ಎದೆಯೊಳಗೆ ಮತ್ತೆ ಮತ್ತೆ ಮೆಲುಕು ಹಾಕುವ ಸಾಲುಗಳಿಗಾಗಿ ‘ಕಳಚಿಟ್ಟಿದ್ದೇನೆ ಇದೋ ನಿರ್ವಾಣ’

ಯಾವ ಪುಸ್ತಕವನ್ನು ಓದಲು ಕೈಗೆತ್ತಿಕೊಂಡರೂ ಆಕೆ ಮತ್ತೆ ಮತ್ತೆ ನೆನಪಾಗುತ್ತಾಳೆ.

ಪುಸ್ತಕದ ಪುಟ ಪುಟದ ನಡುವೆಯೂ ಆಕೆಯದ್ದೇ ಮುಖ. ಕಣ್ಣೆದುರು ಆಕೆಯ ಮುಖ ಬಂದಂತಾಗುತ್ತದೆ. ಪಾಪಿಗಳಾದವರಿಗೆ ಶಿಕ್ಷೆ ಆಗುತ್ತೆ ಎಂಬ ನಂಬಿಕೆ ಅದೆಷ್ಟೋ ತಲೆಮಾರಿನಿಂದ ಬಂದಿದೆ.ಆದರೆ ಇನ್ನೂ ಹಾಲುಗಲ್ಲವೂ ಮಾಸದ ಆ ಮಗು ಅದೇನು ಪಾಪ ಮಾಡಿತ್ತು? ದೇವಸ್ಥಾನವನ್ನು ಪವಿತ್ರ ಎಂದುಕೊಳ್ಳುತ್ತೇವೆ. ಆದರೆ ಅಂತಹ ಪವಿತ್ರ ದೇಗುಲದ ಒಳಗೆ ದೇವರಂತಹ ಆ ಮಗುವಿನ ಮೇಲಾದ  ಅತ್ಯಾಚಾರವೇ ಕಣ್ಣೆದುರಿಗೆ ಬರುತ್ತಿದೆ.

ಗುಂಪಾಗಿ ಆ ಮಗುವಿನ ಎಳೆ ಮೈ ಮೇಲೆ ದಾಳಿ ನಡೆಸಿದಾಗ ಆಕೆ ಅನುಭವಿಸಿದ ಸಂಕಟ ಹೊಟ್ಟೆಯೊಳಗೆ ಕದಡುತ್ತಿದೆ. ಆ ಎಳೆಯ ಕೈ ಕಾಲು, ಮೆತ್ತನೆಯ ಗಲ್ಲ ಎಲ್ಲವನ್ನೂ ಕಿತ್ತು ಹರಿದ ಆ ದುಷ್ಟರ ಅಟ್ಟಹಾಸ ಕಿವಿಯೊಳಗೆ ಮೊರೆಯುವುದಕ್ಕಿಂತ ಹೆಚ್ಚಾಗಿ ಆ ಎಳೆಯ ದನಿಯ ಆಕ್ರಂದನ ಕಿವಿಯ ತಮಟೆಯನ್ನು ಹರಿದು ಚೂರುಚೂರು ಮಾಡುತ್ತಿದೆ.  ಪುಟ್ಟ ಹೆಜ್ಜೆಯಿಟ್ಟು ಬರುವ ಆ ಹುಡುಗಿ ಅತ್ಯಾಚಾರಿಗಳಿಗೇಕೆ ಮುದ್ದಾದ ಹೆಜ್ಜೆಯಿಡುವ ಕೃಷ್ಣನ ನೆನಪನ್ನು ತರಲಿಲ್ಲ ಎಂಬ ಹತಾಶಭಾವ ಕಾಡುತ್ತಿದೆ.

ಇಂತಹ ಸ್ಥಿತಿಯಲ್ಲಿ ಎತ್ತಿಕೊಂಡ ಪುಸ್ತಕದ ಸಾಲುಗಳೂ  ನನ್ನನ್ನು ಇರಿಯುತ್ತಿವೆ.

ಅದೇಕೋ ಇಲ್ಲಿ

ಕಾಯುವ ಕೈಗಳೇ

ಕೊಲ್ಲಲು ಹೊಂಚು

ಹಾಕುತ್ತಿರುತ್ತದೆ

ಈ ದೇವರಾದರೂ ಅದೆಷ್ಟು ಸಲ ತನ್ನನ್ನು ತಾನು ಬರೀ ಕಲ್ಲು ಎಂದು ನಿರೂಪಿಸಿಕೊಳ್ಳಬಲ್ಲ? ಅದೆಷ್ಟು ಸಲ ತಾನು ಏನೂ ಮಾಡಲಾಗದ ಅಶಕ್ತ ಎಂದು  ಸಾಬೀತುಪಡಿಸಬಲ್ಲ? ಈಗಂತೂ ಮುದ್ದು ಅಸೀಫಾಳನ್ನು ತನ್ನದೇ ಮನೆಯೊಳಗೆ ಮೃಗಗಳಿಗೆ ಹರಿದು ತಿನ್ನಲು ಬಿಟ್ಟು ತಾನು ಕರುಣೆಯೂ ಇಲ್ಲದವನು ಎಂದು ಜಗತ್ತಿಗೇ ಸಾರಿಬಿಟ್ಟಿದ್ದಾನೆ. ಹೀಗಾಗಿಯೇ ಕವಿಯತ್ರಿ ಹೇಮಲತಾ ಮೂರ್ತಿ ಹತ್ಯಾಸ್ಥಳಗಳಲ್ಲಿ ಬದುಕು ನಿಷಿದ್ಧ’ ಎನ್ನುತ್ತ

ಇಲ್ಲಿ ಕೊಲ್ಲಲು ದ್ವೇಷದ ಬೆಂಕಿ ಬೇಕಿಲ್ಲ

ಪ್ರೀತಿಯ ತಂಪು ಮಳೆಯೇ ಸಾಕು

ಕನಸುಗಳು ನೇಣುಗಂಬಕ್ಕೇರುವ

ಹತ್ಯಾಸ್ಥಳಗಳಲ್ಲಿ ಬದುಕು ನಿಷಿದ್ಧ

ಎನ್ನುತ್ತಾರೆ.

ಯಾಕೆಂದರೆ ಈಗ ಹೆಣ್ಣೊಂದು ಬರೀ ಭೋಗದ ವಸ್ತು. ಆಕೆಯ ಮೈ ಎನ್ನುವುದು ಕೇವಲ ತಮ್ಮ ತೆವಲನ್ನು ತೀರಿಸಿಕೊಳ್ಳುವ ಸಾಧನ ಅಷ್ಟೆ. ಹೀಗೆಂದೇ ಇತ್ತೀಚಿನ ದಿನಗಳಲ್ಲಿ ಇಂತಹ ಲಜ್ಜೆಗೆಟ್ಟ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಹೆಣ್ಣಿಗೆ ಸುರಕ್ಷಿತವಾದ ಜಾಗ ಯಾವುದೂ ಇಲ್ಲ. ತಾನು ಓಡಾಡುವ ತನ್ನದೇ ಬೀದಿಯೂ ಆಕೆಗೆ ಸುರಕ್ಷಿತವಲ್ಲ. ಯಾವ ಕ್ಷಣದಲ್ಲಿ ಬೇಕಾದರೂ ಬೀದಿ ನಾಯಿಗಳು ಆಕ್ರಮಣ ನಡೆಸಬಹುದು. ತಾನು ವಾಸಿಸುವ ಊರಂತೂ ಹೆಣ್ಣಿಗೆ ಯಾವತ್ತೂ  ಸುರಕ್ಷಿತಾ ಭಾವ ಕೊಟ್ಟಿದ್ದೇ ಇಲ್ಲ.

ಓದುವ ಶಾಲೆಯಲ್ಲಂತೂ ಸಿ ಸಿ ಕ್ಯಾಮರಾ ಇದ್ದರೂ ಅದು ಸುಬಧ್ರವೆಂದು ಯಾವತ್ತೂ ಅನ್ನಿಸುವುದಿಲ್ಲ. ಕೆಲಸಮಾಡುವ ಸ್ಥಳಗಳಿಗೆ ಎಡತಾಕುವ ಮೇಲಾಧಿಕಾರಿಗಳೂ ಹೆಣ್ಣನ್ನು ಸುರಕ್ಷಿತವಾಗಿರಲು ಬಿಡುವುದಿಲ್ಲ. ಪೂಜಿಸುವ ದೇಗುಲವೂ ಈಗ ರಕ್ಷಣೆ ನೀಡುವುದಿಲ್ಲ ಎನ್ನುವುದೂ ಈಗ ಸಾಬೀತಾಗಿ ಹೋಗಿದೆ.

ಮನೆಯ ಹೊರಗೆ ಮಾತ್ರ ಹೆಣ್ಣು ಸುರಕ್ಷಿತವಲ್ಲ ಎಂದು ಇಷ್ಟು ದಿನಗಳ ಕಾಲ ಅಂದುಕೊಳ್ಳಲಾಗಿತ್ತು. ಅಥವಾ ನಮ್ಮನ್ನು ನಾವೇ ನಂಬಿಸಿಕೊಂಡಿದ್ದೆವು. ಆದರೀಗ ಮನೆಯೊಳಗೂ ಕೂಡ ಹುಟ್ಟಿದ ಬಾಲೆಗೂ ಸುರಕ್ಷಿತವಲ್ಲ. ಎಂಬತ್ತರ ವೃದ್ಧೆಗೂ ಸುರಕ್ಷಿತ ತಾಣವಲ್ಲ. ಹೆತ್ತ ಅಪ್ಪ, ಒಡ ಹುಟ್ಟಿದ ಸಹೋದರೆ, ಚಿಕ್ಕಪ್ಪ, ಮಾವ ಯಾರೆಂದರೆ ಯಾರೂ ನಂಬಿಕೆಗೆ ಅರ್ಹರಲ್ಲ ಎನ್ನುವ ದಯನೀಯ ಸ್ಥಿತಿ ನಮ್ಮದು.

ಈಗೀಗ ಹೆಣ್ಣಿನ ಕವಿತೆ

ಅಡುಗೆ ಮನೆಯಲ್ಲಷ್ಟೇ

ಬಿಕ್ಕುವುದಿಲ್ಲ

ಪ್ರೀತಿಯ ಹೇಮಕ್ಕ ನನ್ನಿಷ್ಟದ ಕವಿಯತ್ರಿಯರಲ್ಲಿ ಒಬ್ಬರು. ಸಮಾಜದ ಆಗುಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತ ಅದನ್ನು ಅಕ್ಷರಕ್ಕಿಳಿಸುವ ಸಂವೇದನಾಶೀಲ ಬರೆಹಗಾರ್ತಿ.  ಸಮಾಜದ ವೈಪರಿತ್ಯಗಳು, ಅಸಮಾನತೆಗಳು, ಸಂಕೀರ್ಣತೆಗಳು ಹೇಮಕ್ಕನ ಅರಳುಗಣ್ಣಿನಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ.

ಹೀಗಾಗಿಯೇ ಸಧ್ಯ ಹೊರಗಡೆಯ ಜಗತ್ತಿನಲ್ಲಿ ಏನಾಗುತ್ತಿದೆ ಎಂಬುದನ್ನು ಅರಿಯಬೇಕಿದ್ದರೆ ಹೇಮಕ್ಕಾ ಏನು ಬರೆದಿದ್ದಾರೆ ಎಂಬುದನ್ನು ಓದಬೇಕು. ಪ್ರಸ್ತುತ ನಮ್ಮನ್ನೆಲ್ಲ ತಟ್ಟಬೇಕಾಗಿದ್ದ ಭಾವಗಳು ಯಾವುದು ಎಂಬುದನ್ನು ತಿಳಿಯಬೇಕಿದ್ದರೆ ಆಗಾಗ ಹೇಮಲತಾ ಮೂರ್ತಿಯವರ ಫೇಸ್ ಬುಕ್ ಗೋಡೆಯನ್ನು ಆಗಾಗ ಗಮನಿಸುತ್ತಿದ್ದರೆ ಸಾಕು.

ಪ್ರತಿದಿನ ಬೆಳಿಗ್ಗೆ ಮನೆಯಿಂದ ಸುಮಾರು ಎರಡು ಕಿ ಮಿ ದೂರ ಇರುವ ಕಾಳಿ ಸಂಗಮದ ಸಮೀಪಕ್ಕೆ ಒಮ್ಮೆ ಹೋಗಿ ಬಂದರೆ ಆ ದಿನದ ವಾಕ್ ಮುಗಿದಂತೆ. ಬೆಳಿಗ್ಗೆ ಬೆಳಿಗ್ಗೆ ಒಮ್ಮೆ ಕಾಳಿ ಸಮುದ್ರವನ್ನು ಸೇರುವುದನ್ನು ನೋಡಿದೆನೆಂದರೆ ಆ ದಿನ ಏನೋ ಸಾರ್ಥಕ. ಕಪ್ಪು ಕಾಳಂದಿ ನೀಲಿ ಅರಬ್ಬಿಯನ್ನು ಸೇರುವುದನ್ನು ನೋಡುವುದೇ ಒಂದು ಮುದ. ದೂರದಲ್ಲಿ ನೊರೆ ಉಕ್ಕಿಸುತ್ತ ಕಾಳಿಯನ್ನು ತನ್ನೊಳಗೆ ಲೀನವಾಗಿಸಿಕೊಳ್ಳುವ  ಅರಬ್ಬಿಗೆಆ ಕ್ಷಣದಲ್ಲಿ ಕಾಳಿಯನ್ನು ಹೊರತು ಪಡಿಸಿ ಬೇರೆ ಪ್ರಪಂಚವೇ ಇಲ್ಲ.

ಕಾರವಾರದಲ್ಲಿ ಇದ್ದಷ್ಟು ದಿನವೂ ನಾನು ಕಾಳಿಯನ್ನು ನೋಡದೇ ತಪ್ಪಿಸಿಕೊಳ್ಳುವುದೇ ಇಲ್ಲ. ಕೊನೆಗೆ ಏನೂ ಕೆಲಸವಿಲ್ಲದಿದ್ದರೂ ಒಮ್ಮೆ ಗಾಡಿಯ ಮೂತಿಗೆ ಚಾವಿ ತಿರುಗಿಸಿ ಕಾಳಿ ಸೇತುವೆಯನ್ನೊಮ್ಮೆ ದಾಟಿ ಬರುವ ಎನ್ನಿಸಿ ಬಿಡುತ್ತದೆ. ಅತ್ತ ದೂರದಲ್ಲಿ ಕಾಣುವ ಕೊಂಕಣ ರೈಲಿನ ಹಳಿಗಳು, ಕಾಳಿಕಾ ಮಾತೆಯ ದೇಗುಲ ಇರುವ ನಡುಗಡ್ಡೆ, ಇತ್ತ ಕೂರ್ಮಗಡ, ದೇವಗಡ ದ್ವೀಪಗಳು ಪ್ರತಿದಿನದ ನೋಟವಾದರೂ ಎಂದಿಗೂ ನನ್ನನ್ನು ನಿರಾಸೆಗೊಳಿಸಿಲ್ಲ.

“ನಿನಗೆ  ಕಾಳಿಯನ್ನೋ ಕಡಲನ್ನೋ ನೋಡಬೇಕೆನಿಸಿದರೆ ಒಂದು ಕಡೆ ಗಾಡಿ ನಿಲ್ಲಿಸಿಕೊಂಡು ನೋಡು” ಎಂಬ ಎಚ್ಚರಿಕೆ ಸದಾ ಕಿವಿಯಲ್ಲಿ ಮೊಳಗುತ್ತಿರುವುದರಿಂದ ಮತ್ತು ಕಾಳಿ ಸೇತುವೆಯ ನಂತರ ದ್ವಿಚಕ್ರ ವಾಹನಗಳೂ ಪುಲ್ಲಿ ಲೋಡೆಡ್ ಟ್ಯಾಂಕರ್ ಗಳಾಗುವುದರಿಂದ ಈ ಎಚ್ಚರಿಕೆಯನ್ನು ಪಾಲಿಸಲೇ ಬೇಕು ಎನ್ನುವುದೂ ಅನುಭವದಿಂದಲೇ ಅರಿವಿಗೆ ಬಂದಿದೆ. ಹೀಗಾಗಿ ನಿಧಾನವಾಗಿ ಕಾಳಿಯನ್ನು, ಕಡಲನ್ನು ಕಣ್ತುಂಬಿಕೊಳ್ಳುತ್ತೇನೆ.

ಹಿಂದೊಮ್ಮೆ ದಾಂಡೇಲಿ, ಅಣಶಿ ಜೊಯ್ಡಾದ ಕಾಡಿಗೆ ಹೋದಾಗ ಡಿಗ್ಗಿ ಎಂಬ ಹೆಸರನ್ನು ಕೇಳಿಯೂ ಸಮಯದ ಅಭಾವದಿಂದ ಹೋಗಲಾಗಿರಲೇ ಇಲ್ಲ. ಆದರೆ ಅದರ ಮಾರನೆಯ ವರ್ಷ ಡಿಗ್ಗಿ ಎಂದಾಗಲೇ ಜೊತೆಗಿದ್ದ ಅರಣ್ಯ ರಕ್ಷಕರು “ಅದೊಂದು ಕಾಡು ಮೇಡಂ, ಅಲ್ಲಿ ಏನೂ ಇಲ್ಲ, ತುಂಬಾ ದೂರ ನಡಿಬೇಕಾಗ್ತದೆ” ಎಂದೆಲ್ಲ ಹೇಳಿದ್ದರೂ ಕೇಳದೇ ಡಿಗ್ಗಿಗೆ ಹೊರಟು ಬಿಟ್ಟಿದ್ದೆ. ನದಿ ಮೂಲವನ್ನು ಹುಡುಕಬಾರದಂತೆ.

ಡಿಗ್ಗಿ ಕಾಳಿ ಹುಟ್ಟಿದ ಸ್ಥಳ. ಪೀಚಲು ಬಾಲೆ ಅಲ್ಲೆಲ್ಲೋ ಅದೃಶ್ಯಳಾಗಿ ಮುಂದೆ ಮೈ ಕೈ ತುಂಬಿಕೊಂಡು  ಸೊಕ್ಕಿನಿಂದ ನೆಗೆಯುತ್ತ ಮುನ್ನಡೆಯುವುದನ್ನು ನೋಡುವುದೇ ಒಂದು ಚಂದ. ರಾಫ್ಟಿಂಗ್ ಗಾಗಿ ಕಾಳಿ ಹೇಳಿ ಮಾಡಿಸಿದಂತವಳು. ಕಲ್ಲು ಬಂಡೆಗಳ ಇರುಕಲಿನಲ್ಲಿ ಕುಪ್ಪಳಿಸುವ ಕಾಳಿಗೆ ಹಾಕಿದಷ್ಟು ತಡೆಯನ್ನು ಬೇರಾವ ನದಿಗೂ ಹಾಕಿಲ್ಲ. ಆದರೂ ಕಡಲನ್ನು ಸೇರುವಾಗ ಆಕೆ ಗಜಗಮನೆ. ಎಷ್ಟೊಂದು ಶ್ರೀಮದ್ ಗಾಂಭೀರ್ಯ… ಹಿಂದೆಲ್ಲ ಕೆಣಕಿ ಸೊಕ್ಕಿದಾಕೆ ಇವಳೇನಾ ಎಂದು ಅಚ್ಚರಿ ಹುಟ್ಟಿಸುವಷ್ಟು ಗೌರವಾನ್ವಿತಳು.

ಎಷ್ಟೊಂದು ಗುಟ್ಟುಗಳನ್ನು ಆಕೆ ಎದೆಯಲ್ಲಿ ಹೊತ್ತಿದ್ದಾಳೋ ಬಲ್ಲವರಾರು? ದಾಂಡೇಲಿಯ ಪೇಪರ್ ಮಿಲ್ ನ ಕೊಳಕಿನಿಂದ ಹಿಡಿದು, ಚಂದದ ಹಾರ್ನ್ ಬಿಲ್ ಗಳ ಮೋಹಕ ಹಾರಾಟದ ಗುಂಗನ್ನು, ಸೈಕ್ಸ್ ಪಾಯಿಂಟ್ ಗಾಗಿ ಆಕೆಯ  ದಾರಿಯನ್ನೇ ಬದಲಿಸಿದ ಮನುಷ್ಯನ ಸ್ವಾರ್ಥವನ್ನು, ಕೊನೆಗೆ ಇನ್ನೇನು ತನ್ನ ಪ್ರೀತಿಯ ಕಡಲನ್ನು ಕೂಡಿದೆ ಎಂದು ಸಮಾಧಾನದ ನಿಟ್ಟುಸಿರು ಬಿಡುವ ಸಮಯದಲ್ಲೂ ಮತ್ತದೇ ಪ್ರೀತಿಯ ಹೆಸರು ಹೇಳಿಕೊಂಡು ಎತ್ತರದ ಸೇತುವೆಯ ಮೇಲಿಂದ ಆಕೆಯಲ್ಲಿ ಹಾರಿ ಪ್ರಾಣ ಬಿಡುವ ಯುವ ಪ್ರೇಮಿಗಳ ವಿರಹದ ನಿಟ್ಟುಸಿರನ್ನು  ಏನೆಲ್ಲವನ್ನು ಆಕೆ ತನ್ನೊಳಗೆ ಬಚ್ಚಿಟ್ಟುಕೊಂಡಿದ್ದಾಳೆ.

ಗುಟ್ಟುಗಳನ್ನು ಹೊತ್ತೊಯ್ದು

ಗುಪ್ತಗಾಮಿನಿ ಸಾಗರನೆದೆಯಲ್ಲಿ

ಮುಚ್ಚಿಟ್ಟು ಕರಗಿ ಹೋದದ್ದೇಕೆ, ಹೇಳೇ?

ಎಂದು ಹೇಮಲತಾ ಮೂರ್ತಿಯವರು ಕೇಳುವಾಗ ನನಗೆ ಬೇರೇನೂ ನೆನಪಾಗದೇ ಬರೀ ಕಾಳಿಯೇ ನೆನಪಾದದ್ದು ನನ್ನ ತಪ್ಪಲ್ಲವೇ ಅಲ್ಲ. ಹೀಗಾಗಿಯೇ ಹೇಮಕ್ಕನ “ಸಾಗರನಿಗೆ ಆಯ್ಕೆಗಳುಂಟು, ನದಿಗಲ್ಲ” ಎನ್ನುವ ಸಾಲು ನನ್ನದೂ ಆಗಿ ಬಿಡುತ್ತದೆ.

ನಾನು ಚಿಕ್ಕವಳಿದ್ದಾಗ ನನ್ನ ಅಣ್ಣನಿಗೆ ನನ್ನನ್ನು ಆಟಗಾರ್ತಿಯನ್ನಾಗಿಸಬೇಕೆಂಬ ಆಸೆ ಇತ್ತಂತೆ. ಹೀಗಾಗಿಯೇ ಹೆಜ್ಜೆ ಇಡಲು ಪ್ರಾರಂಬಿಸಿದ್ದೇ ತಡ ಬರೀ ನನ್ನ ಕೈ ಹಿಡಿದು ನಡೆದಾಡಿಸುತ್ತಲೇ ಇರುತ್ತಿದ್ದನಂತೆ. ಆದರೆ ನಾನೋ ಮತ್ತೂ ವಿಚಿತ್ರದವಳು. ಕಾಡು ಮೇಡು ಸುತ್ತಿಕೊಂಡು, ಅಕ್ಕ ಪಕ್ಕದ ಮನೆಯ ಪಾಗಾರ ಹಾರಿ, ಅವರ ಪೇರಲೇ ಹಣ್ಣು, ಮಾವಿನ ಹಣ್ಣುಗಳನ್ನೆಲ್ಲ ಕದ್ದುಕೊಂಡು ಬರುವಷ್ಟು ಜಾಣೆಯಾಗಿ ಬಿಟ್ಟಿದ್ದೆ.

ಹೀಗೇ ಒಮ್ಮೆ ನಾನು ಎರಡನೇ ತರಗತಿಯಲ್ಲಿದ್ದಾಗ ಪಕ್ಕದ ವಠಾರದಲ್ಲಿ ಮಾವಿನ ಹಣ್ಣು ಬಿತ್ತೆಂದು ಪಾಗಾರ ಹತ್ತಿ ಕೆಳಗೆ ಗುದುಕುವಾಗ  ಬಿದ್ದು ಕೈ ಮುರಿದುಕೊಂಡಿದ್ದೆ. ಅಣ್ಣನೋ ಕೈ ಮುರಿದು ಹೋದದ್ದು ತನ್ನದೇ ಎಂಬಂತೆ ಬಿಕ್ಕಳಿಸಿ ಅಳುತ್ತಿದ್ದರೆ ನಾನು ಹಾಯಾಗಿ ಅಪ್ಪ ಕೊಡಿಸಿದ ಚಾಕಲೇಟ್ ತಿನ್ನುತ್ತ ಅಣ್ಣನಿಗೆ ಏನಾಯ್ತು ಎಂದು ಕೇಳುತ್ತಿದ್ದೆ. ನಂತರದ ದಿನಗಳಲ್ಲಿ ಬಿದ್ದರೆ ನೀನೇ ಎದ್ದು ಮುನ್ನಡೆಯಬೇಕು ಎಂಬ ಪಾಠ ಹೇಳಿಕೊಟ್ಟಿದ್ದು ಇದೇ ಅಣ್ಣ. ಸೋಲನ್ನು ಸಕಾರಾತ್ಮಕವಾಗಿ ಬದಲಾಯಿಸಿಕೊಳ್ಳುವುದನ್ನು ತಿಳಿಸಿದವನೂ ಇದೇ ಅಣ್ಣ.

ಹೆಜ್ಜೆಯಿಡಲು ಶುರುವಿಟ್ಟಿದ್ದಿ

ಎಡರು ತೊಡರುಗಳು ಇದ್ದದ್ದೇ

ಬಿದ್ದೆಯಾದರೆ ಸಾವಾರಿಸಿಕೊಂಡು

ನಿಧಾನ ಏಳು, ಯಾವ ಹಸ್ತದ

ಹಂಗೂ ಬೇಡ

ಹೇಮಲತಾ ಮೂರ್ತಿಯವರೂ ತಮ್ಮ ಕವನದಲ್ಲಿ ಇದನ್ನೇ ಹೇಳುತ್ತಾರೆ. ಯಾರೋ ಬಂದು ನಮ್ಮನ್ನು ಏಳಿಸುತ್ತಾರೆಂಬ ಭ್ರಮೆ ನಮಗೆ ಬೇಡವೇ ಬೇಡ. ನಮ್ಮ ಬೆಳವಣಿಗೆ ನಮ್ಮ ಕೈಯ್ಯಲ್ಲೇ ಇದೆ ಎಂದು ಹೇಳುತ್ತಾರಲ್ಲದೇ ಪ್ರೀತಿಸಿದವರು

ಕೊನೆಯವರೆಗೂ ಜೊತೆಗೂಡಿಯಾರು

ಎಂಬ ಭ್ರಮೆ ಕಳಚಿಟ್ಟು ನಡೆ

ಎಂದು ಬಿಡುತ್ತಾರೆ. ಒಪ್ಪಿಕೊಳ್ಳುವುದು ಕಷ್ಟವೇ. ಪ್ರೀತಿಸುವುದೇ ಕೊನೆಯವರೆಗೂ ಜೊತೆಯಲ್ಲಿರಲಿ ಎಂಬ ಕಾರಣಕ್ಕೆ. ಆದರೆ ಪ್ರೀತಿ ಎನ್ನುವುದು ಸಾಪೇಕ್ಷ. ಅದು ಯಾವಾಗ ಬದಲಾಗುತ್ತದೋ ತಿಳಿದವರಾರು? ಒಂದು ವೇಳೆ ಪ್ರೀತಿ ಎಂಬುದು ಜೀವನದ ಕೊನೆಯವರೆಗೂ ಹಾಗೇ ಉಳಿದಿದ್ದರೆ ವಿರಹ ಎಂಬ ಶಬ್ಧಕ್ಕೆ ಅರ್ಥವೇ ಇರುತ್ತಿರಲಿಲ್ಲ.

ಒಲವ ಪಾತ್ರೆಯ ಬೊಗಸೆಯಲ್ಲಿಟ್ಟು

ವಿನಮ್ರತೆಯಿಂದ ವಿನಂತಿಸುವೆ

ಪೂರ್ತಿ ತುಂಬಿಸದಿರು, ವಿರಹದ

ಚರಮ ಸುಖಕ್ಕಿನ್ನೂ ಬಾಕಿಯಿದೆ

ಎನ್ನುವ ಸಾಲುಗಳು ವಿರಹದ ಚರಮ ಸ್ಥಿತಿಯ ಕುರಿತು ವ್ಯಾಖ್ಯಾನ ಸಲ್ಲಿಸುತ್ತದೆ. ಹೀಗಾಗಿಯೇ ಕನಸುಗಳು ಸಾಯುವುದೇಕೆಂದರೆ ಯಾವ ಪ್ರೀತಿಗೂ ವಿಳಾಸವಿರುವುದಿಲ್ಲ ಎಂಬ ವಿಷಾದ ಕವಿಯತ್ರಿಯ ಮನದಲ್ಲಿದೆ.

ಪ್ರೀತಿ ಎಂದರೆ ವಿರಹದ ನಂಟಲ್ಲೇ ಬೆಳೆಯುತ್ತದೆ. ಹೀಗಾಗಿಯೇ ಪ್ರತಿಯೊಂದು ಭೇಟಿಯ ಹಿಂದೆಯೂ ಅಗಾಧವಾದ ವಿರಹ ಹಾಸಿರುತ್ತದೆ.

ಬೆಳದಿಂಗಳಿಗೂ ಸೂರ್ಯೋದಯದ

ಭಯವುಂಟು

ಭೇಟಿಯ ನಂತರ ಮತ್ತೆ ಆವರಿಸುವ

ಸುಧೀರ್ಘ ವಿರಹದಂತೆ

ಎಂದು ಹೇಮಕ್ಕ ಅಭಿಪ್ರಾಯ ಪಡುತ್ತಾರೆ. ವಿರಹ ಕೇವಲ ದೂರವಾಗುವುದರಿಂದ ಮಾತ್ರವಲ್ಲ ವಿದ್ರೋಹದ ನಡುವಲ್ಲೂ ಎಂಬ ಮಾತನ್ನು ಇಲ್ಲಿ ಗಮನಿಸಲೇ ಬೇಕಿದೆ. ಒಂದು ಪ್ರೀತಿಯ ಎಸಳಲ್ಲೇ ಮತ್ತೊಬ್ಬಳನ್ನು/ ಮತ್ತೊಬ್ಬನನ್ನು ಬಯಸುವರಿಗೇನೂ ಕೊರತೆಯಿಲ್ಲ. ಥೇಟ್ ಡುಯೆಲ್ ಸಿಮ್ ಫೋನ್ ನಂತೆ. ಯಾವುದಾದರೂ ಒಂದು ಸಿಗ್ನೆಲ್ ಸಿಗಲೇ ಬೇಕಲ್ಲ ಎನ್ನುವವರನ್ನು ಹೇಮಲತಾ ಮೂರ್ತಿ ತೀರಾ ಅಚ್ಚರಿಯಿಂದ ಗಮನಿಸುತ್ತಾರೆ. ತಾನು ಮಾಡುತ್ತಿರುವ ಮೋಸದ ಅರಿವಿದ್ದೂ ಸಾಚಾತನದ ಮುಖವಾಡ ಧರಿಸುವವರ ಬಗ್ಗೆ ಕವಿಯತ್ರಿಯಲ್ಲೊಂದು ಸಣ್ಣ ರೋಷವೂ ಇದೆ, ವಿಷಾದವೂ ಇದೆ.

ನನ್ನನ್ನು ಎದೆಗವಚಿಕೊಂಡೇ

ಎದೆಯೊಳಗೆ ಮತ್ತೊಂದು

ಪ್ರೇಮದಲ್ಲಿ ಮಿಂದು

ಮೋಹಗೊಳ್ಳುವ ನೀನು

ದ್ರೋಹವರಿಯದ ವಿದ್ರೋಹಿಯಲ್ಲವೇ?

ಎನ್ನುತ್ತಾರೆ.

ಯಾರೋ ಒಬ್ಬಾತ ತನ್ನನ್ನು ಮದುವೆ ಆಗುವವಳಿಗೆ ಮದುವೆಯ ಹಿಂದಿನ ದಿನ “ಸಾರಿ, ಎಲ್ಲ ಮುಗಿದು ಹೋಯ್ತು,, ಮತ್ತೆ ನೀನು ನನ್ನ ಬಾಳಿನಲ್ಲಿ ಬರಬೇಡ” ಎಂದು  ಮೆಸೇಜ್ ಕಳಿಸಿದನಂತೆ. ಪಾಪ ಆಕೆ ಕಂಗಾಲು. ಬೆಳಗಾದರೆ ಮದುವೆ. ಈಗ ನೋಡಿದರೆ ತನ್ನ ಬಾಳಿನಲ್ಲಿ ಬರಬೇಡ ಎನ್ನುತ್ತಿದ್ದಾನೆ, ಏನು ಮಾಡುವುದೆಂದೇ ಅರಿಯದ ಆಕೆ ತನ್ನ ಅಪ್ಪ ಅಮ್ಮನಿಗೆ ವಿಷಯ ತಿಳಿಸಲು ಹೊರಡಬೇಕು ಎನ್ನುವಷ್ಟರಲ್ಲಿ ಮತ್ತೊಂದು ಮೆಸೆಜ್ ಬಂತಂತೆ  “ಸಾರಿ, ಮೊದಲಿನ ಮೆಸೆಜ್ ನಿನಗಲ್ಲ. ತಪ್ಪಿ ನಿನಗೆ ಹೋಯ್ತು….” ಅಂತ. ಈಗ ಮದುವೆ ನಿಲ್ಲಲಿಲ್ಲ ಎಂದು ಸಮಾಧಾನ ಪಡಬೇಕೋ ಅಥವಾ ಆತ ಅದನ್ನು ಇನ್ನಯಾರಿಗೆ ಕಳಿಸಿದ್ದ ಎಂದು ತಲೆಕೆಡಿಸಿಕೊಳ್ಳಬೇಕೋ ಗೊತ್ತಾಗದ ಅಯೋಮಯತೆ.

ಗಂಡಸಿನ ಲೋಕವೇ ಹೀಗೆ. ಶತಮಾನಗಳಿಂದಲೂ ಹೆನ್ಣೆಂದರೆ ಸುಖಕ್ಕೆ ಒದಗುವ ದಾಸಿ.

ಪಟ್ಟಕ್ಕೊಬ್ಬಳು, ಚಟ್ಟಕ್ಕೊಬ್ಬಳು

ನರಳಿ ನೊಂದ ನೂರಾರು

ನಿಟ್ಟುಸಿರು ಮೌನ ಬಿಕ್ಕುಗಳು.

ಹೆಣ್ಣು ಗಂಡಿನ ಅಟ್ಟಹಾಸಕ್ಕೆ ಕಣ್ಣೀರು ಹಾಕಿದ್ದೇ ಹೆಚ್ಚು. ತಾನು ಗಂಡಸು, ಎಂಬ ಅಹಂ ಮೆರೆದಾಗಲೆಲ್ಲ ಇಂದಿಗೂ ಹೆಣ್ಣಿಗೆ ಇರುವುದು ಕಣ್ಣೀರೇ. ಇಲ್ಲವೆಂದರೆ ಸಂಸಾರದ ಸೂತ್ರ ಹರಿದು ಹೋಗುತ್ತದೆ. ಕೊನೆಗೆ ನನಗಲ್ಲ, ಮಕ್ಕಳಿಗೋಸ್ಕರ ೆನ್ನುವ ಮಾತಿಗಾದರೂ ಕಟ್ಟಿ ಬೀಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿಬಿಡುತ್ತದೆ. ಆದರೆ ಗಂಡಸಿನ ಪೌರುಷದ ಕಥೆ ಇಂದು ನಿನ್ನೆಯದ್ದಲ್ಲ. ಅದಕ್ಕೆ ಸಾವಿರಾರು ವರ್ಷಗಳ  ಇತಿಹಾಸವಿದೆ.

ಇತಿಹಾಸದುದ್ದಕ್ಕೂ ಅವನ

ಶಿರವೇರಿದ ಕಿರೀಟ

ನನಗಿತ್ತ ಬಹುಮಾನ

ದಾಸಿಯ ಪಟ್ಟ

ಎನ್ನುತ್ತಾರೆ ಯಾಕೆಂದರೆ ಆಕೆ ಗೋಡೆಯೊಳಗೆ ಬಂಧಿ, ಅವ ಕಿಟಕಿಯಾಚೆಗಿನ ಚಿತ್ರ.  ಆದರೂ  ಇದರ ನಡುವೆಯೇ

ಒಮ್ಮೆ ಕೈ ಬೀಸಿ ಹಿಂದಿರುಗದೇ

ನಡೆದುಬಿಡು ಗೆಳೆಯಾ

ಸಾವು ನನಗಷ್ಟೇ, ಪ್ರೀತಿಗಲ್ಲ

ಎಂಬ ಸಾಲುಗಳು ಬದುಕಿನಲ್ಲಿ ಪ್ರೀತಿಯ ಅಸ್ತಿತ್ವವನ್ನು ಮತ್ತೆ ಮತ್ತೆ ಸಾಬೀತು ಪಡಿಸುತ್ತಲೇ ಸಾಗುತ್ತದೆ. ಹೀಗೆಂದೇ ತಾನು

ಸಾವಿಗೆ ತೆರೆದುಕೊಂಡೇ ನಿರಂತರ ಹುಟ್ಟಾಗುವುದನ್ನೂ, ಆತ ಮಾತ್ರ ಹುಟ್ಟು ಸಾವಿಲ್ಲದ ದೇವರಾಗಿ ಬಿಡುವ ಭ್ರಮೆ ಆವರಿಸುವುದೂ ಇದೆ.

ಏಕೆಂದರೆ ಪುಣ್ಯ ಪುರುಷರಿಗೆ

ಹೆಣ್ಣುಗಳ ನಿಟ್ಟುಸಿರಿನ

ಸಹಸ್ರಮಾನಗಳ ಶಾಪವಿದೆ

ಆದರೆ ಪ್ರೇಮಿಸುವುದೆಂದರೆ ಅದು ಸಂಪೂರ್ಣ ನಂಬಿಕೆಯಲ್ಲ. ಸಂಪೂರ್ಣ ಶರಣಾಗತಿಯೂ ಅಲ್ಲ. ಒಂದಿಷ್ಟು ಸಂದೇಹ, ಇನ್ನೊಂದಿಷ್ಟು ಪೊಸೆಸಿವ್ ನೆಸ್, ಮತ್ತೊಂದಿಷ್ಟು ದೂರವಾದರೆ ಎಂಬ ಅಂಜಿಕೆ,, ಕಳೆದು ಕೊಳ್ಳಲಾಗದ ಚಡಪಡಿಕೆ ಇವೆಲ್ಲವುದರುಗಳ ಮೊತ್ತ. ಯಾವ ಪ್ರೇಮಿಯೂ ಈಗ ಒಂದಿಷ್ಟೂ ಶಂಕೆ ಇಲ್ಲದೇ  ಪ್ರೇಮಿಸಲಾರ. ದೂರವಾದರೆ ಎಂಬ ಅಳುಕಿಲ್ಲದೇ ಬಾಳಲಾರ. ಹೀಗಾಗಿಯೇ ಹೇಮಲತಾ ಮೂರ್ತಿಯವರಿಗೆ ಪ್ರೀತಿಸುವುದೆಂದರೆ ಇವೆಲ್ಲವುಗಳ ಸಂಗಮದಂತೆ ಕಾಣುತ್ತದೆ.

ಒಂದು ಸಣ್ಣ ಅತೃಪ್ತಿ

ಎಂದೂ ಮುಗಿಯದ ಶಂಕೆ

ಹತ್ತಿರವೇ ಇರುವವಳು

ಎಂಬ ನಿರ್ಲಕ್ಷ

ಕಳಚಿಕೊಂಡೇ ಬಿಡುವಳೇ

ಎಂಬ ದುಗುಡ

ಇಲ್ಲಿಯ ಧ್ವನಿಯನ್ನು ಗಮನಿಸಬೇಕು. ಪ್ರೀತಿಸುವ ಮೊದಲ ದಿನಗಳಲ್ಲಿ ಎಷ್ಟೊಂದು ಮಾತು… ಎಷ್ಟೊಂದು ನಗು…, ವಿನಾ ಕಾರಣ ಮಾತು, ಮಾತು ಮಾತಿಗೆ ಸಲಹೆ ಕೇಳುವ ಸಲಹೆ ಕೊಡುವ ಹುಮ್ಮಸ್ಸು, ಉಂಡೆಯಾ?  ತಿಂದೆಯಾ? ಮಲಗಿದೆಯಾ? ನಿದ್ದೆ ಬಂತಾ? ಧ್ವನಿ ಏಕೆ ಒಂಥರಾ ಇದೆ? ಆಯಾಸವೇ? ಆಸ್ಪತ್ರೆಗೆ ಹೋಗು, ನಾನೇ ಬಂದು ಕರೆದುಕೊಂಡು ಹೋಗಲೇ? ಆಹಾ… ಎಷ್ಟೆಲ್ಲ ಮಾತುಗಳು. ಎಷ್ಟೆಲ್ಲ ಕಾಳಜಿ.

ಆದರೆ ಒಮ್ಮೆ ಪರಸ್ಪರ ಒಪ್ಪಿ ತಿಂಗಳು ಕಳೆದರೆ ಸಾಕು, “ಯಾಕೆ ಮತ್ತೆ ಮತ್ತೆ ಫೋನ್ ಮಾಡಿ ಡಿಸ್ಟರ್ಬ ಮಾಡ್ತೀಯಾ?” “ನನಗೆ ಕೆಲಸ ಇದೆ, ನಂತರ ಮಾತಾಡ್ತೀನಿ.” ಬರೀ ನೀನೊಬ್ಬಳೇನಾ? ನನಗೆ ಬೇರೆ ಪ್ರಪಂಚವೇ ಇಲ್ವಾ? ಸ್ನೇಹಿತರು, ನನ್ನ ಫ್ಯಾಮಿಲಿಗೆ ಸಮಯ ಕೊಡಬೇಕಲ್ವಾ?” ಎಲ್ಲ ಮಾತುಗಳೂ ಧಂಡಿ ಧಮಡಿಯಾಗಿ ಹೊರಗೆ ಬರುತ್ತವೆ.  ಎಷ್ಟೆಂದರೂ ತನ್ನವಳಲ್ಲವೇ ಎಂಬ ನಿರ್ಲಕ್ಷ ಕಾಡಲಾರಂಭಿಸುತ್ತದೆ. ತನ್ನನ್ನು ಬಿಟ್ಟು ಎಲ್ಲಿ ಹೋಗ್ತಾಳೆ ಎನ್ನುವ ಭಾವ.

ಮದುವೆ ಆಗಿ ಬಿಟ್ಟರಂತೂ ಮುಗಿದೇ ಹೋಯಿತು ಕಥೆ. “ಪ್ರೀತಿಸುವಾಗ ಎಷ್ಟೆಲ್ಲ ಮಾತಾಡ್ತಿದ್ದೆ. ಈಗ್ಯಾಕೆ ದಿನಕ್ಕೊಮ್ಮೆ ಕೂಡ ಫೋನ್ ಮಾಡಲ್ಲ ಎಂದು ಕೇಳಿದ ಹೆಂಡತಿಗೆ ಗಂಡ ಹೇಳಿದ್ದನಂತೆ. ‘ಇಲೆಕ್ಷನ್ ಮುಗಿದ ಮೇಲೂ ಯಾರಾದರೂ ಕ್ಯಾನ್ವಾಸ್ ಮಾಡಿ ಪೂಸಿ ಹೊಡಿತಾರಾ?”  ಅಂತ. ಇದೊಂಥರ ತಮಾಷೆ ಎನ್ನಿಸ ಬಹುದಾದರೂ ಬಹಳಷ್ಟು ಮನಸ್ಥಿತಿಗಳು ಇರುವುದೇ ಹೀಗೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಲೇ ಬೇಕು. ಹೀಗಾಗಿಯೇ ಗಂಡಸು

ಅಂಗಾಲ ನೋವಿಗೆ

ಮುಂಗೈಗೆ ಮುಲಾಮು

ಹಚ್ಚಿ ನೋವು ನೀಗಿಸಿಬಿಟ್ಟೆ ನೋಡು

ಎಂದು ಮೀಸೆ ತಿರುಗಿಸುವ ಗತ್ತು

ಪದೇಪದೇ ತೋರಿಸುತ್ತಾನೆ. ಹೀಗಾಗಿಯೇ ಪ್ರೇಮಿಸುವುದೆಂದರೆ ನೀನು ಹಸಿದು ಬರುವುದು, ನಾನು ಮುಗಿದು ಹೋಗುವುದು ಎಂಬ ಪ್ರಕ್ರೀಯೆ ಆಗಬಾರದು ಎನ್ನುವ ಕಳಕಳಿ ಕವಿಯತ್ರಿಯಲ್ಲಿದೆ. ಆದರೆ ಅದೇ ಹೊತ್ತಿಗೆ

ಪ್ರೇಮ ಮತ್ತು ಯುದ್ಧಕ್ಕೆ ಎಂದಿಗೂ

ನೇರ ದಾರಿ ಸಿಕ್ಕಿಲ್ಲ

ಎಂದು ಹೇಳುವ ಧಾರ್ಷ್ಟ್ಯವನ್ನೂ ಹೇಮಲತಾ ಮೂರ್ತಿ ತೋರಿಸುತ್ತಾರೆ.

ಕೆಲವೊಮ್ಮೆ ನಾನು ಓದುವ ನಡುವೆ ಪುಸ್ತಕದ ಹಾಳೆ ಮಡಚಿಟ್ಟು ಎದ್ದರೆ ಅದು ಎಷ್ಟೋ ಸಲ ಮುಂದಿನ ಪೇಜುಗಳಿಗೆ ಸಾಗಿ ಬಿಡುತ್ತಿತ್ತು. ಎಷ್ಟೋ ಸಲ ಅದು ಹೇಗೆ ಎಂದು ಅರ್ಥ ಆಗದೇ ನಾನೇ ಕೈ ತಪ್ಪಿ ಮಡಚಿಟ್ಟಿರಬಹುದು ಎಂದು ಸಮಾಧಾನ ಪಟ್ಟಿದ್ದೂ ಆಗಿತ್ತು. ಆದರೆ ಒಂದು ದಿನ ನನ್ನ ಮಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದ.

ಯಾಕೋ ಹಾಗೆ ಮಾಡ್ತೀಯ ಅಂದರೆ “ನೀನು ಓದ್ತಾ ಕುಳಿತರೆ ನನ್ನ ಜೊತೆ ಮಾತೆ ಆಡೋದಿಲ್ಲ. ಅದಕ್ಕೆ ನಿನ್ನ ಓದು ಬೇಗ ಮುಗಿಲಿ ಅಂತಾ ಎಂದು ಮುಖ ಸೊಟ್ಟಗೆ ಮಾಡಿದ್ದ. ಅದೇ ಕಡೆ. ನಂತರದ ದಿನಗಳಲ್ಲಿ ಆತ ಕರೆದಾಗಲೆಲ್ಲ ಓದುತ್ತ ಅವನ ಮಾತಿಗೆ ಹ್ಞೂಂಗುಡೋದನ್ನು ಅಭ್ಯಾಸ ಮಾಡಿಕೊಂಡಿದ್ದೇನೆ. ಈಗ ಪುಸ್ತಕದ ಮಡಚಿಟ್ಟ ಹಾಳೆ ಅಷ್ಟಾಗಿ ಅದಲು ಬದಲಾಗುತ್ತಿಲ್ಲ.

ಹೀಗೆಯೇ ಒಮ್ಮೊಮ್ಮೆ

ಅರ್ಧ ಓದಿ ಮಡಚಿಟ್ಟ ಪುಸ್ತಕದ ಹಾಳೆಗಳು

ಗೊತ್ತಿಲ್ಲದೇ ಬದಲಾಗಿಬಿಟ್ಟಿರುತ್ತವೆ

ಕಥೆಯ ಸಂಬಂದಗಳೇ

ಅರ್ಥವಾಗದಂತೆ

ಎನ್ನುತ್ತಾರೆ ಹೇಮಕ್ಕ. ಯಾವ ಪುಟಗಳೂ ಇನ್ನು ಬದಲಾಗದಿರಲಿ. ಹೆಣ್ಣುಗಳ ಪಾತ್ರಕ್ಕೆ ಅಂತ್ಯವಿರದ ಅಂತ್ಯವಾಗದಿರಲಿ ಎಂದು ಹಾರೈಸುವ  ‘ಕಳಚಿಟ್ಟಿದ್ದೇನೆ ಇದೋ ನಿರ್ವಾಣ’ವನ್ನು ಮಹಿಳಾ ದನಿಯಾಗಿ ಒಮ್ಮೆ ಓದಲೇಬೇಕು.

ಕೆಲವು ಕಡೆಗಳಲ್ಲಿ  ಸಾಲುಗಳು ಕವಿತೆಯಾಗಲು ಸೋತಿರಬಹುದು. ಆದರೆ ಕವಿತೆಯ ಸಾಲುಗಳ ನಡುವಿನ ಓದು ನಮ್ಮನ್ನು ಒಂದು ಕ್ಷಣ ಹಿಡಿದಿಡದೇ ಬಿಡಲಾರದು.  ಕವಿತೆಯಾಗದ ಕೆಲವೊಂದು ಸಾಲುಗಳೂ ನಮ್ಮ ಮನ ತಟ್ಟುವಲ್ಲಿ, ಭಾವವನ್ನು ಮುಟ್ಟುವಲ್ಲಿ ಯಶಸ್ವಿಯಾಗಿದ್ದು ಇಲ್ಲಿನ ವಿಶೇಷ.

ಕೆಲವೊಂದು ಕವಿತೆಗಳಂತೂ “ಅರರೆ… ಇದನ್ನು ನಾನು ಹೇಳಬೇಕಾಗಿತ್ತು “ ಎನ್ನುವ ಭಾವವನ್ನು ಖಂಡಿತಾ ನಮ್ಮ ಮನಸ್ಸಿನಲ್ಲಿ ಉಳಿಸಿ ಬಿಡುತ್ತದೆ.

ಅಂತಹುದ್ದೊಂದು ಎದೆಯೊಳಗೆ ಮತ್ತೆ ಮತ್ತೆ ಮೆಲುಕು ಹಾಕುವ ಸಾಲುಗಳಿಗಾಗಿ ಕಳಚಿಟ್ಟಿದ್ದೇನೆ ಇದೋ ನಿರ್ವಾಣ ಕವನ ಸಂಕಲನವನ್ನೊಮ್ಮೆ ಓದಿ ನೋಡಿ.

26 Responses

 1. Anand says:

  I have no words to express the pain. It is impossible for me to digest that something like this can happen to a little girl

 2. Kusumapatel says:

  ಈ ಪುಸ್ತಕ ಓದಲೇ ಬೇಕು ಎನಿಸಿದೆ. ನಿಮ್ಮ ಲೇಖನ ಮತ್ತು ಕವನದ ತುಣುಕು ಗಳನ್ನು ಓದಿದ ಮೇಲೆ. ದಯವಿಟ್ಟು ಪುಸ್ತಕ ಎಲ್ಲಿ ಸಿಗುತ್ತದೆ ತಿಳಿಸಿ. ನಿಮ್ಮ ಲೇಖನವೂ ಕವನಗಳಷ್ಟೇ ಚಂದ ಇದೆ.

 3. Jampanna Ashihal says:

  ಸೂಪರ್ ಶ್ರೀದೇವಿ
  ತುಂಬಾ ಅಪ್ತವೆನಿಸಿತು.
  ನಿಮ್ಮಂತೆ
  ಹೇಮಾ ಇಷ್ಟವಾದರು. ಸಮರ್ಥ ಕವಿ ಅವರು.
  ದಶಕಗಳ ಕಾಲ ಓಡಾಡಿದ ಕಾಳಿನದಿ ತಟದ ನೆಲ ಕೈಬೀಸಿ ಕರೆಯುತಿದೆ.
  ಕಾರವಾರದ ಕನವರಿಕೆ ಸದಾ.

  • Shreedevi keremane says:

   ಮತ್ತೆ ಕಾರವಾರಕ್ಕೇ ಟ್ರಾನ್ಸಪರ್ ತೆಗೆದುಕೊಂಡು ಬನ್ನಿ ಸರ್

   • Jampanna Ashihal says:

    ಕರೆವವರ ಕರಕೆ ಕರಮುಗಿವೆ
    ನಿಮ್ಮನ್ನು ಓದುವಷ್ಟು ಖುಷಿ

 4. ರಮೇಶ ಗಬ್ಬೂರ್ says:

  ಪ್ರೇಮ ಮತ್ತು ಯುದ್ಧಕ್ಕೆ ನೇರದಾರಿ ಸಿಕ್ಕಿಲ್ಲ… ಎಂಬ ಸಾಲು ಬಹಳ ಕಾಡಿಸ್ತಿದೆ.. ಹೀಗೆ ಯಾಕ ಹೇಳ್ತಾರೆ ಅಂತ ನನಗೆ ಅರ್ಥ ಆಗಬೆಕೆಂದರೆ ಸಂಕಲನ ಓದಬೇಕು… ಸಿರಿಯವರ ವಿಮರ್ಶೆ ತುಂಬಾ ಚೆನ್ನಾಗಿದೆ….ಪುಸ್ತಕ ಕಳಿಸಿಕೊಡ್ರಮ್ಮಾ..
  ವಿಳಾಸ
  ರಮೇಶ ಗಬ್ಬೂರ್
  ಗ್ರಂಥ ಪಾಲಕರು
  ಬಾಲಕರ ಸ.ಪ.ಪೂ.ಕಾಲೇಜು ಗಂಗಾವತಿ
  ಕೊಪ್ಪಳ ಜಿಲ್ಲೆ

 5. Sreedhar says:

  ಹೇಮಕ್ಕ ಅವರ ಪುಸ್ತಕದ ವಿಮರ್ಶೆ ತುಂಬಾ ಚೆನ್ನಾಗಿದೆ. ನಿಜಕ್ಕೂ ನಿಮ್ಮ ಲೇಖನಿಯಲ್ಲಿ ಮಾಂರ್ತಿಕ ಶಕ್ತಿ ಇದೆ.

 6. ಕೀರ್ತಿ ಪಿ says:

  ಪ್ರಸ್ತುತ ಓದಬೇಕಾದ ಕವಿತೆಗಳಿವು.
  ಚೆಂದವಾಗಿ ವಿವರಿಸಿದ್ದೀರಿ.
  ಕವಯತ್ರಿ ಹೇಮಲತಾಮೂರ್ತಿ ಅವರ ಕವಿತೆಗಳು ನಿಜಕೂ ವಾಸ್ತವತೆಯ ಎತ್ತಿ ಹಿಡಿಯುತ್ತವೆ.

 7. ಕಮೆಂಟಿಸಿದ ಎಲ್ಲರಿಗೂ ಧನ್ಯವಾದಗಳು
  ಪುಸ್ತಕ ದೊರೆಯುವ ಪ್ರಕಾಶಕರ ವಿಳಾಸ ಕೊಡುವೆ
  ದಯಮಾಡಿ ಅಲ್ಲಿ ಸಂಪರ್ಕಿಸಿ.

  ಶ್ವೇತಪ್ರಿಯ ಪ್ರಕಾಶನ
  ನಂ.೨೧೬, ೫ನೇ ಮುಖ್ಯ ರಸ್ತೆ
  ಕೆನರ ಬ್ಯಾಂಕ್ ಲೇಔಟ್
  ಕೊಡಿಗೆ ಹಳ್ಳಿ, ವಿದ್ಯಾರಣ್ಯಪುರ ಅಂಚೆ
  ಬೆಂಗಳೂರು ೫೬೦೦೯೭

  ಫೋನ್ ಸಂಖ್ಯೆ:
  ೯೭೪೨೬೦೬೦೦೦
  ೯೮೮೦೩೩೯೬೬೯

 8. ಧನಪಾಲ ನೆಲವಾಗಿಲು says:

  ತಮ್ಮ ಕೃತಿಯ ವಿಶ್ಲೇಷಣೆ ಇಷ್ಟವಾಯಿತು. ಧನ್ಯವಾದಗಳು ಮೇಡಮ್

 9. ಋತಊಷ್ಮ says:

  ಈಗಿನ ಬದುಕು ಅಸಹನೀಯವಾಗಿ ಕೊಲ್ಲುತ್ತಿರುವಾಗ ಕವಿಯ ಪ್ರೀತಿಯ ಕಾವ್ಯ – ಮಾತು ಮತ್ತೆ ಬದುಕಲು ಛಲ ತುಂಬುತ್ತವೆ. ಈಗ ತಾನೆ ಪುಸ್ತಕ ಸಿಕ್ಕಿದೆ, ಖಂಡಿತ ಓದುವೆ.

 10. ಪುಷ್ಪಾ ನಾಯ್ಕ ಅಂಕೋಲ says:

  ಈ ಅಂಕಣ ಓದಿದ ಮೇಲೆ ಹೇಮಲತಾ ಅವರ ಕವಿತೆಗಳ ಪುಸ್ತಕ ಓದಲೇಬೇಕು ಎನಿಸಿತು ಇದು ಒಂದು ಅಂಕಣ ಹುಟ್ಟು ಹಾಕಿದ ಆಸಕ್ತಿ ಧನ್ಯವಾದಗಳು ನಿಮಗೆ

 11. suresh says:

  ಮತ್ತೆ ಮತ್ತೆ ಮಾತಾಗುವ ಕವಿತೆಗಳ ಹಂದರದಿ
  ನಾನೊಂದು ಬಗೆಯಲ್ಲಿ ನೆನೆದು ಹೋದಂತಾಯ್ತು…
  ತುಂಬಾ ಗಟ್ಟಿಯಾದ ವಿಶ್ಲೇಷಣೆ ಮೆಡಮ್.
  ಅಭಿನಂದನೆಗಳು….

 12. ಸುಮ್ಮನೆ ಅವಧಿ ಓಪನ್ ಮಾಡ್ತೀನಿ ಓದಲು ಅಲ್ಲ. ಇವತ್ತೇನಿದೆ ನೋಡೋಣ ಅಂತ. ದೇವಿ ನಿಮ್ಮ ಕಾಲಂ ವಿಸ್ತಾರ ಗೊಂಡಿದ್ದಷ್ಟೇ ಗೊತ್ತು ಹಂಗಂಗೇ ಓದಿಸಿಕೊಂಡು ಹೋಗುತ್ತೆ. ನಿಮ್ಮಗನ ಪ್ಲಾನ್ ಸಖತ್ ಖುಷಿ ಕೊಡ್ತು.

  ಕೃತಿಯ ವಿಮರ್ಶೆಯ ಜೊತೆ ಜೊತೆಗೇ ಅನುಭವದ ನಂಟು ಬಿಡಿಸಿಡುವ ಪರಿ ಅಮೋಘ. ಸೂಪರ್.

  • Shreedevi keremane says:

   ಒಹ್ …. ಥ್ಯಾಂಕ್ಯೂ ಸೋ ಮಚ್

   • Raju palankar karwar says:

    Enter your comment here…ಹ

    • ಶ್ರೀದೇವಿ ಕೆರೆಮನೆಯವರ ಶ್ರೀದೇವಿ ರೆಕಮೆಂಡ್ಸ್ ಅಂಕಣ ತುಂಬಾ ಚೆನ್ನಾಗಿ ಬರುತ್ತಿದೆ ಹೇಮಲತಾ ಮೂರ್ತಿ ಅವರ ಪುಸ್ತಕ ವಿಮರ್ಶೆ ತುಂಬಾ ಚೆನ್ನಾಗಿದೆ ಶ್ರೀದೇವಿ ಮೇಡಂ ಅವರಿಗೆ ಅಭಿನಂದನೆಗಳು

Leave a Reply

%d bloggers like this: