ಆ ನಕ್ಷತ್ರಗಳು ಮಿಂಚದೇ ಮಾಯವಾದವು..

ಮಂಗಳಾ ಬಿ

 

ಇಷ್ಟವಿರುವೆ ಈಗಲೂ-
ಮೊದಲಿನಂತೆ ಕವಿತೆಗಳನು ಬರೆಯದಿದ್ದರೂ,
ಆಗಿನಂತೆ ಮಾತುಗಳ ಆಡದಿದ್ದರೂ,
ಅಂದಿನಷ್ಟು ಹುಚ್ಚುಕನಸ ಹೇಳದಿದ್ದರೂ..

ಇಷ್ಟವಿರುವೆ ಈಗಲೂ-
ಮೊದಲಿನಂತೆ ಕಣ್ಣನೋಟ ಚೆಲ್ಲದಿದ್ದರೂ,
ಆಗಿನಂತೆ ತುಂಟನಗುವ ಬೀರದಿದ್ದರೂ,
ಅಂದಿನಷ್ಟು ಕೇಳುವ ಕಿವಿಗಳಿಲ್ಲದಿದ್ದರೂ,

ಇಷ್ಟವಿರುವೆ ಈಗಲೂ-
ಜೊತೆಗಿರಬೇಕು ಎಂಬ ತುಡಿತ ಕಾಣೆಯಾದರೂ,
ತುಂಬಾ  ಇಷ್ಟವಿರುವೆ ಈಗಲೂ, ಆಗಲೂ, ಯಾವಾಗಲೂ…

ನಿನ್ನ ಬಿಗಿಯ ಹಿಡಿತ ಸಡಿಲಿಸಿದೆ ದೂರವಿರುವ ಭಾವವ,, ನಿನ್ನ ಸನಿಹ ಮರೆಸಿದೆ ಓಡುತಿಹುವ ಸಮಯವ,
ನಿನ್ನ ಮುತ್ತು ಕಾಡುತಿದೆ ನನ್ನೀ ಏಕಾಂತವ,
ನಿನ್ನ ತುಂಟ ಕೈ ಬಿಡಿಸಿದೆ ಕನವರಿಸುವ ಚಿತ್ತಾರವ,
ನಿನ್ನ ಉಸಿರು ಉಸುರಿದೆ ಶೃಂಗಾರದ ಆಲಾಪವ,
ಮೈಯ ತೀಡೋ ಮೆಲುದನಿ ತರಿಸಿದೆ ರೋಮಾಂಚನವ…

ಇಂದು ಕೂಡ ಆ ಬಾನ ಬೆಳದಿಂಗಳು ವ್ಯರ್ಥವಾಯಿತು,
ಸೇರಿದೆರಡು ಮನಸುಗಳ ಜೊತೆ
ಬೆಸೆದ ಕೈ ಬೆರಳುಗಳ ನೋಡಬೇಕಿದ್ದ ಆ ಬೆಳದಿಂಗಳು ಮಂಕಾಯ್ತು..
ಪಿಸುಮಾತುಗಳ ಆಲಾಪವ ಕೇಳಬೇಕಿದ್ದ
ಆ ನಕ್ಷತ್ರಗಳು ಮಿಂಚದೇ ಮಾಯವಾದವು..
ಇವುಗಳ ತೃಪ್ತಿಪಡಿಸಬೇಕಿದ್ದ ಜೋಡಿಗಳು
ಒಮ್ಮೆ ಕೂಡ ಅವಕಾಶ ಒದಗಿಸಿಲ್ಲ
ಕಾತರಿಸುವ ಬೆಳದಿಂಗಳಿಗೆ  ಆ ನಕ್ಷತ್ರಗಳಿಗೆ..

3 comments

Leave a Reply