ಪಾವನಾ ಎಂಬ ‘ಅಲೆಮಾರಿ’ಯ ಹಿಂದೆ ಹೋಗಿ ನಾನು ಕಳೆದುಹೋದೆ..

ಪರೀಕ್ಷೆ ಮುಗಿದ್ದೇ ಅಜ್ಜಿ ಮನೆಗೆ ಹೊರಟು ಬಿಟ್ಟಿದ್ದ ಮಗ ಅಜ್ಜನ ಅಪ್ಪುಗೆಯಲ್ಲಿ ಹೊಸ ವಿಷಯಗಳನ್ನು ಕಲಿಯುವ ನಂಬಿಕೆಯಿತ್ತು ನನಗೆ. ಅದು ಸುಳ್ಳಾಗಲಿಲ್ಲ. ಮಗನನ್ನು ವಾಪಸ್ ಮನೆಗೆ ಕರೆತರುವಾಗ ಆತನ ಎಷ್ಟೋ ನಂಬಿಕೆಗಳು ಅರ್ಥಹೀನ ಎಂಬುದನ್ನು ತಿಳಿದುಕೊಂಡಿದ್ದ. ವೈಜ್ಞಾನಿಕ ಆಲೋಚನೆಯ ಸಣ್ಣ ಕಿಡಿಗಳನ್ನು ಹೊತ್ತು ತಂದ ಮಗ, ಮತ್ತು ಆ ಮೊಮ್ಮಗನಲ್ಲಿ ಅಂತಹುದ್ದೊಂದು ಬದಲಾವಣೆ ತಂದ ಅಜ್ಜ ಇಬ್ಬರಿಗೂ ಸಣ್ಣದೊಂದು ಅಪ್ಪುಗೆಯನ್ನು ತಿಳಿಸಿದ್ದೆ.

ಹಿರೇಗುತ್ತಿಯ ಮನೆಯ ಪಕ್ಕದಲ್ಲೇ ಎರಡು ದೇವಸ್ಥಾನಗಳಿವೆ. ಮಹಾನ್ ಹುಂಬರಾದ ನನ್ನೂರಿನವರು ಒಂದಾಗಿ ಬಂಡಿ ಹಬ್ಬಕ್ಕೆ ಮಾಡುವುದೇ ಅತಿ ದೊಡ್ಡ ಸಮಸ್ಯೆ.

ಹೀಗಿರುವಾಗ ಹಬ್ಬ ಆದರೂ  ಅಪ್ಪ ಆ ಹಬ್ಬಕ್ಕೆ ಹೋಗುತ್ತಿರಲಿಲ್ಲವಂತೆ. ಅದಕ್ಕೆ ಕಾರಣಗಳು ಹಲವಿದ್ದವು. ಮನೆಯ ದೇವಸ್ಥಾನದ ಬಂಡಿ ಹಬ್ಬದ ಕಳಶ ನೆಲಕ್ಕೆ ಬಿದ್ದು ಭಿನ್ನವಾಗಿ ಹೋಗಿತ್ತಂತೆ. ಅದನ್ನು ಮತ್ತೆ ಪ್ರಾರಂಭಿಸಬೇಕು ಎಂಬ ಬೇಡಿಕೆ ನಮ್ಮ ಕೇರಿಯದ್ದು. ಆದರೆ ಇನ್ನೊಂದು ಕೇರಿಯ ಜನ ಅದನ್ನು ಒಪ್ಪದೇ “ಭಿನ್ನವಾದ ಕಳಶ ಮತ್ತೆ ಮಾಡುವುದೇ ಬೇಡ ಎನ್ನುತ್ತಿದ್ದರಂತೆ. ಹೀಗಾಗಿ ಆ ಕಳಶ ಪ್ರತಿಷ್ಟಾಪನೆ ಆಗುವವರೆಗೆ ಇಲ್ಲಿನವರಾರೂ ಹಬ್ಬಕ್ಕೆ ಹೋಗಬಾರದು ಎಂಬ ಒಪ್ಪಂದವಾಗಿತ್ತಂತೆ. ಆದರೂ ಕೊನೆ ಕೊನೆಗೆ ಇಡಿ ಊರವರೇ ಹಬ್ಬಕ್ಕೆ ಸೇರಿದರೂ ಅಪ್ಪ ಮಾತ್ರ ಕಳಶ ಪ್ರತಿಷ್ಟಾಪನೆಯವರೆಗೂ ಹಬ್ಬದ ಕಡೆ ತಲೆ ಹಾಕಿರಲಿಲ್ಲ.

ಬಹುಶಃ ಅದು ರೂಢಿಯಾಗಿಬಿಟ್ಟಿದ್ದರಿಂದಲೋ ಏನೋ, ಇಂದಿಗೂ ಅಪ್ಪ ಮನೆಯ ಪಕ್ಕದಲ್ಲೇ ಇದ್ದರೂ ದೇವಸ್ಥಾನದ ಬಳಿ ಹೋಗುವುದು ತೀರಾ ಅಂದರೆ ತೀರಾ ಕಡಿಮೆ, ಹೋಗಿದ್ದೇ ಇಲ್ಲ ಅಂದರೂ ನಡೆದೀತು. ಹಾಗಂತ ಅಪ್ಪ ಪೂರ್ತಿ ನಾಸ್ತಿಕರೂ ಅಲ್ಲ. ಇಂದಿಗೂ ಸ್ನಾನವಾದ ತಕ್ಷಣ ಮನೆಯೆದುರಿನ ತುಳಸಿಗೆ ನೀರೆರೆದು ನಮಸ್ಕರಿಸುತ್ತಾರೆ. ಹಾಗೆಂದು ಅವರು ತೀರಾ ದೈವಭಕ್ತರೆ ಎಂದರೆ ಅದೂ ಅಲ್ಲ. ತುಳಸಿ ಗಿಡಕ್ಕೆ ನೀರು ಹಾಕಿದ ಮೇಲೆ ಮತ್ತೆ ದೇವರ ಕೋಣೆಯ ಕಡೆ ತಲೆ ಕೂಡ ಹಾಕುವುದಿಲ್ಲ.

ದೇವಸ್ಥಾನದ ಹುಂಡಿಗೆ ಹಣ ಹಾಕಿ ಬರುವ ಬದಲು, ಮೆಟ್ಟಿಲ ಮೇಲೆ ಕುಳಿತ ಅಂಗವಿಕಲರಿಗೆ  ಹಣ ಕೊಟ್ಟರೆ ಅದೇ ಪುಣ್ಯ ಎಂದು ಚಿಕ್ಕಂದಿನಲ್ಲಿಯೇ ನನಗೆ ಪದೇ ಪದೇ ಹೇಳಿ ಜೀವ ಕಾರುಣ್ಯದ ಪಾಠ ಮಾಡಿದವರು ಅವರು. ಮೂಢ ನಂಬಿಕೆಗಳನ್ನು ವಿರೋಧಿಸುತ್ತ, ಮೇಲ್ವರ್ಗದವರು ಹುನ್ನಾರಗಳನ್ನು ತಿಳಿಸಿದ್ದಷ್ಟೇ ಅವರ ಹೆಗ್ಗಳಿಕೆಯಲ್ಲ. ಬದಲಾಗಿ ನಮ್ಮ ಊರಲ್ಲಿ ನಾವೇ ದಲಿತ ಸಮುದಾಯಗಳಿಗೆ ಮಾಡುತ್ತಿರುವ ಅನ್ಯಾಯದ  ಬಗ್ಗೆ ತಿಳಿಸಿ ಯೋಚಿಸಲು ಹಚ್ಚಿದವರೂ ಅವರೇ.

ಕಾಲೇಜು ದಿನಗಳಲ್ಲಿ ಯಾರ್ಯಾರೋ ಸ್ನೇಹಿತರನ್ನು ಮನೆಗೆ ಕರೆ ತಂದಾಗಲೂ ಯಾವತ್ತೂ ಅವರ ಜಾತಿ, ಮತದ ಬಗ್ಗೆ ಒಂದಕ್ಷರವನ್ನೂ ಮಾತನಾಡುತ್ತಿರಲಿಲ್ಲ, ಮತ್ತು ಮನೆಯಲ್ಲಿ ಯಾರೂ ಅದರ ಬಗ್ಗೆ ಯಾರೂ ಚಕಾರ ಎತ್ತದಂತೆ ನೋಡಿಕೊಂಡಿದ್ದರು.  ಪ್ರತಿ ಪುರಾಣದ ಹಿಂದಿನ ಹುನ್ನಾರಗಳನ್ನು ನಾನು ಚಿಕ್ಕವಳಿರುವಾಗಲೇ ತೋರಿಸಿಕೊಡುತ್ತ, ಇಂದಿಗೂ ನನ್ನ ಯೋಚನಾ ಕ್ರಮ ತಪ್ಪಿದ್ದರೆ, “ಹೀಗಿರಬೇಕಿತ್ತಲ್ವಾ?” ಎಂದು ನವಿರಾಗಿ ಎಚ್ಚರಿಸುವ ಅಪ್ಪ ಮತ್ತೆ ಮತ್ತೆ ನೆನಪಾಗಿದ್ದು ಪಾವನಾ ಎಸ್ ರವರ ಅಲೆಮಾರಿ ಮೀರಾ ಸಂಕಲನದ ನನ್ನಪ್ಪ ಎಂಬ ಕವನವನ್ನು ಓದಿದಾಗ.

ಅವನೆಂದೂ ಭಕ್ತನ ಸೋಗು ಹಾಕಿ

ಬದುಕಲಿಲ್ಲ, ಸುಳ್ಳಾಡಲಿಲ್ಲ

ಅನ್ಯಾಯ ಸಹಿಸಲಿಲ್ಲ

ಎಂದಾಗ ನನಗೆ ನನ್ನ ಕಣ್ಮುಂದೆ ಬಂದಿದ್ದು ಅಪ್ಪನೇ.

ನಾನು ಓದುತ್ತಿದ್ದ ಶಾಲೆಯ ಹೆಡ್ ಮಾಸ್ತರ್ ಆಗಿದ್ದ  ಅಪ್ಪ ಮನೆಯಲ್ಲಿ ಯಾವತ್ತೂ ನನಗೆ ಹೊಡೆದವರೇ ಅಲ್ಲ. ಸಿಟ್ಟು ಬಂದರೆ ಒಮ್ಮೆ ಕಣ್ಣು ಬಿಟ್ಟು ಹೆದರಿಸುತ್ತಿದ್ದರು. ಆದರೆ ಮನೆಯಲ್ಲಿ ಎಂದೂ ಹೊಡೆತ ತಿನ್ನದ ನಾನು ಅದರ ಅಸಲು ಬಡ್ಡಿಯನ್ನು ಶಾಲೆಯಲ್ಲಿ ಗಳಿಸುತ್ತಿದ್ದೆ. ನಮ್ಮ ಕ್ಲಾಸಿನ ಯಾರೇ ಗಲಾಟೆ ಮಾಡಿದ್ದರೂ ಮೊದಲು ಹೊಡೆತ ಬೀಳುತ್ತಿದ್ದುದು ನನಗೇ. ಯಾರೇ ಕ್ಲಾಸಿನಿಂದ ಹೊರಗೆ ಓಡಾಡಿದರೂ ಮೊದಲು ಬೈಯ್ಯಿಸಿಕೊಳ್ಳುತ್ತಿದ್ದುದು ನಾನೆ.

ಮನೆಗೆ ಬಂದವಳೇ ಅಪ್ಪನ ಬಳಿ ಮಾತೂ ಆಡದೆ ಕೋಪ ತೋರಿಸಿಕೊಳ್ಳುತ್ತಿದ್ದೆ. “ನನ್ನ ಮಗಳಾದ್ದರಿಂದ ಉಳಿದವರು ಬೈಯ್ಯುವ ಮೊದಲೇ ನಾನು ನಿನಗೆ ಬೈಯ್ಯಬೇಕಾಗುತ್ತದೆ.” ಅಪ್ಪ ಸಮಜಾಯಿಶಿ ಕೊಡುತ್ತಿದ್ದರು. “ಹೆಡ್ ಮಾಸ್ತರ್ರು ತಮ್ಮ ಮಗಳಿಗೆ ಬೈಯ್ಯೋದೇ ಇಲ್ಲ ಅನ್ನಬಾರದ್ವಾ?” ಎಂಬ ಲೇಪನ ಬೇರೆ. ಹೀಗಾಗಿ ಕೋಪದಿಂದ “ನನಗೇ ಬೈಯ್ಯೋ ಹಾಗಿದ್ರೆ ನನ್ನನ್ನು ಬೇರೆ ಶಾಲೆಗೆ ಹಾಕಿ ಬಿಡು” ಎಂದೆಲ್ಲ ರೇಗುತ್ತಿದ್ದೆ.

ಬಹುಶಃ ನಾನಾಗ  ಆರನೆಯ ತರಗತಿ. ಒಂದು ದಿನ ಅಪ್ಪ ಪ್ರಶ್ನೆ ಪತ್ರಿಕೆ ತೆಗೆಯುತ್ತಿದ್ದರು. ಮನೆಯಲ್ಲಿ ಯಾವತ್ತೂ ಪ್ರಶ್ನೆ ಪತ್ರಿಕೆ ತೆಗೆಯದ ಅಪ್ಪ ಆ ದಿನ ಅದೇಕೋ  ಮನೆಯಲ್ಲಿ ಬರೆಯುತ್ತ ಕುಳಿತಿದ್ದರು. ಅದೇಕೋ ನಾನು ನನ್ನ ಮಾಮೂಲಿ ಹುಡುಗಾಟದಲ್ಲೇ ಅಪ್ಪನ ಬಳಿ ಹೋಗಿದ್ದೆ. ಅಪ್ಪ ಆ ಪ್ರಶ್ನೆ ಪತ್ರಿಕೆ  ಮಡಚಿ ಒಳಗಿಟ್ಟಿದ್ದರು. “ಬರೆಯುವಾಗ ಬರಬಾರದು ಅಂತಾ ಗೊತ್ತಾಗಲ್ವಾ?” ಎಂದೂ ಬೈಯ್ಯದ ಆಪ್ಪ ಆ ದಿನ ನನ್ನ ತಪ್ಪಿಲ್ಲದಿದ್ದರೂ ಬೈಯ್ದಿದ್ದರು.

ನಂತರ ಆ ಪ್ರಶ್ನೆ ಪತ್ರಿಕೆಯನ್ನು ಹರಿದು ಹಾಕಿ ನಾನು ಮಲಗಿದ ನಂತರ ಹೊಸದಾಗಿ ಮತ್ತೊಂದು  ಪ್ರಶ್ನೆ ಪತ್ರಿಕೆಯನ್ನು ಸೆಟ್ ಮಾಡಿದ್ದರು ಎಂಬುದು ನಂತರ ಗೊತ್ತಾಯಿತು. ಅಪ್ಪನ ಕುರಿತಾದ ಎಲ್ಲ ಘಟನೆಗಳನ್ನು ನೆನಪಿಸಿಕೊಳ್ಳಲು ಪಾವನಾ ಕವನ ನೆಪವಾಯಿತಷ್ಟೆ.

ಗುಬ್ಬಚ್ಚಿ ಮರಿಯಂತಿರುವ  ಈ ಹುಡುಗಿ ಅದೇನು ಬರೆಯುತ್ತಾಳಪ್ಪ  ಎಂದುಕೊಳ್ಳುತ್ತ ಈಕೆಯನ್ನು ಗಮನಿಸಿದ್ದು ಫೇಸ್ ಬುಕ್ ನಲ್ಲಿಯೇ. ಎಲ್ಲೋ ಹೈಸ್ಕೂಲಿನ ಎಳಸು ಹುಡುಗಿ ಇರಬಹುದು ಎಂದುಕೊಂಡು ಓದುತ್ತಿದ್ದವಳು ಕೆಲವೊಮ್ಮೆ ಅವಳ ಪ್ರಖರ ಹಾಗೂ ಅಷ್ಟೇ ಖಚಿತವಾದ ನಿಲುವುಗಳ ಬಗ್ಗೆ ಅಚ್ಚರಿಪಟ್ಟಿದ್ದುಂಟು. ಬದುಕಿನ ವೈರುದ್ಯಗಳನ್ನು ತೀರಾ  ಹತ್ತಿರದಿಂದ ಕಂಡಂತೆ ಮಾತನಾಡುವ ಹುಡುಗಿಯ ಧೈರ್ಯಕ್ಕೆ ಬೆರಗಾಗಿದ್ದೂ ಇದೆ.

ಹಾಗಂತಾ ಮುಖತಃ ಪರಿಚಯವಿರುವ ಹುಡುಗಿಯೂ ಅಲ್ಲ. ಇತ್ತೀಚಿನ ದಿನಗಳಲ್ಲಿ ಈ ಫೇಸ್ ಬುಕ್ ಎನ್ನುವುದು ಯಾರ್ಯಾರನ್ನೋ ಆಪ್ತರನ್ನಾಗಿಸಿ, ಹತ್ತಿರ ಇರುವವರನ್ನು ಅಪರಿಚಿತರನ್ನಾಗಿಸುವ ಇಂದ್ರಜಾಲದ ಮಂತ್ರದಂಡದಂತಿರುವಾಗ  ಯಾವುದೋ ಕಾರ್ಯಕ್ರಮದಲ್ಲಿ ಭೇಟಿ ಆದವಳನ್ನು ಗುರುತು ಹಿಡಿಯದೇ ಇರಲಾಗಲಿಲ್ಲ. ಕೇವಲ ಅವಳ ಫೋಟೋ ನೋಡಿ ಗುರುತಿಸಿದ್ದಲ್ಲ. ಅವಳ ಬರಹಗಳ ಹಿನ್ನೆಲೆಯಲ್ಲಿ ಗಮನಿಸಿದ್ದು. ಒಂದು ಚಂದದ ಕವನವನ್ನು ಅತ್ಯಾಕರ್ಶಕವಾಗಿ ಓದಿದವಳು ಮನಸ್ಸಿನಲ್ಲೇ ನಿಂತು ಬಿಟ್ಟಿದ್ದು ಸುಳ್ಳಲ್ಲ. ಹೀಗಾಗಿಯೇ  ಅವಳ ಸಂಕಲನದಲ್ಲಿ ಬರುವ

ಶ್ರೇಷ್ಟ ಕನಿಷ್ಟದ ಕಣ್ಕಟ್ಟಿನ ಫಲಕಗಳು

ಅಂಧವಾಗಿಸಿ ನಿನ್ನ ಮೂರಾಬಟ್ಟೆ ಮಾಡುತ್ತವೆ

ಮಾನವಿಯತೆಯ ಬಿಕರಿಗಿಡುವ

ತರ್ಕ-ತತ್ವಗಳು ನಿನ್ನ ರಸ್ತೆಯನ್ನೇ ಬದಲಿಸಿ

ಅದೇ ಹಳ್ಳ –ಹಂಪುಗಳಲ್ಲಿ ಒಂದಿಷ್ಟು

ಕರ್ಮ-ಕಂದಾಚಾರದಬೋಧನೆಗಳನ್ನು ನೀಡಿ

ನೀನು ಮಠ ಮದರಸಾ

ಚರ್ಚು, ವಿಹಾರ ಸ್ತೂಪಗಳ

ಪಾದ ತೊಳೆಯುವ

ಶ್ರೇಷ್ಠ ಗುಲಾಮ ಗಾಂಪನನ್ನಾಗಿಸುತ್ತದೆ

ಎಂಬಂತಹ ದಿಟ್ಟ ಸಾಲುಗಳು ಅಚ್ಚರಿ ಹುಟ್ಟಿಸುವುದಿಲ್ಲ.  ಯಾಕೆಂದರೆ  ಪಾವನಾ ಇದಕ್ಕಿಂತ ಗಟ್ಟಿಯಾಗಿ ಧ್ವನಿ ಎತ್ತುವ ಸಾಮರ್ಥ್ಯವುಳ್ಳವಳು ಎಂಬುದು ನನಗೀಗಾಗಲೇ ಮನದಟ್ಟಾಗಿ ಹೋಗಿದೆ.

“ಏ ಯಾರ್ರೋ ಎಸ್ಸಿ ಎಸ್ಟಿ ಮಕ್ಕಳು ಎದ್ದು ನಿಲ್ರೋ” ಎಂದು ‘ನಮ್ಮ’ ಮಾನ-ಮರ್ಯಾದೆಯನ್ನು ಬಿಟ್ಟು, ಸಂವೇದನೆಗಳನ್ನೆಲ್ಲ ಮೂಟೆ ಕಟ್ಟಿ ಬೀದಿಗೆಸೆದು ಜೂನ್ ತಿಂಗಳಿಂದ ಎದ್ದು ನಿಲ್ಲಿಸುತ್ತಲೇ ಇರುವ ನಮಗೆ ಖಂಡಿತವಾಗಿಯೂ ಗೊತ್ತಿದೆ, ಈ ಶ್ರೇಷ್ಟ- ಕನಿಷ್ಟದ ಕಣ್ಕಟ್ಟಿನ ಫಲಕಗಳು ನಮ್ಮನನ್ನು  ಅಂಧನನ್ನಾಗಿಸುವ ಪರಿ.

ಯಾರೋ ಒಬ್ಬ ದಲಿತ ಹುಡುಗ, ಮುಸ್ಲಿಂ ಹುಡುಗಿ ಚೆನ್ನಾಗಿ ಓದಿ ಹೆಚ್ಚಿನ ಅಂಕಗಳಿಸಿದರೆ ಕಾಪಿ ಹೊಡೆದಿರಬೇಕು ಎನ್ನುವ ಸಿದ್ಧ ಉತ್ತರ ನೀಡಿ “ಶೂದ್ರ ಮುಂಡೇವು,….”  “ಗಲೀಜು ದಲಿತರು,…..”   “ಬೆನ್ನಿಗೆ ಚೂರಿ ಹಾಕುವ ಸಾಬರು……”  “ನಗುನಗುತ್ತ ವಿಷ ಕುಡಿಸೋ ಕಿರಸ್ತಾನಿಗಳು….”  ಓದಿ ಹೆಚ್ಚಿನ ಅಂಕ ಗಳಿಸುವುದಕ್ಕೆ ಲಾಯಕ್ಕಲ್ಲ ಎಂದ ಅದೃಶ್ಯ ಫಲಕವನ್ನು ಅವರ ಹಣೆಗಳಿಗೆ ಅಂಟಿಸಿ ಬ್ರಾಂಡ್ ಮಾಡಿ ನಮ್ಮ ಮಾನವೀಯತೆಯನ್ನೇ ಬಿಕರಿಗಿಡುತ್ತೇವೆ.

ಇಲ್ಲಿ ಕೆಲವು ನಿಷೇಧಿತ ತಿರುವುಗಳಿವೆ

ಎಲ್ಲ ಧರ್ಮಗಳ ಅಲಿಖಿತ ಫಲಕಗಳಿವೆ

ಎಂದು ಶರಾ ಬರೆದು ಬಿಡುವ ಪಾವನಿ ಚಂದದ ಮಕಮಲ್ ಬಟ್ಟೆಯಲ್ಲಿ ಸುತ್ತಿ ಮುಖ ಮೂತಿ ನೋಡದೇ ಹೊಡೆಯುವ ಐನಾತಿಯಂತೆ ಕಾಣುವ ಕಾರಣಕ್ಕಾಗಿಯೇ ಹೆಚ್ಚು ಆಪ್ತವಾಗುತ್ತಾಳೆ.

ನಾವು ಚಿಕ್ಕವರಿರುವಾಗ ನಮ್ಮೂರಿನ ಯಾವ ದೇವಸ್ಥಾನದ ಬಾಗಿಲನ್ನೂ ಮುಚ್ಚಿಡುತ್ತಿರಲಿಲ್ಲ. ಗರ್ಭಗುಡಿಯ ಬಾಗಿಲೂ ತೆರೆದುಕೊಂಡೇ ಇರುತ್ತಿತ್ತು. ನಮ್ಮೂರಿನ ಒಂದು ದೇವಸ್ಥಾನಕ್ಕೆ ಯಾವುದೇ ಭಯದ ಭಾವನೆಗಳನ್ನು ಇಟ್ಟುಕೊಳ್ಳದೇ ಸರಾಗವಾಗಿ ಒಳಗೂ ಹೋಗಿ ದೇವರ ಶಿಲೆಯ ಮೇಲಿರುವ ಹೂವನ್ನು ತೆಗೆದುಕೊಂಡು ಬರುತ್ತಿದ್ದುದು  ಇಪ್ಪತ್ತು ವರ್ಷಗಳ ಹಿಂದಾದರೂ  ಮೊನ್ನೆಯೇ ನಡೆದಂತಿದೆ.

ಆದರೆ ಈಗ ಎಲ್ಲಾ ದೇವಸ್ಥಾನಗಳ ಬಾಗಿಲುಗಳಿಗೆ ಬೀಗ ಬಿದ್ದಿದೆ. ಬಡಪಾಯಿ ದೇವರು ಹೇಳದೇ ಕೇಳದೇ ಓಡಿ ಹೋದರೆ ಎಂಬ ಹೆದರಿಕೆಯೋ ಗೊತ್ತಿಲ್ಲ, ಅಂತೂ ಪೂಜಾರಿ ಒಳಗೆ ಬರುವವರೆಗಾದರೂ ದೇಗುಲ ಕಾಯಬೇಕಲ್ಲವೇ” ಹಾಗಾಗಿ ದೇವಸ್ಥಾನಗಳೆಲ್ಲ ಶಿಸ್ತಾಗಿ ಬೀಗ ಜಡಿಸಿಕೊಂಡು ಕುಳಿತಿವೆ. ಹಿಂದಿನ ಚಿಕ್ಕ ಗುಡಿಗಳ ಜಾಗದಲ್ಲಿ ಭಾರಿ ಕಟ್ಟಡಗಳ, ಸಂಗಮವರಿ ಕಲ್ಲುಗಳಿಂದ ನಿರ್ಮಾಣವಾದ ದೇವಾಲಯಗಳು ಬಂದು ಕುಳಿತ ನಂತರ ಆ ದೇವಾಲಯಗಳಲ್ಲಿ ಇದ್ದಿರಬಹುದಾದ ಹುಂಡಿಗಳನ್ನು ಕದಿಯಲು ಸದಾ ಹೊಂಚು ಹಾಕುತ್ತಿರುತ್ತಾರೆ ಎಂಬ ಕಾರಣಕ್ಕಾಗಿಯೇ ದೇವಾಲಯಗಳೆಲ್ಲವೂ ದೇವರ  ಬಂಧಿಖಾನೆಗಳಾಗಿ ಹೋಗಿವೆ.

ಯಾವುದೋ ಒಂದು ಪ್ರಸಿದ್ಧ ದೇವಸ್ಥಾನದಲ್ಲಿ ರಾತ್ರಿಯಿಡೀ ಕಾದು ಕುಳಿತು ಕೊಕ್ಕೆ ಬಳಸಿಯೋ, ಕೋಲಿಗೆ ಸ್ವಲ್ಪ ಅಂಟು ಹಚ್ಚಿ ನೋಟುಗಳನ್ನು ಜಾಗರೂಕವಾಗಿ ಹೊರಗೆಳೆದುಕೊಳ್ಳುತ್ತಲೋ, ಅಥವಾ ಇನ್ಯಾವುದೋ ಉಪಾಯದಿಂದ ಹುಂಡಿಯ ಹಣವನ್ನು ಎಗರಿಸುತ್ತಿದ್ದ ಭಟ್ಟರೊಬ್ಬರಿದ್ದರು.

ಎಂಟು- ಹತ್ತು ಟ್ರಕ್ ಕೊಂಡುಕೊಂಡು, ಜಬರ್ದಸ್ತಾಗಿ ವ್ಯವಹಾರ ಮಾಡಿಕೊಂಡು, ಕತ್ತಲ್ಲಿ ಎಮ್ಮೆ ಕಟ್ಟುವ ತರಹದ ದಪ್ಪದ ಬಂಗಾರದ ಚೈನು, ಕೈಗೆ ಬೇಡಿ ಹಾಕಿದಂತೆ ಬ್ರಾಸ್ ಲೆಟ್ ಧರಿಸಿ ಹತ್ತೂ ಬೆರಳು ಅರ್ಧ ಮುಚ್ಚಿ ಹೋಗುವಂತಹ ಉಂಗುರ ಧರಿಸಿ ಭಂಗಾರ ಭಟ್ಟರು ಎಂದು ಹೆಸರು ಪಡೆದು ಕೊನೆಗೊಮ್ಮೆ ವಿಷಯ ಗೊತ್ತಾಗಿ ಆ ದೇವಸ್ಥಾನದ ಆಡಳಿತ ಮಂಡಳಿಯವರು ಅವರ ಎಲ್ಲಾ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದರು.

ಈ ಕಥೆಯನ್ನು ಹಿಂದೆ ನಾನು ಕೆಲಸ ಮಾಡುತ್ತಿದ್ದ ಶಾಲೆಯೊಂದರ ಸ್ಟಾಫ್ ರೂಂನಲ್ಲಿ ಕುಳಿತು ಸವಿಸ್ತಾರವಾಗಿ ಕೇಳಿದಾಗಲೆಲ್ಲ ಬಹಳ ಶಕ್ತಿಯುತ ದೇವರೆಂದು ರಾಜ್ಯದಾದ್ಯಂತ ಹೆಸರು ಪಡೆದ ಆ ದೇವರು ತನ್ನ ಹುಂಡಿಯಿಂದ ಕದ್ದು ಹಣ ಮಾಡಿಕೊಳ್ಳುತ್ತಿದ್ದವನ ಕೈಯ್ಯನ್ನೋ ಕಾಲನ್ನೋ ಊನ ಮಾಡಿ, ಕಣ್ಣು, ಕಿವಿಯನ್ನು ಹಾಳು ಮಾಡಿ ಅಂಗವಿಕಲನಾಗುವಂತೆ ಏಕೆ ಮಾಡಲಿಲ್ಲ ಎಂಬುದೇ ನನ್ನ ಮುಂದಿರುವ ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಕಾಡುತ್ತಿತ್ತು.

ಯಾಕೆಂದರೆ ಚಿಕ್ಕಂದಿನಲ್ಲಿ ಮಾತು ಮಾತಿಗೂ ಅದೇ ದೇವರ ಆಣೆ ಹಾಕುತ್ತ, ಅದು ಬಹಳ ಶಕ್ತಿಯುತವಾದ ದೇವರು.. ಆಣೆಗೆ ತಪ್ಪಿದರೆ ಕೈಕಾಲು ಬಿದ್ದು ಹೋಗ್ತದಂತೆ ಎಂಬ ಮಾತನ್ನು ಕೇಳಿಯೇ ಬೆಳೆದಿರುವಾಗ ಈ ದೇವರೇಕೆ ಹೀಗೆ ಏನು ಮಾಡದೆ ಮೌನವಾಗುಳಿದ ಎಂಬುದಕ್ಕೆ ಪಾವನ

ಅದೆಷ್ಟೋ ಶತಮಾನಗಳಿಂದ

ಮಸೀದಿ ಮಂದಿರ ವಿಹಾರಗಳಲ್ಲಿ

ಬಂಧಿಸಲ್ಪಟ್ಟಿರುವ ಎಲ್ಲ

ದೇವರುಗಳ ಅದೃಷ್ಟದ

ಬಗ್ಗೆ ಬಹಳ ಮರುಕವಿದೆ

ಎನ್ನುತ್ತ ತಮ್ಮ ಕವನದ ಮೂಲಕ ಚಂದದ ಉತ್ತರ ಕೊಡುತ್ತಾರೆ. ಹೀಗಾಗಿಯೇ ಪಾವನಾಳ ಜೀವಪರವಾದ ಆಲೋಚನೆಗಳು ಎದೆ ತಟ್ಟುತ್ತವೆ. ಹೀಗಾಗಿಯೇ

ಕತ್ತಲೆಯ ಮಧ್ಯೆ ಇದ್ದ ಮಿಂಚುಳ

ಹಸಿವೇ ಕಾಣದ ಜೀವವೊಂದು

ಅನ್ನಕ್ಕಾಗಿ ಬಳಲುವಾಗ

ಹೊಟ್ಟೆ ತುಂಬಿಸಿದ್ದು

ಅನ್ನಪೂರ್ಣೆಯೂ ಸದಾಪೂರ್ಣೆಯೂ  ಅಲ್ಲ

ಎನ್ನುವ ಧೈರ್ಯ ಪಾವನಾಳಲ್ಲಿದೆ. ಪ್ರತಿ ಜೀವದ ಹಸಿವೆಯ ಕುರಿತೂ ಯೋಚಿಸಬಲ್ಲವರು ಮಾತ್ರ ಕವಿ ಹೃದಯ ಹೊಂದಿರುತ್ತಾರೆ ಎಂಬುದಕ್ಕೆ ನಿದರ್ಶನವಾಗಿ ಪಾವನ ನಮ್ಮೆದುರು ಇದ್ದಾಳೆ.

ಅದರರಿಂದಾಗಿಯೇ

ಚಿಗುರಿದ್ದ…

ಪಸರಿಸಿದ್ದು..

ಮಹಲು, ಮಸೀದಿ

ಮಂದಿರಗಳಲ್ಲಲ್ಲ

ಹೊರಗಿಟ್ಟ ದೂರದ

ಮುರುಕು ಜೋಪಡಿಯಲ್ಲಿ

ಎನ್ನುವ ಮಾತುಗಳನ್ನು ಯಾವ ಅಡೆತಡೆಯೂ ಆಡಲು ಸಾಧ್ಯವಾಗಿದೆ. ಮಂದಿರ, ಮಸೀದಿ ಚರ್ಚುಗಳು ನಮ್ಮನ್ನು ಚಿಗುರಿಸಲಾರವು ಎಂಬ ಧ್ವನಿತದ ಜೊತೆಜೊತೆಗೇ ಚಿಗುರ ಬೇಕಾದದ್ದು ಮುರುಕು ಜೋಪಡಿಗಳಲ್ಲಿ ಎನ್ನುವ ಸಾಮಾಜಿಕ ಪ್ರಜ್ಞೆಯೂ ಇಲ್ಲಿ ಜಾಗೃತವಾಗಿದೆ. ಕವಿತೆ ಹುಟ್ಟಬೇಕಾಗಿದ್ದೇ ಹೀಗೆ. ಸಾಮಾಜಿಕ ನ್ಯಾಯದ ಹಿನ್ನಲೆಯಲ್ಲಿ ಎನ್ನುವುದನ್ನು ಇಂದಿನ ಯುವಕವಿಗಳು ಮತ್ತೆ ಮತ್ತೆ ಸಾಬೀತು ಮಾಡುತ್ತಲೇ ಇದ್ದಾರೆ. ಅಂತಹ ಯುವ ಕವಿಗಳ ಸಾಲಿನಲ್ಲಿ ಪಾವನಾ ಹೆಸರೂ ಮುಂದಿದೆ ಎಂಬುದೆ ಎಂಬುದನ್ನು ನಾವು ಒಪ್ಪಿಕೊಳ್ಳಲೇ ಬೇಕಾಗಿದೆ. ಅಂತಹ ಒಂದು ನಿರ್ಧಿಷ್ಟ ಸಾಮಾಜಿಕ ಪರಿಕಲ್ಪನೆ ಇಲ್ಲದೇ ಹೋದಲ್ಲಿ

ಇರುಳಿಗೆ ಅರ್ಥ ನೀಡುವವಳ

ಬದುಕು ಕಗ್ಗತ್ತಲೆ…

ಎನ್ನುವಂತಹ ಎದೆಯನ್ನು  ಹಿಂಡಿ ಬಿಸಾಕುವ ಸಾಲುಗಳು ಹುಟ್ಟಲು ಸಾಧ್ಯವೇ ಇಲ್ಲ.

ಅಮ್ಮ ಯಾವಾಗಲೂ ಮಾತಿಗೊಂದು ಪುಟ್ಟ ಕಥೆ ಹೇಳುತ್ತಾರೆ. ಯಾವುದೋ ಊರಲ್ಲಿ ಕೋಮುಗಲಬೆ ನಡೆದು ಊರಿಗೆ ಊರೆ ಸುಡುಗಾಡಾಗಿ ಹೋಗಿತ್ತಂತೆ. ಎಲ್ಲಿ ನೋಡಿದರೂ ಹೆಣಗಳ ರಾಶಿ. ಹೆಣ ತೆಗೆದು ಸುಡೋದಕ್ಕೋ ಹೂಳೋದಕ್ಕೋ ಯಾರೂ ಇರಲಿಲ್ಲ. ಆಗ ಅವನು ಊರೊಳಗೆ ಕಾಲಿಟ್ಟನಂತೆ. ಯಾರನ್ನು ಊರೊಳಗೆ ಕಾಲಿಡಬೇಡ ಎಂದು ಎಲ್ಲ ಧರ್ಮದವರು ಆಜ್ಞೆ ಮಾಡಿದ್ದರೋ ಅವನು.

ಬಂದವನೇ ಯಾವ ಜಾತಿ, ಧರ್ಮ ನೋಡದೇ ಎಲ್ಲ ಹೆಣಗಳಿಗೂ ಒಂದು ಗತಿ ಕಾಣಿಸಿದನಂತೆ. ಯಾವುದೋ ಹೆಣ ತೆಗೆಯಲು ಹೋದಾಗ ಆ ಹೆಣವನ್ನು ಅಪ್ಪಿ ಕುಳಿತಿದ್ದ ಚಂದದ ಹುಡುಗಿಯೊಬ್ಬಳು ಹೆಣವನ್ನು ಬಿಡಲಾಗದೇ ಅದನ್ನು ಹೊತ್ತು ನಡೆದಿದ್ದ ಅವನ ಹಿಂದೆಯೇ ನಡೆದಳಂತೆ. ಆತ ಹೆಣವನ್ನು ಮಣ್ಣು ಮಾಡಿದ ಮೇಲೂ ಅಲ್ಲೇ ಕಾದಿದ್ದವಳಿಗೆ ಎರಡು ಹೊತ್ತಿನ ಊಟ ಹಾಕಿದನಂತೆ. ಈಗ ಅವರಿಬ್ಬಿಗೂ ಎರಡು ಚಂದದ ಮಕ್ಕಳು… ಅಮ್ಮ ಹೇಳುವಾಗಲೆಲ್ಲ ಕಣ್ಣೆದುರು ಒಂದು ಸಿನೇಮಾ ಓಡಿದಂತಾಗುತ್ತಿತ್ತು.

ಜಾತಿಯೆಂಬ ಊರೆಲ್ಲ  ಸುಟ್ಟು ಹೋಗಿತ್ತು

ಇತ್ತ ಸ್ಮಶಾನದ ಹೆಣ ಸುಡುವವನ

ಗುಡಿಸಲ ಮುಂದೆ ಆಗತಾನೆ ಪ್ರೀತಿ ಮೊಗ್ಗು ಅರಳುತ್ತಿತ್ತು

ಎನ್ನುವ ಪಾವನಾಳ ಸಾಲುಗಳನ್ನು ಓದಿದಾಗ ಯಾವಾಗ ನನ್ನಮ್ಮ ಇವಳಿಗೂ ಈ ಕಥೆ ಹೇಳಿದಳಪ್ಪ ಎಂದು ಒಂದು ಕ್ಷಣ ಭ್ರಮೆ ಆವರಿಸಿ ಬಿಟ್ಟಿತು.

“ಈ ಇತಿಹಾಸವನ್ನು  ಎಷ್ಟೊಂದು ವಿಚಿತ್ರವಾಗಿ ತಿರುಚಿ ಕಲಿಸಲಾಗುತ್ತಿದೆ” ಚಿಕ್ಕಪ್ಪ ಪದೇ ಪದೇ ಹೇಳುತ್ತಿರುತ್ತಾರೆ. ವಿಜಯನಗರದ ಮೂಲದ ಕುರಿತಾಗಿ ಸಂಶೋಧನೆಯಲ್ಲಿ ತೀವ್ರವಾಗಿ ತೊಡಗಿಕೊಂಡಿರುವ ಚಿಕ್ಕಪ್ಪ, ಹಕ್ಕ-ಬುಕ್ಕರ  ಮೂಲ ಊರು ಆಂದ್ರದ ಗುತ್ತಿ ಎಂದು ದಾಖಲಾಗಿರುವ  ಕುರಿತು ಅಸಮಧಾನ ವ್ಯಕ್ತಪಡಿಸುತ್ತ ಖೇದದಿಂದ ಹೇಳುತ್ತಾರೆ. ದೊರೆತಿರುವ ಆಧಾರಗಳು, ಶಿಲಾಶಾಸನಗಳು ಸ್ಪಷ್ಟವಾಗಿ  ವಿಜಯನಗರದ ಮೂಲವನ್ನು ಹೇಳುತ್ತಿರುವಾಗಲೂ ಇಂದಿಗೂ ನಮ್ಮ ಇತಿಹಾಸವನ್ನು ಬದಲಾಯಿಸಿ ಪಠ್ಯದಲ್ಲಿ ಸೇರಿಸಿಕೊಳ್ಳುವ  ಯಾವ ಪ್ರಸ್ತಾಪವನ್ನೂ ಇಡದಿರುವುದು ಅವರಿಗೆ ಕೋಪ ತರಿಸಿದೆ.

ಇತ್ತೀಚೆಗೆ ಆತ್ಮೀಯರೊಬ್ಬರು ಅಮೇರಿಕಾವನ್ನು ಕೊಲಂಬಸ್ ಕಂಡು ಹಿಡಿದ ಎಂದಾಗ ಅಲ್ಲಿನ ಮೂಲ ನಿವಾಸಿಗಳು ವಿರೋಧಿಸುವುದನ್ನು ಹೇಳುತ್ತ, ಕೊಲಂಬಸ್ ಅಮೇರಿಕಾವನ್ನು  ಕಂಡು ಹಿಡಿದ ಅಂಗವಾಗಿ ಆಚರಿಸುವ ಹಬ್ಬವನ್ನು ನಿಲ್ಲಿಸಿದ  ಕುರಿತು ಪ್ರಸ್ತಾಪಿಸಿದ್ದರು. ಕೊಲಂಬಸ್ ಅವರ ದೇಶದವರಿಗೆ ಗೊತ್ತಿಲ್ಲದ ಒಂದು ಪ್ರದೇಶವನ್ನು ಕಂಡುಕೊಂಡಿರಬಹುದೇ ಹೊರತೂ ಕೊಲಂಬಸ್ ಅಲ್ಲಿಗೆ ಹೋಗುವ ಮೊದಲು ಅಲ್ಲಿ ಜನವಸತಿ ಇಲ್ಲವೆಂದು ಅರ್ಥವಲ್ಲ ಎಂಬ  ಸಮಂಜಸವಾದ ವಾದವನ್ನು ಅಲ್ಲಿನ ಮೂಲನಿವಾಸಿಗಳು ಎದುರಿಗಿಡುತ್ತಿದ್ದಾರೆ. ಕೊಲಂಬಸ್ ತಮ್ಮ ನಾಡಿಗೆ ಬಂದಿದ್ದರಿಂದ ಅಲ್ಲಿನ ಮೂಲ ನಿವಾಸಿಗಳು ದಸ್ಯುಗಳಾಗಬೇಕಾಯಿತು ಎಂಬ ಸಹಜವಾದ ಕೋಪ ಅವರಿಗಿದೆ.

ಪಾವನ ಕೂಡ ಇಲ್ಲಿ ಅದನ್ನೇ ಹೇಳುತ್ತಾರೆ.

ಭಾರತವು ವಾಸ್ಕೋಡಿಗಾಮನಿಂದ

ಕಂಡು ಹಿಡಿಯಲ್ಪಟ್ಟಿತು

ಎಂಬ ತಿರುಚಿದ ಇತಿಹಾಸದ

ಪುಟಗಳ ನಮ್ಮ ಮಕ್ಕಳಿನ್ನೂ

ಓದುತ್ತಿರುವಾಗ ….

ಅಂದರೆ ವಾಸ್ಕೋಡಿಗಾಮ ಭಾರತವನ್ನು ಕಂಡು ಹಿಡಿದ ಅಂತಾದರೆ ವಾಸ್ಕೋಡಿಗಾಮ ಬರುವ ಮೊದಲು ಭಾರತ ಇರಲೇ ಇಲ್ಲವೇ? ಸಾವಿರಾರು ವರ್ಷಗಳ ಇತಿಹಾಸ ಇರುವ ಭಾರತವನ್ನು ಕಂಡು ಹಿಡಿಯುವ ಮಾತು ತೀರಾ ಹಾಸ್ಯಾಸ್ಪದ ಎಂಬುದನ್ನು ಇಲ್ಲಿ ಸೂಚ್ಯವಾಗಿ ಸೂಚಿಸಲಾಗಿದೆ.

ಕೆಲವೊಮ್ಮೆ ತೀರಾ ವಿರಾಗಿಣಿಯಂತೆ ಮಾತನಾಡುವ ಪಾವನಾ ಬದುಕ ಪ್ರೀತಿಯನ್ನು ಎಂದೂ ಕಳೆದುಕೊಳ್ಳದವಳು. ತುಂಬಾ ಎಗ್ಗು ಸಿಗ್ಗಿಲ್ಲದೇ ಬರೆದು ಬಿಟ್ಟೆನಾ? ಎಂದು ಈಗ ಯೋಚಿಸುವ ಪಾವನಾ ಮೊದಲೆಲ್ಲ ಇದ್ದಿದ್ದದ್ದೇ ರೆಬೆಲ್ ಆಗಿ ಎನ್ನುವುದನ್ನು ನಗುನಗುತ್ತಲೇ ಒಪ್ಪಿಕೊಳ್ಳುತ್ತಾಳೆ. ಅದಕ್ಕೆ ಕವನದ ಮೂಲಕವೇ ಪುರಾವೆಗಳನ್ನೂ ಒದಗಿಸುತ್ತಾಳೆ ಆದರೆ ಹಾಗೆಂದು ವಯೋ ಸಹಜ ಪ್ರೀತಿ ಪ್ರೇಮವನ್ನು ಎಲ್ಲಿಯೂ ಕಟ್ಟಿಹಾಕಿದವಳಲ್ಲ. ಎದೆಯ ಬಾಗಿಲಲ್ಲಿ ಮೂಡಿದ ಒಲವ ಕಾಮನ ಬಿಲ್ಲಿನ ಬಣ್ಣ ಕದಡಲು ಎಲ್ಲಿಯೂ ಬಿಟ್ಟವಳಲ್ಲ.

ನನ್ನೆಲ್ಲ ಸಿಹಿಯಪ್ಪುಗೆ ತಪ್ಪೊಪ್ಪಿಗೆಗಳ

ಅದೇ ಅಂಗಳದಿ ಹರವುತ್ತೇನೆ

ನಿನ್ನೆದೆ ಕದ ತೆರೆದು

ಬರಮಾಡಿಕೊಳ್ಳುತ್ತೀಯಾ?

ಎಂದು ಗುನುಗಿಕೊಳ್ಳುವುದೂ ಆಕೆಗೆ ಗೊತ್ತಿದೆ. ಹಾಗೆ ನಮಗೆ ನಾವೇ ಗುನುಗಿಕೊಳ್ಳುವುದರಿಂದ ಪ್ರೀತಿ ಸಫಲವಾಗುವುದಿಲ್ಲ ಎಂಬ ಎಚ್ಚರಿಕೆಯೂ ಇರುವುದರಿಂದ

ಅಂತರಂಗದ ಅಂತಃಪುರದಿ

ಅನುಭೂತಿಯ ಸುಳಿಯಾಗಿ

ಒಳಗಿವಿಯಾಗಿ ಒಳಿತಾಗಿ

ಕುಳಿತು ನಾನೇ ನೀನಾಗಲು

ನನ್ನನ್ನು ಕಾದಿರಿಸಿದ್ದೇನೆ

ನೀನೂ ಹಾಗೇ ಕಾದಿದ್ದೀಯಾ?

ಎಂದು ಎಲ್ಲಾ ಹೆಣ್ಣುಗಳ ಒಳ ತುಡಿತವನ್ನು ಬಿಚ್ಚಿಡುತ್ತಾಳೆ. ಎಷ್ಟೇ ಪ್ರೀತಿಸುತ್ತಾನೆಂದು ಗೊತ್ತಿದ್ದರೂ ಆಗಾಗ ನೀನು ನನ್ನ ಪ್ರೀತಿಸ್ತೀಯಾ? ಎಂದು ಪದೇ ಪದೇ ಕೇಳಿ ಆತ ಕೊಡುವ ಉತ್ತರಕ್ಕೆ ಮತ್ತೆ ಮತ್ತೆ ಪುಳಕಗೊಳ್ಳದಿರುವ ಹೆಣ್ಣು ಇಲ್ಲದಿರಲು ಸಾಧ್ಯವೇ? ಆ ಉತ್ತರ ಪರೀಕ್ಷೆಯಲ್ಲಿ ಬರೆಯುವ ನಾಲ್ಕಂಕದ ಪ್ರಶ್ನೆಗೆ ಉತ್ತರವಾಗಿರಬೇಕಿಲ್ಲ., ಎರಡಂಕದ ಪ್ರಶ್ನೆಗೂ ಉತ್ತರ ಬರೆಯುವ ಗೊಜಲು ಬೇಕಿಲ್ಲ. ಅದು ಕೇವಲ  ಬಿಟ್ಟಸ್ಥಳ ತುಂಬಿರಿ ಅಥವಾ ಹೌದು ಇಲ್ಲ ಎಂದು ಗುರುತಿಸಿ ಎಂಬ ಅರ್ಧ ಅಂಕದ ಪ್ರಶ್ನೆಯಷ್ಟೇ.  ಆ ಅರ್ಧ ಅಂಕದ ಪ್ರಶ್ನೆಯನ್ನೇ ತನ್ನ ಜೀವಮಾನದ ಕೋಟಿ ಬೆಲೆ ಬಾಳುವ ಉತ್ತರ ಎಂದುಕೊಳ್ಳುತ್ತ ಮತ್ತೆ ಮತ್ತೆ ಕೇಳುವ ಹೆಣ್ಣು ಹೃದಯದ ಧ್ವನಿಯಾಗಿ ಈ ಸಾಲುಗಳು ಎದೆನಾಟುತ್ತವೆ.

ನಿನ್ನ ನೆನಪುಗಳೀಗ

ನೆತ್ತಿಗೆ ಹತ್ತಿ

ಬಿಕ್ಕಳಿಕೆ ಶುರುವಾಗಿ ಬಿಟ್ಟಿದೆ

ಎಂಬ ಸಾಲುಗಳನ್ನು ಓದಿದಾಗ ಅಂತಹ ಬಿಕ್ಕಳಿಕೆ ನನಗೂ ಬರಲಪ್ಪ ಎಂದು ಒಮ್ಮೆ ಕಣ್ಣು ಮುಚ್ಚಿ ಬೇಡಿಕೊಂಡೆ. ನೀವು ಈ ಸಾಲನ್ನು  ಓದಿದರೆ ಖಂಡಿತವಾಗಿಯೂ ನೀವೂ ಕೂಡ ಒಮ್ಮೆ ಕನವರಿಸದೇ ಇರಲಾರಿರಿ.

ಆದರೆ ಅದರ ಜೊತೆ ಜೊತೆಗೇ ಹುಡುಗಿಯರ ಸೀರೆ ಸ್ಕರ್ಟ್, ಜೀನ್ಸ್ ಬಗ್ಗೆಯೂ ವ್ಯಾಖ್ಯಾನಕ್ಕೆ ತೊಡಗುತ್ತಾಳೆ

ಅರ್ಥವಾಗದ ನಮ್ಮ ಹುಡುಗಿಯರದ್ದು

ಹೀಗೊಂದು ಹಿಂದಿನ ಕಥೆಯಿದೆ

ಈಗಿನ ಶಾರ್ಟ್ಸು, ಸ್ಕರ್ಟ್ಸು, ಜೀನ್ಸು ಗೀನ್ಸುಗಳ ಹಿಂದೆ

ಅಕ್ಷಯ ಸೀರೆಗೂ ಉದ್ದದ ದುರಂತ ಇತಿಹಾಸವಿದೆ

ಎನ್ನುವ ಮೂಲಕ ಹೆಣ್ಣಿನ ನೋವುಗಳು ಪುರಾಣ ಕಾಲದಿಂದಲೂ ಅಕ್ಷಯಸೀರೆಯಂತೆಯೇ ಬೆಳೆಯುತ್ತಿದೆ ಎನ್ನುವ ರೂಪಕವಾಗುತ್ತಾಳೆ ಆ ಪುಣ್ಯಾತ್ಮ ಶ್ರೀಕೃಷ್ಣ ಎಳೆದಷ್ಟೂ ಸೀರೆ ಕೊಡುವ ಬದಲು ದುಶ್ಯಾಸನನ ಕೈಗೊಂದು ಲಕ್ವಾ ಹೊಡೆಸಬಹುದಿತ್ತು ಎನ್ನುವ ನನ್ನ ಪ್ರಶ್ನೆ ಪ್ರಶ್ನೆಯಾಗಿಯೇ ನನ್ನಲ್ಲಿ ಉಳಿದು ಹೋದಂತೆ ಈ ಸೀರೆಯ ಕಷ್ಟಗಳೂ ಅಂತ್ಯ ಕಾಣುತ್ತಿಲ್ಲ.

ಬದುಕಿನ ಹಲವು ಮಗ್ಗಲುಗಳನ್ನು ತೀರಾ ಹತ್ತಿರದಿಂದ ಕಂಡವಳು ಪಾವನಾ. ಎಲ್ಲ ಮುಗಿಯಿತು ಎನ್ನುವಾಗಲೇ ಫಿನಿಕ್ಸನಂತೆ ಪುಟಿದು ಕುಳಿತವಳು ಬದುಕು ಎನ್ನುವುದು ಏನೆಂದು ತಿಳಿಯಲು ಒಮ್ಮೆ ಸಾವಿನ ಮನೆಯ ಕದವನ್ನು ತಟ್ಟಿಯೇ ಬರಬೇಕೇನೋ ಎನ್ನುವ ತರದಲ್ಲಿಯೇ ಸಾಲುಗಳನ್ನು ಪೋಣಿಸುವಾಗ  ಒಮ್ಮೊಮ್ಮೆ ಭಯವೂ ಆಗುತ್ತದೆ.

ಹೇಳುತ್ತಾರೆ ಎಷ್ಟೊಂದು ಬಾಲಿಶ

ನಿನ್ನಂತೆ ನಿನ್ನ ಸಾಲುಗಳು

ನಾ ಸೋತು ಉಸಿರಾಟ

ಕಷ್ಟವಾಗಿ ಕುಸಿದು ಬೀಳುತ್ತೇನೆ

ಎನ್ನುವಾಗ ಈ ಹುಡುಗಿಯನ್ನೊಮ್ಮೆ ಎದೆಗವಚಿ ಸಂತೈಸಲೇ ಎಂದೆನಿಸಿದರೂ

ಬದಲಾಗಬಲ್ಲುದೇ ಎದೆ ಖನಿ

ಬದಲಾಗಬಹುದಷ್ಟೇ ಲೇಖನಿ

ಎಂದು ತನ್ನೊಳಗಿನಲ್ಲಷ್ಟೇ ಅಲ್ಲ ನಮ್ಮಲ್ಲೂ ಆತ್ಮವಿಶ್ವಾಸ ತುಂಬಿ ಬಿಡುವ ಸಾಮರ್ಥ್ಯ ಪಾವನಾಳಿಗಿದೆ. ಆ  ಗಟ್ಟಿತನ ಯಾವತ್ತೂ ಅವಳಲ್ಲಿರಲಿ.

ಕಡಲ ತಡಿಯೇ

ಮೌನ ಮುರಿದು ಒಮ್ಮೆ ಧಿಕ್ಕಾರ ಕೂಗಿ ಬಿಡು

ಎನ್ನುವ ಅದ್ಭುತ ಸಾಲುಗಳಿರುವ, ಇಡೀ ವಿಶ್ವದ ನಿರಾಶ್ರಿತರ ಸಮಸ್ಯೆಗಳನ್ನೆಲ್ಲ ಒಂದೇ ಗುಕ್ಕಿಗೆ ಕಟ್ಟಿಕೊಡುವಂತಹ ಚಂದದ ಒಳ ನೊಟವಿರುವ ಕಡಲ ತಡಿಯೇ ಎನ್ನುವಂತಹ ಹತ್ತಾರು ಮತ್ತೆ ಮತ್ತೆ ಓದಿಸಿಕೊಳ್ಳುವ ಕವನಗಳಿಗಾದರೂ ನೀವು ಒಮ್ಮೆ ಅಲೆಮಾರಿಯ ಮೀರಾ ಪುಸ್ತಕವನ್ನು ಓದಲೇಬೇಕು

16 comments

 1. ಎಂದಿನಂತೆ ನಿಮ್ಮ ಕೃತಿ ವಿಶ್ಲೇಷಣೆ ಆಪ್ತವಾಗಿ ಮೂಡಿಬಂದಿದೆ. ಇಷ್ಟವಾಯಿತು.

 2. ಪಾವನಾ ‘ಅಲೆಮಾರಿಯ ಮೀರಾ’ ನ ಉಲ್ಲೇಖಿಸಿದ ಕವನಗಳ ದಾಟಿಯು ಮತ್ತದರೊಳಗಿನ ಬದ್ಧತೆ ಮತ್ತು ಅದರ ಜೊತೆ ಹಂಚಿಕೊಂಡ ಅನುಭವಗಳು ನನಗೆ ಬಹಳ ಖುಷಿಕೊಡ್ತು. ಪಾವನಾಳನ್ನು ಕುತೂಹಲದಿಂದ ಓದುವೆ ಮ್ಯಾಮ್.

 3. ಬರಹ ತುಂಬಾ ಆಪ್ತವೆನಿಸಿತು. ‘ಅಲೆಮಾರಿ’ಯನ್ನು ಓದುವ ಹಂಬಲವಿದೆ..

  • ಥ್ಯಾಂಕ್ಯೂ ಸರ್. ನೀವು ಓದಲೇ ಬೇಕಾದ ಪುಸ್ತಕ ಇದು

 4. ಪಾವನಾ ಬರೆದ ಕವನಗಳನ್ನು ಕುರಿತ ನಿಮ್ಮ ಲೇಖನ ಮನ ತಟ್ಟಿತು. ದ್ರೌಪದಿಗೆ ಅಕ್ಷಯಸೀರೆ ಕೊಡೂಬದಲು ದುಶ್ಶಾಸನನ ಕೈ ಕತ್ತರಿಸಬೇಕಿತ್ತು ಎಂಬ ಮಾತು ಇಂದಿಗೂ ತನ್ನ ಸತ್ಯ ಉಳಿಸ್ಕೊಂಡಿದೆ. ದ್ರೌಪದಿ ಯ ಮಾನವನ್ನ ಕಾಯೋಕಿಂತ ಮೊದ್ಲು ಆ ಸೃಷ್ಟಿ ಕರ್ತ ಈ ಗಂಡಸರ ಬುದ್ಧಿ ತಿದ್ದಿಟ್ಟಿದ್ರಾಗ್ತಿರ್ಲಿಲ್ವೇನ್ರೀ…

  • ನಿಜ ಅಮ್ಮ. ಹಾಗೆ ಮಾಡುವುದು ಒಳ್ಳೆಯದಿತ್ತು

 5. ನಿಮ್ಮ ವಿಶ್ಲೇಷಣೆ ಬರಹದಲ್ಲಿ ಪಾವನಾ ಅವರ ಬಗ್ಗೆ ನಿಮ್ಮ ತಾಯಿಯ ಮಮತೆ ಗೋಚರಿಸುತ್ತದೆ .

 6. Nimma vishleshane eshtu sogasagiruttadendre e kshanave pustaka kondu odabekenisuvashtu.
  Tumba Chenda bareetiri Sridevi. Nimma lekhanagalanuu odi odi nanna pustaka kolluva lishtu eeeeeshtuddavagide:-) Heege bareetiri, oduva aasakthiyannu nimma baravanigegala moolaka innashtu hetchisiri.

  • ಥ್ಯಾಂಕ್ಯೂ. ನನಗೆ ಬೇಕಾದ್ದೂ ಅಷ್ಟೇ. ಓದುವ ಚಟ ಬೆಳೆಯ.ಬೇಕು ಹೀಗಾದೂರೂ ಪುಸ್ತಕ ಓದುವ ಹವ್ಯಾಸ ಬೆಳೆಯಲಿ

Leave a Reply