ಮತ್ತೆ ಕಾಡು ಹಸುರಿಗೆ..

ನಾಗರಾಜ. ಎಂ. ಹುಡೇದ 

ಗಣೇಶ ಪಿ ನಾಡೋರ ಮಕ್ಕಳ ಸಾಹಿತ್ಯದಲ್ಲಿ ಈಗಾಗಲೇ ವಿಪುಲ ಕೃಷಿ ಮಾಡಿದ್ದಾರೆ. ಕವಿ ಗಣೇಶ ನಾಡೋರ ಅವರ ಜೀವನವೇ ಒಂದು ಹೋರಾಟದ ಕಾವ್ಯದಂತಿದೆ. ತಳಸಮುದಾಯದ ಶೋಷಣೆಯ ಎಲ್ಲ ಸಂಕಟಗಳನ್ನುಂಡವರು. ಉಷ್ಣತೆಯಲ್ಲಿ ಬೆಂದು ಮೆದುವಾಗಿ ಮತ್ತೆ ಕಠಿಣತೆ ಪಡೆದುಕೊಳ್ಳುವ ಕಬ್ಬಿಣದಂತಿದೆ ಈ ಕವಿಯ ಬದುಕು.

“ಮತ್ತೆ ಕಾಡು ಹಸುರಿಗೆ” ಸಂಕಲನದಲ್ಲಿ 32 ಕವನಗಳಿವೆ. ಕವಿ ಗಣೇಶ ಕೇವಲ ಸೌಂದರ್ಯವನ್ನು ಸ್ಮರಿಸುತ್ತ ಕುಳಿತುಕೊಳ್ಳುವುದಿಲ್ಲ. ಬದಲಾಗಿ ಶೋಷಿತರ, ಧಮನಿತರ, ಬಡವರ ನೈಜಘಟನೆಗಳನ್ನು ತಮ್ಮ ಕಾವ್ಯದ ವಸ್ತುವಾಗಿರಿಸಿಕೊಂಡಿದ್ದಾರೆ.

ಅವರ ಎಲ್ಲ ಕವನಗಳಲ್ಲೂ ಬಂಡಾಯದ ಬಾವುಟ ಹಾರುತ್ತದೆ. `ಖಡ್ಗವಾಗಲಿ ಕಾವ್ಯ’ ಎಂಬ ಧ್ಯೇಯವಾಕ್ಯವನ್ನು ಅನುಸರಿಸಿದ್ದಾರೆ. ಇದು ಕವಿಹೃದಯದ ಅ:ತಕರಣವನ್ನು, ಸುಸ್ಥಿತಿಯ ಸಮಾಜಕ್ಕಾಗಿ ಕವಿ ಹಂಬಲಿಸುವುದನ್ನು ತೋರ್ಪಡಿಸುತ್ತವೆ.

ಒಂದು ನೆಲೆಯಿಲ್ಲದ ತಂದೆ-ತಾಯಿಗಳ ಪರದಾಟ, ಮದ್ಯದ ದಾಸನಾದ ತಂದೆ, ಹೆಂಡತಿ ಮಕ್ಕಳ ಗೋಳಾಟವನ್ನು ಮನಮಿಡಿಯುವಂತೆ ” ಹೊಸ ಚಪ್ಪಲ್ಲು” ಎಂಬ ಕವನದಲ್ಲಿ ಕಟ್ಟಿಕೊಟ್ಟಿದ್ದಾರೆ. ಅದರ ಕೆಲ ಸಾಲುಗಳು ಹಿಗಿವೆ:

“ಅಪ್ಪಂಗೆ ಹೇಳ್ದೆ ಚಪ್ಪಲ್ಲು
ಕೊಡಿಸು ಅಂತ
ಹುಂ ಅಂದು ಅವ್ವನತ್ರ
ದುಡ್ಡು ಇಸ್ಕಂಡ
ಕುಡಿದು ಬಂದು ಬಿದ್ಕಂಡ ”

ವರ್ಣ ಬೇಧ ನೀತಿಯ ವಿರುದ್ಧ ಸಿಡಿದು, ಕಪ್ಪು ವರ್ಣದ ಶ್ರೇಷ್ಠತೆಯನ್ನು ತಮ್ಮ ಕವನದಲ್ಲಿ ತೋರ್ಪಡಿಸಿದ್ದಾರೆ. ನಮ್ಮ ನೋಡುವ ದೃಷ್ಟಿಕೋನ ಬದಲಾಗಬೇಕೆಂಬುದು ಅವರ ಆಶಯವೂ ಆಗಿದೆ. ಶೋಷಣೆ ಎಂಬುದು ಜಾತಿ, ಧರ್ಮಗಳನ್ನೂ ಮೀರಿ ನಡೆವಂತದ್ದು.

`ದುರಂತ’ ಎನ್ನುವ ಕವನದಲ್ಲಿ ಹೆಣ್ಣುಮಕ್ಕಳನ್ನು ಕೂಡಿಟ್ಟ ಪರಿಯನ್ನು, ಅವರ ಮಬ್ಬುತನಕ್ಕೆ ಚೆಂದದ ಪ್ರತಿಮೆಗಳನ್ನಿಲ್ಲಿ ಬಳಸಿಕೊಂಡಿದ್ದಾರೆ. ನಮ್ಮ ಸಮಾಜದ ಬಹುಪಾಲು ಹೆಣ್ಣುಮಕ್ಕಳ ಸ್ಥಿತಿಯೂ ಇದೆ ಆಗಿದೆ. “ಪಾಪ| ಅವು ಹೆಣ್ಣುಗಳು / ರಾತ್ರಿ ಹೊರಬರಲಾರವು / ಚಂದ್ರ ಮೂಡಿಬಂದರೂ ನೋಡಲಾರವು/ ನನ್ನಕ್ಕ ಮತ್ತು ಅವಳ ಗೆಳತಿಯರು ಹಾಗೇ ಇದ್ದರು / ಕತ್ತಲೆಯ ಕೋಣೆಯೊಳಗೆ.”

ಇವರ `ರಸ್ತೆ’ ಕವನವು ದಿನನಿತ್ಯ ನಡೆಯುವ ಲೆಕ್ಕವಿಲ್ಲದ ಸರಣಿ ಅಪಘಾತಗಳನ್ನು ರಸ್ತೆಯ ದಾಹವೆಂದು , ಹೊಸ ದೃಷ್ಟಿಕೋನವನ್ನಿಟ್ಟುಕೊಂಡು ಕಟ್ಟಿದ್ದಾರೆ. `ಕತ್ತಲು’ ಯಾವಾಗಲೂ ಅಪಾಯಕಾರಿ, ಕ್ರಿಮಿಗಳ ವಾಸಸ್ಥಾನ. ಅಲ್ಲಿ ಯಾವಾಗಲೂ ಬೇಟೆಗಾಗಿ ಹೊಂಚುಹಾಕುತ್ತಿರುತ್ತಾರೆ. `ಕತ್ತಲು’ ಕವನದಲ್ಲಿ ಬೆಕ್ಕು ಮತ್ತು ಗಿಳಿ ಪ್ರತಿಮೆಗಳ ಮೂಲಕ ಅತ್ಯಾಚಾರಿಯ ಹುನ್ನಾರವನ್ನು ಬಿಂಬಿಸಿದ್ದಾರೆ. ಹೊರಗೆ ಬೆಕ್ಕು, ಒಳಗೆ ಗಿಳಿ ಬೇಟೆಗೆ ಹುನ್ನಾರ ನಡೆಯುತ್ತಿದೆ ಎಂಬುದನ್ನು ಅಭಿವ್ಯಕ್ತಿಸಿದ್ದಾರೆ.

`ನೆರಳು’ ಎಂಬುದಕ್ಕೆ ಬಹು ವಿಶಾಲವಾದ ಅರ್ಥವಿದೆ. ಅದಕ್ಕೆ ನೆಮ್ಮದಿ, ವಿಶ್ರಾಂತಿ, ಆರಾಮದಾಯಕವಾದದ್ದು ಎನ್ನಬಹುದು. ಅದಕ್ಕೆ ಹಿರಿದು-ಕಿರಿದೆನಬಾರದು. `ನೆರಳು’ ಕವನದ ಅರ್ಥಗರ್ಬಿತ ಸಾಲುಗಳು ಹೀಗಿವೆ:

“ಛತ್ರಿ ನೆರಳು ಕಿರಿಯದೆಂದು ಎಸೆದು/ ನರ್ತಿಸಿ/ ಕಳೆದುಕೊಂಡರೆ/ ಮತ್ತೆ ನೆರಳು ದಕ್ಕುವುದೇ ಇಲ್ಲ.” ಇವರ `ಬೆಂಕಿ’ ಎನ್ನುವ ಕವನವು ಇಂದಿನ ಸಾಮಾಜಿಕ ಸುಡು ವಾಸ್ತವಗಳ ಸಂಕೋಲೆಯನ್ನು ಕಣ್ಣೆದುರಿಗೇ ತಂದು ನಿಲ್ಲಿಸುತ್ತದೆ. ಆದರೆ ಪರಿಹರಿಸಲಾಗದ ನಿಸ್ಸಹಾಯಕ ಸ್ಥಿತಿಯನ್ನು ಕವಿ ವ್ಯಕ್ತಪಡಿಸುತ್ತಾನೆ.

“ರಕ್ತದೊಳಗಿನ ಬೆಂಕಿ/ ಉರಿಯುತಿದೆ ಎದೆಯಲಿ/ ಆರಿಸಬೇಕೆಂದರೆ/ ಹೊರಗೆ ಜಡಿಯಲಾಗಿದೆ ಕೀಲಿ.” ಈ ಸಂಕಲನದ ಗುಬ್ಬಿ, ಇಲಿಗೆ, ಹಸಿವು, ನಿರಂತರ, ಬಲಿ, ಬಣ್ಣ, ಬಯಲು ಮುಂತಾದ ಕವನಗಳು ಅತ್ಯಂತ ಸತ್ವಯುತವಾದ ಕವನಗಳೆನಿಸುತ್ತವೆ. ಇವುಗಳೆಲ್ಲ ಕವಿ ಕಂಡುಂಡ ನೋವುಗಳಾಗಿವೆ ಎನ್ನಬಹುದು. ಶೋಷಿತರ, ನೊಂದವರ ಧ್ವನಿಯಾಗಬೇಕೆಂಬ ಹಂಬಲ ಅವರ ಎಲ್ಲಾ ಕವನಗಳು ರುಜುವಾತುಪಡಿಸುತ್ತವೆ.

ಗಣೇಶ ಅವರ ಕವನಗಳಿಗೆ ವಿಭಿನ್ನ ಶೈಲಿ, ಆಲೋಚನಾ ಕ್ರಮವಿದೆ. ಬಂಧನಗಳನ್ನು ಮೀರುವ ಕವನಗಳು ಅಲ್ಲಲ್ಲಿ ಗದ್ಯಕ್ಕೆ ಜಾರುತ್ತವೆ. ಒಟ್ಟಿನಲ್ಲಿ ಕವನಗಳ ಮತ್ತೆ ಹಸಿರಾಗಿ ಚಿಗುರಲೆಂಬುದು ನಮ್ಮಾಶಯವಾಗಿದೆ.

ಕವಿ ಗಣೇಶ ಅವರ ಕವನಗಳು ಉರಿಯುವುದಿಲ್ಲ, ಕಲ್ಲಿದ್ದಿಲಿನ ಕಾವನ್ನು ನೀಡುತ್ತವೆ. ಹಿರಿಯ ಮಕ್ಕಳ ಸಾಹಿತಿ ಶ್ರೀ ಸುಮುಖಾನಂದ ಜಲವಳ್ಳಿಯವರು ಮುನ್ನುಡಿಯನ್ನು ಬರೆದಿದಿದ್ದಾರೆ. ” ಗಣೇಶ ನಾಡೋರ ಬರೀ ಖುಷಿಗಾಗಿ ಬರೆಯುವುದಿಲ್ಲ; ಅಮಾಯಕರ ನಿಟ್ಟುಸಿರುಗಳಿಗೆ ಒಂದಿಷ್ಟು ಧ್ವನಿಯಾಗುದಕ್ಕಾಗಿ ಎಂಬುದಕ್ಕೆ ಇಲ್ಲಿಯ ಕವನಗಳು ಪುರಾವೆಯಾಗುತ್ತವೆ. ಹಾಗಂತ ಅಷ್ಟಕ್ಕೇ ಸುಮ್ಮನಾಗುವುದಿಲ್ಲ. ಅದರಾಚೆಗೂ ಕಾವ್ಯಾನುಭವವನ್ನು ಕೊಡುತ್ತವೆ” ಎಂದಿದ್ದಾರೆ.

ಮತ್ತೆ ಕಾಡು ಹಸುರಿಗೆ

ಕವನ ಸಂಕಲನ

ಗಣೇಶ ಪಿ ನಾಡೋರ

ಪುಟಗಳು : 80
ಬೆಲೆ : 50/
ಮೊ: 9480797752
ಪ್ರಕಾಶಕರು : ಕೆ.ಕೆ.ಪ್ರಿಂಟರ್ಸ ಬೆಂಗಳೂರು
 

Leave a Reply