ಎಲ್ಲಾ ಪಯಣಗಳು ನಶ್ವರ

ವಿ ಚಲಪತಿ 

ಅಮ್ಮನ ಅಂಗೈಯಲ್ಲಿ ಅರಳಿದ
ಆ ಹಿಡಿ ತುತ್ತಿನ, ಗಮ್ಮತ್ತಿನ
ರುಚಿಯಿಲ್ಲದ ಎಲ್ಲಾ ಪಯಣಗಳು ನಶ್ವರ

ಅಪ್ಪನ ಚಪ್ಪಲಿಯ ಸದ್ದಿಗೆ
ಬೆದರಿನಿಂತ ಧೂಳಿನ ಬಯಕೆಯ
ಭಯವಿಲ್ಲದ ಎಲ್ಲಾ ಪಯಣಗಳು ನಶ್ವರ

ಬುದ್ಧನ ರೆಪ್ಪೆಗಳ ಸಮ್ಮೀಲನದ
ಧ್ಯಾನದಲ್ಲಿ ಲೀನನಾಗಬೇಕೆಂಬ
ಆಸೆಯಿಲ್ಲದ ಎಲ್ಲಾ ಪಯಣಗಳು ನಶ್ವರ

ಗಾಂಧಿ, ಅಂಬೇಡ್ಕರ್ ಉಸಿರಾಡಿದ
ನೆಲದಲ್ಲಿ ಕಲ್ಮಶವಿಲ್ಲದೇ ಬದುಕುವ
ಉಸಿರಿಲ್ಲದ ಎಲ್ಲಾ ಪಯಣಗಳು ನಶ್ವರ

ಸರ್ವಧರ್ಮ ಭಾವನೆಗಳ
ತೂಗುಯ್ಯಾಲೆಯಲಿ ತಂಪನಾಸ್ವಾದಿಸುವ
ಕ್ಷಣಗಳಿಲ್ಲದ ಎಲ್ಲಾ ಪಯಣಗಳು ನಶ್ವರ

ಮಂಡಿಯೂರಿದ ಕಣ್ಣುಗಳಿಗೆ
ನಾಲ್ಕು ಹೆಜ್ಜೆಗಳ ಭರವಸೆಯಾಗಬೇಕೆಂಬ
ಕರುಣೆಯಿಲ್ಲದ ಎಲ್ಲಾ ಪಯಣಗಳು ನಶ್ವರ

ಅಂಗಲಾಚುವ ಕೈಗಳಿಂದ ಹಿಡಿದು
ಮೀಸೆ ತೀರುವ ಬೆರಳುಗಳವವರೆಗೂ
ಸಾರ್ಥಕತೆಯಿಲ್ಲದ ಎಲ್ಲಾ ಪಯಣಗಳು ನಶ್ವರ

1 Response

 1. Prasad m n says:

  ಅಮ್ಮನ ಅಂಗೈಯಲ್ಲಿ ಅರಳಿದ
  ಆ ಹಿಡಿ ತುತ್ತಿನ, ಗಮ್ಮತ್ತಿನ
  ರುಚಿಯಿಲ್ಲದ ಎಲ್ಲಾ ಪಯಣಗಳು ನಶ್ವರ
  …..ಪದಗಳಲ್ಲಿ…. ಹಿಡಿದಿಡುವ… ಭಾವನೆ ಗಳು….
  ಎಷ್ಟು….. ಸಹಜ ಸುಂದರ

Leave a Reply

%d bloggers like this: