ವಿಮೋಚನೆ ಬೇಕಿರುವುದು ಅಂಬೇಡ್ಕರರಿಗೆ..

ಅಂಬೇಡ್ಕರರ ಚಿಂತನೆಗಳನ್ನು ಕೊಲ್ಲಲಾಗದವರು

ಅಂಬೇಡ್ಕರರ ವಾರಸುದಾರರಾಗಲು

ಪ್ರತಿಮೆಗಳ ಬೆನ್ನಟ್ಟಿ ಹೋಗುತ್ತಿದ್ದಾರೆ.

ನಾ ದಿವಾಕರ

ಜಾತಿ ವಿನಾಶಕ್ಕಾಗಿ ತಮ್ಮ ಜೀವನವಿಡೀ ಶ್ರಮಿಸಿದ ಅಂಬೇಡ್ಕರ್ ಇಂದು ಜಾತಿ ರಾಜಕಾರಣದ ಕೇಂದ್ರ ಬಿಂದುವಾಗಿರುವುದು ಇತಿಹಾಸದ ವಿಡಂಬನೆಯೋ ಸಮಕಾಲೀನ ರಾಜಕಾರಣದ ದುರಂತವೋ ?

ಎರಡೂ ಇರಬಹುದು.

ಅಂಬೇಡ್ಕರರ ಮೂಲ ಧ್ಯೇಯ ಮತ್ತು ಜೀವನ ಸಂದೇಶ ಎನ್ನಬಹುದಾದ ಸಮತಾ ಸಮಾಜದ ಪರಿಕಲ್ಪನೆಯನ್ನು ಕಿಂಚಿತ್ತೂ ಒಪ್ಪದ ರಾಜಕೀಯ ಪಕ್ಷ ಇಂದು ತಾವು ಅಂಬೇಡ್ಕರರರನ್ನು ಗೌರವಿಸಿದಷ್ಟು ಮತ್ತಾವುದೇ ಸರ್ಕಾರ ಗೌರವಿಸಿಲ್ಲ ಎಂದು ಘೋಷಿಸುತ್ತಿದೆ.

ಪ್ರಧಾನಮಂತ್ರಿಗಳ ಈ ಘೋಷಣೆಗೆ ದಲಿತ ಸಮುದಾಯದ ರಾಜಕಾರಣಿಗಳಿಂದ, ಸಂಘಟನೆಗಳಿಂದ, ಚಿಂತಕರಿಂದ ಮತ್ತು ಕಾರ್ಯಕರ್ತರಿಂದ ಕರತಾಡನಗಳೂ ಕೇಳಿಬರುತ್ತಿವೆ.

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿಯವರೇ ನೇಮಿಸಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ರಾಜ್ಯದಲ್ಲಿ ದಲಿತರ ಮೇಲಿನ ಹಲ್ಲೆ, ಆಕ್ರಮಣ ನಿತ್ಯ ಸುದ್ದಿಯಾಗುತ್ತಿದೆ. ಇತ್ತ ಜೀವಂತ ದಲಿತರನ್ನು ಕೊಲ್ಲುತ್ತಿರುವಂತೆಯೇ ಅತ್ತ ದಲಿತರ ಆಶಾಕಿರಣ ಅಂಬೇಡ್ಕರರ ಪ್ರತಿಮೆಗಳನ್ನು ಧ್ವಂಸಗೊಳಿಸಲಾಗುತ್ತಿದೆ, ವಿರೂಪಗೊಳಿಸಲಾಗುತ್ತಿದೆ. ಪ್ರಧಾನಿ ಮೋದಿಯವರ ಅಭಿಪ್ರಾಯದಲ್ಲಿ ಗೌರವಯುತವಾಗಿ ಕಾಣುವುದು ಎಂದರೇನು ಅರ್ಥ? ಈ ಪ್ರಶ್ನೆ ಸಹಜವಾಗಿ ಮೂಡುತ್ತದೆ.

ಮೂಲತಃ ಅಂಬೇಡ್ಕರ್ ವ್ಯಕ್ತಿಗತ ನೆಲೆಯಲ್ಲಿ ಗೌರವ, ಬಿರುದು, ಸಮ್ಮಾನಗಳನ್ನು ಬಯಸಿದವರಲ್ಲ. ಆರಾಧನೆಯನ್ನು ಸ್ವೀಕರಿಸಿದವರೂ ಅಲ್ಲ. ಆರಾಧನಾ ಸಂಸ್ಕೃತಿಯನ್ನು ಮೂರ್ತಿಪೂಜೆಯಷ್ಟೇ ಕಟುವಾಗಿ ವಿರೋಧಿಸುತ್ತಿದ್ದ ಅಂಬೇಡ್ಕರ್ , ನವಂಬರ್ 25 1949ರಂದು ರಾಜ್ಯ ವ್ಯವಸ್ಥಾ ಸಭೆಯಲ್ಲಿ ಮಾಡಿದ ತಮ್ಮ ಕೊನೆಯ ಭಾಷಣದಲ್ಲಿ “ ದೇಶಕ್ಕಾಗಿ ತಮ್ಮ ಜೀವನಪರ್ಯಂತ ಸೇವೆ ಸಲ್ಲಿಸಿದ ಮಹಾನ್ ವ್ಯಕ್ತಿಗಳಿಗೆ ಕೃತಜ್ಞರಾಗಿರುವುದರಲ್ಲಿ ತಪ್ಪೇನಿಲ್ಲ. ಆದರೆ ಇದಕ್ಕೆ ಒಂದು ಇತಿಮಿತಿ ಇದೆ. ಐರಿಷ್ ಕವಿ ಪ್ಯಾಟ್ರಿಯಾಟ್ ಡೇನಿಯಲ್ ಓ ಕಾನಲ್ ಹೇಳಿರುವಂತೆ, ಯಾವುದೇ ವ್ಯಕ್ತಿಯೂ ತನ್ನ ಘನತೆಯನ್ನು ಬಿಟ್ಟುಕೊಟ್ಟು ಕೃತಜ್ಞನಾಗಿರಲು ಸಾಧ್ಯವಿಲ್ಲ, ಒಬ್ಬ ಮಹಿಳೆ ತನ್ನ ಶೀಲವನ್ನು ತ್ಯಾಗಮಾಡಿ ಕೃತಜ್ಞಳಾಗಿರಲು ಸಾಧ್ಯವಿಲ್ಲ, ಒಂದು ದೇಶ ತನ್ನ ಸ್ವಾತಂತ್ರ್ಯವನ್ನು ಬಲಿಕೊಟ್ಟು ಕೃತಜ್ಞವಾಗಿರಲು ಸಾಧ್ಯವಿಲ್ಲ. ಇತರ ಯಾವುದೇ ದೇಶಕ್ಕಿಂತಲೂ ಭಾರತದ ಸಂದರ್ಭದಲ್ಲಿ ಈ ಎಚ್ಚರಿಕೆಯ ಮಾತುಗಳು ಹೆಚ್ಚು ಪ್ರಸ್ತುತ ಎನಿಸುತ್ತವೆ.

ಏಕೆಂದರೆ ಭಾರತದಲ್ಲಿ ಭಕ್ತಿ ಅಥವಾ ಭಕ್ತಿಯ ಮಾರ್ಗ ಅಥವಾ ವ್ಯಕ್ತಿ ಪೂಜೆ ಎನ್ನುವುದು ವಿಶ್ವದ ಯಾವುದೇ ರಾಷ್ಟ್ರಗಳಲ್ಲಿ ಕಂಡರಿಯದಂತಹ ಮಟ್ಟದಲ್ಲಿ ತನ್ನದೇ ಆದ ಮಹತ್ತರ ಸ್ಥಾನವನ್ನು ಪಡೆದಿದೆ. ಧಾರ್ಮಿಕ ನೆಲೆಯಲ್ಲಿ ಭಕ್ತಿ ಆತ್ಮದ ಮೋಕ್ಷಕ್ಕೆ ಸುಗಮ ಹಾದಿ ಆಗಿರಬಹುದು. ಆದರೆ ರಾಜಕಾರಣದಲ್ಲಿ ಭಕ್ತಿ ಅಥವಾ ವ್ಯಕ್ತಿ ಪೂಜೆ ಅವನತಿಯ ಮಾರ್ಗವಾಗುತ್ತದೆ ಮತ್ತು ಅಂತಿಮವಾಗಿ ಸರ್ವಾಧಿಕಾರಕ್ಕೆ ಸೋಪಾನವಾಗುತ್ತದೆ ” ಎಂದು ಹೇಳುತ್ತಾರೆ.

ಭಾರತದ ಪ್ರಸ್ತುತ ಸಂದರ್ಭದಲ್ಲಿ ಈ ಅಂಶವನ್ನು ಎರಡು ಆಯಾಮಗಳಿಂದ ನೋಡಬೇಕಾಗುತ್ತದೆ. ಅಂಬೇಡ್ಕರರನ್ನು ಆರಾಧನೆಯ ಸ್ವರೂಪವಾಗಿ ಕಾಣುವ ಆಳುವ ವರ್ಗಗಳ ಪ್ರತಿಮಾ ಸಂಸ್ಕೃತಿ ಒಂದೆಡೆಯಾದರೆ ಮತ್ತೊಂದೆಡೆ ಅಂಬೇಡ್ಕರರ ಮೂಲ ತತ್ವ ಸಿದ್ಧಾಂತಗಳಿಂದ ವಿಮುಖರಾಗಿ, ತಾತ್ವಿಕವಾಗಿ ಅಂಬೇಡ್ಕರರ ಮಾರ್ಗಕ್ಕೆ ವ್ಯತಿರಿಕ್ತ ಮಾರ್ಗದಲ್ಲೇ ನಡೆಯುವ ಪಕ್ಷ ಸಂಘಟನೆಗಳೊಡನೆ ರಾಜಿ ಮಾಡಿಕೊಳ್ಳುತ್ತಲೇ ಅಂಬೇಡ್ಕರರರನ್ನು ಆರಾಧಿಸುವ ಅವಕಾಶವಾದಿ ರಾಜಕಾರಣ ಇಂದು ಚರ್ಚೆಗೊಳಗಾಗಬೇಕಿದೆ.

ಹಾಗೆಯೇ ಸಂಘಟನಾತ್ಮಕವಾಗಿ ವಿಘಟನೆ ಹೊಂದುವುದರ ಮೂಲಕ ತನ್ನ ಅಸ್ತಿತ್ವವನ್ನೇ ಕಂಡುಕೊಳ್ಳಲಾಗದ ದಲಿತ ಚಳುವಳಿ ಹಾಗೂ ದಲಿತ ಸಂವೇದನೆಯೂ ಸಹ ಗಂಭೀರ ಚರ್ಚೆಗೊಳಗಾಗಬೇಕಿದೆ. ಮುಖ್ಯವಾಹಿನಿಯ ರಾಜಕೀಯ ಪಕ್ಷಗಳ ಸ್ವಾರ್ಥ ರಾಜಕಾರಣ, ಸಮಯಸಾಧಕತನ ಮತ್ತು ಅವಕಾಶವಾದಿ ರಾಜಕೀಯ ಒತ್ತಡಗಳಿಗೆ ಮಣಿದು ಛಿದ್ರವಾಗಿರುವ ದಲಿತ ಸಂಘಟನೆಗಳು ಸಂಪೂರ್ಣ ವಿಘಟನೆಯ ಹಂತದಲ್ಲಿರುವಾಗಲೇ ದೇಶದ ಸಮಾಜೋ ಸಾಂಸ್ಕೃತಿಕ ಪರಿಸ್ಥಿತಿ ದಲಿತ ಸಮುದಾಯಗಳನ್ನು ಒಂದಾಗಲೇ ಬೇಕಾದ ಸ್ಥಿತಿಯಲ್ಲಿ ತಂದು ನಿಲ್ಲಿಸಿದೆ. ಮತ್ತೊಂದೆಡೆ ಅಂಬೇಡ್ಕರ್ ಅವರ ಸಮತಾ ಸಮಾಜ ಮತ್ತು ಪ್ರಜಾಸತ್ತಾತ್ಮಕ ಕನಸುಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ರಾಜಕೀಯ ನೆಲೆಯಲ್ಲಿ ಸ್ಷಷ್ಟ ನಿಲುವು ತಾಳುವ ಅನಿವಾರ್ಯತೆಯನ್ನೂ ಮುಂದೊಡ್ಡಿದೆ.

ಈ ಸಂದರ್ಭದಲ್ಲೇ ಭಾರತದ ರಾಜಕಾರಣದಲ್ಲಿ ಜಾತಿ ಧರ್ಮಗಳ ಧೃವೀಕರಣ ಪ್ರಕ್ರಿಯೆ ಪರಾಕಾಷ್ಠೆ ತಲುಪಿದೆ. ಜಾತ್ಯಾತೀತತೆಯ ನೆಲೆಯಲ್ಲೇ ಜಾತಿಯಾಧಾರಿತ ರಾಜಕಾರಣ ನೆಲೆ ಕಾಣುತ್ತಿರುವುದನ್ನು ನೋಡುತ್ತಿದ್ದೇವೆ. ದಲಿತ ಸಮುದಾಯದ ಮತಗಳು ಅಧಿಕಾರ ರಾಜಕಾರಣಕ್ಕೆ ಸೋಪಾನವಾಗುತ್ತಿರುವ ಸಂದರ್ಭದಲ್ಲೇ ದಲಿತ ಸಂವೇದನೆ ಮೂಲೆಗುಂಪಾಗುತ್ತಿದೆ.

ಅದೇ ವೇಳೆ ದಲಿತ ರಾಜಕಾರಣಕ್ಕೆ ಅತ್ಯವಶ್ಯವಾದ ಸಾಮುದಾಯಿಕ ನೆಲೆಗಳು ಮತೀಯ ರಾಜಕಾರಣದ ಬಿರುಗಾಳಿಗೆ ಸಿಲುಕಿ ಛಿದ್ರವಾಗುತ್ತಿವೆ. ಅಂಬೇಡ್ಕರ್ ಕಂಡ ಸಮತಾ ಸಮಾಜದ ಕನಸು ನವ ಉದಾರವಾದದ ಉರುಳಿಗೆ ಸಿಲುಕಿ ಛಿದ್ರವಾಗುತ್ತಿದೆ. ಸಮತಾ ಸಮಾಜ ಎಂದರೆ ಕೇವಲ ಸಾಮಾಜಿಕ ಸಮಾನತೆ ಮಾತ್ರವಲ್ಲ ಆರ್ಥಿಕ ಸಮಾನತೆಯೂ ಹೌದು ಎಂಬ ವಾಸ್ತವವನ್ನು ಅರಿತು ಮುನ್ನಡೆದಾಗ ನವ ಉದಾರವಾದ, ಕಾರ್ಪೋರೇಟ್ ಔದ್ಯಮಿಕ ಹಿತಾಸಕ್ತಿ ಮತ್ತು ಮತೀಯ ರಾಜಕಾರಣದ ಸಮ್ಮಿಲನವನ್ನು ಸಂಪೂರ್ಣವಾಗಿ ಗ್ರಹಿಸಲು ಸಾಧ್ಯ. ವಿಪರ್ಯಾಸವೆಂದರೆ ನವ ಉದಾರವಾದ ಮತ್ತು ಸಮಾಜೋ ಸಾಂಸ್ಕøತಿಕ ರಾಜಕಾರಣದ ನಡುವಿನ ಸೂಕ್ಷ್ಮ ಸಂಬಂಧಗಳನ್ನು ಕುರಿತು ಚರ್ಚೆಯೇ ನಡೆಯುತ್ತಿಲ್ಲ.

ಸಾಂಸ್ಕೃತಿಕ ಕೇಸರೀಕರಣ ಪ್ರಕ್ರಿಯೆ ಆಡಳಿತ ವ್ಯವಸ್ಥೆಯ ಆಂತರ್ಯದಲ್ಲೇ ಅಧಿಕೃತ ಮಾನ್ಯತೆ ಪಡೆಯುತ್ತಿರುವುದು ದಲಿತರ ಪಾಲಿಗೆ ಆತಂಕದ ವಿಚಾರವಾಗಿದೆ. ಅಂಬೇಡ್ಕರರ ಹೆಸರಿನೊಡನೆ ಅವರ ತಂದೆ ರಾಮ್‍ಜಿ ಹೆಸರು ಸೇರಿಸಿದ ಉತ್ತರಪ್ರದೇಶ ಸರ್ಕಾರ ಈಗ ಕೇಸರಿ ವರ್ಣದ ಅಂಬೇಡ್ಕರ್ ಪ್ರತಿಮೆಯನ್ನು ಸ್ಥಾಪಿಸುವ ಮೂಲಕ ತನ್ನ ಮೂಲ ಕಾರ್ಯಸೂಚಿಯನ್ನು ಬಯಲು ಮಾಡಿದೆ.

ಪ್ರತಿಮಾ ರಾಜಕಾರಣವನ್ನು ಬದಿಗಿಟ್ಟು ನೋಡಿದರೂ ಶೋಷಿತ ಜನಸಮುದಾಯಗಳ ಪ್ರಜಾಸತ್ತಾತ್ಮಕ ಹಾಗೂ ಸಾಂವಿಧಾನಿಕ ಆಶಯಗಳಿಗೆ ಪೂರಕವಾಗಿ ಸಂಘಟನಾತ್ಮಕ ಚೇತನ ಒದಗಿಸುವ ಒಬ್ಬ ದಾರ್ಶನಿಕ ವ್ಯಕ್ತಿಯನ್ನು ಒಂದು ನಿರ್ದಿಷ್ಟ ಕೋಮುವಾದಿ ಚೌಕಟ್ಟಿನಲ್ಲಿ ಬಂಧಿಸುವ ವಿಕೃತ ಪ್ರವೃತ್ತಿಯನ್ನು ಕೇಸರಿ ಪ್ರತಿಮೆಯಲ್ಲಿ ಕಾಣಬಹುದು. ಅಯೋಧ್ಯಾ ಕಾಂಡದ ನಂತರದಲ್ಲಿ ಕೇಸರಿಯನ್ನೇ ಲೇಪಿಸಿಕೊಂಡು, ಕೇಸರೀಕರಣ ಪ್ರಕ್ರಿಯೆಯನ್ನು ಅಪ್ಪಿಕೊಂಡಿರುವ ದಲಿತ ಸಂಘಟನೆಗಳು, ರಾಜಕೀಯ ನಾಯಕರು ಮತ್ತು ದಲಿತ ಚಿಂತಕರಿಗೆ ಇದು ಅಪ್ಯಾಯಮಾನವಾಗಿರಬಹುದು. ಅಥವಾ ಸಂಭ್ರಮದ ಕ್ಷಣವೂ ಆಗಿರಬಹುದು.

ಆದರೆ ವೈದಿಕ ಸಂಸ್ಕøತಿ ಮತ್ತು ಬ್ರಾಹ್ಮಣ್ಯದ ಶೋಷಣೆಗೆ ಇಂದಿಗೂ ಒಳಗಾಗುತ್ತಿರುವ ಲಕ್ಷಾಂತರ ದಲಿತರಿಗೆ ಇದು ಆಘಾತಕಾರಿಯಾಗಿ ಕಾಣುತ್ತದೆ. ಏಕೆಂದರೆ ಇಂದಿಗೂ ದಲಿತ ಸಮುದಾಯದ ಸಾಮಾನ್ಯ ಜನತೆ ಜಾತಿ ದೌರ್ಜನ್ಯಕ್ಕೆ ಬಲಿಯಾಗುತ್ತಲೇ ಇದ್ದಾರೆ. ಅಂಬೇಡ್ಕರರ ಪ್ರತಿಮೆಯ ಬಣ್ಣ ದಲಿತರ ಬದುಕನ್ನು ಬದಲಿಸುವುದಿಲ್ಲ ಎನ್ನುವುದು ವಾಸ್ತವ. ಕಾರಣ, ಅಧಿಕಾರ ರಾಜಕಾರಣದಲ್ಲಿ ಅಂಬೇಡ್ಕರರ ಪ್ರತಿಮೆ ಮಾತ್ರವೇ ಮೌಲ್ಯಯುತವಾಗಿರುತ್ತದೆ, ಅವರ ಮೌಲ್ಯಗಳಲ್ಲ.

ಈ ಮೌಲ್ಯಗಳ ರಕ್ಷಣೆಗಾಗಿ ಹೋರಾಡುವುದು ಇಂದಿನ ತುರ್ತು ಅಗತ್ಯತೆಯಾಗಿದೆ. ಅಂಬೇಡ್ಕರರನ್ನು ಅತಿ ಹೆಚ್ಚು ಗೌರವಿಸುವುದು ಯಾರು ಎಂಬ ಪ್ರಶ್ನೆಗೆ ಉತ್ತರ ಹುಡುಕಬೇಕಿಲ್ಲ. ಏಕೆಂದರೆ ಹಾರ ತುರಾಯಿಗಳಿಂದ ಪ್ರತಿಮೆಗಳನ್ನು ಅಲಂಕರಿಸುವುದನ್ನೇ, ಪರಾಕು ಹೇಳುವುದನ್ನೇ ಗೌರವಿಸುವುದು ಎಂದು ಭಾವಿಸುವ ಆಳುವ ವರ್ಗಗಳಿಗೆ ಪ್ರತಿಮೆಯಿಂದಾಚೆಗಿನ ಅಂಬೇಡ್ಕರರ ಮೌಲ್ಯಗಳು ಅರ್ಥವಾಗುವುದೂ ಇಲ್ಲ.

ವಿಪರ್ಯಾಸವೆಂದರೆ ದಲಿತ ಸಂಘಟನೆಗಳು ಈ ವಾಸ್ತವವನ್ನು ಅರಿತಿಲ್ಲ. ಅಥವಾ ಅರಿತಿದ್ದರೂ ರಾಜಕೀಯ ಅನಿವಾರ್ಯತೆಗಳಿಗೆ ಶರಣಾಗಿ ತಮ್ಮ ಸ್ವಂತ ನೆಲೆಯನ್ನು ಕಳೆದುಕೊಳ್ಳುತ್ತಿವೆ. ಬಿಜೆಪಿ ಸಾಂಗತ್ಯ ಬಯಸುವ ದಲಿತ ನಾಯಕರು , ಸಂಘಪರಿವಾರದ ಸಾಂಗತ್ಯ ಬಯಸುವ ದಲಿತ ಕಾರ್ಯಕರ್ತರು, ಎನ್‍ಡಿಎ ಸಾಂಗತ್ಯ ಬಯಸುವ ದಲಿತರನ್ನೇ ಪ್ರತಿನಿಧಿಸುವ ರಾಜಕೀಯ ಪಕ್ಷಗಳು ಈ ನಿಟ್ಟಿನಲ್ಲಿ ಕೇವಲ ಆತ್ಮವಂಚನೆ ಮಾಡಿಕೊಳ್ಳುತ್ತಿಲ್ಲ, ಆತ್ಮಘಾತುಕ ನಿರ್ಧಾರ ಕೈಗೊಳ್ಳುತ್ತಿವೆ. ಮತ್ತೊಂದೆಡೆ ಬಿಜೆಪಿಗೆ ಪರ್ಯಾಯವಾಗಿ ಕಾಂಗ್ರೆಸ್ ಪಕ್ಷದಲ್ಲಿ ತಮ್ಮ ಅಸ್ತಿತ್ವ ಗುರುತಿಸಿಕೊಳ್ಳುವ ಧೋರಣೆಯೂ ಪ್ರಶ್ನಾರ್ಹವೇ ಆಗುತ್ತದೆ. ಕಾರಣ, ಭಾರತದ ಆಳುವ ವರ್ಗಗಳು ದಲಿತ ಸಮುದಾಯಗಳನ್ನು ಅಂಬೇಡ್ಕರ್ ಭಾವಿಸಿದ ಸಮತಾ ಸಮಾಜದ ಒಂದು ಭಾಗ ಎಂದು ಪರಿಗಣಿಸಿಯೇ ಇಲ್ಲ.

ನವ ಉದಾರವಾದ, ಮತೀಯವಾದ, ಕೋಮುವಾದ ಮತ್ತು ಕಾರ್ಪೋರೇಟ್ ಆಡಳಿತದ ನಾಲ್ಕು ಸ್ತಂಭಗಳು ಭಾರತದ ಸಾಂವಿಧಾನಿಕ ಚೌಕಟ್ಟನ್ನು ಅಪಹರಿಸುತ್ತಿವೆ. ಈ ಸಂದರ್ಭದಲ್ಲೇ ಭಾರತದ ಆಳುವ ವರ್ಗಗಳು ಅಂಬೇಡ್ಕರರ ತಾತ್ವಿಕ ನೆಲೆಯನ್ನು ಅಪಹರಿಸಲು ನಾನಾ ರೀತಿಯಲ್ಲಿ ಯತ್ನಿಸುತ್ತಿವೆ. ಈ ಎರಡು ವಿದ್ಯಮಾನಗಳ ನಡುವೆಯೇ ಪ್ರವರ್ಧಮಾನಕ್ಕೆ ಬರುತ್ತಿರುವ ಭಾರತದ ಫ್ಯಾಸಿಸ್ಟ್ ರಾಜಕಾರಣ ಅಂಬೇಡ್ಕರರನ್ನು ಗೌರವಿಸುತ್ತಲೇ ದಲಿತರನ್ನು ಅಪಮಾನಿಸುವ ವ್ಯವಸ್ಥಿತ ಕಾರ್ಯಸೂಚಿಯನ್ನು ಅನಾವರಣಗೊಳಿಸುತ್ತಿದೆ.

ಊನ ಘಟನೆ ಈ ಪ್ರಕ್ರಿಯೆಯ ಒಂದು ಝಲಕ್ ಎಂದರೆ ಅಡ್ಡಿಯಿಲ್ಲ. ಊನ ಯಾವುದೇ ರಾಜಕೀಯ ಪಕ್ಷದ ಕೃತ್ಯವಲ್ಲ ನಿಜ, ಆದರೆ ಈ ಘಟನೆಯ ಹಿಂದಿರುವ ಸಾಂಸ್ಕøತಿಕ ಮನಸ್ಥಿತಿ ಒಂದು ರಾಜಕೀಯ ಸಿದ್ಧಾಂತದೊಡನೆ ರಾಜಿಯಾಗಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ದಲಿತರ ಅಪಮಾನವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಅಬ್ಬರಿಸುವ ರಾಜಕೀಯ ನಾಯಕರು ಊನ ಘಟನೆಯ ಸಂದರ್ಭದಲ್ಲಿ ಮೌನಕ್ಕೆ ಶರಣಾಗಿದ್ದುದನ್ನು ಇಲ್ಲಿ ಸ್ಮರಿಸಲೇಬೇಕು.

ಈ ಸಾಂಸ್ಕøತಿಕ ಮನಸ್ಥಿತಿಯನ್ನು ಗಟ್ಟಿಗೊಳಿಸುವ ಫ್ಯಾಸಿಸ್ಟ್ ಶಕ್ತಿಗಳ ಕಾರ್ಯಸೂಚಿಯನ್ನು ಕೇಸರಿ ವರ್ಣದ ಅಂಬೇಡ್ಕರ್ ಪ್ರತಿಮೆಯಲ್ಲಿ ಕಾಣಬಹುದು. ಸಾಂವಿಧಾನಿಕ ಸೌಲಭ್ಯ ಮತ್ತು ಸವಲತ್ತುಗಳ ಮೂಲಕ ಇಂದು ದಲಿತರು ಮುಕ್ತ ವಾತಾವರಣದಲ್ಲಿ ಬಾಳುತ್ತಿದ್ದಾರೆ. ಆದರೆ ಶೋಷಣೆ, ದೌರ್ಜನ್ಯ ಮತ್ತು ತಾರತಮ್ಯಗಳಿಂದ ಮುಕ್ತಿ ಹೊಂದಿಲ್ಲ. ಈ ಮುಕ್ತಿಗಾಗಿ ಹೋರಾಡುವ ಸ್ಪೂರ್ತಿ ನೀಡುವ ಅಂಬೇಡ್ಕರರ ಚಿಂತನೆಗಳನ್ನು ಕೊಲ್ಲಲಾಗದವರು ಅಂಬೇಡ್ಕರರ ವಾರಸುದಾರರಾಗಲು ಪ್ರತಿಮೆಗಳ ಬೆನ್ನಟ್ಟಿ ಹೋಗುತ್ತಿದ್ದಾರೆ.

ಆದರೆ ಅಂಬೇಡ್ಕರರ ನಿಜವಾದ ವಾರಸುದಾರರು ಈ ದೇಶದ ಶ್ರಮಜೀವಿಗಳ ನಡುವೆ ಇದ್ದಾರೆ ಎಂಬ ಸತ್ಯವನ್ನು ಆಳುವ ವರ್ಗಗಳಿಗೆ ತಿಳಿಸಬೇಕಿದೆ. ಜೈ ಭೀಮ್ ಲಾಲ್ ಸಲಾಂ ಘೋಷಣೆಯೊಂದಿಗೆ ಈ ಕಾರ್ಯಸೂಚಿಯನ್ನು ಸಾಕಾರಗೊಳಿಸುವ ಮೂಲಕ ಆಳುವ ವರ್ಗಗಳ ಸಂಕೋಲೆಗಳಿಂದ ಅಂಬೇಡ್ಕರರ ವಿಮೋಚನೆಗಾಗಿ ಶ್ರಮಿಸುವುದು ಅವರ ಜನ್ಮದಿನಾಚರಣೆಯ ಘೋಷವಾಕ್ಯವಾಗಬೇಕಿದೆ.

Leave a Reply