ಮಗೂ, ಉಸಿರನ್ನು ಬಿಗಿಹಿಡಿದು ವಾದ್ಯದೊಳಗೆ ತುಂಬಬೇಕು..

ಉಸ್ತಾದ್ ಆಲಿಭಕ್ಷ್ ರವರು ಪ್ರತಿ ದಿನ ಬೆಳಿಗ್ಗೆ ವಿಷ್ಣು ದೇಗುಲದಲ್ಲಿ ನಡೆಯುತ್ತಿದ್ದ ಪೂಜಾ ಕಾರ್ಯವನ್ನು ಮುಗಿಸಿ; ಅಲ್ಲಿಂದ ಹೊರಟು ಗಂಗಾ ನದಿಯ ತಟದಲ್ಲಿರುವ ಬಾಲಾಜಿ ದೇಗುಲದಲ್ಲಿ ಪ್ರತ್ಯೇಕವಾಗಿ ನಿರ್ಮಿಸಲಾಗಿದ್ದ ಕೊಠಡಿಯಲ್ಲಿ ಕುಳಿತು ಶೆಹನಾಯ್ ಅಭ್ಯಾಸದಲ್ಲಿ ನಿರತರಾಗಿರುತ್ತಿದ್ದರು.

ಬೆಳಗಿನ ಏಳುಗಂಟೆಯಿಂದ ಹನ್ನೊಂದು ಗಂಟೆಯವರೆಗೆ ಸತತವಾಗಿ ನಾಲ್ಕು ಗಂಟೆಯವರೆಗೆ ಪ್ರಶಾಂತವಾದ ವಾತಾವರಣದಲ್ಲಿ ಕುಳಿತು ಶೆಹನಾಯ್ ವಾದ್ಯದ ಮೂಲಕ ಹೊಸ ಹೊಸ ರಾಗಗಳ ಅಭ್ಯಾಸದಲ್ಲಿ ನಿರತರಾಗಿರುತ್ತಿದ್ದರು.

ಬೆಳಗಿನ ಹಸಿವನ್ನು ಮರೆತು ಬಿಸ್ಮಿಲ್ಲಾ ಖಾನರು ತನ್ನ ಸೋದರ ಮಾವನ ರಿಯಾಜ್ ಅನ್ನು (ಅಭ್ಯಾಸ) ಗಮನಿಸುತ್ತಿದ್ದರು. ಮಾಮುವಿಗೆ ಮನೆಯಲ್ಲಿ ಕೊಠಡಿ ಇದ್ದರೂ ಸಹ; ಅದನ್ನು ಬಿಟ್ಟು ಬಂದು ಇಲ್ಲಿ ಏಕೆ ಅಭ್ಯಾಸ ಮಾಡುತ್ತಿದ್ದಾರೆ ಎಂಬುದು ಬಾಲಕನಾಗಿದ್ದ ಬಿಸ್ಮಿಲ್ಲಾ ಖಾನರಿಗೆ ಒಗಟಾಗಿತ್ತು.

ಒಮ್ಮೆ ತಡೆಯಲಾರದೆ ಈ ಕುರಿತು ಪ್ರಶ್ನೆಯನ್ನು ತನ್ನ ಮಾವನಲ್ಲಿ ಕೇಳಿದರು. ಈ ಪ್ರಶ್ನೆಗೆ ನಕ್ಕು ಆಲಿ ಭಕ್ಷ್ ಅವರು “ಮುಂದೆ ನಿನಗೆ ಅರ್ಥವಾಗುತ್ತೆ, ಎಂದು ಹೇಳಿ, ಬಾ ಮನೆಗೆ ಹೋಗೋಣ ಹಸಿದಿದ್ದೀಯಾ” ಎಂದು ಹೇಳುತ್ತಾ ಕೈ ಹಿಡಿದು ಮನೆಯತ್ತ ಕರೆದೊಯ್ದಿದ್ದರು.

ವಾರಣಾಸಿ ನಗರದಲ್ಲಿ ಹಲವು ದಿನಗಳ ಕಾಲ ಸೋದರ ಮಾವನ ಜೊತೆಯ ಒಡನಾಟದಿಂದ ಬಾಂಧವ್ಯ ಬೆಳೆದ ನಂತರ ಒಂದು ಶುಭ ದಿನ ಮುಂಜಾನೆ ಆಲಿಭಕ್ಷ್ ಅವರು ತನ್ನ ಸೋದರಳಿಯ ಬಿಸ್ಮಿಲ್ಲಾ ಖಾನರಿಗೆ ಸಂಗೀತಾಭ್ಯಾಸ ಆರಂಭಿಸಿದರು. ಆರಂಭದಲ್ಲಿ ಕೇವಲ ಅರ್ಧಗಂಟೆಯ ಕಾಲ ಆರಂಭವಾದ ಅಭ್ಯಾಸವನ್ನು ದಿನೇ ದಿನೇ ಅರ್ಧ ಗಂಟೆಯ ಕಾಲ ವಿಸ್ತರಿಸುತ್ತಾ ಬಂದರು. ನಂತರದ ದಿನಗಳಲ್ಲಿ ದಿನವೊಂದಕ್ಕೆ ಆರು ತಾಸುಗಳ ಕಾಲ ಕಠಿಣ ಅಭ್ಯಾಸವನ್ನು ಬಿಸ್ಮಿಲ್ಲಾ ಖಾನರು ಮಾಡತೊಡಗಿದರು.

ಆರಂಭದ ದಿನಗಳಲ್ಲಿ ಮಾಮು ಅಥವಾ ಗುರು ಆಲಿ ಭಕ್ಷ್ ನೀಡಿದ ಪಾಠಗಳನ್ನು ವಿಶೇಷವಾಗಿ ಸಂಗೀತ ಸಂಗತಿಗಳನ್ನು ರಾಗ ಮತ್ತು ಸಾಹಿತ್ಯದ ಜೊತೆ ಬಿಸ್ಮಿಲ್ಲಾಖಾನರು ಅಭ್ಯಾಸ ಮಾಡುತ್ತಿದ್ದರು. ತನ್ನ ಮಾವಂದಿರಿಬ್ಬರು ನುಡಿಸುತ್ತಿದ್ದ ಶೆಹನಾಯ್ ವಾದ್ಯದಲ್ಲಿ ಗಂಗೆಯ ನದಿಯ ನೀರಿನ ನೀನಾದದಂತೆ ಸುಶ್ರಾವ್ಯವಾಗಿ ಹರಿಯುತ್ತಿದ್ದ ಸಂಗೀತ ಧ್ವನಿಯು ಬಿಸ್ಮಿಲ್ಲಾ ಖಾನರಿಗೆ ಮೋಡಿ ಮಾಡಿತ್ತು. ನಾನೂ ಸಹ ಅವರಂತೆ ಸಂಗೀತ ನುಡಿಸಬೇಕೆಂದು ಪಣ ತೊಟ್ಟು ಅವರು ಅಭ್ಯಾಸ ಮಾಡುತ್ತಿದ್ದರು.

ಬಿಸ್ಮಿಲ್ಲಾ ಖಾನರು ಅಭ್ಯಾಸ ಮಾಡುತ್ತಿದ್ದ ವೇಳೆಯಲ್ಲಿ ಹಾಗೂ ಅವರ ಸೋದರ ಮಾವ ಮನೆಯಲ್ಲಿ ಇಲ್ಲದಿರುವ ಸಮಯವನ್ನು ನೋಡಿಕೊಂಡು ಶೆಹನಾಯ್ ವಾದ್ಯದಿಂದ ಕೆಲವೊಮ್ಮೆ ಅಪಶ್ರುತಿ ಹೊರಟಾಗ ಅಲ್ಲಿದ್ದ ಮಕ್ಕಳು ಹಾಗೂ ಕುಟುಂಬದ ಸದಸ್ಯರು ಕೀಟಲೆ ಮಾಡಿ ಬಿಸ್ಮಿಲ್ಲಾಖಾನರನ್ನು ರೇಗಿಸುತ್ತಿದ್ದರು. ಮನೆಯೊಳಗಿನ ಗಲಾಟೆಯ ವಾತಾವರಣದಲ್ಲಿ ಏಕ ಚಿತ್ತದಿಂದ ಸಂಗೀತ ಅಭ್ಯಾಸ ಮಾಡುವುದು ಕಷ್ಟ ಎಂಬುವುದು ಅವರಿಗೆ ಮನವರಿಕೆಯಾಯಿತು. ಆದರೂ ಸಹ ದೃತಿಗೆಡದ ಬಿಸ್ಮಿಲ್ಲಾ ಖಾನರು ಏಕ ಚಿತ್ತದಿಂದ ಅಭ್ಯಾಸದಲ್ಲಿ ತೊಡಗಿರುತ್ತಿದ್ದರು. ತನ್ನ ಗುರು ಹಾಗೂ ಮಾಮು ಬಾಲಾಜಿ ಮಂದಿರ ಕೊಠಡಿಯ ಏಕಾಂತದಲ್ಲಿ ಕುಳಿತು ಅಭ್ಯಾಸ ಮಾಡುವುದರ ಹಿಂದಿನ ಮರ್ಮ ಅವರಿಗೆ ಅರ್ಥವಾಯಿತು.

ಕೆಲವು ದಿನಗಳ ಕಾಲ ಮನೆಯಲ್ಲಿ ಅಭ್ಯಾಸ ಮುಂದುವರಿಸಿದ ಬಿಸ್ಮಿಲ್ಲಾ ಖಾನರಿಗೆ ಮಾವನ ಮನೆಯ ಕೊಠಡಿಯಲ್ಲಿ ಕುಳಿತು ಧ್ಯಾನಸ್ಥ ಮನಸ್ಸಿನಲ್ಲಿ ಏಕಾಗ್ರತೆಯಿಂದ ಶೆಹನಾಯ್ ವಾದನದ ಅಭ್ಯಾಸ ಮಾಡುವುದು ಕಷ್ಟ ಎನಿಸತೊಡಗಿತು. ಮನೆಗೆ ಬದಲಾಗಿ ಮಾಮು ಅಭ್ಯಾಸ ಮಾಡುವ ಬಾಲಾಜಿ ಮಂದಿರದ ಕೊಠಡಿಗೆ ತೆರಳಿ ಅಲ್ಲಿ ಏಕಾಂತದಲ್ಲಿ ಕುಳಿತು ಏಕೆ ಅಭ್ಯಾಸ ಮಾಡಬಾರದು ಎಂದುಕೊಂಡರು. ಆದರೆ, ಇದಕ್ಕೆ ತನ್ನ ಗುರು ಹಾಗೂ ಮಾಮುವಿನ ಅನುಮತಿ ಬೇಕಿತ್ತು.

ಒಂದು ದಿನ ಆಲಿಭಕ್ಷ್ ಅವರ ಅನುಮತಿಯನ್ನು ಕೇಳಿದರು. ಕುತೂಹಲದಿಂದ ತನ್ನ ಸೋದರಳಿಯನ ಮುಖವನ್ನು ನೋಡಿದ ಅವರು “ ಮನೆಯಲ್ಲಿ ಅಭ್ಯಾಸ ಮಾಡಲು ಏನು ತೊಂದರೆ?” ಎಂದು ಪ್ರಶ್ನಿಸಿದರು. ಅಲ್ಲದೆ “ನಿನ್ನೆಯ ದಿನ ನಾನು ಕೊಟ್ಟಿದ್ದ ಪಾಠವನ್ನು ಅಭ್ಯಾಸ ಮಾಡಿದ್ದೀಯಾ? ಎಲ್ಲಿ? ನುಡಿಸಿ ತೋರಿಸು?” ಎಂದು ಮರು ಪ್ರಶ್ನೆ ಹಾಕಿದರು.

ಗುರುವಿನ ಪ್ರಶ್ನೆಗೆ ಅತ್ಯಂತ ವಿನಮ್ರವಾಗಿ ಶಹನಾಯ್ ವಾದ್ಯವನ್ನು ತೆಗೆದು ಕೊಂಡು ಎಲ್ಲಿಯೂ ತಪ್ಪಿಲ್ಲದಂತೆ, ಯಾವ ಸಂಗತಿಗಳು ತಪ್ಪಿಹೋಗದಂತೆ ಎಚ್ಚರ ವಹಿಸಿದ ಬಿಸ್ಮಿಲ್ಲಾ ಖಾನರು ನುಡಿಸಿ ತೋರಿಸಿದರು. ತಪ್ಪು ನುಡಿಸಿದರೆ ಅಥವಾ ರಾಗದ ಲಕ್ಷಣಗಳು ಇಲ್ಲವೆ ಸಾಹಿತ್ಯದ ಯಾವುದಾದರೂ ಸಂಗತಿಗಳು ತಪ್ಪಿದರೆ ಅನುಮತಿ ಸಿಗಲಾರದು ಎಂಬ ಎಚ್ಚರದಲ್ಲಿ ಅತ್ಯಂತ ಜಾಗರೂಕತೆಯಿಂದ ಗುರು ಹೇಳಿಕೊಟ್ಟಿದ್ದ ಸಂಗೀತದ ಪಾಠಗಳನ್ನು ಅತ್ಯಂತ ಶ್ರದ್ಧೆಯಿಂದ ಪುನರಾವರ್ತನೆ ಮಾಡಿದರು.

ಸೋದರಳಿಯನ ಅಭ್ಯಾಸದಿಂದ ತೃಪ್ತಿ ಹೊಂದಿದ ಆಲಿ ಭಕ್ಷ್ ಅವರು ಬಾಲಾಜಿ ಮಂದಿರದಲ್ಲಿ ಕುಳಿತು ಅಭ್ಯಾಸ ಮಾಡಲು ಬಿಸ್ಮಿಲ್ಲಾ ಖಾನರಿಗೆ ಅನುಮತಿ ನೀಡಿದರು. ಆ ದಿನ ಸಂಜೆ ಗ್ವಾಲಿಯರ್ ನ ಮಹಾರಾಜ ನಿರ್ಮಿಸಿದ್ದ ಹಾಗೂ ತಾವು ಶೆಹನಾಯ್ ವಾದ್ಯದ ಸೇವೆ ಮಾಡುತ್ತಿದ್ದ ವಿಷ್ಣು ಮಂದಿರಕೆ ಶಿಷ್ಯನನ್ನು ಕರೆದೊಯ್ದರು.

ಸಂಜೆ ವಿಷ್ಣು ದೇವಾಲಯದಲ್ಲಿ ಸಂಧ್ಯಾ ಆರತಿ ಸಮಯದಲ್ಲಿ ಶೆಹನಾಯ್ ವಾದನವನ್ನು ನುಡಿಸಿದ ಆಲಿ ಭಕ್ಷ್ ರವರು ನವಬತ್ಕಾನದಿಂದ (ಸಂಗೀತಗಾರರಿಗೆ ನಿರ್ಮಿಸಲಾದ ಪ್ರತ್ಯೇಕ ವೇದಿಕೆ) ಇಳಿದು ಬಂದು ತಮ್ಮ ಸೋದರಳಿಯ ಬಿಸ್ಮಿಲ್ಲಾ ಖಾನರನ್ನು ಕರೆದುಕೊಂಡು ಬಾಲಾಜಿ ಮಂದಿರದತ್ತ ಹೊರಟರು. ಬಾಲಾಜಿ ಮಂದಿರದ ಕೊಠಡಿಯಲ್ಲಿ ಕಳೆದ ಹದಿನೆಂಟು ವರ್ಷಗಳಿಂದ ನಿರಂತರವಾಗಿ ಅಭ್ಯಾಸದಲ್ಲಿ ನಿರತರಾಗಿದ್ದ ಉಸ್ತಾದ್ ಆಲಿ ಭಕ್ಷ್ ಅವರು ಆದಿನ ಸಂಜೆ ತಮ್ಮ ಅಭ್ಯಾಸದ ಕೊಠಡಿಯನ್ನು ಪ್ರೀತಿಯ ಶಿಷ್ಯ ಹಾಗೂ ಸೋದರಳಿಯ ಬಿಸ್ಮಿಲ್ಲಾ ಖಾನರಿಗೆ ಶೆಹನಾಯ್ ಅಭ್ಯಾಸಕ್ಕಾಗಿ ಬಿಟ್ಟುಕೊಟ್ಟರು.

ಬಾಲಕನಾಗಿದ್ದ ಬಿಸ್ಮಿಲ್ಲಾಖಾನರಿಗೆ ಆ ಸಂತೋಷದ ಕ್ಷಣವನ್ನು ಅಭಿವ್ಯಕ್ತಿಗೊಳಿಸಲು ಸಾಧ್ಯವಾಗದೆ ಕೆಲವು ದಿನಗಳ ಕಾಲ ತಳಮಳಿಸಿ ಹೋದರು. ತನ್ನ ಗುರುವಿನ ಅನುಮತಿ ದೊರಕಿದ ಮಾರನೆಯ ದಿನದಿಂದ ನಿರಂತರವಾಗಿ ನಾಲ್ಕರಿಂದ ಆರು ಗಂಟೆಗಳ ಕಾಲ ಅಭ್ಯಾಸದಲ್ಲಿ ನಿರತರಾದರು. ಕೊಠಡಿಗೆ ಬಂದ ತಕ್ಷಣ ಬಾಗಿಲನ್ನು ಬಂದ್ ಮಾಡಿ, ನಿಶಬ್ದದ ವಾತಾವರಣದ ಗಂಗಾ ನದಿಯ ತಟದಲ್ಲಿ ಬಾಲಾಜಿಯ ಸನ್ನಿಧಿಯಲ್ಲಿ ಏಕಾಂತದಲ್ಲಿ ಶಹನಾಯ್ ನುಡಿಸುತ್ತಾ, ಸಂಗೀತದಲ್ಲಿ ಮುಳುಗಿಹೋಗುತ್ತಿದ್ದ ಬಿಸ್ಮಿಲ್ಲಾಖಾನರಿಗೆ ವಾದ್ಯದ ಮೇಲೆ ಹಿಡಿತ ಸಿಗುವುದರ ಜೊತೆಗೆ ಸಂಗೀತದ ರಾಗ ಲಕ್ಷಣಗಳನ್ನು ಗುರುತಿಸುವಷ್ಟು ಪ್ರಬುಧ್ಧರಾದರು.

ಏಕಾಂತದಲ್ಲಿ ನಿರುದ್ವಿಗ್ನರಾಗಿ ಕುಳಿತು ಶೆಹನಾಯ್ ವಾದನದ ಅಭ್ಯಾಸದಲ್ಲಿ ತೊಡಗಿಕೊಳ್ಳುತ್ತಿದ್ದಂತೆ ಅವರ ಮನಸ್ಸಿನಲ್ಲಿ ಒಂದು ರೀತಿಯ ಪ್ರಪುಲ್ಲತೆ ಆವರಿಸಿತೊಡಗಿತು. ಈ ಸ್ಥಳವು ನನಗೆ ಭದ್ರತೆ ಮತ್ತು ಏಕಾಂತವನ್ನು ಒದಗಿಸಬಲ್ಲ ಜಾಗ ಮಾತ್ರವಲ್ಲದೆ, ಭವಿಷ್ಯದ ಹಾದಿಗೆ ಕೈ ದೀವಿಗೆ ಯಾಗಬಲ್ಲದು ಎಂಬ ನಂಬಿಕೆ ಬಿಸ್ಮಿಲ್ಲಾಖಾನರಲ್ಲಿ ಗಟ್ಟಿಯಾಗ ತೊಡಗಿತು.

ಒಂದು ವರ್ಷ ಕಾಲ ನಿರಂತರವಾಗಿ ಬೆಳಿಗ್ಗೆ ಮತ್ತು ಸಂಜೆಯ ವೇಳೆ ಬಿಸ್ಮಿಲ್ಲಾ ಖಾನರು ಬಾಲಾಜಿ ದೇವಸ್ಥಾನದ ಕೊಠಡಿಯಲ್ಲಿ ಏಕಾಂತವಾಗಿ ಕುಳಿತು ತಮ್ಮ ಗುರು ಹಾಗೂ ಮಾಮ ಹೇಳಿಕೊಟ್ಟ ಸಂಗೀತದ ಪಾಠಗಳನ್ನು ಅಭ್ಯಾಸ ಮಾಡುತ್ತಿದ್ದಂತೆ ಅವರಲ್ಲಿ ಆತ್ಮಸ್ಥೈರ್ಯ ಬಂದಿತು.

ಶೆಹನಾಯ್ ವಾದ್ಯದ ಮೂಲಕ ನುಡಿಸುತ್ತಿದ್ದ ರಾಗಗಳ ಮಾಧುರ್ಯದ ಜೊತೆಗೆ ಅವುಗಳನ್ನು ಯಾವ ಸಂದರ್ಭದಲ್ಲಿ ಎತ್ತರದ ಹಾಗೂ ತಗ್ಗಿದ ಧ್ವನಿಯಲ್ಲಿ ನುಡಿಸಬೇಕು ಎಂಬುದನ್ನು ಮನದಟ್ಟು ಮಾಡಿಕೊಂಡರು. ಕೆಲವು ಆಯ್ದ ರಾಗಗಳನ್ನು ನುಡಿಸುವಾಗ ಅವರಲ್ಲಿ ಒಂದು ರೀತಿಯ ಧನ್ಯತಾ ಭಾವವು ಮೂಡಿ ರೋಮಾಂಚನಗೊಳ್ಳುತ್ತಿದ್ದರು. ಸಂಗೀತವನ್ನು ಹೊರತು ಪಡಿಸಿ ಬೇರೇನೂ ಯೋಚಿಸಿದ ಬಿಸ್ಮಿಲ್ಲಾಖಾನರು ಗುರುವಿಗೆ ತಕ್ಕ ಶಿಷ್ಯನಾಗಿ ರೂಪುಗೊಂಡರು.

ಆಲಿ ಭಕ್ಷ್ ರವರೂ ಸಹ ತನ್ನ ಸೋದರಳಿಯ ಸಂಗೀತದ ಸಾಧನೆ ಕುರಿತಂತೆ ತೃಪ್ತಿ ವ್ಯಕ್ತ ಪಡಿಸಿದರು. ಒಬ್ಬ ಶಿಷ್ಯನಾಗಿ ಗುರುವಿನ ಮೆಚ್ಚುಗೆ ಪಡೆಯುವುದು ಅತ್ಯಂತ ಕಠಿಣವಾಗಿದ್ದ ಆ ಕಾಲದಲ್ಲಿ ಗುರುವಿನ ಪ್ರೀತಿಗಾಗಿ ಬಿಸ್ಮಿಲ್ಲಾಖಾನರು ತನ್ನ ಬಾಲ್ಯ, ಆಟ-ಪಾಠ, ಬಾಲ್ಯದ ಗೆಳೆಯರ ಜೊತೆಗಿನ ಒಡನಾಟ ಇವುಗಳಲ್ಲದೆ; ಇಷ್ಟ ಪಟ್ಟು ತಿನ್ನುತ್ತಿದ್ದ ಸಿಹಿತಿಂಡಿಗಳು ಎಲ್ಲವನ್ನೂ ತ್ಯೆಜಿಸಿ ಸಂಗೀತದ ಸಾಧನೆಗೆ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದರು.

ದೇವಾಲಯದ ಕೊಠಡಿಯಲ್ಲಿ ಕುಳಿತು ಹೊರ ಜಗತ್ತಿನೊಂದಿಗೆ ಸಂಪರ್ಕ ಕಡಿದುಕೊಂಡು ಶೆಹನಾಯ್ ಅಭ್ಯಾಸದಲ್ಲಿ ತೊಡಗಿದಂತೆ ಬಿಸ್ಮಿಲ್ಲಾಖಾನರಲ್ಲಿ ಅನೇಕ ಬದಲಾವಣೆಗಳು ಕಂಡು ಬಂದವು. ಅವರಿಗೆ ಅಲೌಕಿಕ ಜಗತ್ತು ಪರಿಚಯವಾದಂತೆ ಭಾಸವಾಗತೊಡಗಿತು. ಅವರ ಸಂಗೀತಕ್ಕೆ ಅನುಭಾವದ ದರ್ಶನವಾಗತೊಡಗಿತು.

ಒಮ್ಮೆ ಬಿಸ್ಮಿಲ್ಲಾಖಾನರು ಅಭ್ಯಾಸದ ವೇಳೆಯಲ್ಲಿ ಶೆಹನಾಯ್ ನುಡಿಸುವಾಗ ತನಗಾಗುತ್ತಿರುವ ಆಧ್ಯಾತ್ಮದ ಅನುಭವಗಳನ್ನು ಗುರು ಹಾಗೂ ಸೋದರಮಾವ ಆಲಿಭಕ್ಷ್ ಅವರಲ್ಲಿ ವಿವರಿಸಲು ಹೊರಟಾಗ, ನೇರವಾಗಿ ಬಿಸ್ಮಿಲ್ಲಾಖಾನರನ್ನು ದೃಷ್ಟಿಸಿನೋಡಿದ ಆಲಿಭಕ್ಷ್ ಖಾನರು “ಬೇಟಾ, ನಿನಗೆ ಆ ಕೊಠಡಿಯಲ್ಲಿ ಕುಳಿತು ಸಂಗೀತ ನುಡಿಸುವಾಗ ಏನೆಲ್ಲಾ ಅನುಭವವಾಗುತ್ತದೊ, ಅದೆಲ್ಲವೂ ಇನ್ನೊಬ್ಬರಿಗೆ ಹೇಳದೆ ಸ್ವತಃ ಖಾಸಗಿ ಅನುಭವಿಸಬೇಕಾದ ಸಂಗತಿಗಳು” ಎಂದು ವಿವರಿಸಿದರಲ್ಲದೆ, ಇನ್ನು ಮುಂದೆ ಯಾರೊಬ್ಬರ ಮುಂದೆ ಇಂತಹ ವಿಷಯಗಳನ್ನು ಪ್ರಸ್ತಾಪಿಸಬೇಡ ಎಂದು ತಾಕೀತು ಮಾಡಿದರು.

ಸೋದರಮಾವನ ಮನೆಯಲ್ಲಿ ಸುಧಿರ್ಘ ಒಂದು ವರ್ಷ ಶೆಹನಾಯ್ ಅಭ್ಯಾಸ ಮಾಡಿದ ನಂತರ ಬೇಸಿಗೆಯ ದಿನಗಳಲ್ಲಿ ತಂದೆಯ ಮನೆಗೆ ಹೋಗಲು ಆಸೆ ಪಟ್ಟ ಬಿಸ್ಮಿಲ್ಲಾಖಾನರು ದುಮ್‍ರಹೋನ್ ಪಟ್ಟಣಕ್ಕೆ ಹೊರಟರು. ಅವರಿಗೆ ಅಲ್ಲಿನ ಪ್ರಖ್ಯಾತ ಶೆಹನಾಯ್ ಕಲಾವಿದರಾಗಿದ್ದ ತನ್ನ ಅಜ್ಜನ ಮುಂದೆ ತಾನು ಕಲಿತಿರುವ ಶೆಹನಾಯ್ ವಾದ್ಯಸಂಗೀತವನ್ನು ನುಡಿಸಿತೋರಿಸುವ ಆಸೆಯಾಗಿತ್ತು. ಮನೆಗೆ ಮೊಮ್ಮಗ ಬಂದ ಖುಷಿಯಲ್ಲಿ ಆತನಿಗೆ ಒಂದು ರೂಪಾಯಿ ಬೆಳ್ಳಿನಾಣ್ಯವನ್ನು ನೀಡಿದ ಅಜ್ಜ, ನಂತರ ಮೊಮ್ಮಗನನ್ನು ಶೆಹನಾಯ್ ನುಡಿಸುವಂತೆ ಕೇಳಿಸಿಕೊಂಡರು.

ಬಾಲಕ ಬಿಸ್ಮಿಲ್ಲಾ ಖಾನ್ ಅಜ್ಜನ ಮುಂದೆ ಹೆಮ್ಮೆಯಿಂದ ತಾನು ಕಲಿತ ಹೊಸರಾಗಗಳ ಸಹಿತ ಮಧುರವಾದ ಧ್ವನಿಯಲ್ಲಿ ಶೆಹನಾಯ್ ನುಡಿಸತೊಡಗಿದಂತೆ, ಮನೆಯ ಮುಂದಿನ ಜಗುಲಿಯ ಮೇಲೆ ಕುಳಿತಿದ್ದ ಅಜ್ಜ “ಬಿಸ್ಮಿಲ್ಲಾ, ಬಿಸ್ಮಿಲ್ಲಾ” ಎಂದು ಉದ್ಗರಿಸುತ್ತಾ ಜೋರಾಗಿ ನಗತೊಡಗಿದರು. ಬಾಲಕ ಬಿಸ್ಮಿಲ್ಲಾಖಾನರಿಗೆ ತನ್ನ ಅಜ್ಜ ಏಕೆ ನಗುತ್ತಿದ್ದಾರೆ ಎಂಬು ಅರ್ಥವಾಗಲಿಲ್ಲ. “ಮಗು, ನೀನು ಶೆಹನಾಯ್ ಮೂಲಕ ಸಿಂಹದಂತೆ ಗರ್ಜಿಸುತ್ತೀಯಾ ಎಂದುಕೊಂಡಿದ್ದೆ, ಆದರೆ ನೀನು ಬೆಕ್ಕಿನ ರೀತಿ ಮಿಯಾವ್ ಎಂದು ನುಡಿಸುತ್ತಿದ್ದೀಯಾ” ಎಂದು ಹೇಳಿ ನಗತೊಡಗಿದರು. ಅಜ್ಜನ ಮಾತು ಕೇಳಿ ಬಿಸ್ಮಿಲ್ಲಾಖಾನರಿಗೆ ನಿರಾಸೆಯಾಯಿತು. ಪೆಚ್ಚು ಮೋರೆ ಹಾಕಿಕೊಂಡು ಸುಮ್ಮನೆ ನಿಂತರು.

ಮೊಮ್ಮಗನನ್ನು ಅವಮಾನಿಸುತ್ತಿರುವ ಮಾತುಗಳನ್ನು ಕೇಳಿದ ಅಜ್ಜಿ ಮನೆಯೊಳಗಿಂದ ಹೊರಗೆ ಬಂದು ನೇರವಾಗಿ ತರಾಟೆಗೆ ತೆಗೆದುಕೊಂಡಳು. “ನೀವು ಈ ಪ್ರಾಂತ್ಯದ ಪ್ರಸಿದ್ಧ ಶೆಹನಾಯ್ ವಾದ್ಯಗಾರರಾಗಿದ್ದೀರಿ. ನಿಮ್ಮನ್ನು ಎಂದಾದರೂ ಈ ಜನರು ಮನೆಯೊಳಗೆ ಬಿಟ್ಟುಕೊಂಡಿದ್ದಾರಾ? ಮನೆಯ ಹೊರಗಿನ ವರಾಂಡ ಅಥವಾ ಜಗುಲಿಯ ಮೇಲೆ ಗೋಣಿ ಚೀಲದ ಮೇಲೆ ಕುಳಿತು ಸಂಗೀತ ನುಡಿಸಿ ಬರುತ್ತೀರಾ. ನೀವು ಮತ್ತು ಮಕ್ಕಳು, ಅಥವಾ ನನ್ನ ಮೊಮ್ಮಕ್ಕಳು ಎಷ್ಟೇ ಪ್ರತಿಭಾವಂತರಾದರೂ ಈ ಸಮಾಜದಲ್ಲಿ ಹಿಂದುಳಿದವರು. ಇಂತಹ ಸ್ಥಿತಿಯಲ್ಲಿ ನನ್ನ ಮೊಮ್ಮಗ ಬಿಸ್ಮಿಲ್ಲಾ ಶೆಹನಾಯ್ ಕಲಿಯುವುದು ಬೇಡ , ಬೇರೆ ಏನಾದರೂ ಉದ್ಯೋಗ ಮಾಡಲಿ ಬಿಡಿ” ಎನ್ನುತ್ತಾ ಮೊಮ್ಮಗನ ಪರ ವಕಾಲತ್ತು ವಹಿಸಿದರು.

ಅಜ್ಜಿ ತನ್ನ ಪತಿಯೊಂದಿಗೆ ಮಾತು ಮುಗಿಸಿ ಮನೆಯೊಳಕ್ಕೆ ತೆರಳಿದ ನಂತರ ಬಿಸ್ಮಿಲ್ಲಾ ಖಾನರ ಅಜ್ಜ ಮೊಮ್ಮಗನ ಕೈಯಲ್ಲಿದ್ದ ಶೆಹನಾಯ್ ವಾದ್ಯವನ್ನು ತೆಗೆದುಕೊಂಡು ನುಡಿಸತೊಡಗಿದರು. ಅವರು ವಾದ್ಯಕ್ಕೆ ಉಸಿರು ತುಂಬಿ ನುಡಿಸತೊಡಗಿದಂತೆ ವಾದ್ಯದಿಂದ ಹೊರಹೊಮ್ಮುವ ಧ್ವನಿ ಕೇಳಿ ಬಾಲಕ ಬಿಸ್ಮಿಲ್ಲಾಖಾನರಿಗೆ ಆಶ್ಚರ್ಯವಾಯಿತು.

ಬೋರ್ಗರೆವ ಸಮುದ್ರದಂತೆ ಕೇಳಿಸುತ್ತಿದ್ದ ನಾದವನ್ನು ಆಲಿಸುತ್ತಾ ನಿಂತಿದ್ದ ಮೊಮ್ಮಗನನ್ನು ಉದ್ದೇಶಿಸಿ ಮಾತನಾಡಿದ ಅಜ್ಜ, “ಮಗೂ, ಉಸಿರನ್ನು ಬಿಗಿಹಿಡಿದು ವಾದ್ಯದೊಳಗೆ ತುಂಬಬೇಕು. ಒಳ್ಳೆಯ ಆರೋಗ್ಯ ಕಾಪಾಡಿಕೊಂಡಾಗ ಮಾತ್ರ ಕಲಾವಿದನಿಗೆ ಇದು ಸಾಧ್ಯ” ಎನ್ನುವ ಶೆಹನಾಯ್ ವಾದನದ ಗುಟ್ಟನ್ನು ಹೇಳಿಕೊಟ್ಟರು. ಅಜ್ಜ ಹೇಳಿಕೊಟ್ಟ ರಹಸ್ಯ ಬಿಸ್ಮಿಲ್ಲಾಖಾನರಿಗೆ ಶೆಹನಾಯ್ ವಾದ್ಯದ ಮೇಲೆ ಹಿಡಿತ ಸಿಗಲು ಮುಖ್ಯ ಕಾರಣವಾಯಿತು.

। ಇನ್ನು ಮುಂದಿನ ವಾರಕ್ಕೆ । 

2 Responses

  1. Maheshwari. U says:

    ಬರಹ ಮುಂದಿನ ರಾಗಕ್ಕೆಕಾಯುವಂತೆ ಮಾಡಿದೆ.ಅದುವರೆಗೆ ಈ ರಾಗದ ಗುಂಗಂತೂ ಇರುತ್ತದೆ.

  2. Anagha H L says:

    Sogasaada lekhana..

Leave a Reply

%d bloggers like this: