ನನಗೂ ವೋಡ್ಕಾ ತನ್ನಿ..ಬೈದಾಡ್ಕೊಂಡು ಸೆಲೆಬ್ರೇಟ್ ಮಾಡೋಣ!!

ಸುಮಂಗಲಾ

( ಇದು ಸಂವರ್ತ ಸಾಹಿಲ್ ಬರೆದ ‘ಐವತ್ತು ರೂಪಾಯಿಗೆ ವೋಡ್ಕಾ ಕೂಡ ಬರ್ಲಿಲ್ಲ’ ಲೇಖನಕ್ಕೆ ಮತ್ತೊಂದು ಪ್ರತಿಕ್ರಿಯೆ )

ಒಹ್.. ಸಂವರ್ತ ಅವರೇ… ನಿಮಗಾದ ಅನುಭವ ನನಗೂ ತುಂಬ ಸಲ ಆಗಿದೆ.

ನಾನು ತುಂಬ ಕಷ್ಟಪಟ್ಟು ಹೆಸರಾಂತ ಸಂಗೀತಗಾರರೊಬ್ಬರ ಸಂದಶನಕ್ಕೆ ಪ್ರಯತ್ನಿಸಿ, ಅವರ ಕಛೇರಿಗೆ ಹೋಗಿ, ಅತ್ಯುತ್ತಮ ಎನ್ನಬಹುದಾದ ಒಂದು ಲೇಖನವನ್ನು ಬರೆದುಕೊಟ್ಟಿದ್ದಕ್ಕೆ ತುಂಬ ಕಡಿಮೆ ಗೌರವಧನ ಕಳಿಸಿದ್ದರು, ಕೊನೆಗೆ ತಡೆಯಲಾಗದೇ ನಾನು ಸಂಪಾದಕರಿಗೆ ಪತ್ರಿಸಿದೆ, ಮತ್ತೆ ಹೇಳಿದೆ, ನಾನೊಬ್ಬಳು ನಿಮ್ಗೆ ನೇರವಾಗಿ ಬರೆಯುತ್ತಿರುವೆ, ಆದರೆ ಇದು ತುಂಬ ಜನ ಬರಹಗಾರರ ಅನುಭವ + ಅಭಿಪ್ರಾಯ ಎಂದು.

ಆಮೇಲೆ ಮೊದ್ಲು ಕೊಟ್ಟಿದ್ದಕ್ಕೆ ಇನ್ನು ಕೊಂಚ ಸೇರಿಸಿ ಕಳಿಸಿದರು! ನನಗೆ ಯಾವಾಗಲೂ ಅಚ್ಚರಿ ಎನ್ನಿಸುವುದು ಇದೇ… ಮೊದಲ ಪುಟದಿಂದ ಹಿಡಿದು, ಕೊನೇ ಪುಟದವರೆಗೂ ಅರ್ಧಕ್ಕರ್ಧ ಜಾಹೀರಾತುಗಳೇ ರಾರಾಜಿಸುತ್ತವೆ, ಅವರು ನಷ್ಟದಲ್ಲೇನೂ ಪತ್ರಿಕೆ ನಡೆಸುವುದಿಲ್ಲ, ಆದರೂ ಗೌರವಧನ ಎನ್ನುವುದು ಕೊಡುವವರಿಗೆ, ತೆಗೆದುಕೊಳ್ಳುವವರಿಗೆ ಇಬ್ಬರಿಗೂ ಗೌರವ ಕೊಡುವಂತಿರಬೇಕು, ಬರೆದವರ ಶ್ರಮ, ಸಮಯ, ಸೃಜನಶೀಲತೆ ಎಲ್ಲದಕ್ಕೆ ಗೌರವ ಕೊಡುವಂತೆ ಇರ್ಬೇಕು ಅಂತ ಯಾಕೆ ಯೋಚಿಸುವುದಿಲ್ಲ…

ಪ್ರತೀ ಸಲ ನನ್ನ ಲೇಖನ, ಕಥೆ ಪ್ರಕಟವಾದಾಗ ನಿಂಗೆಷ್ಟು ಕೊಡ್ತಾರೆ ಎಂದು ಕೇಳುವ ಮಗ, “ನೀವೆಲ್ಲ ಬರೆಯೋವ್ರು ಸೇರಿ ಪ್ರೊಟೆಸ್ಟ್ ಯಾಕೆ ಮಾಡಬಾರದು, ಇಷ್ಟು ಕಡಿಮೆ ಕೊಟ್ಟರೆ ನಾವು ಯಾರೂ ಬರೆಯೋದೆ ಇಲ್ಲ ಅಂತ ಎಲ್ರೂ ಸೇರಿ ನಿರ್ಧಾರ ಯಾಕೆ ಮಾಡಬಾರದು… ಅಷ್ಟು ಜಾಹೀರಾತು ಹಾಕ್ತಾರೆ, ನಿಮ್ಗೆ ಬರೆಯೋವ್ರಿಗೆ ಕೊಡಕ್ಕೆ ಅವ್ರ ಹತ್ರ ದುಡ್ಡು ಇರಲ್ಲವಾ… ಯಾಕೆ ಒದ್ದಾಡಿಕೊಂಡು ಬರಿತೀಯ ಬಿಡು” ಎನ್ನುತ್ತಿರುತ್ತಾನೆ!

ಸರಿ, ನಾನು 70 ಅಥವಾ 80 ರೂ. ಕೊಡುವೆ, ನನಗೂ ಒಂದು ಸಿಕ್ಸ್ಟಿ ವೋಡ್ಕಾ ತನ್ನಿ, ಇವರಿಗೆ ಬೈದಾಡಿಕೊಂಡು + ನಿಮ್ಮ ಕವನಗಳನ್ನು ಕೇಳಿಸಿಕೊಂಡು + ನನ್ನ ಸುಮ(ಕು?!)ಕಥೆಗಳನ್ನು ಓದಿಕೊಂಡು ಸೆಲೆಬ್ರೇಟ್ ಮಾಡೋಣ!!!

3 Responses

  1. Kusumapatel says:

    ನಾನು ಬರೆಯಲು ಶುರು ಮಾಡಿದ್ದೆ ಆಕಸ್ಮಿಕ. ಈಗ ಅದು ಸ್ವಭಾವವೇ ಆಗಿದೆ. ನನ್ನ ಮೊದಲ ಕವನಕ್ಕೆ 100 ರುಪಾಯಿ ಬಂದಾಗ ತುಂಬಾ ಸಂತೋಷವಾಗಿತ್ತು. ಅದೇ ಮೊದಲು ಅದೇ ಕೊನೆ ಅನಿಸುತ್ತೆ ನನಗೆ ನನ್ನ ಬರವಣಿಗೆಗೆ ದುಡ್ಡು ಬಂದಿದ್ದು. ಆದರೂ ಬರೆದದ್ದು ಮಂದಿ ಓದಲಿ, ಮೆಚ್ಚಲಿ ಎಂಬ ಹುಚ್ಚು. ಅದಕ್ಕೇ ಬರಿತಾನೆ ಇದೀನಿ. ವೋಡ್ಕಾ ಬೇಡ ಮಾರಾಯ್ರೇ, ಬರಿಯೋ ಹುಚ್ಚು ಇನ್ನು ಹೆಚ್ಕಾದ್ರೆ !

  2. ಶಿವಶಂಕರ ಭಟ್ಟ says:

    ಈಗಾಗಲೇ ಪ್ರಸಿದ್ಧರಾದವರಿಗೆ ತಮ್ಮ ಕಥೆ/ಕವನ/ಲೇಖನಗಳಿಗೆ ಪತ್ರಿಕೆಗಳು ಕೊಡುವ ಸಂಭಾವನೆಯಿಂದ ತಮ್ಮ ಶ್ರಮಕ್ಕೆ ಇಷ್ಟೆಯೇ ಪ್ರತಿಫಲ ಎಂದು ಬೇಸರವಾಗುವುದು ಸಹಜ.‌ಆದರೆ ಪತ್ರಿಕೆಗಳ ವಾಚಕರವಾಣಿ ವಿಭಾಗಕ್ಕೆ ಬರೆದ ನಾಲ್ಕು ಸಾಲಿನ ಪತ್ರಗಳು ಪ್ರಕಟವಾಗಲಿ ಎಂದು ಚಾತಕ ಪಕ್ಷಿಗಳಂತೆ ಕಾಯುವ ನನ್ನಂತಹ ನೂರಾರು ಮಂದಿಗೆ ತಮ್ಮ ಕಥೆ/ಕವನಗಳು ಪ್ರಕಟವಾದರೆ ಸಾಕು; ನಾಲ್ಕು ಜನರ ಕಣ್ಣಿಗೆ ನಾವು ಬರೆದದ್ದು ಕಾಣಿಸುತ್ತದೆ ಸಂಭಾವನೆ ಬೇಡವೇ ಬೇಡ ಎಂದು ಅನಿಸುತ್ತದೆ.. ಬರೆದೇ ಜೀವನ ಸಾಗಿಸಬೇಕಾದ ದರ್ದು ಈಗ ಕನ್ನಡದ ಮಟ್ಟಿಗೆ ಯಾರಿಗೂ ಇಲ್ಲ ಅಲ್ಲವೆ?

  3. 1981ರ ಜನವರಿ ತಿಂಗಳಲ್ಲಿ ಪ್ರಕಟವಾದ ನನ್ನ ಕವನಕ್ಕೆ ಆ ಪತ್ರಿಕೆಯವರು ರೂ.75/- ಕಳಿಸಿದ್ದು ; ಈಗಿಲ್ಲಿ ತಮ್ಮ ಬರಹಗಳನ್ನು ಓದಿದಾಗ ಆಗನಿಸಿದ ಸಣ್ಣ ಮೊತ್ತ ಈಗ ಬಹಳ ದೊಡ್ಡ ಮೊತ್ತವಾಗಿ ಕಾಣುತ್ತಿದೆ.

Leave a Reply

%d bloggers like this: