ಕರುಳ ಹಸಿವ ಚೀರಾಟದ ಲಾಲಿಗೆ..

ನಾದ ಮಣಿನಾಲ್ಕೂರು

ಮುಂಜಾವಾನೇ ಎದ್ದು ಸೌದೆ ಕಡ್ದು ತಲೆಹೊರೆ ಹೊತ್ತು ಊರಿಗೆ ತಂದಿದ್ದಳು ಅವ್ವ. ಊರ ದಾರಿಗಳಲ್ಲಿ ‘ಸೋದೆ ಸೋದೆ …’ ಅಂತ ಗಂಟಲು ಹರ್ಕೊಂಡು ಮಧ್ಯಾಹ್ನ ದಾಟೋವರೆಗೆ ಓಡಾಡಿದ್ರೂ ನಯಾಪೈಸೆಯ ವ್ಯಾಪಾರ ಆಗ್ಲಿಲ್ಲ.
ಜನರೆಲ್ಲಾ ಯುಗಾದಿ ಪಾಯಸ, ಊಟಗಳಲ್ಲೇ ನಿರತರಾಗಿದ್ರು.
ಕತ್ತಲವರೆಗೂ ಪಾದಗಳನ್ನು ಸವೆಸಿದ್ದೇ ಬಂತು. ಹೊತ್ತ ಸೌದೆಯ ಭಾರ ಹಸಿವನ್ನು ಮರೆಸಿತ್ತು. ಭಾರ ಪಾದಗಳನ್ನೂರುತ್ತಾ ಹಟ್ಟಿ ಕಡೆ ಬಂದವಳ ಕಂಗಳಲ್ಲಿ ನೋವಿರಲಿಲ್ಲ; ಆಶಾವಾದವಿತ್ತು.

ಮಕ್ಕಳನ್ನು ಕರೆದು ‘ಎಲ್ರಿಗೂ ಇವತ್ತೇ ಯುಗಾದಿಯಂತೆ ಕಂದಗಳ್ರಾ, ನಾಳೆ ಸೌದೆ ವ್ಯಾಪಾರ ಆದ್ರೆ ನಾವೂ ಗಂಜಿ ಮಾಡ್ಕೊಂಡು ಕುಡಿಯೋಣ’ ಅನ್ನುತ್ತಲೇ ಕತ್ತಲಲ್ಲೇ ಕಣ್ ಒರೆಸ್ಕೊಂಡ್ಳು ಅವ್ವ.

ಕರುಳ ಹಸಿವ ಚೀರಾಟದ ಲಾಲಿಗೆ ಎಲ್ಲರಿಗೂ ನಿದ್ದೆ ಬಂದಿತು.

Leave a Reply