ಬೆಟ್ಟಗಳೆಂದರೆ ಹತ್ತುವ ಅನಂತ ಇಚ್ಛೆಗಳು..

ರಾಜೇಶ್ವರಿ ಚನ್ನಂಗೋಡ್ 

ಅದೇನೋ ಇದೆ
ಗುಡ್ಡದ ತುದಿ ತಲುಪಿದಾಗ
ಸುಸ್ತಲ್ಲಿ ಉಸಿರೇ ಮುಗಿದಂತೆ ಅನಿಸಿಯೂ
ಆ ತುದಿಯೊಂದನ್ನೇ ನೆನೆಸಿ ಹತ್ತಿ ಹತ್ತಿ ಮುಗಿಸಿದಾಗ
ಕಾಣುತ್ತದಲ್ಲ, ತುದಿಯಿಂದಾಚೆಗೊಂದು ದಾರಿ
ಅಲ್ಲಿ ತೆರೆದುಬಿಡುವ ಮೋಡದ ಹಾದಿ
ಮುಂದಿನ ಗುಡ್ಡೆ, ಹಸಿರು, ಕಣಿವೆ
ಹಾಗೇ
ಕುಸಿದು ಕೂರುವುದೋ, ಹೆಜ್ಜೆ ಹಾಕುವುದೋ ತಿಳಿಯದೇ
ಮೂಕವಾಗುವ, ಅರ್ಥವಾಗದ, ಕ್ಷಣವುರುಳುವುದಲ್ಲ
ಅಲ್ಲಿ, ಅಲ್ಲೇ
ಅದೇನೋ ಇರುವುದು
ಸಾಕೆನಿಸಿ ಕುಳಿತರೂ
ಮುಂದೆ ಸಾಗಿಸಲು, ಎದ್ದು ನಿಲ್ಲಿಸಲು ಚಾಚುವ ಕೈಯಾಗಿ
ದೇವರೇ ಎಂದು ಕೂಗಿದರೆ ಮಾರ್ದನಿ ಬಾರದೇ
ಆದರೆ
ಮುಂದೆ ಸಾಗಿ ನೋಡಿದರೆ ಸಾಗಿ ಬಂದ
ಹೆಜ್ಜೆ ಹೆಜ್ಜೆಗೂ ಒಲವಾದ, ಹತ್ತಿರವಾದ
ಇಳಿದರೂ ಮುಗಿಯದ
ಒಂದೊಮ್ಮೆ ಹತ್ತಿದರೆ ಮುಂದೆಂದೂ ಮುಗಿಯದ
ವಿಚಿತ್ರ ದೇವರು
ಪ್ರತಿ ಬೆಟ್ಟವೂ
ಚಾಮುಂಡಿಯೂ ತಡಿಯಾಂಡಮೂಳೂ
ಮೀಶಪ್ಪುಲಿಮಲೆಯೂ ಸ್ಕಂದಗಿರಿಯೂ

ಮತ್ತು
ಬದುಕಲ್ಲಿ ಹತ್ತಲೇ ಬೇಕಾಗಿ ಬಂದ,
ಉಸಿರು ಮುಗಿದರೂ, ಬೆವರಿಳಿದರೂ
ಕಾಲ್ಸೋತರೂ ಬಿಡಲಾಗದೇ ಹತ್ತಲೇ ಬೇಕಾಗಿಬಂದ
ಬೆಟ್ಟಗಳೂ,
ಬದುಕಲ್ಲಿ ಹತ್ತಲೇ ಬೇಕಾಗಿ ಬಂದ
ಕೆಲವು ಮನುಷ್ಯರೂ

ಬೆಟ್ಟಗಳೆಂದರೆ
ಹತ್ತುವ ಅನಂತ ಇಚ್ಛೆಗಳು
ಅವರುಗಳೂ ಅಷ್ಟೇ

3 Responses

  1. Maheshwari. U says:

    ಕವಿತೆ ಚೆನ್ನಾಗಿದೆ. ಅಭಿನಂದನೆಗಳು

  2. ಯಲ್ಲಪ್ಪ ಎಮ್ ಮರ್ಚೇಡ್ says:

    ಕವಿತೆಗಳು ಒಂದಕ್ಕಿಂತ ಒಂದು ಚಂದ ಇದಾವೆ, ಅವಧಿ ಪತ್ರಿಕೆ ಮೇಲ್ ಐಡಿ ಇದ್ರೆ ಕೋಡಿ , ನಮಸ್ತೇ…

Leave a Reply

%d bloggers like this: