‘ಶಿಕಾರಿ’ಯ ಮರು ಓದು ಮತ್ತು ಮರು ವಿಶ್ಲೇಷಣೆಗಾಗಿ ವಂದನೆಗಳು.

ಎನ್ ಸಂಧ್ಯಾರಾಣಿ

ಮೊದಲ ಓದಿಗೆ ಬೆರಗು ಹುಟ್ಟಿಸಿದ್ದ ಶಿಕಾರಿಯನ್ನು ಮತ್ತೆ, ಮತ್ತೆ ಓದಿದಾಗ ನಾಗಪ್ಪ ಅಪಾರ ಆತ್ಮಮರುಕವುಳ್ಳವನಾಗಿಯೇ ಕಾಣುತ್ತಾನೆ.

ನನಗೆ ಗೊತ್ತಿದ್ದ ಹಾಗೆ ’ಶಿಕಾರಿ’ ಕಾರ್ಪೊರೇಟ್ ಜಗತ್ತಿನ ತಲ್ಲಣಗಳನ್ನು ಒಡೆದು ಹೇಳಿದ ಕನ್ನಡದ ಮೊದಲ ಕಾದಂಬರಿ.

ಈಗ ಕಾರ್ಪೊರೇಟ್ ಜಗತ್ತು ಇಷ್ಟು ಬೆಳೆದಿದೆ, ಆ ಜಗತ್ತಿನಿಂದಲೇ ಬಂದ ಬರಹಗಾರರು ನಮ್ಮ ನಡುವೆ ಬಹಳಷ್ಟು ಮಂದಿ ಇದ್ದಾರೆ. ಆದರೆ ಚಿತ್ತಾಲರಷ್ಟು ತೀವ್ರವಾಗಿ ಆ ಲೋಕದ ತಳಮಳಗಳನ್ನು ಕಟ್ಟಿಕೊಡುವ ಕಾದಂಬರಿ ಕನ್ನಡದಲ್ಲಿ ಇನ್ನೊಂದಿಲ್ಲ.

ಏಕಕಾಲಕ್ಕೆ ಪತ್ತೇದಾರಿ ಕಾದಂಬರಿಯಾಗಿಯೂ, ಮನೋವಿಶ್ಲೇಷಣಾ ಕಾದಂಬರಿಯಾಗಿಯೂ ಶಿಕಾರಿ ಕಾಣುತ್ತದೆ. ಬದುಕನ್ನು ಹುಡುಕಿಕೊಂಡು ಹನೇಹಳ್ಳಿಯಿಂದ ಮುಂಬೈಗೆ ಬರುವ ನಾಗಪ್ಪ ಬೆನ್ನಿಗೆ ಆತ್ಮಘಾತುಕತೆಯನ್ನು, ಎದೆಯ ಮೇಲೆ ಅದರ ನಿಶಾನಿಯನ್ನೂ ಹೊತ್ತುಬಂದಿರುತ್ತಾನೆ.

ಶಿಕಾರಿಯಲ್ಲಿ ಒಂದು ಸಲವೂ ಎದುರಾಗದೆ ಕೇವಲ ತನ್ನ ಇರುವಿಕೆಯಿಂದಲೇ ನಾಗಪ್ಪನ ಬದುಕನ್ನು ಸಹನೀಯಗೊಳಿಸುವವಳು ರಾಣಿ.

ತನ್ನ ಚಿಕ್ಕ ಚಿಕ್ಕ ಕಣ್ಣುಗಳಲ್ಲಿ, ಕೆನ್ನೆಗಳ ನಗುವಿನಲ್ಲಿ, ಅವನು ಇರುವಂತೆ ಅವನನ್ನು ಒಪ್ಪಿಕೊಳ್ಳಬಲ್ಲ, ತನ್ನ ಪ್ರೇಮದಲ್ಲಿ ಅವನೆದೆಯ ಒಳಗಿನ ಬೆಂಕಿಯನ್ನು ತಂಪಾಗಿಸಬಲ್ಲ ರಾಣಿ. ಆದರೆ ಅವಳನ್ನು ನೋಡಹೋಗಲು ನಾಗಪ್ಪನಿಗೆ ಕಡೆಯವರೆಗೂ ಬಿಡುವಾಗುವುದೇ ಇಲ್ಲ. ಮೇರಿಯ ಒಂದು ಕರೆ, ನೆರೆಮನೆಯ ಜಾನಕಿಯ ಒಂದು ನೋಟ, ರೀನಾಳ ಜೊತೆಯಲ್ಲಿ ಕಳೆದ ಘಳಿಗೆಗಳು, ಡಯಾನಾಳ ಸಾಮಿಪ್ಯ, ಥ್ರೀಟಿಯ ಸ್ಪರ್ಶ ಎಲ್ಲಕ್ಕೂ ಹಂಬಲಿಸುವ ನಾಗಪ್ಪ ರಾಣಿಯೆಡೆಗೆ ಮಾತ್ರ ಇನ್ನಿಲ್ಲದ ಉದಾಸೀನತೆಯನ್ನು ತೋರಿಸುತ್ತಾನೆ.

ಅವಳಿಗೆ ಕಳಿಸುವ ೨೦೦ ರೂಗಳ ಮನಿಆರ್ಡರ್ ಅವಳೆಡೆಗಿನ ತನ್ನ ಕರ್ತವ್ಯವನ್ನು ತೀರಿಸುತ್ತದೆ ಎಂದು ತಿಳಿದುಕೊಂಡಿರುತ್ತಾನೆ. ನಾಗಪ್ಪನ ದುರಂತ ಮತ್ತು ಕೆಡುಕು ಇರುವುದು ಇಲ್ಲಿ. ತನ್ನ ಸುತ್ತಲೂ ಶಿಕಾರಿಗೆ ನಿಂತ ಎಲ್ಲರೆಡೆಗೂ ಸಹಾಯಕ್ಕಾಗಿ ಕೈಚಾಚುವ ನಾಗಪ್ಪ, ಎಲ್ಲರನ್ನೂ ಕ್ರೂರಿಗಳು ಎಂದು ತೀರ್ಮಾನಿಸುವ ನಾಗಪ್ಪ ರಾಣಿಯೆಡೆಗೆ ತಾನೂ ಸಹ ಅಷ್ಟೇ ಕ್ರೂರಿಯಾಗಿದ್ದೆ ಎಂದು ಅರ್ಥ ಮಾಡಿಕೊಳ್ಳುವುದೇ ಇಲ್ಲ.

‘ಶಿಕಾರಿ’ಯ ಮರು ಓದು ಮತ್ತು ಮರು ವಿಶ್ಲೇಷಣೆಗಾಗಿ ವಂದನೆಗಳು.

Leave a Reply