ಹೋಗಿ ಬಾ ವಿನ್ನಿ..

ಬೆಂಕಿಯ ಮಗಳು ವಿನ್ನಿ

ಕೆ ಪುಟ್ಟಸ್ವಾಮಿ 

ವಿನ್ನಿ ಮಂಡೇಲಾ ನಿಧನರಾದ ಸುದ್ದಿ ಓದಿದ ನಂತರ ಎಪ್ಪತ್ತರ ದಶಕ ನೆನಪಾಯಿತು.

ಅದು ಸಾಮಾಜಿಕ ಬದಲಾವಣೆಗಳ ಬಗ್ಗೆ ವಿದ್ಯಾರ್ಥಿಗಳ ನಡುವೆ ಚರ್ಚೆಯಾಗುತ್ತಿದ್ದ ಕಾಲ. (ಈಗಲೂ ಇರಬಹುದು). ಪತ್ರಿಕೆಗಳು ಬೇರಬೇರೆ ದೇಶಗಳಲ್ಲಿ ಮಾನವ ಹಕ್ಕುಗಳಿಗಾಗಿ ನಡೆಯುತ್ತಿದ್ದ ಹೋರಾಟಗಳ ಬಗ್ಗೆ ವಿವರವಾಗಿ ಬರೆಯುತ್ತಿದ್ದವು. (ದಕ್ಷಿಣಾ ಆಫ್ರಿಕಾ, ಪ್ಯಾಲಿಸ್ತೇನ್, ಇರಾನ್ ಇತ್ಯಾದಿ..)

ನಮ್ಮಂಥವರಿಗೆ ಅಂಥ ಸುದ್ದಿಗಳು, ವರದಿಗಳ ಬಗ್ಗೆ ವಿಶೇಷ ಆಕರ್ಷಣೆಯಿತ್ತು. ಅದರಲ್ಲೂ ದಕ್ಷಿಣ ಆಫ್ರಿಕಾದಲ್ಲಿ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ (ANC) ವರ್ಣಭೇದ ನೀತಿಯ ವಿರುದ್ಧ ಹುಟ್ಟುಹಾಕಿದ ಹೋರಾಟ ಜಗತ್ತಿನ ಗಮನ ಸೆಳೆದಿದ್ದ ಕಾಲ. ಭಾರತ ಈ ಸಂಬಂಧ ದಕ್ಷಿಣ ಆಫ್ರಿಕಾ ಮತ್ತು ಪ್ಯಾಲಿಸ್ತೇನ್ ಹೋರಾಟದ ಸಂಬಂಧ ಇಸ್ರೇಲ್ ರಾಷ್ಟ್ರಗಳ ಸಂಬಂಧಗಳಿಗೆ ನಿಷೇಧ ಹೇರಿತ್ತು.

ಭಾರತದಲ್ಲಿ ನಡೆದ ಅಸ್ಪೃಶ್ಯತೆ ವಿರುದ್ಧದ ಚಳವಳಿಗೂ ದ. ಆಫ್ರಿಕಾದ ವರ್ಣ ಭೇದ ನೀತಿ ವಿರುದ್ಧ ನಡೆದ ಚಳುವಳಿಗೂ ಅನೇಕ ಸಾಮ್ಯಗಳಿದ್ದುದರಿಂದ ಆ ಹೋರಾಟಗಳ ಬಗ್ಗೆ ಇಲ್ಲಿ ಹೆಚ್ಚು ಚರ್ಚೆಯಾಗುತ್ತಿತ್ತು. ಅದರಲ್ಲೂ ಹೋರಾಟವನ್ನು ದೊಡ್ಡರೀತಿಯಲ್ಲಿ ಮುನ್ನಡೆಸಿದ ನಾಯಕ ನೆಲ್ಸನ್ ಮಂಡೇಲಾ ಬಂಧಿಯಾಗಿ ಜೈಲಿನಲ್ಲಿರುವಾಗ ಅದರ ಕಾವು ಆರದಂತೆ ಚಳವಳಿಯನ್ನು ಜೀವಂತವಾಗಿಟ್ಟ ಅವನ ಪತ್ನಿ ವಿನ್ನಿ (ವಿನಿ) ಮಂಡೇಲಾಳ ಸಂಕಲ್ಪಶಕ್ತಿ ನಮಗೆಲ್ಲ ಪವಾಡದಂತೆ ಕಂಡಿತ್ತು.

ದಿನಕ್ಕೊಂದು ಚಳವಳಿಯಲ್ಲಿ ಭಾಗವಹಿಸಿ ‘ಸುದ್ದಿಯ ಕಣ್ಣು ಒದ್ದೆಯಾಗದಂತೆ’, ಅನುಯಾಯಿಗಳಲ್ಲಿ ಉತ್ಸಾಹ ಬತ್ತದಂತೆ ನೋಡಿಕೊಂಡ ವಿನ್ನಿಯ ನಾಯಕತ್ವ ಸುಲಭವಾದದ್ದಾಗಿರಲಿಲ್ಲ. ನನಗೆ ತಿಳಿದಂತೆ ಅಷ್ಟೊಂದು ದೀರ್ಘಕಾಲ ಒಂದು ಹೋರಾಟವನ್ನು ಮನ್ನಡೆಸಿದ ಮತ್ತೊಬ್ಬ ಹೆಣ್ಣುಮಗಳು ಚರಿತ್ರೆಯಲ್ಲಿ ಸಿಗುವುದು ವಿರಳಾತಿ ವಿರಳ.

ಮದುವೆಯಾದ ದಿನದಿಂದಲೇ (೧೯೫೮) ಹೋರಾಟದ ದೀಕ್ಷೆ ಪಡೆದ ವಿನ್ನಿ ಕೇವಲ ಐದು ವರ್ಷಟಗಳ ದಾಂಪತ್ಯ ಜೀವನದ ನಂತರ ಏಕಾಂಗಿಯಾದಳು. ಗಂಡ ಸೆರೆಮನೆ ಸೇರಿದ ನಂತರ ANC ಯ ನಾಯಕತ್ವ ವಹಿಸಿಕೊಂಡ ವಿನ್ನಿ ಆತ ಬಿಡುಗಡೆಯಾಗುವವರೆಗೆ ಚಳವಳಿಯನ್ನು ಮುನ್ನಡೆಸಿ ಆಫ್ರಿಕಾ ಜನರ ವಿಮೋಚನೆಗೆ ಹದವಾದ ನೆಲವನ್ನು ಸಿದ್ಧಪಡಿಸಿದಳು. ಗಂಡನ ಅನುಪಸ್ಥಿತಿಯಲ್ಲಿ ದ.ಆಫ್ರಿಕಾದ ಕಪ್ಪು ಜನರ ಪಾಲಿಗೆ ಭರಸೆ, ಕೆಚ್ಚಿನ ಮೂರ್ತನರೂಪವಾಗಿದ್ದಳು.

ವಿನ್ನಿಯ ನಾಯಕತ್ವ ಹೋರಾಟಗಾರರನ್ನು ಹುರಿದುಂಬಿಸುವ ಆಕೆಯ ಮಾತುಗಾರಿಕೆಯಲ್ಲಿತ್ತು. ಸಂಘಟನೆಯ ಕೌಶಲ್ಯದಲ್ಲಿತ್ತು. ಸುದ್ದಿಮಾಡಿ ಹೋರಾಟವನ್ನು ಜೀವಂತವಾಗಿಡುವ ಚತುರತೆಯಲ್ಲಿತ್ತು. ಹೋರಾಟಗಾರರ ಬಗ್ಗೆ ನಮಗಿದ್ದ ಕೆಲವು ಸಿದ್ಧ ಬಿಂಬಗಳನ್ನು ಒಡೆದು ಹಾಕಿದ್ದಳು. ಹೋರಾಟಗಾರರೆಂದರೆ ಸದಾ ಚಿಂತನೆಯ ಮುಖ ಹೊತ್ತ, ಜಗತ್ತಿನ ಭಾರವನ್ನೆಲ್ಲ ಹೊತ್ತು ಸಂಕಷ್ಟಪಡುವವರಂತೆ, ಪೀಚಲು ದೇಹದವರಂತೆ, ನಗುವಿಗೆ ಸೆಡ್ಡುಹೊಡೆದವರಂತೆ ಕಾಣುತ್ತಾರೆಂಬ ಜನಪ್ರಿಯ ಬಿಂಬದ ಎದುರು ವಿನ್ನಿ ಹೋರಾಟವನ್ನು ಪ್ರಚಾರ ಮಾಡಲು ಬಂದ ರೂಪದರ್ಶಿಯಂತಿದ್ದಳು.

ಆಫ್ರಿಕಾ ಸಂಸ್ಕೃತಿಯನ್ನು ಪ್ರತಿನಿಧಿಸುವ ಬಗೆಬಗೆಯ ಉಡುಗೆ ತೊಡುಗೆಗಳಿಗೆ ಆಧುನಿಕ ಶೈಲಿಯ ಸ್ಪರ್ಶ ನೀಡಿ ಸಿಂಗಾರಗೊಂಡು ಬೀದಿಗಿಳಿದು, ಮುಷ್ಟಿಯನ್ನು ಮಡಿಚಿ ಗಾಳಿಗೆ ಗುದ್ದಿ ಪ್ರಖ್ಯಾತ ಆಫ್ರಿಕನ್ ಸೆಲ್ಯೂಟ್ ಮಾಡುವ ಭಂಗಿಯಲ್ಲಿ ನಿಂತಳೆಂದರೆ ಜನ ಉಲ್ಲಸಿತರಾಗುತ್ತಿದ್ದರು. ಉತ್ಸಾಹದ ಚಿಲುಮೆಯಾಗುತ್ತಿದ್ದರು. ಅವಕಾಶ ಸಿಕ್ಕರೆ ಆ ಕಾಲಕ್ಕೆ ವಿನ್ನಿಯ ಚೆಲುವು, ಸ್ಪೂರ್ತಿ ಯ ಮಾತುಗಳಿಗಾಗಿ ಜಗತ್ತಿನ ಹೋರಾಟ ಮನೋಭಾವದ ಯುವಕರೆಲ್ಲ ದಕ್ಷಿಣ ಆಫ್ರಿಕಾಗೆ ಹೋಗಿಬಿಡುತ್ತಿದ್ದರೇನೋ!?

ದಕ್ಕಿಣ ಆಫ್ರಿಕಾದ ವಿಮೋಚನೆಯ ಚರಿತ್ರೆಯಲ್ಲಿ ವಿನ್ನಿಯದು ಬಹು ಮುಖ್ಯವಾದ ಅಧ್ಯಾಯ. ಗಂಡ ಜೈಲು ಸೇರಿದ ೨೭ ವರ್ಷ್ಗಳ ಕಾಲ ನಿರಂತರವಾಗಿ ಹೋರಾಡಿದ ಆಕೆಗೆ ಚಳವಳಿ ದಿನನಿತ್ಯದ ಕಾಯಕವಾಗಿತ್ತು. ಕಪ್ಪುಜನರು ಯಾವುದೇ ಸಂದರ್ಭದಲ್ಲಿ ಅಸಹಾಯಕರಾದಾಗ, ಪೊಲೀಸ್, ಪ್ರಭುತ್ವದ ದೌರ್ಜನ್ಯಕ್ಕೆ ಒಳಗಾದಾಗ ಓಡಿಬರುತ್ತಿದ್ದದ್ದು ಸದಾ ತೆರೆದ ಬಾಗಿಲಿನ ವಿನ್ನಿ ಮನೆಗೆ. ಒಬ್ಬ ಮಹಿಳೆ ತನ್ನ ಪ್ರೀತಿ, ಔದಾರ್ಯಕ, ಬುದ್ಧಿಮತ್ತೆ, ಒಳನೋಟಗಳಿಂದ ಒಂದು ಜನಾಂಗದ ಭರವಸೆಯಾಗಬಲ್ಲಳೆಂಬುದನ್ನು ತೋರಿಸಿದವಳು ವಿನ್ನಿ. ಹಾಗಾಗಿ ಜನರು ಅವಳನ್ನು ಪ್ರೀತಿಯಿಂದ “ದೇಶದ ತಾಯಿ” ಎಂದು ಕರೆಯುತ್ತಿದ್ದರು.

ಕರಿಯರ ಹೋರಾಟವನ್ನು ಸದೆಬಡಿಯಲು ಆಗಾಗ್ಗೆ ಹೊಸ ಕಾನೂನು ನೀತಿಗಳನ್ನು, ಕ್ರಮಗಳನ್ನು ಜಾರಿಗೊಳಿಸುತ್ತಿದ್ದ ಬಿಳಿಯರ ಸರ್ಕಾೊರದ ದಮನಕ್ಕೆ ಆಕೆ ಸಶಕ್ತ ಪ್ರತಿರೋಧವನ್ನು ಒಡ್ಡಿದಳು. ಈ ಅವಧಿಯಲ್ಲಿ ತನಗೆ ನೀಡಿದ ಹಿಂಸೆ, ಬಂಧನ, ಗಡೀಪಾರು, ಸೆರೆವಾಸಗಳ ಶಿಕ್ಷೆಗಳನ್ನು ಆಭರಣಗಳಂತೆ ಧರಿಸಿದ ವಿನ್ನಿ ಹಿಂಬಾಲಕರಲ್ಲಿ ಸ್ಥೈರ್ಯ ಕುಗ್ಗದಂತೆ ನೋಡಿಕೊಂಡಳು.

ಒಂದು ಬಾರಿ ಅವಳ ಮನೆ ನಿಗೂಢ ರೀತಿಯಲ್ಲಿ ಬೆಂಕಿಗೆ ಆಹುತಿಯಾಯಿತು. ೧೯೮೦ ರ ದಶಕದಲ್ಲಿ ಪ್ರಭುತ್ವ ಜಾರಿಮಾಡಿದ ಟೆರರಿಸಂ ಕಾಯ್ದೆಯ ಅಡಿಯಲ್ಲಿ ಮೊದಲು ಬಂಧನಕ್ಕೊಳಗಾದವರಲ್ಲಿ ವಿನ್ನಿ ಒಬ್ಬಳು. ಕಮ್ಯುನಿಸಂ ದಮನಕ್ಕಾಗಿ ಜಾರಿಗೆ ತಂದ ಕಾಯ್ದೆಯನ್ವಯ ಆಕೆಯನ್ನು ಬಂಧಿಸಿ ೧೯೬೯ರಲ್ಲಿ ಹದಿನೆಂಟು ತಿಂಗಳ ಏಕಾಂತದ ಸೆರೆವಾಸ ಶಿಕ್ಷೆಯನ್ನು ಪ್ರಿಟೋರಿಯಾದ ಜೈಲಿನಲ್ಲಿ ಅನುಭವಿಸಿದಳು..

೪೯೧ ದಿನ ಯಾರನ್ನೂ ಬೇಟಿಯಾಗದೆ ಸೆರೆವಾಸ ಅನುಭವಿಸಿದ ವಿನ್ನಿ ಹೊರಬಂದಾಗ ಕುಸಿದಿರಲಿಲ್ಲ. ಬದಲು ಜಗತ್ತಿನ ಗಮನ ಸೆಳೆದಿದ್ದಳು. ಹೋರಾಟಕ್ಕೆ ಹೊಸ ರಕ್ತ ತುಂಬಿದಳು.(೪೯೧ ಡೇಸ್ ಎಂಬ ಕೃತಿಯಲ್ಲಿ ಆಕೆಯ ಸೆರೆವಾಸದ ವಿವರಗಳಿವೆ)

೧೯೯೦ರಲ್ಲಿ ಮಂಡೇಲಾ ಬಿಡುಗಡೆಯಾದಾಗ ವಿನ್ನಿ ಅವನನ್ನು ಸ್ವಾಗತಿಸಿದಳು. ೨೭ ವರ್ಷ ಗಳ ನಂತರ ಗಂಡ ಹೆಂಡತಿಯರು ಒಟ್ಟಾದ ಚಿತ್ರವನ್ನು ಸೆರೆಹಿಡಿಯಲು ಛಾಯಾಗ್ರಾಹಕರು ಮುಗಿಬಿದ್ದರು. ವಿನ್ನಿ ಗಂಡನ ಬೆನ್ನನ್ನು ಬಲ ತೋಳಿನಿಂದ ಬಾಚಿ, ಎಡಗೈ ಮುಷ್ಟಿಯನ್ನು ಬಿಗಿ ಹಿಡಿದು ಗಾಳಿಗೆ ಗುದ್ದಿದ ಭಂಗಿ ಕಾಲದ ಚಲನೆಯನ್ನು ಕ್ಷಣ ಹಿಡಿದು ನಿಲ್ಲಿಸಿದಷ್ಟು ಸಶಕ್ತವಾಗಿತ್ತು.!

ಇಪ್ಪತೇಳು ವರ್ಷದ ನಂತರದ ಪುನರ್ಮಿ್ಲನ ಜಗತ್ತು ಪರಿಭಾವಿಸಿದಷ್ಟು ಸರಳವಾದದ್ದಾಗಿರಲಿಲ್ಲ. ಈ ದೀರ್ಘ ಅವಧಿಯಲ್ಲಿ ಅವರ ದೇಶ ಹಾದುಬಂದ ಬದಲಾವಣೆಗಳಂತೆಯೇ ಅವರಿಬ್ಬರ ಬದುಕಿನಲ್ಲೂ ಅನೇಕ ಪರಿವರ್ತನೆಗಳಾಗಿದ್ದವು. ದಕ್ಷಿಣ ಆಫ್ರಿಕಾ ಈಗ ಹೊಸ ವ್ಯವಸ್ಥೆಯತ್ತ ಹೆಜ್ಜೆ ಹಾಕಿತ್ತು.

ಜನತಂತ್ರ ವ್ಯವಸ್ಥೆಗೆ ದೇಶವನ್ನು ಅಣಿಮಾಡುವ ಕಾಯಕದಲ್ಲಿ ನಿರತನಾದ ಮಂಡೆಲಾಗೆ ಕುಟುಂಬದ ಬಗ್ಗೆ ಸಹಜವಾಗಿ ಕಾಳಜಿ ವಹಿಸಲಾಗಲಿಲ್ಲ. ಜೈಲಿನ ವಾಸ ಮಂಡೇಲಾನನ್ನು ಮೃದುವಾಗಿಸಿತ್ತು. ವೈರಿಗಳ ತಪ್ಪನ್ನು ಮನ್ನಿಸುವ ಸಂತನಾಗಿ ಪರಿವರ್ತನೆಗೊಂಡಿದ್ದ.

ಆದರೆ ವಿನ್ನಿಯ ಪಾಲಿಗೆ ಬಿಳಿಯರು ಇನ್ನೂ ಕಡು ವೈರಿಗಳೇ ಆಗಿದ್ದರು, ಅವರ ಬಗ್ಗೆ ಮೃದುಭಾವ ತಾಳುವುದು ಆಕೆಗೆ ಸಾಧ್ಯವೇ ಇರಲಿಲ್ಲ. ಆದರೆ ಮಂಡೆಲಾ ಜಗತ್ತಿಗೆ ಈಗ ಹೊಸ ಶಾಂತಿದೂತನಾಗಿದ್ದ. ಈ ಹಿಂದೆ ತಮ್ಮ ಅಸಹಾಯ ಪರಿಸ್ಥಿತಿಯಲ್ಲಿ ವಿನ್ನಿಯ ಕಡೆ ನೋಡುತ್ತಿದ್ದ, ಓಡಿ ಬರುತ್ತಿದ್ದ ಜನರು ಈಗ ಹೊಸ ನಾಯಕನತ್ತ ಹೋಗತೊಡಗಿದರು. ಈ ನಡುವೆ ಸಂಸಾರದಲ್ಲಿ ಬಿರುಕು ಬಿಟ್ಟಿತು. ಗಂಡ ಹೆಂಡತಿ ೧೯೯೨ರಿಂದ ಬೇರೆಬೇರೆಯಾಗಿ ವಾಸಿಸತೊಡಗಿದರು. ಆದರೂ ವಿನ್ನಿಯ ಜನಪ್ರಿಯತೆಗೆ ANC ನಲ್ಲಿ ಕೊರತೆಯಾಗಲಿಲ್ಲ. ಅವಳ ಕಡು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರು.

ಆದರೆ ಈ ಹಿಂದೆ ವಿನ್ನಿ ಮಾಡಿದ ಭಾಷಣ ಮತ್ತು ಹಲವು ಕೃತ್ಯಗಳು ವಿವಾದಕ್ಕೆಡೆಮಾಡಿದವು. ೧೯೮೬ರಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಆಕೆ ಬಿಳಿಯ ಜನರ ವಿರುದ್ಧ ಕಪ್ಪು ಜನರು ಮಾಡುವ ಹಿಂಸಾಕೃತ್ಯಗಳನ್ನು ವಿಮೋಚನೆಯ ಹೆಸರಿನಲ್ಲಿ ಸಮರ್ಥಿಸಿಕೊಂಡು ಹಿಂಸೆಗೆ ಪ್ರೋತ್ಸಾಹ ನೀಡಿದಳೆಂಬ ಆರೋಪ ಬಂತು.

ಬಿಳಿಯರ ಕುತ್ತಿಗೆಗೆ ಪೆಟ್ರೋಲ್ ತುಂಬಿದ ಟೈರುಗಳನ್ನು ಸುತ್ತಿ ಜೀವಂತ ಸುಡುವ ‘ನೆಕ್ಲೇಸಿಂಗ್’ ವಿಧಾನವನ್ನು ಸಮರ್ಥಿ್ಸಿಕೊಂಡಿದ್ದಳು. ಆಕೆಯ ಅಂಗರಕ್ಷಕರಿದ್ದ ಮಂಡೇಲಾ ಯುನೈಟೆಡ್ ಫುಟ್ ಬಾಲ್ ಕ್ಲಬ್ ನ  ಸದಸ್ಯರು ಆಕೆಯ ಆದೇಶದ ಮೇರೆಗೆ ನಾಲ್ವರನ್ನು ಅಪಹರಿಸಿ ೧೪ ವರ್ಷದ ಹುಡುಗನೊಬ್ಬನನ್ನು ತಮ್ಮ ಚಟುವಟಿಕೆಗಳ ಬೇಹುಗಾರಿಕೆ ನಡೆಸುತ್ತಿದ್ದಾನೆಂದು ಕೊಂದು ಹಾಕಿದ್ದರು.

ಹಲವಾರು ಜನರನ್ನು ಅಪಹರಿಸಿದ, ಕಾನೂನು ಬಾಹಿರವಾಗಿ ಪಂಚಾಯತ್ ನಡೆಸಿ ಶಿಕ್ಷೆ ನೀಡಿದ ಆರೋಪಗಳು ಈ ಕ್ಲಬ್ ಮೇಲೆ ಬಂದವು. ೧೯೯೧ರಲ್ಲಿ ಬಾಲಕನ ಕೊಲೆಯ ಪ್ರಕರಣದಲ್ಲಿ ವಿನ್ನಿಗೆ ೬ ವರ್ಷ ಸಜೆಯಾಯಿತು. ಮೇಲ್ಮನವಿಯ ನಂತರ ಶಿಕ್ಷೆ ಜುಲ್ಮಾನೆಗೆ ಇಳಿಯಿತು.

೧೯೯೪ರಲ್ಲಿ ದಕ್ಷಿಣಾ ಆಫ್ರಿಕಾದ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ ANC ಜಯಗಳಿಸಿತು. ನೆಲ್ಸನ್ ಮಂಡೇಲ ಅಧ್ಯಕ್ಷನಾದ. ವಿನ್ನಿ ಅವನ ಸಚಿವ ಸಂಪುಟದಲ್ಲಿ ಸಚಿವೆಯಾದಳು. ಆದರೆ ಹನ್ನೊದು ತಿಂಗಳೊಳಗೆ ಭ್ರಷ್ಟಾಚಾರದ ಆರೋಪ ಹೊತ್ತು ಪದಚ್ಯುತಿಯಾದಳು. ೧೯೯೬ರಲ್ಲಿ ಮಂಡೇಲಾ ದಂಪತಿಗಳ ವಿಚ್ಛೇದನಕ್ಕೆ ಅಧಿಕೃತ ಮುದ್ರೆ ಬಿತ್ತು.

ಸುಮಾರು ಮೂರೂವರೆ ದಶಕ ನಿರಂತರವಾಗಿ ಚಳವಳಿಯಲ್ಲಿ ತೊಡಗಿಸಿಕೊಂಡು ಪಡೆದ ವಿನ್ನಿಯ ಖ್ಯಾತಿಯ ಬೆಳಕು ಈ ಆರೋಪಗಳಿಂದ ಮಂಕಾಯಿತು. ಯಾರಿಗೂ ಪ್ರವೇಶವಿಲ್ಲದ ನಿರ್ಜನ ರಾಬೆನ್ ಜೈಲಿನಲ್ಲಿ ಮಂಡೆಲಾ ಸೆರೆಯಾಗಿದ್ದಾಗ ಅವನ ನೆನಪಿನ ದೀಪ ಆರದಂತೆ ಚಳವಳಿಯ ಎಣ್ಣೆಯನ್ನು ಸುರಿದು ಉರಿಸಿದ ವಿನ್ನಿ ಗಂಡ ಬಿಡುಗಡೆಗೊಂಡು ಬಂದ ನಂತರ ನೇಪಥ್ಯತ್ಯಕ್ಕೆ ಸರಿದುದು ಮಾತ್ರವಲ್ಲ ಹಳೆಯ ಕಾರ್ಯಗಳಿಗೆ ದೊಡ್ಡ ಬೆಲೆ ತೆರಬೇಕಾಯಿತು.

ಚರಿತ್ರೆಯ ಬೋಧಕನ ಮಗಳಾಗಿ ಹುಟ್ಟಿ ತಾನೇ ಒಂದು ದೇಶದ ಚರಿತ್ರೆಯ ಉಜ್ವಲ ಅಧ್ಯಾಯವಾದರು ಸಹ ಕೊನೆಯಲ್ಲಿ ಅಧ್ಯಾಯದ ಸಾಲುಗಳು ಕಲೆಸಿಹೋಗಿ ಅದು ವಿರೂಪವಾದದ್ದು ಕ್ರೂರ ವ್ಯಂಗ್ಯ.

೧೯೯೯ರಲ್ಲಿ ನಡೆದ ೨ನೇ ಸಂಸತ್ ಚುನಾವಣೆಯಲ್ಲಿ ವಿನ್ನಿ ಮತ್ತೆ ಆಯ್ಕೆಯಾದಳು. ಆದರೆ ಆಕೆಯ ಮೇಲಿದ್ದ ಆರೋಪಗಳಲ್ಲಿ ೪೫ ವಂಚನೆ ಮತ್ತು ೨೫ ಕಳ್ಳತನದ ಪ್ರಕರಣಗಳು ಸಾಬೀತಾಗಿ ಮೂರೂವರೆ ವರ್ಷಗಳ ಶಿಕ್ಷೆಗೆ ೨೦೦೩ರಲ್ಲಿ ಒಳಗಾದಳು. ಸಂಸತ್ ಸದಸ್ಯತ್ವಕ್ಕೆ ಆ ಕಾರಣದಂದ ರಾಜೀನಾಮೆ ನೀಡಿದಳು. ದೇಶದ ತಾಯಿ (Mother of the Nation)ಯಾಗಿದ್ದವಳನ್ನು ಈಗ ದೇಶದ ಮೊಸಳೆ (Mugger of the Nation) ಎಂದು ಕರೆದರು.

ಆದರೆ ಬಿಳಿಯರ ಆಳ್ವಿಕೆಯಿರಲಿ, ತಮ್ಮದೇ ಕಪ್ಪಜನರ ಪ್ರಭುತ್ವವಿರಲಿ, ನೂರಾರು ಪ್ರಕರಣಗಳ ಆರೋಪಗಳಿರಲಿ, ಯಾವುದಕ್ಕೂ ವಿನ್ನಿ ಎಂಬ ಅಗ್ನಿಕನ್ಯೆಯನ್ನು ಆರಿಸಲಾಗಲಿಲ್ಲ. ಆಕೆಯ ಚೈತನ್ಯವನ್ನು ಅದುಮಿಡಲಾಗಲಿಲ್ಲ. ತಮ್ಮದೇ ಜನರ ಬೇರೆ ಬೇರೆ ಅಧ್ಯಕ್ಷರ ನೀತಿಗಳನ್ನು ಸಾರಾಸಗಟಾಗಿ ಟೀಕಿಸುತ್ತಿದ್ದ ವಿನ್ನಿ ಕೊನೆಯವರೆಗೂ ಶಾಶ್ವತ ಹೋರಾಟಗಾರಳಾಗಿಯೇ ಉಳಿದಳು.

೨೦೧೦ರಲ್ಲಿ ವಿ.ಎಸ್ ನೈಪಾಲನ ಹೆಂಡತಿ, ಪತ್ರಕರ್ತೆ ನಾಡಿಯಾ ನೈಪಾಲ್ ಗೆ ನೀಡಿದ ಸಂದರ್ಶನದಲ್ಲಿ ಆಕೆ ತನ್ನ ಮಾಜಿ ಗಂಡ ನೆಲ್ಸನ್ ಮಂಡೇಲಾನನ್ನು ತರಾಟೆಗೆ ತೆಗೆದುಕೊಂಡಳು. ಆತ ಕರಿಯರನ್ನು ಕೈಬಿಟ್ಟ ಎಂದು ದೂರಿದಳು. ಬಿಳಿಯರ ಕೊನೆಯ ಅಧ್ಯಕ್ಷ ಡೀ ಕ್ಲಾರ್ಕ್ ಕರಿಯರನ್ನು ಕೊಲ್ಲುವ ವರ್ಣಭೇದ ನೀತಿಯ ಯಂತ್ರದ ಉಸ್ತುವಾರಿ ವಹಿಸಿದ್ದ. ಕೊನೆಗೆ ಹೋರಾಟದಿಂದ ಅಧಿಕಾರ ತ್ಯಜಿಸುವುದು ಅನಿವಾರ್ಯಯವಾಯಿತು. ಆದರೆ ಹಾಗೆ ಮಾಡಿ ದೊಡ್ಡನಾಯಕನಾದ. ಅಂಥಾ ಹಿಂಸಾಪಿಶಾಚಿಯ ಜೊತೆ ಮಂಡೇಲಾ ನೊಬೆಲ್ ಶಾಂತಿ ಪುರಸ್ಕಾರ ಪಡೆಯಲು ಹೋಗಿದ್ದನ್ನು ವಿನ್ನಿ ಖಂಡಿಸಿದಳು. (ನಂತರ ಈ ಹೇಳಿಕೆಯನ್ನು ನಿರಾಕರಿಸಿದಳು).

ಸಾರ್ವಜನಿಕ ಹೋರಾಟದಲ್ಲಿ ತೊಡಗಿಸಿಕೊಳ್ಳುವವರಿಗೆ ವಿನ್ನಿ ಮಂಡೇಲಾ ಒಂದು ಆದರ್ಶ ಮತ್ತು ಎಚ್ಚರಿಕೆ ಎಂದು ಹೇಳುತ್ತಾರೆ.

ಜಗತ್ತಿನ ಯಾವುದೇ ಹೋರಾಟಗಾರ ಪರಿಶುದ್ಧ ಅಪರಂಜಿಯಾಗಿರಲು ಸಾಧ್ಯವಿಲ್ಲ. ತಮ್ಮ ಹೋರಾಟದ ಭರದಲ್ಲಿ ಸ್ವಾರ್ಥದ ಲೇಪನವಿಲ್ಲದ ಹಲವು ತಪ್ಪು ಹೆಜ್ಜೆಗಳನ್ನು ಇಟ್ಟೇ ಇಡುತ್ತಾರೆ. ಅಂತಹ ತಪ್ಪು ಹೆಜ್ಜೆಗಳನ್ನು ವಿನ್ನಿ ಇಟ್ಟಿರಬಹುದು. ಆಕೆಯ ಮೇಲಿನ ಕಳ್ಳತನದ ಆರೋಪಗಳು ಕೊನೆಗೆ ವೈಯಕ್ತಿಕ ಲಾಭಕ್ಕಾಗಿ ಮಾಡಿದ್ದಲ್ಲವೆಂದು ಸಾಬೀತಾಯಿತು.

ಆದರೆ ಇಪ್ಪತ್ತನೆಯ ಶತಮಾನದಲ್ಲಿ ಮಾನವ ಹಕ್ಕು, ಘನತೆ ಮತ್ತು ಸ್ವಾತಂತ್ರ್ಯಕ್ಕಾಗಿ ನಡೆದ ಬಹುದೀರ್ಘ ಹೋರಾಟದ ನಾಯಕಿಯಾಗಿ ಅದಕ್ಕೊಂದು ತಾತ್ವಿಕ ಅಂತ್ಯ ಕೊಡಿಸುವುದರಲ್ಲಿ ಯಶಸ್ಸು ಕಂಡವಳು ವಿನ್ನಿ.

ಇಂದು ಜಗತ್ತಿನ ಬಹುದೊಡ್ಡ ನಾಯಕ, ಆದರ್ಶ ವ್ಯಕ್ತಿ ಎಂದು ಪರಿಗಣಿತವಾಗಿರುವ ನೆಲ್ಸನ್ ಮಂಡೇಲಾ ಎಂಬ ವ್ಯಕ್ತಿತ್ವವನ್ನು ಕಡೆದ ಪ್ರಧಾನ ಶಿಲ್ಪಿ ವಿನ್ನಿ ಎಂಬುದನ್ನು ಮರೆಯಬಾರದು. ನೆಲ್ಸನ್ ಮಂಡೇಲಾ ರಂಗಪ್ರವೇಶ ಮಾಡಿದ ಕೂಡಲೇ ವಿನ್ನಿಯ ಪ್ರಭಾವ ಕುಂದುತ್ತಾ ಕ್ರಮೇಣ ನೇಪಥ್ಯಕ್ಕೆ ಸರಿದದ್ದು, ಬೆಂಬಿಡದ ಆರೋಪಗಳಿಂದ ಆಕೆಯನ್ನು ಹಣಿದದ್ದು ನನ್ನಂತವರಲ್ಲಿ ನೋವು ಮೂಡಿಸಿದ್ದು ನಿಜ.

ಆದರೆ ಆಕೆಯ ಪರ ಮಾತನಾಡುವುದು ಪಾಪ ಎನ್ನವಷ್ಟರ ಮಟ್ಟಿಗೆ ನಮ್ಮ ಸಾರ್ವಜನಿಕ ಅಭಿಪ್ರಾಯ ಬದಲಾದದ್ದು ಮತ್ತು ಅದೇ ಗಟ್ಟಿಯಾದದ್ದು ಒಂದು ದೊಡ್ಡ ಅಚ್ಚರಿಯಾಗಿ ಕಾಣುತ್ತದೆ. ಕೊನೆಗೂ ಇದು ಪುರುಷರ ಪ್ರಪಂಚ ಎಂಬುದು ಸಾಬೀತಾಯಿತು. ಅದೇನೇ ಇರಲಿ, ನಮ್ಮ ಯೌವ್ವನದ ಕಾಲದಲ್ಲಿ ತನ್ನ ಹೋರಾಟದ ಮೂಲಕ ನಮ್ಮಂಥವರಲ್ಲಿ ಪುಳಕ ಮೂಡಿಸಿದ ಆ ಮಹಾನ್ ತಾಯಿಗೆ ಶರಣು.

4 Responses

  1. nutana doshetty says:

    THANK YOU FOR THIS WONDERFUL TRIBUTE TO WINNIE ( MANDELA)

    Nutana Doshetty

  2. chennaagide lekhana. vandanegalu sir

  3. Very good write up. Thank you.

  4. Vijay says:

    Very good article with actual facts & portray of Winnie. Thank you sir.

Leave a Reply

%d bloggers like this: