ದೈವವನ್ನೇ ಹೊತ್ತು ನಡೆಯುತ್ತ ಮೈಮೇಲೆ..

ಕಾವ್ಯಾ ಕಡಮೆ ನಾಗರಕಟ್ಟೆ

ಕೃಷ್ಣಮೂರ್ತಿ ಹನೂರರ ‘ಕಾಲು ದಾರಿಯ ಕಥನಗಳು’ ಕೃತಿಯಲ್ಲಿ ದಾಖಲಾಗಿರುವುದು ಸುಮಾರು ಅರವತ್ತು ವರ್ಷಗಳ ಅನುಭವ ಕಥನ.

ತಮ್ಮ ಮುಂದೆ ಅಗಾಧವಾಗಿ ಹರಡಿಕೊಂಡ ಬದುಕೇ ಅವರ ಅನುಭವ ಶಾಲೆ.

ಈ ಪುಸ್ತಕದ ವಿಶೇಷತೆಯೆಂದರೆ ಇಲ್ಲಿ ವೈಯಕ್ತಿಕ ಅನುಭವಗಳಿಗೆ ಅಷ್ಟೊಂದು ಪ್ರಾಧಾನ್ಯ ಇಲ್ಲ. ಅಂಥ ಅನುಭವಗಳು ಕೆಲವು ಕಡೆ ಕಾಣಿಸಿದರೂ ಅವು ಹಿನ್ನಲೆಯಲ್ಲೇ ಉಳಿಯುತ್ತವೆ. ಸಾಮಾನ್ಯವಾಗಿ ನಾವು ಓದುವ ಅನುಭವ ಕಥನಗಳಲ್ಲಿ ಲೇಖಕರು ಅಂತರಂಗದ ಸಂಗತಿಗಳ ಮೂಲಕ ತಾವು ಕಂಡ ಬೃಹತ್ ಲೋಕವನ್ನು ತೆರೆದಿಡುತ್ತಾರೆ.

ಅದಕ್ಕೆ ವ್ಯತಿರಿಕ್ತವಾಗಿ ಹನೂರರು ಈ ಬರಹದಲ್ಲಿ ತಾವು ಕಂಡ ಬೃಹತ್ ಲೋಕದ ಮೂಲಕವೇ ತಮ್ಮ ಅಂತರಂಗ ರೂಪಗೊಂಡ ಬಗೆಗೆ ವಿವರಿಸುತ್ತ ಹೋಗುತ್ತಾರೆ. ಇದು ಕಷ್ಟದ ಹಾದಿಯಾಗಿದ್ದರಿಂದಲೇ ಈ ಬರಹಕ್ಕೆ ವಿಶಿಷ್ಟ ಬಗೆಯ ಸ್ವಂತಿಕೆ ಪ್ರಾಪ್ತವಾಗಿದೆ. ಆ ಸ್ವಂತಿಕೆಯ ಮೂಲವಿರುವುದು ಈ ಅನುಭವಗಳಿಗಿರುವ ಅನಾಮಿಕತೆಯಲ್ಲಿ.

ಹನೂರರು ಬಾಲ್ಯ ಕಳೆದ ಚಾಮರಾಜನಗರದ ಹನೂರು ಗ್ರಾಮ ಮತ್ತು ಪ್ರಾಧ್ಯಾಪಕ ವೃತ್ತಿಯನ್ನು ಆರಂಭಿಸಿದ ಚಿತ್ರದುರ್ಗ ಜಿಲ್ಲೆಯ ಸುತ್ತಮುತ್ತಲ ಪ್ರದೇಶಗಳಲ್ಲಿ ಅವರು ಆಗಾಗ ಕೈಗೊಂಡ ಪ್ರವಾಸಗಳು ಈ ಅನುಭವ ಕಥನದ ಮೂಲದ್ರವ್ಯ. ಇಡೀ ಕಥನದಲ್ಲಿ ಕಾಲುದಾರಿಗೆ ಮಹತ್ವದ ಸ್ಥಾನವಿದೆ. ಏಕೆಂದರೆ ಇಲ್ಲಿ ಲೇಖಕರು ಹೇಳಲು ಹೊರಟಿರುವುದು ಕಾಲುದಾರಿಯಲ್ಲಿ ಹೋದರೆ ಮಾತ್ರ ಕಾಣಸಿಗುವ, ಕಾಣಸಿಗುವವರ ಕತೆಗಳನ್ನು.

ಕರ್ನಾಟಕದ ಕಾಲುದಾರಿಗಳಲ್ಲಿ ನಡೆದಾಗ ಮಾತ್ರ ನಮಗೆ ಮಲೆಮಾದೇಶ್ವರ, ಮಂಟೆಸ್ವಾಮಿ, ಬಿಳಿಗಿರಿರಂಗನ ಕಥಾನಕಗಳನ್ನು ಎದುರುಗೊಳ್ಳಲು ಸಾಧ್ಯ. ವೀರಗಲ್ಲುಗಳು, ಅಲ್ಲಲ್ಲಿ ಬೀಡುಬಿಟ್ಟ ಅಲೆಮಾರಿ ಸಮೂಹಗಳು, ಕೊಂಡದ ಕಾಟವ್ವ, ಕೋಲಾಟ, ಕಾಡಿನ ಡಕಾಯಿತರು, ಗ್ರಾಮೀಣ ಆಟಗಳು ನಮಗೆ ಇದಿರಾಗುವುದು ಇಂಥ ಕಾಲುದಾರಿಯ ಕವಲುಗಳಲ್ಲಿ ಸದ್ದೇ ಮಾಡದೇ ಹೊರಟು ನಿಂತಾಗಲೇ.

ಹನೂರರು ಹೇಳಲು ಹೊರಟಿರುವ ಗ್ರಾಮ ಭಾರತದ ಈ ಕತೆಯಲ್ಲಿ ಎಷ್ಟೋ ಬಾರಿ ಲೇಖಕರೂ ಓದುಗರಂತೆಯೇ ಮೌನ ಹೊತ್ತ ಪ್ರೇಕ್ಷಕರು. ತಾವು ಕಂಡ ದೃಶ್ಯಗಳನ್ನು, ಕೇಳಿದ ಕತೆ- ಗೀತೆಗಳನ್ನು ನಿರಾಯಾಸವಾಗಿ ಓದುಗರಿಗೆ ದಾಟಿಸುವಷ್ಟು ಅವರ ಭಾಷೆ ಪಾರದರ್ಶಕವಾಗಿದೆ. ಇಲ್ಲಿ ಲೇಖಕರು ತಾವು ಕಾಣಿಸಲು ಹೊರಟಿರುವ ಪರಿಸರಕ್ಕೆ ನುಗ್ಗಿ ಅಲ್ಲಿನ ಸಮತಲವನ್ನು ಕದಡುವುದಿಲ್ಲ.

ಎಷ್ಟೋ ಬಾರಿ ಈ ಕಥನ ಚಿತ್ರಣವು ಭೂತ- ವರ್ತಮಾನ, ಕಲ್ಪನೆ- ವಾಸ್ತವಗಳ ಸೀಮೆಯನ್ನೂ ಮೀರಿದಂತೆ ಭಾಸವಾಗುತ್ತದೆ. ಅದಕ್ಕೆ ಕಾರಣ ಇಲ್ಲಿ ದಾಖಲಾಗಿರುವ ಜನಪದ ಕತೆಗಳಿಗೂ ನೈಜ ಅನುಭವ ಕಥನದ ಧಾಟಿಯೇ ಪ್ರಾಪ್ತವಾಗಿರುವುದು. ಅದು ಲೇಖಕರ ಬರವಣಿಗೆಯ ಶಕ್ತಿಯೋ ಅಥವಾ ಅವರು ಭೇಟಿಮಾಡುವ ಜನಪದರ ಕಥನ ನಿರೂಪಣೆಯ ಶಕ್ತಿಯೋ ಹೇಳುವುದು ಕಷ್ಟವೇ ಸರಿ!

ಉದಾಹರಣೆಗೆ “ಬಳ್ಳಾರಿಯಿಂದ ಚಿತ್ರದುರ್ಗದವರೆಗೆ ಕುರಿ ಹಿಕ್ಕೆ ಹಾಕಿದಂಗೆ ಹಾಡುವೆ ನನ್ನೊಡೆಯನ ಹಾಡು” ಎಂದು ಹಾಡುತ್ತ ಊರೂರು ಸುತ್ತುವ ಚೆನ್ನಿ ಮತ್ತು ಊರ ಯಜಮಾನನನ್ನು ಕೊಂದು ಕಾಡು ಸೇರಿದ ಕಸಗಾನಹಳ್ಳಿ ನಾಗರ ಕತೆಗಳನ್ನು ಇಲ್ಲಿ ಉದ್ಧರಿಸಬಹುದು. ಈ ಎರಡೂ ಕತೆಗಳನ್ನು ಲೇಖಕರಿಗೆ ಹೇಳಿದವನು ಕೋನಸಾಗರ ಗ್ರಾಮದ ಹನುಮಯ್ಯ. ಇವು ಹನುಮಯ್ಯನ ಜೀವಮಾನದಲ್ಲೇ, ಅವನ ಕಣ್ಣಮುಂದೆಯೇ ನಡೆದಂಥವು. ಅಥವಾ ಹಾಗೆಂದು ಹೇಳುವುದೇ ಅವನ ಕಥನ ನಿರೂಪಣೆಯ ಶೈಲಿಯೂ ಇರಬಹುದು.

ಹನುಮಯ್ಯ ಹೇಳುವ ಮೊದಲ ಕತೆಯಲ್ಲಿ ಬರುವ ಚೆನ್ನಿ ಕೋನಸಾಗರದ ಪಾಪನಾಯಕನ ಮನೆಯ ಕೆಲಸದಾಳು ಮತ್ತು ಪ್ರೇಮಿ. ಪಾಪನಾಯಕನನ್ನು ಊರ ಇತರ ಮುಖಂಡರು ದ್ವೇಷದಿಂದ ಕೊಲೆಗೈಯ್ಯುತ್ತಾರೆ. ಅವನ ಮೋಸದ ಸಾವಿನ ಬಗ್ಗೆ ತನ್ನದೇ ಆದ ಕನ್ನಡ- ತೆಲುಗು ಮಿಶ್ರಿತ ಭಾಷೆಯಲ್ಲಿ ಹಾಡು ಕಟ್ಟಿ ಹಾಡುತ್ತ ಊರೂರು ಸುತ್ತುವ ಚೆನ್ನಿಗೂ ಜೀವ ಬೆದರಿಕೆ ಬರುತ್ತದೆ.

ಆದರೆ ಆಕೆ ತನ್ನ ಪ್ರಿಯತಮನ ಕುರಿತು ಹಾಡುವುದನ್ನು ನಿಲ್ಲಿಸುವುದಿಲ್ಲ. “ಎಂತ ಬುದ್ಧಿವಂತುಡು ನಾ ಪಾಪನ್ನ ಗೌಡುಡು/ ಮೀರಿವಾನಿಕಿ ವೈರಿಗಾಡನ್ನವಾಡು..” ಎಂದು ಆದ್ರ್ರವಾಗಿ ಹಾಡುತ್ತ ಸಾಗುತ್ತಾಳೆ, ಹಾಗೆಯೇ ಒಂದು ದಿನ ಇಲ್ಲವಾಗುತ್ತಾಳೆ. ಈಗ ಅವಳು ಕಟ್ಟಿದ ಈ ‘ರಣಸಾಗರಗೌಡ’ ಗೀತೆ ನೆನಪಿನಲ್ಲಿರುವುದು ಹನುಮಯ್ಯನಿಗೆ ಮಾತ್ರ.

ಇನ್ನೊಂದು ಕತೆಯಲ್ಲಿ ಕಸಗಾನಹಳ್ಳಿ ನಾಗ ಎಂಬ ಜೀತದಾಳು ಯಾವುದೋ ಜಗಳದಲ್ಲಿ ತನ್ನ ಯಜಮಾನನನ್ನು ಕೊಲೆ ಮಾಡಿಬಿಟ್ಟಿರುತ್ತಾನೆ. ಭಯದಿಂದ ಊರಿಗೆ ಹಿಂತಿರುಗಲಾರದೇ ಪ್ರತಿರಾತ್ರಿ ಊರ ಜನರಲ್ಲೊಬ್ಬರ ಮನೆಬಾಗಿಲು ಬಡಿದು ಊಟ ಮಾಡಿ ತೆರಳುತ್ತಾನೆ. ಒಮ್ಮೆ ಒಂದು ಮನೆಯವರು ಕುಡಿಯುತ್ತ ಕುಳಿತಂತೆ ನಾಟಕವಾಡಿ ಇವನಿಗೂ ಕುಡಿಸಿ ಕೈಕಾಲು ಕಟ್ಟಿ ಊರಾಚೆ ಒಯ್ದು ಕಡಿದುಹಾಕುತ್ತಾರೆ. ಹೀಗೆ ಹನುಮಯ್ಯ ಹೇಳಿದ ಎರಡೂ ಕತೆಗಳೂ ದುರಂತ ಅಂತ್ಯ ಕಾಣುತ್ತವೆ.

ಈ ಎರಡು ಕತೆಗಳೇ ಅಲ್ಲದೇ ಈ ಪುಸ್ತಕದಲ್ಲಿ ಬರುವ ಇತರ ಕತೆಗಳ ಬಗೆಗೆ ಗಮನಿಸಬೇಕಾದ ಮುಖ್ಯ ಅಂಶವೊಂದಿದೆ. ಅದೆಂದರೆ ಈ ಕತೆಗಳು ಎಂದೋ ನಡೆದ ನೈಜ ಘಟನೆಯನ್ನು ಆಧರಿಸಿದ್ದರೂ ಅವು ಕಥನಕಾರರ ಮನದಲ್ಲಿಳಿದು ಅವರ ಮಾತಿನಲ್ಲಿ ಪುನಃ ಅರಳುವಾಗ ಸೃಜನಶೀಲ ಪ್ರಕ್ರಿಯೆಗೆ ಒಳಗೊಂಡೇ ರೂಪಗೊಳ್ಳುವುದು. ಇದು ಬರವಣಿಗೆಯನ್ನು ತಮ್ಮ ಕಥನಕ್ರಿಯೆಯ ಮಾಧ್ಯಮವಾಗಿಸಿಕೊಂಡಿರುವ ಬರಹಗಾರರ ಕಾಯಕದಷ್ಟೇ ಶ್ರೇಷ್ಠವಾದುದು. ಜೊತೆಗೆ ಮೌಖಿಕ ಕಥನ ಪರಂಪರೆಯಲ್ಲಿ ಕಥೆಗಾರರಿಗಿರುವ ಅನಾಮಿಕತೆ ಅವರು ಕಟ್ಟುವ ಕಥೆಗಳಿಗೆ ಒಂದು ಬಗೆಯ ಸ್ವಚ್ಛಂದವನ್ನೂ ಕೊಡುವುದು ಸುಳ್ಳಲ್ಲ.

ಹನೂರರೇ ಹೇಳುವ ಹಾಗೆ ಈ ಕಥೆಗಾರರೆಲ್ಲ ಗ್ರಾಮಶಕ್ತಿಯ ರೂಪಕಗಳು, ಬಯಲು ವಿಶ್ವವಿದ್ಯಾಲಯದ ಶಿಕ್ಷಕರು. ತಮ್ಮ ಸ್ಥಿತಪ್ರಜ್ಞತೆಗೆ, ಸರಳತೆಗೆ ಇನ್ನೊಂದು ಹೆಸರಿನಂತಿದ್ದ ಬೆಳೆಗೆರೆ ಕೃಷ್ಣಶಾಸ್ತ್ರಿಗಳು, ಮುಖ್ಯಮಂತ್ರಿಗಳನ್ನೇ “ಇವರು ಯಾರಪ್ಪ?” ಎಂದು ಸಹಜವಾಗಿ ಕೇಳಿದ ಸಿರಿಯಜ್ಜಿ, “ನೀನು ಹೇಳೋ ಕತೆಗಳೇ ನಿನಗಿಷ್ಟ ಅನ್ನು..” ಅಂತ ಕೇಳಿದ್ದಕ್ಕೆ “ಹೌದು, ಲದ್ದಿನಾತ ಲದ್ದಿಗೆ, ಯಾಲಕ್ಕಿನಾತ ಯಾಲಕ್ಕಿದೇ..” ಎಂದು ತನ್ನದೇ ರೀತಿಯಲ್ಲಿ ತನ್ನ ಕಥನ ಲೋಕದ ಘನತೆಯನ್ನು ಎತ್ತಿಹಿಡಿದ ಕ್ಯಾತಗಾನಹಳ್ಳಿ ಗಿರಿಯಯ್ಯ, “ಅವರ ಬೋಮಾನ ನಂಗ್ಯಾಕೆ ಬಿಡ್ರಿ ಸ್ವಾಮಿ” ಎಂದು ಅಕಾಡೆಮಿಯ ಪ್ರಶಸ್ತಿಯ ಅಸ್ಥಿತ್ವವನ್ನೇ ನಯವಾಗಿ ತಿರಸ್ಕರಿಸುವ ನರಸಯ್ಯ, ದಾರಿಯಲ್ಲಿರುವ ಗಿಡಮರ ಎಲ್ಲವನ್ನೂ ದೇವರ ಅಂಶ ಎಂದೇ ಮಾತನಾಡುವ ಮುಕುಂದೂರು ಸ್ವಾಮಿಗಳು, “ಕಾಲು ಒದ್ದೆಯಾಗದೇ ಸಮುದ್ರ ದಾಟಬಹುದು, ಕಣ್ಣು ಒದ್ದೆಯಾಗದೇ ಸಂಸಾರ ದಾಟುವುದುಂಟೇ?” ಎಂಬ ಅರ್ಥಪೂರ್ಣ ಪ್ರಶ್ನೆ ಕೇಳುವ ದಾನಮ್ಮ, “ಯಾವ ಮಿನಿಸ್ಟ್ರೇ, ಮ್ಯಾಜಿಸ್ಟ್ರೇಟ್ರೇ ಬಂದ್ರು ನಾನು ಇದೇ ದಿರಿಸಿನಲ್ಲಿ ಅವರ ಮುಂದೆ ನಿಂತು ಮಾತಾಡುವನು, ಹೆದರ್ಕಳಂಗಿಲ್ಲ” ಎಂದು ಗ್ರಾಮೀಣ ಆತ್ಮಸ್ಥೈರ್ಯದ ಪ್ರಜ್ಞೆ ಮೆರೆಯುವ ಸಣ್ಣಬಸಪ್ಪನವರು, ಹೆಂಡತಿಯ ಬದುಕಿನ ಆಯ್ಕೆಗಳ ಸ್ವಾಯತ್ತತೆಯನ್ನು ಅವಳಿಗೇ ಬಿಟ್ಟುಕೊಟ್ಟ ಕೋತಿ ಬೊಮ್ಮಣ್ಣ- ಇವರೆಲ್ಲ ಈಗಾಗಲೇ ಚಾಲ್ತಿಯಲ್ಲಿರುವ ಗ್ರಾಮ ಭಾರತದ ಕುರಿತಾಗಿನ ಸಿದ್ಧಮಾದರಿಗಳನ್ನು ತಮ್ಮ ವ್ಯಕ್ತಿತ್ವದಿಂದಲೇ ಮುರಿದು ಕಟ್ಟುವ ಮೇಧಾವಿಗಳು.

ಚಿತ್ರದುರ್ಗ ಜಿಲ್ಲೆಯ ವಿವಿಧ ಭಾಗಗಳಲ್ಲಿ ಓಡಾಡುವಾಗ ಲೇಖಕರಿಗೆ ಸ್ತ್ರೀಸಮೂಹವು ಹಾಡುವ ಸ್ತುತಿಗೀತೆಗಳ ಕ್ರಮವು ಪುರುಷರೇ ಕಟ್ಟಿಕೊಂಡ ದಂತಕಥೆ, ಕಥನಕ್ರಮಕ್ಕಿಂತ ಹೇಗೆ ಭಿನ್ನ ಎನ್ನುವುದು ಅನುಭವಕ್ಕೆ ಬರುತ್ತದೆ. ಈ ವಿಶ್ಲೇಷಣೆ ಬಹು ಕುತೂಹಲಕರವಾಗಿದೆ. ಪುರುಷಪಾರಮ್ಯವುಳ್ಳ ಕಥಾಹಂದರ ಮತ್ತು ನಿರೂಪಣೆಯೇ ಎಲ್ಲ ಕಲಾಪ್ರಕಾರಗಳಲ್ಲೂ ರಾರಾಜಿಸುತ್ತಿರುವಾಗ ಸ್ತ್ರೀಯರ ಮನೋಲೋಕದಲ್ಲಿ ಅವೇ ಕತೆಗಳು ಬೇರೆ ಬಗೆಯಲ್ಲಿ ಅರಳುವುದನ್ನು ಗಮನಿಸಲು ನಿಸ್ಪ್ರಹ ಕಣ್ಣು ಮತ್ತು ಮನಸ್ಸು ಬೇಕು. ಆಗಲೇ ಸ್ತ್ರೀಜಗತ್ತಿನಲ್ಲಿ ಹುಟ್ಟಿದ ಕಥೆಗಳು ಪರ್ಯಾಯ ದಾರಿಯಲ್ಲಿ ಚಲಿಸದೇ ಸಮಾನಾಂತರವಾಗಿ ಸಾಗಲು ಸಾಧ್ಯ. ಸಿರಿಯಜ್ಜಿ, ಹನುಮಜ್ಜಿ, ದಾನಮ್ಮನಂಥವರು ಈ ದಾರಿಯ ಮಾನ ಹೆಚ್ಚಿಸಿದ ಗಟ್ಟಿಗಿತ್ತಿಯರು.

ಪಟ್ಟಣದಲ್ಲಿ ವಿದ್ಯೆ ಕಲಿತ ಜನ ಅಭಿಮಾನದಿಂದ ಹೇಳುವ ತಮ್ಮೂರಿನ ಇತಿಹಾಸಕ್ಕಿಂತ ಗ್ರಾಮೀಣ ಜನರು ತಮ್ಮ ತಾತ ಮುತ್ತಾತರ ಕಾಲದಿಂದ ಕೇಳಿದ ಸತ್ಯಕತೆಗಳನ್ನು ಹೇಳುವುದು ಏಕೆ ಮುಖ್ಯವಾಗುತ್ತದೆ ಎಂಬ ಬಗ್ಗೆ ಒಂದು ಕಡೆ ವಿವರಣೆ ಬರುತ್ತದೆ. ಪ್ರಾದೇಶಿಕ ಅಭಿಮಾನದಿಂದ ಇತಿಹಾಸವನ್ನು ನೋಡಿದಾಗ ಐತಿಹಾಸಿಕ ಸತ್ಯಗಳು ಹೇಗೆ ಅರಿವೇ ಆಗದಂತೆ ತಿರುಚಲ್ಪಡುತ್ತವೆ ಎಂಬ ಒಳನೋಟ ಬಹು ವಿಶಿಷ್ಟವಾದುದು. ಮದಕರಿನಾಯಕರು ಸಾಕುತ್ತಿದ್ದ ಆನೆಗಳಿಗೆ ಮಾವುತರು ಸಕ್ಕರೆ ತುಪ್ಪ ಬೆರೆಸಿದ ಎರಡು ಮಣ ತೂಕದ ಅನ್ನದ ಉಂಡೆಗಳನ್ನು ದಿನಕ್ಕೆ ಎರಡು ಬಾರಿ ತಿನ್ನಿಸುತ್ತಿದ್ದರು ಎಂಬುದು ಅಭಿಮಾನದಿಂದ ಹೇಳುವ ಮಾತಾಯಿತು. ಆದರೆ ಆ ಮಾವುತ ದಿನಕ್ಕೆ ಒಂದು ಬಾರಿಯಾದರೂ ಅನ್ನ ಉಣ್ಣುತ್ತಿದ್ದನೋ ಇಲ್ಲವೋ ಎಂಬ ಸತ್ಯವನ್ನು ಅವನ ಮೊಮ್ಮಕ್ಕಳು- ಮರಿಮಕ್ಕಳೇ ಹೇಳಬೇಕು!

ಉಳಿದಂತೆ ಲೇಖಕರ ಚಿಕ್ಕಂದಿನ ವನವಾಸ ಪ್ರವಾಸದ ಅನುಭವಗಳು, ಕಾಲೇಜಿನಲ್ಲಿದ್ದಾಗ ಕತೆಯೊಂದಕ್ಕೆ ಪತ್ರಿಕೆಯಿಂದ ಬಂದ ಮೊದಲ ಸಂಭಾವನೆಯ ರೋಮಾಂಚನ, ಮೊದಲ ಸಂದರ್ಶನದ ಪುಳಕಗಳು, ಎ. ಕೆ ರಾಮಾನುಜನ್ ಅವರು ಶಿಕಾಗೋದಿಂದ ಭಾರತಕ್ಕೆ ಬಂದಾಗ ನಡೆಸಿದ ಒಡನಾಟ, ಮೌಲ್ಯಯುತ ಸಂಭಾಷಣೆ- ಮುಂತಾದ ಘಟನೆಗಳು ಓದಿನ ಸ್ವಾರಸ್ಯ ಹೆಚ್ಚಿಸುತ್ತವೆ.

ಈ ಕೃತಿಯ ಮೊದಲ ಭಾಗದಲ್ಲಿ ದೊಂಬಿದಾಸನೊಬ್ಬನ ಕತೆ ಬರುತ್ತದೆ. ಅವನು ಮತಿವಿಕಲನಾದ ಮೊಮ್ಮಗನನ್ನು ಕಟ್ಟಿಕೊಂಡು ಊರೂರು ಹಾಡುತ್ತ ತಿರುಗುವವನು. ಅವನ ಹಾಡಿಗೆ ದೈವಿಕವಾದುದೊಂದು ಕಳೆಯಿದೆ. ಬೆಳಗಿನ ಹೊತ್ತು ಊರ ಮನೆಗಳ ಮುಂದೆ ಹಾಡಿದ ಪದಗಳ ಉಳಿದ ಚರಣಗಳನ್ನು ರಾತ್ರಿ ಗುಡಿಯಲ್ಲಿ ಕುಳಿತು ಅವನಿಗವನೇ ಹಾಡಿಕೊಳ್ಳುತ್ತಾನೆ. ಕತ್ತಲು ತುಂಬಿ ನಕ್ಷತ್ರ ಮಾತ್ರವಾದ ಅಕಾಶದೆಡೆಗೆ ದನಿಯೆತ್ತಿ ಹಾಡುತ್ತಾನೆ.

ಏಕತಾರಿಯ ದನಿ ಅವನ ಅಂತರಂಗವನ್ನೇ ಮೊದಲು ಪ್ರವೇಶಿಸಿ ತದನಂತರ ನಾದವಾಗಿ ಹೊರಬಂದು ಹಾದಿಬೀದಿಯವರೆಗೆ ಕೇಳಿಸುತ್ತದೆ. ರಾತ್ರಿ ಒಂದಂಕಣದ ಗುಡಿಯ ಹಣತೆ ಬೆಳಕಿನಲ್ಲಿ ದೊಂಬಿದಾಸನ ದೇಹ ಚಹರೆಯು ಅರೆಬರೆಯಾಗಿ ಕಾಣಿಸಿದರೂ, ಅವನ ದನಿ ಮಾತ್ರ ಯಾರಿಗಾದರೂ ನಿಚ್ಚಳವಾಗಿ ಕೇಳಿಸುವಷ್ಟು ಸ್ಪಷ್ಟವಾಗಿದೆ, ಆದ್ರ್ರವಾಗಿದೆ, ಲೌಕಿಕ ಗಡಿಗಳನ್ನು ಮೀರಿನಿಂತಿದೆ.

ಹನೂರರು ದೊಂಬಿದಾಸನಿಗೂ ಮತ್ತವನ ಪದಗಳಿಗೂ ನೀಡಿರುವ ಈ ವಿವರಣೆಯನ್ನು ಸ್ವತಃ ಅವರಿಗೂ, ಅವರ ಈ ಕೃತಿಗೂ ಅನ್ವಯಿಸಿದರೆ ನಾನು ಹೇಳಬೇಕೆಂದು ಹೊರಟಿರುವ ಮಾತು ಸಂಪೂರ್ಣವಾಗಬಹುದೇನೋ!

1 Response

  1. kadameblog says:

    Nice written Chinna.

Leave a Reply

%d bloggers like this: