‘ಪೋಸ್ಟ್ ಕಾರ್ಡ್’ ರಿಪಬ್ಲಿಕ್ಕು ಮತ್ತು ಸುದ್ದಿಸೂರು

ಈ ಪುರಾಣವನ್ನು ನಾನು ಪೂರ್ವ ಯುರೋಪಿನ ಮಸೆಡೋನಿಯಾದ ವಿಲ್ಸ್ ಪಟ್ಟಣದಿಂದ ಆರಂಭಿಸಬೇಕು.

2016ರಲ್ಲಿ ಅಮೆರಿಕದ ಅಧ್ಯಕ್ಷೀಯ ಚುನಾವಣೆ ಪ್ರಚಾರದ ಭರಾಟೆ ಜೋರಾಗಿತ್ತು. ಆಗ, ಅಭ್ಯರ್ಥಿ ಟ್ರಂಪ್ ಪರವಾಗಿ ಒಂದಷ್ಟು ರಸವತ್ತಾದ ಸುಳ್ಳುಸುಳ್ಳೇಸಂಗತಿಗಳು ಫೇಸ್ ಬುಕ್ಕು, ಟ್ವಿಟ್ಟರ್ ಗಳಲ್ಲಿ ವೈರಲ್ ಆಗಿ ಪ್ರಚಾರ ಪಡೆಯತೊಗಿದವು. ಅದೂ ಎಂತಹ ರಸವತ್ತಾದ ತಲೆಬರಹದ ಸುದ್ದಿಗಳೆಂದರೆ: “ ಟ್ರಂಪ್ಅಮೆರಿಕ ಅಧ್ಯಕ್ಷರಾಗಲು ಪೋಪ್ ಫ್ರಾನ್ಸಿಸ್ ಒಪ್ಪಿಗೆ”, “ ಹಿಲರಿ ಕ್ಲಿಂಟನ್ ಟ್ರಂಪ್ ಪರ ಏನು ಹೇಳಿದ್ರು ಗೊತ್ತಾ?!”, “ಹಿಲರಿ ಇಮೇಲ್ ಲೀಕ್ ಪತ್ತೆ ಮಾಡಿದ ಎಫ್ ಬಿ ಐ ಗೂಢಚರನ ಕಥೆ ಏನಾಯ್ತು!”..

ಈ ರೀತಿ ಮುಖ್ಯ ವಾಹಿನಿಗಳಲ್ಲಿ ಇಲ್ಲದ ಸುದ್ದಿಗಳು ಎಲ್ಲಿಂದ ಈ ಪ್ರಮಾಣದಲ್ಲಿ ಹರಿದುಬರುತ್ತಿವೆ ಎಂದು ಹುಡುಕಹೊರಟವರಿಗೆ ಅಚ್ಚರಿ ಕಾದಿತ್ತು.

ಅಮೆರಿಕಕ್ಕೆ ಯಾವುದೇ ರೀತಿಯಲ್ಲಿ ಸಂಬಂಧವಿರದ ಮಸೆಡೋನಿಯಾದ ವಿಲ್ಸ್ ಪಟ್ಟಣದಿಂದ ಸುಮಾರು 140ರಷ್ಟು ಸುದ್ದಿ ವೆಬ್ ಸೈಟ್ ಗಳು ಕಾರ್ಯಾಚರಿಸುತ್ತಿದ್ದು, ಅವೆಲ್ಲವೂ ಈ ರೀತಿಯ ರೋಚಕ ಸುದ್ದಿಗಳ ರಸವೂಡುವುದರಲ್ಲಿ ನಿರತವಾಗಿದ್ದವು! ಹೀಗೇಕೆ ಎಂದು ಪತ್ತೆ ಮಾಡ ಹೊರಟಾಗ ಸಿಕ್ಕಿದ್ದು ಮತ್ತೊಂದು “ರೋಚಕ ಸುದ್ದಿ.” ಈ ರೀತಿ ವೆಬ್ ಸೈಟ್ ಗಳನ್ನು ಮಾಡಿಕೊಂಡು ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದ ಪಡ್ಡೆ ಹುಡುಗರು ಲಕ್ಷಗಟ್ಟಲೆ ಹಣ ಸಂಪಾದಿಸುತ್ತಿದ್ದರು!

“ಫೇಸ್ ಬುಕ್ ಆಡ್ಸ್”  ಮತ್ತು “ಗೂಗಲ್ ಆಡ್ ಸೆನ್ಸ್” ನಂತಹ ಕೆಲವು ಉತ್ಪನ್ನಗಳು, ವೆಬ್ ಸೈಟ್ ಗಳ ಮಾಲಕರ ಜೊತೆ ಒಪ್ಪಂದ ಮಾಡಿಕೊಂಡು,  ಆ ವೆಬ್ ಸೈಟಿನಲ್ಲಿ ಪ್ರದರ್ಶಿತವಾದ ಜಾಹೀರಾತನ್ನು ಯಾರಾದರೂ ಕ್ಲಿಕ್ ಮಾಡಿದರೆ, ಆ ವೆಬ್ ಸೈಟ್ ಮಾಲಕರಿಗೆ ಕ್ಲಿಕ್ಕೊಂದರ ಇಂತಿಷ್ಟು ಎಂದು ಹಣ ಪಾವತಿ ಮಾಡುತ್ತವೆ. ಇಂತಹ ಯೋಜನೆಯಲ್ಲಿ ಪಾಲ್ಗೊಂಡು ಕಾಸು ಮಾಡಬೇಕಾದರೆ, ವೆಬ್ ಸೈಟ್ ಮಾಲಕರು “ಬಹಳ ಜನ ನೋಡುವ, ಷೇರ್ ಮಾಡುವ” ರಸಸುದ್ದಿಗಳನ್ನೇ ಪ್ರಕಟಿಸಬೇಕಾಗುತ್ತದೆ.

ಇದಕ್ಕೆ ಪೂರಕವಾಗಿ ಟ್ವಿಟ್ಟರ್,  ಫೇಸ್ ಬುಕ್ಕಿನಂತಹ ಸೋಷಿಯಲ್ ಮೀಡಿಯಾಗಳು ಬಹಿರಂಗವಾಗಿ ತಮ್ಮದು ನ್ಯೂಟ್ರಲ್ ಆದ ಅಂಗಣ ಎಂದೇ ಹೇಳಿಕೊಳ್ಳುತ್ತಿವೆಯಾದರೂ, ವಾಸ್ತವದಲ್ಲಿ ಅವರ “ಅಲ್ಗಾರಿಥಂ”ಹಾಗಿಲ್ಲ. ಜನರ ಕುತೂಹಲ ಕೆರಳಿಸುವ, ರಸವತ್ತಾದ ಸಂಗತಿಗಳೇ ಹೆಚ್ಚು ಹೆಚ್ಚು ಜನಕ್ಕೆ ತಲುಪುವಂತೆ ಅವು  ವ್ಯವಸ್ಥೆ ಮಾಡಿಕೊಂಡಿವೆ.

ಹಾಗಾಗಿ ಹೆಚ್ಚು ಪ್ರಚಾರಕ್ಕೆ ಸಿಕ್ಕ ಸಂಗತಿ “ವೈರಲ್” ಆಗುವಲ್ಲಿ, “ಟ್ರೆಂಡಿಂಗ್” ಆಗುವಲ್ಲಿ ಆ ಫ್ಲಾಟ್ ಫಾರಂಗಳ ತಾಂತ್ರಿಕ ಕೈವಾಡವೂ ಇರುತ್ತದೆ. ಈವತ್ತು ರಾಜಕೀಯ ಪಕ್ಷಗಳು ಮುಖಂಡರು “ಬಾಟ್”ಗಳನ್ನು ಬಳಸಿಕೊಂಡು “ಟ್ರೆಂಡಿಂಗ್” ಆಗುವುದನ್ನು ಈ ಕೋನದಿಂದ ನೋಡಿದರೆ, ಒಳಗಿನ ಸಂಗತಿ ಏನೆಂದು ಅರ್ಥ ಆಗುತ್ತದೆ.

ಟ್ರಂಪ್ ಚುನಾವಣೆಯ ಸಂದರ್ಭದಲ್ಲಿ ಈ “ವೈರಲ್”ಸುದ್ದಿಗಳ ಬಗ್ಗೆ ಪ್ರಿನ್ಸ್ಟನ್, ಡರ್ಟ್ ಮೌತ್ ಮತ್ತು ಎಕ್ಸೆಟರ್ ವಿವಿಗಳು ನಡೆಸಿದ ಅಧ್ಯಯನದಲ್ಲಿ ಕಂಡುಬಂದ ಸಂಗತಿ ಎಂದರೆ, ಅಮೆರಿಕದ ಸೋಷಿಯಲ್ ಮೀಡಿಯಾ ಬಳಕೆದಾರರಲ್ಲಿ ನೂರಕ್ಕೆ 25 ಮಂದಿ ಚುನಾವಣೆಯ ಆರು ವಾರಗಳ ಅವಧಿಯಲ್ಲಿ ಆ ವೈರಲ್ ಸುದ್ದಿಗಳನ್ನು ನೋಡುತ್ತಿದ್ದರು, ಅವರಲ್ಲಿ 10%ಮಂದಿ ಆ ಸುದ್ದಿಗಳಿಗೆ ನೀಡಲಾಗಿದ್ದ 60% ಮರುಭೇಟಿಗಳಿಗೆ ಕಾರಣ ಆಗಿದ್ದರು!

ಟ್ರಂಪ್ ಚುನಾವಣೆಯ ಬಳಿಕ ಈ ಬಗ್ಗೆ ಅಮೆರಿಕದಲ್ಲಿ ಗದ್ದಲ ಎದ್ದಾಗ, ಮೇಲು ಪದರದಲ್ಲಿ ಫೇಸ್ ಬುಕ್, ಟ್ವಿಟ್ಟರ್ ಮ್ಯಾನೇಜ್ಮೆಂಟ್ ಗಳು ಇಂತಹ ಸುಳ್ಳುಸುದ್ದಿಗಳು ಪ್ರಕಟವಾಗದಂತೆ ತಡೆಯುತ್ತೇವೆ ಎಂದು ಹೇಳಿದವಾದರೂ, ಅದು ಪ್ರಾಯೋಗಿಕವಾಗಿ ಅಸಾಧ್ಯ ಎಂದು ಒಳಗಿನ ಮೂಲಗಳೇ ಹೇಳುತ್ತವೆ.

ಈ ಸೋಷಿಯಲ್ ಮೀಡಿಯಾಗಳಿಗೆ “ಯಾಂತ್ರಿಕ” ನಿಯಂತ್ರಣ ಇರುತ್ತದೆ. ಆದರೆ, ಸುಳ್ಳು ಸುದ್ದಿಗಳನ್ನು ಮತ್ತು ರಾಜಕೀಯ ಪ್ರೇರಿತ ಸುದ್ದಿಗಳನ್ನು ಸಂಪೂರ್ಣ ನಿಯಂತ್ರಿಸಲು “ಯಾಂತ್ರಿಕವಾಗಿ” ಸಾಧ್ಯ ಇಲ್ಲ. ಯಾಕೆಂದರೆ, ಅಂತಹದೊಂದು ಅಲ್ಗಾರಿಥಂ ಅಭಿವ್ರದ್ಧಿ ಮಾಡಲು, ಅಷ್ಟೇ ಸ್ಪಷ್ಟವಾದ “ಲಾಜಿಕ್” ಅಗತ್ಯ ಇರುತ್ತದೆ.

ತಳಮಟ್ಟದಲ್ಲಿ ಪರಿಸ್ಥಿತಿ ಹೇಗಿದೆ ಎಂದರೆ, ಭಾರತದಲ್ಲಿರುವಂತೆ ಅಮೆರಿಕದಲ್ಲಿ ಕೂಡ, ನಿಷ್ಪಕ್ಷ-ವ್ರತ್ತಿಪರ ಎಂದು ಹೇಳಿಕೊಳ್ಳುವ ಪ್ರಿಂಟ್ ಮತ್ತು ಟೆಲಿವಿಷನ್ ಸುದ್ದಿಮಾಧ್ಯಮಗಳೂ ರಾಜಕೀಯ ಪಕ್ಷಗಳ ಪರ-ವಿರುದ್ಧ ಕೆಲಸ ಮಾಡಲಾರಂಭಿಸಿವೆಯಂತೆ. ಹಾಗಾಗಿ ಯಾರನ್ನು ನಂಬುವುದು, ಯಾರನ್ನು ಬಿಡುವುದು?!!

ಭಾರತದೊಳಗೆ  ಏನು ಕಥೆ?

ಭಾರತದಲ್ಲಿ 2014 ಚುನಾವಣೆಯ ವೇಳೆ “ತಂತ್ರಜ್ನಾನದ ಬಳಕೆ” ಎಂಬ ಹೆಸರಿನಲ್ಲಿ ಪಾಸಿಟಿವ್ ಆಗಿಯೇ ಆರಂಭಗೊಂಡ ಸೋಷಿಯಲ್ ಮೀಡಿಯಾ ರಾಜಕೀಯ ಈವತ್ತು ಕೆಸರುರಾಡಿಯ ಗುಂಡಿಯಾಗಿ ಬದಲಾಗಿದೆ. ಅದಕ್ಕೆ ಪೂರಕವಾದ ವಾತಾವರಣವನ್ನೂ ರಾಜಕೀಯವಾಗಿಯೇ ಸಿದ್ಧಪಡಿಸಿಕೊಳ್ಳಲಾಗಿದೆ.

ಭಾರತದಲ್ಲಿ ಇಂದು ದಿನವೊಂದರ  ಜಿ.ಬಿ.ಗಟ್ಟಲೆ ಡೇಟಾ ಉಚಿತವಾಗಿ ಕೊಡುವ ಟೆಲಿಕಾಂ ಸೇವಾದಾತರನ್ನು ಸ್ರಷ್ಟಿಸಿಟ್ಟುಕೊಳ್ಳಲಾಗಿದೆ. ದೇಶದೊಳಗೆ  100 ಕೋಟಿ ವಾಟ್ಸಾಪ್ ಬಳಕೆದಾರರಿದ್ದು, ಅವರಲ್ಲಿ 16 ಕೋಟಿ ಅಕೌಂಟ್ ಗಳು ಪ್ರತಿದಿನ ಸಕ್ರಿಯವಾಗಿವೆ.

14.8 ಕೋಟಿ ಫೇಸ್ ಬುಕ್ ಬಳಕೆದಾರರಿದ್ದಾರೆ, 2.2 ಕೋಟಿ ಟ್ವಿಟ್ಟರ್ ಬಳಕೆದಾರರಿದ್ದಾರೆ. ಇಂತಹದೊಂದು ಹುಲುಸಾದ ಸುದ್ದಿ ಹರಡುವ ಫ್ಲಾಟ್ ಫಾರಂನ್ನು ಯಾರು ತಾನೇ ಬಿಟ್ಟುಕೊಟ್ಟಾರು? ಮೊನ್ನೆ ಪ್ರಧಾನಮಂತ್ರಿಗಳು ಪಕ್ಷದ ಸೀಟು ಸಿಗಲು ಕನಿಷ್ಟ ಮೂರು ಲಕ್ಷ ಫಾಲೋವರ್ಸ್ ಹೊಂದಿರಬೇಕೆಂದು ಹೇಳಿದ್ದನ್ನು, ಕರ್ನಾಟಕದಲ್ಲಿ ಚುನಾವಣೆ ವೇಳೆ ಸಂಘಟನೆಗಾಗಿ ಬೂತ್ ಮಟ್ಟದಲ್ಲಿ 50,000 ವಾಟ್ಸಾಪ್ ಗ್ರೂಪ್ ಗಳನ್ನು ತೆರೆಯಲಾಗುವುದೆಂದು ಆ ಪಕ್ಷದ ಐಟಿ ಸೆಲ್ ಮುಖ್ಯಸ್ಥರು ಹೇಳಿದ್ದನ್ನು ಈ ನಿಟ್ಟಿನಲ್ಲಿ ಗಮನಿಸಬೇಕು.

ಸುಳ್ಳು ಸುದ್ದಿಗಳು, ಇನ್ನೊಬ್ಬರನ್ನು ಗೇಲಿ ಮಾಡುವ- ಟ್ರಾಲ್ ಮಾಡುವ ಮೆಮೆಗಳು, ಚಿತ್ರಗಳನ್ನು ಫೋಟೋಶಾಪ್ ಮಾಡುವ ವಿಕ್ರತಿಗಳು, ಟ್ರೆಂಡ್ ಹುಟ್ಟಿಸಲು ಕೂಲಿ ಪಡೆಯುವ  ಕಾಲಾಳುಗಳು… ಹೀಗೆ ದೇಶದ ಪ್ರಮುಖ ರಾಜಕೀಯ ಪಕ್ಷಗಳೆರಡೂ ಡಿಜಿಟಲ್ ಕದನಕ್ಕೆ ಸಜ್ಜಾಗಿವೆ. ಇವೆಲ್ಲ ಒಟ್ಟಾಗಿ ಎಬ್ಬಿಸುವ ಕಳುಕು ಸಾಲದೆಂಬಂತೆ, ರಾಜಕೀಯ ನೇತಾರರ ದುಡ್ಡಿಗೆ ನೇತಾಡಿಕೊಂಡು ನಡೆಯುವ ಬಹುತೇಕ ಸುದ್ದಿ ಚಾನೆಲ್ಲುಗಳು, ಮೆಲ್ಲಲು ಸಿಕ್ಕಲ್ಲೆಲ್ಲ ಮೆಲ್ಲುವಷ್ಟು ಮೆಂದು ತಾವು ನಿಷ್ಪಕ್ಷ ಎಂದು ಸೋಗುಹಾಕುವ ಮುದ್ರಿತ ಮಾಧ್ಯಮಗಳು.. ಎಲ್ಲವೂ ಚುನಾವಣೆಯ ಕಾಲಕ್ಕೆ ಸಿಕ್ಕಷ್ಟು ಗೋರಿಕೊಳ್ಳುವ, ತಮಗೆ ಬೇಕಾದವರ ತೊಟ್ಟಿಲು ಏರಿಸಿ ಹಿಡಿಯುವ ಕೆಲಸವನ್ನು ಭರದಿಂದ ನಡೆಸಿದ್ದಾರೆಂಬುದು ಚುನಾವಣೆಯ ಹೊಸ್ತಿಲಿನಲ್ಲಿರುವ ಕರ್ನಾಟಕದಲ್ಲಿ ಸ್ಪಷ್ಟವಾಗಿ ಗೋಚರಕ್ಕೆ ಬರುತ್ತಿದೆ.

ಒಂದೇ ನೋಟಕ್ಕೆ ಸುಳ್ಳೆಂದು ಗ್ರಹಿಸಬಹುದಾದ ಸುದ್ದಿಯನ್ನೂ ಕೂಡ ಪಕ್ಷ ನಿಷ್ಟೆಯ ಹೆಸರಿನಲ್ಲಿ ಹಂಚುವ, ತೇಲಿಬಿಡುವ ಸದ್ಗ್ರಹಸ್ಥರು ಈ ಇಡಿಯ ಪಾಪಕೂಪದ ಕರಿಕುರಿಗಳು! ಇಂತಹ ಕುರಿಗಳನ್ನೇ ಆಧರಿಸಿಕೊಂಡು ಹೊರಡುವ “ನಿಮಗೆ ಗೊತ್ತಾ?” ಮಾದರಿಯ ರಸಸುದ್ದಿಗಳು ಕಡೆಗೆ ಬಂದು ಕೊಚ್ಚುವುದು ಇವರು ಕುಳಿತಿರುವ ಕೊಂಬೆಯ ಬುಡವನ್ನೇ ಎಂಬುದು ಸಾರ್ವಜನಿಕವಾಗಿ ಅರ್ಥ ಆಗುವ ತನಕ ಇಂತಹದೊಂದು “ಅತಿ”ಗೆ ಅಂತ್ಯ ಇಲ್ಲ.

ಅಮೆರಿಕ ಚುನಾವಣೆಯಲ್ಲಾದಂತೆ “ಪೇ ಪರ್ ಕ್ಲಿಕ್” ಕಾಸು ಮಾಡುವ ದಂಧೆ ಇಲ್ಲಿ (ಚುನಾವಣಾ ಜ್ವರ ಪೀಡಿತ ಕರ್ನಾಟಕದಲ್ಲಿ) ಜೋರಾಗಿಲ್ಲ, ಯಾಕೆಂದರೆ ಇಲ್ಲಿನ ಸಂಗತಿಗಳು  ಪ್ರಾದೇಶಿಕವಾದವು, ಪಾವತಿಗಳೂ ರಾಜಕೀಯವಾದವು. ಆದರೆ 2019ರ ಸಂಸತ್ತಿನ ಚುನಾವಣೆಗಳ ವೇಳೆಗೆ ಪರಿಸ್ಥಿತಿ ಹೀಗೇ ಇದ್ದೀತೆಂದು ಹೇಳಲಾಗುವುದಿಲ್ಲ. ಇದು ನಿಯಂತ್ರಣ ತಪ್ಪಿದರೆ ಭಾರತದ ಸಂದರ್ಭದಲ್ಲಿ ಬೀದಿಕಲಹಗಳಿಗೆ ಹಾದಿ ಮಾಡಿಕೊಟ್ಟರೂ ಅಚ್ಚರಿ ಇಲ್ಲ!

 

ಹೆಚ್ಚುವರಿ ಓದಿಗಾಗಿ:

೧. ಸುಳ್ಳು ಸುದ್ದಿ ಬಗ್ಗೆ ಬಿಬಿಸಿ ಸಮಗ್ರ ವರದಿ: http://www.bbc.com/news/blogs- trending-42724320

೨. ಸುಳ್ಳು ಸುದ್ದಿಯನ್ನು ಮೊದಲಬಾರಿಗೆ ಪತ್ತೆ ಹಚ್ಚಿದ ಬಝ್ ಫೀಡ್ ಸಂಪಾದಕ ಕ್ರೆಗ್ ಸಿಲ್ವರ್ ಮ್ಯಾನ್ ವರದಿ: https://www.buzzfeed.com/ craigsilverman/how-macedonia- became-a-global-hub-for-pro- trump-misinfo?utm_term=. umDPPnLqk#.at7BBk0pG

೩. ಸುಳ್ಳುಸುದ್ದಿ ಹಬ್ಬಿಸಿ ದುಡ್ಡು ಮಾಡುವವರ ಬಗ್ಗೆ ವಾಷಿಂಗ್ಟನ್ ಪೋಸ್ಟ್ ವರದಿ: https://www.washingtonpost. com/news/the-intersect/wp/ 2016/11/18/this-is-how-the- internets-fake-news-writers- make-money/?utm_term=. 89122ec4bb9d

Leave a Reply