ನಾನು ಆಸೀಫಾ..

ಎನ್.ರವಿಕುಮಾರ್ / ಶಿವಮೊಗ್ಗ

ನಾನು ಹಸಿರ ಕಣಿವೆಯಲ್ಲಿ
ಮೆತ್ತನೆಯ ಹುಲ್ಲು,ಹೂ ಗಿಡಗಳು, ಕಣಿವೆಯ ಕಲ್ಲುಗಳ ಜೊತೆ ನಿತ್ಯ ಮಾತಾಡುತ್ತಿದ್ದೆ..
ಅವೆಂದೂ ನನ್ನ ಹಿಡಿದೆಳೆದಾಡಲಿಲ್ಲ.

ತುಂಡು ಲಂಗಕ್ಕೆ ನೆಟ್ಟು‌ಎಳೆದ‌
ಮುಳ್ಳು ಮೊನೆಯೊಂದು
ಮೆದು ಬೆರಳು ಸೋಕಿದೊಡನೆ
ಶರಣಾಗುತ್ತಿತ್ತು.

ನನ್ನ ಹೆಜ್ಜೆ ಜಾಡು ಹಿಡಿದೆ ಬರುತ್ತಿದ್ದ ಕುದುರೆ,ಕುರಿಗಳು
ಎಂದಾದರೂ  ನನ್ನ ಪಾದ ತುಳಿದು ನೋವಿಟ್ಟ ನೆನಪಿಲ್ಲ
ಅವು ಈ ಮನುಷ್ಯರಂತಲ್ಲ..

ದೇವರ ಕೋಣೆಯಲ್ಲಿ ನಾನು ಉಸಿರುಗಟ್ಟಿದ್ದೆ
ಅಂಗಾಂಗಗಳ ಮೇಲೆ ದೇವರು ಕುಣಿದಿದ್ದ
ನನ್ನ ಕೆಂಪು ಕೆಂಪು ಒಡಲು
ಈಗ ಉರಿದು ಇದ್ದಿಲಾಗಿತ್ತು. ಕಣ್ಣೀರು ಕಣಿವೆಯಲ್ಲಿ ಧುಮ್ಮಿಕ್ಕಿತ್ತು
ದೇವರು ಸುಮ್ಮನೆ ಇದ್ದ..

ಆ ದೇವರ ಸನ್ನಿಧಿಯಲ್ಲಿ‌ ನರಕವೊಂದ ಕಂಡೆ
ನನ್ನ ರಕ್ತ,ಮಾಂಸ,ಮೂಳೆಗಳ
ನೈವೇದ್ಯ ಇರಿಸಿದರು.
ಅಗ್ನಿಕುಂಡದಲ್ಲಿ ಅವಿಸ್ಸಾಗಿ ಸುರಿದು ಸುಟ್ಟರು.

ನಾ ಬರುವ ಹೊತ್ತಾಯಿತು
ಅಮ್ಮೀ ಕಾಯುತ್ತಿದ್ದಾಳೆ
ಬಿಸಿ ಬಿರಿಯಾನಿಯ ಕೈತುತ್ತ ಮಿದ್ದಿಕೊಂಡು
ಕಣಿವೆಯ ದಾರಿ ದಾರಿ ನೋಡುತ್ತಾ,
ಅವಳ ಕರುಳು ಇಂದು ಸಂಕಟಿಸದೆ ಇದ್ದಿಲ್ಲ
ಕುರಿ,ಕುದುರೆಗಳು ನನ್ನ ಹೆಜ್ಜೆಯ ಜಾಡು  ಮೂಸುತ್ತಾ
ತಿರುಗುತ್ತಿವೆ.

ಅಬ್ಬಾ  ಹೇಳಿದ ಫರ್ವಧಿಗಾರ ಬರಲೇ‌ ಇಲ್ಲ ನನ್ನ ರಕ್ಷಿಸಲು.
ಇರಲಿ ಬಿಡು,
ಮನುಷ್ಯರಂತೆ‌ ನೀನೂ‌ ಎಷ್ಟೊಂದು ಕ್ರೂರಿ.
ನಿನ್ನನ್ನು ಕ್ಷಮಿಸಿದ್ದೇನೆ. ಮುಂದಿನ ಜನ್ಮವೆಂದಿದ್ದರೆ
ನೀನು ಕುರಿ,ಕುದುರೆಯಾಗೇ ಹುಟ್ಟಿಬಿಡು.

ನೀನು,ನಿನ್ನ ಭಕ್ತರು ಇಲ್ಲವೆಂದಾದಾಗ ನನ್ನ ಕುರಿ,ಕುದುರೆಯೊಂದಿಗೆ , ಹೂವು, ಕಣಿವೆಯೊಂದಿಗೆ ನಿರುಮ್ಮಳವಾಗಿ ನೆಗೆದಾಡುತ್ತಾ
ಅಮ್ಮಿಯ ತೋಳು ಸೇರಿಕೊಳ್ಳುತ್ತೇನೆ.
ಅಲ್ವಿದಾ……

ನಾನು ಆಸೀಫಾ..

7 Responses

 1. Geetha Surathkal says:

  ಹತಪ್ರಭಳಾಗಿ ಕುಳಿತಿದ್ದೇನೆ.ನಮ್ಮ ರಾಜಕೀಯ ಹುನ್ನಾರಗಳು ಒಂದು ಮಗುವನ್ನು ಬಲಿ ತೆಗೆದುಕೊಳ್ಳಬೇಕೆ?ಇಷ್ಟು ಕ್ರೂರವಾಗಿ ನಮ್ಮ ರಾಜಕೀಯ,ಧರ್ಮ ವಿಜೃಂಭಿಸಬೇಕೇ?

 2. ಕವನ ಕರುಳಿರಿಯಿತು.

 3. Shreedevi keremane says:

  ನಮ್ಮ ಬಗ್ಗೆ ನಾವೇ ನಂಬಿಕೆ ಕಳೆದುಕೊಳ್ಳುವ ಹೊತ್ತು ಇದು

 4. Dr.M.Jayashree says:

  ಮಕ್ಕಳ ಅತ್ಯಾಚಾರಿ ಗಳಿಗೆ ಗಲ್ಲು ಶಿಕ್ಷೆ ಆಗಬೇಕು.

 5. Vinathe Sharma says:

  Just too heart breaking. Let the whole world know about it.

 6. ಕರುಳು ಕಿವುಚಿದಂತಾಗಿದೆ. ರಕ್ಕಸರೂ ಇಂತಿರಲಿಲ್ಲವೇನೋ
  ಅವರೆಲ್ಲರಿಗೂ ಇನಿತೂ ತಡವಿರದೆ ತಕ್ಷಣ ಗಲ್ಲುಶಿಕ್ಷೆಯಾಗಲಿ. ಇನ್ಯಾವ ಮಗುವಿಗೂ ಆಸೀಫಾಳ ಸ್ಥಿತಿ ಬಾರದಿರಲಿ..

 7. Kiran says:

  It is a heinous crime of the worst imaginable type, but what is more shocking, if that word still has some meaning, is people have absolutely no fear of law or punishment or anything and can think of doing such a horrific act with such casual attitude.
  This is what the country needs to address foremost, overhaul the police and judicial system completely from ground up and instill that fear of a punishment without failure and DELAY in tune with their crimes..

Leave a Reply

%d bloggers like this: