ಜಗಜ್ಜಾಹೀರಾತಿನ ವ್ಯಾಧಿ..

ಧನಂಜಯ ಎನ್ ಆಚಾರ್ಯ

ಈ ಕ್ಷಣಕ್ಕೆ ನೀವು ಟೀವಿ ನೋಡುತ್ತಿದ್ದರೂ ಸಾಕು , ಇಲ್ಲಿ ಚರ್ಚೆಯ ವಿಷಯ ನಿಮ್ಮ ಕಣ್ಣ ಮುಂದಿರುತ್ತೆ .

ದಿನವಿಡೀ ಬಗೆಬಗೆಯ ಜಾಹೀರಾತನ್ನು  ಕಾಣುತ್ತಲೇ ಇರುತ್ತೇವೆ, ಯಾವುದೇ ವಸ್ತುವಾದರೂ ಈಗಿನ ಟ್ರೆಂಡ್ ಗೆ ತಕ್ಕಂತೆ ಮಾರಾಟಕ್ಕೆ ಕೊಂಚ ಪ್ರಚಾರ ಬೇಕೇ ಬೇಕು .
ಓಕೆ ,
ದಿನಬಳಕೆಯ ವಸ್ತುಗಳು, ಅದರ ಗುಣಮಟ್ಟ, ಕಂಪನಿಯ ಮೂಲ, ಮತ್ತವುಗಳ ಸಿಗುವಿಕೆ ಇಷ್ಟೆಲ್ಲ ವಿಷಯಗಳು ಆ ಜಾಹೀರಾತು ಒಳಗೊಂಡಿರುತ್ತದೆ ಎಂದು ಹೇಳಿ ನಾನಗಲಿ ನೀವಾಗಲಿ ತಿಳಿದುಕೊಳ್ಳಬೇಕಿಲ್ಲ.
ಆದರೆ ವಿಷಯ ಇರುವುದು ಎಂಥಹ ಪದಾರ್ಥಗಳಿಗೆ ಜಾಹೀರಾತು ಉಪಯೋಗಿಸಬೇಕು ಎನ್ನುವುದು.

ಹದಿನೆಂಟಾದರೆ ಯುವಸಮುದಾಯದ ಕೂದಲು ಉದುರಲು ಶುರು, ನಲವತ್ತಾದರೆ ಮಂಡಿ ನೋವು, ದುಡಿಯುವವರಿಗೆ ಸ್ಟ್ರೆಸ್ ಮ್ಯಾನೇಜ್ಮೆಂಟ್, ಓದುವವರಿಗೆ ನೆನಪಿನ ಶಕ್ತಿ, ಹುಡುಗಿಯರ ಮುಟ್ಟಿನ ಸಮಸ್ಯೆ, ವಯಸ್ಕರ ಸಂತಾನ ಹೀನತೆ…. ಹೀಗೇ ಮುಂದುವರೆಯುತ್ತೆ ಸಮಸ್ಯೆಗಳ ಪಟ್ಟಿ.
ಇವಿಷ್ಟನ್ನೂ ಕೇವಲ ಒಂದು ಆಕರ್ಷಣೀಯ ಜಾಹೀರಾತು   ದೂರ ಮಾಡಬಹುದು ಎಂದರೆ ಡಿಗ್ರಿ, ಎಂಡಿ , ಪಿಹೆಚ್ ಡಿ , ಯನ್ನು ವರ್ಷಗಟ್ಟಲೇ ಓದಿಕೊಂಡಿರೋ ಲಕ್ಷಾಂತರ ಡಾಕ್ಟರ್ಗಳಿಗೇನು ಕೆಲಸ??

ನಾನೊಬ್ಬ ಆಯುರ್ವೇದ ವೈದ್ಯಕೀಯ ಪ್ರತಿನಿಧಿಯಾಗಿ ಪ್ರತ್ಯಕ್ಷ ಕಂಡಿರುವ ಸಾಕ್ಷಿಯಾಗಿ ಈ ವಿಷಯ ಮುಂದಿಡುತ್ತೇನೆ.
ಯಾವುದಾದರೂ ಒಂದು ಮೆಡಿಕಲ್ ಸ್ಟೋರ್ ಮುಂದೆ ನೀವು ಹತ್ತು ನಿಮಿಷ ನಿಂತು ಗಮನಿಸಿ,
ಬರುವ ಹತ್ತು ಜನರಲ್ಲಿ ಕನಿಷ್ಠ 3 ಜನರಾದರೂ ವೈದ್ಯರ
ಚೀಟಿ ಇಲ್ಲದಯೇ, ಟೀವಿಯಲ್ಲಿ ಪೇಪರಿನಲ್ಲಿ ಬರುವ, ಸ್ವಾಮಿಗಳು , ಸಿನೆಮಾ ನಾಯಕ ನಟಿಯರು, ನಾಯಕರುಗಳ ಜಾಹೀರಾತು ನೋಡಿ ಆ ಪ್ರಾಡಕ್ಟ್ ಕೊಡಿ , ಈ ತೈಲ ಸಿಗುತ್ತಾ, ಇತ್ಯಾದಿ ಇತ್ಯಾದಿ ವಿಚಾರಿಸುತ್ತಾರೆ.
ಅದು ವೈದ್ಯರ ಫೀಸ್ ಉಳಿಸಲೆಂದೋ, ಅಕ್ಕ ಪಕ್ಕದ ಮನೆಯವರು ಸ್ನೇಹಿತರು ಹೇಳಿದರೆಂದೋ, ಗಣ್ಯ ವ್ಯಕ್ತಿಗಳ ಹೇಳಿಕೆಯ ಆಕರ್ಷಣೆಗೋ ….ಹೀಗೆ ಯಾವದೋ ಒಂದು ಕಾರಣಕ್ಕೆ ಸೋತು ಹಾಗೆ ಮಾಡುತ್ತಾರೆ ಎಂದರೆ ತಪ್ಪಲ್ಲ.

ಒಂದು ಸಮಾನ್ಯ ಜ್ವರದ ಸಮಸ್ಯೆಯಿಂದ ವೈದ್ಯರ ಬಳಿ ಹೋದರೆ ಅವರು ಕೊಡೋ ಸೂಚನೆಗಳು ( prescription) ಒಂದು ವಾರಕ್ಕಂತೂ ಇದ್ದೆ ಇರುತ್ತದೆ, ಬಂದವರಿಗೆಲ್ಲ ಇಂಜೆಕ್ಷನ್ ಕೊಡುವ ಅಪಾಯಕಾರಿ ಡಾಕ್ಟರ್ ಬಳಿ ಹೋದರೂ ಮಿನಿಮಮ್ ಮೂರು ದಿನ.

ಅಂದರೆ ಇಲ್ಲಿ ನಾವು ಗಮನವಿಡಬೇಕಾದ ವಸ್ತು ಎಂದರೆ, ಮನುಷ್ಯರ ದೇಹ ಪ್ರಕೃತಿ !
ವೈದ್ಯ ಪದ್ದತಿ ಪ್ರಕಾರವೇ ಹೇಳಬೇಕಾದರೆ ಒಬ್ಬೊಬ್ಬರ ದೇಹ ಪ್ರಕೃತಿಯೂ ವಿಭಿನ್ನ.
ಉದಾಹರಣೆಗೆ ಒಬ್ಬರಿಗೆ ಮಂಡಿ ನೋವಿದೆ ಎಂದರೆ ಅವರು ವಾತ, ಪಿತ್ತ, ಕಫ ಈ ಮೂರರಲ್ಲಿ ( ಆಯುರ್ವೇದ ಪದ್ಧತಿಯ ಪ್ರಕಾರ ) ಯಾವ ದೇಹ ಪ್ರಕೃತಿ ಹೊಂದಿದ್ದಾರೆ, ಆ ಸಮಸ್ಯೆ ಹೇಗೆ ಉಲ್ಬಣಿಸಿದೆ ಅವರ ಆಹಾರ ಪದ್ಧತಿ , ದಿನಚರಿಯ ಶೈಲಿ, ಈ ಮುಂಚೆ ಯಾವುದಾದರೂ ಸಮಸ್ಯೆ ಇದೆಯೇ, ಹೀಗೆ ಸರಿಯಾಗಿ ವಿವರಣೆ ಪಡೆದು ಪರಿಹಾರ ಕಂಡುಕೊಳ್ಳಬೇಕು.
ಅಂಥದ್ದರಲ್ಲಿ ಜಾಹೀರಾತು ನೋಡುವವರೆಲ್ಲಾ ಒಂದೇ ವಿಧವಾದ ದೋಷ ಹೊಂದಿರುತ್ತಾರೆ ಎಂದು ಹೇಳಲಿಕ್ಕಾದರೂ ಹೇಗೆ ಸಾಧ್ಯ ?

ಸರ್ಕಾರ ಒಂದು ಔಷಧಿಗೆ ಹಕ್ಕು ಪತ್ರ ( patent) ನೀಡುವ ಮೊದಲು ಆ ಔಷಧಿ ಒಳಗೊಂಡಿರುವ ಪದಾರ್ಥಗಳನ್ನು ಪರಿಶೀಲನೆ ಮಾಡಿ ಪರವಾನಗಿ ನೀಡುತ್ತೆ. ಪರವಾನಗಿ ಪಡೆಯುವ ಆ ನಿರ್ಧಿಷ್ಟವಾದ ಔಷಧಿಗೆ ಕಂಪನಿಯವರು ಅದರ ಗುಣಮಟ್ಟದ ಜೊತೆಗೆ ಮಾರುಕಟ್ಟೆಯಲ್ಲಿ ಆ ಔಷಧಿಯ ಅವಶ್ಯಕತೆಯ ( ಯಾವ ಸಮಸ್ಯೆಗಳಿಗೆ) ಬಗ್ಗೆಯೂ ವಿವರಣೆ ನೀಡಬೇಕು .

ಈಗಿನ ವ್ಯವಸ್ಥೆಯಲ್ಲಿ ಹೊಸ ಔಷಧೀಯ ಪರವಾನಗಿ ಪಡೆಯುವುದೂ ಕೂಡ ಅಷ್ಟು ಸುಲಭದ ಮಾತಲ್ಲ. ಇಂತಿಷ್ಟು ಲಂಚ ನೀಡದೇ ಇದ್ದರೆ ಆ ಫೈಲ್ ಮುಂದಕ್ಕೆ ಹೋಗುವುದೇ ಇಲ್ಲ, ಆಯಾ ವರ್ತಮಾನಕ್ಕೆ ತಕ್ಕಂತೆ ಹೊಸ ಪ್ರಾಡಕ್ಟ್ ಗಳು ಬರುವುದರಿಂದ ಕಂಪೆನಿಗಳಿಗೂ ತುರ್ತಾಗಿ ಮಾರುಕಟ್ಟೆಯ ಅಗತ್ಯವಿರುವುದರಿಂದ ಆ ದಿಕ್ಕನ್ನೇ ಹಿಡಿಯುತ್ತವೆ.ಏಕೆಂದರೆ ಬೇಸಿಗೆ ಕಾಲಕ್ಕೆ ಬೇಕಾದ ಔಷಧಿ, ಮಳೆಗಾಲಕ್ಕೆ , ಚಳಿಗಾಲ ಹೀಗೆ ಪ್ರತೀ ಋತುವಿಗೂ ಅದಕ್ಕನುಸಾರವಾದ ವ್ಯಾಧಿಗಳು ಇದ್ದೇ ಇರುತ್ತವಲ್ಲ.ಅದಾದ ಮೇಲೆ ಚೆಂದ ಕಾಣುವ ಹಾಗೆ ಅದನ್ನು ಪ್ಯಾಕ್ ಮಾಡದೇ ಇದ್ದಲ್ಲಿ ಅದರ ಗುಣಮಟ್ಟವನ್ನು ಪ್ಯಾಕಿಂಗ್ ನಿಂದಲೇ ಅಳೆಯುವ ಜನರಿದ್ದಾರೆ.

ಈ ಕಾರಣಗಳಿಂದಲೇ ತಯಾರಿಸುವ ಕಂಪನಿ ಆದಷ್ಟು ಬೇಗ ಹಾಕಿರುವ ಬಂಡವಾಳ ರಿಟರ್ನ್ ಪಡೆಯುವುದು ಹೇಗೆಂದು ಚಿಂತೆ ಮಾಡಲೇ ಬೇಕು , ಅದರಲ್ಲೂ ಈಗಿರುವುದು ಕಾಂಪಿಟೇಶನ್ ಯುಗ, ಒಂದು ಕಂಪನಿಯ ಪ್ರಾಡಕ್ಟ್ ಚೆಂದ ಹೋಗುತ್ತಿದೆ ಎಂದಾಗಲೇ ಅದನ್ನ ತುಳಿದು ಮೇಲೆ ಬರಲು ಅದಕ್ಕೊಂದು ಪರ್ಯಾಯ ಔಷಧಿ ಮತ್ತೊಂದು ಕಂಪನಿಯಲ್ಲಿ ಸಿದ್ಧವಾಗುತ್ತವೆ, ಇದೆಲ್ಲವೂ ಪ್ರತಿಷ್ಠೆಯ ವಿಷಯವೇ ಸರಿ.

30/-  ನಲ್ಲಿ ತಯಾರಾಗುವ ವಸ್ತು, ಮಾರ್ಕೆಟ್ಟಿಗೆ ಬರುವ ಹೊತ್ತಿಗೆ 100/- ಆಗಿರುತ್ತದೆ, ಅಗತ್ಯ ಮೀರಿ ಬೆಳೆದಿರುವ ಮಾರ್ಕೆಟ್ಟಿನ ಬೇಡಿಕೆಗೆ ಇದು ಸಾಮಾನ್ಯ,
ಅದೇ ನೀವು ಒಬ್ಬ ಸೆಲೆಬ್ರೆಟಿಯನ್ನೋ, ಸ್ವಾಮೀಜಿಯನ್ನೋ ಇಟ್ಟು ಕೇವಲ ಐದು ಸೆಕೆಂಡುಗಳಷ್ಟೇ ಜಾಹೀರಾತು ಹೊರಡಿಸಿದರೂ ಸಾಕು, ಅಲ್ಲಿಗೆ ಅದರ ಬೆಲೆ ಕಡಿಮೆ ಎಂದರೂ 350/- .

ಇದಕ್ಕೊಂದು ಬೆಸ್ಟ್ ಇತ್ತೀಚಿನ ಉದಾಹರಣೆ ಎಂದರೆ, ಮೊನ್ನೆ ಮೊನ್ನೆ ತಾನೇ ಒಂದು ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಹೊರಗಡೆ ಬಂದಿದ್ದ ಪ್ರಾಯದ ಹುಡುಗಿ ತನ್ನ ಉದ್ದನೆಯ ಕಪ್ಪು ಕೂದಲಿಗಾಗಿ ಮೊದಲಿಂದಲೂ ಈ ಹೇರ್ ಆಯಲ್ ಅನ್ನೇ ಉಪಯೋಗಿಸುತ್ತಿದ್ದೆ ಅದಕ್ಕಾಗಿಯೇ ಇಂದು ನಾನು ಸೆಲೆಬ್ರೆಟಿಯಾದೆ ಎಂದು ಹೇಳುವುದು.
ಮತ್ತೂ ಕೆಲವರು ಇನ್ನೂ ಮುಂದೆ ಹೋಗಿ ಪಾರಂಪರಿಕವಾಗಿ ಯಾರೋ ಒಬ್ಬ ಋಷಿಮುನಿ ಕೊಟ್ಟ ಈ ಫಾರ್ಮುಲಾ ಉಪಯೋಗಿಸಿ ಈ ಪ್ರಾಡಕ್ಟ್ ತಯಾರಿಸಿದ್ದೇವೆ ಎಂದು ಹೇಳುತ್ತಾರೆ. ಖಚಿತವಾಗಿ ಹೇಳಬೇಕಾದರೆ ಕ್ಲಾಸಿಕಲ್ ಮೆಡಿಸಿನ್ ಗಳಿಗೆ  ಮಾತ್ರ ಋಷಿಗಳು ಬರೆದಿರುವ ರೆಫರೆನ್ಸ್ ತೆಗೆದುಕೊಳ್ಳಲಾಗುತ್ತೆ.

ನಮ್ಮದೇ ಟೀವಿಯಲ್ಲಿ ನಮ್ಮದೇ ಸಮಯ ದುಡ್ಡು ಕೊಟ್ಟು ನೋಡಿ ನಾವೇ ಮರುಳಾಗುವ ಈ ಔಷಧಿಗಳ ಜಾಹೀರಾತಿಗೆ ನಾನೆಂದೂ ವಿರುದ್ಧ.

ಮತ್ತೂ ಇಲ್ಲಿ ಕೆಲವೊಂದಷ್ಟು ವೈದ್ಯರು ಅಗತ್ಯಕ್ಕಿಂತ ಹೆಚ್ಚು ಔಷಧಿಗಳನ್ನು ಬರೆಯುವುದನ್ನು ನೀವು ಗಮನಿಸಬಹುದು.
ಅದರಲ್ಲೂ ಬೇಕಿಲ್ಲದ ಔಷಧಿಗಳನ್ನೇ ಬರೆದು, ರೋಗಿ ಪುನಃ ಪುನಃ ಕ್ಲಿನಿಕ್ ಬಾಗಿಲ ಬಳಿ ಬರುವಂತೆ ಮಾಡುವ ಕೆಲ ನಿಸ್ಸೀಮರಿರುತ್ತಾರೆ.
‎ ( ಇದರ ಹೊರತಾಗಿ ಬಹಳ ಜನ ವೈದ್ಯರು ನಮಗೆಸಿಗುತ್ತಾರೆ ಕೂಡ.)
‎ಕಾರಣ ಇಷ್ಟೇ ಆ ಔಷಧಿ ವ್ಯಾಪಾರಕ್ಕೆ ತಿಂಗಳಿಗಿಷ್ಟು ಎಂದು ಕಂಪನಿ ಮುಖಾಂತರ ಗುಪ್ತ ವ್ಯವಹಾರ ನೆಡೆದಿರುತ್ತೆ. ಅಷ್ಟೇ ಏಕೆ ಎಷ್ಟೋ ಹಾಸ್ಪಿಟಲ್ಲುಗಳಲ್ಲಿ ಒಂದು ಆಪರೇಷನ್ ಗೆ ಇಷ್ಟು, ಒಂದು ಟೆಸ್ಟಿಂಗ್ ಗೆ ಇಷ್ಟು ಎಂದು ಕಮಿಷನ್ ಪಡೆಯುವುದಿಲ್ಲವೇ… ಹಾಗೆ ಇಂತಿಷ್ಟು ಔಷಧಿ ಇಷ್ಟು ದಿನದಲ್ಲಿ ಖಾಲಿ ಮಾಡಿ ಮಾರ್ಕೆಟ್ ಡಿಮ್ಯಾಂಡ್ ಹೆಚ್ಚಿಸಲು ಇಂತಿಷ್ಟು ಕಮಿಷನ್ ಪಡೆಯುವ ವೈದ್ಯರೂ ಇದ್ದಾರೆ.

ಅದರ ಜೊತೆಗೆ ಪ್ರಾಡಕ್ಟ್ ಯಾವುದೇ ಇರಲಿ, ಅತೀ ಹೆಚ್ಚು ಮಾರ್ಜಿನ್ ಸಿಗುವ ಮೆಡಿಸಿನ್ ಗಳಿಗೆ ಮಾತ್ರವೇ ಮಣೆ ಹಾಕುತ್ತೇವೆ ಎನ್ನುವ ಒಂದು ವರ್ಗದ ಮೆಡಿಕಲ್ ಸ್ಟೋರಿನವರೂ ಈ ಲಿಸ್ಟಿನಲ್ಲಿ ಹೊರತಾಗಿಲ್ಲ .

ಓದುತ್ತಾ ಹೋದಂತೆ ಇತ್ತ ಕಡೆ ಜಾಹೀರಾತು ಬೇಡ, ಅದರ ಜೊತೆಗೆ ಒಂದಷ್ಟು ವೈದ್ಯರ ಬಗ್ಗೆಯೂ ಅಸಹ್ಯ ಮೂಡಿ ಇಕ್ಕಟ್ಟಿಗೆ ಸಿಲುಕಿದ ಹಾಗೆ ಅನಿಸಿದರೆ ಚಿಂತೆ ಬೇಡ. ಅದಕ್ಕೆ ಒಂದು ಸರಿಯಾದ ಮಾರ್ಗವೂ ಇದೆ.
‎ನಮ್ಮ ದೇಹ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳದೇ ಬರುವ ಈ ಜಾಹೀರಾತಿನ ಔಷಧಿಗಳ ಬಗ್ಗೆ ಗಮನ ಕೊಡುವುದೇ ಬೇಡ.
‎ಆದಷ್ಟೂ ಡಾಕ್ಕ್ಟರ್ ಗಳ ಬಳಿ ಪ್ರಶ್ನೆಗಳನ್ನ ಕೇಳಿ , ನಿಮ್ಮ ಸಮಸ್ಯೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಿರಿ, ಈ ಮೇಲೆ ಹೇಳಿರುವ ಅಪಾಯಕಾರಿ ವೈದ್ಯರನ್ನು ಕಂಡುಹಿಡಿಯುವ ಸುಲಭ ದಾರಿ ಎಂದರೆ ಇದೆ. ನಿಮ್ಮ ಸಮಸ್ಯೆಯ ಬಗ್ಗೆ ವಿವರಣೆ ಕೊಡುವ ಮಟ್ಟಕ್ಕೆ ಅವರಿದ್ದಾರೆ ಎಂದರೆ ನಿಜಕ್ಕೂ ನಂಬಲರ್ಹವಾದವರೇ ಸರಿ. ಮತ್ತು ಅಂತಹ ವೈದ್ಯರ ಬಗ್ಗೆ ನಿಮ್ಮ ಪರಿಚಿತರಿಗೂ ಸಾಧ್ಯವಾದಷ್ಟು ಹೇಳಿ ಪ್ರಚಾರ ಕೊಡಿ.

‎ಗ್ರಾಹಕರ ದಾರಿ ತಪ್ಪಿಸಿ ಹಾಳುಗೆಡುವ ಈ ವಿಷಯಗಳಲ್ಲಿ   ಆರೋಗ್ಯ ಇಲಾಖೆ ಗಮನ ಹರಿಸದಿರುವುದು ಇನ್ನೂ ಆಶ್ಚರ್ಯಕರ. ಸರಿಯಾದ ಪ್ರತಿನಿಧಿಗಳ ಕೊರತೆ, ಮೆಡಿಕಲ್ ಸ್ಟೋರುಗಳ ಅತೀ ಆಸೆ , ಶೀಘ್ರ ಬೆಳವಣಿಗೆಯ ನೋಟ, ಗ್ರಾಹಕರ ದೌರ್ಬಲ್ಯ , ಒಳ್ಳೆ ವೈದ್ಯರ ಕೊರತೆಯ ಜೊತೆಗೆ ಎಲ್ಲವೂ ಒಟ್ಟಾಗಿ ನಮ್ಮ ಮುಂದೆ ಔಷಧಿಗಳ ಜಾಹೀರಾತು .
ಕಂಪನಿಗಳು ಜಾಹೀರಾತಿನ ಮೊರೆ ಹೋಗುವ ಅನಿವಾರ್ಯ ಏಕೆಂದು ಒಂದು ವಿಧಾನದಲ್ಲಿ ನಿಮಗೆ ಅರ್ಥವಾಗುತ್ತಾ ಹೋಗಬಹುದು.

ಹೀಗೆ ಸಣ್ಣ ಪುಟ್ಟ ಕಾರಣಗಳು ಬಹಳ ದೊಡ್ಡ ಮಟ್ಟಕ್ಕೆ ಇಳಿದು ಒಬ್ಬ ಗ್ರಾಹಕನ ಆಲೋಚನೆಗಳ ಮೇಲೆ ಯುದ್ಧ ಮಾಡುತ್ತವೆ ಎಂದರೆ , ನಾವೆಲ್ಲಾ  ಸಾವಧಾನದಿಂದ ಯೋಚಿಸಿ ನಮ್ಮ ಲೋಭಗಳ ಜೊತೆಜೊತೆಗೇ ಬೆಳೆದು ಕೊನೆಗೆ ನಮಗೇ ಮಾರಕವಾಗಿರುವ ಈ ಲೋಪಗಳಿಗೆ ದಾರಿ ಕಂಡುಕೊಳ್ಳಬೇಕು.

1 Response

  1. ನಿಜಕ್ಕೂ ಜನರ ತಿಳುವಳಿಕೆಗೆ ಇಂಬು ನೀಡುವ ಬರಹ. ಸೂಪರ್

Leave a Reply

%d bloggers like this: