ದೂರೊಂದಿದೆಯಲ್ಲ ನಲ್ಲ..

ಪಮ್ಮಿದ್ಯಾರಲಗೋಡು (ಪದ್ಮಜಾ ಜೋಯಿಸ್)

ನಿನ್ನ ಮೇಲಿನ ನನ್ನ ದೂರುಗಳ ಪಟ್ಟಿ ಮುಗಿಯುವುದೇ ಇಲ್ಲ..
ನಿನ್ನ ಅಪರಾಧಗಳೂ ನಿರಂತರ
ಸಾಗುತ್ತಲೇ ಇದೆಯಲ್ಲ…

ಬೇಸಿಗೆ ಮಳೆ ಸುರಿದು ಬಿರಿದ
ಮಲ್ಲಿಗೆ ಮುಡಿದು ನಿನಗಾಗಿ
ಕಾದಾಗ ಬರದೇ ಉಳಿದೆಯೆಂಬ
ದೂರೊಂದಿದೆಯಲ್ಲ!

ಮಾಗಿಯ ಚಳಿಯಲ್ಲೆದ್ದು ನೀ ನಡೆವ ಹಾದಿಗೆ
ಚಂದ ರಂಗವಲ್ಲಿ ಬಿಡಿಸಿ
ಕಾದಾಗ ನೀ ಬಾರದುಳಿದೆಯೆಂಬ
ದೂರೊಂದಿದೆಯಲ್ಲ!

ಹರಯದ ಭಾರಕೆ ನಡು ತುಯ್ದಾಡಿದಾಗ
ಬಾಹುಗಳಾಸರೆ ನೀಡದೇ
ನಡೆದೆಯೆಂಬ
ದೂರೊಂದಿದೆಯಲ್ಲ!

ನಟ್ಟಿರುಳ ರಾತ್ರಿಯ ಗುಡುಗಿನ ಸದ್ದಿಗೆ ಬೆಚ್ಚಿ
ನಿನ್ನೆದೆಯಲ್ಲಡಗಲು ಬಯಸಿದಾಗ ನೀನಿರದೇ
ಹೋದೆಯೆಂಬ
ದೂರೊಂದಿದೆಯಲ್ಲ!

ಕಡಲ ತಡಿಯಲಿ ಕುಳಿತು
ನಿನ್ನಪ್ಪುಗೆಯ ನೆನಪಲ್ಲಿ
ಕಾದಿರುವವಳ ಒಂಟಿಯಾಗಿಸಿದೆಯೆಂಬ
ದೂರೊಂದಿದೆಯಲ್ಲ!

ಇಷ್ಟೆಲ್ಲಾ ಅಪರಾಧಗಳಿಗೆ
ದೂರಿನ ಪಟ್ಟಿ
ಇಟ್ಟು ಕನವರಿಸಿದಾಗ ನೀ
ಕಿವಿಗೊಡದೇ ಹೋದೆಯೆಂಬ
ದೂರೂ ಇದೀಗ ಸೇರಿಕೊಂಡಿದೆ…

ಅಪರಿಚಿತರೂ ಓದಿದ ಕವಿತೆಯಿದನು
ನೀನೋದಲಿಲ್ಲವೆಂಬ
ದೂರೊಂದಿದೆಯಲ್ಲ! ನಲ್ಲ.

1 Response

  1. Anasuya M R says:

    ಭಾವನೆಗಳು ಹೆಪ್ಪುಗಟ್ಟಿವೆ

Leave a Reply

%d bloggers like this: