ಲಕ್ಷ್ಮಣರ ಎಲೆಕ್ಟ್ರಿಕ್ ಬೇಲಿಯೊಳಗೆ..

ವಾಸುದೇವ ನಾಡಿಗ್

ಕಪ್ಪು ಹಲಗೆಯ ಮೈ ಮತ್ತು ಜೀವನ ಎಳೆದ ಗೆರೆಗಳು

ಪಟ್ಟಕದಲಿ ಹಾದ ಬೆಳಕೊಂದು ಆಚೆ ಚಿಮ್ಮಿಸುವ ಬೆಳಕಿನ ಗೆರೆಗಳ ರೀತಿ ಈ ಕಾವ್ಯ ಕ್ರಿಯೆ.ಸಹಜವಾದ ಅನುಭವಗಳನ್ನು ವಿಶಿಷ್ಟವಾದ ಮನೋ ವಲಯದಲ್ಲಿ ಅದ್ದಿ ತೆಗೆದಾಗ ಮೂಡುವ ಭಿನ್ನ ಚಿತ್ರದಂತೆ.

ಕಾವ್ಯದ ವಸ್ತು ಸ್ವರೂಪ ಮತ್ತು ಕಾವ್ಯವಾಗುವ ಸಂದರ್ಭಗಳ ಬಗ್ಗೆ ಆಲೋಚಿಸಿ ತಲೆಚಚ್ಚಿಕೊಳ್ಳುತ್ತಲೇ ಬಂದಿದ್ದೇವೆ . ಆದರೂ ವಿವರಣೆಗೆ ನಿಲುಕದ ಇದರ ವ್ಯಾಪ್ತಿಯು ಯಾವತ್ತೂ ಮಾಯಾ ಕನ್ನಡಿಯೇ ಸರಿ. ಕವಿತೆ ಹೇಗೆ ಬರೆಯಬೇಕು? ಕವಿತೆ ಯಾವಾಗ ಸಂಭವಿಸುತ್ತದೆ? ಕವಿತೆಯ ತೆಕ್ಕೆಗೆ ಸಿಗುವ ವಸ್ತುಗಳಾವುವು ಇತ್ಯಾದಿ ಮೂಲಭೂತ ಸಂಗತಿಗಳು ಯಾವತ್ತೂ ನಿರುತ್ತರವೇ ಸರಿ.

ಲಕ್ಷ್ಮಣ್ ವಿ ಎ ಅವರ ‘ ಎಲೆಕ್ಟ್ರಿಕ್ ಬೇಲಿ ಮತ್ತು ಪಾರಿವಾಳ’ ದ ಒಳಗಿನ ಕವಿತೆಗಳನ್ನು ಓದುವಾಗ ಇಂತಹ ಅನೇಕ ಪ್ರಶ್ನೆಗಳು ಮತ್ತೆ ಮತ್ತೆ ಕಾಡುತ್ತವೆ. ಏಕೆಂದರೆ ಇಂತಹ ಅನುಭವ ಮತ್ತು ವಸ್ತು ಕಾವ್ಯ ಆಗಲಿಕ್ಕಿಲ್ಲ ಎಂದು ನಿರ್ಧರಿಸಿದ ಹೊತ್ತಿನಲ್ಲೆ ಲಕ್ಷ್ಮಣ್ ಅದನ್ನು ಕವಿತೆ ಎಂದು ಅನಾವರಣಗೊಳಿಸಿಬಿಡುತ್ತಾರೆ. ತಮ್ಮ ಬದುಕಿನಲಿ ತಾವೇ ವಿಶಿಷ್ಟ ಎಂದು ಭಾವಿಸಿದ ಅನುಭವಗಳಿಗೆ ಸಲೀಸಾಗಿ ಕಾವ್ಯದ ಉಡುಪು ತೊಡಿಸಿ ನಿಂತು ನೋಡುತ್ತಾರೆ.

ಅದು ಲ್ಯಾಬಿನಲ್ಲಿ ಕೈ ಕಾಲು ಹೊಟ್ಟೆಗಳಿಗೆ ಪಿನ್ ಸಿಕ್ಕಿಸಿಕೊಂಡು ಅಂಗಾತ ಮಲಗಿರುವ ಕಪ್ಪೆ ಇರಬಹುದು ಅಥವ ಮಗನಿಗೆ ಚಿತ್ರವೊಂದನ್ನು ಬರೆದು ಕೊಡುವ ಕ್ಷಣ ಇರಬಹುದು ಅಥವ ಲಾಡ್ಜ್ ಒಂದರ ಬಾತ್ ರೂಮಿನ ಗ್ರಾನೈಟ್ ಗೋಡೆಗೆ ಅಂಟಿಸಲಾದ ಕೆಂಪು ಟಿಕಳಿ ( ಬಿಂದಿ) ಇರಬಹುದು.. ಇಲ್ಲಿಯೂ ಕವಿತೆಗಳನ್ನು ಹುಡುಕಬಹುದು ಎಂದು ಬೆರಳು ಮಾಡಿ ತೋರಿಸುವ ಅದಮ್ಯ ಜೀವ ಪ್ರೀತಿ ಕಾಣುತ್ತದೆ. ಕವಿಗೆ ಇರಬೇಕಾದ ಕುತೂಹಲದ ಕಣ್ಣು ಮತ್ತು ಚಿಂತನೆಯ ದ್ರವ್ಯ ಈ ಹಿನ್ನೆಲೆಯಲ್ಲಿ ಗಮನಾರ್ಹವೇ.

‘ ಕಪ್ಪು ಹಲಗೆಯಂ ತಹ ಹುಡುಗ’ ಎಂಬ ಮೆಟಾಫರ್ ಲಕ್ಷ್ಮಣ್ ಅವರ ಕಾವ್ಯ ಚಲನೆಯ ಮೂಲ ಸ್ರೋತವಾಗಿ ಕಾಣಿಸುತ್ತದೆ. ತನ್ನ ಮೈ ಮೇಲೆ ಏನೆಲ್ಲ ಬರೆಸಿಕೊಳ್ಳುವ ಮತ್ತು ಅಳಿಸಿಕೊಳ್ಳುವ ಕಪ್ಪು ಹಲಗೆ ಸೂಕ್ಷ್ಮ ಸಂವೇದನಾ ಶೀಲ ಮನಸಿನ ರೂಪಕವೇ ಹೌದು.

ಕವಿ ಇಲ್ಲಿ ಹೀಗೆ ತಾಕುವ ಎಲ್ಲ ಅನುಭವ ದ ಅಲೆಗಳಿಗೆ ತನ್ನ ಎದೆಯ ದಡವನ್ನು ಅಣಿಮಾಡಿಕೊಳ್ಳಲೇ ಬೇಕಾಗುತ್ತದೆ. ಲಕ್ಷ್ಮಣ್ ಈ ನಿಟ್ಟಿನಲ್ಲಿ ಅನುಭವವನ್ನು ಮಾಗಿಸಿಕೊಳ್ಳಲು ಕಾವ್ಯದ ಶರೀರದ ಮೊರೆಹೋಗುತ್ತಾರೆ. ಕಾವ್ಯ ಎಂದರೆ ಇವರ ಪಾಲಿಗೆ ಮಾಗುವ ಮಾರ್ಗ.

ಹಾಗಾಗಿ ಇಡಿ ಸಂಕಲನದ ಉದ್ದಕೂ ಕವಿತೆ ಕಟ್ಟುವ ಉತ್ಸಾಹಕ್ಕಿಂತ ಈ ಅನುಭವ ಕವಿತೆಯ ಶರೀರಕ್ಕೆ ದಕ್ಕಬಲ್ಲದೆ ಎಂಬ ಸಣ್ಣ ಶಂಕೆ ಮತ್ತು ಮುಜುಗರದಿಂದಲೇ ಲಕ್ಷ್ಮಣ್ ಹೊರಡುತ್ತಾರೆ.

ಈ ಶಂಕೆ ಮತ್ತು ವಿನಯ್ ಪೂರ್ವಕವಾದ ಮುಜುಗರ ನಿಜದ ಕವಿಯ ಮೂಲ ಗುಣವೂ ಹೌದು ಈ ನೆಲೆಯಲ್ಲಿ ‘ ಎಲೆಕ್ಟ್ರಿಕ್ ಬೇಲಿ ಮತ್ತು ಪಾರಿವಾಳ’ ಗೂಡು ಕಟ್ಟಿದ ಗುಬ್ಬಚ್ಚಿಯೊಂದು ಗೂಡಿನ ಸ್ವರೂಪವನ್ನು ನೋಡುಗರ ಎದುರಿಗೆ ಇಟ್ಟು ಸಂಕೋಚದಿಂದ ಕೂತ ಜೀವದ ಯಾನದಂತೆ ನನಗೆ ಗೋಚರಿಸುತ್ತದೆ. ಕವಿಗೆ ಇರುವ ಅನುಮಾನಗಳು ಮತ್ತು ವಿನಮ್ರತೆ ಅವನ ಕಾವ್ಯಲೋಕದ ಬಯಲನ್ನು ವ್ಯಾಪಕಗೊಳಿಸ ಬಲ್ಲದು ಎಂಬ ಮಾತಿಗೆ ಲಕ್ಷ್ಮಣ್ ತಕ್ಕ ಸಾಬೀತಾಗಿ ಗೋಚರಿಸುತ್ತಾರೆ. ಕಪ್ಪು ಹಲಗೆಯಂತಹ ಹುಡುಗನಿಗೆ ಬೆಳಕಿನದ್ದೆ ಧ್ಯಾನವಾಗುವುದು ಇಂತಹ ಮನಸ್ಥಿತಿಗೆ ಮಾತ್ರ ಸಾಧ್ಯ.

‘ ಪಪ್ಪಾ ನನಗೊಂದು ಚಿತ್ರ ಬರೆದುಕೊಡು ಎಂದು ಮಗ ರಚ್ಚೆ ಹಿಡಿದಾಗಲೆಲ್ಲ ನಾನು ತುಂಬಾ ಅಸ್ವಸ್ಥ ನಾಗುತ್ತೇನೆ’ ( ಧರಣಿಮಂಡಲ ಮಧ್ಯೆದೊಳಗೆ) ಎಂಬ ಸಾಲಿನೊಳಗಿನ ಈ ಅಸ್ವಾಸ್ಥ್ಯ ನಿಜದ ಸ್ವಾಸ್ಥ್ಯವೇ ಹೌದು ಅನಿಸುತ್ತದೆ. ಯಾವುದು ಚಿತ್ರ ಯಾವುದು ಸತ್ಯ ? ಯಾವುದು ಭ್ರಮೆ ಯಾವುದು ವಾಸ್ತವ ? ಯಾವುದು ಪಾಪ ಯಾವುದು ಪುಣ್ಯ? ಯಾವುದು ನೀತಿ ಯಾವುದು ಅನೀತಿ? ಎಂದೆಲ್ಲ ಆಲೋಚನೆಗೆ ಕೂಡುವ ಮನಸು ಕೊನೆಗೂ ತಲುಪುವುದು ಅನಿವಾರ್ಯತೆಗಳಲ್ಲಿ ಅರಳುವ ಮತ್ತು ಹೊರಳುವ ಬದುಕಿನ ತತ್ವದ ಶೋಧನೆಯಲ್ಲಿ.

ಇದೇ ಬಗೆಯ ಶೋಧದ ಮಾರ್ಗದ ಮುಂದುವರಿಕೆಯಾಗಿ ‘ ಮೋಕ್ಷ ಹುಡುಕುತ್ತ ಪ್ರೀತಿಯ ಬಂಧನದಲ್ಲಿ’ ಮತ್ತು ‘ಎದೆಗೆ ಬಿದ್ದ ಅಕ್ಷರದ ನೋವು’ ‘ ಎಲೆಕ್ಟ್ರಿಕ್ ಬೇಲಿ ಮತ್ತು ಪಾರಿವಾಳ’ ಕವನಗಳಲ್ಲಿ ಭಿನ್ನ ಸ್ವರೂಪವನ್ನು ಪಡೆಯುತ್ತವೆ. ಹಾಗೆ ನೋಡಿದರೆ ಲಕ್ಷ್ಮಣರ ಕವಿತೆಗಳು ಮುನ್ನಡೆಯುವುದೆ ಪ್ರಶ್ನೆಗಳ ಮೂಲಕ ಅದು ಪ್ರಶ್ನಾರ್ಥಕ ಚಿಹ್ನೆಗಳನ್ನು ಬಳಸದೇ ಇದ್ದರೂ ವೇದ್ಯ.
‘ ಬಯಲು ಸೀಮೆಯೆ ನನ್ನ ಅಪ್ಪನಿಗೆ
ಸಮುದ್ರ ಎಂದರೆ ಎಲ್ಲಿರುತ್ತದೆ? ಎಂದು
ಕೇಳಿ ಕುಹಕವಾಡಿದೆ..
ಎಂಬ ಸಾಲುಗಳಿರುವ ‘ ಅಪ್ಪ ಮತ್ತು ಕಡಲು’ ಪದ್ಯವು ಕವಿಯ ಅಹಂಕಾರ ನಿರಸನದ ಅಭಿವ್ಯಕ್ತಿ ಅಷ್ಟೇ ಆಗಿರದೆ ಈ ತಾನೆಂಬ ಶ್ರೇಷ್ಟತೆಯ ವ್ಯಸನವು ತುಂಬಿಕೊಡುವ ಕೊರಗು ಮತ್ತು ಅಪೂರ್ಣತೆ ಬದುಕಿನಲ್ಲಿ ವಂಚಿತವಾಗಿಸುವ ವಿಷಾದವನ್ನೂ ಅನಾವರಣ ಗೊಳಿಸಿದೆ.

ಲಕ್ಷ್ಮಣ್ ಅವರ ಕವಿತೆಗಳ ಒಳಗೆ ಹರಿಯುತ್ತಿರುವುದು ಇಂತಹ ತಣ್ಣನೆಯ ಅತೃಪ್ತ ತೊರೆ. ಇದರ ಜಾಡನು ಹಿಡಿದೇ ಅವರು ತಾತ್ವಿಕತೆಯೊಂದನ್ನು ಜೀವಂತ ಗೊಳಿಸುವ ಉತ್ಸಾಹಿಯಂತೆ ಕಂಡುಬರುತ್ತಾರೆ. ಅಭಿವ್ಯಕ್ತಿಯ ಪರಿಣಾಮದ ಬಗೆಗೆ ಪುಟ್ಟ ಅನುಮಾನ ಮತ್ತು ಅದನ್ನು ನಿವಾರಿಸಿಕೊಳ್ಳುವ ಕಾಳಜಿಯಿಂದಲೆ ವಸ್ತುವನ್ನು ಮಾಧ್ಯಮವನ್ನಾಗಿ ಮಾಡಿಕೊಳ್ಳುತ್ತಾರೆ ಕೂಡ.

‘ತೀರದಲಿ
ಒಂಟಿ ನಾವೆಯ ಬಿಟ್ಟು
ಎಲ್ಲೋ ನಡೆದು ಹೋಗಿದ್ದಾನೆ
ನಾವಿಕ’ ( ಹೆಜ್ಜೆಯ ಕಾಲು ಗೆಜ್ಜೆ)
ಎಂಬ ಸಾಲುಗಳೂ ಕೂಡ ಕವಿಯ ಮನೋಧರ್ಮವನ್ನು ಹಿಡಿದಿಡುತ್ತವೆ. ಬದುಕಿನ ಘಟನೆಗಳು ಉಳಿಸಿಬಿಡುವ ಅರ್ಥ ಸಾಧ್ಯತೆಗಳ ಕುರಿತ ಮಜಲುಗಳನ್ನು ಈ ಸಾಲು ದನಿಸುತ್ತವೆ. ಹಾಗೆಂದೇ ಅಂತಹ ನಿರೀಕ್ಷೆಗಳೇ ಕವಿಯನ್ನು ಮಾಗಿಸುವ ಮಾರ್ಗಗಳೂ ಕೂಡ.
‘ ಈ ಸಲ ನದಿಗೆ ಹೇಳಿ ಕಳಿಸಿದ್ದೇನೆ ಕಡಲಿಗೆ ಎಸೆದ
ನಿನ್ನ ಹೆಜ್ಜೆಯ ಗುರುತ ಮುಂದಿನ ಬಾರಿಗೆ ಮರೆಯದೆ ಮರಳಿಸಲು’ ಎಂಬಿತ್ಯಾದಿ ಸಾಲುಗಳಲ್ಲಿ ಲಕ್ಷ್ಮಣ ಅವರ ಗಾಢ ನಿರೀಕ್ಷೆ ಮತ್ತು ಅರೆ ಮುಚ್ಚಿದ ರೆಪ್ಪೆಯ ಕವಿಯ ಕಣ್ಣು ಅನೇಕ ಸಂಗತಿಗಳನ್ನು ವಿಶದ ಪಡಿಸಿವೆ ಅದರಲ್ಲು ‘ ಎಲೆಕ್ಟ್ರಿಕ್ ಬೇಲಿ ಮತ್ತು ಪಾರಿವಾಳ’ ಕವಿತೆಯ ವಿಸ್ತರನ ಗುಣವು ಕೇವಲ ದಾಂಪತ್ಯ ಎಂಬ ನಾಲ್ಕು ಗೋಡೆಯ ಮಾತಾಗದೆ ವಿಶ್ವಸ್ಥ ನೆಲೆಯಲ್ಲಿ ತೆರೆದು ಕೊಳ್ಳುವ ಬಹುತ್ವವನ್ನು ಪಡೆದುಕೊಂಡು ಬಿಡುವಷ್ಟು ಶಕ್ತವಾಗಿದೆ.

‘ ಆಟ ಸುಳ್ಳೆಂದು ಗೊತ್ತಿದ್ದರೂ
ಯಾರೊಬ್ಬರೂ ಸೋಲಲು ಸಿದ್ಧರಿಲ್ಲ’ ಎಂಬ ಸಾಲು ಇಹಪರದ ಸತ್ಯಾ ಸತ್ಯತೆಗಳ ಗಾಢ ಜಿಜ್ಞಾಸೆ ಆಗುವಷ್ಟರ ಮಟ್ಟಿಗೆ ಬೆಳೆದು ನಿಲ್ಲಬಲ್ಲದು. ‘ ಮಾತು ಸೋತ ಭಾರತ’ ‘ ಲಾಫಿಂಗ್ ಬುದ್ಧ’ ‘ ಬಹುಪರಾಕ್ ಬಹುಪರಾಕ್’ ‘ ಬಿಟ್ಟ ಸ್ಥಳ ತುಂಬಿರಿ’ ‘ ಕುದುರೆ ಸವಾರಿ’ ಇತ್ಯಾದಿ ಪದ್ಯಗಳ ರಾಜಕೀಯ ಪ್ರಜ್ಞೆ ಮತ್ತು ಕುಹಕವೂ ಕೂಡಾ ಇಂತಹದೆ ಜಿಜ್ಞಾಸೆಯನ್ನು ಉಳಿಸಬಲ್ಲದು

ಲಕ್ಷ್ಮಣ್ ಅವರು ನಾಲ್ಕಾರು ಪದ್ಯಗಳಲ್ಲಿ ಕಾವ್ಯ ಮತ್ತು ತಮ್ಮ ಅನನ್ಯತೆಗಳ ಕುರಿತು ಹುಡುಕಾಟ ನಡೆಸುತ್ತಾರೆ. ‘ ಬಿನ್ನಹಕೆ ಬಾಯಿಲ್ಲವಯ್ಯ’ ಕವಿತೆ ಮೇಲಿನ ಹಕ್ಕು ಕೇವಲ ಕವಿಗೆ’ ‘ ನವ್ಯ ಕಾವ್ಯ’ ‘ ಅರ್ಧ ಬರೆದಿಟ್ಟ ಕವಿತೆ’ ಗಳಲ್ಲಿ ಅವರು ಕವಿತೆಯ ಸಮುದಾಯಿಕ ಮತ್ತು ಸಮಕಾಲೀನ ಅರಿವಿನ ಕುರಿತು ಬಹಳ ಗಹನವಾಗಿ ಅಲೋಚಿಸುವ ಮಾದರಿಗಳಾಗಿ ಕಾಣುತ್ತವೆ .

ಇದು ಅಪೇಕ್ಷಣೀಯ ಆದರೂ, ಇಂತಹ ಅತಿಯಾದ ಅನುಮಾನ ಮತ್ತು ಅಗತ್ಯತೆ ಕುರಿತ ಚಿಂತನೆ ಅನೇಕ ಬಾರಿ ಕವಿಯನ್ನು ಕಾವ್ಯದ ದಾರಿಯಿಂದ ವಿಮುಖನನ್ನಾಗಿ ಮಾಡುವ ಸಾಧ್ಯತೆಯೂ ಇರುತ್ತದೆ. ಹಾಗಾಗಿ ಕವಿಯೊಬ್ಬನಿಗೆ ಇರಬೇಕಾದ ಅನುಭವ ಪ್ರಾಮಾಣಿಕತೆ ಮತ್ತು ಅಭಿವ್ಯಕ್ತಿಯಲ್ಲಿನ ನೂತನ ಮಾರ್ಗ ದ ಕುರಿತು ಆಲೋಚಿಸುವುದೇ ಆರೋಗ್ಯಕರ ಈ ಅರಿವು ಲಕ್ಷ್ಮಣ ಅವರಲ್ಲಿ ಇರುವುದೂ ಕೂಡ ನಿಸ್ಸಂದೇಹ.

ಇನ್ನು ಕವಿ ದಾಟ ಬೇಕಾದ ಹರ್ಡಲ್ಸ್ ಗಳು ಕೂಡಾ ಅನೇಕ. ಕಾವ್ಯದ ಮಾರ್ಗ ಅಷ್ಟು ಸುಲಭ ಮತ್ತು ಸರಳ ಕೂಡ ಅಲ್ಲ ( ಲಕ್ಷ್ಮಣ್ ಅವರ ಜೊತೆಗಿನ ನೇರ ಮಾತುಗಳಲ್ಲಿ ಈ ಸತ್ಯದ ಅರಿವು ಅವರಿಗೆ ಇರುವುದನ್ನು ನಾನು ನಾನು ಗಮನಿಸಿದ್ದೇನೆ ಕೂಡ) ಕಾವ್ಯದ ಭಾಷೆಯ ಮಾಂತ್ರಿಕತೆ ಯೊಂದನು ಅವರ ಕೈ ಕುದುರಿಸಿಕೊಳ್ಳ ಬೇಕಾಗಿದೆ.

ಕಾವ್ಯದ ಒಳ ಲಯ ಮತ್ತು ಮಿಂಚಿಸ ಬಹುದಾದ ಶಕ್ತ ರೂಪಕಗಳ ಕುರಿತ ಅವರ ಧ್ಯಾನ ಇಲ್ಲಿ ಅಪೇಕ್ಷಣೀಯ ಕೂಡ. ಕಾವ್ಯದಲಿ ಹೇಳದೇ ಉಳಿದ ವಸ್ತುಗಳು ಯಾವುದೂ ಇಲ್ಲ ಆದರೆ ಹೇಳುವ ಶೈಲಿಯೇ ಆ ಹಳೆಯ ವಸ್ತುವನ್ನು ಕೂಡ ನೂತನ ಗೊಳಿಸಬಲ್ಲದು . ಲಕ್ಷ್ಮಣ್ ಅವರಂತಹ ವಿನಯ ವಂತ ಕವಿಗೆ ಇವೆಲ್ಲ ಸಾಧ್ಯವೇ. ಕವಿಯಾಗ ಬೇಕು ಎನ್ನುವ ಹಂಬಲದ ಒಳಗೆ ಅಪ್ಪಟ ಮನುಷ್ಯನಿರಬೇಕು ಎಂಬ ನಿಲುವನ್ನೆ ಪದೇ ಪದೇ ಒಪ್ಪುವ ಲಕ್ಷ್ಮಣ್ ಕಾವ್ಯದ ದಾರಿ ಮತ್ತು ಬದುಕಿನ ದಾರಿ ಯಾವತ್ತೂ ಬೇರೆ ಬೇರೆ ಯಲ್ಲ. ಬದುಕು ಕಲಿಸುತ್ತದೆ ಕಾವ್ಯ ಕಂಡರಿಸುತ್ತದೆ ಅಷ್ಟೆ.

ಕಷ್ಟ ಕೋಟಲೆಗಳನ್ನು ಮೆಟ್ಟಿ ಬಂದ ಜೀವವೊಂದು ಮಹಾನಗರಿಯೊಳಕ್ಕೆ ತನ್ನ ಗೂಡನ್ನು ಕಟ್ಟಿ ಕೊಂಡು ಅಸ್ತಿತ್ವಕಾಗಿ ತಹಹಿಸುವ ದನಿ ಯಾಗಿ ಕಂಡು ಬರುವ ಶಕ್ತ ರೂಪಕ ವಾಗಿ ನನಗೆ ‘ ಎಲೆಕ್ಟ್ರಿಕ್ ಬೇಲಿ ಮತ್ತು ಪಾರಿವಾಳ’ ಇಡಿ ಸಂಕಲನ ಗೋಚರಿಸುತ್ತಿದೆ. ಎದೆಗೆ ಬಿದ್ದ ಅಕ್ಷರದ ನೋವು ಕಾವ್ಯದ ರೂಪದಲ್ಲಿ ಅನಾವರಣ ಗೊಳ್ಳುತಿರುವಾಗ ಪ್ರೀತಿಯಿಂದ ಎದೆಗೆ ಅಪ್ಪಿಕೊಂಡು ಸ್ವಾಗತಿಸಿ ಮುಂದಿನ ಬೆಳವಣಿಗೆಯನ್ನು ಅಕ್ಕರೆಯಿಂದ ಕಾದು ನೋಡುವುದಷ್ಟೇ ಸದ್ಯದ ನನ್ನ ಕೆಲಸ.

‘ ಕಪ್ಪು ಹಲಗೆಯಂತಹ ಹುಡುಗನ ಬೆಳಕಿನ ಧ್ಯಾನ ಸದಾ ಮಿಡಿಯಲಿ ಎಂಬುದೇ ಹಂಬಲ. ಅದನ್ನು ಯಾವತ್ತೂ ಕೂಡ ಮಹಾನಗರದ ಕರಾಳ ಕಬಂಧ ಬಾಹುಗಳು ಮಂಕುಗೊಳಿಸದಿರಲಿ. ಗೂಗಲ್ ಮ್ಯಾಪಿನಲ್ಲಿ ಕವಿಯ ಊರಿಗೂ ಮತ್ತು ಸಿಂಗಪೂರಕೂ ಇರುವ ಅಂತರ ಕೇವಲ ನಾಲ್ಕು ಇಂಚು ಎಂಬ ಅವರದ್ದೇ ಮಾತು ಬದುಕಿನ ಸಂವೇದನೆಗಳ ಬಾಹುಳ್ಯವನ್ನು ವಿಸ್ತರಿಸಲಿ ಬೇಲಿಯಾಚೆ ಮತ್ತು ಈಚಿನ ಮನುಷ್ಯರನ್ನು ಹತ್ತಿರ ತರಲಿ…ಕಾವ್ಯದ ಗಮ್ಯ ಇದಲ್ಲದೆ ಬೇರೆ ಏನಿರಲು ಸಾಧ್ಯ ಹೇಳಿ?

ಇಂತಹ ನೋಡುವ ನೋಟವು ಬೆಳೆವ ವಯಸಿನ ಜೊತೆಗೆ ವಿಸ್ತರಿಸುವ ಬಗೆಯನ್ನು ಅವರೇ ಸೊಗಸಾಗಿ ಹೇಳುವ ಪದ್ಯವನ್ನು ಮತ್ತೊಮ್ಮೆ ಓದುವ ಮೂಲಕ ವಿರಮಿಸುವೆ.

ಎಲ್ಲಿಯೂ ಮುಳುಗದ ಸೂರ್ಯ

ನಾನು
ಬಾಲಕನಿರುವಾಗ
ಸೂರ್ಯ
ನಮ್ಮ ಮನೆಯ ಹಿಂದಿರುವ
ಜೋಡು ಗುಡ್ಡಗಳ ನಡುವೆ
ಮರೆಯಾಗುತಿದ್ದ

ಮೂರನೆ ತರಗತಿಯಲಿ
ಮುರುಡೇಶ್ವರ ಕೆಂದು ಪ್ರವಾಸ ಹೋದಾಗ
ಕಡಲಿನಲಿ
ಮುಳುಗಿದಾಗ ಅಚ್ಚರಿ ,ಆಘಾತ

ಈಗ ನಾನು
ದೊಡ್ಡವನು

ಕೊನೆಯ ಮಾತು- ಈ ಕವನ ಸಂಕಲನ ಹಸ್ತಪ್ರತಿ ರೂಪದಲ್ಲೇ ನಾಡುಕಂಡ ಸಾತ್ವಿಕ ಹಿರಿಯ ಕವಿ ಶ್ರೀ ಚೆನ್ನವೀರ ಕಣವಿ ಅವರ ಹೆಸರಿನ ಕಾವ್ಯ ಪ್ರಶಸ್ತಿ ಪಡೆದು ಕೊಂಡಿದೆ ಕವಿಗೆ ಹೃದಯ ಪೂರವಕ ಅಭಿನಂದನೆ ಕೂಡ

 

 

Leave a Reply