ಆಸೀಫಾ ಮತ್ತು‌ ಕೋತಿ ಪ್ರೀತಿ..

ಎನ್ ರವಿಕುಮಾರ್ / ಶಿವಮೊಗ್ಗ

15ವರ್ಷಗಳ ಹಿಂದೆ ನಾನು ಉತ್ತರಭಾರತದ ಪ್ರವಾಸದಲ್ಲಿದ್ದಾಗ ನಾನಿದ್ದ ರೈಲು ನಾಗಪುರದ ನಿಲ್ದಾಣ ದಲ್ಲಿ ಟ್ರ್ಯಾಕ್ ಕ್ಲಿಯರಿಂಗ್ ಗಾಗಿ ಬಹಳ ಹೊತ್ತು ನಿಲ್ಲಬೇಕಾಯಿತು.

ಮಧ್ಯ ಹಳಿ ದಾಟಿ ಆ ಭಾಗದಲ್ಲಿನ ಪ್ಲಾಟ್ ಫಾರಂನಲ್ಲಿ ಮೂರು ಸಣ್ಣ ಸಣ್ಣ ಮಕ್ಕಳೊಂದಿಗೆ ತಾಯಿಯೊಬ್ಬಳು ಭಿಕ್ಷೆ ಬೇಡುತ್ತಿದ್ದಳು.

ಒಂದು ಸಣ್ಣ ಕೂಸು ಆಕೆಯ ಕಂಕಳಲ್ಲಿತ್ತು, ಇನ್ನೊಂದು ಕೂಸು ಅವಳ ಸೆರಗ ಹಿಡಿದು ಓಡಾಡುತ್ತಿತ್ತು. ಮತ್ತೊಂದು ಹೆಣ್ಣು ಮಗು ಸ್ವಲ್ಪ ದೂರದಲ್ಲಿ ಕೂರಿಸಿ ಅದರ ಕೈಗೆ ಬ್ರೆಡ್ ವೊಂದನ್ನು‌ಕೊಟ್ಟಿದ್ದಳು.

ಆದೇ ಪ್ಲಾಟ್ ಫಾರಂನಲ್ಲಿ‌ ಕೋತಿಗಳ ದೊಡ್ಡ ದಂಡೇ ಇತ್ತು . ಒಂದು ಕೋತಿ ನುಗ್ಗಿ‌ ಮಗುವಿನ ಕೈಯಲ್ಲಿದ್ದ ಬ್ರೆಡ್ ಕಿತ್ತುಕೊಳ್ಳಲು ಎಳೆದಾಡಿತು. ಇದರಿಂದ ಹೆದರಿ ಕಂಗಾಲಾದ ಮಗು ಕಿರುಚಾಡತೊಡಗಿತು. ಸ್ವಲ್ಪ ದೂರದಲ್ಲಿದ್ದ ತಾಯಿ ಉಳಿದೆರೆಡು ಮಕ್ಕಳನ್ನು ಎಳೆದುಕೊಂಡೇ ಮಂಗನ ಕೈಗೆ ಸಿಕ್ಕ ಮಗುವನ್ನು ರಕ್ಷಿಸಲು ದೌಡಾಯಿಸಿದಳು. ಕೋತಿ ಕೈಯಿಂದ ಕೂಸನ್ನು ಬಿಡಿಸಿಕೊಳ್ಳಲು ಹರಸಾಹಸ ಮಾಡಿದಳು.

ಕೋತಿ ಬ್ರೆಡ್ಡು ಬಿಡದೆ ಮಗುವಿನ ಕೈಯನ್ನು ಹಿಡಿದಿತ್ತು. ಒಂದು ರೀತಿ ಕೋತಿ ಜೊತೆ ಕುಸ್ತಿಯನ್ನೆ ಆಡಿದಳು. ರಣಚಂಡಿಯಂತಾಗಿದ್ದ ತಾಯಿ ಕೋತಿಗೆ ತನ್ನ ಕೈಗಳಿಂದ ಒಂದೆರಡು ಬಲವಾಗಿ ಬಾರಿಸಿದಳು. ಇದರಿಂದ ಮಗುವಿಗೆ ಕೋತಿಯ‌ ಕೈಯಿಂದ ಬಿಡಗಡೆ ಸಿಕ್ಕಿತು.

ಆದರೆ, ಯಾವಾಗ ಆಕೆ ಕೋತಿಗೆ ಬಲವಾಗಿ ಬಡಿದಳೋ ಕೋತಿ ದೊಡ್ಡದಾಗಿ ಕಿರುಚಿಕೊಂಡಿತು ಇದನ್ನು ಕೇಳಿದ್ದೇ ತಡ, ಅಲ್ಲಿಯವರೆಗೂ ತಮ್ಮ ಪಾಡಿಗೆ ತಾವಿದ್ದ ಉಳಿದ‌ ಕೋತಿಗಳು ಒಮ್ಮೆಲೆ ಗುಂಪು ಗುಂಪಾಗಿ ಆ ತಾಯಿಯ ಮೇಲೆ ಘೀಳಿಟ್ಟು ದಾಳಿ ಮಾಡಿಬಿಟ್ಟವು.

ಯಾವ ಮಟ್ಟಿಗೆ ಎಂದರೆ ಮೊದಲೇ ಹರಿದು ಚೂರಾಗಿದ್ದ ಆಕೆಯ ಸೀರೆ, ಕುಪ್ಪಸವನ್ನು ಹರಿದು, ಜುಮ್ಮಿರಿದು ಚೆಲ್ಲಾಡಿಬಿಟ್ಟವು . ಒಂದು ರೀತಿ ಅತ್ಯಂತ ಬರ್ಬರ ದಾಳಿಯಂತೆ ಕೋತಿಗಳು ಅರಚಾಡುತ್ತಾ ಆಕೆಯ ಮೇಲೆ ಮುಗಿಬಿದ್ದವು. ತಾಯಿಯ ಸ್ಥಿತಿ ನೋಡಿ ಮೂರು ಮಕ್ಕಳ ರೋಧನ, ಅಷ್ಟೂ ಕೋತಿಗಳೊಂದಿಗೆ ತಾಯಿಯ ಏಕಾಂಗಿ ಸೆಣಸಾಟ ಇಡೀ ಪ್ಲಾಟ್ ಫಾರಂನ್ನು ರಣರಂಗವಾಗಿಸಿಬಿಟ್ಟಿತು.

ಇಷ್ಟೆಲ್ಲಾ ಆಗುತ್ತಿದ್ದರೂ ಅಲ್ಲಿದ್ದವರು ಇದೊಂದು ಮನರಂಜನೆ, ಬೀದಿ ನಾಟಕವೇನೊ ಎಂಬಂತೆ ನೋಡುತ್ತಿದ್ದರೇ ವಿನಃ, ನೆರವಿಗೆ ಮುಂದಾಗಲಿಲ್ಲ.

ಕೊನೆಗೆ ನಾನು ಮತ್ತು‌ ನನ್ನ ಕೆಲವು ಸ್ನೇಹಿತರು ರೈಲಿನಿಂದಿಳಿದು ಹಳಿಯ ಜಲ್ಲಿಕಲ್ಲುಗಳಿಂದ ಈ ಭಾಗದಲ್ಲಿ ನಿಂತೆ ಆಕೆಯನ್ನು ಮುತ್ತಿದ್ದ ಕೋತಿಗಳ ಮೇಲೆ ತೂರತೊಡಗಿದೆವು. ಇದರಿಂದ ಕೆಲವು ಕೋತಿಗಳಿಗಳಿಗೆ ಬಲವಾದ ಪೆಟ್ಟು ಬಿದ್ದು ರಕ್ತ ಸೋರತೊಡಗಿತು. ಕೋತಿಗಳಂತೂ ಅಕ್ಷರಶಃ ರಾಕ್ಷಸ ಗಣದಂತಾಡುತ್ತಿದ್ದವು. ( ನಮಗೂ ಕೂಡ ಕೋತಿ ದಾಳಿ ಬಗ್ಗೆ ಭಯವಿತ್ತು) ಕೊನೆಗೂ ಕೋತಿಗಳನ್ನು ಓಡಿಸುವಲ್ಲಿ ಯಶಸ್ವಿಯಾದೆವು.

ಹೈರಾಣಗೊಂಡು ಮೈ ಕೈ ಗಾಯಗೊಂಡು ನಿತ್ರಾಣಳಾಗಿದ್ದ ಆ ತಾಯಿಯನ್ನು ಎತ್ತಿ ಸುಧಾರಿಸಿದೆವು. ಅರೆಬೆತ್ತಲೆಯಾಗಿ ಕೈ ಮೈ ಗಾಯಗೊಂಡಿದ್ದ ಆ ತಾಯಿ ಅದಾವುದರ ಪರಿವೆ ಇಲ್ಲದಂತೆ ಗಾಬರಿಗೊಂಡು ಬಿಕ್ಕಳಿಸುತ್ತಿದ್ದ ಮಕ್ಕಳನ್ನು ಬಾಚಿ ಬಾಚಿ ಎದೆಗವುಚಿಕೊಂಡು ಸಂತೈಸುತ್ತಿದ್ದಳು. ದಳ ದಳನೆ ಸುರಿಯುತ್ತಿದ್ದ ತನ್ನ ಕಣ್ಣೀರನ್ನು ತಾನೇ ಕುಡಿಯುತ್ತಲೇ ದಾಹ ನೀಗಿಸಿಕೊಳ್ಳುತ್ತಿದ್ದಳು.

ಗುಂಪು ಸೇರಿದ್ದ ಜನ ಕೋತಿಗಳ‌ ಸಾಹಸವನ್ನು, ಈ ತಾಯಿಯ ಧೈರ್ಯವನ್ನು ಕೊಂಡಾಡುತ್ತಾ ತಮ್ಮ ತಮ್ಮೊಳಗೆ ಲೊಚಗುಡುತ್ತಾ ರೈಲು ಹತ್ತಿದರು.

ಒಂದೈದು ಬ್ರೆಡ್ ಖರೀದಿಸಿ ಆ ತಾಯಿಯ ಕೈಗಿಟ್ಟಿ ರೈಲು ಹತ್ತಿದೆ… ರೈಲು ಹೊರಟಿತು ತಿರುವು ತಿರುಗಿ ಮರೆಯಾಗುವವರೆಗೂ ಆ ತಾಯಿ ಮಕ್ಕಳ ಕಡೆಗೆ ನನ್ನ ದೃಷ್ಟಿ ಕದಲಿಸಲಾಗಲಿಲ್ಲ.

ಮನುಷ್ಯ ಎಂಬ ಪ್ರಾಣಿ ಕೋತಿಗಳಿಗಿಂತ ಹೀನಾಯವಾಗಿ ಯಾಕೆ ಹೀಗೆ ವರ್ತಿಸುತ್ತಿದೆ ಎಂಬ ಬಗ್ಗೆ ನಾನು ಈ ಕ್ಷಣದವರೆಗೂ ಯೋಚಿಸುತ್ತಲೆ ಇದ್ದೇನೆ.

ಫಾದರ್ ಆಫ್ ಸೋಷಿಯಾಲಜಿ ಅಗಸ್ಟಸ್ ಕಾಂಪ್ಟೆ ಹೇಳುತ್ತಾನೆ “ಮನುಷ್ಯ ದ್ವೀಪದಂತೆ ಬದುಕಲಾಗದು.” ಎಂದು. ಆದರೆ ಮನುಷ್ಯ ಜಾತಿ, ಧರ್ಮ, ರಾಜಕೀಯ ಕಾರಣಗಳಿಗಾಗಿ ದ್ವೀಪವಾಗುತ್ತಿದ್ದಾನೆ.

ಎಷ್ಟರ ಮಟ್ಟಿಗೆ ಎಂದರೆ‌ ನಮ್ಮ ಸುತ್ತ ನಡೆವ ಅತ್ಯಾಚಾರ, ಹತ್ಯೆಯನ್ನೂ ತಡೆಯಲಾಗದಷ್ಟು, ಖಂಡಿಸಲಾಗದಷ್ಟು, ಅದನ್ನು ಜಾತಿ, ಧರ್ಮ, ರಾಜಕಾರಣದ ಕಾರಣಕ್ಕಾಗಿಯೇ ಬೆಂಬಲಿಸುವಷ್ಟು ಅಮಾನುಷ ಮನೋಸ್ಥಿತಿಯ ದ್ವೀಪದೊಳಗೆ ಜಾರುತ್ತಿದ್ದಾನೆ.

ತನ್ನ ಬಳಗದ ಮರಿಯೊಂದನ್ನು ಕಾಪಾಡಲು ಇಡೀ ಕೋತಿ ಸಮೂಹವೇ ತಾಯಿಯ ಮೇಲೆ ದಾಳಿ ಮಾಡಿದರೆ, ತಾಯಿಯೊಬ್ಬಳು ತನ್ನ ಮಗುವಿಗಾಗಿ ಏಕಾಂಗಿ ಹೋರಾಟ ಮಾಡುತ್ತಿದ್ದರೂ ಮನುಷ್ಯರು ಮಾತ್ರ ನಿಂತು‌ ನೋಡುತ್ತಿದ್ದರು.

ಕನಿಷ್ಠ ಮೂಕ ಪ್ರಾಣಿಗಳಿಗಿರುವ ಸಂವೇದನೆಯೂ, ಸಂಘಟನೆಯೂ ಮನುಷ್ಯರಲ್ಲಿ ಇಲ್ಲದೇ ಹೋಯಿತಲ್ಲ?
ಛೇ…!

ಒಂದು ಹೆಣ್ಣು ಮಗುವಿನ ಅತ್ಯಾಚಾರ- ಹತ್ಯೆಯನ್ನು ‘ಮನುಷ್ಯ’ ಧರ್ಮ- ರಾಜಕೀಯದ ಹೆಸರಲಿ ಸೀಳಿ ನೋಡುತ್ತಿರುವ ಈ ಹೊತ್ತಿನಲ್ಲಿ ಈ ಘಟನೆ‌ ನೆನಪಾಯಿತು. ಕೋತಿಗಳೆ ಮನುಷ್ಯರಿಗಿಂತ ಮಿಗಿಲು ಎನಿಸಿತು. ಮತ್ತೆ ಮತ್ತೆ ನನ್ನ ಕಾಡುತ್ತಿದೆ.

3 Responses

  1. Girijashastry says:

    Nice writing

  2. Anasuya M R says:

    ಕಣ್ತುಂಬಿ ಬಂತು

  3. Mmshaik says:

    ಮನುಷ್ಯರೆಂದು ಹೇಳಿಕೊಳ್ಳಲು ನಾಚಿಕೆ…

Leave a Reply

%d bloggers like this: