ಬಟ್ಟಲಲ್ಲಿರುವ ಅಮೃತವನ್ನು ಕೊಟ್ಟುಬಿಡುತ್ತೇನೆ

ಲಹರಿ ತಂತ್ರಿ

ಒಮ್ಮೆ ವಿಷವಿದ್ದ ಬಟ್ಟಲಲ್ಲೀಗ ಅಮೃತ ತುಂಬಿದ್ದಾರೆ
ಕುಡಿಯುವುದು ಹೇಗೆಂಬ ಕಸಿವಿಸಿ ನಂಗೆ!
ಅವಳೇನೋ ಎಲ್ಲರನ್ನೂ ದಾಟಿ ಹೋಗಿಬಿಟ್ಟಳು
ಕತ್ತಲ ಕೋಣೆಯಲ್ಲಿ ನಾನೊಬ್ಬಳೇ ಉಳಿದವಳೀಗ..

ಕಣ್ಣಲ್ಲಿ ತುಂಬಿಕೊಂಡ ಆಕಾಶ, ಎದೆಯಲ್ಲಿದ್ದ ಬೆರಗು
ಎಲ್ಲವೂ ಕೃತಕ ದೀಪದ ಉರಿಯಲ್ಲಿ ಬೇಯುತ್ತದೆ
ಕಂಡ ಕನಸೆಲ್ಲವೂ ನಿಧಾನವಾಗಿ ಕರಗುತ್ತದೆ !
ಕಿಂಡಿಗಳಿಂದ ಹಾಯುವ ಬೆಳಕೂ ಒಮ್ಮೊಮ್ಮೆ ದಿಗಿಲು ಹುಟ್ಟಿಸುತ್ತದೆ..

ಒಂದಿಷ್ಟು ಬಳಿ ಸಾರಿದಾಗೆಲ್ಲಾ ವಿಷದ ನೆನಪು ಘಮ್ಮೆನ್ನುತ್ತದೆ..
ಜೊತೆಗಿದ್ದವರಿಗೂ ಹಾಗೆಯೇ ಅನಿಸುತ್ತದೆಯಾ?
ಊಹೂಂ! ಅಂದು ಪಕ್ಕ ನಿಂತು ಮರುಕಪಟ್ಟವರೆಲ್ಲಾ
ಆಳೆತ್ತರದ ಗೋಡೆ ಕಟ್ಟಿಕೊಂಡಿದ್ದಾರೆ ತಮ್ಮ ಸುತ್ತ!

ಎಲ್ಲವನ್ನೂ ಮರೆಯಬೇಕು, ಮರೆತಂತಿರಬೇಕು
ಬದುಕಲ್ಲಿ ಮುಂದೆ ಸಾಗಬೇಕು ಎಂದವರು ಪತ್ತೆಗೇ ಇಲ್ಲ..
ಸಿಕ್ಕರೆ ಹೇಳಬೇಕು!
ಮರೆಯುವುದು ಸುಲಭ.. ಮರೆತಂತೆ ನಟಿಸುವುದೇ ಕಷ್ಟ!

ಎದ್ದು ಹೋದವಳ ಜಾಗಕ್ಕೆ
ಮತ್ಯಾರನ್ನೋ ಹುಡುಕುತ್ತಿದ್ದಾರೆ..
ಬಟ್ಟಲಲ್ಲಿರುವ ಅಮೃತವನ್ನು ಕೊಟ್ಟುಬಿಡುತ್ತೇನೆ ಅವಳಿಗೆ!
ವಿಷಕ್ಕೆ ಒಗ್ಗಿದೆ ದೇಹ!! ಪ್ರೀತಿ ಒಗರು, ರುಚಿಸುವುದಿಲ್ಲ..

Leave a Reply