ಇನ್ನಿಲ್ಲವಾಗಿಯೂ ಇರುವ ಗುರುವನ್ನು ನೆನೆದು..

ಶೇಷಗಿರಿರಾವ್ ಹವಾಲ್ದಾರ್ ಅವರಿಗೊಂದು ನುಡಿನಮನ

ಸುಧಾ ಚಿದಾನಂದಗೌಡ / ಹಗರಿಬೊಮ್ಮನಹಳ್ಳಿ

ಬಯಲುಸೀಮೆಯ ವೈಚಾರಿಕ, ಪ್ರಗತಿಪರ ಚಿಂತನೆಯ ಲೋಕದಲ್ಲಿ ಕೇಳಿಬರುತ್ತಿದ್ದ ಪ್ರಮುಖ ಹೆಸರುಗಳಲ್ಲಿ ಒಂದಾದ ಶೇಷಗಿರಿರಾವ್ ಹವಾಲ್ದಾರ್ ಇನ್ನಿಲ್ಲ.

ಮಾರ್ಕ್ಸ್ ವಾದದಿಂದ ಪ್ರಭಾವಿತರಾಗಿದ್ದ ಶೇಷಗಿರಿರಾವ್ ಎಂಭತ್ತರ ದಶಕದಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಪ್ರಜಾಸತ್ತಾತ್ಮಕ ವಿಚಾರಧಾರೆ ಬೆಳೆಯುವಲ್ಲಿ ಮುಖ್ಯಪಾತ್ರ ವಹಿಸಿದ್ದವರು.

ಸಮ ಸಮಾಜದ ಕನಸನ್ನುಳ್ಳ ಈ ಹಿರಿಯ ಸಂಗಾತಿ ಸುಸಂಸ್ಕೃತ ಮನಸಿನವರು. ಆದ್ದರಿಂದಲೇ ಅವರು ಉಳಿದೆಲ್ಲ ಕ್ಷೇತ್ರಗಳಿಗಿಂತ “ಸಮುದಾಯ” ದತ್ತ ಹೆಚ್ಚು ಒಲವುಳ್ಳವರು. ಹಡಗಲಿಯಲ್ಲಿ ರಂಗಭೂಮಿ, ಬೀದಿನಾಟಕ ಚಟುವಟಿಕೆಗಳು ಸೊಂಪಾಗಿ ಬೆಳೆಯುವಲ್ಲಿ ಶೇಷಗಿರಿರಾವ್ ಅವರ ಪಾತ್ರ ಹಿರಿದು.

ಸುತ್ತಲಿನ ಯುವಜನತೆಯನ್ನು ಪ್ರಗತಿಪರ ಹಾದಿ ಹಿಡಿಸುವಲ್ಲಿ ಅವರು ಸದಾ ಮುಂದು. ಎಸ್. ಎಫ್. ಐ, ಡಿವೈಎಫ್.ಐ ವಿದ್ಯಾರ್ಥಿ ಸಂಘಟನೆಗಳಲ್ಲದೆ ಎಡಪಂಥೀಯ ವಿಚಾರಧಾರೆಯ ಸಂಗಾತಿಗಳನ್ನು ಒಂದೆಡೆ ಸೇರಿಸಿ ಸಾಹಿತ್ಯ, ಪುಸ್ತಕಗಳ ಪ್ರಕಟಣೆಗಾಗಿ ಶ್ರಮಿಸಿದ, ಸ್ವತಃ ಕವಿಯೂ ಆಗಿದ್ದ ಶೇಷಗಿರಿರಾವ್ ನುಡಿದಂತೆ ನಡೆದ ವ್ಯಕ್ತಿ.

ಇಡೀ ಹವಾಲ್ದಾರ್ ಕುಟುಂಬ ಪ್ರಜ್ಞಾವಂತಿಕೆ ಬೆಳೆಸಿಕೊಳ್ಳುವುದರಲ್ಲಿ ಶೇಷಗಿರಿರಾವ್ ಮುಂಚೂಣಿಯಲ್ಲಿದ್ದರೆಂದರೆ ತಪ್ಪಾಗಲಿಕ್ಕಿಲ್ಲ. ಅದರ ಪ್ರತಿಫಲವೇ ಇಂದಿನ ಅವರ ದೇಹದಾನ ಮತ್ತು ನೇತ್ರದಾನದಂಥಾ ಪ್ರಕ್ರಿಯೆಗಳು. ಮರಣಾನಂತರ ಅವರು ಹೇಳಿದ್ದ, ಆಶಿಸಿದ್ದ ಪ್ರತಿ ಮಾತನ್ನೂ ಹವಾಲ್ದಾರ್ ಕುಟುಂಬ ಪಾಲಿಸಿದೆ. ಹೂ. ಹಡಗಲಿಯ ವೈದ್ಯರು ಅವರ ನೇತ್ರಗಳನ್ನು ಸ್ವೀಕರಿಸಿದ ಬಳಿಕ ಬಳ್ಳಾರಿಯ ವಿಮ್ಸ್ ನ ಪ್ರಯೋಗಾಲಯಕ್ಕೆ ಅವರ ದೇಹವನ್ನು ಒಪ್ಪಿಸಲಾಗಿದೆ.

ಬಳ್ಳಾರಿ ಜಿಲ್ಲೆಯ ಬಹುತೇಕ ಹಿರಿಯ ಸಾಹಿತಿ, ವಿಚಾರವಂತರು ಓದಿದ ಹೊಸಪೇಟೆಯ ವಿಜಯನಗರ ಕಾಲೇಜಿನಲ್ಲಿ ಓದಿದವರು ಶೇಷಗಿರಿರಾವ್ ಹವಾಲ್ದಾರ್. ವಿದ್ಯಾರ್ಥಿದೆಸೆಯಲ್ಲಿಯೇ ಸಂಘಟನೆಯಲ್ಲಿ, ಸಮುದಾಯದಲ್ಲಿ ತೊಡಗಿಕೊಂಡವರು. ಎಂಭತ್ತರ ದಶಕದಲ್ಲಿ ಹುಟ್ಟಿ ಬೆಳೆದ ಬಂಡಾಯ ಸಾಹಿತ್ಯ ಬಳ್ಳಾರಿಯಲ್ಲೂ ಪ್ರಖರವಾಗಿಯೇ ಬೆಳೆಯಿತು. ಬಂಡಾಯಸಾಹಿತ್ಯ ಸಮ್ಮೇಳನ ಕೂಡಾ ಬಳ್ಳಾರಿಯಲ್ಲಿ ನಡೆದಿತ್ತು. ಬಹುತೇಕ ಎಲ್ಲ ಪ್ರಜ್ಞಾವಂತರನ್ನು ಪ್ರಭಾವಿಸಿದ ಈ ಚಳುವಳಿ ಸಹಜವಾಗಿ ಶೇಷಗಿರಿಯವರನ್ನೂ ಪ್ರಭಾವಿಸಿತ್ತು.

ಕವನಸಂಕಲನಗಳನ್ನು ಪ್ರಕಟಿಸಿರುವ ಅವರ ಕವಿತೆಗಳಲ್ಲಿ ಬಂಡಾಯದ ಛಾಪನ್ನು ಸ್ಪಷ್ಟವಾಗಿ ಕಾಣಬಹುದು. “ಬದುಕ ಬಯಲಲ್ಲಿ” ಅವರ ಮೊದಲ ಕವನಸಂಕಲನ. “ಅವಳು ವಿಜಯದ ನಗೆ ಬೀರಿದಳು” ತದನಂತರ ಹೊರತಂದ ಮತ್ತೊಂದು ಕವಿತಾಗುಚ್ಛ.

ಹೆಸರೇ ಸೂಚಿಸುವಂತೆ ಸ್ತ್ರೀಪರ ಕಾಳಜಿಯ ಪದ್ಯಗಳು ಇವು. ತಮ್ಮ ಸ್ನೇಹಿತರು, ಪ್ರಗತಿಪರ ಬರಹಗಾರರೂ ಆಗಿದ್ದ ಎಸ್. ಎಸ್. ಹಿರೇಮಠ ತೀರಿಕೊಂಡ ಬಳಿಕ ಅವರ ಸ್ಮರಣೆಯಲ್ಲಿ ಮೂವತ್ತಕ್ಕೂ ಹೆಚ್ಚು ಜನ ಕನ್ನಡದ ಪ್ರಬುದ್ಧ ಲೇಖಕರು ಬರೆದ ಲೇಖನಗಳನ್ನು ಸಂಗ್ರಹಿಸಿ ಹೊರತಂದ ಕೃತಿ “ಮನುಷ್ಯನ ಹುಡುಕಾಟದಲ್ಲಿ” ಅವರ ಬದುಕಿನ ಆಶಯಗಳನ್ನು ಹೊತ್ತ ಒಂದು ದಾಖಲೆಯಂಥಾ ಪುಸ್ತಕ ಎನ್ನಲಡ್ಡಿಯಿಲ್ಲ.

ಇವರ ಬದುಕು ಬರಹಗಳು ಹೇಗೆ ಮಿಳಿತವಾಗಿದ್ದವು ಮತ್ತು ಸಮಾನತೆಯ ಕನಸು ಎಷ್ಟು ಗಾಢವಾಗಿತ್ತೆಂದರೆ ಎಸ್. ಎಸ್. ಹಿರೇಮಠರು “ಸಮತಾ ಪ್ರಕಾಶನ” ಹುಟ್ಟುಹಾಕಿಕೊಂಡಿದ್ದರೆ ಶೇಷಗಿರಿರಾವ್ ತಮ್ಮ ಹಿರಿಯ ಮಗಳಿಗೆ “ಸಮತಾ” ಎಂದೇ ಹೆಸರಿಟ್ಟಿದ್ದಾರೆ. ಈ ಹಿರಿಯಣ್ಣನ ಪ್ರಭಾವದಿಂದಾಗಿ ಇಬ್ಬರು ಕಿರಿಯ ತಮ್ಮಂದಿರಾದ ರಂಗನಾಥ ಹವಾಲ್ದಾರ್ ಮತ್ತು ಸುದರ್ಶನ್ ಹವಾಲ್ದಾರ್ ತಮ್ಮ ವಿವಾಹವನ್ನು ಹಗರಿಬೊಮ್ಮನಹಳ್ಳಿಯಲ್ಲಿ ತುಂಬ ಸರಳರೀತಿಯಲ್ಲಿ ಮಾಡಿಕೊಂಡಿದ್ದು ನೆನಪಾಗುತ್ತಿದೆ.

ಸುಮಾರು 2010 ನೇ ವರ್ಷದ ಮಧ್ಯಭಾಗದಲ್ಲಿ ಶೇಷಗಿರಿರಾವ್ ಕಿಡ್ನಿ ತೊಂದರೆಗೊಳಗಾದರು. ಆ ಸಂದರ್ಭದಲ್ಲಿ ಅವರ ಪತ್ನಿ ಕಲಾವತಿಯವರು ತಮ್ಮ ಕಿಡ್ನಿಯನ್ನು ಕೊಟ್ಟು ಪತಿಯನ್ನು ಉಳಿಸಿಕೊಂಡರು. ಆ ಸಮಯದ ತಮ್ಮ ತೊಳಲಾಟ. ತಲ್ಲಣಗಳನ್ನು ಶೇಷಗಿರಿರಾವ್ ಬರಹರೂಪಕ್ಕೂ ಇಳಿಸಿ “ಇದೆಂಥಾ ಬದುಕು, ಇದೆಂಥಾ ತಿರುವು” ಪುಸ್ತಕವನ್ನು ಹೊರತಂದರು.

ಶೇಷಗಿರಿರಾವ್ ತಮ್ಮ ಹಿಂದೆ ಅನೇಕ ಯುವಹೋರಾಟಗಾರರನ್ನು, ಸಮುದಾಯ, ಎಸ್ ಎಫ್ ಐ ಗಳಲ್ಲಿ ಸಂಘಟಿತಗೊಳ್ಳುತ್ತಿರುವ ಸಂಗಾತಿಗಳನ್ನು ಅಲ್ಲದೆ ಸಾಕಷ್ಟು ಲೇಖನಗಳು, ಕವಿತೆಗಳನ್ನು ಬಿಟ್ಟುಹೋಗಿದ್ದಾರೆ. ಅವರ ಕುಟುಂಬ ಅವರ ಅಪ್ರಕಟಿತ ಬರಹಗಳನ್ನೆಲ್ಲ ಸಂಕಲಿಸಿ ಪುಸ್ತಕಗಳನ್ನು ಹೊರತರುವ ಸಿದ್ಧತೆಗಳನ್ನು ಈಗಾಗಲೇ ನಡೆಸಿದೆ.

ಶೇಷಗಿರಿರಾವ್ ಅವರೊಂದಿಗೆ ನನ್ನ ನೆನಪುಗಳೂ ಹಲವಾರಿವೆ. ಭೇಟಿಯಾದಾಗಲೆಲ್ಲಾ ಪುಸ್ತಕಗಳನ್ನು ಕೊಡುತ್ತಿದ್ದವರು. ಒಳ್ಳೆಯ ಓದುಗರೂ ಕೂಡಾ. ಒಂದು ಸಮಾರಂಭದಲ್ಲಿ ನನ್ನ “ಬಯಲ ಧ್ಯಾನ” ವನ್ನು ಕೊಟ್ಟಾಗ “ನಾನು ಓದಿದೀನಿ ಇದನ್ನಾಗಲೇ..” ಎಂದು ಹೇಳಿ, ನಾನು ಖುಷಿಗೊಳ್ಳುವಂತೆ ಮಾಡಿದ್ದರು. ನಂತರ ಮತ್ತೊಂದು ಸಭೆಯಲ್ಲಿ ಸಿಕ್ಕಾಗ ಹಲವು ಕವಿತೆಗಳ ಶೀರ್ಷಿಕೆಗಳನ್ನೂ ಹೇಳಿದ್ದರು.

ಹಡಗಲಿಯಲ್ಲಿ ಹಲವು ಕವಿಗೋಷ್ಟಿ, ಸಮ್ಮೇಳನಗಳಿಗೆ ಹೋದಾಗಲೆಲ್ಲಾ ಅವರೂ, ನಾನೂ ವೇದಿಕೆಯಲ್ಲಿ ಹಂಚಿಕೊಂಡಿದ್ದೇವೆ, ಅಥವಾ ಸಮಾರಂಭ ಮುಗಿದ ಬಳಿಕ ಸಾಕಷ್ಟು ಚರ್ಚಿಸಿದ್ದೇವೆ. ಆಗೆಲ್ಲಾ ಅವರು “ಏಕೆ ಸಮುದಾಯದಿಂದ ದೂರವುಳಿಯುತ್ತೀರಿ ಸುಧಾ ಅವರೇ? ತೊಡಗಿಸಿಕೊಳ್ಳಿ. ಒಳ್ಳೆ ನಾಟಕ ಬರೆಯಬಲ್ಲಿರಿ ನೀವು. ಜೊತೆಗೆ ವಿದ್ಯಾರ್ಥಿಗಳೂ ಇದಾರೆ ನಿಮ್ಮೊಂದಿಗೆ… ನೀವು ಪ್ರಯತ್ನಾನೇ ಮಾಡೋದಿಲ್ಲ” ಎಂದು ಹುರಿದುಂಬಿಸಿದ್ದರು.

ಬರೆದ ನಾಟಕಗಳನ್ನು ಅವರಿಗೆ ತೋರಿಸೋಣ ಎಂದುಕೊಳ್ಳುತ್ತಲೇ ದಿನಗಳು ಉರುಳಿಯೇ ಹೋದವು. ಅವರನ್ನೊಮ್ಮೆ ನಮ್ಮ ಸಮಾರಂಭಕ್ಕೆ ಕರೆಸಬೇಕೆಂಬ ಆಸೆ ಹಾಗೆಯೇ ಉಳಿದುಹೋಯಿತು. ಹಡಗಲಿಯ ಪಪೂ ಕಾಲೇಜಿನಲ್ಲಿ ಕ್ಲರ್ಕ ಆಗಿದ್ದ ಅವರು “ನಾವು ಸಹೋದ್ಯೋಗಿಗಳು ತಗಳ್ರೀ..” ಎಂದೇ ಮಾತು ಆರಂಭಿಸುತ್ತಿದ್ದುದು ನೆನಪಾಗಿಯಷ್ಟೇ ಉಳಿಯಿತು.

ಮೊನ್ನೆ ಮೊನ್ನೆಯಷ್ಟೇ ಹಡಗಲಿಗೆ ವಿಶ್ವ ಮಹಿಳಾ ದಿನಾಚರಣೆಯ ಕವಿಗೋಷ್ಠಿ ಉದ್ಘಾಟನೆಗೆ ಹೋಗಿದ್ದಾಗ ಅವರ ಮಗಳು ಮಮತಾ ಹವಾಲ್ದಾರಳ ಕವನವನ್ನೂ ಕೇಳಿದೆ.

ಎಸ್. ಎಸ್. ಹಿರೇಮಠರ ಕುರಿತು ಬರೆಯುವಾಗ ಶೇಷಗಿರಿಯವರು “ಇನ್ನಿಲ್ಲವಾಗಿಯೂ ಇರುವ ಗುರುವನ್ನು ನೆನೆದು..” ಎಂದು ಬರೆದಿದ್ದಾರೆ.

ನೀವೂ ಅಷ್ಟೇ ಕಾಮ್ರೇಡ್ ಹವಾಲ್ದಾರ್ ಸರ್, ಇನ್ನಿಲ್ಲವಾಗಿಯೂ ಉಳಿಯುವವರು ನೀವು. ನೀವು ನಮ್ಮೊಂದಿಗೆ ಇದ್ದೇ ಇರುತ್ತೀರಿ…. ನಿಮ್ಮ ವಿಚಾರಗಳೊಂದಿಗೆ, ನಿಮ್ಮ ಬರಹಗಳ ಮೂಲಕ, ನೀವಾಡಿದ್ದ ಮಾತುಗಳ ನೆನಪಿನ ಮೂಲಕ..

3 Responses

 1. ಕರಣಂ ಕೃಷ್ಣ ಮೂರ್ತಿ. says:

  ಈ ಕಿರು ಲೇಖನ ಬಹು ಸೊಗಸಾಗಿ ಮೂಡಿಬಂದಿದೆ. ಶ್ರೀ ಯುತ ಶೇಷಗಿರಿರಾವ್ ಅವರು ನಡೆದು ಬಂದ ದಾರಿಯನ್ನೊಮ್ಮೆ ಅವಲೋಕಿಸಿದಂತಾಯ್ತು. ನಿಜಕ್ಕೂ ಅವರು ಇರದಿದ್ದರೂ ಇರುವ ಸಹೃದಯಿ; ಚಿಂತಕ; ಲೇಖಕ…. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ…
  ‌‌‌‌‌‌‌ ಕರಣಂ ಕೃಷ್ಣ ಮೂರ್ತಿ.
  ಬೆಂ‌ಗಳೂರು.

 2. ಅಮರದೀಪ್. ಪಿ.ಎಸ್. says:

  ಹವಾಲ್ದಾರ್ ಗುರುಗಳಿಗೆ ನನ್ನ ನಮನಗಳು.

 3. Sudha ChidanandGowd says:

  ಧನ್ಯವಾದ ಕರಣಂ ಕೃಷ್ಣಮೂರ್ತಿ ಮತ್ತು ಅಮರ್…

Leave a Reply

%d bloggers like this: