fbpx

ಚುನಾವಣಾನೀತಿಸಂಹಿತೆ ಎಂದರೆ… ಆಡಿದ್ದೇ ಆಟ!

ಸಭ್ಯರ ಆಟ ಕ್ರಿಕೆಟ್ಟಿನಲ್ಲಿ ಬಣ್ಣದ ಅಂಗಿ, ಬಣ್ಣದ ಬಾಲು, ಪುಟ್ಟ ಆವ್ರತ್ತಿಗಳು (ಸೀಮಿತ ಓವರ್, 20-20) ಬಂದಂತೆಲ್ಲ ಅದು ರಂಗುರಂಗಾಗತೊಡಗಿ ಎಲ್ಲರ ಕೈತಪ್ಪಿ ಹೋಗಿ ಕಾಸಿನವರ ಮನೆಯ ಆಳಾಗಿ, ಬುಕ್ಕಿಗಳ ತೋಳಾಗಿ ಕೂತದ್ದು ಈವತ್ತು ಚರಿತ್ರೆ. ಇಂತಹದೇ ಒಂದು ವರ್ಣರಂಜಿತ ಹಾದಿಯನ್ನು ದೇಶದ “ಚುನಾವಣೆ”ಕೂಡ ಅನುಸರಿಸತೊಡಗಿದೆ.

ಪ್ರಜಾಪ್ರಭುತ್ವದ “ಸತ್ವ” ಮತ್ತು “ಪಾವಿತ್ರ್ಯ” ಎಲ್ಲಾದರೂ ಅಚ್ಚೊತ್ತಿ ಉಳಿಯಬೇಕಿದ್ದರೆ ಅದು ಉಳಿಯಬೇಕಿರುವುದು ಚುನಾವಣೆಗಳಲ್ಲಿ. ಆದರೆ ಇಂದು, ಅತ್ತ ರಾಜಕೀಯ ಪಕ್ಷಗಳಾಗಲೀ, ಇತ್ತ ಅಧಿಕಾರಿಗಳಾಗಲೀ ಚುನಾವಣೆಯ ಗಾಂಭೀರ್ಯವನ್ನು ಉಳಿಸುವಲ್ಲಿ ಯಶಸ್ವಿಯಾಗಿಲ್ಲ. ಹಾಗಾಗಿ ಆ ಇತ್ತಂಡಗಳಿಗೂ ಇದು ಆಡಿದ್ದೇ ಆಟ ಆಗಿ ಪರಿಣಮಿಸಿದೆ. ಇವರ “ಕಳ್ಳ-ಪೋಲಿಸ್”ಆಟದಲ್ಲಿ ದೇಶದ ನಾಗರಿಕರು ಚಟ್ಟಾಗಿದ್ದಾರೆ!

ಚುನಾವಣೆಯಲ್ಲಿ ಕಪ್ಪುಹಣ ಚಲಾವಣೆ ನಿಲ್ಲಿಸುವುದೂ ಉದ್ದೇಶವಾಗಿದ್ದ ನೋಟು ರದ್ಧತಿ ಸಂಭವಿಸಿ ಈಗ ಐನೂರೂ ಚಿಲ್ಲರೆ ದಿನಗಳು ಕಳೆದಿವೆ. ಮಾರ್ಚ್ 27ರಂದು ಚುನಾವಣೆ ಘೋಷಣೆ ಆಗಿ, ಚುನಾವಣಾ ನೀತಿಸಂಹಿತೆ ಜಾರಿಗೆ ಬಂದ ಬಳಿಕ 18ದಿನಗಳಲ್ಲಿ ಏನೇನಾಗಿದೆ ಎಂದು ಮೊನ್ನೆ ಶನಿವಾರ ರಾಜ್ಯದ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರು ಬೆಂಗಳೂರಿನಲ್ಲಿ ವಿವರ ನೀಡಿದ್ದಾರೆ.

ಸರ್ಕಾರದ 1156ಫ್ಲೈಯಿಂಗ್ ಸ್ಕ್ವಾಡ್ ಗಳು ಮತ್ತು 1255 ಕಣ್ಗಾಪುದಳಗಳು ಒಟ್ಟಾಗಿ ರಾಜ್ಯದ ಒಟ್ಟು 224 ಕ್ಷೇತ್ರಗಳಲ್ಲಿ 22.34 ಕೋಟಿ ರೂಪಾಯಿ ನಗದು, 7.5 ಕೇಜಿ ಚಿನ್ನ (1.76ಕೋಟಿ ರೂಪಾಯಿ), 12 ಲಕ್ಷ ಮೌಲ್ಯದ ಬೆಳ್ಳಿ 33,829 ಲೀಟರ್ ಮದ್ಯ (1.67 ಕೋಟಿ ರೂ. ಮೌಲ್ಯ), 10 ಸೀರೆ, 160 ಲಾಪ್ ಟಾಪ್ ಸಹಿತ ಅಪಾರ ಪ್ರಮಾಣದ ಚುನಾವಣಾ ಅಕ್ರಮಗಳನ್ನು ಪತ್ತೆ ಹಚ್ಚಿದ್ದಾರೆ. 678 ಗಂಭೀರ ಮತ್ತು 2632 ಸಾಧಾರಣ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದವರು ಹೇಳಿದ್ದಾರೆ. ಇದಿನ್ನೂ ಟ್ರೇಲರ್ ಮಾತ್ರ. ಮೇ 12ಕ್ಕೆ (ಚುನಾವಣಾ ದಿನಕ್ಕೆ) ಇನ್ನೂ 27ದಿನಗಳು ಬಾಕಿ ಇವೆ.

ಈ ಸ್ಟಾಟಿಸ್ಟಿಕ್ಸು ಕೇವಲ ಸರ್ಕಾರೀ ಲೆಕ್ಕವೇ ಹೊರತು ವಾಸ್ತವ ತಳಸ್ಥಿತಿ ಅಲ್ಲ. ಈವತ್ತು ಕರಾವಳಿಯಲ್ಲಿ ಒಂದು ವಿಧಾನಸಭಾ ಕ್ಷೇತ್ರವನ್ನು ಗೆಲ್ಲಲು ಒಬ್ಬ ಅಭ್ಯರ್ಥಿ ಏನಿಲ್ಲವೆಂದರೂ ಐದರಿಂದ ಏಳೆಂಟು ಕೋಟಿ ರೂಪಾಯಿಗಳನ್ನು ವ್ಯಯಿಸುತ್ತಾನೆಂಬುದು ಬುದ್ಧಿ ಶುದ್ಧ ಇರುವ ಎಲ್ಲರಿಗೂ ತಿಳಿದಿರುವ ವಿಷಯ. ಬೆಂಗಳೂರಿನಂತಹ ನಗರಗಳಲ್ಲಿ ಇದು ಇನ್ನೂ ಹೆಚ್ಚಿರಬಹುದು. ಪರಿಸ್ಥಿತಿ ಹೀಗಿರುವಾಗ, ಕರ್ನಾಟಕಕ್ಕೆ ಕೇಂದ್ರ ಚುನಾವಣಾ ಆಯೋಗ ವಿಧಿಸಿರುವ “ಅಭ್ಯರ್ಥಿಯೊಬ್ಬನಿಗೆ 28ಲಕ್ಷ ರೂಪಾಯಿಗಳ ಚುನಾವಣಾ ವೆಚ್ಚದ ಮಿತಿ” ರಾಜಕೀಯ ಪಕ್ಷಗಳಿಗೆ ನೆಂಜಿಕೊಳ್ಳುವ ಉಪ್ಪಿನಕಾಯಿಗೂ ಸಾಕಾಗದು!

ಸರ್ಕಾರಿ ಲೆಕ್ಕದಲ್ಲಿ ಹೋದರೆ, ಈಗಾಗಲೇ ಅಧಿಕಾರಿಗಳು ವಶಪಡಿಸಿಕೊಂಡಿರುವ ನಗದು ಮತ್ತು ವಸ್ತುಗಳ ಒಟ್ಟು ಮೌಲ್ಯ ಸುಮಾರು 80 ವಿಧಾನಸಭಾ ಕ್ಷೇತ್ರಗಳ ಚುನಾವಣಾ ವೆಚ್ಚ!. ಈ ನಗೆನಾಟಕದ ಇನ್ನೂ ಕುತೂಹಲಕರ ಭಾಗವೆಂದರೆ, ಖರ್ಚಿಗೆ ಮಿತಿ ಇರುವುದು ಅಭ್ಯರ್ಥಿಗಳಿಗೇ ಹೊರತು ರಾಜಕೀಯ ಪಕ್ಷಗಳಿಗಲ್ಲ! ಅವರು ಮಾಡಿದ ಖರ್ಚಿನ ಲೆಕ್ಕವನ್ನು ಚುನಾವಣೆ ನಡೆದು 75ದಿನಗಳೊಳಗೆ ಸಲ್ಲಿಸಿದರೆ  ಸಾಕು!! (No. 76/EE/2012/ PPEMS, dated 21st January, 2013.)

ಬೆಳಗಾದರೆ ಕಣ್ಣೆದುರು ಕಾಣಸಿಗುವ ಈ ಪ್ರಹಸನಗಳ ಬಗ್ಗೆ ಚೆನ್ನಾಗಿ ಗೊತ್ತಿರುವ ಜನಸಾಮಾನ್ಯರಿಗೆ ಸರ್ಕಾರಿ ಅಧಿಕಾರಿಗಳ “ಅತ್ಯುತ್ಸಾಹ” ನಮ್ಮ ವೈಯಕ್ತಿಕ ಬದುಕಿನ ಮೇಲೆ “ಹಸ್ತಕ್ಷೇಪ”ದಂತೆ ಕಾಣಿಸತೊಡಗಿದೆ. ರಸ್ತೆಯಲ್ಲಿ ತಪಾಸಣಾ ತಡೆಗಳು, ಖಾಸಗಿ ಮದುವೆ-ಹುಟ್ಟುಹಬ್ಬದಂತಹ ಸಮಾರಂಭಗಳಿಗೂ ನಿಯಮ ಪಾಲಿಸುವ ಹೆಸರಲ್ಲಿ ಜಬರ್ದಸ್ತಿ, ಮದ್ಯ ಮಾರಾಟದ ವಿಷಯದಲ್ಲಿ ಕಿರುಕುಳ, ಮೂಗಿನ ನೇರಕ್ಕೆ ನಿಯಮಗಳ ಪಾಲನೆಯ ಹಲವಾರು ದೂರುಗಳು ದಿನಬೆಳಗಾದರೆ ಕೇಳಲಾರಂಭವಾಗಿವೆ.

ಒಂದು ರೀತಿಯಲ್ಲಿ ಭಯದ ವಾತಾವರಣ ಹುಟ್ಟಿಸಲಾಗುತ್ತಿದೆ. ರಾಜಕೀಯ ಪಕ್ಷಗಳು ವರ್ಷವೊಪ್ಪತ್ತಿನ ಹಿಂದೇ ತಮ್ಮ ಕಾಸಿನ ನಳ್ಳಿ ತೆರೆದು ಕುಳಿತಿದ್ದು, ಬಹುಪಾಲು ನೀರು ಹರಿದು ಸೇರಬೇಕಾದಲ್ಲಿ ಸೇರಿಯಾಗಿದೆ. ಈಗ ಚುನಾವಣೆ ಎದುರಿರುವಾಗ ನಳ್ಳಿಗೆ ಫಿಲ್ಟರ್ ಹಾಕಿ ಕುಳಿತಿರುವ ಅಧಿಕಾರಿಗಳು ಚುನಾವಣೆಯಲ್ಲಿ ಹಣದ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿರುವ ಕ್ರಮಗಳಿಂದ ತೊಂದರೆ ಆಗುತ್ತಿರುವುದು ಜನಸಾಮಾನ್ಯರಿಗೆ ಮಾತ್ರ. ಕಾಸು ಖರ್ಚುಮಾಡಿ ಚುನಾವಣೆ ಗೆಲ್ಲಬೇಕಿರುವ ಅಭ್ಯರ್ಥಿಗಳಿಗೆ ನೂರು ಕಳ್ಳದಾರಿಗಳು ಇನ್ನೂ ತೆರೆದಿವೆ.

ನಿಯಮ ಗಳನ್ನು “ಸ್ಪಿರಿಟ್” ಬಿಟ್ಟು “ಲೆಟರ್” ನಲ್ಲಿ ಮಾತ್ರ ಪಾಲಿಸಿದಾಗ ಎಂತಹ ಸನ್ನಿವೇಶ ಎದುರಾಗುತ್ತದೆಂಬುದಕ್ಕೆ, ನನ್ನ ಗಮನಕ್ಕೆ ಬಂದ ಟಿಪಿಕಲ್ ಉದಾಹರಣೆಯೊಂದು ಇಲ್ಲಿದೆ. ಅದೊಂದು ತೀರಾ ಒಳನಾಡಿನ ಗ್ರಾಮೀಣ ಪ್ರದೇಶ. ಅಲ್ಲೊಂದು ಬಾರ್ ಅಂಡ್ ರೆಸ್ಟೋರಂಟ್. ಅಲ್ಲಿಂದ 20ಕಿಮೀ ವ್ಯಾಪ್ತಿಯಲ್ಲಿ ಯಾವುದೇ ವೈನ್ ಶಾಪ್ ಇಲ್ಲ.  ಆ ಗ್ರಾಮೀಣ ಬಾಗದ ಜನ ಆ ಬಾರ್ ನಲ್ಲೇ ಕುಡಿಯುತ್ತಾರೆ. ಅಲ್ಲಿ ಕುಳಿತು ಮದ್ಯಪಾನ ಮಾಡಲು ಮನಸ್ಸಿಲ್ಲದವರು ಅಲ್ಲೇ ಬಾಟಲಿ ಖರೀದಿಸಿ ಮನೆಗೊಯ್ದು ಕುಡಿಯುತ್ತಾರೆ (ಇದು ಅಬ್ಕಾರಿ ಲೈಸನ್ಸಿನ ನಿಯಮದ ಉಲ್ಲಂಘನೆ). ಇಲಾಖೆಗೂ ಈ ಬಗ್ಗೆ ಮಾಹಿತಿ ಇದ್ದೇ ಇರುತ್ತದೆ ಮತ್ತು ಕಳೆದ ಹಲವು ವರ್ಷಗಳಿಂದ ಅದು ಹೀಗೇ ನಡೆದುಬಂದಿದೆ.

ಚುನಾವಣೆ ನೀತಿ ಸಂಹಿತೆ ಜಾರಿ ಆದ ಬಳಿಕ ಅಲ್ಲಿ ಕಣ್ಗಾಪು ದಳದ ಎದುರು ಬಾರ್ ನವರು ಗ್ರಾಹಕರೊಬ್ಬರಿಗೆ ಎಂದಿನಂತೆ ಒಂದು ಬಾಟಲು ಮದ್ಯವನ್ನು ಖರೀದಿಸಿ ಹೊರಗೊಯ್ಯಲು ಕೊಡುತ್ತಾರೆ. ಅವರ ವಿರುದ್ಧ ಗಂಭೀರ ಪ್ರಕರಣ ದಾಖಲಾಗುತ್ತದೆ.  ಈ ರೀತಿಯ “ಖಡಕ್” ನಿಯಮಪಾಲನೆಯಿಂದ ಯಾರಿಗಾದರೂ ತೊಂದರೆ ಆಗುವುದಿದ್ದರೆ, ಅದು ಚುನಾವಣಾ ವೆಚ್ಚಕ್ಕೆ ಯಾವುದೇ ರೀತಿಯಲ್ಲೂ ಸಂಬಂಧವಿರದ ಪಾಪದ ಜನಸಾಮಾನ್ಯರದು.

ರಾಜಕೀಯ ಪಕ್ಷಗಳೂ ಕೂಡ ಸಂಹಿತೆಯನ್ನು ಗಂಭೀರವಾಗಿ ತೆಗೆದುಕೊಳ್ಳುವ ಬದಲು ಎದುರಾಳಿಗಳನ್ನು ಹಣಿಯಲು ಅಸ್ತ್ರವಾಗಿ ಬಳಸುವುದೇ ಹೆಚ್ಚು.  ನೀತಿ ಸಂಹಿತೆ ಉಲ್ಲಂಘನೆ ಪತ್ತೆಗೆಂದೇ ಜನ ಬಿಟ್ಟು, ಇವರ ಬಾಲ ಅವರು ಅವರ ಬಾಲ ಇವರು ಕಚ್ಚಿಕೊಂಡು ಅಧಿಕಾರಿಗಳನ್ನು ವ್ಯಸ್ಥವಾಗಿರಿಸುತ್ತಾ, ತಮ್ಮ ಕಳ್ಳನಳ್ಳಿಗಳನ್ನು ಬೇಕು ಬೇಕಾದಲ್ಲಿ ತಿರುಗಿಸಿ ದುಡ್ಡಿನ ಧಾರೆಯನ್ನೇ ಹರಿಸುತ್ತಿದ್ದಾರೆ.

ಜನ ಬದಲಾಗದೆ ವ್ಯವಸ್ಥೆ ಬದಲಾಗದೆಂಬ ವಾಸ್ತವಕ್ಕೆ  ನೂರೊಂದನೇ ಸೇರ್ಪಡೆ ಇದು!

ಹೆಚ್ಚುವರಿ ಓದಿಗಾಗಿ:

ಜನಪ್ರಾತಿನಿಧ್ಯ ಕಾಯಿದೆ 1951: http://www.theindianlawyer.in/statutesnbareacts/acts/r33.html

ಚುನಾವಣಾ ಆಯೋಗದ ಮಾಡೆಲ್ ಕೋಡ್ ಆಫ್ ಕಂಡಕ್ಟ್. http://eci.nic.in/eci_main/MCC-ENGLISH_28022014.pdf

ಕರ್ನಾಟಕ ವಿಧಾನಸಭಾ ಚುನಾವಣೆಯ ನೊಟಿಫಿಕೇಷನ್: http://eci.nic.in/eci_main1/current/PN22_27032018.pdf

Leave a Reply