ರಂಗಭೂಮಿಯಲ್ಲೂ ಇದೆ ‘ಮೋನೋ ಕಲ್ಚರ್’

ದಿನಾಂಕ 31/3/2018 ರಂದು ದಾವಣಗೆರೆಯಲ್ಲಿ ನಡೆದ

ರಂಗ ಸಂಘಟಕರ ಸಮಾವೇಶದಲ್ಲಿ

ಮಾಡಿದ ಭಾಷಣ

ಇಲ್ಲಿ ಸೇರಿರುವ ಎಲ್ಲ ರಂಗ ಗೆಳೆಯರೆ,  ನನ್ನನ್ನು ಎರಡನೆಯ ರಂಗ ಸಂಘಟಕರ ಸಮಾವೇಶದ ಅಧ್ಯಕ್ಷನನ್ನಾಗಿಸಿದ  ನಿಮಗೆಲ್ಲರಿಗೆ ಕೃತಜ್ಙ. ನನ್ನಮುಂದೆ ಕುಳಿತ ಎಲ್ಲ  ಜಾನಪದ ಕಲಾವಿದರಿಗೆ ಮೊದಲಿಗೆ ವಂದಿಸುತ್ತೇನೆ. ದಾರಿಯುದ್ದಕ್ಕೂ ನಿಮ್ಮ ಕಲಾವೈಭವವನ್ನು ನೋಡುತ್ತ ಬಂದೆ. ನೀವೆಲ್ಲ ನಿಜವಾದವರು ನಾವೆಲ್ಲ ನಿಮ್ಮ  ಪ್ರತಿಬಿಂಬಗಳು- ಪ್ರತಿರೂಪಿಗಳು ಅಷ್ಟೆ.

ಮೆರವಣಿಗೆಯ ಮೂಲಕ ನನ್ನನ್ನು ಇಲ್ಲಿಗೆ ಕರೆತಂದಿದ್ದೀರಿ, ನಾನು ಇದುವರೆಗೆ ಯಾವುದೇ ಸಂದರ್ಭದಲ್ಲೂ ಮೆರವಣಿಗೆಯಲ್ಲಿ ವಾಹನವೇರಿಯೂ ಹೋದವನಲ್ಲ. ವೈಯಕ್ತಿಕವಾಗಿ ಅದು ನನಗೆ ಸಮ್ಮತವಲ್ಲ. ನಿಮ್ಮೆಲ್ಲರ ಪ್ರೀತಿಗೆ ಮಣಿದು ಮೆರಣಿಗೆಯಲ್ಲಿ ಬಂದೆ ಎಂದರೆ, ಅದು ಸುಳ್ಳಾಗುತ್ತದೆ, ಆತ್ಮವಂಚನೆಯಾಗುತ್ತದೆ.  ಯಾಕೆಂದರೆ ನಾನು ಅನೇಕ ವರ್ಷಗಳಿಂದ ನೇರವಾಗಿ ಜನಪರ ಚಳುವಳಿಗಳಲ್ಲಿ ಚುನಾವಣೆಗಳಲ್ಲಿ ಕಾರ್ಯಕರ್ತನಾಗಿ ಭಾಗವಹಿಸುತ್ತ ಬಂದವನು. ರಾಜಕಾರಣಿಗಳು ರೋಡ್ ಶೋ ನಡೆಸುವುದನ್ನು, ಗೆದ್ದವರನ್ನು ಮೆರವಣಿಗೆಯಲ್ಲಿ ಒಯ್ಯುವುದನ್ನು ಕಂಡಾಗ ನನಗೂ  ಹಾಗೆ ಹೋಗುವಾಗ ಅವರ ಮನಸ್ಥಿತಿ ಹೇಗಿರಬಹುದೆಂದು ಕುತೂಹಲವಾಗಿ ನಾನು ಕೂಡಾ ಒಮ್ಮೆ ಹಾಗೆ ಹೋದರೇನು ಅನ್ನಿಸುತ್ತಿತ್ತು.

ಇನ್ನೊಂದು,  ನಾವೆಲ್ಲರೂ ಒಂದು ದಿನ ಕೊನೆಗೆ ಮೆರೆವಣಿಗೆಯಲ್ಲಿ ಹೋಗುವವರೇ. ಆದರೆ ಹಾಗೆ ಹೋಗುವಾಗ ನಮಗೆ ಅದರ ಅನುಭವವಾಗದು !. ನನಗೆ ಇಂದು ಈ ಎರಡು ಅನುಭವಗಳನ್ನು ಒಟ್ಟಿಗೆ ಕಂಡಂತಾಯಿತು.

‘ಮರಣವೇ ಮಹಾನವಮಿ’ ಎಂದರು ಶರಣರು, ನಮ್ಮ ಬದುಕು ಸಾರ್ಥಕವಾಗಿದ್ದರೆ, ಜೀವಪರವಾಗಿದ್ದರೆ, ಆಗ ಅದು ಮಹಾನವಮಿಯೂ ಆಗುತ್ತದೆ. ಅಗಲಿಕೆಯ ದುಖಃದ ನಡುವೆ ಸಾರ್ಥಕವೂ ಆಗುತ್ತದೆ. ಅಂತಹ ಸಾರ್ಥಕ ಬದುಕಿಗೆ ನೆರವಾಗುವಂತೆ ಮನಸ್ಸನ್ನು ಹದಗೊಳಿಸುವಲ್ಲಿ ಕಲೆಯ ಪಾತ್ರ ದೊಡ್ಡದು ಎಂದು ನಂಬಿ ಇಲ್ಲಿ ಸೇರಿರುವ ನಾವೆಲ್ಲ ಬದುಕನ್ನು ಸಹನೀಯಗೊಳಿಕೊಳ್ಳೋಣ ಎಂದು ಹೇಳುತ್ತ ಮುಖ್ಯ ವಿಚಾರಕ್ಕೆ  ಬರುತ್ತೇನೆ.

ಇಂದಿನ ಗೋಷ್ಟಿಗಳಲ್ಲಿ ಹೆಚ್ಚು ಯುವಕರನ್ನು ಕಾಣುತ್ತಿದೆ. ಹಾಗೇ ಪ್ರೇಕ್ಷಕರಲ್ಲೂ ಎಳೆಯರಿದ್ದಾರೆ. ಆದ್ದರಿಂದ ಪ್ರಾರಂಭದಲ್ಲಿ ನಮಗೆಲ್ಲರಿಗೂ ಈಗಾಗಲೇ ತಿಳಿದಿರುವ, ರಂಗಭೂಮಿ ಹಿನ್ನೆಲೆಯನ್ನೂ ಸ್ಥೂಲವಾಗಿ ವಿವರಿಸಿ ನಂತರ ಮುಂದೆ ಹೋಗುತ್ತೇನೆ. ಮತ್ತು ನಾನಿಲ್ಲಿ ಪ್ರಸ್ತಾಪಿಸಿದ ವಿಷಯಗಳು, ನನ್ನ ಅನುಭವದ ಮೂಲಕ ಕಂಡುಕೊಂಡವುಗಳಾದರೂ  ಗೋಷ್ಟಿಗಳಲ್ಲಿ ಮತ್ತು ನಂತರವೂ ಚರ್ಚೆಯಾಗಿ ಇನ್ನಷ್ಟು ವಿಸ್ತರಿಸಲು, ಸ್ಫುಟಗೊಳಿಸಲು ಪ್ರಯತ್ನಿಸಿ ಒಂದು ಒಟ್ಟಾಭಿಪ್ರಾಯ  ರೂಪಿಸಬೇಕಾಗಿ ನಿಮ್ಮನ್ನು ಕೇಳಿಕೊಳ್ಳುತ್ತೇನೆ.

ನಮಗೆಲ್ಲರಿಗೂ ತಿಳಿದಿರುವಂತೆ  ರಂಗಭೂಮಿಯೆನ್ನುವುದು, ಜಾನಪದದಿಂದ ಹುಟ್ಟಿ, ನಿಧಾನವಾಗಿ ಶಿಷ್ಟಕಲೆಯಾಗಿ  ಬೆಳೆದು ನಂತರದ ದಿನಗಳಲ್ಲಿ  ವೃತ್ತಿಯೂ ಆಯಿತು. ಎಲ್ಲ ಕಲೆಗಳ ಹಾಗೆ ಇದೂ ಕೂಡಾ ರಾಜಾಶ್ರಯ ಮತ್ತು ಜನಾಶ್ರಯಗಳಿಂದ ಬೆಳೆಯಿತು ಮತ್ತು ಉಳಿಯಿತು. ಆಗ ಸಂಘಟನೆಯೆಂಬ ಹೆಸರಿಲ್ಲದೆ ಇವೆಲ್ಲ ಘಟಿಸುತ್ತಿದ್ದವು. ಕೋಲಾಟ, ಹರಿಕಥೆ, ಯಕ್ಷಗಾನ ಗೊಂಬೆಯಾಟ ಇಂತಹವು ಸಮುದಾಯದ ಕಲೆಗಳಾಗಿ ಬೆಳೆದಿವೆ.

ವೃತ್ತಿ ಕಂಪೆನಿಗಳ ಉದಯವಾದ ನಂತರ ಅವು  ಕೂಡಾ ಎರಡು ರೀತಿಯ ಸಂಘಟನೆಯನ್ನು ಬಳಸಿಕೊಂಡವು.  ಒಂದು ಸ್ವಂತ ಸಂಘಟನೆ ಅಂದರೆ ಸ್ವಂತವಾಗಿ ಊರಿಂದೂರಿಗೆ ಹೋಗಿ ಎಲ್ಲ ವ್ಯವಸ್ಥೆಗಳನ್ನು ತಾವೇ ಮಾಡಿಕೊಂಡು ಪ್ರದರ್ಶನ ನೀಡುವುದು. ಇನ್ನೊಂದು ಸಮುದಾಯ ಇಲ್ಲವೆ ವ್ಯಕ್ತಿಗಳಿಂದ ಗುತ್ತಿಗೆಯ ಮೂಲಕ ಸಂಘಟಿಸಿ ಪ್ರದರ್ಶನಗಳ ವ್ಯವಸ್ಥೆ ಮಾಡಿಕೊಳ್ಳುವುದು. ಇವೆಲ್ಲ ವಿವಿಧ ಹಂತಗಳು.

ಆಧುನಿಕ ರಂಗಭೂಮಿಯ ಹುಟ್ಟಿನ ನಂತರ ಕಲೆ ಮತ್ತು ಸಾಹಿತ್ಯಗಳ ಅಂತರಾವಲಂಬನೆ- ಕೊಳುಕೊಡುಗೆಗಳು ಉನ್ನತ ಹಂತವನ್ನು ತಲಪಿದವು. ಸಾಹಿತ್ಯದಲ್ಲಿ ನವ್ಯ, ಬಂಡಾಯ ಮುಂತಾದುವು ಬಂದಂತೆಯೇ ರಂಗಭೂಮಿಯಲ್ಲೂ ಇದೇ ರೀತಿಯ ಬೆಳವಣಿಗೆ ಕಂಡುಬಂದಿತು. ಹೊಸ ತುಡಿತಗಳ ಪ್ರಕಾರವಾಗಿಯೇ ನವ್ಯ-ಅಸಂಗತ  ರಂಗಭೂಮಿ ಹುಟ್ಟಿತು. ಬೀದಿನಾಟಕಗಳು ಬಂದವು, ಹವ್ಯಾಸಿ ನೆಲೆಯಲ್ಲಿ ರಂಗತಂಡಗಳಾದವು.  ಈ ಹಂತದಲ್ಲಿ ರಂಗ ಸಂಘಟನೆಯೆಂಬ ಹೊಸ ವ್ಯಾಖ್ಯಾನವೂ ರಂಗ ಸಂಘಟಕನೆಂಬ ವ್ಯಕ್ತಿಯೂ ಪ್ರತ್ಯಕ್ಷರಾದರು.

ಇದರಿಂದ ಕೆಲವು ಅನುಕೂಲಗಳೂ ಹಾಗೇ ಸಮಸ್ಯೆಗಳೂ ಪ್ರಾರಂಭವಾದವು. ಹವ್ಯಾಸಿ ನೆಲೆಯಲ್ಲಿ ಹೆಚ್ಚಾಗಿ ಸಾಮುದಾಯಿಕ ನೆಲೆಯಲ್ಲಿದ್ದ ರಂಗ ಸಂಘಟನೆ ನಂತರದ ದಿನಗಳಲ್ಲಿಅನೇಕ ಬಾರಿ ಒಬ್ಬ ವ್ಯಕ್ತಿ ಅಥವಾ ವ್ಯಕ್ತಿಗಳ  ಮರ್ಜಿ, ಒಲವುಗಳನ್ನು ಅವಲಂಬಿಸುವಂತಾಯಿತು. ಅದೇ ಕಾಲಕ್ಕೆ ಸಂಘಟಕನೆಂಬ ವ್ಯಕ್ತಿಯ ಸಮಸ್ಯೆಗಳೂ ಹೆಚ್ಚಾದವು. ಎಷ್ಟೋ ಬಾರಿ ಪ್ರದರ್ಶನ ಮುಗಿಯುವ ವೇಳೆಗೆ ಆತ ಹೈರಾಣಾಗಿ ಹೋಗುವಂತಾಯಿತು.

ರೆಪರ್ಟರಿಗಳ ಮತ್ತು ರಂಗ ಶಿಕ್ಷಣ ಕೇಂದ್ರಗಳ ಹುಟ್ಟಿನ ನಂತರ ಇದು ಮಜಲಿಗೇರಿತು.  ಪ್ರಾರಂಭದಲ್ಲಿ ರಂಗ ಶಿಕ್ಷಣ ಕೇಂದ್ರಗಳೇ ರೆಪರ್ಟರಿಗಳನ್ನು ಸ್ಥಾಪಿಸಿದವು. ನಂತರದ ದಿನಗಳಲ್ಲಿ ಇಲ್ಲಿಂದ ಶಿಕ್ಷಣ ಪಡೆದ ಹಲವರು ಸಣ್ಣ ಸಣ್ಣ ತಂಡಗಳನ್ನು ಕಟ್ಟಿಕೊಂಡು ನಾಟಕ ಪ್ರದರ್ಶನಕ್ಕೆ ಸಿದ್ಧರಾದರು. ಈಗ ರಂಗ ಸಂಘಟಕರುಗಳ ಸಂಖ್ಯೆಯೂ  ಏರಿತು. ಜೊತೆಗೆ ಹಲವು ಊರುಗಳಲ್ಲಿ ನಾಟಕ ಪ್ರದರ್ಶನಗಳು ನಡೆಯತೊಡಗಿದವು. ಇದರಿಂದಾಗಿ ಪ್ರಪಂಚದ ಅತ್ಯುತ್ತಮ ನಾಟಕಗಳು  ಹೊಸ ಹೊಸ ಪರಿಕಲ್ಪನೆಗಳಲ್ಲಿ ಪ್ರೇಕ್ಷಕನನ್ನು ತಲಪುವಂತಾಯಿತು.

ರಾಷ್ಟ್ರೀಯ ನಾಟಕ ಶಾಲೆಯ ಸ್ಥಾಪನೆಯಾದ ನಂತರ ಭಾರತೀಯ ರಂಗಪ್ರಕಾರದ ಹುಡುಕಾಟವು ಪ್ರಾರಂಭವಾಗಿ  ಭಾರತದ ವಿವಿಧ ಭಾಗಗಳ ಎಲ್ಲ ರಂಗ ಪ್ರಕಾರಗಳ ವೈವಿಧ್ಯಗಳನ್ನೆಲ್ಲ ಬಳಸಿಕೊಂಡ ರಂಗ ಪ್ರಕಾರವೊಂದು   ಸಿದ್ಧವಾಯಿತು. ಇದರಿಂದ ಈಗ ಒಂದು ರೀತಿಯ ಎಲ್ಲ ರಂಗ ಪ್ರಕಾರಗಳ ಸಮಿಶ್ರವಾದ ನಾಟಕರೂಪವೊಂದು ಸಿದ್ಧವಾಗಿ ಯಾವುದೇ ನಾಟಕವನ್ನು ಭಾರತದ ಯಾವ ಭಾಗದಲ್ಲಿ ಬೇಕಾದರೂ ಸುಲಭವಾಗಿ ತಲಪಿಸಬಲ್ಲು ಸರಕೊಂದು ಸಿದ್ಧವಾಯಿತು.

ರಾಷ್ಟ್ರೀಯ ನಾಟಕ ಶಾಲೆಗಳಿಂದ ಕಲಿತು ಬಂದವರು ಇದನ್ನು  ಉಳಿದ ರಂಗ ಶಿಕ್ಷಣ ಕೇಂದ್ರಗಳಿಗೂ ವಿಸ್ತರಿಸಿದರು. ಇದರಿಂದ ಭಾರತದ ಯಾವುದೇ ಭಾಗದಲ್ಲಿ ಸಿದ್ಧವಾಗುವ ನಾಟಕವಿರಲಿ ಹೆಚ್ಚು ಕಡಿಮೆ ಒಂದೇ ಅಚ್ಚಿನಲ್ಲಿ ತಯಾರಾದಂತೆ ಕಾಣತೊಡಗಿದವು. ಪ್ರಾದೇಶಿಕ ವೈಶಿಷ್ಟಗಳು ಮರೆಯಾದವು. ಎಲ್ಲೋ ಕೆಲವರು  ಅಂದರೆ ರಥನ್ ಥಿಯ್ಯಾಂ, ಪಣಿಕ್ಕರ್ ಅಂಥವರು ಮಾತ್ರ ವ್ರತ ಹಿಡಿದವರಂತೆ ಪ್ರಾದೇಶಿಕ ವೈಶಿಷ್ಟಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದರು. ರಂಗ ಶಿಕ್ಷಣ ಮುಗಿಸಿ ಬಂದವರಲ್ಲಿ ಅನೇಕರು ರಂಗ ಶಿಬಿರಗಳ ಮೂಲಕ ಇದೇ  ಪ್ರಕಾರಗಳಲ್ಲಿ ಹವ್ಯಾಸಿಗಳನ್ನು ತಯಾರು ಮಾಡಿದರು.

ಈ ಎಲ್ಲ ಬೆಳವಣಿಗೆಗಳಿಂದಾಗಿ ಹವ್ಯಾಸಿ ರಂಗಭೂಮಿಯಲ್ಲೂಇದೇ ಪುನರಾವರ್ತನೆ ನಡೆಯಿತು. ಅವರೂ ಈ ನಾಟಕಗಳನ್ನೇ ಅನುಕರಿಸಿದರು. ಇದರಿಂದಾಗಿ ರಂಗಭೂಮಿ ನಾವು ಕೃಷಿಯಲ್ಲಿ ಹೇಳುವ “ಮೋನೋ ಕಲ್ಚರ್” ಬೆಳೆಯಂತಾಯಿತು.

ಆ ನಂತರ ಸಂಘಟನೆಯ ಸಮಸ್ಯೆಗಳು ಇನ್ನಷ್ಟು ಹೆಚ್ಚಾದವು. ಯಾಕೆಂದರೆ ಪ್ರದರ್ಶನಕ್ಕೆ ತಯಾರಾಗುವ ನಾಟಕಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಯಿತು. ಆದರೆ ಅದರ ಪ್ರದರ್ಶನಕ್ಕೆ ಬೇಕಾದ ಸಂಖ್ಯೆಯಲ್ಲಿ ಕೇಂದ್ರಗಳು ಬೆಳೆಯಲಿಲ್ಲ. ಆಗ ಪ್ರಾಯೋಜಕತ್ವ ಎಂಬ ಮಾರುಕಟ್ಟೆ ವ್ಯವಸ್ಥೆ ರಂಗಭೂಮಿಗೂ ಬಂತು. ಸರ್ಕಾರದ ಅನುದಾನಗಳು ಪ್ರಾರಂಭವಾಗಿ ಅದು ಹೆಚ್ಚಾಗುತ್ತ ಹೋಯಿತು. ಬೀದಿ ನಾಟಕವಂತೂ ಮಾರಾಟವಾಗಿ ಹೋಗಿ ಪ್ರಚಾರ ಪತ್ರಿಕೆಯಂತಾಯಿತು.

ನಾನೊಂದು ಉದಾಹರಣೆ ಮೂಲಕ ಕೆಲವು ವಿಚಾರಗಳನ್ನು ಮಂಡಿಸುತ್ತೇನೆ. ನಾನೊಬ್ಬ ಕೃಷಿಕ ಹಾಗೇ ರಂಗ ಕೃಷಿಕನೂ ಹೌದು.

ಭೂಮಿಯಲ್ಲಿ ಕೃಷಿ ಮಾಡಬೇಕಾದರೆ ಕೃಷಿ ಭೂಮಿಯ ಪ್ರಮಾಣಕ್ಕೂ ಸಹಜವಾದ ಕಾಡಿನ ಪ್ರಮಾಣಕ್ಕೂ ಒಂದು ಅನುಪಾತವಿರಬೇಕಾಗುತ್ತದೆ. ಅದು ಸುಮಾರಾಗಿ ಒಂದು ಎಕರೆ ಕೃಷಿ ಭೂಮಿಗೆ ಮೂರು ಎಕರೆಗಳಷ್ಟು ಕಾಡಿರಬೇಕೆಂದು ಅನುಭವದ ಮಾತು. ಆ ಕಾಡಿನ ಸಹಜ ಸಾರವನ್ನುಬಳಸಿಕೊಂಡು  ಕೃಷಿ ಉಳಿಯಬೇಕು. ಇಲ್ಲವಾದಲ್ಲಿ ಭೂಮಿ ಬರಡಾಗುವುದು ಖಂಡಿತ.

ರಂಗಭೂಮಿಯಲ್ಲೂ ಅಷ್ಟೆ ವೃತ್ತಿನಾಟಕಗಳು ಮತ್ತು ರೆಪರ್ಟರಿಗಳೆಂದರೆ ಕೃಷಿ, ಹವ್ಯಾಸಿ ರಂಗಭೂಮಿಯೆನ್ನುವುದು ಸಹಜ ಕಾಡು. ಇದರ ಬಲದಿಂದಲೇ ವೃತ್ತಿ-ರೆಪರ್ಟರಿಗಳು ಉಳಿಯಬೇಕು. ಮುಖ್ಯವಾಗಿ ಆ ನಾಟಕಗಳಿಗೆ ಬೇಕಾದ ಪ್ರೇಕ್ಷಕರು ಸಿದ್ಧರಾಗುವುದೇ ಇಲ್ಲಿಂದ. ಈ ವಿಚಾರದಲ್ಲಿ ನಗರ ಮತ್ತು ಗ್ರಾಮೀಣ ಹವ್ಯಾಸಿಗಳಲ್ಲಿ ಸ್ವಲ್ಪ ಮಟ್ಟಿನ ವ್ಯತ್ಯಾಸವಿದೆ, ನಗರ ಕೇಂದ್ರಗಳಲ್ಲಿ ಒಂದಷ್ಟು ಜನರು ಶಿಕ್ಷಿತರು ಆಸಕ್ತರು ಸಿಗುವುದರಿಂದ ಅಲ್ಲಿ ನಮ್ಮ ಆಧುನಿಕ  ನಾಟಕಗಳಿಗೆ ಸ್ವಲ್ಪ ಮಟ್ಟಿಗೆ ಸಿದ್ಧ ಪ್ರೇಕ್ಷಕರು ಸಿಗುತ್ತಾರೆ. ಆದರೆ ಅಲ್ಲೂ ಕೂಡಾ ಜನಸಂಖ್ಯೆ ಪ್ರಮಾಣಕ್ಕೆ ಹೋಲಿಸಿದರೆ ನಾಟಕದ ಪ್ರೇಕ್ಷಕರ ಸಂಖ್ಯೆ ಸೀಮಿತವಾದುದು.

ಗ್ರಾಮೀಣ ಪ್ರದೇಶದಲ್ಲಿ ಇಷ್ಟೂ ಇಲ್ಲ, ಗ್ರಾಮೀಣ ಪ್ರದೇಶದಲ್ಲಿ ಆಧುನಿಕ ನಾಟಕಗಳಿಗೆ ಪ್ರೇಕ್ಷಕರನ್ನು ನಿರಂತರ ರಂಗ ಚಟುವಟಿಕೆಗಳ ಮೂಲಕ ಸಿದ್ದಗೊಳಿಸಬೇಕಾಗುತ್ತದೆ. ಅದಕ್ಕೆ ಸಾಮಾನ್ಯ ನಗೆ ನಾಟಕಗಳಿಂದ ಪ್ರಾರಂಭಿಸಿ ನಿಧಾನವಾಗಿ ಗಂಭೀರ ನಾಟಕಗಳನ್ನು ಪರಿಚಯಿಸುವ  ಪ್ರಯತ್ನವನ್ನು ಮಾಡಬೇಕು. ಇದಕ್ಕೆ ವರ್ಷಗಳ ಪರಿಶ್ರಮ ಬೇಕು. ಒಮ್ಮೆಗೇ ಆಧುನಿಕ ನಾಟಕಗಳನ್ನು ಅವರು  ಸ್ವೀಕರಿಸಲಾರರು. ನಮ್ಮ ಜಿಲ್ಲೆಯಲ್ಲೇ ನಾವು ಅನೇಕ ಕಡೆಗಳಲ್ಲಿ ನಮ್ಮ ನಾಟಕ ಪ್ರದರ್ಶನಗಳ ಮೊದಲು ಆಧುನಿಕ ನಾಟಕಗಳನ್ನು ಹೇಗೆ ನೋಡಬೇಕು ಎಂದು ಇಪ್ಪತ್ತು ನಿಮಿಷಗಳಷ್ಟು ವಿವರಿಸುವ ಪರಿಪಾಠ ಇಟ್ಟುಕೊಂಡಿದ್ದೇವೆ, ಇದರಿಂದ ಅನುಕೂಲವಾಗುತ್ತದೆ.

ಆರಂಭದ ವರ್ಷಗಳಲ್ಲಿ ನಮ್ಮ ಆಧುನಿಕ ರೆಪರ್ಟರಿಗಳು ಮತ್ತು ರಂಗ ಶಿಕ್ಷಣ ಪಡೆದವರು ನಡೆಸಿಕೊಟ್ಟ ರಂಗಶಿಬಿರಗಳಿಗೆ   ಗ್ರಾಮೀಣ ಪ್ರದೇಶಗಳಲ್ಲಿ  ಉತ್ಸಾಹವಿತ್ತು. ಅನೇಕ ನಾಟಕಗಳು ತಯಾರಾಗಿ ಪ್ರದರ್ಶನಗೊಂಡವು. ಆದರೆ ಈ ನಾಟಕಗಳಿಗೆ ಬೇಕಾದ ತಾಂತ್ರಿಕ ಪರಿಕರಗಳನ್ನು ಹೊಂದಿಸಿಕೊಳ್ಳಲು ಸಾಧ್ಯವಾಗದೇ ಮತ್ತು ಅದರ ಖರ್ಚನ್ನು ಭರಿಸಲು ಸಾಧ್ಯವಾಗದೇ ಅನೇಕ ಕಡೆಗಳಲ್ಲಿ ಚಟುವಟಿಕೆ ನಿಂತು ಹೋಯಿತು.

ಹಾಗಾದರೆ ಈಗಲೂ ಹಳ್ಳಿಗಳಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕಂಪೆನಿ ಶೈಲಿಯ ನಾಟಕಗಳು ನಡೆಯುತ್ತಿವೆಯಲ್ಲ ಎನಿಸಬಹುದು. ಹೌದು ಅದು ಬೇರೆಯೇ ರೀತಿಯದ್ದು. ಅಲ್ಲಿ ಒಂದು ಸಮುದಾಯವೇ ಅದರ ಹಿಂದಿರುತ್ತದೆ, ಊರ ಜಾತ್ರೆಯಂತಹ ಕೆಲಸ. ಹೆಚ್ಚಿನ ಬಾರಿ ಊರಿನ ಮುಖ್ಯಸ್ಥರುಗಳು ಅದರಲ್ಲಿ ಹಣ ಹೂಡಿಕೆಯಿಂದ ಹಿಡಿದು ಪಾತ್ರಧಾರಿಗಳೂ ಆಗಿರುತ್ತಾರೆ. ಅದು ವರ್ಷಕ್ಕೊಮ್ಮೆ ಮಾತ್ರ ನಡೆಯುವಂಥದ್ದು.

ಎಲ್ಲೆಲ್ಲಿ ಗ್ರಾಮೀಣ ಪ್ರದೇಶದಲ್ಲೂ ರಂಗಚಟುವಟಿಕೆ ಸಾಮುದಾಯಿಕ ನೆಲೆಯಲ್ಲಿದೆ ಅಂಥಹ ಸ್ಥಳಗಳಲ್ಲಿ ರಂಗ ಚಟುವಟಿಕೆ ಉಳಿದು ಬಂದಿದೆ. ಗೆಳೆಯರೊಬ್ಬರು ಹೇಳಿದಂತೆ “ಅದು ಊರು ಕಟ್ಟುವ ಕೆಲಸ”, ಹಾಗಾದಲ್ಲಿ ಮಾತ್ರ ಅದು ಉಳಿದುಕೊಳ್ಳುತ್ತದೆ.

ಪ್ರತಿವರ್ಷ ನಮ್ಮ ರೆಪರ್ಟರಿಗಳು ಪದೇ ಪದೇ ಅದೇ ಕೇಂದ್ರಗಳಲ್ಲಿ ನಾಟಕ ಪ್ರದರ್ಶನ ನಡೆಸುತ್ತವೆ. ಹೊಸ ಕೇಂದ್ರಗಳು ಯಾಕೆ ಹುಟ್ಟುತ್ತಿಲ್ಲ? ಈ ಬಗ್ಗೆ ನಾವೆಲ್ಲರೂ ಗಂಭೀರವಾಗಿ ಯೋಚಿಸಬೇಕು.

ಆದರೆ ಈಗ ರಂಗಭೂಮಿಗೆ ಸರ್ಕಾರಗಳು ಕೊಡುತ್ತಿರುವ ಹಣವೂ ದೊಡ್ಡ ಪ್ರಮಾಣದ್ದು. ಅದರಿಂದ ಸಮಸ್ಯೆಗಳು ಪರಿಹಾರವಾಗುವ ಬದಲು ಹೆಚ್ಚಾಗಿವೆ. ಈ ಮಾತಿಗೆ “ಫಲಾನುಭವಿ”ಗಳಿಂದ ವಿರೋಧ ಬರಬಹುದು. ಆದರೆ ನಿಜ ಎಲ್ಲರಿಗೂ  ತಿಳಿದಿರುವಂಥದ್ದೇ.  ರಂಗಭೂಮಿಯ ಹೆಸರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಹಣ ಪಡೆಯುತ್ತಿರುವ ವ್ಯಕ್ತಿಗಳ ಮತ್ತು ಸಂಸ್ಥೆಗಳ ಪಟ್ಟಿಯನ್ನು ನೋಡಿದರೆ ಗಾಬರಿಯಾಗುತ್ತದೆ. ಒಂದು ವೇಳೆ ಈ ಅನುದಾನಗಳನ್ನು ಒಂದು ವರ್ಷ ಕಾಲ ನಿಲ್ಲಿಸಿದರೆ ನಮ್ಮ ರಂಗಕರ್ಮಿಗಳ ನಿಜ ಬಂಡವಾಳ ತಿಳಿಯುತ್ತದೆ.

ಈಗ ನಾವೇನು ಮಾಡಬಹುದು?  ಇದು ಎರಡನೆಯ ರಂಗ ಸಮಾವೇಶ. ಮೊದಲನೆಯ ಸಮಾವೇಶದಲ್ಲೀ ನಾವು ಚರ್ಚಿಸಿ ನಿರ್ಣಯ ಕೈಗೊಂಡ ವಿಷಯಗಳ ಬಗ್ಗೆ ಹೇಳುವೆ.

ಪ್ರತಿ ತಾಲ್ಲೂಕಿಗೊಂದು  ಸುಸಜ್ಜಿತವಾದ ಅಂದರೆ, ಮುನ್ನೂರರಿಂದ ಮುನ್ನೂರೈವತ್ತು ಜನ ಪ್ರೇಕ್ಷಕರು ಕೂರುವಂತಹ,  ಸರಿಯಾದ ಧ್ವನಿ, ಬೆಳಕಿನ ವ್ಯವಸ್ಥೆ, ಜನರೇಟರ್, ಪರದೆಗಳು ಇತ್ಯಾದಿಗಳಿರುವ ರಂಗ ಮಂದಿರ, ಸುಮಾರು ಮೂವತ್ತು ಜನರ ರಂಗ ತಂಡವೊಂದು ಉಳಿದುಕೊಳ್ಳಲು ಅನುಕೂಲವಾಗುವ ವಸತಿ ಗೃಹ, ರಿಹರ್ಸಲ್ ಶೆಡ್, ಇವಿಷ್ಟು ಸರಳವಾಗಿ ನಿರ್ಮಿಸಲು ಐವತ್ತು ಲಕ್ಷ ಸಾಕು. ಇದನ್ನು ನಾಟಕಗಳಿಗೆ ದಿನವೊಂದಕ್ಕೆ ಎಲ್ಲ ಸೇರಿ ಒಟ್ಟು ಎರಡುಸಾವಿರ ರೂ ಮೀರದಂತೆ ಬಾಡಿಗೆಗೆ  ಕೊಡಬೇಕು.  ಅದರ ಉಸ್ತುವಾರಿ ಮತ್ತು ನಿರ್ವಹಣೆಯನ್ನು ಸ್ಥಳೀಯವಾದ ರಂಗಕರ್ಮಿಗಳ ಸದಸ್ಯತ್ವವಿರುವ ಜೊತೆಗೆ ಒಬ್ಬ ಸರ್ಕಾರಿ ಅಧಿಕಾರಿಯಿರುವ  ಸಮಿತಿಗೆ ಒಪ್ಪಿಸಬೇಕು.

ಹವ್ಯಾಸಿ ತಂಡಗಳಿಗೆ ಪ್ರೊಡಕ್ಷನ್ ಗ್ರಾಂಟ್ ನಿಲ್ಲಿಸಬೇಕು. ನಾಟಕಗಳನ್ನು ಅವರವರೇ ತಯಾರು ಮಾಡಿಕೊಳ್ಳಲಿ ಆದರೆ ಅದನ್ನು ಪರಿಶೀಲಿಸಿ ಆ ತಂಡಗಳಿಗೆ ಪ್ರದರ್ಶನ ಸಹಾಯಧನವನ್ನು ನೀಡಬೇಕು. ಆಗಲೂ ವಶೀಲಿಬಾಜಿ ನಡೆಯಬಹುದು ಆದರೆ ನಾಟಕ ಚೆನ್ನಾಗಿಲ್ಲದಿದ್ದರೆ ಬೇರೆ ಕಡೆ ಪ್ರದರ್ಶನ ಮಾಡುವುದು ಕಷ್ಟವಾಗುತ್ತದೆ. ಸುಳ್ಳಿನ ಪ್ರಮಾಣಕ್ಕೆ ಕಡಿವಾಣ ಬಿದ್ದೀತು.

ಈ ಮೇಲಿನ ಎರಡು ನಿರ್ಣಯಗಳು ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಇದರ ಗತಿ  ಏನಾಯಿತೆಂದು, ಕಳೆದ ಸಮಾವೇಶದಲ್ಲಿ ಭಾಗಿಯಾಗಿದ್ದ , ಪ್ರಸ್ತುತ ನಾಟಕ ಅಕಾಡೆಮಿಯ  ಅಧ್ಯಕ್ಷರೂ ಅಗಿದ್ದು ಈಗ ನನ್ನ ಮುಂದೆಯೇ ಕುಳಿತಿರುವ ಲೋಕೇಶ್ ರವರು ತಿಳಿಸಬೇಕು.

ಈ ಮೇಲಿನ ನಿರ್ಣಯಗಳು ಜಾರಿಯಾದರೆ ಸಂಘಟಕರುಗಳ  ಹೊರೆ ಗಣನೀಯವಾಗಿ ಕಡಿಮೆಯಾಗುತ್ತದೆ. ಯಾಕೆಂದರೆ ಒಂದುಕಡೆ ದಿನವೊಂದಕ್ಕೆ ಎರಡು ಸಾವಿರ ಮೀರದ ಬಾಡಿಗೆಗೆ ರಂಗ ಮಂದಿರ ದೊರೆತರೆ,  ಪ್ರದರ್ಶನ ಸಹಾಯಧನದಿಂದಾಗಿ ವೆಚ್ಚವಿಲ್ಲದ ನಾಟಕಗಳು ಲಭ್ಯವಾಗುತ್ತವೆ. ಉಳಿದಂತೆ ಊಟ, ಪ್ರಚಾರ, ಇತ್ಯಾದಿಗಳನ್ನು ನಿಭಾಯಿಸಿಕೊಂಡು ಸುಲಭವಾಗಿ ನಾಟಕ ಪ್ರದರ್ಶನಗಳನ್ನು ಸಂಘಟಿಸಬಹುದು. ಇದರಿಂದಾಗಿ ಒಂದು ಊರಿನಲ್ಲಿ ಹೆಚ್ಚು ಹೆಚ್ಚು ಪ್ರದರ್ಶನಗಳು ನಡೆದು ಉತ್ತಮ ಪ್ರೇಕ್ಷಕ ವರ್ಗವೂ ನಿರ್ಮಾಣವಾಗಬಹುದು.

ಇದರ ಮುಂದುವರಿದ ಭಾಗವಾಗಿ ಈ ಭಾರಿ ಇನ್ನೊಂದು ವಿಚಾರವನ್ನು ಇಲ್ಲಿ ಮಂಡಿಸುತ್ತಿದ್ದೇನೆ. ಈಗ ರಂಗ ಶಿಕ್ಷಣ ಕೇಂದ್ರಗಳಿಂದ ಶಿಕ್ಷಣ ಪಡೆದು ಹೊರಬರುತ್ತಿರುವವರಲ್ಲಿ ಅನೇಕರು ಬೇರೆ ಬೇರೆ ಕ್ಷೇತ್ರಗಳಲ್ಲಿ ದುಡಿಯುತ್ತಿದ್ದಾರೆ. ಅದು ಅವರ ಜೀವನದ ಆಯ್ಕೆ ತಪ್ಪೇನಿಲ್ಲ ಅವರು ಯಾವುದೇ ಕ್ಷೇತ್ರಕ್ಕೆ ಹೋದರೂ ರಂಗ ಶಿಕ್ಷಣ ಹುಸಿಯಾಗದು. ಅವರ ಜೀವನ ವಿಧಾನವನ್ನು ಅಲ್ಲಿಯೂ ಅದು ಪ್ರಭಾವಿಸುತ್ತಿರುತ್ತದೆ.

ಆದರೆ ರಂಗಭೂಮಿಯಲ್ಲೇ ದುಡಿಯುತ್ತೇನೆ ಅನ್ನುವ  ಆಸಕ್ತರನ್ನು ಒಂದು ವರ್ಷದ ಶಿಷ್ಯವೇತನ ನೀಡಿ ಸರ್ಕಾರ ಹಳ್ಳಿಗಳಿಗೆ ಕಳುಹಿಸಬೇಕು. ಈ  ಬಗ್ಗೆ ಹಳ್ಳಿಗಳನ್ನು ಅವರೇ ಆಯ್ಕೆ ಮಾಡಬಹುದು, ಹಾಗೆ ಈಗಾಗಲೇ ಹಳ್ಳಿಗಳಲ್ಲಿ ಇರುವ ರಂಗಾಸಕ್ತರ ಬೇಡಿಕೆ ಮೇಲೆ ಕಳುಹಿಸಬಹುದು. ಆದರೆ ಅವು ಹೊಸ ಗ್ರಾಮೀಣ ಕೇಂದ್ರಗಳಾಗಿರಬೇಕು. ಈಗಾಗಲೇ ರಂಗ ಚಟುವಟಿಕೆ ನಡೆಯುತ್ತಿರುವ ಹಳ್ಳಿಗಳಾಗಿರಬಾರದು. ಅವರು ಆ ಹಳ್ಳಿಗೆ ಹೋಗಿ ರಂಗ ಸಂಘಟನೆಯನ್ನು ಮಾಡಿ ಪ್ರದರ್ಶನಗಳನ್ನು ನೀಡಿ ಅಲ್ಲಿ ಒಂದು ರಂಗ ತಂಡವನ್ನು ಕಟ್ಟಬೇಕು. ಇದರಿಂದ ಒಂದು ಹೊಸ ರಂಗ ಕೇಂದ್ರವೂ ಜೊತೆಗೆ ಒಬ್ಬ ಅನುಭವಿ  ರಂಗ ಸಂಘಟಕನೂ ತಯಾರಾದಂತಾಗುತ್ತದೆ.

ಈಗ ಯಾವುದೇ ರಂಗ ಶಿಕ್ಷಣ ಕೇಂದ್ರಗಳಿಂದ ಬಂದಂತಹ ರಂಗ ಶಿಕ್ಷಿತರಿಗೆ ಯಾವುದೇ  ಉದ್ಯೋಗ ಕಲ್ಪಿಸಲು ಸಾಧ್ಯವಿಲ್ಲವೆಂದು ಸರ್ಕಾರ ಸ್ಪಷ್ಟವಾಗಿ ಹೇಳುತ್ತಿದೆ. ಅದೇ ಕಾಲಕ್ಕೆ ನಮಗೆ ಮುಂದಿನ ಭರವಸೆಯೆಂದರೆ ಮಕ್ಕಳನ್ನು ರಂಗ ಭೂಮಿಗೆ ತರುವುದು ಎಂದು ಎಲ್ಲರೂ ಹೇಳುತ್ತಾರೆ.

ಆದ್ದರಿಂದ ಪ್ರತಿಯೊಂದು ಖಾಸಗಿ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಯೂ ಕಡ್ಡಾಯವಾಗಿ ತಮ್ಮ ಸಂಸ್ಥೆಯಿಂದ  ಒಬ್ಬ ಯುವ ಶಿಕ್ಷಕರನ್ನು ನಮ್ಮಲ್ಲಿರುವ ರಂಗಶಿಕ್ಷಣ ಕೇಂದ್ರಗಳಿಗೆ ಒಂದು ವರ್ಷದ ತರಬೇತಿಗೆ ಕಳುಹಿಸಬೇಕೆಂದು ಆದೇಶ ನೀಡಬೇಕು. ಹೇಗೂ ಎಲ್ಲವೂ ಸರ್ಕಾರದ ಅನುದಾನಿತ  ರಂಗ ಶಿಕ್ಷಣ ಕೇಂದ್ರಗಳೇ ಇರುವುದರಿಂದ ಇದೇನು ಸಮಸ್ಯೆಯಲ್ಲ. (ಈಗಾಗಲೇ ರಂಗ ಶಿಕ್ಷಣ ಕೇಂದ್ರಗಳಲ್ಲಿ ಶಿಕ್ಷಕರಿಗೆ ಕೆಲವು ಸೀಟುಗಳು ಮೀಸಲಿವೆ. ಆದು ಆಸಕ್ತ ಶಿಕ್ಷಕರು ಅವರ ಪ್ರಯತ್ನದಿಂದ ಇಲಾಖೆಯ  ಅನುಮತಿ ಪಡೆದು ನಂತರ ಅಲ್ಲಿಗೆ ಹೋಗಬೇಕು, ಹೀಗೆ ಹೋಗುವವರ ಸಂಖ್ಯೆ ಕಡಿಮೆ.) ಇದರಿಂದ ಶಾಲಾ ಕಾಲೇಜುಗಳ ರಂಗ ಚಟುವಟಿಕೆಗೆ ಉತ್ತೇಜನ ದೊರೆತೀತು.

ಈ ಎಲ್ಲ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು  ಗೋಷ್ಟಿಗಳಲ್ಲಿ ನಿಮ್ಮ ವಿಚಾರಗಳನ್ನು ಮುಂದಿಡಬೇಕೆಂದು ಕೇಳಿಕೊಳ್ಳುತ್ತೇನೆ.

ಧನ್ಯವಾದಗಳು.

 

Leave a Reply