ಅವರು ‘ಕರ್ವಾಲೋ’ದ ಮಂದಣ್ಣನಾಗಿ ನನಗೆ ಕಂಡರು.

ಜಿ ಕೃಷ್ಣಪ್ರಸಾದ್ 

ಸಾವು ಹೇಗೆ ,ಯಾವ ರೂಪದಲ್ಲಿ ಬರುತ್ತದೆ ಎಂದು ಊಹಿಸುವುದೂ ಕಷ್ಟ.

ಕಳೆದ ಶುಕ್ರವಾರ ‘ಸಹಜ ಸೀಡ್ಸ’ನ ಸಭೆಗೆ ಬಂದಿದ್ದ, ಬೀಜ ಸಂರಕ್ಷಕ ಮತ್ತು ಹೆಸರಾಂತ ಸಾವಯವ ಕೃಷಿಕ ಜಯದೇವಯ್ಯ ಊರಿಗೆ ಹಿಂತಿರುಗುವಾಗ ಮಳವಳ್ಳಿ ಬಳಿ ಅಪಘಾತಕ್ಕೆ ತುತ್ತಾಗಿದ್ದರು. ಆಸ್ಪತ್ರೆ ಸೇರಿ ಗುಣಮುಖರಾಗಿ ಮೊನ್ನೆಯಷ್ಟೇ ಆಸ್ಪತ್ರೆ ಯಿಂದ ಮನೆಗೆ ಬಂದಿದ್ದರು.

ಗುರುವಾರದ ಸಂಜೆ ಒಂದು ಗಂಟೆಗೂ ಹೆಚ್ಚು ಕಾಲ ಅವರ ಜೊತೆ ಹರಟಿದ್ದೆ. ‘ ಏನೂ ಆಗಿಲ್ಲ ಸಾ. ಆರಾಮಗಿದ್ದೀನಿ. ಹಲ್ಲು ಮುರಿದಿವೆ. ಕಟ್ಟಿಸಿಕೊಂಡರೆ ಆಯಿತು. ಬರೋ ಮಳೆಗಾಲಕ್ಕೆ ಬೀಜ ಹಾಕ್ತೀನಿ. ಅಪರೂಪದ ಬೀಜ ಕೊಡಿ’ ಎಂದು ಕೇಳಿದ್ದರು.
ನಿನ್ನೆ ರಾತ್ರಿ ಬಚ್ಚಲು ಮನೆಗೆ ಹೋಗಿ ಬಂದವರು,ಉಸಿರಾಟದ ತೊಂದರೆಯಿಂದ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

ನನಗೆ ಬೀಜ ಸಂರಕ್ಷಣೆಯ ಸೂಕ್ಷ್ಮಗಳನ್ನು ಕಲಿಸಿಕೊಟ್ಟ, ಜೊತೆಗಿದ್ದು ಸಣ್ಣ ರೈತರನ್ನು ಬೀಜ ಚಳುವಳಿಯ ಭಾಗವಾಗಿಸಲು ಶ್ರಮಿಸಿದ ಜಯಪ್ಪ ಸಾವಯವ ಕ್ಷೇತ್ರದ ಪರಿಚಿತ ಚೇತನ.

1994 ರಲ್ಲಿ ನಾನು ಇಂಜಿನಿಯರಿಂಗ್ ಮುಗಿಸಿ, ವಂದನಾ ಶಿವಾರ ‘ನವಧಾನ್ಯ’ ಸಂಸ್ಥೆಗೆ ಕೆಲಸ ಮಾಡಲು ಆನೇಕಲ್ ಬಳಿಯ ತಮಿಳುನಾಡಿನ ಥಳಿ ಎಂಬ ಗ್ರಾಮಕ್ಕೆ ಹೋದೆ. ‘ಬೀ ಮ್ಯಾನ್ ಜಯಪ್ಪ’ ಎಂದು ಸ್ಥಳೀಯರಿಂದ ಕರೆಸಿಕೊಳ್ಳುತ್ತಿದ್ದ ಜಯಪ್ಪ ಒಂದು ರೀತಿ ‘ಕರ್ವಾಲೋ’ದ ಮಂದಣ್ಣನಾಗಿ ನನಗೆ ಕಂಡರು.

ಬೀಜ ಸಂರಕ್ಷಣೆಯ ಕೆಲಸ ಆಗದ ಮಾತು ಎಂದು ನನ್ನ ಜೊತೆ ತಗಾದೆ ತೆಗೆಯುತ್ತಿದ್ದರು. ರಾಸಾಯನಿಕದಲ್ಲಿ ಗುಲಾಬಿ ಬೆಳೆಯಲು ಹೋಗಿ, ಕೀಟನಾಶಕದ ಅವಾಂತರಕ್ಕೆ ಸಿಕ್ಕಿ ಸಾವಿನ ಅಂಚಿಗೆ ಹೋಗಿ ಬಂದರು. ಆರ್ಥಿಕವಾಗಿ ಬಸವಳಿದು ಹೋದರು. ಪ್ರಜಾವಾಣಿಯ ‘ಬೀಜ ಬಂಗಾರ’ ಅಂಕಣಕ್ಕೆ ನಾನು ಅವರು ಬೆಳೆದ ‘ಮಂತು ಕುಂಬಳ’ದ ಬಗ್ಗೆ ಲೇಖನ ಬರೆದೆ. ಅದು ಅವರಲ್ಲಿ ಸಾವಯವ ಕೃಷಿ ಮತ್ತು ಬೀಜ ಸಂರಕ್ಷಣೆಯ ಬಗ್ಗೆ ಆಸಕ್ತಿ ಹುಟ್ಟು ಹಾಕಿತು.

ನಮ್ಮ ಸಂಗ್ರಹದ ಅಪರೂಪದ ಬೀಜಗಳೆಲ್ಲಾ ಅವರ ಆರೈಕೆಯಲ್ಲಿ ಬೆಳೆದು, ಸೇರುಗಟ್ಟಲೆಯಾಗಿ ನೂರಾರು ಬೀಜ ಪ್ರೇಮಿಗಳ ಮಡಿಲು ಸೇರಿದವು. ‘ಸಮುದಾಯ ಬೀಜ ಬ್ಯಾಂಕ್’ನ ಕಲ್ಪನೆ ರೂಪುಗೊಂಡಿತು. ‘ಗ್ರೀನ್ ಪ್ರತಿಷ್ಟಾನ’ದ ಒತ್ತಾಸೆಯಿಂದ ಇಡೀ ಕರ್ನಾಟಕಕ್ಕೆ ಬೀಜ ಸಂರಕ್ಷಣೆಯ ಕಂಪು ಹರಡಿದೆವು. ಮಲ್ಲಿಕಾರ್ಜುನ ಹೊಸಪಾಳ್ಯ, ಶಾಂತಕುಮಾರ್, ಪ್ಯಾಟಿ, ಸೀಮ, ಅನಿತಾ, ಶಂಕರರಂತ ಬೀಜ ಪ್ರೀತಿಯ ಕಾರ್ಯಕರ್ತರ ಪಡೆಗೆ ಜಯಪ್ಪನವರ ಮಾರ್ಗದರ್ಶನ ದಾರಿದೀಪವಾಯಿತು.

ತಮ್ಮ ಮನೆ ಹಿತ್ತಲಿನ ಕಾಲು ಎಕರೆ ಜಾಗದಲ್ಲಿ,ಮಳೆ ಆಶ್ರಯದ ವೈವಿಧ್ಯದ ತೋಟ ಸೃಷ್ಟಿಸಿದ ಜಯಪ್ಪನವರ ಸಾಧನೆಯನ್ನು ನೋಡಲು ರೈತ ಗುಂಪುಗಳು ದಂಡುಕಟ್ಟಿ ಬರತೊಡಗಿದರು. ಜಯಪ್ಪ ಸಾವಯವ ಪಾಠ ಹೇಳುವ ಮೇಷ್ಟ್ರು ಆದರು. ಕಿಶೋರ್, ರಮೇಶ ಭಟ್ ರಂತ ಸಿನಿಮಾ ನಟರು ಇವರ ಅಭಿಮಾನಿಗಳಾದರು.

ಕರದೆಲ್ಲೆಡೆ ಹೋಗಿ ಸಾವಯವ ತೋಟ ಕಟ್ಟುವ ಕಲೆಯನ್ನು ಕಲಿಸಿ ಬರುತ್ತಿದ್ದರು. ಆಂಧ್ರ ಪ್ರದೇಶದ ವಿಶೇಷ ಆಹ್ವಾನದ ಮೇರೆಗೆ ಪೂರ್ವ ಘಟ್ಟಗಳಿಗೆ ಹೋಗಿ ‘ಗುಳಿ ರಾಗಿ’ ಪದ್ದತಿಯ ಕಲಿಸಿ ಬಂದರು. ಅಲ್ಲಿ ಇಂದು ನೂರಾರು ರೈತರು ಗುಳಿರಾಗಿ ಪದ್ದತಿ ಅನುಸರಿಸುತ್ತಿದ್ದಾರೆ.

ಸಾವಯವ ಕೃಷಿ ಎಂದರೆ ಹಣವಂತರ ಶೋಕಿ ಎಂದು ತಿಳಿದಿದ್ದ ದಿನಗಳಲ್ಲಿ ಸಾವಯವ ಕೃಷಿ ಸಣ್ಣ ರೈತರ ಆಶಾಕಿರಣ, ಆದಾಯದ ಮೂಲ ಎಂಬುದನ್ನು ಕಲಿಸಿಕೊಟ್ಟರು.

ನಮ್ಮ ಬೀಜದ ಕಾರ್ಯಕ್ಕೆ ಬೆನ್ನೆಲುಬಾಗಿದ್ದ ಜಯಪ್ಪ ನಮ್ಮನ್ನು ಅಗಲಿದ್ದಾರೆ. ಅವರ ನೆನಪುಗಳು ಹಸಿರಾಗಿವೆ.

Leave a Reply