ಒಂದು ಸಲ.. ಎರಡು ಸಲ.. ಮೂರು ಸಲ ನಿಧಾನವಾಗಿ ಓದಿ ‘ಫಕೀರ’ನನ್ನು ಎದೆಗಿಳಿಸಿಕೊಳ್ಳಿ.. 

“ತಂಗಿ, ಈ ಸಣ್ಣಹೊಸಬ ಹಾಗು ಬೊಮ್ಮಯ್ಯ ಅಂದರೆ ಹಕ್ಕ ಮತ್ತು ಬುಕ್ಕರ ಸಹೋದರರಾದ ಸೊಣ್ಣಪ್ಪ ಮತ್ತು ಬೊಮ್ಮಾ ದೇವ. ಈತ ಹಕ್ಕ ಬುಕ್ಕರ ಸಹೋದರ, ಬೊಮ್ಮಿದೇವಿಯ ಮಗ. ಆತ ನಮ್ಮ ಈ  ಪ್ರಾಂತ್ಯದ ಪಾಳೆಗಾರನಾಗಿದ್ದ. ಆತ ರಾತ್ರಿಯೆಲ್ಲ ಊರಲ್ಲಿ ಸಂಚರಿಸಿ ಊರಜನರನ್ನು ಕಾಪಾಡ್ತಿದ್ದ. ಹೀಗೆ ಹೇಳುವ ದಾಖಲೆಗಳು ನನಗೆ ಸಿಕ್ಕಿವೆ.“ ಚಿಕ್ಕಪ್ಪ
ಹೇಳುತ್ತಿದ್ದರೆ ನನಗೆ ಬೇರೆಯದ್ದೇ ಆಲೋಚನೆ.

ಕೆಲವು ದಿನಗಳ ಹಿಂದೆ ಅಪ್ಪನ ಮನೆಗೆ ಹೋಗಿದ್ದೆ. ಅದೆಲ್ಲಿಗೋ ಹೊರಟಿದ್ದ ಚಿಕ್ಕಪ್ಪ ನನ್ನನ್ನು ನೋಡಿದವರೇ ಮನೆಗೆ ಬಂದರು. ಮಾತಾಡುವ ಮೊದಲೇ ಕಥೆ ಪ್ರಾರಂಭಿಸಿದರು.

ಇತ್ತೀಚಿನ ದಿನಗಳಲ್ಲಿ ಅವರು ವಿಜಯನಗರದ ಮೂಲದ ಬಗ್ಗೆ ಹೆಚ್ಚು ಸಂಶೋಧನೆಯಲ್ಲಿ ನಿರತರಾಗಿದ್ದಾರೆ. ವಿಜಯನಗರದ ಮೂಲ ಆಂದ್ರದ ಗುತ್ತಿ ಅಲ್ಲ ಎಂಬ ಬಗ್ಗೆ ಸಾಕ್ಷ್ಯ ಹುಡುಕಿ ಹಂಪಿ ವಿಶ್ವವಿದ್ಯಾನಿಲಯಕ್ಕೆ ಸಬ್ ಮಿಟ್ ಮಾಡಿ ಪ್ರಬಂಧ ಮಂಡಿಸಿದ್ದಾರಲ್ಲದೇ ನಮ್ಮೂರಿನಲ್ಲಿರುವ ವಿಜಯ ನಗರದ ಮೂಲ ಆಕರಗಳನ್ನು ಸಂಗ್ರಹಿಸುವತ್ತ ಗಮನ ಹರಿಸಿದ್ದಾರೆ.

ಇತಿಹಾಸ ಎಂದರೆ ಮೂಗು ತಿರುಗಿಸಿ ಓಡುವ ನಾನು ಚಿಕ್ಕಪ್ಪನ ಎದುರು ಹಾಗೆ ಮಾಡಲಾಗದು ಎಂಬ ಏಕೈಕ ಕಾರಣಕ್ಕೆ ಅವರೆದುರು ಕುಳಿತು ಕೇಳುತ್ತೇನೆ.

ಹೀಗಾಗಿ ಅವರ ಸಂಶೋಧನೆಗಳು ಮುಂದುವರಿಯುತ್ತಿದ್ದಂತೆ ಅದರ ಎಲ್ಲಾ ಮಾಹಿತಿಗಳೂ ನನಗೆ ಲಭ್ಯವಾಗುತ್ತಿರುತ್ತದೆ.
ಎಷ್ಟೋ ಸಲ ಅವರು ಹೇಳ್ತಿದ್ದಾರಲ್ಲ ಎಂದು ಸುಮ್ಮನೇ ಕೇಳುವ ನನಗೆ ಕೆಲವೊಮ್ಮೆ ಅವರು ಹೇಳಿದ ಮಾಹಿತಿ ತೀರಾ ಕುತೂಹಲ ಹುಟ್ಟಿಸಿತ್ತು.

ಇಲ್ಲಿ ಅವರು ಹೇಳುತ್ತಿರುವ ಮಾಹಿತಿ ನಮ್ಮ ಊರುಗಳಲ್ಲಿನ ದೇವರುಗಳ ಕುರಿತಾದ್ದು.  ಜನಪದ ಕಥೆ/ ನಂಬಿಕೆಯ  ಪ್ರಕಾರ ನಡೆಯುವ ಬಂಡಿ ಹಬ್ಬ ಅಂಕೋಲಾ ಹಾಗೂ ಕುಮಟಾದ ಹಳ್ಳಿ ಹಳ್ಳಿಗಳಲ್ಲಿ ಮುಖ್ಯವಾದ ಹಬ್ಬ. ಈ ಬಂಡಿಹಬ್ಬ ನಡೆಯುವ ಊರುಗಳಲ್ಲಿಒಂದಿಷ್ಟು  ದೇವಸ್ಥಾನಗಳು ಪ್ರಮುಖವಾಗಿ ಇದ್ದೇ ಇರುತ್ತವೆ.

ಬೊಮ್ಮಯ್ಯದೇವ ಎಂಬ ಊರ ಕಾಯುವ ನಾಯಕ ಆತ. ಆತನಿಗೊಬ್ಬಳು ತಂಗಿ. ಅಮ್ಮ ಎಂದು ಎಲ್ಲಾ ಊರುಗಳಲ್ಲಿ
ಸಾರ್ವತ್ರಿಕವಾಗಿ ಕರೆಯಿಸಿಕೊಳ್ಳುವ ಇವಳಿಗೆ ಒಂದೊಂದು ಊರಲ್ಲಿ ಒಂದೊಂದು ಹೆಸರು. ಶಾಂತಿಕಾ ಪರಮೇಶ್ವರಿ, ಭೂಮ್ತಾಯಿ, ಕಾಂಚಿಕಾ ಪರಮೇಶ್ವರಿ ಅಂತೆಲ್ಲ ಕರೆಯಿಸಿಕೊಳ್ಳುವ ಇವಳು ಊರಿನ ಅಧಿನಾಯಿಕೆ. ಆದರೆ ಕರೆಯುವುದು ಬೊಮ್ಮಯ್ಯ ದೇವ ಪರಿವಾರ ಎಂದೇ.

ಈ ಬೊಮ್ಮಯ್ಯದೇವ ಜನರ ನಂಬಿಕೆಯ ಪ್ರಕಾರ ಊರನ್ನು ಕಾಯುತ್ತಾನೆ. ರಾತ್ರಿ ಊರಲ್ಲೆಲ್ಲ ಸಂಚರಿಸಿ ತನ್ನ ಜನರನ್ನು ಕಷ್ಟದಿಂದ ಪಾರು ಮಾಡುವ ನಂಬಿಕೆ ಇದೆ. ಹೀಗೆ ಊರ ಪಾಳೆಯಗಾರನಾಗಿ, ಕಾವಲುಗಾರನಾಗಿ ತನ್ನವರನ್ನು ಕಾಪಾಡಿದ ‘ಫಕೀರ’ ನನಗೆ ತಟ್ಟನೆ ನೆನಪಾದ.

ಅಣ್ಣಾ ಭಾವು ಸಾಠೆಯವರ ಮರಾಠಿ ಕಾದಂಬರಿ ಇದು.

ಅಣ್ಣಾ ಭಾವು ಸಾಠೆ ಈ ಮಾಂಗಾವಾಡೆಗಳನ್ನು ಹತ್ತಿರದಿಂದ ಕಂಡವರು. ಅದೇ ಪ್ರದೇಶದಲ್ಲಿ ವಾಸವಾಗಿದ್ದವರು. ಅವರು ಹುಟ್ಟಿದ ದಿನಗಳಲ್ಲಿ ಅವರ ತಂದೆಯನ್ನು ಹುಡುಕುತ್ತ ಬಂದ ಫಕೀರಾ ಅಣ್ಣಾ ಭಾವು ಸಾಠೆಯವರ ಅತ್ತೆಗೆ ಬಾಣಂತಿ ಹಾಗೂ ಮಗುವನ್ನು ಚೆಂದವಾಗಿ ನೋಡಿಕೊಳ್ಳಲು ಬ್ರಿಟೀಷರ ಕಂದಾಯ ಸಂಗ್ರಹಿಸಿದ್ದ ಖಜಾನೆಯಿಂದ ಲೂಟಿ ಹೊಡೆದ ಎರಡು ಬೊಗಸೆ ಸೂರತಿ ನಾಣ್ಯಗಳನ್ನು ಕೈ ತುಂಬಿದ್ದರು.

ಅಣ್ಣಾ ಭಾವು ಸಾಠೆಯವರ ಮೊದಲು ಹೊಟ್ಟೆ ತುಂಬಿಸಿಕೊಂಡಿದ್ದು ಫಕೀರಾ ಕೊಟ್ಟ ಹಣದಿಂದ. ಹೀಗಾಗಲೇ ಸಾಠೆಯವರ ತಾಯಿ “ನೀನು ಕುಡಿದ ಮೊದಲ ಗುಟುಕು ಬ್ರಿಟೀಷರ ಖಜಾನೆಯಿಂದ ಕೊಳ್ಳೆ ಹೊಡೆದಿದ್ದ  ಹಣದಿಂದ ತಂದಿದ್ದು.” ಎನ್ನುತ್ತಿದ್ದರಂತೆ ಹೀಗಾಗಿ ಫಕೀರಾ ಅಣ್ಣಾ ಭಾವೂ ಸಾಠೆಯವರ ಲೇಖನಿಯಿಂದ ಅಷ್ಟು ಸಶಕ್ತವಾಗಿ ಹೊರಬಂದಿದ್ದಾನೆ.

ಅದನ್ನು ಅಷ್ಟೇ ಸಶಕ್ತವಾಗಿ ಕನ್ನಡ ಓದುಗರಿಗೆ ಉಣಬಡಿಸಿದ್ದಾರೆ  ಗೆಳೆಯ ಗಿರೀಶ ಚಂದ್ರಕಾಂತ ಜಕಾಪುರೆ.

ಮಹಾರಾಷ್ಟ್ರದ ಸೋಲಾಪುರ ಭಾಗ ಅಪ್ಪಟ ಕನ್ನಡದ ನಾಡು. ಇಂದಿಗೂ ಅಲ್ಲಿಯ ಬಹಳಷ್ಟು ಜನರು ಕನ್ನಡಾಭಿಮಾನ ಉಳಿಸಿಕೊಂಡಿದ್ದಾರೆ. ಕರ್ನಾಟಕಕ್ಕಿಂತ ಹೆಚ್ಚಾಗಿ. ಅದರಲ್ಲೂ ಸೋಲಾಪುರದ ಅಕ್ಕಲಕೋಟೆಯಂತೂ ಪೂರ್ತಿ ಕನ್ನಡಮಯ. ಅಲ್ಲಿನ ಸಾರ್ವಜನಿಕ ಸ್ಥಳಗಳಲ್ಲಿ ನಿಂತರೆ ಕರ್ನಾಟಕದಿಂದ ಹೊರಗಿದ್ದೇವೆ ಎಂಬ ಭಾವನೆ ಕಿಂಚಿತ್ತೂ ಮೂಡುವುದಿಲ್ಲ. ಈ
ಅಕ್ಕಲಕೋಟೆಯ ಮೈಂದರ್ಗಿಯ ಗಿರೀಶ ಮಹಾರಾಷ್ಟ್ರದ ನಾಡಿನಲ್ಲಿ ಕನ್ನಡ ಕಟ್ಟುವ ಕೆಲಸವನ್ನು ತಮ್ಮ ಆದರ್ಶ ಬಳಗದ ಜೊತೆ ಸೇರಿಕೊಂಡು ಮಾಡುತ್ತಿದ್ದಾರೆ.

ಕರ್ನಾಟಕದಲ್ಲಿರುವ ನಾವೂ ನಾಚಿಕೊಳ್ಳುವಂತೆ ಇರುತ್ತದೆ ಅವರ ಕನ್ನಡದ ಕಾರ್ಯಕ್ರಮಗಳು. ಅಂತಹ ಗಿರೀಶ ಇಂತಹುದ್ದೊಂದು ಅಪ್ಪಟ ಗ್ರಾಮ್ಯವಾದ ಮರಾಠಿ ಕಾದಂಬರಿಯನ್ನು ಕನ್ನಡಕ್ಕೆ ತಂದು ಅಣ್ಣಾ ಭಾವೂ ಸಾಠೆಯವರನ್ನು ಓದುವ ಗಮ್ಮತ್ತನ್ನು ನಮಗೂ ಒದಗಿಸಿ ಕೊಟ್ಟಿದ್ದಾರೆ.

ಆಗಲೇ ಹೇಳಿದಂತೆ ರಾತ್ರಿಯಲ್ಲೂ ಎಚ್ಚರವಾಗಿದ್ದು ತನ್ನ ಜನರನ್ನು ಕಾದಂತಹ ಫಕೀರ, ತನ್ನವರಿಗೆ ಯಾವ ಸಂಕಷ್ಟವೂ ಕಾಡದಂತೆ ಊರನ್ನು ಕಾಪಾಡಿದ  ಬೊಮ್ಮಯ್ಯ ದೇವ ಮತ್ತು ಆತನ ಪರಿವಾರ ದೇವರುಗಳು ಇಂಥವರನ್ನೆಲ್ಲ ದೇವರ ಸ್ಥಾನದಲ್ಲಿಟ್ಟು ಪೂಜಿಸುವುದರಲ್ಲಿ ಯಾವ ಆಶ್ಚರ್ಯವೂ ನನಗೆ ಕಾಣುವುದಿಲ್ಲ.

ನನ್ನೂರು ಕುಮಟಾ ತಾಲೂಕಿನ ಹಿರೇಗುತ್ತಿಯ ಬಂಡಿ ಹಬ್ಬ ನಡೆಯುವ ಸಂದರ್ಭದಲ್ಲಿ ಒಂದು ಸಂಜೆ ಕತ್ತಲ ಸಮಯದಲ್ಲಿ  ಕುದುರೆ ಓಡುತ್ತದೆ. ಅದರ ದಾರಿಗೆ ಅಡ್ಡವಾಗಿ ಕಟ್ಟಿರುವು ಬೇಲಿ, ಪಾಗಾರವನ್ನೆಲ್ಲ ಹಾರಿ ಅಥವಾ ಕೆಡವಿ ಓಡುವ ಈ ಕುದುರೆಯ  ಬಗ್ಗೆ ನನಗೆ ಚಿಕ್ಕಂದಿನಿಂದಲೂ ಕುತೂಹಲ ಜಾಸ್ತಿ.

ಸಣ್ಣವಳಿದ್ದಾಗ ಬಂಡಿ ಹಬ್ಬದ ಸಮಯದಲ್ಲೆಲ್ಲ ಕುದುರೆ ನೋಡೋದಕ್ಕೆ ಹೋಗಲು ಹಠಮಾಡುತ್ತಿದ್ದೆ. ನಮ್ಮ ಮನೆಯ ಹಾದಿಯಲ್ಲಿ ಬರದ ಆ ಕುದುರೆಯನ್ನು ನೋಡಲು ಸಾಕಷ್ಟು ದೂರ ಹೋಗಬೇಕಾಗುತ್ತದೆ ಎಂದು ಅಮ್ಮ ಭಯ
ಪಡುತ್ತಿದ್ದರು. ಭಯ ಪಡಲು ಮತ್ತೂ ಒಂದು ಕಾರಣ ಎಂದರೆ ನಾನೆಲ್ಲಾದರೂ ಕುದುರೆ ನೋಡುವ ಭರದಲ್ಲಿ ಅದಕ್ಕೆ ಅಡ್ಡಹಾದು ಕಾಲಡಿ ಸಿಕ್ಕಿಕೊಂಡರೆ ಎಂಬುದು.

ಇಲ್ಲಿ ಕುದುರೆ ಎಂದರೆ ಅದು ಕುದುರೆ ಅಲ್ಲ. ಬೊಮ್ಮಯ್ಯ ದೇವರ ಅಧಿಕಾರಸ್ತನೊಬ್ಬ ದೇವರ ಕುದುರೆಯನ್ನು ಮೈಮೇಲೆ
ಆವಾಹಿಸಿಕೊಂಡು ಊರನ್ನು ಪ್ರದಕ್ಷಿಣೆ ಹಾಕುವ ಒಂದು ಸಂಪ್ರದಾಯವದು. ಆಗೆಲ್ಲ ನನ್ನ ಸಿಣ್ಣಜ್ಜ ಅದು ದೇವರು ಊರನ್ನು ಕಾವಲು ಕಾಯುತ್ತಾನೆ ಎಂಬುದಕ್ಕೆ ರೂಪಕ ಎಂದಿದ್ದರು

ಹೀಗಾಗಿ  ಊರು ಕಾಯುವ ಬೊಮ್ಮಯ್ಯ ದೇವರ ಪರಿವಾರ ದೇವರುಗಳ ಕಥೆಗಳು ನನಗೆ ಬೇರೇನೋ ಹೇಳುತ್ತಿದೆ ಎಂದು ನನಗೆ ಯಾವಾಗಲೂ  ಅನ್ನಿಸುತ್ತಲೇ ಇತ್ತು.

ಮದುವೆಯಾಗಿ  ಅಂಕೋಲಾ ತಾಲೂಕಿನ ಸೂರ್ವೆ ಎಂಬ ಊರಿಗೆ ಬಂದರೂ ಅಲ್ಲಿಯೂ ಇಂತಹುದ್ದೇ ಕಥೆಗಳು. ಬಂಡಿಹಬ್ಬ ನಡೆಯುವ ಊರುಗಳಲ್ಲೆಲ್ಲ ಅತಿ ಹೆಚ್ಚು ವಿಜೃಂಭಣೆಯಿಂದ ನಡೆಸುವ ಊರು ಇದು. ಸುತ್ತೆಲ್ಲೂ ಕಾಣದ ನಾಲ್ಕು ಕಳಶಗಳು, ಎತ್ತರದ ಕೋಗ್ರೆ ಗುಡ್ಡದ ಮೇಲೆ ನಿಂತು ತದೇಕಚಿತ್ತದಿಂದ ಸುತ್ತಲಿನ ನಾಲ್ಕು ಹಳ್ಳಿಗಳನ್ನು ಕಾಯುವ ಬೊಮ್ಮಯ್ಯ ದೇವನ
ಬಗ್ಗೆ ಇಲ್ಲಿ ಮತ್ತೂ ರೋಚಕ ಕಥೆಗಳಿದ್ದವು.

ಹಿಂದೆಲ್ಲ ಬೇಟೆಗೆಂದು ಕಾಡಿಗೆ ಹೋದವರಿಗೆ ಮಧ್ಯರಾತ್ರಿಯ ಹೊತ್ತಿಗೆ ಕುದುರೆಯ ಖರಪುಟದ ಸದ್ದು ಕೇಳಿಸುತ್ತಿತ್ತಂತೆ. ಭರ್ರನೇ
ಶ್ವೇತ ವಸ್ತ್ರಧಾರಿಯೊಬ್ಬ ಕಣ್ಣು ಮಿಟುಕಿಸುವುದರೊಳಗೆ ಕುದುರೆಯ ಮೇಲಿಂದ ಹಾದು ಹೋದಂತಾಗುತ್ತಿತ್ತಂತೆ. ಇದೆಲ್ಲ ಕಥೆಗಳು ಮುಗಿದು ಇತ್ತೀಚಿನ ದಿನಗಳಲ್ಲಿ ಬೆಟ್ಟದ ಬುಡದಲ್ಲಿ ಮನೆ ಕಟ್ಟಿಕೊಂಡವರಿಗೆ ಒಮ್ಮೊಮ್ಮೆ ಮಧ್ಯರಾತ್ರಿ ಯಾರೋ ಕುದುರೆ ನಿಲ್ಲಿಸಿ ದೇವಸ್ಥಾನದ ನೂರಾರು ಮೆಟ್ಟಿಲುಗಳನ್ನು ಸರಸರನೆ ಹತ್ತಿ ಹೋದಂತೆ ಕಂಡಿದ್ದಿದೆಯಂತೆ.

ಈ ಅಂತೆ ಕಂತೆಗಳೆಲ್ಲ ಏನೇ ಇದ್ದರೂ ಮೇಲ್ವರ್ಗದ, ಕ್ಷೀರ ಸಾಗರವಾಸಿ, ಕಮಲಪೀಠದಾರಿ, ಕೈಲಾಸದೊಡೆಯ ಎಂಬೆಲ್ಲ ಶಿಷ್ಟ ದೇವತೆಗಳಿಗಿಂತ ಜನಸಾಮಾನ್ಯರ ನಡುವಿನಿಂದಲೇ ಹುಟ್ಟಿ ಬಂದ ಈ ದೇವರುಗಳೆಲ್ಲ ನನಗೆ ಅದ್ಭುತ ಪ್ರಜಾಪಾಲಕರು
ಎಂದುಕೊಳ್ಳುವಂತಾಗುತ್ತಿತ್ತು.

ಇಲ್ಲಿ ಫಕೀರ ಕೂಡ ಹಾಗೇ.

ಅದಕ್ಕೂ ಮೊದಲು ಬರುವ ಫಕೀರನ ಅಪ್ಪ ರಾಣಾ ಕೂಡ ಅಷ್ಟೇ. ಅವನ ಅಪ್ಪ ದೌಲತಿಯೂ ಹಾಗೆ. ತನ್ನವರು ತನ್ನ ಊರವರು, ತನ್ನ ವಾಡೆಯವರು ಎಂದರೆ ಜೀವ ಕೊಡುವುದಕ್ಕೂ ಸಿದ್ಧರಾಗಿದ್ದಂತಹ ಧೀರರು. ಹೀಗೆಂದೇ ಆತ
ತನ್ನ ಊರಿಗಾಗಿ ಪಕ್ಕದ ಊರಾದ ಶಿಗಾಂವದ ಹೆಮ್ಮೆಯ ಪ್ರತೀಕವೆನ್ನಿಸಿಕೊಂಡಿದ್ದ ಜೋಗಿಣಿ ಜಾತ್ರೆಯಲ್ಲಿ ಜೋಗಿಣಿಯ ಕೈಯ್ಯಿಂದ ಕೊಬ್ರಿಬಟ್ಟಲನ್ನು ಕಿತ್ತುಕೊಂಡು ಬರುವ ಸಾಹಸಕ್ಕೆ ಕೈ ಹಾಕಿದ್ದು.

ಹಿಂದೊಮ್ಮೆ ನಾನು ಮಂಗಳೂರಿನ ಬೆಳ್ತಂಗಡಿಯ ಕೊಯ್ಯೂರು ಎಂಬ ಗ್ರಾಮದಲ್ಲಿದ್ದೆ. ನಾಲ್ಕೈದು ಕಿ.ಮಿ ದೂರ ಹೋದರೆ ಧರ್ಮಸ್ಥಳ. ನಮ್ಮೂರಿಂದ ಯಾರಾದರೂ ಅಲ್ಲಿಗೆ ಬಂದರೆ ಅವರಿಗೆ ಧರ್ಮಸ್ಥಳ ವಿಶೇಷ ಆಕರ್ಷಣೆ. ನಾನೇನಾದರೂ ಧರ್ಮಸ್ಥಳಕ್ಕೆ ಹೋಗೋಣ ಎಂದು ಕೊಯ್ಯೂರಿನ ಯಾರನ್ನಾದರೂ ಕರೆದರೆ ಅವರು ಹೊಟ್ಟೆ ತುಂಬಾ ಊಟ ಮಾಡಿ, ನೀರು ಕುಡಿದು ಬರುತ್ತಿದದ್ದರು. ಧರ್ಮಸ್ಥಳದಲ್ಲಿ ಅವರು ಒಂದು ತೊಟ್ಟು ನೀರನ್ನೂ ಕುಡಿಯುತ್ತಿರಲಿಲ್ಲ. ಯಾಕೆಂದು ಕೇಳಿದರೆ ಕೊಯ್ಯೂರಿಗೂ ಧರ್ಮಸ್ಥಳದವರಿಗೂ ಆಗಿಬರುತ್ತಿರಲಿಲ್ಲವಂತೆ. ಅತ್ತ ಧರ್ಮಸ್ಥಳದವರೂ ಹೀಗೆಯೆ. ಅವರೂ ಕೂಡ ಕೊಯ್ಯೂರಿನಲ್ಲಿ ಒಂದು ಹನಿ ನೀರನ್ನೂ ಬಾಯಿಗೆ ಹಾಕುತ್ತಿರಲಿಲ್ಲ.

ಧರ್ಮಸ್ಥಳ ಮತ್ತು ಕೊಯ್ಯೂರಿನ ನಡುವೆ ಕೊಟ್ಟುಕೊಳ್ಳುವ ಸಂಬಂಧಗಳೂ ಕಡಿಮೆ. ಒಂದು ವೇಳೆ ಧರ್ಮಸ್ಥಳದ ಸಂಬಂಧಿಗಳು ಕೊಯ್ಯೂರಿಗೆ ಬಂದರೆ ಅಥವಾ ಕೊಯ್ಯೂರಿನವರು ಧರ್ಮಸ್ಥಳದ ಸಂಬಂಧಿಗಳ ಮನೆಗೆ ಹೋದರೆ ಆ ಮನೆಯಲ್ಲಿ ಎಂತಹುದ್ದೇ ಕಾರ್ಯವಿದ್ದರೂ ಅವರು ಊಟ ಮಾಡದಿರುವ, ಊಟವೇಕೆ? ಹನಿ ನೀರನ್ನೂ
ಕುಡಿಯದಿರುವ ಸಂಪ್ರದಾಯ ಇದೆ. ಇಂತಹುದ್ದೊಂದು ವಿಚಿತ್ರ ಸಂಪ್ರದಾಯ ಮೋಗಿನ್ನಾಯ ಮತ್ತು
ಧರ್ಮಸ್ಥಳದ ನಡುವೆಯೂ ಇದೆಯಂತೆ.

ಕದ್ರಿಯಿಂದ ಮಂಜುನಾಥ ಸ್ವಾಮಿಯನ್ನು ತರುವಾಗ ಕೊಯ್ಯೂರಿನ ಭೂತ ಭೈರವ ಹಾಗೂ ಮೋಗಿಲ್ನಾಯ ಮುಂತಾದ ಬೇರೆ ಬೇರೆ ಊರುಗಳ ಭೂತಗಳು ಮಂಜುನಾಥ ಸ್ವಾಮಿಯನ್ನು ತಮ್ಮೂರಿಗೆ ಕದ್ದುಕೊಂಡು ಬರಲು ದಾಳಿ ನಡೆಸಿದ್ದರಂತೆ. ಆದರೆ ಧರ್ಮಸ್ಥಳದ ಕಾವಲುಗಾರ ಅಣ್ಣಪ್ಪ ಸ್ವಾಮಿ ಹಾಗೂ ಕೊಡಿಮಾರ ಹೌಂಡಿ ಎಂಬ ಭೂತ ಇವರೆಲ್ಲರ ಪ್ರಯತ್ನಗಳನ್ನು ತಪ್ಪಿಸಿದವಂತೆ.

ಅದರಲ್ಲೂ ಕೊಡಿಮಾರ ಹೌಂಡ ಧರ್ಮಸ್ಥಳದ ಧ್ವಜಸ್ಥಂಭವನ್ನೇ ಮುರಿದು ಈ ಪರವೂರಿನ ಭೂತಗಳನ್ನು ಹೊಡೆದು ಓಡಿಸಿದ ಕಥೆ ಜನಜನಿತವಾಗಿದೆ. ಆ ಸಂದರ್ಭದಲ್ಲಿ ಕೊಯ್ಯೂರಿನ ಭೂತದ ಸೊಂಟವನ್ನು ಅಣ್ಣಪ್ಪ ಸ್ವಾಮಿ ಒದ್ದು ಮುರಿದಿದ್ದರಿಂದ ಇಂದಿಗೂ ಭೂತದ ಕೋಲ ಕಟ್ಟುವ ಸಂದರ್ಭದಲ್ಲಿ ಕೊಯ್ಯೂರಿನ ಭೈರವ ಭೂತ ಸೊಂಟ ಮುರಿದುಕೊಂಡಂತೆಯೇ ಕೋಲದ ನೃತ್ಯ ಮಾಡುತ್ತದೆ.

ಇಡೀ ರಾತ್ರಿ ಸೊಂಟ ಮುರಿದ ಸ್ಥಿತಿಯಲ್ಲಿಯೇ ಕೋಲಕಟ್ಟುವವರು ಇರಬೇಕಾದದ್ದನ್ನು ಕಂಡು ನಿಜಕ್ಕೂ ಈ ಸಂಪ್ರದಾಯಗಳು, ದೇವರನ್ನು ಕದ್ದುಕೊಂಡು ತಮ್ಮೂರಿಗೆ ಕರೆದುಕೊಂಡು ಹೋಗುವ ಹುನ್ನಾರಗಳು, ಅಲ್ಲಿ ಸಂಭವಿಸುವ ಎಲ್ಲ ಹಾನಿಗಳನ್ನು
ಯಥಾಪ್ರಕಾರ ಮುಂದುವರಿಸುವ ರೂಢಿ ಎಲ್ಲವೂ ಅಚ್ಚರಿ ಹುಟ್ಟಿಸಿದ್ದವು.

ಫಕೀರ ಕಾದಂಬರಿಯಲ್ಲೂ ಅಣ್ಣಾ ಭಾವೂ ಸಾಠೆಯವರು ಈ ಪ್ರಸ್ಥಾಪವನ್ನು ತರುತ್ತಾರೆ. ಶಿಗಾಂವದ ಖೋತಾನೂ  ಕಾಳಗಾಂವ ಎಂಬ ಊರಿಂದ ಕೊಬ್ಬರಿ ಬಟ್ಟಲನ್ನು ಕಿತ್ತು ತಂದಿದ್ದ ಹಾಗೆ ಕೊಬ್ಬರಿ ಬಟ್ಟಲಿಗೆ ಕೈ ಹಾಕಿದರೆ ತನ್ನ ತಲೆಯೇ ಹೋಗುತ್ತದೆ ಎಂಬ ಸತ್ಯ ಆತನಿಗೆ ಅರಿವಿರಲಾರದ್ದೇನೂ ಆಗಿರಲಿಲ್ಲ.

ಅಷ್ಟಕ್ಕೂ ಅದೇ ರಾತ್ರಿ ಇನ್ನೂ ಬಾಲ್ಯದ ಹಾಲುಗಲ್ಲವನ್ನು ಕಳೆದುಕೊಳ್ಳದಿದ್ದ ಫಕೀರ “ಅಪ್ಪಾ ತಲಿ ಕಡಿತಿದ್ರೂ ಕಡೀಲಿ, ನೀ
ಬಟ್ಲಾ ಕಸ್ಕೊಂಡು ಬಾ” ಎಂದು ವೀರ ಮಾದಿಗ ಜನಾಂಗಕ್ಕೆ ತಕ್ಕುನಾದ ಶೌರ್ಯದ ಮಾತನಾಡಿದ್ದ. ಅಂತಹ ಎಳವೆಯಲ್ಲಿಯೇ  ಹಾಗೆ ಕಲಿತನ ತೋರಿದ್ದ ಫಕೀರ ಮುಂದೆ ಯಾರಿಗೂ ಅಂಜದ ಸರದಾರನಾಗಿದ್ದರಲ್ಲಿ ಯಾವ ಆಶ್ಚರ್ಯವೂ ಇರಲಿಲ್ಲ.

ಅಣ್ಣಾ ಸಾವು ಸಾಠೆಯವರು ಸ್ವತಃ ಈ ತರಹದ ಮಾಂಗವಾಡೆಯಲ್ಲಿದ್ದವರು. ಅಲ್ಲಿಯ ಕಷ್ಟಗಳನ್ನು ಕಣ್ಣಾರೆ ಕಂಡವರಷ್ಟೇ ಅಲ್ಲ, ಜೀವನ ಪೂರ್ತಿ ಅದನ್ನು ಅನುಭವಿಸಿದವರು. ಹೀಗಾಗಿ ಅಂದಿನ ಬ್ರಿಟೀಷ್ ಸರಕಾರ ಮಾದಿಗರನ್ನು, ರಾಮೋಶಿಗಳನ್ನು
ಕಳ್ಳರು, ದರೋಡೆಕೋರರು, ಲೂಟಿಕಾರರು ಎಂದೆಲ್ಲ ಆಪಾದನೆ ಹೊರಿಸಿ ಹದ್ದುಪಾರಿನ ಶಿಕ್ಷೆಗೆ ಒಳಪಡಿಸುತ್ತಿದ್ದುದರ ವಿವರಣಾತ್ಮಕ ಭಾಗವನ್ನು ಬರೆಯುವಾಗ ಹೊಟ್ಟೆಯೊಳಗಿನ ನೋವನ್ನೆಲ್ಲ ಅಕ್ಷರಕ್ಕಿಳಿಸಿದ್ದಾರೆ.

ಹೀಗಾಗಿಯೇ ಇಡೀ ಕಾದಂಬರಿಯ ಈ ಭಾಗಗಳೆಲ್ಲ ಜೀವ ತಳೆದು ಎದ್ದು ಬಂದಿದೆ ಎಂಬಂತೆ ಭಾಸವಾಗುತ್ತದೆ.

ಸಾವಳಾನ ಗಡಿಪಾರು ಹತ್ತು ವರ್ಷಗಳವರೆಗೂ ಮುಂದುವರೆದು, ಅದನ್ನು ಪ್ರಶ್ನಿಸುವವರೇ ಇಲ್ಲದೇ ಆತ, “ನನ್ನ ಎಲುವು-
ತೊಗಲಾ ಪರಸ್ಥಳದಲ್ಲಿ ಮಣ್ಣಾಗಾಕ ಬಿಡಬ್ಯಾಡ್ರಿ, ನಾ ನಾಯಿ ಸತ್ತಂಗ್ ಆಗೂದ ಬ್ಯಾಡ, ನನ್ ಹೆಣಕ್ಕ ನಿಮ್ಮೆಲ್ಲರ ಕೈ ಹತ್ತಲಿ” ಎಂದು ಫಕೀರನಲ್ಲಿ ಬೇಡಿಕೊಳ್ಳುವಾಗ ಒಂದುಕ್ಷಣ ಮನಸ್ಸು ಸ್ಥಬ್ಧವಾಗುತ್ತದೆ.

ಇಡೀ ಮಳೆಗಾಲ ಕಳೆಯುವವರೆಗೆ ಮಾಂಗವಾಡೆಯ ಮಾದಿಗರಿಗೆ ಹೊಟ್ಟೆಗೆ ಗತಿಯಿಲ್ಲ. ಹೀಗೆಂದೇ ಅವರು ಪರವೂರಿಗೆ ಹೊರಡುತ್ತಿದ್ದರು. ಎಲ್ಲೇಲ್ಲಿ ಏನೇನು ಸಿಗುತ್ತದೋ ಅದನ್ನೆಲ್ಲ ತರುಬಿ ತಂದು ಊರೊಳಗಿನ ಹೆಂಗಸರು ಮತ್ತು ಮಕ್ಕಳ ಹೊಟ್ಟೆ ತಂಪಾಗಿಡುವ ಪ್ರಯತ್ನ ಮಾಡುತ್ತಿದ್ದರು. ಇಲ್ಲವೆಂದಾದಲ್ಲಿ ಇಡೀ ಮಾಂಗವಾಡೆಗೆ ಮಾಂಗವಾಡೆಯೇ ನಾಶ ಹೊಂದುವ ಭಯವಿರುತ್ತಿತ್ತು.

ಆದರೆ ಇದಾವುದನ್ನೂ ಅರ್ಥ ಮಾಡಿಕೊಳ್ಳದ ಸರಕಾರ ಮಾದಿಗ, ರಾಮೋಶಿ ಮುಂತಾದ ಹಲವಾರು ತಳಸ್ಥರದ ಜನಾಂಗಗಳನ್ನು ತೀರಾ ಕೀಳಾಗಿ ನೋಡುತ್ತಿತ್ತು. ಎಷ್ಟೋ ಸಲ ಮಾದಿಗರು ತಾವು ಮಾದಿಗರೆಂದು ಬಹಿರಂಗವಾಗಿ ಒಪ್ಪಿಕೊಳ್ಳಲು, ಗುರುತಿಸಿಕೊಳ್ಳಲು ಹಿಂಜರೆಯುವಂತಹ ಸ್ಥಿತಿ ನರ್ಮಾಣವಾಗಿಬಿಟ್ಟಿತ್ತು. ಒಂದು ಕಾಲದಲ್ಲಿ ಇಡೀ ಮಹಾರಾಷ್ಟ್ರವೇ ಮಹಾರ್ ಜನಾಂಗದ್ದಾಗಿತ್ತು ಎಂಬ ನಂಬಿಕೆ ಇದ್ದಾಗಲೂ ಮಹಾರರು ಈ ಅನ್ಯಾಯದ ಆರೋಪ ಹಾಗೂ ಶಿಕ್ಷೆಗಳಿಗೆ ಹೆದರಿ ಹೇಳದೇ ಕೇಳದೇ ಉರು ಬಿಟ್ಟು ಪರಸ್ಥಳಕ್ಕೆ ಹೋಗಿ ಜೀವನ ನಿರ್ವಹಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿಬಿಟ್ಟಿತ್ತು.

ಆದರೆ  ಫಕೀರ ಈ ಎಲ್ಲ ನಿಂದನೆಗಳಿಗೂ ಒಂದು ಅಂತ್ಯ ಹಾಡಿ ಮಾದಿಗರು, ರಾಮೋಶಿಗಳಂತಹ ಸಾಮಾಜಿಕವಾಗಿ ಬಹಿಷ್ಕೃತ ಸಮುದಾಯಗಳಿಗೂ ಒಂದು ಘನತೆಯನ್ನು ತಂದುಕೊಟ್ಟವನು. ಕೇವಲ ಲೂಟಿಕೋರರು, ದರೋಡೆಕೋರರು ಎಂದು ಕೀಳಾಗಿ ನಡೆಸಿಕೊಂಡ ಇಂತಹ ಜನಾಂಗಗಳ ಬದನಾಮಿಯನ್ನು ಸಹಿಸದೇ ಅವರನ್ನು ಉನ್ನತ ಸ್ಥರಕ್ಕೆ ಕೊಂಡೊಯ್ಯುವ ಪ್ರಯತ್ನ
ಮಾಡಿದವನು.

ನಾವೀಗ ಸಮಾಜದಲ್ಲಿ ಉಚ್ಛ ಕುಲದವರು ಎಂದು ಕರೆಯುವ ಕುಲಕರ್ಣಿ, ಪಂಥರಂತವರೂ ತನ್ನ ಮಾತನ್ನು ಕೇಳುವಂತೆ ಮಾಡಿದವನು. ತಾನು ಮಾತನಾಡಿದರೆ ಅದಕ್ಕೊಂದು ಅರ್ಥ ಇದ್ದೇ ಇರುತ್ತದೆ ಎಂದು ಎಲ್ಲರಿಗೂ ಮನದಟ್ಟು ಮಾಡಿಸಿದವನು. ಸುತ್ತಲಿನ ಹತ್ತಾರು ಹಳ್ಳಿಗಳಿಂದ ಜನರು ತನ್ನನ್ನು ಹುಡುಕಿಕೊಂಡು  ಬರುವಂತೆ ಮಾಡಿದವನು.

ಸುತ್ತೆಲ್ಲ ಹಳ್ಳಿಗಳಿಗೆ ತನ್ನ ಸಹಾಯ ಹಸ್ತ ಚಾಚಿದವನು. ಅಸಹಾಯಕರು ಎಲ್ಲಿದ್ದರೂ ತಾನೇ ಹುಡುಕಿಕೊಂಡು ಹೋಗಿ ಸಹಾಯ ಮಾಡಿದವನು. ಸಮಾಜದಲ್ಲಿ ನೊಂದು ಬೆಂದ ಜನಾಂಗಗಳಿಗೆ ಸಾಂತ್ವನವಾದವನು.

ಹೊಟ್ಟೆಗಿಲ್ಲದ ಬಡವರಿಗೆ ತಾಯಿಯಾದವನು. ತನ್ನವರನ್ನು ದಾರಿದ್ರ್ಯಕ್ಕೆ ತಳ್ಳಿದವರಿಗೆ ಹುಲಿಯಾಗಿ ಕಾಡಿದವನು. ತನ್ನವರಿಗೋಸ್ಕರ ಮೈಯ್ಯಲ್ಲಿ ಬೆಂಕಿ ಕಟ್ಟಿಕೊಂಡು ಬಡಿದಾಡಿದವನು. ಮಹಾಮಾರಿ ಊರು ಹೊಕ್ಕಾಗ ರೋಗದೊಂದಿಗೇ ಸೆಣಸಾಡಿ ತನ್ನವರನ್ನು ಬದುಕಿಸಿಕೊಂಡವನು.

ಯಾರು ಏನಾದರೇನು? ಊರಿದ್ದಲ್ಲಿ ಒಂದು ಕೊಳಗೇರಿ ಇದ್ದೇ ಇರುತ್ತದೆ ಎಂಬುದಕ್ಕೆ ಸಾಕ್ಷಿಯಾಗಿ ವಾಟೆಗಾಂವ್ ದಲ್ಲಿಯೂ ಊರ ಜನರ ವಿರುದ್ದವೇ ಸಂಚು ಹೂಡಿದ ಕುಲಕರ್ಣಿ ಸಿಗುತ್ತಾನೆ. ತನ್ನ ಊರಿನ  ಶ್ರಮ ಜೀವಿಗಳನ್ನು ಫೋಲೀಸರಿಗೆ ಹಿಡಿದು ಕೊಡುವ ಸಲುವಾಗಿ ನಾನಾ ತಂತ್ರಗಳನ್ನು ಹೆಣೆಯುತ್ತ ಪರ ಊರಿನವರೊಂದಿಗೆ ಕೈ ಜೋಡಿಸುತ್ತಾನೆ.

ಹೊಸ ಪಾಟೀಲನಾಗಿ ಅಧಿಕಾರ ವಹಿಸಿಕೊಂಡ ರಾವ್ ಸಾಹೇಬ ಊರಿನ ಮಾಂಗವಾಡೆಯ ಜನರನ್ನು ಶತ್ರುಗಳಂತೆ ಕಾಣತೊಡಗಿದ. ದಿನಕ್ಕೆ ಐದು ಸಲ ಮಾಂಗವಾಡೆಯ ಬೀದಿ ಬೀದಿಯಲ್ಲಿ ಹೆಸರು ಕೂಗುತ್ತ ಹಾಜರಿ ಹಾಕುತ್ತಿದ್ದ. ಅದನ್ನು ವಿರೋಧಿಸಿದರೆ ಎಲ್ಲಾದರೂ ದರೋಡೆಗೆ ಹೋದರೆ ಎಂಬ ಹೀಗಳಿಕೆಯ ಅವಮರ್ಯಾದೆ. ಮಧ್ಯರಾತ್ರಿ ಹಾಯಾಗಿ ಮಲಗಿದವರನ್ನು ಕರೆದು ಕರೆದು, ಹೊರಗೆ ಬಂದೇ ಹಾಜರಿ ಹಾಕು ಎಂದು ಒತ್ತಾಯಿಸುತ್ತ “ಹೆಂಡ್ತಿ ಪಕ್ಕ ಹಾಯಾಗಿ ಮಕ್ಕೊಂಡು
ಹಾಜರಿ ಹಾಕೋ ಹಂಗಿಲ್ಲ” ಎನ್ನತ್ತ ಅಸಹ್ಯವಾಗಿ ಮಾತನಾಡುತ್ತಿದ್ದಾತ,  ಇಡೀ ಮಾದಿಗ ಜನಾಂಗದ ಸ್ವಾಭಿಮಾನವನ್ನು  ಕೆಣಕುತ್ತ ಹಾಗೆಯೇ ಫಕೀರನ ಕೈಯ್ಯಲ್ಲಿ ಸಿಕ್ಕು ತಪ್ಪಿಸಿಕೊಳ್ಳುವ ಭರದಲ್ಲಿ ಗುಡ್ಡದ ಮೇಲಿಂದ ಬಿದ್ದು ಪ್ರಾಣ ಕಳೆದುಕೊಳ್ಳುತ್ತಾನೆ.

ಇದು ಎಷ್ಟೋ ವರ್ಷಗಳ ಹಿಂದಿನ ಮಾತು. ಆದರೆ ನಾವೀಗಲೂ ಈ ಜಾತಿ ಪದ್ದತಿಯನ್ನು ಶಾಲೆ ಎಂಬ ವಿದ್ಯಾಮಂದಿರದಲ್ಲೂ ಚಾಚೂ ತಪ್ಪದೇ ಪಾಲಿಸುತ್ತಿದ್ದೇವೆ.

“ಎಸ್ಸಿ, ಎಸ್ಟಿ ಮಕ್ಕಳು ಯಾರ್ಯಾರು ಇದ್ದೀರಿ ಎದ್ದು ನಿಲ್ಲಿ” ಎಂದು ಯಾವ ಮುಜುಗರವೇ ಇಲ್ಲದೇ ಹೇಳುತ್ತೇವೆ. ಎದ್ದು ನಿಂತ ವಿದ್ಯಾರ್ಥಿಗಳನ್ನು ‘ಯಾವ ಜಾತಿ ನಿಮ್ದು?’ ಎಂದು ಒಂದಿಷ್ಟೂ ಸಂವೇದನೆಯೂ ಇಲ್ಲದೇ ಪ್ರಶ್ನಿಸುತ್ತೇವೆ. ಇದಕ್ಕೂ ಮುಂದುವರೆದು ಸರಕಾರಿ ಮಕ್ಕಳು…. ನಿಮಗೆ ಸ್ಕಾಲರ್ ಶಿಪ್  ಅಂತಾ ಹಣ ಬರುತ್ತೆ.  ಅದಕ್ಕೆ ನಾವು ನಮ್ಮ ದುಡ್ಡು ಖರ್ಚು ಮಾಡ್ಕೊಂಡು ಓಡಾಡಬೇಕು.” ಎಂದು ಮೂಗು ಮುರಿಯುತ್ತೇವೆ.

ಪಾಪ ಆ ಮಕ್ಕಳು ಉಳಿದ ಅಷ್ಟೊಂದು ಸಹಪಾಠಿಗಳ ಎದುರು ಎದ್ದು ನಿಂತು ಅದೆಷ್ಟು ಮುಜುಗರ ಅನುಭವಿಸುತ್ತ,
“ಯಾಕಾದರೂ ಈ ಜಾತಿಗಳಲ್ಲಿ ಹುಟ್ಟಿದೆವೋ” ಎಂದು ಪರಿತಪಿಸುವಂತೆ ಮಾಡಿಬಿಡುತ್ತೇವೆ.

ಅದರಲ್ಲೂ ಈ ವರ್ಷ ಮಡಿವಾಳ ಮಾಚಯ್ಯ ಮತ್ತು ಅಂಬಿಗರ ಚೌಡಯ್ಯ ಜಯಂತಿಯನ್ನು ಆಚರಿಸಿದ ನಂತರ ಎಸ್ ಎಸ್ ಎಲ್ ಸಿ ಯಲ್ಲಿರುವ ಮಡಿವಾಳ ಮತ್ತು ಅಂಬಿಗ ವಿದ್ಯಾರ್ಥಿಗಳ ಮಾಹಿತಿ ನೀಡಿ ಎಂದಾಗ ತರಗತಿಗೆ ಹೋಗಿ ಮಾಡಿದ್ದೂ ಮತ್ತೆ ಇದೇ ರೀತಿ.

ಆಗ ಎದ್ದು ನಿಂತ ವಿದ್ಯಾರ್ಥಿಗಳು ನಾವು ಎಸ್ಸಿ ಅಲ್ಲ ಟೀಚರ್ ಎಂದು ಮುಜುಗರದಿಂದ ಹೇಳಿದ ರೀತಿಯನ್ನು
ಕಂಡಾಗ ನನಗೆ ನಿಜಕ್ಕೂ ಅಚ್ಚರಿಯೊಂದಿಗೆ ವಿಷಾದವೂ ಆಗಿತ್ತು; ಹಾಗೆ ತರಗತಿಯಲ್ಲಿ ಎದ್ದು ನಿಲ್ಲಿಸುವ ವಿದ್ಯಾರ್ಥಿಗಳೆಲ್ಲ ಪರಿಶಿಷ್ಟ ಜನಾಂಗಕ್ಕೆ ಸೇರಿದವರು ಎಂದು ಎಷ್ಟು ಸುಲಭವಾಗಿ ವಿದ್ಯಾರ್ಥಿಗಳೂ ಬ್ರಾಂಡ್ ಮಾಡಿಬಿಡುವಂತೆ ಅನಾಗರಿಕವಾಗಿ
ವರ್ತಿಸುತ್ತಿದ್ದೇವಲ್ಲ ಎಂದು ತಲೆ ತಗ್ಗಿಸುವಂತಾಯಿತು.  ಈಗಲೇ ಈ ಪರಿಸ್ಥಿತಿ ಇದ್ದಿರುವಾಗ ಅಂದು ಅವರು ಎಷ್ಟೊಂದು ಹಿಂಸೆ ಅನುಭವಿಸಿದ್ದಿರಬಹುದು ಎಂದು ಊಹಿಸಿದರೇ ಎದೆ ನಡುಗುತ್ತದೆ.

ಆದರೆ ಫಕೀರ ಮತ್ತು ಆತನ ಸಹವರ್ತಿಗಳು ಅನುಭವಿಸಿದ್ದು ಕೇವಲ ಸಾಮಾಜಿಕ ತಾರತಮ್ಯ ಮಾತ್ರವಲ್ಲ. ರಾಜಕೀಯವಾಗಿಯೂ ಧಮನಿತರಾದವರು. ಆರ್ಥಿಕವಾಗಿಯಂತೂ ತೀರಾ ಕೆಳ ಹಂತದಲ್ಲಿದ್ದರು ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ. ಬ್ರಿಟೀಷರ ರಾಜಕೀಯ ಪರಿಣಿತಿ ಮಾಂಗವಾಡೆಯನ್ನಲ್ಲ, ಇಡೀ  ವಾಟೇಗಾಂವವನ್ನೇ ನಡುಗುವಂತೆ ಮಾಡಿಬಿಟ್ಟಿತ್ತು.

ಮೊದಲು ಮಾದಿಗ ಹಾಗು ರಾಮೋಶಿ ಜನಾಂಗದವರನ್ನು ಲೂಟಿಕೋರರನ್ನಾಗಿ ಬದನಾಮಿ ಮಾಡಿದ ಸರಕಾರ ನಂತರ
ಫಕೀರ ಹಾಗೂ ಆತನ ಸಹವರ್ತಿಗಳ ಬಂಧನಕ್ಕಾಗಿ ಅಕ್ರಮ ಮಾರ್ಗವನ್ನೇ ಹಿಡಿದುಬಿಟ್ಟಿತ್ತು. ಮಾಂಗೆವಾಡೆಯಲ್ಲಿ ಮುದುಕರು, ಹೆಂಗಸರು ಹಾಗು ಮಕ್ಕಳು ಎನ್ನದೇ ಎಲ್ಲಾ ಬಾಣಂತಿಯರನ್ನು ದನ ತುಂಬಿದಂತೆ ಬ್ರಿಟೀಷ್ ಲಸ್ಕರ್ ನಲ್ಲಿ ಕೂಡಿಟ್ಟು ಫಕೀರ ಮತ್ತು ಆತನ ಹತ್ತು ಸಹವರ್ತಿಗಳು ತಮ್ಮೆದುರು ಹಾಜರಾದರೆ ಮಾತ್ರ ವಾಡೆಯ ಎಂಟುನೂರು ಜನರನ್ನು ಬಿಡುಗಡೆ
ಮಾಡುವುದಾಗಿ ಶರತ್ತು ಒಡ್ಡಿ ಪುನಃ ತನ್ನ ಕುಟಿಲತೆಯನ್ನು ಮೆರೆಯಿತು.

ಊರ ಜನರ ರಕ್ಷಣೆಗಾಗಿ, ಆ ಊರ ಜನರ ನಡುವಲ್ಲಿ ಇರುವ ತನ್ನ ಅಜ್ಜ, ಅಜ್ಜಿ, ತಾಯಿ ಹಾಗೂ  ತನ್ನ ಮಗುವನ್ನು ಹೊಟ್ಟೆಯಲ್ಲಿಟ್ಟುಕೊಂಡ ತನ್ನ ಕಿರಿಯ ವಯಸ್ಸಿನ ಪತ್ನಿಗಾಗಿ ಫಕೀರ ಬ್ರಿಟೀಷರ ಎದುರು ಶರಣಾದುದನ್ನು ಓದುವಾಗ ನಿಮ್ಮದು ಎಂತಹ ಕಠಿಣ ಹೃದಯವೇ ಆದರೂ ಕೊನೆಯಪಕ್ಷ ಒಂದು ನಿಟ್ಟುಸಿರಾದರೂ ಜಾರದೇ ಇರಲಾರದು.

ಮೊನ್ನೆ ಫಕೀರ ಓದುತ್ತ, ನನ್ನೊಳಗೇ ಕಣ್ಣೀರಾಗುತ್ತ, ನನ್ನದೇ ಸಿಟ್ಟಿನಲ್ಲಿ ನಾನೇ ದಹಿಸಿಕೊಳ್ಳುತ್ತಿರುವಾಗಲೇ ಯಾವುದೋ ಮಾಹಿತಿಗೆಂದು ಈ ಪುಸ್ತಕವನ್ನು ಮರಾಠಿಯಿಂದ ನಮಗಾಗಿ ಕನ್ನಡಕ್ಕೆ ತಂದ ಗಿರೀಶರವರಿಗೆ ಫೋನಾಯಿಸಿದ್ದೆ. ಯಾಕೋ ಅವರು ಗಲಾಟೆಯ ಮಧ್ಯದಲ್ಲಿ ನಿಂತಂತಿತ್ತು, “ಕೊಪ್ಪಳಕ್ಕೆ ಬಂದೀನ್ರಿ, ಸಾಹಿತ್ಯ ಸಮ್ಮೇಳನಕ್ಕ, ಅಳವಂಡಿಯಲ್ಲಿ ನಡಿಲಾಕತ್ತದ…’ ತಮ್ಮ ಎಂದಿನ ಉತ್ತರ ಕರ್ನಾಟಕದ ಜವಾರಿ ಭಾಷೆಯಲ್ಲಿ ಹೇಳಿದರು.

ಒಂದು ಜಿಲ್ಲಾ ಸಮ್ಮೇಳನಕ್ಕೆ, ಅದೂ ಬೇರೆ ಯಾವುದೋ ಸಂಬಂಧ ಪಡದ ಜಿಲ್ಲಾ ಸಮ್ಮೇಳನಕ್ಕೆ ನೂರಾರು ಕಿ.ಮಿ ಪ್ರವಾಸ ಮಾಡಿ ಹೋಗ್ತಾರಲ್ಲ ಎನ್ನಿಸಿ, ಒಂದು ಸಮ್ಮೇಳನಕ್ಕಾಗಿ ಅಷ್ಟು ದೂರ?” ಕೇಳಬಾರದು ಎಂದುಕೊಳ್ಳುತ್ತಲೇ ಕೇಳಿಯೇಬಿಟ್ಟಿದ್ದೆ.

“ನಾನು ಅದುವಾದ ಮಾಡಿದ ಫಕೀರ ಕಾದಂಬರಿಯಲ್ಲಿ ಬರ್ತದಲ್ಲ… ಅಳವಂಡಿ, ಅದೇ ಇದು. ಆ
ಹೆಸರೇ ಇಲ್ಲಿವರೆಗೂ ಎಳ್ಕೊಂಡು ಬಂತು” ಎಂದಿದ್ದರು. ತಾನು ಬರೆದ ಚಿಕ್ಕದೊಂದು ಕವಿತೆಯನ್ನೇ ನೆನಪಿಡದ ಬರೆಹಗಾರರನ್ನೇ ಇತ್ತೀಚಿನ ದಿನಗಳಲ್ಲಿ ಕಾಣುತ್ತಿರುವಾಗ ತನ್ನ ಅನುವಾದಿತ ಕಾದಂಬರಿಯೊಂದರಲ್ಲಿ ಬರುವ ಊರನ್ನು ಹುಡುಕಿಕೊಂಡು ಬರುವ ಗಿರೀಶರವರ ಬದ್ಧತೆ ನನಗೆ ತೀರಾ ದೊಡ್ಡದು ಎನ್ನಿಸಿತು.

ಇಂತಹ ಬದ್ಧತೆಯಿಂದಾಗಿಯೇ ಫಕೀರ ಅನುವಾದಿತ ಕೃತಿಯಾದರೂ  ಎಲ್ಲಿಯೂ ತನ್ನ ಜೀವಂತಿಕೆಯನ್ನು ಬಿಟ್ಟು ಸಡಿಲವಾಗುವುದಿಲ್ಲ. ತಾಯಿ ತನ್ನ ಸ್ವಂತ ಮಗುವನ್ನು ಸಲಹುವಂತೆ ಮೂಡಿ ಬಂದಿದೆಯೇ ಹೊರತೂ ಎಲ್ಲಿಯೂ ಇದು ಮಲತಾಯಿಯ ಸ್ಪರ್ಷ ಎಂದೆನಿಸುವುದಿಲ್ಲ.

ಆಗಲೇ ನಾನು ಹೇಳಿದಂತೆ ಅಪ್ಪಟ ಹಳ್ಳಿ ಸೊಗಡಿನಲ್ಲಿರುವ ಮರಾಠಿ ಪ್ರಾಂತೀಯ ಭಾಷಾ ಸೊಗಡನ್ನು ಅಷ್ಟೇ ಸೊಗಸಾದ ತಮ್ಮ ಜವಾರಿ ಕನ್ನಡದಲ್ಲಿ ಗಿರೀಶ ಮನಃಪೂರ್ವಕವಾಗಿ ತೆರೆದಿಟ್ಟಿದ್ದಾರೆ. ಈ ಪುಸ್ತಕವನ್ನು ಕೈಗೆತ್ತಿಕೊಳ್ಳುವ ಮುನ್ನ
ಖಂಡಿತವಾಗಿ ಇದು ಒಂದು ಸಲ ಓದಿ ಪಕ್ಕಕ್ಕಿಡಬಹುದಾದ ಪುಸ್ತಕ ಅಲ್ಲ ಎಂಬುದು ನೆನಪಿರಲಿ.

ಒಂದೇ ಗುಕ್ಕಿಗೆ ಓದಿ ಅರ್ಥೈಸಿಕೊಳ್ಳುವ ಪುಸ್ತಕವೂ ಅಲ್ಲ. ಒಂದು ಸಲ… ಎರಡು ಸಲ. ಮೂರು ಸಲ ನಿಧಾನವಾಗಿ ಓದಿ ಫಕೀರನನ್ನು ಎದೆಗಿಳಿಸಿಕೊಳ್ಳಿ.

21 Responses

 1. Sunil says:

  ನೀವು ಒಂದು ಲೇಖನವನ್ನು ಪರಿಚಿಸುವಾಗ ಕೇವಲ ಅದರ ಬಗ್ಗೆ ಮಾತ್ರ ವಿವರಣೆ ನೀಡದೆ ಅದಕ್ಜೆ ಪೂರಕವಾದ ಇತರ ಸಂಗತಿಗಳನ್ನು ನಿಮಗೆ ಗೊತ್ತಿರುವ ವಿಷಯಗಳನ್ನು ಅದಕ್ಜೆ ಪೂಣಿಸಿ ಅದನ್ನು ಇನ್ನಷ್ಟು ಸುಂದರವಾಗಿ ಕಾಣುವಂತೆ ಮಾಡುವ ಜಾಣ್ಮೆ ನಿಮ್ಮಲ್ಲಿದೆ ಅದು ಎಲ್ಲರಿಗೂ ಬರಿವದಿಲ್ಲಾ ಅಲ್ಲದೇ ದಿನ ದಲಿತರ ಬಗ್ಗೆ ಅಸಹಾಯಕರ ಬಗ್ಗೆ ನಿವು ತೋರುವ ಪ್ರೀತಿ ಅನುಕರಣಿಯ.ಕಥೆಯಲ್ಲಿರುವ ಸಮಾಜಿಕ ನ್ಯಾಯದ ಬಗ್ಗೆ ಮತ್ತು ಪ್ರಸ್ತುತ ಸನ್ನಿವೇಶಕ್ಜೆ ಅದು ಹೇಗೆ ಹೊಂದಿಕೆಯ್ಯಾಗುತ್ತದೆ ಎಂದು ವಿವರಿಸುತ್ತ ಸಮಾಜಿಕ ಕಾಳಜಿಯನ್ನು ವ್ಯಕ್ತಪಡಿಸುವ ಕಲೆ ನಿಮಗೆ ಸಿದ್ದಿಸಿದೆ .ಸೂಗಸಾದ ವಿಶ್ಲೇಷಣೆ, ಅದಕ್ಕಿಂತ ನಿಮ್ಮ ನಿರ್ಮಲ ಮನಸಿಗೆ ನಮನ.

  • Shreedevi keremane says:

   ಕುಲಕರ್ಣಿ ಸರ್ ತಮ್ಮ ಓದಿಗಾಗಿಹಾಗೂ ಮಾತಿಗಾಗಿ ನನ್ನ ನಮನ

 2. ಧನಪಾಲ ನೆಲವಾಗಿಲು says:

  ಫಕೀರಾ ಕಾದಂಬರಿಯ ವಿಶ್ಲೇಷಣೆ ಚನ್ನಾಗಿ ಮಾಡಿದ್ದೀರಿ. ಇಷ್ಟವಾಯಿತು. ನನಗೆ ಅನುವಾದದಲ್ಲಿ ಚೂರು ವಿಶೇಷ ಆಸಕ್ತಿ. ಹೀಗಾಗಿ ಗಿರೀಶ ಚಂದ್ರಕಾಂತ ಜಕಾಪೂರೆ ಅವರ ಸಂಪರ್ಕ ಸಂಖ್ಯೆ ಬೇಕಾಗಿತ್ತು. ಇದ್ದರೆ ದಯಮಾಡಿ ಕೊಡಿ.

 3. ವಸಂತಕುಮಾರ್ ಕತಗಾಲ says:

  Nice

 4. ಪುಷ್ಪಾ ನಾಯ್ಕ ಅಂಕೋಲ says:

  ಎಷ್ಟು ವಿಚಾರವಂತಿಕೆಯಿಂದ ಬರೆಯುತ್ತಿರಿ ಕಾದಂಬರಿಯ ವಿಷಯ ವಸ್ತು ವಿನೊಂದಿಗೆ ತಮ್ಮ ವ್ಯಾಪ್ತಿಯ ವಿಷಯ ಸಹಸಂಬಂದೀಕರಿಸಿದ ರೀತಿ ಇಷ್ಟ ವಾಯಿತು ಧನ್ಯವಾದಗಳು ಖುಷಿ ಆಯ್ತು

  • Shreedevi keremane says:

   ಥ್ಯಾಂಕ್ಯೂ ಪುಷ್ಪ. ನಿಮ್ಮ ಓದಿನ ಆಸಕ್ತಿ ದೊಡ್ಡದು

 5. Girijashastry says:

  Very nice. Congratulations to both Girish and Sridevi

 6. Sudha ChidanandGowd says:

  ಆಹಾ…. ಇತಿಹಾಸದ ಹುಚ್ಚಿನ ನನಗೆ ಇದು ರಸಗವಳವೆನಿಸಿತು.
  ಸಾಮಾನ್ಯವಾಗಿ ನಾನು ವಿಮರ್ಶೆ ಓದಿ ಪುಸ್ತಕ ಓದಲು ಆಯ್ಕೆ ಮಾಡಿಕೊಳ್ಳುವುದು ಕಡಿಮೆ. ಆದರೆ ಈ ಪುಸ್ತಕ ಓದುವುದು ಖಂಡಿತಾ ನಿಮ್ಮ ರೆಕೆಮೆಂಡ್ ನಿಂದಾಗಿ ಯೇ.
  ಥ್ಯಾಂಕ್ಯೂ ಶ್ರೀ.

  • Shreedevi keremane says:

   ಸುಧಕ್ಕ ತುಂಬ ಚೆನ್ನಾಗಿದೆ. ಖಂಡಿತಾ ಓದಿ

 7. Sujatha lakshmipura says:

  ಫಕೀರ ಗಿರೀಶ್ ಅವರ ಮರಾಠಿ ಅನುವಾದಿತ ಕಾದಂಬರಿಯ ಪರಿಚಯದ ಶ್ರೀಅವರ ಈ ಲೇಖನವು ಪುಸ್ತಕ ಪರಿಚಯದ ಎಲ್ಲೆಯನ್ನೂ ಮೀರಿದ ಒಂದು ಸುಂದರ ಬರಹ. ನಾಡು,ಜನರನ್ನು ಕಾಯುವ ಕಾವಲುಗಾರ ಆ ಜನರ ಪಾಲಿಗೆ ದೇವರಾಗುವ ವಿಚಾರದ ಹಿನ್ನೆಲೆ ಯಲ್ಲಿ ,ಹಲವು ಘಟನೆಗಳನ್ನು ಹೆಣೆಯುತ್ತಾ ಅದರೊಟ್ಟಿಗೆ ಫಕೀರನನ್ನೂ ಪೋಣಿಸುತ್ತಾ ಕಾದಂಬರಿಯ ಮಹತ್ವವನ್ನು, ಓದಬೇಕಾದ ಅಗತ್ಯತೆಯನ್ನು ಸೃಷ್ಟಿಸುವ ಶ್ರೀ ಅವರ ಬರವಣಿಗೆಯ ವಿಧಾನ ವಿಶಿಷ್ಠವಾದದ್ದು…ನಿಜ , ಗಹನವಾದ ಹಲವು ವಿಚಾರಗಳ ಬರಹ ಒಂದೇ ಓದಿಗೆ ದಕ್ಕುವುದು ಕಡಿಮೆ.ಹೀಗಾಗಿ ಮತ್ತೆ ಮತ್ತೆ ಫಕೀರನನ್ನು ಓದಿ ,ಪಡೆದುಕೊಳ್ಳುವ ದಾರಿಗೆ ಸೆಳೆದ ಶ್ರೀ ಅವರ ಬರಹಕ್ಕೆ ಥ್ಯಾಂಕ್ಸ…ಇಂತಹ ಗಂಭೀರವಾದ ಕಾದಂಬರಿಯನ್ನು ಕನ್ನಡಕ್ಜೆ ನೀಡಿದ ಗಿರೀಶ್ ಅವರಿಗೂ ಧನ್ಯವಾದಗಳು..

  • Shreedevi keremane says:

   ಸುಜಾತಾ ಮೇಡಂ ನೀವು ಓದಲೇಬೇಕಾದ ಪುಸ್ತಕ ಇದು

 8. K. Nallathambi says:

  ಒಳ್ಳೆಯ ಓದು. ಹೊಸ ಪರಿಚಯ. ಥ್ಯಾಂಕ್ಸ್…..

  • Shreedevi keremane says:

   ಥ್ಯಾಂಕ್ಯೂ ಸರ್ ತಮ್ಮತಹ ಹಿರಿಯರ ಆಶಿರ್ವಾದ

   • Shreedevi keremane says:

    ಸರ್ ನನಗೆ ಅನುವಾದ ಎಂದರೆ ನೆನಪಾಗುವುದೇ ನೀವು, ಗಿರೀಶ ಜಕಾಪುರೆಯವರು ಹಾಗೂ ಲಕ್ಷ್ಮಿಕಾಂತ ಇಟ್ನಾಳ್ ಸರ್

 9. ದಿನೇಶ ಚವ್ಹಾಣ says:

  ನಮಸ್ಕಾರ ಮೇಡಂ,
  ಮರಾಠಿಯ ಫಕೀರಾ ಕಾದಂಬರಿಯ ಕನ್ನಡ ಅನುವಾದ ಮಾಡಿರುವ ಗಡಿನಾಡಿನ ಯುವ ಸಾಹಿತಿಗಳು ಹಾಗೂ ನಮ್ಮ ಗೆಳೆಯರಾದ ಗಿರೀಶ ಜಕಾಪುರೆಯವರ ಪುಸ್ತಕ ತುಂಬಾ ಚೆನ್ನಾಗಿ ವಿಮರ್ಶೆ ಮಾಡಿದ್ದಿರಾ,.ಲೇಖನ ತುಂಬಾ ಸೊಗಸಾಗಿ ಮೂಡಿ ಬಂದಿದೆ.

 10. B. L. Raju says:

  ಶ್ರೀದೇವಿ ಬರೆಹ ಕೇವಲ ಒಂದು ಕಾದಂಬರಿಯ ಪರಿಚಯ ಅಲ್ಲ. ಅದೊಂದು ಸ್ವತಂತ್ರ ಸಂಸ್ಕೃತಿ ಕಥನ.
  ವಿಮರ್ಶೆ ಎಂಬುದು ಕೃತಿಯ ಪರಿಚಯ ಬರೆಹವಾಗಿ ಮಾತ್ರವೆಂಬಂತೆ ರೂಪಾಂತರಗೊಂಡಿರುವ ಕಾಲವಿದು. ಇನ್ನು ಪುಸ್ತಕ ಪರಿಚಯ ಮಾಡುವುದೇ ಉದೇಶವಾಗಿಟ್ಟುಕೊಂಡು ಬರೆಯುತ್ತಿರುವ ಈ ಬರೆಹ ಗಾರ್ತಿ ತನ್ನ ಬರಹಕ್ಕೆ ಬಹುದೃಷ್ಟಿಕೋನಗಳ ಸಾಂಸ್ಕೃತಿಕ ಅನುಸಂಧಾನದ ಸಾಧ್ಯತೆಗಳನ್ನು ತಂದುಕೊಂಡಂತೆ ಬರೆಯುವುದು ಆಕೆಯ ಹೆಚ್ಚುಗಾರಿಕೆ. ಇದು ಈಚೆಗೆ ಕನ್ನಡದಲ್ಲಿ ತೀರಾ ಅಪರೂಪವಾಗಿರುವ ಬರೆಹದ ದಾರಿ.
  ಬಹುಶಃ ಈ ಬರೆಹ ತಾನು ಉದೇಶಿಸಿ ಬರೆಯುತ್ತಿರುವ ಕೃತಿಗೆ ಇನ್ನಷ್ಟು ವಿಸ್ತರಣೆ ನೀಡುತ್ತದೆ ಎಂದರೆ ಅತಿಶಯೋಕ್ತಿಯೇನಲ್ಲ.
  ಶ್ರಿದೇವಿ ಬರೆಹಕ್ಕೆ ದೊಡ್ಡದೊಂದು ಓದುಗ ವರ್ಗ ಸಿಗಲಿ.

  • Shreedevi keremane says:

   ಥ್ಯಾಂಕ್ಯೂ ಸರ್. ನಿಮ್ಮ ಮಾತು ನನಗೆ ಶಕ್ತಿ ನೀಡಿತು. ನಾನು ಬರೆವ ದಾರಿ ಸರಿ ಇದೆ ಎಂಬ ಆತ್ಮವಿಶ್ವಾಸವನ್ನೂ ಕೂಡ

Leave a Reply

%d bloggers like this: