ಈ ಸಂಕಲನ ಗಂಗಾವಳಿಯಲ್ಲಿ ಒಂದು ಈಜು ಹೊಡೆದಂತೆ..

ಚಿಕ್ಕವಳಿರುವಾಗ ಅಜ್ಜಿಯ ಮನೆಗೆ ಹೋಗುವುದೆಂದರೆ ನನಗೆ ತುಂಬಾ ಇಷ್ಟ.

ಅದಕ್ಕೆ  ಕಾರಣ ಅಜ್ಜಿ ಮನೆಯಲ್ಲಿ ನನಗೆ ಬೇಕಾದಂತೆ ಹಾಯಾಗಿರಬಹುದು, ಎಲ್ಲಿ ಬೇಕೆಂದರಲ್ಲಿ ಓಡಾಡಬಹುದು, ಅಮ್ಮನಿಗಿಂತಲೂ ಹೆಚ್ಚು ಮುದ್ದು ಮಾಡುವ ಅತ್ತೆ ನಾನು ಹೇಳಿದಂತೆ ಕೇಳುತ್ತಾರೆ ಎಂಬುದಷ್ಟೇ ಆಗಿರಲಿಲ್ಲ.

ಆ ಊರಿಗೆ ಹೋಗುವಾಗ ಗಂಗಾವಳಿ ನದಿಯನ್ನು ದಾಟಿ ಹೋಗಬೇಕಾಗಿತ್ತು. ಆ  ಊರಿಗೆ ಸರಿಯಾದ ಬಸ್ ವ್ಯವಸ್ಥೆ ಇರಲಿಲ್ಲ. ಹೀಗಾಗಿ ದೋಣಿಯ ಮೇಲೆ ಕುಳಿತು ಆ ತುಂಬಿದ ನದಿಯನ್ನು ದಾಟುವುದು ಒಂದು ರೀತಿಯಲ್ಲಿ ನನಗೆ ಥ್ರಿಲ್.

ನಮ್ಮೂರಿನಿಂದ ಗುಂಡಬಾಳಾ ಎಂಬ ಊರಿಗೆ ಬಂದು ಅಲ್ಲಿಂದ ಒಂದಿಷ್ಟು ದೂರ ನದಿ ದಂಡೆಯವರೆಗೆ ಭತ್ತದ ಗದ್ದೆಯ ಸಪೂರ ಹಾಳೆಯ ಮೇಲೆ ನಡೆದುಕೊಂಡು ಹೋಗಬೇಕಿತ್ತು. ನದಿ ದಂಡೆಯಲ್ಲಿ ನಿಂತು ಕೂಹೂ ಎಂದರೆ ಆ ದಡದಲ್ಲಿದ್ದ ನಮ್ಮ ಅಜ್ಜಿಯ ಊರಿನ  ಅಂಬಿಗರು ಕೂಹೂ ಎನ್ನುತ್ತ ತಾವು ಬರುತ್ತಿರುವ ಸೂಚನೆ ನೀಡುತ್ತಿದ್ದರು.  ಅಷ್ಟು ದೂರದಿಂದಲೇ ಅಮ್ಮನನ್ನು ಗುರುತಿಸಿ ‘ ನಾಗಿಣಕ್ಕಾ ಹೆಂಗಿವೆ? ಬಾಳ್ ದಿನ ಆಗೋಯ್ತಲ್ಲೇ ಬರ್ದೆ” ಎಂದು ತಮ್ಮದ ಪ್ರೀತಿ ತೋರಿಸುತ್ತಿದ್ದರು.

ಒಮ್ಮೆ ಒಂದಿಷ್ಟು ಬುದ್ಧಿ ಬಂದ ಮೇಲೆ (ದಯವಿಟ್ಟು ಈ ವಾಕ್ಯವನ್ನು ಯಾರೂ ಅನುಮಾನದ ದೃಷ್ಟಿಯಲ್ಲಿ ಓದಬೇಡಿ, ನಾನು ಹೇಳಿದ್ದು ಸ್ವಲ್ಪ ದೊಡ್ಡವಳಾದ ಮೇಲೆ ಅಂತಾ.) ಅದ್ಯಾಕೋ ಗಮನಿಸಿದೆ. ಆ ಊರಿನ ಜನರೆಲ್ಲ ದೋಣಿ ದಾಟಿ ಸುಮ್ಮನೆ ಅವರ ಪಾಡಿಗೆ ಅವರು ಹೊರಟು ಹೋಗುತ್ತಿದ್ದರು. ಆದರೆ ಅಮ್ಮ ಮಾತ್ರ ದೋಣಿ ಇಳಿದು ದೋಣಿ ನಡೆಸುತ್ತಿದ್ದ ಕುಟ್ಣಪ್ಪನಿಗೆ ಹಣ ಕೊಡುತ್ತಿದ್ದುದಲ್ಲದೇ ಹತ್ತಿರದಲ್ಲೇ ನಿಂತಿರುತ್ತಿದ್ದ ಆತನ ಮಕ್ಕಳಿಗೂ, ಬಹುಶಃ ಅಲ್ಲಿ ಇದ್ದ ಅವಷ್ಟೂ ಆತನ ಮಕ್ಕಳೇ ಇರಲಿಕ್ಕಿಲ್ಲ ಎಂದು ನನಗೆ ಯಾವಾಗಲೂ ಅನ್ನಿಸುತ್ತಿತ್ತು.

ಯಾಕೆಂದರೆ ಕೆಲವು ಮಕ್ಕಳ ಬಳಿ ಅಮ್ಮ ಅವರ ತಾಯಂದಿರ ಬಗ್ಗೆ ವಿಚಾರಿಸುತ್ತ, “ಎಷ್ಟನೇ ಕ್ಲಾಸು ಈಗ? ಚಂದ ಓದಬೇಕು. ಕಾಲ ಬದ್ಲಾಗಿದು. ಬರೀ ಮೀನ್ ಹಿಡ್ಕಂಡೇ ಬದ್ಕುಕೆ ಆಗೂದಿಲ್ಲ ಈಗ.” ಎನ್ನುತ್ತ ಚಿಲ್ಲರೆ ಹಣ ಕೊಟ್ಟು ಬರುವಷ್ಟರಲ್ಲಿ ನಮ್ಮ ಜೊತೆ ಬಂದವರಲ್ಲಿ ಕೆಲವರು ಅರ್ಧ ದಾರಿ ಸಾಗಿಬಿಟ್ಟಿದ್ದರೆ, ಎಲ್ಲೋ ಕೆಲವರು ಒಂದಿಷ್ಟು ದೂರ ಹೋಗಿ ನೆರಳಿಗೆ ನಿಂತು ಅಮ್ಮನ ಬರುವಿಕೆಯನ್ನು ಕಾಯುತ್ತ ನಿಂತಿರುತ್ತಿದ್ದರು.

“ಅಮ್ಮಾ ಅವರ್ಯಾರೂ ದುಡ್ಡು ಕೊಡೋದಿಲ್ಲ. ನೀನು ಮಾತ್ರ ಯಾಕೆ ಹಣ ಕೊಡೋದು ಎಂದು ನಾನೇನಾದರೂ ಕೇಳಿದರೆ, ಅಲ್ಲಿಯೇ ಅಮ್ಮನನ್ನು ಕಳುಹಿಸಿ ಕೊಡುವ ನೆಪದಲ್ಲಿ ಒಂದೆರಡು ಮಾರು ಜೊತೆಗೆ ಬರುವ ಕುಟ್ಣಪ್ಪಂಗೋ ಆತನ ಮಗನಿಗೋ ಕೇಳಿಸಿ ಅವರು ಬೇಜಾರು ಮಾಡ್ಕೋತಾರೇನೋ ಎಂಬ ಭಯದಲ್ಲಿ ಯಾರಿಗೂ ಗೊತ್ತಾಗದಂತೆ ನನ್ನ ಕೈ  ಹಿಡಿದು ಜಿಗುಟಿ ಬಿಡುತ್ತಿದ್ದಳು.

ಒಮ್ಮೆಯಂತೂ  ಕೈ ಕೊಸರಿಕೊಂಡು ‘ಯಾಕಮ್ಮಾ’ ಎಂದು ಪದೇ ಪದೇ ಕೇಳುತ್ತಿದ್ದಾಗ  ಜೊತೆಯಲ್ಲಿದ್ದ ಊರಿನ ಹಿರಿಯರಾದ ಮೋಹನಣ್ಣ ‘ಆತ ಗೌರ್ನಮೆಂಟ್ ದೋಣಿ ಹಾಕೋನು, ಅವನಿಗೆ ಸರಕಾರ ಪಗಾರ ಕೊಡ್ತದೆ. ಆದರೆ ನಿಮ್ಮಮ್ಮ ಲಂಚ ಕೊಡ್ತಾಳೆ. ಅದಕ್ಕೇ ಅಮ್ಮ ಬಂದರೆ ಅಂವಾ ಎಲ್ಲಿದ್ರೂ ಬೇಗ ಬಂದು ದೋಣಿ ಹಾಕೋದು’ ಎನ್ನುತ್ತ ನಕ್ಕಿದ್ದರು.

‘ನಮ್ಮಮ್ಮ ಹಂಗೆಲ್ಲ ಲಂಚಾ ಕೊಡೂದಿಲ್ಲ’- ನಾನು ಮುಖ ಉಬ್ಬಿಸಿ ಸಿಟ್ಟು ಮಾಡಿಕೊಂಡಿದ್ದು ಕಂಡು, ‘ಎಷ್ಟಂದ್ರೂ ಹಿರೇಗುತ್ತಿ ಹುಡುಗಿಯಪ್ಪ. ಎಲ್ಲಿ ಹೋಗೂದು ಊರ ಗುಣ’ ಎನ್ನುತ್ತ ನಕ್ಕು ನನ್ನ ಸಿಟ್ಟನ್ನು ಇನ್ನಷ್ಟು ಹೆಚ್ಚು ಮಾಡಿದ್ದರು.

ಅಂಕೋಲಾ ಹಾಗೂ ಕುಮಟಾ ತಾಲೂಕುಗಳಲ್ಲಿ ಹಿರೇಗುತ್ತಿಯವರೆಂದರೆ ಹುಂಬರು, ಮಹಾ ಕೋಪಿಷ್ಟರು ಎಂಬ ಮಾತು ಜನಜನಿತವಾಗಿದ್ದು, ನನ್ನೂರಿನ ಹೆಸರೆತ್ತಿ ಹಾಗೆಲ್ಲ ಮಾತನಾಡಿ ಬಿಟ್ಟರೆ ಅಕ್ಷರಶಃ ನಾನು ಚಂಡಿಯಾಗಿ ಜಗಳಕ್ಕೇ ನಿಂತು ಬಿಡುತ್ತಿದ್ದೆ.

‘ಗೌರ್ನಮೆಂಟ್ ದೋಣಿ ಹಾಕೋರೂ ಇರ್ತಾರಾ? ಸ್ವಲ್ಪಾನೂ ಬುದ್ಧೀನೇ ಇಲ್ಲ. ಅದ್ಕೆ ನಿಮ್ಮೂರಿಗೆ ಬೆಟ್ಟದ ಸೀಮೆ ಅನ್ನೋದು. ಏನೂ ಗೊತ್ತಾಗೂದಿಲ್ಲ’ ಎಂದು ಧಿಮಿಗುಟ್ಟಿ, ‘ನಾಗವೇಣಿ ನಿನ್ನ ಮಗಳೇನೇ ಇದು? ನಿಂಗೆ ಸಿಟ್ಟೇ ಬರೂದಿಲ್ಲ. ಇವಳೇನೇ? ಶಿರಸಿ ಮಾರಿಯಮ್ಮ?’ ಎಂದಿದ್ದರು.

ಈ ಪುಸ್ತಕ ಇಷ್ಟವಾದುದಕ್ಕೆ ಇದರ ಮೊದಲ ಲೇಖನವೇ ನನ್ನ ಬಾಲ್ಯದ  ನೆನಪನ್ನು ಮೊಗೆ ಮೊಗೆದು ಕೊಡುತ್ತಿದೆ ಎಂಬುದು ಎರಡನೆಯ ಕಾರಣವಾದರೆ  ಮೊದಲನೇ ಕಾರಣ ಖಂಡಿತವಾಗಿಯೂ ಪದವಿಯ ದಿನಗಳಲ್ಲಿ ತರಗತಿಯ ಕೋಣೆಗಳಲ್ಲಿ ನನ್ನಿಂದ ಸಿಕ್ಕಾಪಟ್ಟೆ ತೊಂದರೆ ಅನುಭವಿಸಿದ ನನ್ನ  ಪ್ರೀತಿಯ ಗುರುಗಳಾದ ರಾಜು ಹೆಗಡೆಯವರ ಪುಸ್ತಕ ‘ಹಳವಂಡ’  ಎಂಬ ಕಾರಣಕ್ಕಾಗಿ.

“ಹೆಂಗಿದ್ದು ಶಿರಸಿ ಕಾಲೇಜು?” ಕೆಲವು ತಿಂಗಳುಗಳ ಹಿಂದೆ ಭೇಟಿಯಾದ  ರಾಜೂ ಸರ್ ನ್ನು ಮಾಮೂಲಿಯಾಗಿ ಕೇಳಿದ್ದೆ. “ಒಂದ್ ನಮೂನಿ ಸತ್ ಹೆಣಕ್ಕೆ ಪಾಠ ಮಾಡ್ದಂಗೆ ಆಗ್ತಿದ್ದು ಮಾರಾಯ್ತಿ” ಬಾಯಲ್ಲಿದ್ದ ಕವಳವನ್ನು ಒಂದು ದವಡೆಯಿಂದ ಮತ್ತೊಂದು ದವಡೆಗೆ ವರ್ಗಾಯಿಸುತ್ತ ತಮ್ಮ ಮಾಮೂಲಿ ಧ್ವನಿಯ ಏರಿಳಿತದಲ್ಲಿ ಹೇಳಿದ್ದರು.

“ಎಂತಾ ಆತ್ರೋ…? ಪಾಠ ಮಾಡಲೆ ಬೇಜಾರಾಜು ನಿಮ್ಗೆ” ಎನ್ನುತ್ತ ಕಿಚಾಯಿಸಿದ್ದೆ. “ಶೀ… ಸುಮ್ನಿರು, ನಿಮ್ ಬ್ಯಾಚೇ ಕಡೇದು ನೋಡು, ಇಲ್ಲದ್ ಉಪದ್ಯಾಪಿ ಮಾಡ್ತಿದ್ದದ್ದು. ನಿಂಗ ಹೋದ್ ಮ್ಯಾಲೆ ಮಕ್ಳಿಗೆ ಯಾರಿಗೂ ಜೀವನೇ ಇಲ್ಲೆ. ಒಂದ್ ಪ್ರಶ್ನೆ ಕೇಳ್ತ್ವಿಲ್ಲೆ, ಒಂದು ಕವಿತೆ ಬರಿ ಅಂದ್ರೂ ಆಗ್ತಿಲ್ಲೆ, ಭಾಷಣ, ಡಿಬೇಟು ಸುದ್ದಿನೇ ಬ್ಯಾಡ್ದಪಾ ಇವಕೆ. ಬರೀ ಓದ್ಕಂಡು ಮಾರ್ಕ್ಸ್ ತಗಳದೇ ಆಗೋಜು” ಎನ್ನುತ್ತ ಸಪ್ಪಗೆ ಮಾತನಾಡಿದ್ದರು.

ಇದೇ ಮಾತನ್ನು ವಿಜಯನಳಿನಿ ಮೇಡಂ ಕೂಡ ಒಮ್ಮೆ ಫೋನಾಯಿಸಿದವರು ಹೇಳಿದ್ದರು. “ನೀವೆಲ್ಲ ಕಲಿತುಕೊಂಡು ಹೋಗಿ ಹದಿನೈದು ವರ್ಷ ಆಯ್ತಲ್ಲೇ. ಆದರೂ ನಿಮ್ಮ ನೆನಪು ಎಷ್ಟು ಚೆನ್ನಾಗಿದೆ. ಆದರೆ ಹಿಂದಿನ ವರ್ಷ ಕಾಲೇಜು ಮುಗಿಸಿದವರೂ ಈಗ ನೆನಪಿಗೆ ಬರೋದಿಲ್ಲ ನೋಡು.” ಎನ್ನುತ್ತ ಧ್ವನಿ ಸಪ್ಪಗೆ ಮಾಡಿದ್ದರು. ನಾವೇಕೆ ಈ ಶಿಕ್ಷಕರಿಗೆಲ್ಲ ಅಷ್ಟು ಚೆನ್ನಾಗಿ ನೆನಪಿದ್ದೇವೆಂದರೆ ನಮ್ಮದೇ ನಾಲ್ಕಾರು ವಿದ್ಯಾರ್ಥಿಗಳ ಒಂದು ಗುಂಪು ಇಡೀ ಕ್ಲಾಸನ್ನೇ ಅಲ್ಲೋಲಕಲ್ಲೋಲ ಮಾಡುವಷ್ಟು ಪ್ರಶ್ನೆ ಕೇಳಿ ಶಿಕ್ಷಕರ ತಲೆ ತಿಂದು ಬಿಡುತ್ತಿದ್ದೆವು.

‘ಈ ವರ್ಷ ಕನ್ನಡಕ್ಕೆ ಹೊಸ ಲೆಕ್ಚರರ್ ಬಂದಿದ್ದಾರೆ, ಜಿ ಎಸ್ ಅವಧಾನಿಯವರ ಅಳಿಯನಂತೆ’ ಎಂಬ ಕುತೂಹಲದಿಂದಲೇ ರಾಜೂ ಹೆಗಡೆಯವರ ತರಗತಿಗಳು ಪ್ರಾರಂಭವಾಗಿದ್ದರೂ  “ಸರ್ ಮಗ ಹುಟ್ಟಿದ್ರೆ ಕೇಶಿರಾಜ ಅಂತಾ ಹೆಸರಿಟ್ಟು ಬಿಡ್ತೇನೆ. ಈಗ ನಮ್ಮ ತಲೆ ತಿನ್ಬೇಡ ಎಂದು ಆ ಕೇಶಿರಾಜಂಗೆ ಹೇಳಿ” ಎನ್ನುತ್ತ ಅವರೆದುರಿಗೇ ಕ್ಲಾಸ್ ಗೆ ಬಂಕ್ ಹೊಡೆಯುವಷ್ಟು ಎಡವಟ್ಟುಗಳು ನಾವು.

“ಹೋಯ್.. ನಿಮ್ ಸ್ಟ್ರೈಕು, ಹೋರಾಟ, ಹಾರಾಟ.. ಕಾರಿಡಾರ್ ಮೇಲೆ ಕ್ಯಾಟ್ ವಾಕ್ ಮಾಡೂದೆಲ್ಲ ಮುಗಿದಿದ್ರೆ ಒಂಚೂರೂ ಕ್ಲಾಸಿಗೂ ಬಂದು ಕೂತ್ಕಳ್ರೆ” ಎನ್ನುವುದು ಡಿಗ್ರಿ ಕೊನೆಯ ವರ್ಷದಲ್ಲಿ ಇದು ಕೇವಲ ರಾಜೂ ಸರ್ ಒಬ್ಬರ ಮಾತಾಗಿರಲಿಲ್ಲ.

“ಕಾರಿಡಾರ್ ಮೇಲೆ ಓಡಾಡಬೇಡಿ ಅಂತಾ ಅದೆಷ್ಟು ಸಲ ಹೇಳೋದು ನಿಮಗೆ? ಇದೇನು ಕಾಲೇಜೋ ಅಥವಾ ದನದ ಕೊಟ್ಟಿಗೆನೋ?” ಪಾಪದ ಪ್ರಿನ್ಸಿಪಾಲರು ಕಾಲೇಜಿನಲ್ಲಿ ಡಿಸಿಪ್ಲೀನ್ ತರಲು ಹೆಣಗಾಡುತ್ತಿದ್ದರೆ, “ಸರ್ ಕಾರಿಡಾರ್ ಮೇಲೆ ನೀವೊಬ್ಬರೇ ಓಡಾಡೋದು ಅಷ್ಟು ಚಂದ ಕಾಣೂದಿಲ್ಲ. ನಮ್ಮಂತ ಹುಡುಗಿಯರೂ ಓಡಾಡಿದ್ರೆ ಅದಕ್ಕೊಂದು ಚಂದ” ಎಂದು ಕಿಲಕಿಲಿಸಿ, ಪ್ರಿನ್ಸಿಪಾಲ್  ಶಂಕರ ರಾವ್ ಅಸಹಾಯಕತೆಯಲ್ಲಿ ಮಿಡುಕುವುದು ನೋಡುವುದೇ ಒಂದು ತಮಾಷೆ ಎಂಬಂತಾಗಿಬಿಟ್ಟಿತ್ತು.

ಹೀಗಾಗಿ ಪದವಿಯ ಕೊನೆಯ ವರ್ಷದ ಐಚ್ಛಿಕ ಕನ್ನಡದ ಕೇಶಿರಾಜ, ಐಚ್ಛಿಕ ಇಂಗ್ಲೀಷ್ ನ ಥಾಮಸ್ ಹಾರ್ಡ್ಲಿಗಳೆಲ್ಲ “ದಯವಿಟ್ಟು ಕ್ಲಾಸಿಗೆ ಬಂದು ನಮ್ಮನ್ನು ಕಲಿತುಕೊಳ್ರೋ” ಎಂದು ನಮ್ಮನ್ನು ಗೋಗರೆದಂತಾಗಿ ನಾವೇ ಕಾಲೇಜಿನ ಕ್ವೀನ್ ಗಳು ಎಂಬ ಭ್ರಮೆ ಬಂದು ಬಿಟ್ಟಿತ್ತು.

ಆದರೆ ರಾಜೂ ಸರ್ ಕಥೆಯೇ ಬೇರೆ.

ಅಷ್ಟರಲ್ಲಾಗಲೇ ಕವಿತೆ ಬರೆಯುವ ಹುಚ್ಚಿಗೆ ಬಿದ್ದಿದ್ದ ನನಗೆ ಈಗಾಗಲೇ ಕವಿ, ಕಥೆಗಾರ ಎಂಬ ಹೆಸರು ಗಳಿಸಿಕೊಂಡ ರಾಜೂ ಸರ್ ಸಹಜವಾಗಿಯೇ ಇಷ್ಟವಾಗುತ್ತಿದ್ದರು. ಜೊತೆಗೆ  ಈಗಾಗಲೇ ನಮ್ಮೆದುರಿಗೇ ‘ಹೊಸಿಲಾಚೆಯ ಹೊಸ ಹೆಜ್ಜೆ’ ಎಂಬ ತಮ್ಮ ಮೊದಲ ಕವನ ಸಂಕಲನವನ್ನು ಬಿಡುಗಡೆ ಮಾಡಿದ ಗೀತಾ ವಸಂತ ಕೂಡ.

ಇನ್ನುಳಿದಂತೆಲ್ಲ ನಮ್ಮೆಲ್ಲ ಆತಿರೇಕದ ಹುಡುಗಾಟದ ನಡುವೆಯೂ ನಮ್ಮನ್ನು ಅಪಾರವಾಗಿ ಪ್ರೀತಿಸುತ್ತಿದ್ದ  ವಿಜಯನಳಿನಿ ರಮೇಶ, ಎಂ ರಮೇಶ ದಂಪತಿಗಳು, ಮಮತಾ ನಾಯಕ ಹಾಗೂ ರವಿ ನಾಯಕ ದಂಪತಿಗಳು, ಸರಸ್ವತಿ ತಲಗೇರಿ ಮೇಡಂ, ಮಂಗಲಾ ಮೇಡಂ, ರವಿ ಹೆಗಡೆ, ಗೌಡರ್ ಸರ್, ಎಲ್ಲರೂ ಒಮ್ಮೆಲೇ ಈ ಪುಸ್ತಕದ ನೆಪದಲ್ಲಿ ನೆನಪಾಗಿ ಖುಷಿಪಡುವಂತಾಯಿತು ಎಂಬುದು ಈ ಪುಸ್ತಕ ಇಷ್ಟವಾಗಲು ಇರುವ ಮೂರನೇ ಕಾರಣ.

ಅಂದ ಹಾಗೆ ನಿಮಗೂ ಈ ಪುಸ್ತಕ ಇಷ್ಟವಾಗಲು ಹಲವಾರು ಕಾರಣಗಳಿವೆ. ನಿಮ್ಮ ಬಾಲ್ಯದ ಹಾಗೂ ಯೌವ್ವನದ ದಿನಗಳ ನೆನಪನ್ನು ಮೊಗೆಮೊಗೆದು ಕೊಡುವ ಹತ್ತಾರು ಲೇಖನಗಳು ನಿಮಗೆ ಒಳಗೊಳಗೆ ಮುದನೀಡುತ್ತ ರೋಮಾಂಚನಗೊಳಿಸುವುದಕ್ಕೆ ಈ ಪುಸ್ತಕದ ಓದಿನಲ್ಲಿ ಯಾವುದೇ ಮೋಸ ಇಲ್ಲ. ಒಂದೊಂದು ಚಿಕ್ಕ ವಿಷಯವನ್ನೂ ಜತನದಿಂದ ಜ್ಞಾಪಿಸಿಕೊಂಡು ಅದನ್ನು ಯಥಾವತ್ತಾಗಿ ನಮ್ಮೆದುರು ಈಗ ತಾನೆ ನಡೆಯಿತೇನೋ ಎಂಬಂತೆ ಸ್ವಾರಸ್ಯವಾಗಿ  ಹೇಳುವ ರಾಜು ಹೆಗಡೆಯವರ ಕಥಾನಕದ ಕಲೆ ಇಲ್ಲಿ ಅತ್ಯದ್ಭುತವಾಗಿ ಕೆಲಸ ಮಾಡಿದೆ.

ಇಡೀ ಪುಸ್ತಕ ನಮಗೆ ಇಷ್ಟವಾಗಲು ಮೊದಲನೇ ಕಾರಣ ಇದರ ಭಾಷೆ. ಎಂತದ್ದೋ ಘನಂಧಾರಿ ವಿಷಯವನ್ನು ಹೇಳುತ್ತಿದ್ದೇನೆ ಎಂಬ ಭಾವ ಹುಟ್ಟಿಸಿ ಓದುವ ಮೊದಲೇ ಕೈಕಾಲು ನಡುಗಿಸಿ ಬಿಡುವ ಇಂದಿನ ಸೋ ಕಾಲ್ಡ್ ಲೇಖಕರ ನಡುವೆ ರಾಜು ಹೆಗಡೆಯವರ ಭಾಷೆ ತೀರಾ ಆಪ್ತವೆನ್ನಿಸಿಬಿಡುತ್ತದೆ. ಎಲ್ಲೋ ಮನೆಯ ಜಗುಲಿಯ ಮೇಲೆ ಕುಳಿತು ಹರಟೆ ಹೊಡೆಯುವಂತೆ ಭಾಸವಾಗುವ ಈ ಓದು ಆ ಹರಟೆಯ ನಡುವೆಯೇ ಹೇಳಬೇಕಾದುದ್ದನ್ನು ಹೇಳದೇ ಬಿಡುವುದಿಲ್ಲ, ಥೇಟ್ ರಾಜು ಹೆಗಡೆಯವರ ನಗುಮೊಗದ ಚೂಪು ಮಾತಿನಂತೆ ಎಂಬುದನ್ನು ಗಮನಿಸಬೇಕಿದೆ.

ಎರಡನೆಯ ಲೇಖನ ‘ಎಮ್ಮೆ ಕಳೆದಿದೆ’ ಓದುವಾಗ ಹಳ್ಳಿಯಲ್ಲಿ ಬೆಳೆದ ಯಾರಿಗೇ ಆದರೂ ಈ ದನ ಕಳೆದು ಹೋಗುವ, ಮತ್ತು ಕಳೆದು ಹೋದ ದನವನ್ನು ಹುಡುಕುವ ಪರಿಪಾಟಲು ನೆನಪಾಗದೇ ಇರದು. ಎಮ್ಮೆಯ ಧ್ವನಿಯನ್ನು ಅನುಕರಿಸುತ್ತ, ಆ ಎಮ್ಮೆ  ಎಲ್ಲೆಲ್ಲಿ ಹೋಗಿರಬಹುದು ಎಂದು ಅಂದಾಜು ಹಾಕುತ್ತ ಹೋಗುವುದು, ಸಿಕ್ಕದಿದ್ದಾಗ ಎಲ್ಲರ ಮೇಲೂ ಸಿಟ್ಟು ಮಾಡುವುದು, “ನಂಗೊಬ್ಳಿಗೇನಾ ಹಾಲು, ಮೊಸರು…” ಎಂದು ಅಸಹಾಯಕ ಅಮ್ಮನೂ ಕುಸುಕುಸು ಮಾಡುವುದು..

ಮಧ್ಯರಾತ್ರಿಯವರೆಗೂ ಕಳೆದು ಹೋದ ಎಮ್ಮೆಗಾಗಿ ಊರೆಲ್ಲ ಅಷ್ಟೇ ಏಕೆ  ಬೆಟ್ಟ ಕಾಡನ್ನೆಲ್ಲ ಹುಡುಕಿ ನಿರಾಶರಾಗಿ ಬಂದು ಮಲಗಿದರೆ, ಬೆಳಗಾಗುವಷ್ಟರಲ್ಲಿ ಆ ಎಮ್ಮೆಯೇ ಬಂದು ಕೊಟ್ಟಿಗೆಯಲ್ಲಿ ನಿಂತಿದ್ದರೆ ಆಗೋದು  ಖುಷಿಯೋ ಸಿಟ್ಟೋ ಒಂಥರಾ ಸಮಾಧಾನವೋ?

ಹೆಚ್ಚಿನ ಲೇಖನಗಳು ನದಿಯ ಸುತ್ತಮುತ್ತಲೇ  ಇದೆ. ತೇಲುವ ಊರು ಇದರ ಒಂದು ರೂಪಕವಾಗಿ  ಬರುತ್ತದೆ. ಇಡೀ ಶರಾವತಿ ನದಿಯ ಜಲಪ್ರಯಾಣವನ್ನು ರಾಜು ಹೆಗಡೆಯವರು ಕಣ್ಣಿಗೆ ಕಟ್ಟುವಂತೆ  ಹೇಳಿದ್ದಾರೆ. ಶರಾವತಿ ನದಿಯ ಲಾಂಚಿನ ಪಯಣದ ಕಥೆ ಈಗ ಹೆಚ್ಚಿನವರಿಗೆ ಕಥೆಯೇ ಆಗಿಬಿಟ್ಟಿದೆ. ಇತ್ತೀಚಿನ ತಲೆಮಾರಿಗೆ ದೋಣಿ ಪಯಣ ಎಂದರೆ ಸೇಪ್ಟಿ ಜಾಕೆಟ್ ಹಾಕಿಕೊಂಡು, ಕೆರೆಯಲ್ಲಿ ಪೆಡಲ್ ತುಳಿಯುತ್ತ ಮಾಡುವ ಪಯಣ  ಅಷ್ಟೆ.

ಆದರೆ ಒಂದು ಚಿಕ್ಕ ಪಾತಿ ದೋಣಿಯಲ್ಲಿ ರಭಸದಿಂದ ಹರಿಯುವ ತುಂಬಿದ ನದಿಯನ್ನು ದಾಟುವುದನ್ನು ಕನಸಿನಲ್ಲೂ ಊಹಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಉತ್ತರ ಕನ್ನಡ ಜಿಲ್ಲೆಯ ಕೆಲವಾದರೂ ಹಳ್ಳಿಗಳಿಗೆ ಈಗಲೂ ಪಾತಿ ದೋಣಿಯೇ ಸಂಪರ್ಕಕ್ಕೆ ಇರುವ ಏಕೈಕ ಸಾಧನ.

“ಅಮ್ಮ ಮುಂದಿನ ಸಲ ಹಿರೇಗುತ್ತಿಗೆ ಹೋಗುವಾಗ ಲಾಂಚ್ ಮೇಲಿಂದ ಹೋಗೋಣ ಅಮ್ಮ.” ಮಕ್ಕಳಿಬ್ಬರೂ ಲಾಂಚ್ ಹತ್ತುವ ಉಮ್ಮೇದಿಯಲ್ಲಿ ಹೇಳುತ್ತಿದ್ದರು. ಹಿರೇಗುತ್ತಿಗೆ ಎರಡೂ ರಸ್ತೆಗಳೂ ಸಮಾನ ದೂರ. ಹೀಗಾಗಿ ಗೋಕರ್ಣಕ್ಕೆ ಹೋಗುವಾಗ ಲಾಂಚ್ ಮೇಲೆ ಹೋಗೋಣ ಎಂದು ಸಮಾಧಾನ ಪಡಿಸಿದ್ದೆ. ಗೋಕರ್ಣದಿಂದ ಅಂಕೋಲಾಕ್ಕೆ ಹೋಗುವ ಮಾರ್ಗದ ನಡುವೆ ಗಂಗಾವಳಿ ನದಿ ಹರಿಯುತ್ತಿದೆ. ಈಗ ಹಾಲಿ ಇರುವ ರಸ್ತೆಯನ್ನೇ ಬಳಸಿ ಹೋದರೂ ನಡುವೆ ಗಂಗಾನದಿ ಸಿಗುತ್ತದೆ ಮತ್ತು ಆ ನದಿಗೆ ಹೊಸೂರು ಎಂಬಲ್ಲಿ ಸೇತುವೆ ಕಟ್ಟಲಾಗಿದೆ.

ಈ ಸೇತುವೆ ಅಂಕೋಲಾ ಹಾಗೂ ಕುಮಟಾ ತಾಲೂಕುಗಳನ್ನು ಜೋಡಿಸುವ ಕೊಂಡಿ. ಆದರೆ ಈ ದಾರಿ ಹಿಡಿದು ಹೋದರೆ ಅದು ಸುತ್ತು ಬಳಸಿನ ಹಾದಿ. ಇದಕ್ಕೆ ಹೊರತಾಗಿ ಅಂಕೋಲಾ ಮತ್ತು ಗೋಕರ್ಣದ ನಡುವೆ ಇರುವ ಕೊಂಡಿಗೆ ಗಂಗಾವಳಿ ನದಿಗೆ ಇನ್ನೂ ಸೇತುವೆ ಕಟ್ಟಲಾಗಿಲ್ಲ. ಹೀಗಾಗಿಯೇ ಗಂಗಾವಳಿ ಸಮುದ್ರ ಸೇರುವ ಸಮೀಪದಲ್ಲೇ ಈಗ ಲಾಂಚ್ ಬಿಡಲಾಗುತ್ತಿದೆ.

ಕೆಲವೇ ವರ್ಷಗಳಲ್ಲಿ ಇಲ್ಲಿಯೂ ಸೇತುವೆ ನಿರ್ಮಾಣ ಆಗುವ ಸೂಚನೆ ಇದೆ. ಒಂದು ವೇಳೆ ತದಡಿ ಅಂತರಾಷ್ಟ್ರೀಯ ಮೀನುಗಾರಿಕಾ ಬಂದರಾಗಿ ಮಾರ್ಪಟ್ಟರೆ ಇಲ್ಲಿಯೂ ಸೇತುವೆ ಬಂದು ಲಾಂಚ್ ಎಂಬುದು ಮತ್ತೆ ಕಥೆ ಹೇಳಬೇಕಾದ ಕಥೆಯಾಗುವ ಮೊದಲೇ ಒಮ್ಮೆ ಮಕ್ಕಳನ್ನು ಕರೆದುಕೊಂಡು ಲಾಂಚ್ ಹತ್ತಿ ಅದರ ಅನುಭವವನ್ನು ತೋರಿಸಿಬಿಡಬೇಕು ಎಂದುಕೊಂಡಿದ್ದೇನೆ.

ಅಂದಹಾಗೆ ನಿಮಗೇನಾರೂ ಹೈಸ್ಕೂಲು ದಿನಗಳಲ್ಲಿಯೇ ಕ್ರಷ್ ಉಂಟಾಗಿದ್ದರೆ ರಾಜು ಹೆಗಡೆಯವರ ಕ್ರಷ್ ಪ್ರಸಂಗವನ್ನು ನೀವು ಓದಲೇ ಬೇಕು. ಏಳನೇ ತರಗತಿಯಲ್ಲಿಯೇ ಜೊತೆಗೆ ಓದುತ್ತಿದ್ದ ಹುಡುಗಿಯೊಬ್ಬಳು ಕಾಲೇಜು ಮುಗಿಯುವವರೆಗೂ ಕಾಡಿದ್ದನ್ನು ತುಂಬಾ ಆತ್ಮೀಯವಾಗಿ ಹೇಳಿಕೊಳ್ಳುವ ಲೇಖಕರು ಎಲ್ಲರ ಮನದ ಮೂಲೆಯಲ್ಲೂ ಅಡಗಿರುವ ಇಂತಹುದ್ದೊಂದು ಕ್ರಷ್ ನ ಕಥೆಯ ತಂತಿಯನ್ನು ಸಣ್ಣಗೆ ಮೀಟಿ ನವಿರು ರಾಗವನ್ನೊಮ್ಮೆ ಹೊರಡಿಸುವಲ್ಲಿ ಯಶಸ್ವಿಯಾಗುವುದರಿಂದ ನಾನು ಈ ಬಗ್ಗೆ ಯಾವ ಕಥೆಯನ್ನೂ ಹೇಳಬಾರದು ಎಂದು ತೀರ್ಮಾನಿಸಿಬಿಟ್ಟಿದ್ದೇನೆ.

ಆದರೂ ತಮ್ಮೆಲ್ಲ ಕ್ರಷ್ “ಈಗ ಇದೆಲ್ಲ ಎಂಥ ಮಳ್ಳಂಗಿತ ಎಂದು ಕಾಣುತ್ತಿರುವುದನ್ನು ನೋಡಿದರೆ ನನಗೆ ನನ್ನ ಈಗಿನ ಸ್ಥಿತಿಯ ಬಗ್ಗೆ ಹೆದರಿಕೆಯಾಗುತ್ತದೆ” ಎಂದು ಪ್ರಾಮಾಣಿಕವಾಗಿ ಶರಾ ಬರೆಯುತ್ತಾರೆ.

ಈಗಿನ ಕೆಲವು ಯುವ ಕವಿಗಳ ಬಗ್ಗೆ ನನಗೂ ಭಯವಾಗುತ್ತಿರುವುದನ್ನು ಕೆಲವು ದಿನಗಳ ಹಿಂದೆ ಸೊಲಾಪುರದ ಅಕ್ಕಲಕೋಟೆಯಲ್ಲಿ ನಡೆದ  ಕವಿಗೋಷ್ಟಿಯ ಅಧ್ಯಕ್ಷೀಯ ಭಾಷಣದಲ್ಲಿ ಪ್ರಸ್ತಾಪಿಸಿದ್ದೆ. ಸಹಜವಾಗಿ ಪ್ರೀತಿ-ಪ್ರೇಮದ ಬಗ್ಗೆ ಬರೆಯಬೇಕಾಗಿದ್ದ ಯುವ ಕವಿಗಳು ಯಾವುದೋ  ಗಹನ ವಿಚಾರವನ್ನಿಟ್ಟುಕೊಂಡು ಆಕಾಶವೇ ತಲೆಕೆಳಗಾದಂತೆ ಬರೆಯುವಾಗಲೆಲ್ಲ ತಮ್ಮ ಯೌವ್ವನವನ್ನೆಲ್ಲ ಯಯಾತಿಗೆ ಧಾರೆ ಎರೆದ ಪುರುವಿನ ತರಹ ಕಾಣಿಸುತ್ತ ಕಸಿವಿಸಿಯಾಗುತ್ತಿದೆ.

ಬರೀ ಪ್ರೀತಿ ಪ್ರೇಮದ ಬಗ್ಗೆ ಬರೆಯಿರಿ, ಗಹನವಾದ ವಿಷಯಗಳ ಬಗ್ಗೆ ಬರೆಯಬೇಡಿ  ಎಂದು ನಾನೇನೂ ಹೇಳುತ್ತಿಲ್ಲ. ಆದರೆ ಒಂದಿಷ್ಟಾದರೂ ಸಹಜ ಭಾವನೆಗಳನ್ನು ಅಭಿವ್ಯಕ್ತಿಗೊಳಿಸದಿದ್ದರೆ ಹೇಗೆ ಎಂಬ ನನ್ನ ಪ್ರಶ್ನೆಗೆ ಜೊತೆ ನಿಲ್ಲುವಂತಿದೆ ರಾಜು ಹೆಗಡೆಯವರ ಈ ಸಾಲು.

ಅದರಂತೆಯೇ ಮತ್ತೊಂದು ಲೇಖನದಲ್ಲಿ “ನಾನಿನ್ನೂ ಕುಡಿಯಲು ಶುರು ಮಾಡಿರಲಿಲ್ಲವಾದ್ದರಿಂದ ಇದರ ಸತ್ಯಾಸತ್ಯತೆಯನ್ನು ಪರೀಕ್ಷಿಸಲು ಸಾಧ್ಯವಾಗಲಿಲ್ಲ” ಎಂದು ತನ್ನ ಅಪಾರವಾದ ಶಿಷ್ಯ ಬಳಗ ಏನೆಂದುಕೊಳ್ಳುತ್ತದೋ ಎಂದೂ ಯೋಚಿಸದೇ ಮಾಮೂಲಿ ಎಂಬಂತೆ ಹೇಳಿ ಬಿಡುವುದರಿಂದಲೂ  ರಾಜು ಹೆಗಡೆಯವರು ಮತ್ತಿಷ್ಟು ಆತ್ಮೀಯವಾಗುತ್ತಾರೆ.

ಇದರ ಅರ್ಥ ಕುಡಿಯುವವರು ಆತ್ಮೀಯರು ಎಂದಲ್ಲ. ತಮ್ಮೆಲ್ಲ ಸ್ವಘೋಷಿತ ಪ್ರತಿಷ್ಟೆ, ಹಮ್ಮು ಬಿಮ್ಮುಗಳನ್ನು ಕಿರೀಟದಂತೆ ಹೊತ್ತು ಓಡಾಡುವವರ ನಡುವೆ ಇದಾವುದೂ ತನಗೆ ಸಂಬಂಧಿಸಿದ್ದಲ್ಲ ಎಂದು ನಿರಾಳವಾಗಿರುವ ರಾಜು ಹೆಗಡೆಯವರ ಸರಳ ಮನಸ್ಥಿತಿಯನ್ನು ಹಲವಾರು ವರ್ಷಗಳ ಅವರ ಒಡನಾಟದಲ್ಲಿ ಕಂಡುಕೊಂಡಿದ್ದರೂ ಅದು ಅವರ ಬರಹದಲ್ಲೂ ಎದ್ದು ಕಾಣಿಸುವುದು ಖುಷಿ ನೀಡುತ್ತದೆ.

ನಿಮಗೆ ಇಡೀ ಪುಸ್ತಕವನ್ನು ಓದಲಾಗದಿದ್ದರೂ “ಮೃಗಯಾವ್ಯಾಜದಿಂ ಒರ್ಮೆ” ಎಂಬ ಲೇಖನವನ್ನಂತೂ ಓದಲೇಬೇಕು.  ಇಡೀ ಲೇಖನ ಪೂರ್ಣಚಂದ್ರ ತೇಜಸ್ವಿಯವರ ಬರೆಹದ ಶೈಲಿಯನ್ನು ನೆನಪಿಸುವಂತಿದ್ದರೂ ಅವರಷ್ಟು ಪುಸ್ತಕೀಯ ಭಾಷೆ ಇಲ್ಲಿಲ್ಲ. ಆಡುವ ಭಾಷೆಯಲ್ಲಿಯೇ ಶಿಕಾರಿಗೆ ಹೋಗಿದ್ದನ್ನು ಹೇಳುವುದನ್ನು ಓದುವುದೇ ಒಂಥರಾ ಮಜ. ಇಡೀ ಲೇಖನವನ್ನು ಓದುವಾಗ ಕರ್ವಾಲೋದ ಮಂದಣ್ಣ ಹಾಗೂ ಅಡುಗೆ ಮಾಡುವವ ಎಲ್ಲರೂ ಒಟ್ಟಿಗೇ ನೆನಪಾಗಿ ನಗು ಬರದಿದ್ದರೆ ಕೇಳಿ.

‘ಲಾರಿ ಏರಿ ಹೋದ ಕಾಡು’ ಎಂಬ ಲೇಖನ ತಮ್ಮೂರಿಗೆ ಬರುವ ಲಾರಿಯನ್ನು ವಿಚಿತ್ರ ಹೆಮ್ಮೆಯಲ್ಲಿ ಬರಮಾಡಿಕೊಂಡು ದಟ್ಟವಾಗಿದ್ದ ಕಾಡಿಗೆ ಕಾಡನ್ನೇ ಲೂಟಿ ಮಾಡಲು ಅವಕಾಶ ಮಾಡಿಕೊಟ್ಟ ಬಗ್ಗೆ ಪಶ್ಚಾತಾಪವಿದ್ದರೆ, ಜಾರಿದ ಕಾರು ಪುನಃ ನಿಮ್ಮನ್ನು ಬಾಲ್ಯಕ್ಕೆ ಜಾರುವಂತೆ ಮಾಡುತ್ತದೆ.

‘ಯಕ್ಷ ಲೋಕ’ದಲ್ಲಿ, ಕವ-ಲಕ್ಕಿ ಆಟ ಮುಂತಾದ ಲೇಖನಗಳು  ಏಕಕಾಲದಲ್ಲಿ ಯಕ್ಷಗಾನ, ಬಾಲ್ಯ ಹಾಗೂ ಅಪ್ಪನನ್ನು ನೆನಪಿಸುತ್ತದೆ. ‘ಮಾಸ್ತರದಿಕ್ಕೋ’ ಎಂಬ ಲೇಖನವಂತೂ ತನ್ನೊಳಗೆ ಎಲ್ಲವನ್ನೂ ಅಡಗಿಸಿಕೊಂಡ ಎನ್ ಸೈಕ್ಲೋಪಿಡಿಯಾ ತರಹ ಕಾಣಿಸುತ್ತದೆ.

ಬಿ. ಎ ಮುಗಿಸಿ ಎರಡು ವರ್ಷದ ನಂತರ ನಾನು ಹಾಗೂ ರಾಜು ಹೆಗಡೆಯವರು ಒಂದೇ ವೇದಿಕೆಯಲ್ಲಿ ಕವನ ಓದಬೇಕಿತ್ತು. ಅಲ್ಲೆಲ್ಲೋ ಪುಸ್ತಕದ ಅಂಗಡಿಗಳ ರಾಶಿಯ ನಡುವೆ ಸಿಕ್ಕವರು “ಏಯ್ ಕೂಸೆ, ನಿನ್ ಕವನ ಕೊಡು, ಹೆಂಗಿದ್ದು ನೋಡನ.. ತಿದ್ದಿ ಕೊಡ್ತಿ.” ಎಂದಿದ್ದರು.

“ತಿದ್ದಿ ಕೊಡಲೆ ಅದೆಂತಾ ಅಸೈನ್ ಮೆಂಟು ಅಂದ್ಕಂಡಿಗಿದ್ರಾ?” ಎನ್ನುತ್ತಲೇ ಕವನ ಕೊಟ್ಟಿದ್ದೆ. “ಎಂತದ್ದೋ ಒಂದ್ ನಮೂನಿ ಇದ್ದಪಾ…ಓದು ನೋಡನ” ಎಂದವರು, ಕವನ ವಾಚನದ ನಂತರ, ‘ಅಲ್ದೇ, ಹಂಗೇ ನಾ ಓದಕಿರೆ ಒಂಚೂರೂ ಚಂದ ಅನ್ಸಿದ್ದಿಲ್ಲೆ, ಆದ್ರೆ ನೀ ಓದಕಿರೆ ಎಷ್ಟ್ ಚಂದಿದ್ದು ಅನ್ನಸ್ತು” ಎನ್ನುತ್ತ ಖುಷಿ ಪಟ್ಟಿದ್ದು ನನಗೀಗಲೂ ಕಣ್ಣ ಮುಂದಿದೆ.

ರಾಜು ಹೆಗಡೆಯವರು ನನ್ನ ಕಾಟವನ್ನೆಲ್ಲ ಸಹಿಸಿಕೊಂಡು ಚಂದವಾಗಿ ಪಾಠ ಮಾಡ್ತಿದ್ದರು ಎನ್ನುವ ಕಾರಣಕ್ಕೋ ಅಥವಾ   ನಾನು ಅವರ ಪಟ್ಟ ಶಿಷ್ಯೆ ಆಗಿದ್ದೆ ಎನ್ನುವ ಕಾರಣಕ್ಕೋ ನಮ್ಮ ನಡುವೆ ಈಗಲೂ ಅದೇ ಹಿಂದಿನ ಆತ್ಮೀಯತೆ ಇದೆ.  ಹೀಗಾಗಿ ಇವತ್ತಿಗೂ ಯಾವುದಾದರೂ ಕಾರ್ಯಕ್ರಮ ಎಂದು ಶಿರಸಿಗೆ ಹೋದರೆ “ಸರ್  ನನ್ನ ರವಿ ಸರ್ ಮನೆಗೆ ಕರ್ಕೊಂಡು ಹೋಗಿ” ಎಂದು ಆಕಸ್ಮಿಕವಾಗಿ ಅಪಘಾತದಲ್ಲಿ ತೀರಿಕೊಂಡ ಮಮತಾ ನಾಯಕರ ಮನೆಗೂ ಹಕ್ಕೊತ್ತಾಯದಿಂದ ಕರೆದುಕೊಂಡು ಹೋಗುವಷ್ಟು ಸಲುಗೆ ಉಳಿದುಕೊಂಡಿದೆ.

ಇಡೀ ಸಂಕಲನ ಓದಿ ಮುಗಿಸುವ ಹೊತ್ತಿಗೆ ಯಾವುದೋ ಒಂದು ಹಳ್ಳಿಯಲ್ಲಿ ಓಡಾಡಿದ ಅನುಭವವಂತೂ ಆಗೇ ಆಗುತ್ತದೆ. ಅದರ ಜೊತೆಗೆ ಹತ್ತಾರು ಜನಾಂಗ, ಹತ್ತಾರು ಭಾಷೆಗಳನ್ನು ಒಳಗೊಂಡ ಉತ್ತರ ಕನ್ನಡದೊಳಗಿನ  ಒಂದು ಸಣ್ಣ ಪ್ರದೇಶದೊಳಗೆ ಒಂದು ಚಿಕ್ಕ ಸುತ್ತನ್ನು ಹಾಕಿಕೊಂಡು ಬಂದ ಅದ್ಭುತ ಅನುಭವವನ್ನು ನೀಡುತ್ತದೆ.

“ಇತ್ ಇತ್ಲಾಗೆ ಎಂತದ್ದೂ ಬರಿಯಲೇ ಮನಸ್ಸು ಬತ್ತಿಲ್ಲೆ ಮಾರಾಯ್ತಿ…” ಎನ್ನುತ್ತ ಒಂದು ರೀತಿಯ ನಿರಾಶೆಯ ಧ್ವನಿಯಲ್ಲಿ ಹೇಳುವ ರಾಜು ಹೆಗಡೆಯವರು ತಮ್ಮೊಳಗೆ ಸುಮ್ಮನೆ ಹೊದ್ದು ಮಲಗಿರುವ ಈ ಹರಟೆಮಲ್ಲನನ್ನು ಪ್ರಯತ್ನ ಪೂರ್ವಕವಾಗಿಯಾದರೂ ತಟ್ಟಿ ತಟ್ಟಿ ಎಬ್ಬಿಸಿದರೆ ಮತ್ತೂ ಎಂತೆಂತಹ ಅನುಭವದ ಕಥಾನಕಗಳು ನಮ್ಮಪಾಲಿಗೆ ಸಿಗಬಹುದು  ಎಂಬ ಕುತೂಹಲದಲ್ಲಿ ನಾನಿದ್ದೇನೆ.

34 Responses

 1. Akkimangala manjunatha says:

  ಪುಸ್ತಕವನ್ನು ಚೆನ್ನಾಗಿ ಪರಿಚಯಿಸಿದ್ದೀರಿ

 2. Very interesting incidents.. and the style of narration is also very attractive…

  • Shreedevi keremane says:

   ಥ್ಯಾಂಕ್ಯೂ ಮೇಡಂ. ನಿಮ್ಮಂತಹ ಹಿರಿಯರ ಆಶಿರ್ವಾದ ಬೇಕು

 3. Sreedhar says:

  ಕಳೆದು ಹೋದ ನನ್ನ ಬಾಲ್ಯ್ಮರುಕಳಿಸುವಂತಾಗಿದೆ.

 4. ಧನಪಾಲ ನೆಲವಾಗಿಲು says:

  ಎಂದಿನಂತೆ ನಿಮ್ಮ ಪುಸ್ತಕ ವಿಶ್ಲೇಷಣೆ ಆಪ್ತವಾಗಿದೆ. ಇಷ್ಟವಾಯಿತು ಮೇಡಮ್‌.

 5. ಸಂತೋಷ . ಡಿ says:

  Amazing, ತುಂಬಾ ಆತ್ಮೀಯ ಬರಹಗಳು. ಶ್ರೀದೇವಿಯವರ ಪರಿಚಯ ಮಾಡುವ ಶೈಲಿಯಂತೂ ಅದ್ಭುತ ಇಬ್ಬರಿಗೂ ಧನ್ಯವಾದಗಳು

 6. Raju hegade says:

  ಧನ್ಯವಾದಗಳು

 7. ಋತಊಷ್ಮ says:

  ಈ ಅಂಕಣ ಬಹಳ ಖುಷಿ ಕೊಡ್ತು. ಸಂಕಲನದ ಪ್ರಸಂಗಗಳ ವಿವರಣೆ ಓದ್ತಾ ಹೋದ ಹಾಗೆ ತಮ್ಮ ಗುರುಗಳ ಜೊತೆಗಿನ ಬಾಂಧವ್ಯವನ್ನು ಹೇಳುವಾಗಿನ ಅನುಭವ ರೋಚಕವಾಗಿದೆ ಮ್ಯಾಮ್. ಬಹಳ ಖುಷಿಯಾಯ್ತು.

  • Shreedevi keremane says:

   ನನ್ನ ಅದೃಷ್ಟ. ನನ್ ನ ಗುರು ವೃಂದ ಹಾಗಿದೆ

 8. Lalita N Patil says:

  ಈಜು ಹೊಡೆದಾಗ ಮೈ ಮನ ಹಗರಾಗುವಂತೆ ನಿಮ್ಮಲೇಖನ ಓದಿದಾಗ ಮನಸ್ಸು ಬಾಲ್ಯದ ದಿನಗಳತ್ಯಲೇ ಜಾರಿ ಚಿಗುರಿಸುತ್ತದೆ ನೆನಪುಗಳನ್ನು ಒಳ್ಳೆಯ ಲೇಖನ ಮತ್ತೆ ಇಂತಹ ಲೇಖನ ಓದುವ ಅವಕಾಶ ಸಿಗಲಿ

 9. Raju hegade says:

  ವಿದ್ಯಾರ್ಥಿಗಳು ಹೀಗೆ ಬೆಳೆದದ್ದನ್ನು ನೋಡುವುದು ಖುಷಿ….ಇದೊಂದು ನಮನಿ ಅಜ್ಜನ ಪ್ರತಿಕ್ರಿಯೆ ಆಯ್ತು!

 10. ದೊಡ್ಡಕಲ್ಲಹಳ್ಳಿ ನಾರಾಯಣಪ್ಪ says:

  ಬದುಕಿಗೆ ಹತ್ತಿರವಾಗುವ ಸರಳ ನಿರೂಪಣೆಯ ಮೂಲಕ ಸಾಹಿತ್ಯ ಕೃತಿಗಳನ್ನು ಓದುವಂತೆ ಶ್ರೀ ದೇವಿ ಮೇಡಂ ಅವರ ಬರಹ ಒತ್ತಾಯಿಸುತ್ತದೆ .

  • Shreedevi keremane says:

   ಈ ಅಂಕಣದ ಉದ್ದೇಶ ಇಷ್ಟೇ. ಓದುವ ಆಸಕ್ತಿ ಮೂಡಿಸುವುದು

 11. ಹರಿನಾಥ ಬಾಬು says:

  ಎಂದಿನ ತಮ್ಮ ಲಹರಿ ಇಲ್ಲೂ ಮುಂದುವರಿದಿದೆ
  ರಾಜು ರವರ ಹಳವಂಡದ ಜೊತೆ ಜೊತೆಗೆ ತಮ್ಮದೂ ಒಂದಿಷ್ಟು ಸೇರಿಸಿ ಒಗ್ಗರಣೆ ಹಾಕಿದ್ದು ಘಮ್ ಎಂತದೆ!

  • Shreedevi keremane says:

   ಜೀರಿಗೆ, ಇಂಗು ಹದವಾಗಿದ್ದರೆ ಘಮ್ ಎನ್ನ ಲೇ ಬೇಕಲ್ಲ

 12. ರಾಶಿ ಚೋಲೋ ಬರದ್ದೆ. ನಂಗಿವತ್ತು ಓದಕರೆ ಇದು ಪುಸ್ತಕ ವಿಮರ್ಶೆ ಅನಿಸಿದ್ದಿಲ್ಲೆ. ನೀವೇ ನನ್ನ ಮುಂದೆ ಕುಂತ್ಕಂಡು ನೆನಪುಗಳನ್ನು ಹಂಚ್ಕಂಡಾಂಗಿತ್ತು. ಕಡೀಗ್ ಗೊತ್ತಾತು ಓಹೋ….ಇದು ಪುಸ್ತಕ ವಿಮರ್ಶೆ ಹೇಳಿ. .

 13. Prathibha kudthadka says:

  ಬಹಳ ಬಹಳ ಬಹಳ ಇಷ್ಟವಾದ ಬರಹ.ಮಾಮೂಲಿಗಿಂತ ವಿಭಿನ್ನ ಶೈಲಿಯ ಪ್ರಸ್ತುತಿ ಅನ್ನಿಸಿತು…

 14. Sudha Hegde says:

  ಕಾಲೇಜು ದಿನಗಳು ಕಣ್ಮುಂದೆ ಸುಳಿದಾಡಲು ಕಾರಣವಾಯ್ತು..ಬಾಲ್ಯಕ್ಕೆ ಮರಳಿಬಿಟ್ಟೆ.ಹವ್ಯಕ ಭಾಷೆ ಬಹಳ ಚೆನ್ನಾಗಿ ಮೂಡಿ ಬಂದಿದೆ.

 15. ಪುಷ್ಪಾ ನಾಯ್ಕ ಅಂಕೋಲ says:

  ನನ್ನ ಕಾಲೇಜು, ನನ್ನ ಊರು,ನನ್ನ ಮೆಚ್ಚಿನ ಉಪನ್ಯಾಸಕರು ಎಲ್ಲರೂ ನೆನಪಿಗೆ ತಂದ ಅಂಕಣ ಇಷ್ಟವಾಯ್ತು ಧನ್ಯವಾದಗಳು ನಿಮಗೆ

 16. Sujatha lakshmipura says:

  ಇದು ಗಂಗಾವಳಿಯಲ್ಲಿ ಈಜಿದಂತೆ ಶ್ರಿ ಅವರಿಗಾದ ಅನುಭವವಾದರೆ,ನನಗೆ ನಮ್ಮ ಬಾಲ್ಯ,ಕಾಲೇಜಿನ ದಿನಗಳಿಗೆ ಜಾರಿ,ಅಂದಿನ ದಿನಗಳ ನೆನಪಿನಲ್ಲಿ ಸುತ್ತಾಡಿದಂತಾಯಿತು..ರಾಜು ಹೆಗಡೆ ಅವರ ಹಳವಂಡಗಳ ಪರಿಚಯದ ನೆಪದಲ್ಲಿ ತಮ್ಮ ಬಾಲ್ಯ ಮತ್ತು ಕಾಲೆಜುದಿನಗಳು,ಗುರುಗಳು ಹಾಗೂ ಹೊಳೆ ದಾಟುವ ದೋಣಿ ಪಯಣ ಹೀಗೆ ತಮ್ಮದೇ ಹಳವಂಡಗಳನ್ನು ಆತ್ಮೀಯವಾಗಿ ಹೇಳುತ್ತಲೇ ನಮ್ಮ ಹಳವಂಡಗಳಲ್ಲಿ ಕಾಲುಜಾರುವಂತೆ ಮಾಡಿದ ಶ್ರೀಅವರ ಲೇಖನ ಪೆಪ್ಪರ್ಮೆಂಟೆ ಚಪ್ಪರಿಸಿದಂತೆ ಇನ್ನೂ ಸಿಹಿ ಹಾಗೇ ಉಳಿದಿದೆ. ಶ್ರೀದೇವಿ ಯವರೆ ನಿಮ್ಮ ಶೈಲಿ, ಅದರ ವೇಗ,ಆತ್ಮೀಯತೆ ಬಹಳ ಇಷ್ಟವಾಗುತ್ತದೆ.
  ಗುರುವಿನ ಕೃತಿ ಪರಿಚಯದಲ್ಲಿ ಶಿಷ್ಯ ಬೆಳಗುತ್ತಾ,ಗುರುವಿನ ಕೃತಿಯನ್ನೂ ಬೆಳಗಿಸಿ,ದೀಪದಿಂದ ದೀಪ ಹಚ್ಚುವ ಬಗೆ ಸೊಗಸು ಬಿಡಿ….

 17. Jessy P V says:

  ಮೇಡಂ, ನಿಮ್ಮ ಪುಸ್ತಕ ಪರಿಚಯ ಓದಿದೆ. ಪುಸ್ತಕ ಪರಿಚಯ ಓದುವಾಗ ನಮಗೆ ಸಾಮಾನ್ಯವಾಗಿ ಬೋರ್ ಹೊಡೆಯುತ್ತದೆ. ಆದರೆ ನಿಮ್ಮ style of presentation ಬಹಳ ಚೆನ್ನಾಗಿದೆ. ಓದಿ ಖುಷಿಯಾಯ್ತು.
  ಜೆಸ್ಸಿ. ಪಿ.ವಿ

Leave a Reply

%d bloggers like this: