ಎನ್ ಎಸ್ ಶಂಕರ್ ಕೇಳುತ್ತಾರೆ: ನಾಗಪ್ಪನ ಶತ್ರು ನಿಜಕ್ಕೂ ಯಾರು?

ತನ್ನ ಕಣ್ಣುಗಳಲ್ಲಿ ತಾನೇ ‘ನಿಷ್ಪಾಪ ಮುಗ್ಧತೆ’ಯನ್ನು ಕಂಡು ಆತ್ಮಮರುಕದಿಂದ ಅಂತರ್ಮುಖಿಯಾಗುವವನು, ಯಶವಂತ ಚಿತ್ತಾಲರ ಸುಪ್ರಸಿದ್ಧ ಕಾದಂಬರಿ ‘ಶಿಕಾರಿ’ಯ ಕಥಾನಾಯಕ ನಾಗಪ್ಪ.

ಪ್ರಕಟವಾದ 1979ರಿಂದಲೂ- ಅಂದರೆ ಸರಿ ಸುಮಾರು ನಾಲ್ಕು ದಶಕ ಕಾಲ ಓದುಗರನ್ನು, ಅದರ ಜೊತೆಗೆ ಕನ್ನಡ ಸಾರಸ್ವತ ಲೋಕವನ್ನು ‘ಶಿಕಾರಿ’ ರೋಮಾಂಚನಗೊಳಿಸಿದೆ.

ಈ ಕಾದಂಬರಿಯ ಇಂಗ್ಲಿಷ್ ಆವೃತ್ತಿ ಸಿದ್ಧವಾಗಿ ಈಗಷ್ಟೇ ಬಿಡುಗಡೆಯಾಗಿರುವ ಈ ಸಂದರ್ಭದಲ್ಲಿ ಕನ್ನಡದ ಮಹತ್ವದ ಚಿಂತಕ, ಪತ್ರಕರ್ತ ಎನ್ ಎಸ್  ಶಂಕರ್ ಚಿತ್ತಾಲರ ಬಗ್ಗೆ- ವಿಶೇಷವಾಗಿ ‘ಶಿಕಾರಿ’ಯ ಬಗ್ಗೆ ನೋಟ ಹರಿಸಿದ್ದಾರೆ.

ನಿನ್ನೆಯ ಮೊದಲ ಭಾಗವನ್ನು ಇಲ್ಲಿ ಓದಬಹುದು 

2

‘ಇಷ್ಟು ವರ್ಷ ಬೆಳೆಸಿಕೊಂಡು ಬಂದ ಒಂದು ಕರಿಯರ್, ತನ್ನ ಶಿಖರಾವಸ್ಥೆಗೆ ಮುಟ್ಟಲಿದ್ದ ಕ್ಷಣದಲ್ಲೇ ಈಗ ಉಧ್ವಸ್ತಗೊಳ್ಳಲಿತ್ತು. ಕಾರಣ: ಮನುಷ್ಯನ ಶಿಕಾರಿಯಾಡುವ ಪ್ರವೃತ್ತಿ’ ಎಂದು ಆತಂಕಗೊಳ್ಳುತ್ತಾನೆ.

‘ಇದೆಲ್ಲ ಆಗುತ್ತಿದ್ದದ್ದು ತನಗೇ ಎಂಬುದರ ಮೇಲೆ ನಂಬಿಕೆಯಾಗುತ್ತಿರಲಿಲ್ಲ- ಎಲ್ಲರನ್ನು ಬಿಟ್ಟು ತನ್ನಂಥ ತನಗೆ! ಬದುಕಿನಿಂದ ಬಹಳಷ್ಟನ್ನು ಬೇಡಿರದ ಕೋಳೀಗಿರಿಯಣ್ಣನ ಕೇರಿಯ ಈ ನಾಗಪ್ಪನಿಗೆ!’ ಎಂಬ ಆತ್ಮಮರುಕದಲ್ಲಿ ಸಿಲುಕಿದ ನಾಗಪ್ಪ, ಕಾದಂಬರಿಯ ಅರ್ಧ ಭಾಗ ಈ ಅಸ್ಪಷ್ಟ ಭಯಾನಕ ಸವಾಲನ್ನು ಅರಿಯುವುದರಲ್ಲಿ, ಅರಿತು ಅರಗಿಸಿಕೊಳ್ಳುವುದರಲ್ಲೇ ಕಳೆಯುತ್ತಾನೆ.

‘ಈ ಆಯ- ಆಕಾರಗಳಿಲ್ಲದ; ಗೊತ್ತು ಗುರಿಯಿಲ್ಲದ ಹೊತ್ತಿಗೆ ಶಿಲ್ಪ ಕಡೆಯುವ, ಒಳಗಿಂದ ಎದ್ದೆದ್ದು ಬರುತ್ತಿದ್ದ ವಿದ್ರೂಪ ಭಯಕ್ಕೆ ರೂಪ ಮೂಡಿಸುವ ಕ್ರಿಯೆಯಲ್ಲಿ ತನ್ನನ್ನು ತೊಡಗಿಸಿಕೊಂಡ….’ ಎಂದು ವಿವರಿಸುತ್ತಾರೆ ಲೇಖಕರು.

ಅಷ್ಟಾದರೂ ಅವನಿಗೊಂದು ಅಸ್ಪಷ್ಟ ಧೈರ್ಯ- ‘ರಾಜಕೀಯ ಕುತಂತ್ರ ತನ್ನ ವ್ಯಕ್ತಿತ್ವದ ಅಳವಿನಾಚೆಯದಾದರೂ ಸತ್ಯ ತನ್ನ ಬದಿಗಿದೆ ಎಂಬ ಒಂದೇ ಒಂದು ಧೈರ್ಯ…’ ಆದರೆ ಮುಂದಕ್ಕೆ ನಡೆವ ವಿಚಾರಣೆಯ ಕಾಲಕ್ಕೆ ನಾಗಪ್ಪನ ನಂಬಿಕೆಯ ಈ ಬುನಾದಿಯೂ ಕುಸಿಯುತ್ತದೆ. ವಿಚಾರಣಾಧಿಕಾರಿಗಳಲ್ಲಿ ಒಬ್ಬನಾದ ದಸ್ತೂರ್ ಹೇಳುತ್ತಾನೆ- “ಮೂಲಭೂತವಾದ ಕೆಲವು ಮೌಲ್ಯಗಳಲ್ಲಿ ನಿಮಗೆ ನಂಬಿಕೆ ಇದ್ದಂತಿದೆ. ಅದರ ಜೊತೆಗೇ, ಉಳಿದವರಿಗೂ ಅವುಗಳಲ್ಲಿ ನಂಬಿಕೆ ಇದೆ ಎಂಬ ವಿಶ್ವಾಸ, ಇರಲೇಬೇಕೆಂಬ ಹಟ.

ನೀವು ಮೊದಲಿನಿಂದಲೂ ನಮ್ಮೊಡನೆ ನಡೆದುಕೊಂಡ ರೀತಿ ನೋಡಿದರೆ- ‘ಸತ್ಯ ಹೇಗಾದರೂ ನನ್ನ ಬದಿಗಿದೆ. ಕೊನೆಯಲ್ಲಿ ಗೆಲ್ಲುವದು ಆ ಸತ್ಯವೊಂದೇ’ ಎಂಬ ಪುರಾಣ- ಕಲ್ಪನೆಗೆ ಜೋತು ಬಿದ್ದವರ ಹಾಗೆ ತೋರುತ್ತೀರಿ…”
ಕಡೆಗೆ ನಾಗಪ್ಪನಿಗೆ ಜ್ಞಾನೋದಯವಾಗುತ್ತದೆ. ‘ಸತ್ಯವೇ ಕೊನೆಗೆ ಗೆಲ್ಲುತ್ತದೆ ಎಂಬ ಮಾತು ಫಿರೋಜನಂತಹ ಧೂರ್ತ ರಾಜಕಾರಣಿಯ ಮುಂದೆ ನಡೆಯುವಂತಹದಲ್ಲ. ಇದೇ! ಇದೇ! ತಾನು ಸಂಪೂರ್ಣವಾಗಿ ನಿರಪರಾಧಿಯಾಗಿರುವಾಗಲೂ ತನ್ನನ್ನು ಅಪರಾಧಿಯನ್ನಾಗಿ ತೋರಿಸುವ ಈ ಕಪ್ಪು ಬಲಕ್ಕೆ ಹಾಗೂ ಮಾತಿನ ತೆಕ್ಕೆಗೆ ಸಿಗದೆ ಅದು ಹುಟ್ಟಿಸುವ- ಭಯಕ್ಕೆ ತಾನಿಂದು ದಣಿಯುತ್ತಿದ್ದೇನೆ…’ ಎಂದು ಕಣ್ಣು ತೆರೆಯುತ್ತಾನೆ ನಾಗಪ್ಪ, ದಣಿಯುತ್ತಾನೆ. ‘

ಬೇಡ ಈ ಸ್ಪರ್ಧೆ! ಈ ಹಗೆ! ಸುಳ್ಳು- ಆಮಿಷಗಳ ಹಿಂದೆ ಓಡಿ ಸುಳ್ಳಾಗುವ ಈ ಜಂಜಾಟದ ಬದುಕು’ ಎಂದು ತನ್ನ ಹುದ್ದೆಗೇ ರಾಜೀನಾಮೆ ಕೊಟ್ಟುಬಿಡುತ್ತಾನೆ. ಅವನ ನೆನಪಿಗೆ ಬರುವವನು ‘ಬರ್ನಾರ್ಡ್ ಮಾಲ್ಮೂಡ್‍ನ ಕಾದಂಬರಿ ಫಿಕ್ಸರ್’ ಮತ್ತು ಅದರ ನಾಯಕ ಯಾಕೋವ್ ಬೋಕ್- ಯಾಕೆಂದರೆ ಆತನೂ ‘ತನ್ನಂತೆಯೇ ನಿಷ್ಕಾರಣವಾಗಿ ಯಾತನೆಗೆ ಗುರಿಯಾದ ಬಡಪಾಯಿ!’

ಕಾದಂಬರಿಯಲ್ಲಿ ಹೀಗೆಯೇ ತನ್ನಂಥ ‘ನಿರ್ದೋಷಿಗಳ ಬಲಿ’ಯ ಬಗ್ಗೆ ನಾಗಪ್ಪ ಪರಿತಪಿಸುವ ಪ್ರಸಂಗವೂ ಇದೆ. ಒಟ್ಟು ಅಂತ್ಯವಿಲ್ಲದಂತೆ ಭಾಸವಾಗುವ ಈ ಎಲ್ಲ ಯಾತನೆಯ ನಂತರ ರಾಜೀನಾಮೆ ಬಿಸಾಕಿ ಹೋಗುವ ಕ್ಷಣ ನಾಗಪ್ಪನ ಹೊಸ ಹುಟ್ಟಿನ ಮುಹೂರ್ತವೂ ಹೌದು.

‘ಒಬ್ಬನು ಇನ್ನೊಬ್ಬನನ್ನು ಉಪಯೋಗಿಸಿಕೊಳ್ಳುವುದರಿಂದ ಸುಳ್ಳಾದ ಸಂಬಂಧಗಳನ್ನೆಲ್ಲ ಒಂದೊಂದಾಗಿ ತೊಡೆದು, ಉಳಿದ ಆಯುಷ್ಯವನ್ನಾದರೂ ಅಪ್ಪಟವಾದ ನಿಜವಾದ ಸಂಬಂಧಗಳನ್ನು (ಹಾಗೆಂದರೇನು ಎನ್ನುವದೇ ಇನ್ನೂ ಸ್ಪಷ್ಟವಾಗಿರದಿದ್ದರೂ ಕೂಡ) ಹುಟ್ಟಿಸಿಕೊಳ್ಳುವುದರಲ್ಲಿ ಕಳೆಯುವುದಿತ್ತು’ ಎಂದು ಆತ ತೀರ್ಮಾನಿಸಿದ ಗಳಿಗೆ. ಎಳವೆಯಿಂದಲೂ ತಾನೇ ಎದುರಿಸಲು ಅಂಜಿದ ತನ್ನ ಹಲವು ಮನೋದೈಹಿಕ ಊನಗಳನ್ನು ಜೀರ್ಣಿಸಿಕೊಂಡು ಮುಕ್ತಿ ಪಡೆದ ದಿವ್ಯ ಕ್ಷಣ.

ಆದರೆ ಈ ಹಂತ ತಲುಪುವ ಹಾದಿಯಲ್ಲಿ ನಾಗಪ್ಪ ನಗರವೆಂಬ ನರಕದ ಸಹಸ್ರ ರೂಪಗಳ ಎದುರು ನರಳುತ್ತ ಬಂದಿದ್ದಾನೆ. ಮತ್ತು ನಾಗಪ್ಪನ ಈ ಪಯಣದ ಚಿತ್ರಣದಲ್ಲಿ, ಅತಿ ಸೂಕ್ಷ್ಮ ಮನೋವ್ಯಾಪಾರಗಳ ಜೊತೆಜೊತೆಗೇ ಕುತೂಹಲಕಾರಿಯೂ ಪ್ರೌಢವೂ ಆದ ಹೆಣಿಗೆಯ ಮೂಲಕ ಚಿತ್ತಾಲರು ಪ್ರದರ್ಶಿಸುವ ಅದ್ಭುತ ಕಥನ ಪ್ರತಿಭೆ, ನಲವತ್ತು ವರ್ಷಗಳ ನಂತರವೂ ‘ಶಿಕಾರಿ’ಯನ್ನು ಕನ್ನಡದ ಗಣ್ಯಕೃತಿಯಾಗೇ ಉಳಿಸಿದೆ; ಸಾಹಿತ್ಯಾಸಕ್ತರಿಗೆ ಅಪಾರ ಓದುವ ಸುಖ ಕೊಟ್ಟಿದೆ.
ಈಗ ಮೂಲ ಪ್ರಶ್ನೆ:

ನಾಗಪ್ಪನ ಈ ಸಂಕಟಕ್ಕೆ ಯಾರು ಅಥವಾ ಏನು ಕಾರಣ? ಅಥವಾ ಈ ಪ್ರಶ್ನೆಯನ್ನು ಹೀಗೂ ಕೇಳುವುದಾದರೆ- ನಾಗಪ್ಪನ ಶತ್ರು ನಿಜಕ್ಕೂ ಯಾರು?

ಇದಕ್ಕೆ ಉತ್ತರ ಸ್ವತಃ ನಾಗಪ್ಪನಿಗೇ ಸ್ಪಷ್ಟವಿಲ್ಲ. ಸಂಸ್ಥೆಯಲ್ಲಿ ತನ್ನ ಸುತ್ತಮುತ್ತ ಇರುವ ಮೇಲಧಿಕಾರಿಗಳೇ ವ್ಯೂಹ ಹೂಡಿ ತನ್ನನ್ನು ಕೆಡವುತ್ತಿದ್ದಾರೆ; ತನಗೇ ಅರಿವಿಲ್ಲದಂತೆ ಅವರ ಯಾವುದೋ ಹುನ್ನಾರಕ್ಕೆ ತಾನು ಅಡ್ಡಿಯಾಗಿರುವುದೇ ಬಹುಶಃ ಅವರ ಈ ಹಗೆಸಾಧನೆಗೆ ಕಾರಣ; ‘ಫಿರೋಜ್, ಜಲಾಲ ಹಾಗೂ ಶ್ರೀನಿವಾಸ ಈ ಮೂವರ ಕ್ರೌರ್ಯಕ್ಕೆ ತನ್ನಂತಹ ನಿರುಪದ್ರವಿಯಾದವನು ಕಾರಣವಾಗಬೇಕಾದರೆ ಈ ಮೂವರನ್ನೂ ಒಟ್ಟಿಗೆ ತಂದ ಯಾವುದೋ ದುಷ್ಟ ಸಂಚಿಗೆ ತಾನು ತನಗೇ ಗೊತ್ತಿಲ್ಲದ ರೀತಿಯಲ್ಲಿ ಅಡ್ಡಗಾಲು ಹಾಕಿರಬಹುದೇ?’- ಎಂದೆಲ್ಲ ಲೆಕ್ಕ ಹಾಕುತ್ತಾನೆ ನಾಗಪ್ಪ.

ಅಷ್ಟಾದರೂ ತಾನು ‘ನಿಷ್ಕಾರಣವಾಗಿ ಯಾತನೆಗೆ ಗುರಿಯಾದ ಬಡಪಾಯಿ’ ಅನ್ನುವುದರಲ್ಲಿ ಅವನಿಗೆ ಅನುಮಾನವಿಲ್ಲ. ಯಾಕೆಂದರೆ ಎಲ್ಲ ಮುಕ್ತಾಯಕ್ಕೆ ಬರುವ ಹಂತದಲ್ಲೂ ನಾಗಪ್ಪ ‘ನನಗಿನ್ನೂ ಅರ್ಥವಾಗದೇ ಇದ್ದದ್ದು- ಇದನ್ನೆಲ್ಲ ಉಪಯೋಗಿಸಿ ನೀವು ನನ್ನನ್ನು ಹಣಿಯಲು ಹೊರಟಿದ್ದರ ಉದ್ದೇಶ’ ಎಂದು ಗೊಂದಲಗೊಳ್ಳುತ್ತಾನೆ.

ಒಟ್ಟಿನಲ್ಲಿ ನಾಗಪ್ಪನ ಅಮಾಯಕ ಮುಗ್ಧತೆ ಅಥವಾ ಉದಾತ್ತ ವ್ಯಕ್ತಿತ್ವದ ಬಗ್ಗೆ ಓದುಗರು, ಯಾವ ಪ್ರಶ್ನೆಯೂ ಇಲ್ಲದೆ, ಸಹಾನುಭೂತಿಪರ ಮೆಚ್ಚುಗೆ ತಳೆಯಬೇಕೆಂದು ಚಿತ್ತಾಲರು ಬಯಸುತ್ತಾರೆ. ಆದರೆ ‘ಶಿಕಾರಿ’ ಕಾದಂಬರಿಯ ಮರುಓದು, ನಾಗಪ್ಪನ ಜೀವಾಳದ ಬಗ್ಗೆ ಗಹನವಾದ ಅನುಮಾನಗಳನ್ನು ಹುಟ್ಟುಹಾಕುತ್ತದೆ.

ಈಗ ಶ್ರೀನಿವಾಸನ ವಿಚಾರಕ್ಕೆ ಬರೋಣ.

ಇಲ್ಲಿ ಉಲ್ಲೇಖಗೊಂಡ ಶ್ರೀನಿವಾಸ ನಾಗಪ್ಪನ ಸಹೋದ್ಯೋಗಿಯಲ್ಲ, ಅವನ ಬಾಲ್ಯಗೆಳೆಯ. ‘ಚಿಕ್ಕಂದಿನಿಂದಲೂ ತನ್ನ ಪ್ರತಿಸ್ಪರ್ಧಿಯಾಗಿದ್ದ ಶ್ರೀನಿವಾಸ’ ಎನ್ನುತ್ತಾನೆ ನಾಗಪ್ಪ. ಕಾದಂಬರಿಯ ಮೊದಲ ಪುಟದಿಂದಲೂ ಈ ಶ್ರೀನಿವಾಸನದು- ನಾಗಪ್ಪನ ಪಾಲಿಗೆ- ಹಂತ ಹಂತವಾಗಿ ಖಳನಾಯಕನಾಗಿ ಬೆಳೆಯುತ್ತ ಹೋಗುವ ಪಾತ್ರ. ನಾಗಪ್ಪನ ಲೆಕ್ಕದಲ್ಲಿ ಇವನೊಂದು ಒಗಟು.

‘ಶಿಕಾರಿ’ ಕಾದಂಬರಿ ಕುರಿತ ಎಲ್ಲ ನೈತಿಕ ಪ್ರಶ್ನೆಗಳಿಗೆ ಕಾರಣವಾಗುವುದು ಈ ಶ್ರೀನಿವಾಸನ ಪಾತ್ರ, ಹಾಗೂ ಅವನೊಂದಿಗೆ ನಾಗಪ್ಪನ ಸಂಬಂಧ ತಳೆಯುತ್ತ ಹೋಗುವ ವಿವಿಧ ಛಾಯೆಗಳು.

ಅಷ್ಟಕ್ಕೂ ಈ ಶ್ರೀನಿವಾಸ ಎಂಥವನು? ‘ಶ್ರೀನಿವಾಸನ ಇಡೀ ಇತಿಹಾಸವನ್ನು ಸ್ವಲ್ಪದರಲ್ಲಿ ಹಿಡಿಯುವುದಾದರೆ ಚಿಕ್ಕಂದಿನಲ್ಲಿ ಬಡತನದಿಂದಾಗಿ ಪಟ್ಟ ಅಪಮಾನಗಳನ್ನೆಲ್ಲ ಮರೆಯಲು ಮಾಡಿದ ಪ್ರಚಂಡ ಹೋರಾಟ. ಅದೊಂದು ದೊಡ್ಡ ಸಾಹಸದ ಕತೆ. ಎಲ್ಲೋ ಒಂದು ಗೊತ್ತಾಗದ ಜಾಗದಲ್ಲಿ, ಗೊತ್ತಾಗದ ರೀತಿಯಲ್ಲಿ ಆತ ನನ್ನನ್ನು ಆಹ್ವಾನಿಸುತ್ತಾನೆ.’

ಕೆಲಸದಿಂದ ಸಸ್ಪೆಂಡ್ ಆಗಿದ್ದ ನಾಗಪ್ಪ, ಅದರ ಹಿಂದುಮುಂದು ಗೊತ್ತಿಲ್ಲದೆ ತಬ್ಬಿಬ್ಬಾಗಿದ್ದ ಅವಧಿಯಲ್ಲಿ, ‘ಕಾದಂಬರಿ ಬರೆಯುವುದಕ್ಕಾಗಿ ರಜೆಯಲ್ಲಿದ್ದೇನೆ’ ಎಂಬ ನೆಪ ಸೃಷ್ಟಿಸಿಕೊಂಡಿರುವ ಹಂತದಲ್ಲಿ, ನಾಗಪ್ಪನನ್ನು ತನ್ನ ಮನೆಯಲ್ಲೇ ಕೂತು ಕಾದಂಬರಿ ಬರೆಯುವಂತೆ ಆಹ್ವಾನಿಸುವವನು ಇದೇ ಶ್ರೀನಿವಾಸ.

ಅತ್ತ ಆ ಕಾದಂಬರಿಯೋ, ಅದೂ ಶ್ರೀನಿವಾಸನ ಬಗ್ಗೆಯೇ!…

‘ನಿನ್ನ ಆಫೀಸು ಗೀಫೀಸು ಎಲ್ಲಾ ಮರೆತುಬಿಟ್ಟು, ಸುಖವಾಗಿ ಇಲ್ಲಿ ಬಂದು ಒಂದು ತಿಂಗಳು ಇದ್ದುಬಿಡು. ಹೇಗಾದರೂ ರಜೆ ತೆಗೆದುಕೊಂಡಿದ್ದೀಯಲ್ಲ. ಮಹಾಬಲೇಶ್ವರ್, ಮಾಥೇರಾನ್ ಅಲ್ಲದಿದ್ದರೂ ಮುಂಬಯಿಯ ಸೆಖೆ ನಿನ್ನನ್ನು ಇಲ್ಲಿ ಬಾಧಿಸದು. ಹೊಸ ಕಾದಂಬರಿಯನ್ನೇನೋ ಬರೆಯಲು ಹಿಡಿದಿದ್ದೀಯಂತಲ್ಲ- ನನ್ನ ಬಗ್ಗೆ, ಬರೆ ಬರೆ. ಎಂತಹ ಭಿಡೆಯೂ ಬೇಡ. ಅಮ್ಮನ ಬಗ್ಗೆ ನೀನು ಬರೆದದ್ದನ್ನು ಓದಿದೆ- ನೀನೇ ಅದರ ಪತ್ತೆ ಹತ್ತಗೊಡದಿದ್ದರೂ…’ ಎಂದು ಆಹ್ವಾನವೀಯುತ್ತಾನೆ ಶ್ರೀನಿವಾಸ. ಆಗ ನಾಗಪ್ಪನೂ ‘ಕಳೆದ ಇಪ್ಪತ್ತು ವರ್ಷಗಳಿಗೂ ಮಿಕ್ಕಿದ ಕಾಲದಿಂದ ಅವನ ಬಗ್ಗೆ ತಳೆಯುತ್ತ ಬಂದ, ದ್ವೇಷಕ್ಕೇ ಹತ್ತಿರವಾದ, ಅಸಡ್ಡೆಯನ್ನೂ ಮರೆತು’ ಅವನ ಮನೆಗೇ ಹೋಗಿ ಕೂರುತ್ತಾನೆ!

ಈಗ ನಾಗಪ್ಪ ಶ್ರೀನಿವಾಸನ ಬಗ್ಗೆಯೇ ಕಾದಂಬರಿ ಬರೆಯಹೊರಟಿದ್ದಾನೆ, ಅದೂ ಶ್ರೀನಿವಾಸನ ಅಮ್ಮನ ಬಗ್ಗೆ ಕತೆ ಬರೆದು ಪ್ರಕಟಿಸಿ ಆದ ಮೇಲೆ. ಇಲ್ಲಿ ಆ ಕತೆಯ ಚರ್ಚೆ ಮಾಡುವ ಮುನ್ನ ಶ್ರೀನಿವಾಸನ ದೈಹಿಕ ವರ್ಣನೆ ಗಮನಿಸಬೇಕು.
‘ರೋಮ ವಿರಲವಾದ ಮೈಯಲ್ಲಿ ಬೊಜ್ಜೇ ತುಂಬಿ ಗಡ್ಡ ಮೀಸೆಗಳು ಕೂಡ ಸರಿಯಾಗಿ ಬೆಳೆಯದೇ ನುಣುಪುನುಣುಪಾಗಿ ತಕತಕಿಸುವ ಈ ಅಂಜುಬುರುಕಾ….’
ಇಷ್ಟೇ ಅಲ್ಲ,

‘ಶುದ್ಧ ದನ!… ಅವನ ಗಿಡ್ಡ ದೇಹಕ್ಕೆ ಶೋಭಿಸದ ಡೊಳ್ಳು ಹೊಟ್ಟೆ, ಗುಂಡುಗುಂಡಾದ ದೇಹದ ಶಿಖರದಲ್ಲಿ ದೊಡ್ಡ ತಲೆ. ಹರವಾದ ಮೂಗು. ದಪ್ಪ ದಪ್ಪ ತುಟಿಗಳು….’

ಅಂತೂ ಶ್ರೀನಿವಾಸನ ದೇಹಸ್ವರೂಪ ವರ್ಣನೆಯ ಮೊದಲ ಹೆಜ್ಜೆಯಿಂದಲೇ ಆತನ ಬಗ್ಗೆ ಓದುಗರಿಗೆ ಅಸಹ್ಯ ಮೂಡಿಸುವುದು ಚಿತ್ತಾಲರ ಉದ್ದೇಶ. ಇನ್ನು ಅವನ ಸ್ವಭಾವ? ‘ಶ್ರೀನಿವಾಸನಿಗೆ, ಹಾವಿನಂತೆ ಹಗೆ ಕಾಯುವ ಛಲದ ಗುಣ ಅವನ ತಾಯಿಯಿಂದ ಬಂದದ್ದು. ನಾಗಪ್ಪ ಅವನ ತಾಯಿಯನ್ನು ಕುರಿತು ಬರೆದ ಕತೆ ಈ ಛಲವನ್ನು ಅರಿಯುವುದರ ಸಲುವಾಗಿಯೇ ಬರೆದದ್ದಾಗಿತ್ತು’- ಎಂಬುದು ಲೇಖಕರು ನೀಡುವ ಸಮರ್ಥನೆ.

ಇರಲಿ. ಶ್ರೀನಿವಾಸನ ಬಣ್ಣನೆ ಹೀಗಾದರೆ ಇನ್ನು ಅವನ ಅಮ್ಮ? ಅದರಲ್ಲಿ ಚಿತ್ತಾಲರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮಹಾ ಭೀಭತ್ಸ ಚಿತ್ರಣವನ್ನೇ ನೀಡುತ್ತಾರೆ!…

ಶ್ರೀನಿವಾಸನ ತಾಯಿ ಪದ್ದಕ್ಕ…. ‘ಈವರೆಗೂ ಅನುಭವಕ್ಕೆ ಬಂದಿರದ, ವಿಕಾಸವಾದದ ವಿದ್ಯಾರ್ಥಿಯಾಗಿಯೂ ಈವರೆಗೂ ಓದಿ ಕೂಡ ಗೊತ್ತಿರದ ಒಂದು ವಿಚಿತ್ರ ಪ್ರಾಣಿ ಧುತ್ ಎಂದು ಕಣ್ಣಮುಂದೆ ನಿಂತುಬಿಟ್ಟಿದೆ ಎಂಬಂತಹ ಅನ್ನಿಸಿಕೆಗೆ ನಾಗಪ್ಪ ಹೆದರಲಿಲ್ಲ. ಹೆದರಿದ್ದು- ಈ ಬಗೆಯಾಗಿ ತೋರುವ ಈ ಆಕೃತಿ ಪದ್ದಕ್ಕನೇ ಎಂದು ಖಾತರಿಯಾದದ್ದಕ್ಕೆ; ಕೆಂಪು ಸೀರೆ ಸುತ್ತಿಕೊಂಡ ದೇಹ ಮುದುಡಿ ಮುದ್ದೆಯಾಗಿ ಎರಡು ಕೈಗಳಂತಹ, ಎರಡು ಕಾಲುಗಳಂತಹ ಅವಯವಗಳು ಸೀರೆಯಿಂದ ಹೊರಗೆ ಚಾಚಿದ ಕಾರಣದಿಂದಲೇ ಇದು ಮನುಷ್ಯ ದೇಹವಿರಬಹುದೆಂಬ ಸಂದೇಹ ಹುಟ್ಟಿಸುವಂತಿತ್ತು. ತಲೆಯಿರುವ ಜಾಗದಲ್ಲಿಯ ಬೋಳು ಬೋಳಾದ ಗೋಲಾಕೃತಿಯನ್ನು ಸೀರೆಯ ಸೆರಗು ಸಂಪೂರ್ಣವಾಗಿ ಮುಚ್ಚಿತ್ತು. ಮುಂದಿನ ತೆರೆದಿದ್ದ ಜಾಗದಲ್ಲಿ ಒಂದು ಹೆಣ್ಣಿನ ಮೂಗು ಆಗಿರಬಹುದಾದ, ಕಣ್ಣುಗಳಾಗಿರಬಹುದಾದ ಅವಯವಗಳ ಅವಶೇಷಗಳಂತಹ ಕುರುಹುಗಳು. ಬಾಯಿಯಂತಹ ದೊಡ್ಡ ತೂತಿನಲ್ಲಿ ಹಲ್ಲುಗಳಂತೆ ತೋರುವ ನಾಲ್ಕೈದು ಕಪ್ಪುಗಟ್ಟಿದ ತುಂಡುಗಳು…. ತೀರ ಸ್ಪಷ್ಟವಾಗಿ ದೃಷ್ಟಿಗೋಚರವಾದುದರ ಈ ಭೀಭತ್ಸ ವಾಸ್ತವತೆಯಿಂದ ಅರ್ಜುನ್‍ರಾವರ ಮನೆಯಲ್ಲಿ ನಾಸ್ತಾ ಮಾಡಿದ್ದೆಲ್ಲ ಹೊರಗೆ ಬರುವ ಭಯ…’

ಈ ‘ಭೀಭತ್ಸ ಅಕೃತಿ’ ಕುರಿತು ನಾಗಪ್ಪ ಈ ಹಿಂದೆಯೇ ಕತೆ ಬರೆದು ಪ್ರಕಟಿಸಿದ್ದಾನೆ. ಆ ಕತೆಯ ತಿರುಳೇನು ಎಂಬ ಬಗ್ಗೆ ಕಾದಂಬರಿಯಲ್ಲಿ ಅಷ್ಟು ವಿವರಗಳಿಲ್ಲ. ಆದರೆ- ‘ನಡೆದದ್ದನ್ನೆಲ್ಲ ಹೆಸರೂ ಬದಲಿಸದೆ ಬರೆದದ್ದನ್ನು’ ಒಂದು ಹಂತದಲ್ಲಿ ನಾಗಪ್ಪನೇ ಹೊರಗೆಡಹುತ್ತಾನೆ! ಸಹಜವಾಗಿಯೇ ಇದು ಶ್ರೀನಿವಾಸನನ್ನು ಕೆರಳಿಸಿದೆ. ‘ಅವನ ಅಮ್ಮನ ಬಗ್ಗೆ ತಾನು ಬರೆದ ಕತೆ ಓದಿದ ದಿನ ಸಿಟ್ಟಿನಿಂದ ಧಿಮಿಧಿಮಿ ಕುಣಿದುಬಿಟ್ಟಿದ್ದನೆಂದು ಸೀತಾರಾಮನಿಂದ ತಿಳಿದಿತ್ತು’ ಎಂದೂ ದಾಖಲಿಸುತ್ತಾನೆ ನಾಗಪ್ಪ.
ನಾಗಪ್ಪ ಬರೆದ ಆ ಕತೆಯ ಹಿಂದಿನ ನೈತಿಕ ಪ್ರಶ್ನೆಗಳನ್ನು ಅವಲೋಕಿಸುವ ಮುನ್ನ ಅವನೀಗ ಬರೆಯಹೊರಟಿರುವ ಕಾದಂಬರಿಯ ಪ್ರವರವೂ ಓದುಗರ ಗಮನಕ್ಕೆ ಬರಬೇಕು.

ಶ್ರಿನಿವಾಸನೇನೋ ಇದು ತನ್ನ ಬಗ್ಗೆಯೇ ಬರೆಯುತ್ತಿರುವ ಕಾದಂಬರಿ ಅಂದುಕೊಂಡಿದ್ದಾನೆ. ನಾಗಪ್ಪನಿಗೂ ಅದು ಗೊತ್ತಿಲ್ಲದ್ದೇನಲ್ಲ- ‘ಇದು ತನ್ನ ಬಗ್ಗೆ ನಾನು ಬರೆಯುತ್ತಿದ್ದ ಕಾದಂಬರಿಯೆಂದು ತಿಳಿದೇ ಹೆದರಿದ್ದಾನೆ- ನಾಡೂ ಮಾಸ್ಕೇರಿಯ ಪದ್ಮನಾಭ ಕೇಣಿಗಳ ಜ್ಯೇಷ್ಠ ಚಿರಂಜೀವನಾದ ಶ್ರೀನಿವಾಸ!’ ಎಂದು ನಾಗಪ್ಪ ತನ್ನೊಳಗೇ ಉದ್ಗರಿಸಿಕೊಳ್ಳುತ್ತಾನೆ.

ಜೊತೆಗೆ ಶ್ರೀನಿವಾಸನ ಅನುಮಾನಕ್ಕೆ ಪುಷ್ಟಿ ನೀಡುವ ಸಂಗತಿಗಳೂ ಸಾಕಷ್ಟಿವೆ. ಸ್ವತಃ ಶ್ರೀನಿವಾಸ ಖುದ್ದು ನಾಗಪ್ಪನ ಬಳಿ ‘ಹೊಸ ಕಾದಂಬರಿಯನ್ನೇನೋ ಬರೆಯಲು ಹಿಡಿದಿದ್ದೀಯಂತಲ್ಲ- ನನ್ನ ಬಗ್ಗೆ, ಬರೆ ಬರೆ. ಎಂತಹ ಭಿಡೆಯೂ ಬೇಡ’ ಎಂದಾಗ ನಾಗಪ್ಪ ಅದನ್ನೇನೂ ಅಲ್ಲಗಳೆದಿಲ್ಲ. ಜೊತೆಗೆ ಹೋಟೆಲ್ ಮಾಲೀಕ ನಾಯಕ್ ನಾಗಪ್ಪನನ್ನು ಕೇಳುತ್ತಾನೆ- “ಶ್ರೀನಿವಾಸನ ಬಗ್ಗೆ ನೀನೇನೋ ಕಾದಂಬರಿ ಬರೆಯಲು ಹಿಡಿದಿದ್ದೀಯಂತೆ. ನಿನ್ನ ಗೆಳೆಯ ಸೀತಾರಾಮ ಎಲ್ಲ ಕಡೆಯಲ್ಲಿ ಸುದ್ದಿ ಹಬ್ಬಿಸಿದ್ದಾನೆ. ಶ್ರೀನಿವಾಸನಿಗೆ ಇದು ಗೊತ್ತಾಗಿದೆ. ಆದರೆ ಅದಕ್ಕೆ ಅವನು ಹೆದರಿಕೊಂಡಿಲ್ಲ. ‘ಬರೆಯಲಿ, ಯಾವ ಭಿಡೆಯೂ ಬೇಡ. ನನ್ನ ಮನೆಯಲ್ಲೇ ಕೂತು ಬರೆ’ ಎಂದು ಅವನೇ ನಿನಗೆ ಸೂಚಿಸಿದ್ದನಂತೆ. ಹೌದೆ? ಶ್ರೀನಿವಾಸನೇ ಹೇಳಿದ್ದು…” ಇದಕ್ಕೆ ನಾಗಪ್ಪ ಕೊಡುವ ಉತ್ತರವೂ ಶ್ರೀನಿವಾಸನ ಅನುಮಾನಕ್ಕೆ ಮತ್ತಷ್ಟು ತುಪ್ಪ ಸುರಿಯುವಂತೆಯೇ ಇದೆ-
“ನನ್ನ ಕಾದಂಬರಿಯಲ್ಲಿ ಬರುವ ಅವನ ಪೂರ್ವೇತಿಹಾಸವನ್ನು ಇದಿರಿಸಲು ಮಾತ್ರ ಬೆನ್ನೆಲುಬಿಗೆ ತಾಕತ್ತು ಬರಲು ದಿನವೂ ಚಂಪೀ ಮಾಡಿಕೊಳ್ಳಲು ಹೇಳು” ಅಷ್ಟೇ ಅಲ್ಲ, ‘ನಾಗಪ್ಪನ ಮಾತಿನಲ್ಲಿ ಅವನೇ ಬಯಸಿರದ ನಿಷ್ಠುರ ಸೇರಿಕೊಂಡಿತ್ತು’ ಎಂಬುದು ಲೇಖಕರ ಷರಾ….

ಹೌದು, ಶ್ರೀನಿವಾಸನ ಬಗ್ಗೆ ನಾಗಪ್ಪ ಬರೆಯಹೊರಟಿರುವ ಈ ಕಾದಂಬರಿಯ ತಿರುಳೇನು?

। ಇನ್ನು ನಾಳೆಗೆ ।

 

 

2 Responses

  1. ಮೊದಲ ಓದಿಗೆ ಬೆರಗು ಹುಟ್ಟಿಸಿದ್ದ ಶಿಕಾರಿಯನ್ನು ಮತ್ತೆ, ಮತ್ತೆ ಓದಿದಾಗ ನಾಗಪ್ಪ ಅಪಾರ ಆತ್ಮಮರುಕವುಳ್ಳವನಾಗಿಯೇ ಕಾಣುತ್ತಾನೆ. ನನಗೆ ಗೊತ್ತಿದ್ದ ಹಾಗೆ ’ಶಿಕಾರಿ’ ಕಾರ್ಪೊರೇಟ್ ಜಗತ್ತಿನ ತಲ್ಲಣಗಳನ್ನು ಒಡೆದು ಹೇಳಿದ ಕನ್ನಡದ ಮೊದಲ ಕಾದಂಬರಿ. ಈಗ ಕಾರ್ಪೊರೇಟ್ ಜಗತ್ತು ಇಷ್ಟು ಬೆಳೆದಿದೆ, ಆ ಜಗತ್ತಿನಿಂದಲೇ ಬಂದ ಬರಹಗಾರರು ನಮ್ಮ ನಡುವೆ ಬಹಳಷ್ಟು ಮಂದಿ ಇದ್ದಾರೆ. ಆದರೆ ಚಿತ್ತಾಲರಷ್ಟು ತೀವ್ರವಾಗಿ ಆ ಲೋಕದ ತಳಮಳಗಳನ್ನು ಕಟ್ಟಿಕೊಡುವ ಕಾದಂಬರಿ ಕನ್ನಡದಲ್ಲಿ ಇನ್ನೊಂದಿಲ್ಲ. ಏಕಕಾಲಕ್ಕೆ ಪತ್ತೇದಾರಿ ಕಾದಂಬರಿಯಾಗಿಯೂ, ಮನೋವಿಶ್ಲೇಷಣಾ ಕಾದಂಬರಿಯಾಗಿಯೂ ಶಿಕಾರಿ ಕಾಣುತ್ತದೆ. ಬದುಕನ್ನು ಹುಡುಕಿಕೊಂಡು ಹನೇಹಳ್ಳಿಯಿಂದ ಮುಂಬೈಗೆ ಬರುವ ನಾಗಪ್ಪ ಬೆನ್ನಿಗೆ ಆತ್ಮಘಾತುಕತೆಯನ್ನು, ಎದೆಯ ಮೇಲೆ ಅದರ ನಿಶಾನಿಯನ್ನೂ ಹೊತ್ತುಬಂದಿರುತ್ತಾನೆ.

    ಶಿಕಾರಿಯಲ್ಲಿ ಒಂದು ಸಲವೂ ಎದುರಾಗದೆ ಕೇವಲ ತನ್ನ ಇರುವಿಕೆಯಿಂದಲೇ ನಾಗಪ್ಪನ ಬದುಕನ್ನು ಸಹನೀಯಗೊಳಿಸುವವಳು ರಾಣಿ. ತನ್ನ ಚಿಕ್ಕ ಚಿಕ್ಕ ಕಣ್ಣುಗಳಲ್ಲಿ, ಕೆನ್ನೆಗಳ ನಗುವಿನಲ್ಲಿ, ಅವನು ಇರುವಂತೆ ಅವನನ್ನು ಒಪ್ಪಿಕೊಳ್ಳಬಲ್ಲ, ತನ್ನ ಪ್ರೇಮದಲ್ಲಿ ಅವನೆದೆಯ ಒಳಗಿನ ಬೆಂಕಿಯನ್ನು ತಂಪಾಗಿಸಬಲ್ಲ ರಾಣಿ. ಆದರೆ ಅವಳನ್ನು ನೋಡಹೋಗಲು ನಾಗಪ್ಪನಿಗೆ ಕಡೆಯವರೆಗೂ ಬಿಡುವಾಗುವುದೇ ಇಲ್ಲ. ಮೇರಿಯ ಒಂದು ಕರೆ, ನೆರೆಮನೆಯ ಜಾನಕಿಯ ಒಂದು ನೋಟ, ರೀನಾಳ ಜೊತೆಯಲ್ಲಿ ಕಳೆದ ಘಳಿಗೆಗಳು, ಡಯಾನಾಳ ಸಾಮಿಪ್ಯ, ಥ್ರೀಟಿಯ ಸ್ಪರ್ಶ ಎಲ್ಲಕ್ಕೂ ಹಂಬಲಿಸುವ ನಾಗಪ್ಪ ರಾಣಿಯೆಡೆಗೆ ಮಾತ್ರ ಇನ್ನಿಲ್ಲದ ಉದಾಸೀನತೆಯನ್ನು ತೋರಿಸುತ್ತಾನೆ. ಅವಳಿಗೆ ಕಳಿಸುವ ೨೦೦ ರೂಗಳ ಮನಿಆರ್ಡರ್ ಅವಳೆಡೆಗಿನ ತನ್ನ ಕರ್ತವ್ಯವನ್ನು ತೀರಿಸುತ್ತದೆ ಎಂದು ತಿಳಿದುಕೊಂಡಿರುತ್ತಾನೆ. ನಾಗಪ್ಪನ ದುರಂತ ಮತ್ತು ಕೆಡುಕು ಇರುವುದು ಇಲ್ಲಿ. ತನ್ನ ಸುತ್ತಲೂ ಶಿಕಾರಿಗೆ ನಿಂತ ಎಲ್ಲರೆಡೆಗೂ ಸಹಾಯಕ್ಕಾಗಿ ಕೈಚಾಚುವ ನಾಗಪ್ಪ, ಎಲ್ಲರನ್ನೂ ಕ್ರೂರಿಗಳು ಎಂದು ತೀರ್ಮಾನಿಸುವ ನಾಗಪ್ಪ ರಾಣಿಯೆಡೆಗೆ ತಾನೂ ಸಹ ಅಷ್ಟೇ ಕ್ರೂರಿಯಾಗಿದ್ದೆ ಎಂದು ಅರ್ಥ ಮಾಡಿಕೊಳ್ಳುವುದೇ ಇಲ್ಲ.

    ಶಿಕಾರಿ ಯ ಮರು ಓದು ಮತ್ತು ಮರು ವಿಶ್ಲೇಷಣೆಗಾಗಿ ವಂದನೆಗಳು.

Leave a Reply

%d bloggers like this: