ಅಂಡು ಸುಡಲಾರಂಭಿಸಿರುವ ಐಟಿ ಪ್ರಮಾದ..

ಡೇಟಾ ಮೈನಿಂಗ್ ವಿವಾದ ಕಂತು – 1

 

ದೇಶದಲ್ಲಿಂದು ಅತ್ಯಂತ ಅಸಂಘಟಿತ ಉದ್ದಿಮೆ ಕ್ಷೇತ್ರ ಅಂದರೆ ಯಾವುದು?

ನಿಚ್ಚಳವಾಗಿ ಮಾಹಿತಿ ತಂತ್ರಜ್ನಾನ ಅಥವಾ ಐಟಿ ಉದ್ದಿಮೆ.

ಭಾರತದ ವ್ಯವಹಾರೋದ್ಯಮಗಳನ್ನು ನಿಯಂತ್ರಿಸಲು ‘ಕಂಪನಿ ಕಾಯಿದೆ -1956’ ಮತ್ತು ಅದರದೇ  ಆದ ಒಂದು ಸಚಿವ ಖಾತೆ ಇದೆ. ಮಾಹಿತಿ ತಂತ್ರಜ್ಞಾನಕ್ಕೆ  ‘ಐಟಿ ಕಾಯಿದೆ – 2008’ ಇದ್ದು, ಅದಕ್ಕೂ ಒಂದು ಸಚಿವ ಖಾತೆ ಇದೆ. ಇವೆರಡೂ ನಿಯಂತ್ರಣಗಳು ಇರುವಾಗಲೂ ಐಟಿ ಉದ್ಯಮ ಇಂದು ಅತ್ಯಂತ ಅಸಂಘಟಿತ ಉದ್ಯಮ ಕ್ಷೇತ್ರ ಎಂದರೆ ನಂಬುತ್ತೀರಾ?

ನೀವು ಒಂದು ಪ್ರೈವೆಟ್ ಅಥವಾ ಪಬ್ಲಿಕ್ ಲಿಮಿಟೆಡ್  ಕಂಪನಿ ತೆರೆಯುವಾಗ ಆ ಕಂಪನಿಯನ್ನು ಇನ್ಕಾರ್ಪರೇಟ್ ಮಾಡುವ ವೇಳೆ, ಅದರ ವ್ಯವಹಾರ ಏನೆಂಬುದನ್ನು ಬಹಳ ನಿರ್ದಿಷ್ಟವಾಗಿ ಲಿಖಿತ ರೂಪದಲ್ಲಿ (MOA, AOA) ಕಂಪನಿ ವ್ಯವಹಾರಗಳ ರಿಜಿಸ್ಟ್ರಾರ್ ಕಚೇರಿಗೆ ನೀಡಬೇಕಿರುತ್ತದೆ. ಆದರೆ ಐಟಿ ಇಂಡಸ್ಟ್ರಿಯವರಲ್ಲಿ ಕೇಳಿ – ಬೋಯಿಂಗ್ ನ ರೆಕ್ಕೆ ಡಿಸೈನ್ ಮಾಡಿದ್ದೂ ಅವರೇ, ಬ್ಯಾಂಕಿನ ಸಾಫ್ಟ್ ವೇರ್ ಬರೆದದ್ದೂ ಅವರೇ, ಆಧಾರ್ ಸಾಫ್ಟ್ ವೇರೂ ಅವರದೇ… ಏನುಂಟು ಏನಿಲ್ಲ – ಕೆಲವೇ ವರ್ಷಗಳ ಹಿಂದೆ ಇಡಿಯ ಭಾರತದ  ಹೆಣ್ಣು ಹೆತ್ತವರ ಪ್ರಿಫರ್ಡ್  ಅಳಿಯಂದಿರೂ ಅವರೇ!!

ಇದು ಬಹುತೇಕ, ಕಂಪನಿ ವ್ಯವಹಾರಗಳ ಇಲಾಖೆಯವರು “ನಿಮ್ಮ ವ್ಯವಹಾರ ಏನು?” ಅಂತ ಕೇಳಿದರೆ, ನಾವು “ದುಡ್ಡು ಗಳಿಸುವ ವ್ಯವಹಾರ ಮಾಡುತ್ತೇವೆ” ಎಂದು ಬರೆದುಕೊಟ್ಟ ಹಾಗೆ. ಈ ರೀತಿ ಜನರಲೈಸ್ ಮಾಡಿದಾಗ, ತಲೆಹಿಡುಕತನದಲ್ಲಿ ಗಳಿಸಿದ ದುಡ್ಡೂ ಅಧಿಕೃತ ವ್ಯವಹಾರವೇ! ಇದು ಐಟಿ ಇಂಡಸ್ಟ್ರಿಯ ಮೇಲೆ ಸರಕಾರಕ್ಕೆ ನಿಯಂತ್ರಣ ಇಲ್ಲದಿರುವುದಕ್ಕೆ ಬಹುಮುಖ್ಯ ಕಾರಣ. ಐಟಿ ಉದ್ಯಮದಲ್ಲಿ ಕಾಸು ಇರುವುದರಿಂದ ಅದು ಕಾರ್ಮಿಕ ಕಾಯಿದೆಯನ್ನೂ ಮೀರಿ ನಿಂತುಬಿಟ್ಟಿದೆ!

 

 

ಆರಂಭದ ಹಂತದಲ್ಲಿ ಬರಿಯ ಸಾಫ್ಟ್ ವೇರ್, ಬಾಡಿ ಶಾಪಿಂಗ್ ಎಂದಿದ್ದಾಗ ಸ್ವಲ್ಪವಾದರೂ ನಿಯತ್ತು-ನಿಯಂತ್ರಣಗಳಲ್ಲಿ ಇದ್ದ ಐಟಿ ಉದ್ಯಮ ಈಗ ಮೊಬೈಲ್ ಯುಗದ ಆಪ್ಲಿಕೇಷನ್ (Apps) ಗಳಿಗೆ ತೆರೆದುಕೊಂಡ ಮೇಲಂತೂ ಯಾರಿಗೂ ಯಾವುದೇ ನಿಯಂತ್ರಣ ಇಲ್ಲದಂತೆ ಬೆಳೆಯುತ್ತಿದೆ. ಸರ್ಕಾರಿ ಮಷಿನರಿಗೆ ಈ ಬೆಳವಣಿಗೆಗಳ ಮೇಲೆ ಎಳ್ಳಷ್ಟೂ ನಿಯಂತ್ರಣ ಇಲ್ಲ.  ಅದು ಯಾಕೆ ಗೊತ್ತೆ?

17ಅಕ್ಟೋಬರ್ 2000ದಂದು ದೇಶ ಐಟಿ ಕಾಯಿದೆಯನ್ನು ಜಾರಿಗೆ ತಂದಾಗ, ಅದು ಹಾಗೆ ಮಾಡಿದ ಜಗತ್ತಿನ 12ನೇ ದೇಶವಾಗಿತ್ತು.  ಆಗ ಅದರ ಮುಖ್ಯ ಉದ್ದೇಶ ಇದ್ದುದು ಬ್ಯಾಂಕಿಂಗ್ ನಂತಹ ವಾಣಿಜ್ಯ ವ್ಯವಹಾರಗಳು ಕಂಪ್ಯೂಟರೀಕರಣಗೊಳ್ಳುವತ್ತ. ಮುಂದೆ 2008ರಲ್ಲಿ ಅದಕ್ಕೆ ತಿದ್ದುಪಡಿ ತಂದು ಸೆಕ್ಯುರಿಟಿ, ದತ್ತಾಂಶ ಸುರಕ್ಷೆಯ ಅಂಶಗಳನ್ನು ಸೇರಿಸಲಾಯಿತಾದರೂ, ಆಗಲೂ ಫೋಕಸ್ ಇದ್ದುದು ಡಿಜಿಟಲ್ ಸಿಗ್ನೇಚರ್, ಡಿಜಿಟಲ್ ರೆಕಾರ್ಡ್ ಗಳತ್ತ. ಬಳಿಕ 2011ರಲ್ಲಿ ಬಂದ ತಿದ್ದುಪಡಿ ಮತ್ತು ಹಲವು ನಿಯಮಗಳು ಗಮನ ಹರಿಸಿದ್ದು ವೈಯಕ್ತಿಕ ಮಾಹಿತಿ, ಆರೋಗ್ಯ ಮಾಹಿತಿಯಂತಹ  ಸಂಘಟಿತ ಕ್ಷೇತ್ರಗಳತ್ತ ಮಾತ್ರ.

ಐಟಿ ಕ್ಷೇತ್ರವನ್ನು ಒಳಗೊಳ್ಳುವ ನಿಟ್ಟಿನಲ್ಲಿ ಭಾರತೀಯ ಪೀನಲ್ ಕೋಡ್, ಭಾರತೀಯ ಎವಿಡೆನ್ಸ್ ಕಾಯಿದೆ, ಬ್ಯಾಂಕರ್ಸ್ ಬುಕ್ ಎವಿಡೆನ್ಸ್ ಕಾಯಿದೆ, ರಿಸರ್ವ್ ಬ್ಯಾಂಕ್ ಕಾಯಿದೆಗಳಲ್ಲಿ ತಿದ್ದುಪಡಿಗಳು ಆಗಿವೆಯಾದರೂ, ಇವೆಲ್ಲದರ ಗಮನ ಇದ್ದುದು ಬ್ಯಾಂಕಿಂಗ್, ಗವರ್ನನ್ಸ್ ನಂತಹ ಮೂಲ ಅಂಶಗಳತ್ತ ಮಾತ್ರ. ಆದರೆ 2011ರ ವೇಳೆಗಾಗಲೇ ಐಟಿ ವ್ಯವಹಾರ ತನ್ನ ವ್ಯಾಪ್ತಿ ಮತ್ತು ಗಾತ್ರಗಳಲ್ಲಿ ವಿಶ್ವರೂಪವನ್ನು ತೋರಿಸಿಯಾಗಿತ್ತು.

ಅದನ್ನು ಸರಕಾರಗಳು ಗಮನಿಸಲೇ ಇಲ್ಲ. ಅವರೇನಿದ್ದರೂ ಮೂರ್ತಿಗಳು, ನಿಲೇಕಣಿಗಳು, ಪ್ರೇಂಜೀಗಳು, ಟಾಟಾಗಳನ್ನು ತೆರಿಗೆ ರಜೆ, ಐಟಿ ಹಬ್, ಸ್ಪೆಷಲ್ ಝೋನ್ ಇತ್ಯಾದಿಗಳ ಮೂಲಕ ಖುಷಿಪಡಿಸಿ “ಐಟಿ ರಂಗದಲ್ಲಿ ಹೂಡಿಕೆ” ಹೆಚ್ಚಿಸಿಕೊಳ್ಳುವತ್ತಲೇ ತಮ್ಮ ಗಮನ ಕೇಂದ್ರೀಕರಿಸಿದ್ದರು. ಹಾಗಾಗಿಯೇ ಈ ಉತ್ಸವ “ಮೂರ್ತಿಗಳು” ರಾಷ್ಟ್ರಕ್ಕೇ ಪತಿಯಾಗುವ, ಜನಪ್ರತಿನಿಧಿ ಆಗುವ, ದೇಶದಲ್ಲಿನ ಪ್ರತಿಯೊಂದೂ ಆಗುಹೋಗುಗಳಿಗೆ ಅಧಿಕ್ರತ ವಕ್ತಾರಿಕೆ ಮಾಡುವ ದರ್ಜೆಗೆ ಏರಿ ಕುಳಿತುಬಿಟ್ಟರು. ಈ ಚಾರಿತ್ರಿಕ ಪ್ರಮಾದದ ಉರಿ, ಈಗ ಅಂಡು ಸುಡಹತ್ತಿದೆ.

ಡೇಟಾ ಮೈನಿಂಗ್

ಸರಳವಾಗಿ ಹೇಳಬೇಕೆಂದರೆ, ಡೇಟಾ ಮೈನಿಂಗ್ ಎಂಬುದು ಲಭ್ಯವಿರುವ ಚುಕ್ಕಿಗಳನ್ನು ಜೋಡಿಸಿ ಸಂಭಾವ್ಯ ಚಿತ್ರಗಳನ್ನು ಬಿಡಿಸುವ ಕೆಲಸ. ಅದು ಕಾನೂನುಬದ್ಧ ವ್ಯವಹಾರ ಕೂಡ ಹೌದು. ಐಟಿ ಉದ್ಯಮದ ಭಾಗವಾಗಿ (ITeS) ಬೆಳೆದಿರುವ ಈ ವ್ಯವಹಾರದ ಸ್ಥಿತಿ ಇಂದು ಭಾರತದಲ್ಲಿ ಬೇಲಿಯಿರದ, ಹುಲುಸಾಗಿ ಬೆಳೆದ ಹುಲ್ಲುಗಾವಲಿನಲ್ಲಿ ಗೂಳಿಗಳನ್ನು ಬಿಟ್ಟಂತಾಗಿದೆ.

ಮೂಲತಃ ಮಾರ್ಕೆಟಿಂಗ್, ಸಂಶೋಧನಾ ರಂಗಗಳಲ್ಲಿ ಚಾಲ್ತಿ ಇದ್ದ ಡೇಟಾ ಮೈನಿಂಗ್ ಬರಬರುತ್ತಾ ಸಾಮಾಜಿಕ, ರಾಜಕೀಯ ರಂಗದ ಎಲ್ಲ ಮಗ್ಗುಲುಗಳಿಗೂ ವ್ಯಾಪಿಸತೊಡಗಿದೆ. ಇಪ್ಪತ್ತು ವರ್ಷಗಳ ಹಿಂದೆ ಕೇರಳದಲ್ಲಿ ಚುನಾವಣೆಗಳ ಬಗ್ಗೆ ಕುತೂಹಲಕರ ಸುದ್ದಿಗಳು ಬರುತ್ತಿದ್ದವು. ಆಗಷ್ಟೇ ಕಂಪ್ಯೂಟರ್ ಭಾರತದಲ್ಲಿ ಚಾಲ್ತಿಗೆ ಬರತೊಡಗಿತ್ತು. ಕೇರಳದಲ್ಲಿ ಅಭ್ಯರ್ಥಿಗಳು ತಮ್ಮ ಕ್ಷೇತ್ರದ ಡೇಟಾಗಳನ್ನು ಕಂಪ್ಯೂಟರಿನಲ್ಲಿ ಇರಿಸಿಕೊಂಡು ಅದನ್ನು ತಾವೇ ಜನ ನೇಮಿಸಿ ವಿಶ್ಲೇಷಿಸಿಕೊಂಡು, ತಮ್ಮ ಪಕ್ಷ ಕ್ಕೆ ಕಡಿಮೆ ಓಟು ಬಂದಿರುವ ಜಾಗಗಳನ್ನು ಗುರುತಿಸಿ, ಅಲ್ಲಿಗೆ ಹೆಚ್ಚಿನ ಗಮನ ನೀಡಿ ಕೆಲಸ ಮಾಡುತ್ತಿದ್ದರು, ಹಾಗಾಗಿ ಪ್ರತೀ ಬಾರಿ ಚುನಾವಣೆಯಲ್ಲಿ ಅಲ್ಲಿ ಸರಕಾರ  ಬದಲಾಗುತ್ತಿತ್ತು ಎಂದು ಯಾರೋ ಹೇಳಿದ್ದು ನೆನಪಿದೆ. ಆಗ ನನಗೆ ಕೌತುಕ ಮೂಡಿಸಿದ್ದ ಈ ಸಂಗತಿ ಈವತ್ತು ದೊಡ್ಡದೊಂದು ಉದ್ಯಮವಾಗಿ ಬೆಳೆದು ನಿಂತಿದೆ.

 

ಒಂದಿಷ್ಟು ಡೇಟಾ (ಉದಾಹರಣೆಗೆ, ಒಂದು ಊರಿನ ಹತ್ತು ಮಂದಿಯ ಹೆಸರು, ಲಿಂಗ, ವಯಸ್ಸು, ವಿದ್ಯಾರ್ಹತೆ, ಬಳಸುವ ವಾಹನ, ಮನೆ, ಆದಾಯ) ಸಿಕ್ಕಿತೆಂದಿಟ್ಟುಕೊಳ್ಳಿ. ಅವುಗಳನ್ನು ವಿಶ್ಲೇಷಿಸಿ, ಒಂದಿಷ್ಟು  ತೀರ್ಮಾನಗಳಿಗೆ ಬರುವುದು ಸಾಧ್ಯವಿದೆ (ಉದಾಹರಣೆಗೆ, ಆ ಊರಿನಲ್ಲಿ ಗಂಡಸರು ಹೆಚ್ಚು, ಹೆಂಗಸರಿಗೆ ವಿದ್ಯಾರ್ಹತೆ ಗಂಡಸರಿಗಿಂತ ಕಡಿಮೆ, ಆ ಊರಿನಲ್ಲಿ ಹೆಚ್ಚಿನವರಿಗೆ ಮಾರುತಿ ಬ್ರಾಂಡಿನ ಕಾರು ಇಷ್ಟ…. ಹೀಗೆ). ಈ ತೀರ್ಮಾನಗಳನ್ನು ತೆಗೆದುಕೊಳ್ಳುವುದಕ್ಕೆ ಇಂದು ಹಲವಾರು ಹತ್ಯಾರುಗಳು ಐಟಿ ಉದ್ದಿಮೆಯಲ್ಲಿ ಲಭ್ಯವಿವೆ.

ಇಂತಹ ತೀರ್ಮಾನಗಳನ್ನು ಒಬ್ಬ ಕಾರು ಮಾರಾಟಗಾರನಿಗೋ, ಶಿಕ್ಷಣ ಮಾರಾಟಗಾರನಿಗೋ, ಅಥವಾ ಕಾಸ್ಮೆಟಿಕ್ಸ್ ಮಾರಾಟಗಾರನಿಗೋ, ರಿಯಲ್ ಎಸ್ಟೇಟ್ ವ್ಯವಹಾರಸ್ಥನಿಗೋ ಅಥವಾ ಒಂದು ರಾಜಕೀಯ ಪಕ್ಷಕ್ಕೋ ಮಾರುವುದಕ್ಕೆ ಮಾರುಕಟ್ಟೆ ಜಗತ್ತಿನಾದ್ಯಂತ ಲಭ್ಯವಿದೆ. ಆ ವ್ಯವಹಾರಸ್ಥರು, ಈ ಮಾಹಿತಿಗಳನ್ನು ದುಡ್ಡು ಕೊಟ್ಟು ಖರೀದಿಸಿ, ಆ ಮಾಹಿತಿಗಳ ಆಧಾರದಲ್ಲಿ ತಮ್ಮ ವ್ಯವಹಾರದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ( ಉದಾಹರಣೆಗೆ, ಆ ಊರಿನಲ್ಲಿ ಮಹಿಳೆಯರ ಕಾಲೇಜು ತೆಗೆಯುವುದು, ಮಾರುತಿ ಕಾರು ರಿಪೇರಿ ವ್ಯವಹಾರದ ಫ್ರಾಂಚೈಸಿ ಕೊಡುವುದು… ಹೀಗೆ)

ಇಂದು ಜಗತ್ತಿನಾದ್ಯಂತ ಚಾಲ್ತಿಯಲ್ಲಿದೆ ಮತ್ತು ಈ ಇಡಿಯ ವ್ಯವಹಾರ ಉದ್ದ-ಅಗಲ-ಆಳ-ಗಾತ್ರಗಳಲ್ಲಿ ವಿಪರೀತ ಬೆಳೆದುನಿಂತಿದೆ. ದೇಶದಲ್ಲಿಂದು ಐಟಿ ಉದ್ದಿಮೆಯಲ್ಲಿ ಡೇಟಾ ಮೈನಿಂಗ್ (ಬಿಗ್ ಡೇಟಾ ಅನಾಲಿಟಿಕ್ಸ್) ವ್ಯವಹಾರದ ಗಾತ್ರ ವಾರ್ಷಿಕ 12,180 ಕೋಟಿ ರೂಪಾಯಿಗಳು.

ಇನ್ನಷ್ಟು ಬೆಳೆಯಲು ಅವಕಾಶಗಳಿರುವ ಭಾರತದಂತಹ ವಿಶಾಲ, ಜನಬಾಹುಳ್ಯದ ದೇಶದಲ್ಲಿ ಸಹಜವಾಗಿಯೇ ಎಲ್ಲರ ಕಣ್ಣುಗಳೂ ಡೇಟಾ ಮೈನಿಂಗ್ ನತ್ತ ತಿರುಗಲಾರಂಭಿಸಿದೆ.  ಆದರೆ, ಇದನ್ನೆಲ್ಲ ಅಂಕೆಯಲ್ಲಿಟ್ಟುಕೊಳ್ಳುವುದಕ್ಕಾಗಲೀ, ಅರಗಿಸಿಕೊಂಡು ಬೆಳೆಯುವುದಕ್ಕಾಗಲೀ ಬೇಕಾದ ಬುದ್ಧಿತ್ರಾಣ ಸರ್ಕಾರಿ ಮಷಿನರಿಯಲ್ಲಿಲ್ಲ. ಹಾಗಾಗಿ ಎಲ್ಲವೂ ತೀರಾ ಗೊಂದಲಮಯವಾಗಿದ್ದು, ಯಾರೂ ಯಾವುದನ್ನೂ ನಂಬದ ಸ್ಥಿತಿ ಉಂಟಾಗಿದೆ. ಒಂದು ಮಟ್ಟಿಗೆ ಇದು ಇಡಿಯ ಜಗತ್ತಿನ ಸ್ಥಿತಿಯೂ ಹೌದು.

ಇದರ ಫಲವೇ ಈವತ್ತು ಫೇಸ್ ಬುಕ್/ ಆಕ್ಸ್ ಫರ್ಡ್ ಅನಾಲಿಟಿಕಾ ಸಂಸ್ಥೆಗಳು ತಪ್ಪು ಕಾರಣಗಳಿಗಾಗಿ ಸುದ್ದಿ ಮಾಡುತ್ತಿರುವುದು. ಆ ಬಗ್ಗೆ ನಾಳೆ ವಿವರಿಸುತ್ತೇನೆ

ಇನ್ನೂ ನಾಳೆಗೆ..

1 Response

  1. Swamy says:

    ಸರ್ ಅದು “ಆಕ್ಸ್ ಫರ್ಡ್ ಅನಾಲಿಟಿಕಾ” ಅಲ್ಲ, “ಕೇಂಬ್ರಿಡ್ಜ್ ಅನಾಲಿಟಿಕಾ”.

    Although ‘Oxford Analytica’ and ‘Cambridge Analytica’ sound very similar, the two companies have nothing to do with each other. Cambridge Analytica is the scandal-plagued data analytics company with ties to the Trump campaign. Oxford Analytica is a consulting company focused on geopolitical issues. —> “Markets Insider”

Leave a Reply

%d bloggers like this: