್ಟುಕೊಂಡು ನಾನು ಹೈರಾಣಾಗುವಂತೆ ಮಾಡಿಬಿಟ್ಟಿತ್ತು.

ಸುಮಾರು ಐದು ವರ್ಷಗಳ ಹಿಂದೆ ಆತ ಇನ್ನೂ ಒಂದನೇ ತರಗತಿಗೂ ಹೋಗುವುದಕ್ಕಿಂತ ಮುಂಚಿನ ಈ ಘಟನೆ ನೆನಪಾಗಿದ್ದು ರಾಜೇಶ ಕೆ ಶೆಟ್ಟಿ ಯವರ ‘ಡೈರಿಯ ಕಥೆಗಳು’ ಓದುವಾಗ. ಅದ್ಭುತ ಕಲ್ಪನೆಯ ಅವ, ಅವಳು ಮತ್ತು ಆಗಸ ಎನ್ನುವ ಕಥೆಯನ್ನು ಓದುತ್ತಿದ್ದರೆ ಮನಸ್ಸು ಹೊಸ ಕಲ್ಪನೆಗೆ ಮಡುವಾಗುತ್ತದೆ.

ಅವಳು ಚಂದದ ಆಕಾಶ ನೀಲಿ ಬಣ್ಣದ ಸ್ವೆಟರ್ ಹೊಲಿತಿದ್ದಳಂತೆ, ಆತ ಹರಿದ ಆಕಾಶಕ್ಕೆ ಹೊಲಿಗೆ ಹಾಕಿ ರಿಪೇರಿ ಮಾಡುತ್ತಿದ್ದನಂತೆ. ಆಕಾಶ ಹರಿದದ್ದೂ ಗೊತ್ತಾಗದಷ್ಟು ಚಂದದ ಹೊಲಿಗೆ ಹಾಕಿ ಮೇಲೊಂದು ಕಸೂತಿ ಕೆಲಸವನ್ನೂ ಮಾಡಿದಾತನಿಗೆ ಕೆಳಗಿಂದ ಕಳಿಸಿದ ಸ್ವೆಟರ್ ನ ಒಂದು ಕೈಯ್ಯಿನ ಆಕಾಶ ನೀಲಿ ಬಣ್ಣದ ಉಲ್ಲನ್ ದಾರವನ್ನೂ ಎಳೆದೆಳೆದು ಹೊಲಿಗೆ ಹಾಕಿದ್ದು ಗೊತ್ತೇ ಆಗಲಿಲ್ಲವಂತೆ.  ಆಕಾಶಕ್ಕೆ ಹಾಕಿದ್ದ ಏಣಿಯಿಂದ ಕೆಳಗಿಳಿದು ಬಂದಾಗ ತಾನು ಕಳಿಸಿದ ಸ್ವೇಟರ್ ನ ಕೈ ಇಲ್ಲದಿರುವುದನ್ನು ಕಂಡು ಸಿಟ್ಟಿಗೆದ್ದ ಆಕೆ ಹೊರಟೇ ಹೋದಳಂತೆ. ಇವನ ಸಹಾಯಕ್ಕೆ ಬಂದ ಹಕ್ಕಿಯನ್ನು ಕವಣೆ ಬೀಸಿ ಕೊಂದರಂತೆ, ಮೋಡಗಳ ನೀರು ಬಸಿದು ಹಾಕಿದರಂತೆ. ಆಕಾಶಕ್ಕೆ ಹರಿದದ್ದೂ ಗೊತ್ತಾಗದಂತೆ ತೇಪೆ ಹಾಕಿದವನಿಗೆ ಪ್ರೇಮಕ್ಕೆ ತೇಪೆ ಹಾಕಲಾಗಲಿಲ್ಲವಂತೆ.

ಇದು ನನ್ನ ಕಥಾ ಸಂಕಲನ ಎಂದು ರಾಜೇಶ ಡೈರಿಯ ಕಥೆಗಳನ್ನು ಕೈಗಿಟ್ಟಾಗ  “ಇಷ್ಟು ಸಣ್ಣ ಪುಸ್ತಕದಲ್ಲಿ ಮೂವತ್ಮೂರು ಕಥೆಗಳೇ” ಎಂದು ಹುಬ್ಬೇರಿಸಿದ್ದೆ. “ಡೈರಿಯ ಒಂದೇ ಒಂದು ಪುಟದ ಚೌಕಟ್ಟಿನಲ್ಲಿ ಸೇರುವ ಕಥೆಗಳು ಇವು” ಗಡಸು ಧ್ವನಿಯಲ್ಲಿ ಹೇಳಿದಾಗ ನನ್ನ ಪುಸ್ತಕ ತಿರುವಿಕೆಯನ್ನೂ ಮರೆತು ಅವರನ್ನೇ ದಿಟ್ಟಿಸಿದ್ದೆ. ಆ ಧ್ವನಿ ನನಗೆ ತೀರಾ ಪರಿಚಿತವೆನ್ನಿಸಿತ್ತು. ಮೈಸೂರಿನ ದಸರಾ ಕವಿಗೋಷ್ಟಿಯ ಸಂದರ್ಭದಲ್ಲಿ ಜೊತೆಗಿದ್ದ ಯಾರೋ “ಹೇಯ್, ನಿಂಗೆ ರಾಜೇಶ ಗೊತ್ತಲ್ವಾ?” ಎಂದು ಪರಿಚಯಿಸಿ, ಇಲ್ಲ ಎನ್ನುವ ಮೊದಲೇ ಅವರನ್ನು ನನ್ನ ಬಳಿ ಬಿಟ್ಟು ಹೋಗಿಬಿಟ್ಟಿದ್ದರು.

ತೀರಾ ಮುಜುಗರಕ್ಕೊಳಗಾದಂತೆ ಕಂಡ  ಅವರು ಏನು ಮಾಡಲೂ ತೋಚದೇ ಪುಸ್ತಕವನ್ನು ನನ್ನ ಕೈಗಿಟ್ಟು ನಿರಾಳವಾಗಿದ್ದರು. ಅದರ ಮಧ್ಯೆ ಮಾತಾಡಿ ಸಿಕ್ಕಿಹಾಕಿಕೊಂಡೆನೇನೋ ಎಂಬ ಮುಜುಗರ ಅವರ ಮುಖದಲ್ಲಿ. “ಈ ಧ್ವನಿಯನ್ನು ಎಲ್ಲೋ ಕೇಳಿದ್ದೀನಲ್ಲ? ತುಂಬಾ ಸಲ…”  ನಾನು ಏನೇ ಅನ್ನಿಸಿದರೂ ಅದನ್ನು ಏಕಾಏಕಿ ನೇರವಾಗಿ ಹೇಳಿಬಿಡುವ ಎಡವಟ್ಟು ಎಂಬ ಹೆಸರನ್ನು ಪಡೆದವಳಾದ್ದರಿಂದ  ಅವರ ಮುಖದ ಮೇಲಿನ ಮುಜುಗರವನ್ನು ನೋಡಿಯೂ ಮಾತನ್ನು ಕಂಟ್ರೋಲ್  ಮಾಡಲಾಗಿರಲಿಲ್ಲ. “ಇರಬಹುದು, ಹೀಗೇ ಎಲ್ಲೋ…” ಆತ ನುಣುಚಿಕೊಳ್ಳಲು ಯತ್ನಿಸಿದಷ್ಟೂ ನನಗೆ ಕುತೂಹಲ. ಆದರೂ ಅಂದು ಮಾತು ನಿಲ್ಲಿಸಿದ್ದು ಅವರ ಪುಣ್ಯವೇ ಇರಬಹುದು. ಕೆಲವು ದಿನಗಳ ನಂತರ ಟಿವಿ ನೋಡುವಾಗ ಮತ್ತದೇ ಧ್ವನಿ. ತಕ್ಷಣ ನೆನಪಾಯ್ತು. ಇದು ಆ ದಿನ ಪುಸ್ತಕ ಕೊಟ್ಟ ಶೆಟ್ಟರ ಧ್ವನಿ ಅಂತಾ.

ನನ್ನ ಸೋದರ ಮಾವ ಒಬ್ಬರಿದ್ದರು. ಅವರ ಜೊತೆ ಹತ್ತು ನಿಮಿಷ ಮಾತನಾಡಿದರೆ ಸಾಕು ನೂರು ಗಾದೆ ಮಾತುಗಳನ್ನು  ಕೇಳಬಹುದಿತ್ತು. ಎಷ್ಟೊ ಸಲ ನಾನು ರೋಸಿ ಹೋಗಿ, “ಏನ್ ಮಾವ ಇದು, ಮಾತಿಗೆ ಎರಡು ಗಾದೇ ಮಾತು ಹೇಳ್ತಿಯಲ್ಲ? ಅಂತಾ ಮುಖ ಸಿಂಡರಿಸಿಕೊಂಡರೆ, ಅದಕ್ಕೂ ಒಂದು ಗಾದೆ ಮಾತು ಹೇಳುತ್ತಿದ್ದರು. ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎನ್ನುತ್ತ ನಗುತ್ತಿದ್ದರು.

ಗಂಗಾವಳಿ ನದಿ ತೀರದ ಬೆಟ್ಟದ ಸೀಮೆಯ ಶಿರಗುಂಜಿ ಎಂಬ ಹಳ್ಳಿ ನನ್ನ ಅಜ್ಜಿಮನೆ. ಚಂದದ ಮನೆ. ಆದರೂ ಬಚ್ಚಲು, ಶೌಚಾಲಯ ಇಲ್ಲದ ಕಾರಣ  ಪ್ರಾಥಮಿಕ ಶಾಲೆಯ ಕೊನೆಯ ಹಂತಕ್ಕೆ  ಬಂದಂತೆ ಅಲ್ಲಿಗೆ ಹೋಗುವುದಕ್ಕೆ ಮುಜುಗರವೆನ್ನಿಸತೊಡಗಿದಾಗ ‘ತಂಗಿ ಮಗಳು ಬರ್ತಾಳೆ ಎಂದೇ ತೆಂಗಿನ ಮರದ ಬುಡಕ್ಕೆ ತೆಂಗಿನ ನೆಣೆದ ಗರಿಗಳಿಂದ ಕಟ್ಟಿದ ಬಚ್ಚಲನ್ನು ದುರಸ್ತಿ ಮಾಡುತ್ತಿದ್ದರು. ಅದಕ್ಕೂ “ಪ್ಯಾಟಿ ಹೆಣ್ಣು ಬಂದರೆ…” ಅಂತಾ ಮತ್ತೊಂದು ಗಾದೆ ಹೇಳುತ್ತಿದ್ದರು

ನಾನು ಕಾಲೇಜು ಓದುವಾಗ ಒಮ್ಮೆ  ಪಾಳು ಬಿದ್ದ ಗದ್ದೆಯನ್ನು ನೋಡಿ, ಎಷ್ಟೊಂದು ಗಾದೆ ಹೇಳ್ತೀಯಲ್ಲ ಮಾವಾ, ಆದರೆ ಅಜ್ಜನ ಪ್ರೀತಿಯ ಗದ್ದೆಯನ್ನೇಕೆ ಪಾಳು ಬಿಟ್ಟಿದ್ದೀಯಾ? ಅಪ್ಪ ನೆಟ್ಟ ಆಲದ ಮರ  ಅಂತಾನಾ? ಎಂದುಬಿಟ್ಟಿದ್ದೆ. ನನ್ನ ಮಾತಿನ ಮುಂದಿನ ಪರಿಣಾಮಗಳ ಬಗ್ಗೆ ಯೋಚಿಸದೇ, ಮಾವ ಮುಂದಿನ ವರ್ಷ ಆ ಗದ್ದೆಯ ಸಾಗುವಳಿ ಮಾಡಿದ್ದರು. ‘ತಂಗಿ ಮಗಳು ಹೇಳಿದ್ದಾಳೆ’ ಎನ್ನುತ್ತ. ಡೈರಿಯ ಕಥೆಗಳನ್ನು ಓದುವಾಗ ಗಾದೆಗಳು ಎನ್ನುವ ಒಂದು ಕಥೆ ಇಂತಹ ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎನ್ನುವ ಮಾತನ್ನು ಹೇಳುತ್ತ ಊರಿಗೆ ಬಂದವಳು ಬಾವಿಗೆ ಬಂದದ್ದೂ ಅರಿವಾಗದಂತೆ ನಿದ್ರೆಗೆ ಜಾರಿದಾತನ ದುರಾದೃಷ್ಟವನ್ನು ಪ್ರಸ್ತಾಪಿಸುವುದು ತೀರಾ ಕುತೂಹಲಕರವಾಗಿದೆ.

ನಾನು ಪ್ರಾಥಮಿಕ ಶಾಲೆಗೆ ಹೋಗುವಾಗ ಶಾಲೆಯ ಸಮೀಪದ ಊರಲ್ಲಿ ಒಂದು ಶ್ರೀಮಂತ ಹೆಗಡೆಯವರ ಮನೆಯಿತ್ತು. ಅವರ ಮನೆಯ ವೈಭೋಗದ ಬಗ್ಗೆ ಎಂತೆಂಥಹ ಮಾತುಗಳು ಆ ಕಾಲದಲ್ಲಿ ನಮಗೆ ಕೇಳಿ ಬರುತ್ತಿತ್ತೆಂದರೆ ಅವರ  ಒಬ್ಬಳೇ ಒಬ್ಬಳು ಮಗಳಿಗೆ ಬೆಳ್ಳಿಯ ತಟ್ಟೆಯಲ್ಲಿ ಊಟ ಮಾಡಿಸುತ್ತಾರೆ ಎಂಬೆಲ್ಲ ಮಾತುಕಥೆಗಳು ನಮ್ಮ ನಡುವೆ ಹರಿದಾಡುತ್ತಿತ್ತು. ಅವಳ ಪಕ್ಕದ ಮನೆಯಲ್ಲೇ ಇರುವ ನನ್ನ ಗೆಳತಿಗೂ ಆ ಮನೆಯ ಒಳಗು ಹೇಗಿದೆ ಎಂಬುದು ಗೊತ್ತಿರಲಿಲ್ಲ. ಇದೆಲ್ಲಕಿಂತ ಅಚ್ಚರಿ ಎಂದರೆ  ನಾನಿದ್ದ ಊರಿನ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಲ್ಲಿರುವ ನಮ್ಮ ಕ್ಲಾಸಿಗೆ ಬರುವ ಎಲ್ಲರ ಅಪ್ಪ ಅಮ್ಮಂದಿರನ್ನು ನೋಡಿದ್ದರೂ ಇವಳ ಅಮ್ಮನನ್ನು ನೋಡಿರಲೇ ಇಲ್ಲ.

ಶಾಲೆಯಲ್ಲಿ ಎಲ್ಲರೊಡನೆ ಪ್ರೆಂಡ್ಲಿಯಾಗಿರುವ ಅವಳು ನಮ್ಮಂತೆ ಸ್ನೇಹಿತರ ಮನೆಗೆ ಹೋಗುವುದಾಗಲಿ ಅಥವಾ  ಯಾರನ್ನಾದರೂ ತನ್ನ ಮನೆಗೇ ಕರೆಯುವುದನ್ನಾಗಲಿ ಎಂದೂ ಮಾಡುತ್ತಿರಲಿಲ್ಲ. ಒಂದು ದಿನ ಕುತೂಹಲ ತಡೆಯಲಾಗದೇ ಆಕೆಯನ್ನೇ ಕೇಳಿದ್ದೆ, ‘ನೀನು ಬೆಳ್ಳಿ ತಟ್ಟೆಲಿ ಊಟ  ಮಾಡ್ತೀಯಾ?’ ಆಕೆ ಕಿಸಕ್ಕನೆ ನಕ್ಕಿದ್ದಳು. ‘ನಿಮ್ಮ ಮನೆಯ ಒಂದು ರೂಂನ್ನು ತಾಜ್ ಮಹಲ್ ಗೆ ಬಳಸಿದ ಸಂಗಮವರಿ ಕಲ್ಲು ಹಾಕಿದ್ದಾರ?’ ಆಕೆ ಏನೂ ಉತ್ತರಿಸದೇ ಸುಮ್ಮನೆ ಹೊರಟು ಹೋಗಿದ್ದಳು. ಅದಾದ  ಒಂದು ವಾರಕ್ಕೇ ಆಕೆಗೆ ಅನಾರೋಗ್ಯವಾಗಿತ್ತು. ಅವಳನ್ನು ಮನೆಗೆ ಕಳುಹಿಸಿ ಬರಲು ಕ್ಲಾಸ್ ಟೀಚರ್ ಆಗಿದ್ದ ನನ್ನ ಅಮ್ಮ ನನ್ನನ್ನು ಹಾಗು ಅವಳ ಪಕ್ಕದ ಮನೆಯ ನನ್ನ ಆತ್ಮೀಯ ಗೆಳತಿಯನ್ನು ಕಳುಹಿಸಿದ್ದರು.

‘ಒಳಗೆ ಹೋಗಬೇಡ, ಅವಳಪ್ಪನಿಗೆ ಇಷ್ಟ ಆಗೋದಿಲ್ಲ ಎಂದು ಗೆಳತಿ ಹೆದರಿಕೆಯ ಧ್ವನಿಯಲ್ಲಿ ಎಚ್ಚರಿಸುತ್ತಿದ್ದರೂ ಸೀದಾ ಒಳಗೆ ನುಗ್ಗಿದ್ದೆ. ನಾವಂದುಕೊಂಡಂತೆ ಎರಡೂ ಕೈನ ನಾಲ್ಕು ನಾಲ್ಕು ಬೆರಳಿಗೆ ಉಂಗುರ ಧರಿಸಿರುವುದು ಬಿಡಿ,  ಕೈಗೆ ವಜ್ರದ ಹರಳು ಜೋಡಿಸಿರುವ ವಾಚು ಕಟ್ಟಿಕೊಳ್ಳುವುದು ಬಿಡಿ,  ಮಾಸಲು ನೈಟಿಯೊಂದರಲ್ಲಿದ್ದ ಅವಳಮ್ಮ ನನ್ನನ್ನು ಅಚ್ಚರಿಯಿಂದ ನೋಡಿದ್ದರು. ಮಗಳಿಗೆ ಅನಾರೋಗ್ಯ ಎಂದು ಮನೆಯವರೆಗೆ ಕರೆದುಕೊಂಡು ಬಂದ ಅವಳ ಗೆಳತಿಯರನ್ನು ಕರೆದು ಕುಳ್ಳರಿಸುವ ಮಾತು ಬಿಡಿ, ಒಂದು ಮಾತೂ ಆಡದ ಅವರ ಶ್ರೀಮಂತಿಕೆ ಆಗ ಬೆತ್ತಲಾಗಿ ಹೋಗಿತ್ತು.

ಇಲ್ಲಿಯೂ ಮೊದಲ ಕಥೆಯಲ್ಲಿಯೇ ಕಥೆಗಾರ ಮುವತ್ತು ಲಕ್ಷದ ಟಾಯ್ಲೆಟ್ ಬೆತ್ತಲಾಗಿ ಊರಿಗೆ ತೆರೆದುಕೊಂಡಿದ್ದನ್ನು ಹೇಳುವಾಗ ನಮ್ಮ ಜೀವನದಲ್ಲಿ ಬೆತ್ತಲಾದ ಇಂತಹ ಹಲವಾರು ಜನರು, ಘಟನೆಗಳು ಕಣ್ಣೆದುರು ಬರದೆ ಅಡಗಿಕೊಳ್ಳಲು ಹೇಗೆ ಸಾದ್ಯ?

ಮೈಸೂರಿನಿಂದ ಬರುವಷ್ಟರಲ್ಲಿ ಒಮ್ಮೆ ಪುಸ್ತಕವನ್ನು ಓದಾಗಿಬಿಟ್ಟಿತ್ತು. ಇದೆಂತಹ ಕಥೆನಪ್ಪ ಎಂದು ಎಷ್ಟೋ ಕಥೆಗಳಿಗೆ ಸಣ್ಣಗೆ ಮೂತಿ ತಿರುವಿದ್ದೂ ಇದೆ. ಆದರೆ ಮೊನ್ನೆ ಯಾರೋ ಚಪ್ಪಲಿಗಳೂ ಮಾತಾಡ್ತಾವೆ ಗೊತ್ತ? ಎಂದಾಗ ತಟ್ಟನೆ ಈ ಪುಸ್ತಕ ನೆನಪಾಯ್ತು. ಮತ್ತೊಮ್ಮೆ ಇಡೀ ಪುಸ್ತಕದ ಮೂವತ್ಮೂರು ಕಥೆಗಳನ್ನೂ ಓದಿದಾಗ ನಾನು ಮೊದಲ ಸಲ ಓದಿದ್ದಕ್ಕೂ ಈಗ ಓದ್ತಿರೋದಕ್ಕೂ ಏನೋ ಅಂತರ.

ನಾಯಿ ಬೂಟು ಕದ್ಕೊಂಡು ಹೋಗುವಷ್ಟರಲ್ಲಿ ರೊಟ್ಟಿ ಕಂಡು ಬೂಟನ್ನು ಬಿಟ್ಟು ಹೋಯ್ತಂತೆ ಆದರೆ ಅಲ್ಲಿ ರೊಟ್ಟಿಯೂ ಇರಲಿಲ್ಲ ಕೊನೆಗೆ ಬೂಟೂ ಸಿಕ್ಕದೇ ದೊಡ್ಡ ಮನೆಯ ಆಳು ಬೆನ್ನಿಗೆರಡು ಬಿಗಿದದ್ದು ಓದಿದಾಗ  ಮೊನ್ನೆ ಕೇರಳದಲ್ಲಿ ಹೊಟ್ಟೆಗೆ ಅನ್ನ ಇಲ್ಲ ಎಂದು ಬೊಗಸೆ ಅಕ್ಕಿ ಕದ್ದು  ಹಿಗ್ಗಾಮುಗ್ಗ ಹೊಡೆಸಿಕೊಂಡು, ಅವರ ಸೆಲ್ಫಿಗೆ ಆಹಾರವಾದ ಮಧು ನೆನಪು ಬೇಡವೆಂದರೂ ಕಾಡಲಾರಂಭಿಸಿತು. ಚಪ್ಪಲಿ, ಸವಾಲು,  ಚಂದಿರ ಕಥೆಗಳೂ ಹೀಗೇ ಎಂದೋ ಕಾಡಿದ ನೆನಪನ್ನು ಎದುರಿಗಿಟ್ಟು ತಾವು ತಣ್ಣಗೆ ಕುಳಿತುಬಿಡುವಾಗ ಕಥೆ ಕಥೆಯಾಗಿ ಕಾಡುತ್ತದೆಯೋ ಅಥವಾ ನಮ್ಮದೇ ನೆನಪಾಗಿ ಕಾಡುತ್ತದೆಯೋ ಎಂಬುದೇ ಅರ್ಥವಾಗದ ಸ್ಥಿತಿ.

ಅದರಲ್ಲೂ ಅಮ್ಮ, ಚಪ್ಪಲಿ, ಪರಿಮಳ, ಜೋಂಪು ಕಥೆಗಳು ಆಳದಲ್ಲೆಲ್ಲೋ ಬೇರೆಯದ್ದೇ ಧ್ವನಿ ಹೊರಡಿಸುವುದನ್ನು ಗಮನಿಸಬಹುದು. ಎಲ್ಲಿ ನೋಡಿದರೂ ಅತ್ಯಾಚಾರ ಮುಗಿಲು ಮುಟ್ಟಿರುವಾಗ, ಹೆಣ್ಣು ಎಂಬುದೇ ಒಂದು ಶೋಕಿಗಿಡುವ ವಸ್ತು ಎಂಬಂತೆ ಭಾಸವಾಗುವಾಗ ಇಂತಹ ಅತ್ಯಾಚಾರದ ಮುಂದಿನ ಪರಿಣಾಮಗಳು ಭೀತಿ ಹುಟ್ಟಿಸುತ್ತವೆ. ಮೊಟ್ಟೆಯೊಡೆದು ಹೊರಬರುವ ಮಗುವಿಗೆ ಅಮ್ಮನ ಮುಖ ನೋಡಲಾಗುವುದೇ ಇಲ್ಲ. ಯಾಕೆಂದರೆ ಹನ್ನೊಂದೇ ವರ್ಷ ವಯಸ್ಸಿನ ಅಮ್ಮನ ಉಸಿರು ಇಂಗಿ ಹೋಗಿತ್ತು ಎನ್ನುವಲ್ಲಿನ ವಿಷಾದ ಎದೆ ಹಿಂಡುತ್ತದೆ. ಈ ಸಾಲಿಗೆ ಚಪ್ಪಲಿಯ ಕಥೆಯೂ ಸೇರುತ್ತದೆ.

ತನ್ನೊಡೆಯನ್ನು ಹೊತ್ತು ತಿರುಗುವ ಚಪ್ಪಲಿಗೆ ಆತ ಮಾಡುವ ಅನೈತಿಕ ಕೆಲಸದ ಬಗ್ಗೆ ಹೇವರಿಕೆಯನ್ನು ಕಂಡಾಗ ಕಥೆಗಾರ ತನ್ನ ಕಥೆಗಳಲ್ಲಿ  ಚಪ್ಪಲಿಯಂತಹ ಚಪ್ಪಲಿಯನ್ನೂ ಯಶಸ್ವಿ ಪಾತ್ರವನ್ನಾಗಿಸಿ ದುಡಿಸಿಕೊಳ್ಳುವುದು ವೃತ್ತಿಪರ ನೈಪುಣ್ಯತೆಯಂತೆ ಗೋಚರವಾಗುತ್ತದೆ.  ಇಂತಹ ಕಥೆಗಳ ಸಾಲಿನಲ್ಲಿ ವ್ಯಕ್ತಿಯೊಬ್ಬನ ಹುಟ್ಟಿನಿಂದ ಆತನ ಉನ್ನತಿ, ಅದೋಗತಿಯನ್ನು ಚೆನ್ನಾಗಿ ಬಲ್ಲ ಕಿಡಕಿಯ ಕಥೆಯೂ ಒಂದು. ಹೂವ ನಗುವ ಸಮಯವನ್ನು ಹುಡುಕಿ ಹೊರಟವ ನಗು ಕಳೆದುಕೊಮಡು ಹುಚ್ಚನಾಗುವ ಸೇಡು ಕಥೆಯೂ ಮೇಲ್ನೋಟಕ್ಕೆ ಹೇಳಬೇಕಾದುದನ್ನಷ್ಟೇ ಹೇಳಿ ತೆಪ್ಪಗಿರುವ ಕಥೆ ಎಂದು ಅನ್ನಿಸುವುದಿಲ್ಲ

ಈ ಎರಡನೆಯ ಸಲದ  ಓದು ಹೇಳುವಾಗ  ಕನಸುಗಾರನ ಡೈರಿ ಎಂಬ ಮೂರು ಭಾಗದಲ್ಲಿರುವ ಮೂರು ಕಥೆಗಳು ನಮ್ಮ ಸಮಾಜವನ್ನು ರೂಪಕವಾಗಿ ಬಿಂಬಿಸುತ್ತಿದೆ ಅನ್ನಿಸಿದ್ದು ಸುಳ್ಳಲ್ಲ. ಕನಸುಗಾರನಿಂದ ಆರಂಭವಾದ ಈ ಕಥೆಗಳ ಸಿರಿಸ್ ನಲ್ಲಿ ರಾಜ ದರ್ಬಾರನ್ನು ಪ್ರಶ್ನಿಸುವಂತೆ ಊಳಿಡುವ ನಾಯಿ, ಪ್ರಭುತ್ವದ ವಿರುದ್ಧ ದನಿ ಎತ್ತಿ, ವ್ಯವಸ್ಥೆಯ ಬಗ್ಗೆ ವ್ಯಂಗ್ಯವಾಡಿ, ಆಕ್ರೋಶವನ್ನು ವ್ಯಕ್ತಪಡಿಸಿದ ಅದನ್ನು ಹಿಡಿಯಲು ಸಿದ್ಧಗೊಂಡ ದಂಡು, ರಥ, ಆನೆ, ಅಶ್ವದಳ ಮತ್ತು ಕಾಲುದಳದ ರಣೋತ್ಸವ, ನೆಪಕ್ಕೊಂದು ವಿಚಾರಣೆ, ಸಾವಿರ ಸುಳ್ಳು ಸಾಕ್ಷಿಗಳು, ಶೂಲಕ್ಕೇರಿಸಿ, ಫಿರಂಗಿ ಬಾಯಿಗೆ ಕಟ್ಟಿ ಆಗಸಕ್ಕೆ ಸಿಡಿಸಿ, ವಿದೇಶಿ ಬೇಹುಗಾರನೆಂದು ಬಿಂಬಿಸಿ ದನಿ ಅಡಗಿಸುವುದನ್ನು ಒಮ್ಮೆ ಸಮಕಾಲೀನದೊಡನೆ ಹೋಲಿಸಿ ನೋಡಿದರೆ ಕಥೆಗಾರನೊಳಗೆ ಅಡಗಿರುವ ಮೊನಚು ಅರ್ಥವಾಗುತ್ತದೆ.

ಅದೆಷ್ಟೋ ದಿನಗಳ ಬಳಿಕ ಕಸದ ತೊಟ್ಟಿಯ ಬಳಿ ತುತ್ತಿಗಾಗಿ ಕಾದಾಡುತ್ತಿರುವ ನಾಯಿ ಮರಿಗಳಲ್ಲಿ ಅದೇನೋ ಬದಲಾವಣೆ, ಅದಕ್ಕೆ ತಕ್ಕಂತೆ ಕನಸುಗಾರನ ಡೈರಿ ಭಾಗ-2 ರಲ್ಲಿ ಕಥೆ ಮತ್ತೆ ತಿರುವು ಪಡೆದುಕೊಳ್ಳುತ್ತದೆ. ಯಾರೋ ರಾಜ ಪ್ರಭುತ್ವದ ವಿರುದ್ಧ ಗೋಡೆಗೆಲ್ಲ ಕರಪತ್ರ  ಅಂಟಿಸಿದ್ದಾರೆ. ಎರಡು ದಿನ ಕತ್ತೆಗಳಿಗೆಲ್ಲ ರಜೆ ನೀಡಿ ಪೋಸ್ಟರ್ ಗಳನ್ನು ತಿನ್ನಲು ಬಿಡಲಾಗಿದೆ. ಪ್ರಭುತ್ವದ ವಿರುದ್ಧ ಘೋಷಣೆ ಇರುವ ಪೋಸ್ಟರ್ ಗಳನ್ನು ತಿಂದ ಕತ್ತೆಗಳು ತಿರುಗಿ ಬಿದ್ದಿವೆ.

ಕೊನೆಗೆ ಊರು ಕೇರಿಯಲ್ಲೆಲ್ಲ ಹಾಹಾಕಾರವಾದರೂ ರಾಜ ಅದರ ಬಗ್ಗೆ ಕಿಂಚಿತ್ತೂ ಗಮನ ನೀಡದೇ ಇದ್ದವ ಕೊನೆಗೆ ತನ್ನದೇ ಸ್ವಂತ ವಿಷಯಕ್ಕೆ ತಡೆಯುಂಟಾದಾಗ ಎಚ್ಚೆತ್ತು ಕೊಂಡಿದ್ದಾನೆ. ಅಲ್ಲಿಗೆ ಮತ್ತೆ ಧಮನಕಾರಿ ನೀತಿಯ ಬದಲಾಗಿ ಬೇರೆ ತಂತ್ರ ಬಳಸಿದ ಪ್ರಭುತ್ವ ಸಾಮ, ದಂಡವನ್ನು ಬಿಟ್ಟು ಬೇಧವನ್ನು ಅಸ್ತ್ರವಾಗಿ ಬಳಸಿ ತನ್ನ ರಾಜತ್ವವನ್ನು ಉಳಿಸಿಕೊಳ್ಳಲು ಯಶಸ್ವಿಯಾಗಿದ್ದನ್ನು ಓದುವಾಗ ಹಣೆ, ಎದೆಗೆ ಗುಂಡು ತಿಂದು ನೆಲಕ್ಕುರುಳಿದ ಚೇತನಗಳು ಬೇಡವೆಂದರೂ ಕಾಡುತ್ತವೆ.

ತೀರಾ ಸರಳವಾದ, ಅಷ್ಟೇ ತಳಮಟ್ಟದ ವಸ್ತು, ವಿಷಯಗಳನ್ನಿಟ್ಟುಕೊಂಡು  ಕಥೆಯ ಹಂದರವನ್ನು ರೂಪಿಸುವ ರಾಜೇಶಗೆ ಹೇಳಬೇಕಾದದ್ದು ಬೇರೆಯದ್ದೇ ಏನೋ ಇದೆ ಎಂದೆನಿಸುವುದು ಗೋಡೆಗಳು ಕಥೆಯನ್ನು ಓದಿದಾಗ. ಶೇಕ್ಸಪಿಯರ್ ನ ಫಿರಾಮಸ್ ಆಂಡ್ ಥಿಸ್ಬೆ ಕಥೆಯನ್ನು ದಟ್ಟವಾಗಿ ಹೋಲುವ ಈ ಕಥೆಯಲ್ಲಿ ಪ್ರೀತಿಸಿದವಳನ್ನೂ, ಅವಳನ್ನು ಮದುವೆ ಆದವನನ್ನು ಕೊಂದು ತಾನೂ ಗುಂಡು ಹಾರಿಸಿಕೊಂಡ ವಿರಹಿ ಪ್ರೇಮಿಯೊಬ್ಬನನ್ನು ಚಿತ್ರಿಸುವುದು ಇವರ ಉದ್ದೇಶವಲ್ಲ ಎಂಬುದು ಮೊದಲ ಓದಿನಲ್ಲಿಯೇ ಅರ್ಥವಾಗುತ್ತದೆ.

ನಾನು ಬಿ.ಎಡ್  ಮಾಡುತ್ತಿರುವಾಗ ನನಗೆ ಇಂಗ್ಲೀಷ್ ಅಧ್ಯಾಪಕರಾಗಿದ್ದ  ಕಥೆಗಾರ ಶ್ರೀಧರ ಬಳಗಾರ ಯಾವಾಗಲೂ  Reading between the lines  ಬಗ್ಗೆ ಒತ್ತಿ ಒತ್ತಿ ಹೇಳುತ್ತಿದ್ದರು. ಅದರಲ್ಲೂ ನನಗೆ ಹೀಗೆ ಓದಲೇ ಬೇಕೆಂಬ ಒತ್ತಾಯಭರಿತ ತಾಕೀತು.  ನನ್ನ ಪುಸ್ತಕ ಓದುವ ವೇಗವನ್ನು ಕಂಡಾಗಲೆಲ್ಲ  “ಸಿಕ್ಕಿದ ಪುಸ್ತಕವನ್ನು ಮೇಲ್ನೋಟಕ್ಕೆ ತಿರುವಿ ಹಾಕೋದನ್ನು ಅಭ್ಯಾಸ ಮಾಡ್ಕೋ ಬೇಡ. ಸರಿಯಾಗಿ ಓದು’” ಎನ್ನುವುದನ್ನು ತಮ್ಮ ಎಂದಿನ ಮೆಲು ಮಾತಿನಲ್ಲೇ ಆದರೂ ಗದರಿಸುವಂತೆ ಇಂಗ್ಲೀಷ್ ಮೆಥಡ್ ಆರಿಸಿಕೊಂಡ ಮೂರೋ- ನಾಲ್ಕು ವಿದ್ಯಾರ್ಥಿಗಳು ಅವರದ್ದೇ ರೂಂನಲ್ಲಿ ಕುಳಿತು ಪಾಠ ಕೇಳುವಾಗಲೆಲ್ಲ ಒತ್ತಾಯಿಸುತ್ತಿದ್ದರು.

ರಾಜೇಶ ಶೆಟ್ಟಿಯವರ ಕಥೆಗಳನ್ನು ಓದಿದಾಗ ನನಗೆ ಅನ್ನಿಸಿದ್ದೂ ಇದೇ. ಕೇವಲ ಕಥೆಗಳನ್ನು ಶಬ್ಧಶಃ ಓದಿಕೊಂಡರೆ ಆಗಲಿಕ್ಕಿಲ್ಲ, ಆ ಸಾಲು ಸಾಲುಗಳ ನಡುವೆಯೂ ಇಣುಕಿ ನೋಡಬೇಕು ಎಂಬುದು. ಬದುಕಿನ ಸಣ್ಣ ಸಣ್ಣ ವಿಷಯಗಳಲ್ಲೂ ಇಂತಹುದ್ದೊಂದು ಹೇಳಿಯೂ ಹೇಳಲಾಗದಂತಹ ಕಥೆಗಳಿರುತ್ತವೆಯಲ್ಲ ಎಂಬ ಅಚ್ಚರಿ ಜೊತೆಗೆ ಇಷ್ಟೊಂದು ಸಣ್ಣ ಸಣ್ಣ ವಿಷಯಗಳೂ  ಕಥೆಗಾರನ ಮೋಡಿಯಲ್ಲಿ ಮೌಲ್ಡ್ ಆಗಿವೆಯಲ್ಲ ಎಂಬುದು. ಹಾಗಂತ ಇಲ್ಲಿರುವ ಮೂವತ್ಮೂರು ಕಥೆಗಳೂ  ಅದ್ಭುತವೇನಲ್ಲ. ಮಾಮೂಲಿ ಕಥೆಗಳೂ ಇವೆಯಾದರೂ ಒಂದು ಓದಿಗೆ ಈ ಸಂಕಲನ ನಿರಾಸೆ ಹುಟ್ಟಿಸುವುದಿಲ್ಲ.

ಇಷ್ಟಾದರೂ ನನಗೆ ಈ ಕಥೆಗಳು ಹಾಗೂ ಕಥೆಗಾರನೊಟ್ಟಿಗೆ ಸಣ್ಣ ತಕರಾರಿದೆ. ಹೆಣ್ತನದ ಕಥೆಗಳು ಸಾಕಷ್ಟಿದ್ದರೂ ಕೆಲವೊಮ್ಮೆ ಅವರಿಗರಿವಿಲ್ಲದೇ ಅಲ್ಲಲ್ಲಿ ನುಸುಳಿ ಬಿಡುವ  ಗಂಡ್ತನದ ಹೇಳಿಕೆಗಳು ಕಡಿಮೆಯಾಗಲೇಬೇಕು. ಇದರ ಜೊತೆಗೆ ಕಥೆ ಹೇಳುವ ರೀತಿ ಮತ್ತು ಕಥೆಯ ನಡುನಡುವೆ ಬೇಡವೆಂದರೂ ನುಗ್ಗಿಬಿಡುವ ಕೆಲವು ಶಬ್ಧಗಳು ಉದಾ: ಹಗ್ಗ ಕಡಿಯುವುದು, ಮಟಾಶ್ , ಮೂಳೆ ಕಡಿತಿದ್ದ ಮುಂತಾದವು  ಕ್ರೈಂ ಸ್ಟೋರಿಯನ್ನು ನೆನಪಿಸುತ್ತದೆ ಎಂದು ನಾನು ಎಷ್ಟೇ ಹೇಳಿದರೂ ತೇಲುಗಣ್ಣನ್ನು ಮತ್ತಿಷ್ಟು ತೇಲಿಸಿ  ನಕ್ಕು ಬಿಡುವಾತನ ಬಳಿ ಜಗಳವಾಡುವುದಾದರೂ ಹೇಗೆ ಎಂದು ಯೋಚಿಸುತ್ತಿದ್ದೇನೆ,

ಆದರೂ ಒಳಗಿನಿಂದ ಒಡೆದರೆ ಅದು ಹುಟ್ಟು, ಅದೇ ಹೊರಗಿನಿಂದ ಒಡೆದರೆ ಅದು ಸಾವು ಎನ್ನುವಂತಹ ಚಂದ ಚಂದದ ವಾಕ್ಯಗಳ ಗುಚ್ಛಗಳನ್ನು ನೀಡಿ ಓದುಗರನ್ನು ವಿಚಿತ್ರ ಫುಳಕಕ್ಕೆ ಈಡು ಮಾಡಿದ್ದಕ್ಕೆ ನಾನು ಅಭಿನಂದಿಸಲೇಬೇಕು.

6 Responses

 1. Noorulla Thyamagondlu says:

  ನೈಸ್ ಸಿರಿಜಿ

 2. DS Kore says:

  ಕಥೆ ತುಂಬಾ ಚೆನ್ನಾಗಿದೆ ಮೇಡಂ…

 3. Sujatha lakshmipura says:

  ತುಂಬಾ ಚನ್ನಾಗಿ ಮೂಡಿದಂತಿದೆ ರಾಜೇಶ್ ಅವರ ಡೈರಿ ಕಥೆಗಳು. ಪುಟ್ಟ ಪುಟ್ಟ ಕಾಲ್ಪನಿಕ ಕಥೆಗಳಲ್ಲೇ ಗಹನವಾದದ್ದನ್ನು , ಒಳಹುಗಳನ್ನು ಅಡಗಿಸಿರುವುದನ್ನು ಹುಡುಕಿದ ನಿಮ್ಮ ಓದು ಮತ್ತು ಸೂಕ್ಷ್ಮ ಗ್ರಹಿಕೆ ಆ ಕತೆಗಳ ಓದಿನ ಸಾರ್ಥಕತೆಯನ್ನು ತಿಳಿಸುತ್ತದೆ. ಸಮಕಾಲೀನ ಸಂಗತಿಗಳು,ಪ್ರತಿಭಟನೆಯನ್ನು ಕತೆಯ ಸಣ್ಣ ಪಾತ್ರಗಳ ಮೂಲಕವೇ ಕತೆಯ ನೆಪದಲ್ಲಿ ಹೆಣೆದ ರಾಜೇಶ್ ಅವರಿಗೂ.. ಆ ಕತೆಗಳ ಓದಿನ ಮೂಲಕ ಸಾಲು ಸಾಲುಗಳ ನಡುವೆ ಕಾಣಬೇಕಾದ. ಸಂಗತಿಗಳನ್ನು ಕಾಣಿಸಿದ , ಕತೆಗಳ ಒಳಾರ್ಥ,ಜತೆಗೆ ವಿಮರ್ಶೆ ಯನ್ನೂ ತಮ್ಮ ಅನುಭವದ ಆತ್ಮೀಯ ಶೈಲಿಯಲ್ಲೇ ಬಡಬಡಿಸಿದ ಶ್ರೀದೇವಿ ಅವರಿಗೂ ಧನ್ಯವಾದಗಳು..
  ಬುಕೆ ಟಾಕ್ ಹೆಸರಲ್ಲಿ ಬರುತ್ತಿರುವ ಪುಸ್ರಕ ಪರಿಚಯದ ಈ ಅಂಕಣ ಬರಹಗಳು ಕನ್ನಡ ಬರವಣಿಗೆಯನ್ನು ವಿಸ್ತರಿಸುತ್ತಿವೆ.

 4. Shreedevi keremane says:

  Thank you

 5. Lalita N Patil says:

  ಸಾಲು ಸಾಲುಗಳಲ್ಲಿ ಇಣುಕಿ ನೋಡಿ ಆಸ್ವಾದಿಸಿ ವಿಮರ್ಶಿಸುವ ,ಜೊತೆಗೆ ಬಾಲ್ಯದ ಹಂದರ ಹೆಣೆಯುತ್ತ ಹೋಗುವ ಬರವಣಿಗೆಯ ಶೈಲಿ ಚಂದ .ಓದುವುದು ನಮಗೆ ಖುಷಿ ಕೊಡುತ್ತದೆ ಶ್ರೀದೇವಿ

Leave a Reply

%d bloggers like this: