ಟರ್ಕಿ ದೇಶದಲ್ಲೊಂದು ಪಾತಾಳ ಲೋಕ..

ಎಸ್ ಸುರೇಂದ್ರನಾಥ್ 

ಟರ್ಕಿ ಅಂಬೋ ದೇಶದಲ್ಲಿ ಅನಾತೋಲಿಯ ಅಂಬೋ ಪ್ರಾಂತ್ಯದಲ್ಲಿ ಕಪಾಡೋಕಿಯ ಅಂತ ಒಂದು ರಾಜ್ಯ ಇದೆ. ಇದೊಂದು ಚಾರಿತ್ರಿಕ ಪ್ರದೇಶ. ಕ್ರಿಸ್ತ ಪೂರ್ವ ಮೂರನೇ ಶತಮಾನದಿಂದ ಇದರ ಉಲ್ಲೇಖಗಳು ಕಾಣಬರುತ್ತವೆ. ಅನೇಕಾನೇಕ ಸಾಮ್ರಾಜ್ಯಗಳು ಆಳಿ ಅಳಿದಿವೆ.

ಇಲ್ಲೊಂದು ಭೂಗತ ಊರಿದೆ. ಸುಮಾರು ಇಪ್ಪತ್ತೇಳು ಎಕರೆ ವಿಸ್ತಾರವಾದ ಊರಿದು. ಇಲ್ಲಿ ಜನ ತಮ್ಮ ಮಕ್ಕಳು-ಹೆಂಡಂದಿರು-ಕುರಿ-ಕೋಳಿ-ಪಾರಿವಾಳಗಳೊಂದಿಗೆ ವಾಸ ಮಾಡುತ್ತಿದ್ದರಂತೆ. ಒಂದು ಆರು ಸಾವಿರ ಜನರಿದ್ದಿರಬಹುದು ಅಂತ ಒಂದು ಅಂದಾಜು. ಸುಮಾರು ೧೯೬೦ರ ದಶಕದ ಅಂತ್ಯದವರೆಗೂ ಇಲ್ಲಿ ಜನರಿದ್ದರಂತೆ. ಈಗ ಜನರಿಲ್ಲ. ಆದರೂ ಈ ಊರಿನ ಕೆಲವು ಭಾಗಗಳನ್ನು ಸಿರಿವಂತರು ತಮ್ಮ ವೈಯಕ್ತಿಕ ಉಪಯೋಗಗಳಿಗಾಗಿ ಬಳಸುತ್ತಿದ್ದಾರೆ. ವೈಯಕ್ತಿಕ ಅಂದರೆ ಹಣ್ಣು-ತರಕಾರಿ-ಮಾಂಸ ಇತ್ಯಾದಿಗಳನ್ನು ಶೇಖರಿಸಲು. ಈ ಊರಿನ ಕೇವಲ ಶೇಕಡಾ ೮ರಷ್ಟು ಮಾತ್ರ ಈಗ ಸಾರ್ವಜನಿಕ ದರ್ಶನಕ್ಕೆ ಲಭ್ಯವಿದೆ.

ಈ ಭೂಗತ ಊರನ್ನು ನೋಡಲು ಸುಮಾರು ಎಂಟು ಮಹಡಿಗಳಷ್ಟು ಕೆಳಗಿಳಿಯಬೇಕು. ಮೊದಲ ಕೆಲವು ಮಹಡಿಗಳು ಪರವಾಗಿಲ್ಲ. ಒಮ್ಮೆಲೇ ಎರಡನೇ ಮಹಡಿಯಿಂದ ಎಂಟನೇ ಮಹಡಿಗೆ ಇಳಿಯಬೇಕಲ್ಲಾ, ಅದು ಜೀವಕ್ಕೆರವಾಗುವ, ರೋಮಾಂಚನದ ಯಾತ್ರೆ. ಒಂದು ಸುರಂಗ – ಸುಮಾರು ಮೂರಡಿ ಎತ್ತರ, ಮೂರಡಿ ಅಗಲ, ನೂರಾ ಹತ್ತು ಮೆಟ್ಟಿಲುಗಳು. ಮೆಟ್ಟಿಲುಗಳು, ತಲೆಗೆ ತಾಗುವ ತಾರಸಿ, ಭುಜಕ್ಕೆ ಒರಗುವ ಗೋಡೆ ಎಲ್ಲಾ ಥಣ್ಣ ಥಣ್ಣಗೆ. ಒಮ್ಮೆ ಅಂಬೆಗಾಲಿಕ್ಕುತ್ತಾ, ಒಮ್ಮೆ ಕುಕ್ಕುರಗಾಲಲ್ಲಿ ತೆವಳುತ್ತಾ, ಒಮ್ಮೆ ಸೊಂಟ ಮಾತ್ರ ಬಗ್ಗಿಸಿ ನಡೆಯುತ್ತಾ, ಭುಜ ಪಕ್ಕದ ಗೋಡೆಗೆ ತರಚದಂತೆ, ತಲೆ ಮೇಲಿನ ತಾರಸಿ ಘಟ್ಟಿಸದಂತೆ ನಡೆಯುತ್ತಾ, ಅಂದರೆ ಮೆಟ್ಟಿಲಿಳಿಯುತ್ತಾ ಹೋಗಬೇಕು. ಹೋದದ್ದೇನೋ ಆಯಿತು. ಸುಮಾರು ಅರ್ಧ ಗಂಟೆ ಎಂಟು ಮಹಡಿಗಳ ಕೆಳಗಿನ ಅಧೋಲೋಕವನ್ನು ನೋಡಿದ್ದೂ ಆಯಿತು. ಮತ್ತೆ ಆ ನೂರಾ ಹತ್ತು ಮೆಟ್ಟಿಲುಗಳನ್ನು ಹತ್ತಿ ಬಂದೆಡೆಗೆ ಹೋಗುವುದಿದೆಯಲ್ಲಾ…

ಮೆಟ್ಟಿಲುಗಳನ್ನು ಹತ್ತಿ ವಾಪಸ್ಸು ಬಂದ ಮೇಲೆಯೇ ನಿರ್ವಾಣದ ನಿಜ ಅರ್ಥವಾಗಿದ್ದು ನನಗೆ. ಹೃದಯ ತಾರಾಮಾರಾ ಚೀರುತ್ತಿತ್ತು. ಉಸಿರು ಮೂಳೆ-ಮಾಂಸವೆಂಬ ದೇಹದಿಂದ ಹೊರ ಹೋಗಲು ಕುಣಿಯುತ್ತಿತ್ತು. ಕಣ್ಣೆದುರಿನ ಜನರಿರಲಿ ಕಣ್ಣೆದುರಿನ ಮಂಕು ದೀಪ ಕೂಡಾ ಕಾಣುತ್ತಿರಲಿಲ್ಲ. ಬೆವರು ಧಾರಾಕಾರ. ಆಯಿತು, ಇಲ್ಲಿಯೇ, ಈ ಭೂಗತ ಊರಲ್ಲೇ ನನ್ನ ಕೊನೆ ಗ್ಯಾರಂಟಿ. ನನ್ನ ಬದುಕಿನಲ್ಲಿ ಉಳಿದಿರುವುದು ಕೇವಲ ಕೆಲವೇ ಸೆಕೆಂಡುಗಳು ಅನ್ನುವ ಅರಿವಾದೊಡನೇ ಹೆಂಡತಿ ಮಗಳು ಮೊಮ್ಮೊಗಳು ಗೆಳೆಯ ಗೆಳತಿಯರು ರಂಗ ಶಂಕರ ಎಲ್ಲವೂ ಮನಸ್ಸಿನಲ್ಲಿ ಹಾದು ಹೋದವು. ಕೂತೇ ಬಿಟ್ಟೆ. ಸುಮಾರು ಹತ್ತು ನಿಮಿಷಗಳ ತರುವಾಯ ಇಹಲೋಕಕ್ಕೆ ನನ್ನ ಅರಿವು ಬಂದು ತಲುಪಿದ್ದು.

ಎದ್ದು ನಿಂತೆನಲ್ಲಾ, ಮಾನವ ಬುದ್ಧಿ ನೋಡಿ ಎಷ್ಟಾದರೂ, ಆಸೆ ಮುಂಡೇದಕ್ಕೆ, ಮುಂದಿನ ಸುತ್ತು ನೋಡಲು ತಯಾರಾಗಿಬಿಟ್ಟೆ.

ಏನೇ ಆದರೂ ಒಮ್ಮೆಯಾದರೂ ನೋಡಬೇಕೂರೀ, ಈ ಭೂಗತ ಊರನ್ನು.

ನನ್ನ ಮೆಟ್ಟಿಲುಗಳಿಳಿತದ ಪ್ರಯಾಣದ ಒಂದು ತುಣುಕು, ನಿಮಗೆ. ಇಲ್ಲಿದೆ.

1 Response

  1. Nasrin says:

    O god it’s really horrible. …

Leave a Reply

%d bloggers like this: