ಕನ್ನಡಿ ಮುಂದೆ ಎಂಥಾ ಸಾಬಸ್ಥ ಮನುಷ್ಯನೂ ಮಂಗ ಆಗ್ತಾನೆ..

ಕೇಶವ ರೆಡ್ಡಿ ಹಂದ್ರಾಳ

ಇತ್ತೀಚೆಗೆ ಮಲಗುವ ಕೋಣೆಗೆ ಮಾಡಿಸಿದ ಡ್ರೆಸ್ಸಿಂಗ್ ಟೇಬಲ್ಲಿನಲ್ಲಿ ನಿಲುವುಗನ್ನಡಿಯನ್ನು ಕೂಡ ಜೋಡಿಸಲಾಗಿದೆ.

ರೂಮಿನಲ್ಲಿ ಓಡಾಡುವಾಗ, ಮಲಗುವಾಗ ಈ ಕನ್ನಡಿಯಂತೂ ವಿಪರೀತವಾಗಿ ಸೆಳೆಯುತ್ತದೆ. ಕ್ಷಣ ಕಾಲವಾದರೂ ಅದರ ಮುಂದೆ ನಿಂತು ನನ್ನನ್ನು ನಾನು ತಲಾಶು ಮಾಡಿಕೊಳ್ಳುವ ಕಾಯಶ್ಯು ನನ್ನಲ್ಲಿ ಹುಟ್ಟಿಕೊಂಡಿರುವುದು ಅದರಲ್ಲೂ ಅರವತ್ತನೇ ವಯಸ್ಸಿನಲ್ಲಿ ನನ್ನನ್ನು ಅಚ್ಚರಿಯಲ್ಲಿ ಮುಳುಗಿಸಿಬಿಟ್ಟಿದೆ.

ಕಣ್ಣಿನ ಮೂಲಕ ತನ್ನನ್ನು ತಾನು ನೋಡಿಕೊಳ್ಳುವಂಥ ಬಿಂಬವನ್ನು ಸೃಷ್ಟಿಸಬಲ್ಲ ಈ ಮಾಯಾ ಪರಿಕರವನ್ನು ಯಾವ ಮಹಾನುಭಾವ ಕಂಡಿಡಿದನೋ..ಅವನಿಗೆ ಎಷ್ಟು ಇನಾಮು ಕೊಟ್ಟರೂ ಕಡಿಮೆಯೇ.

ಅರವತ್ತು ಎಪ್ಪತ್ತರ ದಶಕಗಳ ನಮ್ಮ ಹಳ್ಳಿಗಾಡಿನ ಬದುಕಲ್ಲಿ ಈ ಕನ್ನಡಿಗಳನ್ನೇನೂ ಹೆಚ್ಚಾಗಿ ಬಳಸುತ್ತಿರಲಿಲ್ಲ.ಹೆಂಗಸರು ತಲೆ ಬಾಚಿಕೊಳ್ಳಲು ಕನ್ನಡಿಗಳನ್ನು ಬಳಸುತ್ತಿರಲಿಲ್ಲವಾದರೂ ಕುಂಕುಮ ಮತ್ತು ಬೊಟ್ಟು ಇಟ್ಟುಕೊಳ್ಳುವಾಗ ಕನ್ನಡಿಯಲ್ಲಿ ನೋಡಿಕೊಳ್ಳುತ್ತಿದ್ದರು.

ಕೆಲವು ಹೆಂಗಸರಂತೂ ಕನ್ನಡಿ ನೋಡದೆಯೇ ಕುಂಕುಮ ಬೊಟ್ಟುಗಳನ್ನು ಹಣೆಯ ಮಧ್ಯಕ್ಕೆ ಕರೆಕ್ಟಾಗಿ ಇಟ್ಟುಕೊಳ್ಳುತ್ತಿದ್ದರು. ಸ್ಕೂಲಿಗೆ ಹೋಗುತ್ತಿದ್ದ ಹೆಣ್ಣುಮಕ್ಕಳು ಕನ್ನಡಿಯನ್ನು ಎರಡೂ ಕಾಲುಗಳ ಮಧ್ಯೆ ಸಿಗಿಸಿಕೊಂಡು ಜಡೆ ,ಬೊಟ್ಟುಗಳನ್ನು ನೋಡಿಕೊಳುತ್ತಿದ್ದರಲ್ಲದೆ ರೆಪ್ಪೆಗಳಿಗೆ ಕಾಡಿಗೆಯನ್ನು ಕನ್ನಡಿಯಲ್ಲಿ ನೋಡಿಕೊಂಡೇ ಇಟ್ಟುಕೊಳ್ಳುತ್ತಿದ್ದರು.

ಪ್ರೈಮರಿ, ಮಿಡ್ಲಿಸ್ಕೂಲಿಗೆ ಹೋಗುತ್ತಿದ್ದ ಹುಡುಗರೂ ಕೂಡ ಮೊಳೆಗೆ ನೇತಾಕಿರುತ್ತಿದ್ದ ಕನ್ನಡಿಗಳ ಮುಂದೆ ಸ್ಕೂಲಿಗೆ ಹೋಗುವಾಗ ಎಗರಿ ಎಗರಿ ತಮ್ಮ ಮುಸುಡಿಗಳನ್ನು ನೋಡಿಕೊಳ್ಳುತ್ತಿದ್ದರು. ಅದರಲ್ಲೂ ಎಣ್ಣೆ ಹಾಕಿ ಬಾಚಿದ ಕ್ರಾಪು ಸರಿಯಾಗಿ ಕೂತಿದೆಯೋ ಇಲ್ಲವೋ ಎಂಬುದನ್ನು ನೋಡಿಕೊಳ್ಳಲು. ಸಾಮಾನ್ಯವಾಗಿ ಕನ್ನಡಿಯನ್ನು ಮಕ್ಕಳ ಕೈಗೆ ಎಟುಕದಂತೆ ಸ್ವಲ್ಪ ಎತ್ತರಕ್ಕೆ ಗೋಡೆಗೆ ಮೊಳೆ ಹೊಡೆದು ನೇತಾಕುತ್ತಿದ್ದರು.

ನಾನಂತೂ ಎಷ್ಟೋ ಸಾರಿ ಕನ್ನಡಿಯನ್ನು ಅಂದಿಸಿಕೊಳ್ಳಲು ಹೋಗಿ ಕನ್ನಡಿಯನ್ನು ಒಡೆದು ಹಾಕಿದ್ದೇನೆ. ಒಡೆದು ಹೋದ ಚೂರುಗಳನ್ನೆ ಸಂತೆಯಿಂದಲೋ, ಜಾತ್ರೆಯಿಂದಲೋ ಹೊಸ ಕನ್ನಡಿ ತರುವವರೆಗೂ ಬಳಸಲಾಗುತ್ತಿತ್ತು. ಕನ್ನಡಿ ಒಡೆದು ಹೋದರೆ ಏನೋ ಕೇಡು ಕಾದಿದೆ ಎಂಬ ನಂಬಿಕೆ ಹಳ್ಳಿಗಳಲ್ಲಿ ಹಿಂದೆ ಬಹಳವಾಗಿ ಬೇರೂರಿತ್ತು. ಊರಿನಲ್ಲಿ ಅನೇಕ ಜನರ ಮನೆಗಳಲ್ಲಿ ಕನ್ನಡಿಗಳೇ ಇಲ್ಲದಿದ್ದನ್ನು ಕಂಡಿದ್ದೇನೆ ನಾನು. ತೀರಾ ಎಮರ್ಜೆನ್ಸಿಯಿದ್ದರೆ ಅಂಥವರು ಅಕ್ಕ ಪಕ್ಕದ ಮನೆಗಳಿಗೆ ಹೋಗಿ ಕನ್ನಡಿಯಲ್ಲಿ ಇಣುಕುತ್ತಿದ್ದರು .

ನಾನು ಕನ್ನಡಿಯಲ್ಲಿ ನೋಡಿದಾಗಲೆಲ್ಲ ಎರಡೂ ಮೂಗಿನೊಳ್ಳೆಗಳಲ್ಲಿ ಸುರಿಯುತ್ತಿದ್ದ ಗೊಣ್ಣೆಯೂ ಕಾಣುತ್ತಿತ್ತು. ನಾನಂತೂ ಎಷ್ಟೋ ಸಾರಿ ಕನ್ನಡಿಯಲ್ಲಿನ ನನ್ನ ಬಿಂಬಕ್ಕೆ ರೋಪು ಹಾಕಿದ್ದೇನೆ. ಕನ್ನಡಿ ಮುಂದೆ ನಿಂತರೆ ಎಂಥಾ ಸಾಬಸ್ಥ ಮನುಷ್ಯನೂ ಒಮ್ಮೊಮ್ಮೆ ಮಂಗ ಆಗ್ತಾನೆ ಎಂಬುದೊಂದು ಹೇಳಿಕೆ ಇದೆ. ನನಗಂತೂ ಅದು ನಿಜ ಅನ್ನಿಸ್ತದೆ.

ಸಿನಿಮಾಗಳಲ್ಲಿ ತೋರಿಸುತ್ತಿದ್ದ ಮಾಯದ ಕನ್ನಡಿಗಳಂತೂ ನನ್ನನ್ನು ಬೆಕ್ಕಸಬೆರಗಾಗಿಸಿದ್ದುಂಟು.ಇತ್ತಿಚೆಗಂತೂ ಬಸ್ಸು, ಮೆಟ್ರೋ, ಆಫೀಸ್ ಎಲ್ಲಾ ಕಡೆಗಳಲ್ಲೂ ಮೊಬೈಲ್ಗಳನ್ನೆ ಕನ್ನಡಿಯನ್ನಾಗಿ ಬಳಸಿಕೊಂಡು ಜನ ತಮ್ಮ ಮುಸುಡಿಗಳನ್ನು ನೋಡಿ ಕೊಂಡು ಆನಂದಿಸುತ್ತಿರುವುದು ಸರ್ವೆ ಸಾಮಾನ್ಯವಾಗಿದೆ. ಒಂದೊಮ್ಮೆ ಜಗತ್ತಿನಲ್ಲಿ ಕನ್ನಡಿಯೇ ಇಲ್ಲದಿದ್ದಿದ್ದರೆ..!

ಕನ್ನಡಿಯಲ್ಲಿ ನೋಡಿಕೊಂಡು ಊಹಿಸಿಕೊಳ್ಳಿ.. ವಿಶೇಷವಾಗಿ ಹೆಣ್ಣು ಮಕ್ಕಳು..‌!!
ಆದರೆ ಕನ್ನಡಿಯಲ್ಲಿ ನಮ್ಮ ಪ್ರತಿಬಿಂಬದಂತೆ ನಮ್ಮ ಮನಸ್ಸು, ಹೃದಯ, ಆತ್ಮ, ಆಲೋಚನೆ ಎಲ್ಲವೂ ಕಾಣುವಂತಿದ್ದರೆ..? ಅಂಥಾ ಒಂದು ಕನ್ನಡಿ ಖಂಡಿತವಾಗಿಯೂ ಎಲ್ಲರಲ್ಲೂ ಇದೆ. ಆದ್ದರಿಂದಲೇ ನಮ್ಮ ಎಲ್ಲಾ ಸರಿತಪ್ಪುಗಳು ಬೇರೆಯವರಿಗೆ ತಿಳಿಯದಿದ್ದರೂ ನಮಗೆ ತಿಳಿಯದೆ ಇರಲು ಸಾಧ್ಯವೇ ಇಲ್ಲ.

Leave a Reply