ಆ ನಂತರ ಯಾಕೋ ಮಾತಾಡಬೇಕು ಅನ್ನಿಸುವ ಹುಮ್ಮಸ್ಸು ಸತ್ತು ಹೋಯಿತು..

ಗೆರೆಗಳು

ಬಿ ವಿ ಭಾರತಿ 

ಫೋನ್ ಕಟ್ ಮಾಡಿದ ಸುರಭಿ ಒಂದೈದು ನಿಮಿಷ ಮತ್ತೆ ಕಾಯುತ್ತ ಕುಳಿತಳು ಚಂದ್ರಿಕಾಗೆ ತನ್ನ ತಪ್ಪಿನ ಅರಿವಾಗಿ ಕಾಲ್ ಬರಬಹುದೋ ಏನೋ ಎಂದು
ಅದೇನೂ ಬರದೇ ಹೋದಾಗ ಸಿಟ್ಟು ಮತ್ತಿಷ್ಟು ಏರಿತು

‘ಥು ಬೆಳಿಗ್ಗೆ ಬೆಳಿಗ್ಗೆ ತನಗೆ ಯಾಕೆ ಬೇಕಿತ್ತು ಅವಳಿಗೆ ಕರೆ ಮಾಡುವ ಉಸಾಬರಿ’ ಅಂತ ನೂರಾ ಒಂದನೆಯ ಬಾರಿಗೆ ತನ್ನನ್ನೇ ಹಳಿದುಕೊಂಡಳು.
ಮೊದಲಲ್ಲಿದ್ದ ಸಿಟ್ಟು ಬರಬರುತ್ತಾ ಆತ್ಮಮರುಕಕ್ಕೆ ತಿರುಗಿ, ನಂತರ ಅಸಹಾಯಕತೆಗೆ ತಿರುಗಿ ಕೊನೆಗೆ ದುಃಖದ ಅಂಚಿಗೆ ಬಂದು ನಿಂತಿತು
ಬುದ್ದಿ ತಪ್ಪನ್ನು ಚಂದ್ರಿಕಾಳ ಮೇಲೆ ಎತ್ತಿ ಹಾಕುತ್ತಿದ್ದರೆ, ಮನಸ್ಸು ತನ್ನೊಳಗೆ ನೋಡಿಕೊಂಡು ಆತ್ಮಾವಲೋಕನ ಮಾಡಿಕೊಳ್ಳಲು ಶುರು ಮಾಡಿತು…

ಅಲ್ಲಾ ಇವಳು ಹೇಳಿದ್ದಾದರೂ ಏನು?
ಕೆಲಸಕ್ಕೆ ಹೋಗುವ ಇವಳು ಮಾತ್ರವೇ ಬಿಜ಼ಿ … ನಾನು ಮನೆಯಲ್ಲಿರುವವಳು ಕೆಲಸವಿಲ್ಲದವಳು ಅಂತಲಾ?
ಅಷ್ಟು ವರ್ಷಗಳಿಂದ ಗೆಳತಿಯಾಗಿರುವವಳು ಒಮ್ಮೆಯಾದರೂ ನನಗೆ ಎಂದಾದರೂ ತಾನಾಗಿಯೇ ತೋಚಿಕೊಂಡು ಫೋನ್ ಮಾಡಿದ್ದುಂಟಾ?
ನಾನಾಗಿ ಮಾಡಿದಾಗಲೂ ಏನೋ ಖಾಲಿ ಕೂತಿರುವುದರಿಂದ ಕಾಲ್ ಮಾಡುತ್ತೀಯ, ಆದರೆ ನಾನು ಕೆಲಸದಲ್ಲಿ ಮುಳುಗಿರುವುದರಿಂದ ನನಗಂತೂ ಸಾಧ್ಯವಾಗುವುದಿಲ್ಲ ಅನ್ನುವ ಉದ್ದಟತನವನ್ನು ಸೂಚ್ಯವಾಗಿ ಹೇಳಿದಳಲ್ಲ
ಸೂಚ್ಯವೆಂಥದ್ದು! ನೇರವಾಗೇ ಹೇಳಿದಳಲ್ಲ!
ಫೋನಿನಲ್ಲಿ ಮಾತನಾಡಲೇ ಗಡಿಬಿಡಿ ಮಾಡುತ್ತಾಳೆ
ಅಂಥದ್ದರಲ್ಲಿ ಈಗ ಮಾತು ಮುಗಿಸಬೇಕು ಅನ್ನುವ ಒಂದೇ ಕಾರಣಕ್ಕೆ ‘ಮನೆಗೆ ಬಾ. ಆರಾಮವಾಗಿ ಕೂತು ಮಾತಾಡೋಣ’ ಅನ್ನುವ ನೆಪವೇತಕ್ಕೆ ಕೊಡಬೇಕು.
ಹೋದಬಾರಿ ಹೀಗೇ ಹೇಳಿದಳಲ್ಲ ಎಂದು ಇವಳ ಮನೆಗೆ ಹೊರಟು ಅರ್ಧ ದಾರಿಯಲ್ಲಿರುವಾಗ ‘ಏನು ಗೊತ್ತಾ ಇವತ್ತು ಆಪರೇಷನ್ ಆದ ಒಬ್ಬ ಪೇಷೆಂಟ್ ಹೋಗಿಬಿಟ್ಟರು. ಮನಸ್ಸು ಕೆಟ್ಟುಹೋಗಿದೆ ಅಂತ ಸಿನೆಮಾ ನೋಡಲು ಥಿಯೇಟರ್‌ಗೆ ಬಂದುಬಿಟ್ಟೆ ಫ್ರೆಂಡ್ಸ್ ಜೊತೆ…’ ಅಂತ ಕರೆ ಇವಳದ್ದು
ಮೈ ಉರಿದುಹೋಗಿ ಬಾಯಿಗೆ ಬಂದಷ್ಟು ಬಯ್ದು ಆಟೋ ವಾಪಸ್ ತಿರುಗಿಸಲು ಹೇಳಿ ಮತ್ತೆಂದೂ ಇವಳನ್ನು ಭೇಟಿಯಾಗಬಾರದು ಅಂತ ಶಪಥ ಮಾಡಿದ್ದಳು.

ಇವತ್ತು ಕರೆ ಮಾಡಿದಾಗಲೂ ಅಷ್ಟೇ … ಅಷ್ಟು ಬಿಜ಼ಿ ಇದ್ದರೆ ಇರಲಿ. ಅದು ಬಿಟ್ಟು ಸುಮ್ಮನೆ ಬಾಯಿ ಮಾತಿಗೆ ‘ನಿನ್ನನ್ನು ನೋಡಬೇಕು ಅನ್ನಿಸ್ತಿದೆ ಬಾರೇ ಮನೆಗೆ’ ಅಂತ ಯಾಕೆ ಹೇಳಬೇಕು
ನಾನು ಸಿಟ್ಟು ನೆತ್ತಿಗೇರಿ ‘ಸಾಕು ಸುಮ್ಮನಿರು. ಹೋದಬಾರಿ ಹೇಳಿದ್ದಕ್ಕೆ ನಾನು ಹೊರಟಾಗ…’ ಅಂತ ಶುರು ಮಾಡುವಾಗಲೇ ಅವಳು ‘ಅದೇ ಹಳೆಯ ಕತೆಯನ್ನೇ ಎತ್ತಿ ಆಡುತ್ತೀಯಾ. ಹೌದು ನಮ್ಮ ಡಾಕ್ಟರ್ ಕೆಲಸವೆಂದರೆ ಹಾಗೇ … ಅಸಲಿಗೆ ಕೆಲಸ ಮಾಡುವವರ ಬದುಕೇ ಹಾಗೆ. ನಿಮ್ಮದರಷ್ಟು ಗೆರೆ ಕೊರೆದಂತಿರುವುದಿಲ್ಲ. ತುಂಬ ಅನಿಶ್ಚಿತತೆ. ನಿನಗೆ ಅದೆಲ್ಲ ಹೇಗೆ ಅರ್ಥವಾಗಬೇಕು’ ಅಂತ ಸ್ವಲ್ಪವೂ ಪಶ್ಚಾತ್ತಾಪವೂ ಇಲ್ಲದ ದನಿಯಲ್ಲಿ ಮಾತನಾಡಲು ಶುರು ಮಾಡಿದಾಗ ಸಿಟ್ಟು ತಾಳಲಾಗದೇ ಫೋನ್ ಅರ್ಧದಲ್ಲೇ ಕಟ್ ಮಾಡಿದ್ದಳು ಸುರಭಿ.

ಮೊದಲು ಸ್ವಲ್ಪ ಹೊತ್ತು ಮನಸ್ಸು
ನನಗೆ ಮನೆ ಕೆಲಸವಿರುವುದಿಲ್ಲವಾ
ಅನೂಷಾಳನ್ನು ಸ್ಕೂಲಿಂದ ಕರೆ ತರಬೇಕಲ್ಲವಾ
ಬಟ್ಟೆ ಮಡಚಬೇಕು
ಪಾತ್ರೆ ಎತ್ತಿಡಬೇಕು
ಹೀಗೆ ನಾನಾ ಕಾರಣಗಳನ್ನು ಕೊಟ್ಟುಕೊಂಡರೂ ಒಂದೆರಡು ಘಂಟೆ ಕಳೆಯುವುದರಲ್ಲೇ ಅವಕ್ಕೆಲ್ಲ ಅರ್ಧ, ಮುಕ್ಕಾಲು ಘಂಟೆಗಿಂತ ಹೆಚ್ಚು ಸಮಯ ತಗಲುವುದಿಲ್ಲವೆಂತಲೂ, ತಾನು ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ಸಾಕಷ್ಟು ಕಾಲಹರಣ ಮಾಡುತ್ತಿದ್ದೇನೆ ಅನ್ನುವ ಸತ್ಯ ಮುಖಕ್ಕೆ ರಾಚಿ ಸ್ವಲ್ಪ ಉದ್ವಿಗ್ನಳಾದಳು ಸುರಭಿ.

ಆಗ ಶುರುವಾಯಿತು ಯೋಚನೆ…
ಕಂಪ್ಯೂಟರ್ ಕ್ಲಾಸ್?
ಅದು ಯಾಕೆ ಮನೆಯಲ್ಲಿರುವವಳಿಗೆ
ಕೆಲಸಕ್ಕೆ ಸೇರಲಾ?
ಅನೂಷಾಳನ್ನು ನೋಡಿಕೊಳ್ಳಬೇಕು
ಫ್ಯಾಷನ್ ಡಿಸೈನಿಂಗ್?
ರೆಡಿಮೇಡ್ ಕೊಳ್ಳುವುದೇ ಚೀಪ್
ಹೀಗೆ ಅವಳೇ ಪ್ರೊಫೊಸ್ ಮಾಡಿಕೊಂಡು ಅವಳೇ ಡಿಸ್ಪೋಸ್ ಮಾಡಿಕೊಂಡು ದೇವರಂತೆ ಕುಳಿತಳು ಸುರಭಿ!
ಏನಾದರೂ ಮಾಡಬೇಕು ಅನ್ನುವುದು ಒಳಗಿನಿಂದ ಹುಟ್ಟಬೇಕೇ ಹೊರತು, ಸಿನೆಮಾದಲ್ಲಿ ನಾಯಕ ರಕ್ತ ನೋಡಿಕೊಂಡು ರೊಚ್ಚಿಗೆದ್ದು ಕಾದಾಡಲು ಶುರು ಮಾಡುತ್ತಾನಲ್ಲ, ಹಾಗಾಗಲು ಸಾಧ್ಯವೇ?!

ಯೋಚಿಸುತ್ತಲೇ ಮಧ್ಯಾಹ್ನವಾಯಿತು
ಅನೂಷಾಳನ್ನು ಕರೆತರಲು ಶಾಲೆಗೆ ಹೊರಟಳು
ದಿನವೂ ಎದುರಾಗುವ ಅಮ್ಮಂದಿರು ಒಂದೈದು ನಿಮಿಷ ಮಕ್ಕಳ ಹೋಮ್‌ವರ್ಕ್, ಗಲಾಟೆ, ಮಾರ್ಕ್ಸ್ ಅನ್ನುವ ಸವಕಲು ಹರಟೆ ಹೊಡೆಯುವುದು ಎಂದಿನ ಅಭ್ಯಾಸ
ಹಾಗೆ ಮಾತನಾಡುತ್ತಿರುವಾಗಲೇ ಮೋಹನನ ಅಮ್ಮ ಚಿತ್ರಾ ಪೇಂಟಿಂಗ್ ಕಲಿಸುತ್ತಾಳೆ ಎಂದು ನೆನಪಾದದ್ದು!
ಅದಾಗಿದ್ದೇ ರೋಮಾಂಚನವಾಗಿ ಬಿಟ್ಟಿತು ಅವಳಿಗೆ!
ಐದನೆಯ ಕ್ಲಾಸಿನಲ್ಲಿರುವಾಗ ಹಳ್ಳಿಯ ಸ್ಕೂಲಿನಲ್ಲಿ ಚಿಕ್ಕನಾಯಕ ಮೇಷ್ಟರು ಸುರಭಿ ಬಿಡಿಸುವ ಬೀಕರ್, ಟೆಸ್ಟ್ ಟ್ಯೂಬ್, ಅಮೀಬಾ, ಪಾರಾಮೀಸಿಯಂ ಚಿತ್ರಗಳನ್ನು ನೋಡಿ ‘ನೀವು ಸೈಂಟಿಸ್ಟ್ ಆಗ್ತೀರಾ ಕಣ್ರೀ’ ಅಂತ ಭವಿಷ್ಯ ನುಡಿದು, ಅದನ್ನು ಮನೆಯಲ್ಲಿ ಹೇಳಿ ಎಲ್ಲರೂ ‘ಚಿತ್ರ ಬಿಡಿಸಿದರೆ ಆರ್ಟಿಸ್ಟ್ ಆಗ್ತಾರೆ ಕಣೇ, ವಿಜ್ಞಾನಿ ಆಗ್ತಾರೆ ಅಂತ ಯಾರೆಂದರು’ ಅಂತ ಇಡೀ ಸಂಸಾರದಲ್ಲಿ ನಗೆಗೀಡಾಗಿದ್ದಳು
ಆದರೆ ಮೇಷ್ಟರ ಮಾತು ಅವಳಿಗೆ ಅತೀವ ಗೀಳು ಹಿಡಿಸಿ ಆ ನಂತರ ಸಿಕ್ಕ ಸಿಕ್ಕ ಸುಧಾ, ಮಯೂರ ಪತ್ರಿಕೆಗಳಲ್ಲಿನ ಎಲ್ಲ ಚಿತ್ರಗಳನ್ನು ತಕ್ಕಮಟ್ಟಿಗೆ ಬಿಡಿಸಿ ಬಿಡಿಸಿ ತಾನೂ ಒಂದು ದಿನ ಅತ್ಯದ್ಭುತ ಚಿತ್ರಕಾರಳಾಗುತ್ತೇನೆ ಅಂತ ಕನಸು ಕಂಡಿದ್ದಳಾದರೂ, ಆ ನಂತರ ಅದಕ್ಕೆ ಹೆಚ್ಚಿನ ಗಮನವನ್ನೇನೂ ಕೊಡದೇ ಅವಳ ಎಲ್ಲ ಹಾಬಿಗಳಾದ ಬರಹ, ಟೈಲರಿಂಗ್, ಎಂಬ್ರಾಯಿಡರಿ ಥರವೇ ಅರ್ಧಂಬರ್ಧವಾಗಿ master of none  ಆಗಿ ಉಳಿದಿದ್ದಳು.

ಈಗ ಅದೆಲ್ಲ ನೆನಪಾಗಿ ಆ ಕ್ಷಣವೇ ಚಿತ್ರಾಳ ಜೊತೆ ಕ್ಲಾಸಿಗೆ ಸೇರುವ ಮಾತಾಡಿ ಫಿಕ್ಸ್ ಮಾಡಿಯೇ ಬಿಟ್ಟಳು
ಕಲಿಯುವ ಸಮಯ, ಫೀಸ್ ಎಲ್ಲ ನಿಗದಿಯಾಗಿ ಮರುದಿನ ಬರಬೇಕಾದರೆ ತರಬೇಕಾದ ವಸ್ತುಗಳ ಲಿಸ್ಟ್ ಅನ್ನು ಕೂಡಾ ತೆಗೆದುಕೊಂಡಿದ್ದಾಯಿತು
ವಾಪಸ್ ಬರುವಾಗ ಸಂತೋಷ ಅದುಮಿಡಲಾರದೇ ಮಗಳ ಹತ್ತಿರ ‘ನಾಳೆಯಿಂದ ಪೇಂಟಿಂಗ್ ಕ್ಲಾಸಿಗೆ ಹೋಗ್ತೀನಿ ಅನೂ’ ಅಂದಳು
ರಸ್ತೆಯ ಕಲ್ಲನ್ನು ಒದೆಯುತ್ತ ನಡೆಯುತ್ತಿದ್ದ ಅನುಷಾ ಅನ್ಯಮನಸ್ಕತೆಯಿಂದ ‘ಹೌದಾ ಸರಿ ಇಬ್ರೂ ಒಟ್ಗೇ ಹೋಮ್‌ವರ್ಕ್ ಮಾಡಣ’ ಅಂದಿತು….

***
ಮಾರನೆಯ ದಿನ ಮಧ್ಯಾಹ್ನ ಚಿತ್ರಾಳ ಮನೆಯೊಳಗೆ ಕಾಲಿಟ್ಟಾಗ ಮಧ್ಯಾಹ್ನ ಹನ್ನೆರಡು ಹೊಡೆದಿತ್ತು
ಬಾಗಿಲು ತೆರೆದ ಚಿತ್ರ ‘ಐದು ನಿಮಿಷ ಬರ್ತೀನಿ’ ಅಂತ ಹೇಳಿ ಒಳಗೆ ಮಾಯವಾದಳು
ಸುರಭಿ ಗೋಡೆ, ನೆಲ, ಟೀಪಾಯ್, ಟಿವಿ, ಫೋನ್ ಎಲ್ಲದರ ಮೇಲೂ ಹಾಸಿದ್ದ ಪೇಂಟಿಂಗ್‌‌ ಬಟ್ಟೆಗಳನ್ನು ನೋಡಿ ‘ಅಯ್ಯೋ ಒಂಚೂರೂ ಟೇಸ್ಟ್ ಇಲ್ಲದೇ ಎಷ್ಟು ಪಿತಿಪಿತಿ ತುಂಬಿಸಿದ್ದಾರೆ’ ಅಂದುಕೊಳ್ಳುವುದರಲ್ಲಿ ಮೂಲೆಯಲ್ಲಿದ್ದ ಹೂಗುಚ್ಛದ ಪೇಂಟಿಂಗ್ ಕಣ್ಣಿಗೆ ಬಿದ್ದಿತು. ಅದೆಷ್ಟು ಚೆಂದವಿತ್ತೆಂದರೆ ಮೊದಲಿಗೆ ಅದನ್ನೇ ಕಲಿಸೆಂದು ಕೇಳಬೇಕು ಅಂದುಕೊಂಡಳು ಸುರಭಿ.

ಅಷ್ಟರಲ್ಲಿ ಚಿತ್ರಾ ಸಾರಿ ಅನ್ನುತ್ತ ಬಂದವಳು ಎಲ್ಲ ವಸ್ತುಗಳನ್ನು ಹೊರತೆಗೆಯಲು ಹೇಳಿದಳು
ಸುರಭಿ ಬಟ್ಟೆ, ಫ್ರೇಮ್, ಬಣ್ಣಗಳು, ಬ್ರಷ್‌ಗಳು ಎಲ್ಲವನ್ನೂ ತೆಗೆದಿರಿಸುತ್ತಾ ‘ನನಗೆ ಆ ಚಿತ್ರ ಬಿಡಿಸಬೇಕು. ಅದನ್ನೇ ಮೊದಲು ಮಾಡೋಣ’ ಅಂದಳು ಉತ್ಸಾಹದಿಂದ
ಚಿತ್ರ ದೊಡ್ಡದಾಗಿ ನಗುತ್ತಾ ‘ಅದಾ! ಅದು ಮಾಡುವ ಸ್ಟೇಜ್ ಬರಕ್ಕೆ ಆರು ತಿಂಗಳು ಆಗ್ಬೇಕು ಕಣಪ್ಪಾ. ಆತುರ ಮಾಡುವ ಹಾಗಿಲ್ಲ’ ಅಂದಳು
ಸುರಭಿಗೆ ತಣ್ಣೀರೆರೆಚಿದಂತಾದರೂ ತೋರಿಸಿಕೊಳ್ಳದೆ ತಲೆಯಾಡಿಸಿದಳು
ಫ್ರೇಮ್ ಹಾಕಿದ ನಂತರ ಸಣ್ಣ ಬ್ರಷ್ ಒಂದನ್ನು ಆರಿಸಿ ತೆಗೆದು ಅದರಿಂದ ಸಣ್ಣ ಗೆರೆ ಎಳೆದು ತೋರಿಸಿ ‘ಹೀಗೆ ಎಳೆಯುತ್ತಾ ಇರಿ’ ಅಂದಳು
ಅಷ್ಟೇನಾ ಅಂತ ಸ್ವಲ್ಪ ನಗು ಬಂದರೂ ತೋರಿಸಿಕೊಳ್ಳದೇ ಆಯ್ತು ಒಂದಿಷ್ಟು ಗೆರೆ ಎಳೆದು ಮುಗಿಸಿದರಾಯಿತು ಅಂತ ತಲೆಯಾಡಿಸಿ ಶುರು ಮಾಡಿದಳು
ಚಿತ್ರಾ ಊಟ ಮುಗಿಸಿ ಬರುವೆನೆಂದು ಒಳಗೆ ಹೋದಳು

ಅವಳು ಬರುವುದರಲ್ಲಿ ಒಂದು ಫ್ರೇಮಿನ ತುಂಬ ಗೆರೆಗಳನ್ನು ಎಳೆದಿಟ್ಟಿದ್ದಳು
ಚಿತ್ರಾ ಬಂದೊಡನೆ ಅದನ್ನು ಮೆಚ್ಚಿ ಸರಿ ಇದೆ ಅಂದು ಹೂಗುಚ್ಛದ ಪೇಂಟಿಂಗ್ ಶುರು ಮಾಡಿ, ಚಂದ್ರಿಕಾಳಿಗೆ ಮೂತಿಗೆ ಅದನ್ನು ಹಿಡಿದು ತೋರಿಸಬೇಕು ಎಂದು ಕನಸು ಕಾಣುತ್ತ ಕುಳಿತಳು
ಚಿತ್ರಾ ಬಂದವಳೇ ಅದನ್ನು ನೋಡಿ ‘ಅಯ್ಯೋ ಇಷ್ಟು ದಪ್ಪ ಗೆರೆ ಮಾಡ್ಬಿಟ್ಟಿದೀರಾ? ಹೀಗಿದ್ರೆ ಆಗಲ್ಲಪ್ಪ. ಪೂರ್ತಿ ತೆಳ್ಳಳ್ಳಳ್ಳಗೆ ಇರಬೇಕು’ ಅಂತ ಒತ್ತಿ ಹೇಳುತ್ತಾ ಇವಳ ಕೈಯಿಂದ ಬಟ್ಟೆ ತೆಗೆದುಕೊಂಡು ಒಂದು ನಾಲಕ್ಕು ಗೆರೆ ಎಳೆದು ‘ಹೀಗೆ’ ಅಂದಳು
ನಿಜಕ್ಕೂ ಹೇಳಬೇಕೆಂದರೆ ಅದು ಸುರಭಿ ಎಳೆದದ್ದಕ್ಕಿಂತ ದಪ್ಪವಿತ್ತು
ಆದರೆ ಹಾಗಂತ ಹೇಳುವುದು ಹೇಗೆ?!
ಸುಮ್ಮನೆ ತಲೆಯಾಡಿಸಿ ಮತ್ತೆ ಗೆರೆ ಎಳೆಯಲು ಶುರು ಮಾಡಿದಳು
ಅವತ್ತಿಡೀ ಗೆರೆ ಎಳೆದೇ ಎಳೆದದ್ದು

ಅವತ್ತು ಅನುಷಾ ಸ್ಕೂಲಿನಿಂದ ಬಂದು ಅಮ್ಮನ ಪೇಂಟಿಂಗ್ ನೋಡಿ ‘ಥೂ ನಿಂಗೇ ಲೈನ್ ಎಳೆಯಕ್ಕೆ ಬರಲ್ವಾ … ಹಿಹಿಹಿಹಿ’ ಅಂತ ನಕ್ಕುಬಿಟ್ಟಿತು
ಸುರಭಿಗೆ ಸಿಟ್ಟು ಬಂದು ‘ಅಪ್ಪ ನಿಂಗೆ ಲೀಫ್, ಪೆಟಲ್ ಅಂತೆಲ್ಲ ಹೇಳುವಾಗ ಹೊರಗೆ ಕರ್ಕೊಂಡೋಗಿ ಯಾಕೆ ತೋರಿಸ್ತಾರೆ ಹೇಳು? ಬೇಸಿಕ್ ಇಂದ ಕಲೀಲಿ ಅಂತ ತಾನೇ’ ಅಂತ ಅವಳಿಗೆ ಹೇಳುವ ನೆಪದಲ್ಲಿ ತನಗೆ ತಾನೇ ಸಮಾಧಾನ ಮಾಡಿಕೊಂಡಿದ್ದಳು!

ಹಾಗೆ ಶುರುವಾದ ಕ್ಲಾಸು ಎರಡು, ಮೂರು, ನಾಲ್ಕನೆಯ ದಿನ ದಾಟಿತು
ಸುರಭಿ ತಂದಿದ್ದ ಒಂದು ಮೀಟರ್ ಬಟ್ಟೆಯಲ್ಲಿ ಅರ್ಧ ಭಾಗ ಬರೀ ಕೆಂಪು ಕೆಂಪು ಗೆರೆಗಳಿಂದ ತುಂಬಿಹೋಗಿತ್ತು
ಆದರೂ ಚಿತ್ರಾಗೆ ಸಮಾಧಾನವಾಗಿರಲಿಲ್ಲ
ಸುರಭಿಗೆ ಮೊದಲ ದಿನವಿದ್ದ ಆಸಕ್ತಿ ಸ್ವಲ್ಪ ಕಡಿಮೆ ಆದ ಹಾಗಿತ್ತು
ಎಷ್ಟು ದಿನವಂತ ಗೆರೆ ಎಳೆಯುವುದು ಅಂತ ಒಂದು ರೀತಿಯ ನಿರಾಸಕ್ತಿ ಆವರಿಸುವುದರ ಜೊತೆಗೆ ಕೀಳರಿಮೆಯೂ ಆವರಿಸಿಕೊಂಡಿತು
ಒಂದು ಯಕಶ್ಚಿತ್ ಗೆರೆ ಎಳೆಯಲೂ ಬರುವುದಿಲ್ಲವಾ ನನಗೆ ಅಂತ ಒಂಥರಾ ಹೀನಾಯವೆನ್ನಿಸತೊಡಗಿತು
ಪ್ರತಿ ಸಲ ಚಿತ್ರಾ ಪರೀಕ್ಷಿಸುತ್ತಾ  ‘ಹಾಗಲ್ಲಪ್ಪಾ. ಇರಿ ತೋರಿಸಿಕೊಡ್ತೀನಿ’ ಎನ್ನುತ್ತ ಎಮ್ಮೆಯಂಥ ಗೆರೆ ಎಳೆದು ಮತ್ತಿಷ್ಟು ಗೆರೆ ಎಳೆಯಿರಿ ಅನ್ನುವಾಗಲೂ ಸುರಭಿಗೆ ಸಿಟ್ಟು ಏರಲಾರಂಭಿಸುತ್ತಿತ್ತು
ಇನ್ಯಾರಾದರೂ ಆಗಿದ್ದರೆ ಜಗಳವೇ ಆಡಿಬಿಡುತ್ತಿದ್ದಳೋ ಏನೋ … ಆದರೆ ಅವಳು ಮಗನ ಕ್ಲಾಸ್‌ಮೇಟ್ ಅಮ್ಮ
ಸ್ವಲ್ಪ ತಡೆದು ನೋಡುವ ನಿರ್ಧಾರದಿಂದ ತೆಪ್ಪಗಾದಳು

ಐದನೆಯ ದಿನ ಅವರಿಬ್ಬರೂ ಅಚಾನಕ್ ಹತ್ತಿರವಾಗುವ ಘಟನೆಯೊಂದು ನಡೆದುಬಿಟ್ಟಿತು…

ಅವತ್ತು ಸುರಭಿ ಕ್ಲಾಸಿಗೆ ಹೋದಾಗ ಆ ಸಮಯದಲ್ಲಿ ತೆರೆದೇ ಇಟ್ಟಿರುತ್ತಿದ್ದ ಬಾಗಿಲು ಮುಚ್ಚಿತ್ತು
ತುಂಬ ಹೊತ್ತು ಬೆಲ್ ಮಾಡಿ ಮಾಡಿ ಸುಸ್ತಾಗಿ ಇನ್ನೇನು ಅವಳು ಮನೆಯಲ್ಲಿ ಇಲ್ಲವೇನೋ ಅನ್ನುತ್ತ ಹೊರಡಲು ಸಿದ್ದವಾದಾಗ ಬಾಗಿಲು ತೆರೆದಿದ್ದಳು ಚಿತ್ರಾ
ಕೆದರಿದ ತಲೆಗೂದಲು, ಸುಕ್ಕಾಗಿದ್ದ ಬಟ್ಟೆ ನೋಡುತ್ತ ‘ಮಲಗಿದ್ರಾ’ ಅಂತ ಕೇಳಿದಳು
ಚಿತ್ರಾ ಯಾವುದೇ ಭಿಡೆ ಇಲ್ಲದೆ ಕಿಸಕ್ಕನೆ ನಕ್ಕು ಸ್ವಲ್ಪ ದನಿ ತಗ್ಗಿಸಿ ‘ಇಲ್ಲ ನನ್ನ ಗಂಡನಿಗೆ ಅರ್ಧ ದಿನ ರಜಾ ಹಾಕಿಸಿದ್ದೆ. ದಿನಾ ಕೆಲಸಕ್ಕೆ ಹೋಗಿಬಂದು ಸುಸ್ತಾಗಿ ಮಲಗಿಬಿಡ್ತಾನೆ. ಅದಕ್ಕೇ ಇವತ್ತು ರಜಾ ಹಾಕಿ ನನಗೆ ಮಾಡದಿದ್ದರೆ ಒದ್ದು ಬಿಡ್ತೀನಿ ಅಂದೆ. ಇಷ್ಟು ಹೊತ್ತಿನವರೆಗೂ ಮಾಡಿದ’ ಅಂದುಬಿಟ್ಟಳು!

ಕಾಲೇಜಿನ ಕಾಲದಿಂದ ಪರಿಚಯವಿದ್ದ ನಾಲ್ಕು ಗೆಳತಿಯರು ಮತ್ತು ಚಂದ್ರಿಕಾ ಹತ್ತಿರ ಮಾತ್ರ ಸ್ವಲ್ಪ ಪೋಲಿ ಮಾತಾಡಿ ಅಭ್ಯಾಸವಿತ್ತು ಸುರಭಿಗೆ
ಆದರೆ ಪರಿಚಯವಾದ ಹೊಸತರಲ್ಲಿ ಹೀಗೆ ಯಾರಾದರೂ ಮಾತಾಡಬಲ್ಲರು ಅನ್ನುವ ಕಲ್ಪನೆಯೇ ಇಲ್ಲದ ಸುರಭಿ ತಬ್ಬಿಬ್ಬಾಗಿ ಪೆದ್ದು ನಗೆ ನಕ್ಕಳು
ಉಗುಳು ನುಂಗುತ್ತ ನಿಂತವಳನ್ನು ‘ಸರಿ ಎಲ್ಲ ರೆಡಿ ಮಾಡ್ಕೊಳಿ. ನೀವು ಬಂದ್ರಲ್ಲಾ ಅಂತ ಅರ್ಜೆಂಟಲ್ಲಿ ಬಂದೆ. ಬಾತ್ ರೂಮಿಗೆ ಹೋಗಿ ತೊಳೆದುಕೊಳ್ಳಕ್ಕೂ ಸಮಯ ಇರ್ಲಿಲ್ಲ. ಬಂದೆ ಈಗ …’ ಅನ್ನುತ್ತ ಒಳಗೆ ಮಾಯವಾದಳು
ಕಾಯುತ್ತ ಕೂತಿರುವಾಗಲೇ ಇದ್ದಕ್ಕಿದ್ದಂತೆ ರೂಮಿನ ಒಳಗಿನಿಂದ ಒಬ್ಬ ತೆಳ್ಳಗಿನ ಗಂಡಸು ಈಚೆ ಬಂದರು
ಸುರಭಿಗೆ ಚಿತ್ರಾ ಮಾತಾಡಿದ್ದು ನೆನಪಾಗಿ ತುಂಬ ಸಂಕೋಚದಿಂದ ಮುದುಡಿದಳು
ಆತ ಚಪ್ಪಲಿ ಹಾಕಿ ಎಲ್ಲಿಗೋ ಹೊರಟರು
ತುಸು ಹೊತ್ತಿನ ನಂತರ ಹೊರಬಂದ ಚಿತ್ರಾ ‘ಓಹ್! ನನ್ನ ಗಂಡ ಆಗಲೇ ಓಡೋಗಿದಾನೆ! ಹೆಣ ಬೀಳಿಸಿಬಿಟ್ಟೆ ಇವತ್ತು! ಎದ್ದುಬಿದ್ದು ಓಡೋದ ಅನ್ಸತ್ತೆ…’ ಎಂದು ಜೋರಾಗಿ ನಗುತ್ತ ಹೇಳಿದಾಗ ಸುರಭಿ ಮುಖ ಕೆಂಚು ಮಾಡಿಕೊಂಡು ತಬ್ಬಿಬ್ಬಾಗಿ ಕುಳಿತಳು
ಚಿತ್ರಾ ಕ್ಲಾಸ್ ಶುರು ಮಾಡಿದ್ದಳು ಮತ್ತು ಪಾಠಕ್ಕೆ ಕುಳಿತಾಗ ಮಾತ್ರ ಅದೇ ಕಠೋರ ಮೇಡಂ ಆದಳು ಮತ್ತು ಗೆರೆ ಎಳೆಯುವ ಕಾಯಕ ಮಾತ್ರ ಏನೇನೂ ಬದಲಾಗಲಿಲ್ಲ!

ಆ ರೀತಿ ಮಾತು ಶುರು ಮಾಡಿದ ನಂತರ ಅವಳು ಅದೇನೇನೋ ವಿಚಿತ್ರ ಕತೆಗಳನ್ನೆಲ್ಲ ಹೇಳಲು ಶುರುವಿಟ್ಟುಕೊಂಡಳು.
ಅವಳ ಅಪ್ಪ-ಅಮ್ಮ ತುಂಬ ಸ್ಟ್ರಿಕ್ಟ್ ಇದ್ದರಂತೆ. ಹಾಗಾಗಿ ಅವಳನ್ನು ಕೊ ಎಜುಕೇಷನ್ ಶಾಲೆಗೆ ಸೇರಿಸಲಿಲ್ಲ ಅಂದವಳು ಕಿಸಕ್ಕನೆ ನಕ್ಕು ‘ಏನು ಸ್ಕೂಲು ಕಾಲೇಜಲ್ಲಿ ಗಂಡುಮಕ್ಕಳು ಸಿಗದಿದ್ದರೇನಂತೆ. ರಸ್ತೇಲಿ ಹೋಗುವಾಗ ಸಿಗೋದಿಲ್ವೇನಪ್ಪಾ! ನಮ್ಮಪ್ಪ ಅಮ್ಮಂಗೆ ಬುದ್ದಿಯಿಲ್ಲ! ನನಗೆ ಆಗಲೇ ಬೇಕಾದಷ್ಟು ಬಾಯ್ ಫ್ರೆಂಡ್ಸ್ ಇದ್ದರು’ ಅಂದವಳು ಒಂಬತ್ತನೆಯ ಕ್ಲಾಸಿನಲ್ಲಿರುವಾಗ ಇದ್ದ ದಿಲೀಪ, ಪಿಯುಸಿಯಲ್ಲಿರುವಾಗ ನಡೆದ ಸ್ವಲ್ಪವೇ ದಿನದ ಒಂದು ಫ಼್ಲಿಂಗ್ ಅನ್ನುತ್ತ ಪುಂಖಾನುಪುಂಖವಾಗಿ ತನ್ನ ಸಾಹಸಗಳನ್ನೆಲ್ಲ ಹೇಳೇ ಹೇಳಿದಳು…
ಗೆಳತಿಯ ಹುಟ್ಟಿದ ಹಬ್ಬ ಅಂತ ಹೇಳಿ ಅವನೊಡನೆ ನಂದಿಯಲ್ಲಿ ಒಂದು ದಿನ ಉಳಿದಿದ್ದ ಕತೆ ರಸವತ್ತಾಗಿ ವರ್ಣಿಸುವಾಗ ಸುರಭಿ ತೆರೆದ ಬಾಯಿ ಮುಚ್ಚದೇ ನೋಡಿದ್ದಳು
‘ನಾನು ಇಷ್ಟೆಲ್ಲ ಹೇಳ್ತೀನಿ. ನೀವು ಮಾತ್ರ ಒಂದು ಚೂರೂ ಏನು ಹೇಳಲ್ಲಪ್ಪಾ’ ಎಂದು ಚಿತ್ರಾ ಹೇಳಿದಾಗ ಸುರಭಿಯ ಮುಖ ಕೆಂಪಾಗಿ ಹೋಯಿತು
ಏನು ಮಾತಾಡಲೂ ತೋಚದೇ ‘ನೀರು ಬೇಕು’ ಅಂದಿದ್ದಳು.

ಗೆರೆ ಎಳೆಯುತ್ತ ಕುಳಿತ ಸುರಭಿಗೆ ತನ್ನ ಜೀವನದ ವಿಷಯಗಳ ನೆನಪು …
ನವರಂಗ್ ಥಿಯೇಟರಿನಲ್ಲಿ ಅಪರೂಪಕ್ಕೊಮ್ಮೆ ಕಾಲೇಜ್ ಬಂಕ್ ಮಾಡಿ ಗೆಳತಿಯರೊಡನೆ ಸಿನಿಮಾ ಕ್ಯೂನಲ್ಲಿ ನಿಂತಿದ್ದನ್ನು ಪಕ್ಕದ ಮನೆಯವರ್ಯಾರೋ ನೋಡಿ ಮನೆಗೆ ಬರುವುದರಲ್ಲಿ ಏನೆಲ್ಲ ರಂಪವಾಗಿತ್ತು
ಅಮ್ಮ, ಅಣ್ಣ ಪೊಲೀಸರ ಥರ ಎದುರು ನಿಂತು ಎಷ್ಟು ದಿನದಿಂದ ಇದೆಲ್ಲ ನಡೀತಿದೆ ಅಂದಾಗ ಸುರಭಿ ತಾನು ಇದೇ ಮೊದಲು ಹೋಗಿದ್ದಾಗಿಯೂ, ವಾಪಸ್ಸು ಬಂದಮೇಲೆ ತಾನೇ ಹೇಳುವವಳಿದ್ದೆ ಅಂದಾಗ ಕೆಂಡಾಮಂಡಲ ಉರಿದಿದ್ದ ಅಣ್ಣ ಏನೋ ದಿನವೂ ಅವಳು ಇದನ್ನೇ ಮಾಡುತ್ತಿದ್ದುದಾಗಿಯೂ, ಇವತ್ತು ಸಿಕ್ಕಿ ಬಿದ್ದಿದ್ದರಿಂದ ಬಾಯಿ ಬಿಡುತ್ತಿದ್ದೇನೆ ಅಂತಲೂ ಇಲ್ಲಸಲ್ಲದ್ದು ಹೇಳಿ ತಾನು ಗೊಳೋ ಎಂತ ಅತ್ತಿದ್ದು ನೆನಪಾಯಿತು
ಇನ್ನು ಬಾಯ್ ಫ್ರೆಂಡ್?? ಆಯಿತಾಯಿತು … ಕೊಲೆ ನಡೆದು ಹೋಗುತ್ತಿತ್ತಷ್ಟೇ …
ಮತ್ತೆ ಕಾಲೇಜಿನ ಕೊನೆಯ ವರ್ಷದ ಮೂರು ದಿನದ ಊಟಿ ಪ್ರವಾಸದ ಕತೆ?
ಅಮ್ಮನೆದುರು ಉಪವಾಸ ಸತ್ಯಾಗ್ರಹ ಮಾಡಿ ಕೂಡಾ ವರ್ಕ್ ಔಟ್ ಆಗದೇ ಹೋಗಿತ್ತು
ಕಾಲೇಜಿನ ಲೆಕ್ಚರರ್‌ಗಳೆಲ್ಲ ಬರುತ್ತಾರೆ ಅಂತ ಬೇಡಿ, ಗೆಳತಿಯರ ಹತ್ತಿರ ವಶೀಲಿಬಾಜಿ ಮಾಡಿಸಿಯೂ ಒಪ್ಪದೇ ಹೋದಾಗ ಮೂರು ದಿನ ಅತ್ತಿದ್ದು ನೆನಪಾಯಿತು
ಆದರೂ ಅಮ್ಮ ಬಾಗಿರಲಿಲ್ಲ … ಇನ್ನು ಪ್ರೇಮ ಗೀಮ ಎಲ್ಲಿ ಸಾಧ್ಯವಾಗುತ್ತಿತ್ತು …

ಅಬ್ಬ! ಅವತ್ತು ಅತ್ತೆಯ ಮಗಳು ಪ್ರಿಯಾ ಬಂದಾಗಿನ ಘಟನೆ??
ನೆನಪಾಗಿ ಎದೆ ನಡುಗಿದಂತಾಯಿತು.
ಮಂಗಳೂರಿನಿಂದ ಬಂದಿದ್ದ ಪ್ರಿಯಾ ಅವತ್ತು ಸುಮ್ಮನೇ ಶಾಪಿಂಗ್ ಹೋಗಿ ಬರೋಣ ಭಾಷ್ಯಂ ಸರ್ಕಲ್ ಹತ್ತಿರ ಅಂತ ಎಳೆದೊಯ್ದಿದ್ದಳು
ಹಾಗೆ ಮಾತನಾಡುತ್ತ ಆಡುತ್ತ ಒಂದಿಷ್ಟು ಅಂಗಡಿಗಳಲ್ಲಿ ನೈಟಿ, ನೇಲ್ ಪಾಲಿಷ್ ಅಂತ ತಡಕಾಡಿದವಳು ಇದ್ದಕ್ಕಿದ್ದಂತೆ ‘ಇಲ್ಲೊಬ್ಬ ನನ್ನ ಗೆಳೆಯನಿದ್ದಾನೆ. ಭೇಟಿಯಾಗಿ ಬರೋಣ’ ಅಂತ ಏನೋ ಸಡನ್ನಾಗಿ ನೆನಪಾದವಳಂತೆ ಹೇಳಿದ್ದಳು
ಸುರಭಿ ಬಲವಾಗಿ ನಿರಾಕರಿಸಿದ್ದಳು
ಆದರೂ ಬಿಡದೇ ಪ್ರಾಣ ತಿಂದು ಎಳೆದುಕೊಂಡು ಹೋದವಳು ಯಾವುದೋ ಮನೆಗೆ ಹೋಗುತ್ತಿದ್ದಾಳೆ ಎಂದುಕೊಂಡರೆ ಇದ್ದಕ್ಕಿದ್ದಂತೆ ಪಾಲಿಟೆಕ್ನಿಕ್ ಕಾಲೇಜಿಗೆ ಸೇರಿದಂತೆಯೇ ಇದ್ದ ಹುಡುಗರ ಹಾಸ್ಟೆಲ್ಲಿನ ಒಳಗೆ ನುಗ್ಗಿಬಿಟ್ಟಳು
ಜೀವ ಹೋದಂತಾಗಿ ಸುರಭಿ ‘ಇಲ್ಲಿ ಯಾಕೆ ಹೋಗ್ತಿದೀಯಾ? ಅಣ್ಣ ನೋಡಿದರೆ ಸಿಗಿದು ಹಾಕುತ್ತಾನೆ…’ ಅಂತ ಗೋಳಾಡುವಾಗಲೇ ಅವಳು ಇಲ್ಲದ ಗಡಿಬಿಡಿ ಮಾಡುತ್ತ ‘ರಾಜೇಂದ್ರ ಕಾಲೇಜಿಗೆ ಹೋಗಿದ್ದಾನೆ, ಇಲ್ಲಿ ಹೇಗೆ ನೋಡ್ತಾನೆ, ಸುಮ್ಮನಿರು’ ಅಂದವಳು ‘ಈಗ ಬಂದೆ’ ಅನ್ನುತ್ತ ಇಳಿಜಾರಿನಲ್ಲಿ ಇಳಿದು ಮಾಯವಾಗಿಯೇ ಬಿಟ್ಟಿದ್ದಳು
ಸುರಭಿ ದಿಗ್ಭ್ರಮೆಗೊಂಡು ಏನು ಮಾಡಲೂ ತೋಚದೇ ನಿಂತಿರುವಾಗಲೇ ಆ ಮಾರ್ಗವಾಗಿ ಓಡಾಡುವ ಹುಡುಗರು ತನ್ನನ್ನು ವಿಚಿತ್ರವಾಗಿ ನೋಡುತ್ತಿದ್ದಾರೆ ಅನ್ನುವ ಅರಿವಾದದ್ದು.
ಓಡಿಹೋಗಲೇ
ಅವಳು ಎತ್ತಲಾದರೂ ಸಾಯಲಿ
ಅಯ್ಯೋ ಪಿಶಾಚಿ ಐದು ನಿಮಿಷ ಅಂತ ಹೇಳಿ ಒಂದೆರಡು ಶತಮಾನ ಕಳೆದುಹೋಗಿರಬೇಕು … ಹೀಗೆ ಒದ್ದಾಡುತ್ತ ನಿಂತಿರುವಾಗಲೇ ತಿರುವಿನಲ್ಲಿ ಅವಳು ಬರುವುದು ಕಾಣಿಸಿತ್ತು.
‘ಥು ಎಷ್ಟು ಹೊತ್ತು ಅದು ಹೋಗುವುದು? ಅಸಹ್ಯ … ಹೇಗೆ ನೋಡ್ತಿದ್ದರು ಹುಡುಗರೆಲ್ಲ ಗೊತ್ತಾ’ ಅಂತ ಗಂಟಲು ಬಿಗಿದುಕೊಂಡಾಗ ಅವಳು ಸ್ವಲ್ಪವೂ ಪಶ್ಚಾತ್ತಾಪ ಇಲ್ಲದ ದನಿಯಲ್ಲಿ ‘ಬಾರೇ ಸಾಕು. ಅತೀ ಆಡಬೇಡ. ಇನ್ನೇನು ನಿನ್ನಂಥ ಹುಡುಗಿ ನಿಂತಿದ್ದರೆ ನೋಡದೇ ಹೋಗಲು ಆ ಹುಡುಗರ ಕಣ್ಣೇನು ಕುರುಡಾಗಿದೆಯಾ’ ಅಂತ ಕಿಸಕ್ಕನೆ ನಕ್ಕಿದ್ದಳು.
ಯಾರೂ ನೋಡಿರದಿದ್ದರೆ ಸಾಕು ಎಂದು ಬೇಡಿಕೊಳ್ಳುತ್ತ ಮನೆಯೊಳಗೆ ಕಾಲಿಡುವಾಗಲೇ ಅಪ್ಪ ರೌದ್ರಾವತಾರ ತಾಳಿ ನಿಂತಿದ್ದರು!
ಅವಳ ಹಣೆಬರಹಕ್ಕೆ ಅಪ್ಪನ ಗೆಳೆಯನ ಮಗ ಆ ಹಾಸ್ಟೆಲ್‌ಗೆ ಬಂದವನು ಅವಳಲ್ಲಿ ನಿಂತಿದ್ದನ್ನು ನೋಡಿ ಮನೆಗೆ ಸುದ್ದಿ ಮುಟ್ಟಿಸಿದ್ದ.
ಪ್ರಿಯಾಳ ಸಲುವಾಗಿ ಹೋಗಿದ್ದೆ ಅಂತ ಬಾಯಿ ಬಡಿದುಕೊಂಡರೂ ಒಪ್ಪದೆ ಅದೇ ಕಡೆ ವಾರ್ನಿಂಗ್, ಮತ್ತೊಮ್ಮೆ ಹಾಗೆ ಮಾಡಿದರೆ ಕಾಲೇಜು ಬಿಡಿಸಿ ಬಿಡುತ್ತೇನೆ ಅಂತ ಕಿರುಚಾಡಿದ್ದರು.
ಮತ್ತೆಂದೋ ಅಪ್ಪನ ಗೆಳೆಯನ ಮಗ ನಿತಿನ್ ಎದುರಾದಾಗ ‘ಲೇ ದೆವ್ವ ನೀನೆಲ್ಲಿದ್ದೆಯೋ ಅಲ್ಲಿ? ಮನೆಗೆ ಬಂದು ಚಾಡಿ ಹೇಳ್ತೀಯಾ’ ಅಂತ ಕಿರುಚಾಡಿದಾಗ ಅಲ್ಲೇ ಸ್ವಲ್ಪ ದೂರದಲ್ಲಿ ಸಿಗರೇಟ್ ಸೇದುತ್ತ ನಿಂತಿದ್ದೆನೆಂದು ಹೇಳಿ ಕಿಡಿಗೇಡಿ ನಗೆ ನಕ್ಕಿದ್ದ

ಹೀಗೆ ಕಳೆದುಹೋಗಿತ್ತು ತನ್ನ ಬದುಕು …ಏನು ಹೇಳುವುದು ಇದ್ದನ್ನೆಲ್ಲ ಮಣ್ಣು?
ಅದೇ ಗುಂಗಿನಲ್ಲಿ ಗೆರೆ ಎಳೆದೆಳೆದು ಇಟ್ಟಿದ್ದಳು
ಚಿತ್ರಾ ಇವಳು ಎಳೆದಿದ್ದ ಗೆರೆಗಳನ್ನು ನೋಡಿ ಶಾಕ್ ಆದ ದನಿಯಲ್ಲಿ ‘ಅಯ್ಯೋ! ಇದೇನು ಹೀಗೆ ಎಳೆದಿದ್ದೀರ?! ಎಮ್ಮೆ ಕಟ್ಟುವ ಹಗ್ಗದ ಹಾಗಿದೆ. ದಿನದಿನಕ್ಕೆ ನಿಮ್ಮ ಗೆರೆ ಮತ್ತಿಷ್ಟು ಬಿಗಡಾಯಿಸುತ್ತಿದೆ’ ಅಂದುಬಿಟ್ಟಾಗ ಸುರಭಿ ತುಂಬ ಅಸ್ತವ್ಯಸ್ತಗೊಂಡಳು
ಮನೆಗೆ ಬಂದು ಎಷ್ಟೋ ಹೊತ್ತಿನ ನಂತರವೂ ಮನಸ್ಸು ಸಿಡಿಮಿಡಿಗೊಳ್ಳುತ್ತಲೇ ಇತ್ತು.
ಮಾಡದ ತಪ್ಪುಗಳಿಗೆ ಸಿಕ್ಕ ಬಯ್ಗುಳಗಳ ನೆನಪು ಒಂದು ಕಡೆಯಾದರೆ, ಯಕಶ್ಚಿತ್ ಗೆರೆ ಎಳೆಯಲು ಬರುವುದಿಲ್ಲ ಅನ್ನುವಂತೆ ಚಿತ್ರಾ ಅಂದ ನೆನಪು ಬೇರೆ
‘ಹೇಳಿದೆನಲ್ಲ … ನಾನು ಗುಡ್ ಫಾರ್ ನಥಿಂಗ್’ ಅನ್ನುತ್ತ ಇಡೀ ದಿನ ಒದ್ದಾಡಿದಳು.
ಅನುಷಾ ಅಮ್ಮನ ದುಃಖದ ಮುಖ ನೋಡಿ ತಬ್ಬಿಬ್ಬಾಗಿ ಮೂಲೆ ಸೇರಿತ್ತು

ಮರುದಿನ ಕ್ಲಾಸಿಗೆ ಹೋಗಲು ಒಂಥರಾ ಆಲಸ್ಯ
ಏನು ಮಾಡಿದರೂ ಅಷ್ಟೇ, ತನಗೆ ಏನೂ ಬರುವುದಿಲ್ಲ ಅಂತ ನಿರಾಶೆ
ಅರ್ಧದಲ್ಲಿ ಬಿಟ್ಟರೆ ಮನೆಯವರು ಕೇಳಿ ಅವಮಾನವಾಗುತ್ತದೆ ಅನ್ನುವ ಕಾರಣವೊಂದು ಇಲ್ಲದಿದ್ದರೆ ಅವತ್ತೇ ಅವಳ ಪೇಂಟಿಂಗ್ ಸಾಹಸ ಮುಗಿದು ಹೋಗುತ್ತಿತ್ತು
ಹಾಗಾಗುವುದು ಅವಮಾನವೆನ್ನಿಸಿದ್ದರಿಂದ ಮತ್ತೆ ಕಾಲೆಳೆದುಕೊಂಡು ಕ್ಲಾಸಿಗೆ ಹೊರಟಿದ್ದಳು
ಅವತ್ತು ಹೆಚ್ಚು ಮಾತಿಲ್ಲದೇ ಸಪ್ಪಗೆ ಗೆರೆ ಎಳೆದು ಮುಗಿಸಿದಾಗ ಚಿತ್ರಾ ‘ಪರವಾಗಿಲ್ಲ. ಇಂಪ್ರೂವ್ ಆಗಿದೀರಾಪ್ಪ. ಇವತ್ತೆಷ್ಟೋ ಬೆಟರ್’ ಅಂದಿದ್ದಳು.
ಬೆಟರ್ ಅಂದರೆ ನೆನ್ನೆಗಿಂತ ವಾಸಿಯಷ್ಟೇ ಅನ್ನುವ ಅರಿವಿದ್ದ ಸುರಭಿಗೆ ಅದರಿಂದ ಹೆಚ್ಚೇನೂ ಸಂತೋಷವಾಗಿರಲಿಲ್ಲ.

ಹೀಗೆ ಶುರುವಾದ ಕ್ಲಾಸಿಗೆ ಅವತ್ತಿಗೆ ಹದಿನೇಳನೆಯ ದಿನ!
ಮೊದಲ ದಿನದಿಂದ ಇವತ್ತಿಗೆ ಎರಡು ಬದಲಾವಣೆಗಳಾಗಿದ್ದವು…
ಒಂದು ಮೀಟರ್ ಬಟ್ಟೆ ಮೈ ತುಂಬ ಕೆಂಪು ಕೆಂಪು ಬರೆ ಎಳಿಸಿಕೊಂಡು ಮೂಲೆ ಸೇರಿ ಮತ್ತೊಂದು ಮೀಟರ್ ಬಿಳಿ ಬಟ್ಟೆ ಖರೀದಿಸಿದ್ದಾಗಿತ್ತು
ತಾನು ಹುಟ್ಟಿದ್ದೇ ಈ ಗೆರೆಗಳನ್ನು ಎಳೆಯುವುದಕ್ಕೇನೋ ಅನ್ನುವಂತೆ ಮತ್ತೂ ಗೆರೆಗಳನ್ನು ಎಳೆಯುತ್ತಲೇ ಚಿತ್ರಾ ತನ್ನದೇನೋ ಭಾನಗಡಿಗಳನ್ನು ಹೆಮ್ಮೆಯಿಂದ ಹೇಳಿಕೊಳ್ಳುವಾಗ ತಾನೂ ಏನೇನೋ ಕತೆ ಕಟ್ಟಲು ಶುರು ಮಾಡಿದ್ದಳು!

ಕಾಲೇಜಿನಲ್ಲಿ ಸುಖಾಸುಮ್ಮನೆ ಒಬ್ಬನ ಕನಸಲ್ಲಿ ಮುಳುಗಿದ್ದ ವಿಷಯವನ್ನು ಮತ್ತಿಷ್ಟು ಬೆಳೆಸಿ ಅಮರ ಪ್ರೇಮವೆನ್ನುವಂತೆ ಬಿಂಬಿಸಿದಳು
ಅವ ತನಗಾಗಿ ಬಿದ್ದು ಸಾಯುತ್ತಿದ್ದ ಅಂತ ನಕ್ಕಳು
ಅಷ್ಟರಲ್ಲಿ ಚಿತ್ರಾ ತುಂಬ ಸಾಮಾನ್ಯ ವಿಷಯವೆನ್ನುವಂತೆ ‘ಅದೆಲ್ಲ ಸರಿ ಅವನೊಟ್ಟಿಗೆ ಮಲಗಲಿಲ್ಲವಾ’ ಅಂದಾಗ ಮತ್ತೆ ಬಲೂನು ಗಾಳಿ ಹೋದಂತಾಗಿತ್ತು
ಮಲಗುವುದಾ!! ಅಯ್ಯೋ ಹಣೆಬರಹವೇ! ಎದುರಿಗೆ ಸಿಕ್ಕರೆ ತೊಡೆ ನಡುಗಿ ತಲೆ ತಗ್ಗಿಸಿ ಹೋಗುತ್ತಿದ್ದ ತಾನು, ಸಿನೆಮಾದ ಪೊಗರು ಹೀರೋ ಥರ ಹಿಂದಿರುಗಿ ನೋಡದೇ ಬಿರಬಿರನೆ ನಡೆಯುತ್ತಿದ್ದ ಅವನು … ಜೀವನದಲ್ಲಿ ಒಂದು ಮುತ್ತು ಕೂಡಾ ಕೊಟ್ಟುಕೊಳ್ಳಲಿಲ್ಲ ಎಂದು ಹೇಗೆ ಹೇಳುವುದು ಅಂತ ಆತ್ಮಮರುಕದಲ್ಲಿ ಮುಳುಗಿರುವಾಗಲೇ ಚಿತ್ರಾ ‘ನಾಡಿದ್ದು ಅಕ್ಕನ ಮದುವೆ. ಎರಡು ದಿನ ಕ್ಲಾಸಿಲ್ಲ’ ಅಂದಳು
ತಂಗಿಗೆ ಮದುವೆಯಾಗಿ ಏಳು ವರ್ಷದ ಮಗನಿರುವಾಗ ಅಕ್ಕನಿಗೆ ಈಗ ಮದುವೆ? ಅಂತ ಆಶ್ಚರ್ಯದಿಂದ ಕೇಳಿದಾಗ ಅವಳು ದೊಡ್ಡಮ್ಮನ ಮಗಳು, ಸ್ವಂತ ಅಕ್ಕ ಅಲ್ಲ ಅಂದಳು

ಊರಿಗೆ ಹೊರಟಾಗ ಬರುವವರೆಗೆ ಗೆರೆ ಎಳೆಯುವ ಹೋಮ್‌ವರ್ಕ್ ತಗಲಿಹಾಕಿ ಹೊರಟಿದ್ದಳು.
ತುಂಬ ಶ್ರದ್ದೆಯಿಂದ ಈ ಬಾರಿ ಸರಿಯಾಗಿದೆ ಅನ್ನಿಸಿಕೊಳ್ಳಲೇ ಬೇಕು, ಹೂವಿನ ಪೇಂಟಿಂಗ್‌ಗೆ ಪ್ರೊಮೋಷನ್ ಪಡೆಯಲೇ ಬೇಕು ಅನ್ನುವಂತೆ ಎರಡು ದಿನ ಗೆರೆ ಎಳೆದೆಳೆದು ಎಳೆದೆಳೆದು ಹಾಕಿದಳು.
ಕೊನೆಗೂ ಸಪೂರವಾದ ಗೆರೆಗಳು ಸಿದ್ದಿಸಿದಾಗ ಇನ್ನು ಗೆದ್ದೆ ಅನ್ನುವಂತೆ ನಿರಾಳವಾದಳು
ಮೂರನೆಯ ದಿನ ಕ್ಲಾಸಿಗೆ ಹೋಗುವಾಗ ಸುರಭಿಯ ನಡೆಯಲ್ಲಿ ಲಾಸ್ಯವಿತ್ತು
ಚಿತ್ರಾ ಗೋರಂಟಿ ಹಚ್ಚಿದ ಕೈಗಳಲ್ಲಿ, ಹೊಸ ಹೇರ್ ಸ್ಟೈಲಿನಲ್ಲಿ ಚೆಂದ ಕಾಣಿಸುತ್ತಿದ್ದಳು
’ಆಯ್ತಾ ಮದುವೆ? ಎಷ್ಟು ಚೆಂದ ಕಾಣುತ್ತಿದ್ದೀರ ಗೊತ್ತಾ! ಇನ್ನು ಮದುವೆ ಅಲಂಕಾರದಲ್ಲಿ ಹೇಗೆ ಕಾಣಿಸುತ್ತಿರಬಹುದು! ಫೋಟೋ ಬಂದ ಕೂಡಲೇ ನನಗೆ ತೋರಿಸಿ’ ಅಂದಳು
ಚಿತ್ರಾ ಹೆಮ್ಮೆಯ ದನಿಯಲ್ಲಿ ‘ಮದುವೆಗೆ ಬಂದವರೆಲ್ಲಾ ಹಾಗೇ ಹೇಳ್ತಿದ್ದರು … ಅಕ್ಕನಿಗಿಂತ ನಾನೇ ಚೆಂದ ಕಾಣಿಸುತ್ತಿದ್ದೇನೆ ಎಂದು. ಮೂವತ್ತೆರಡು ವರ್ಷ ಅಕ್ಕನಿಗೆ. ದೊಡ್ಡ ಹೆಂಗಸಿನ ಹಾಗೆ ಕಾಣುತ್ತಿದ್ದಳು…’
ಅವತ್ತು ಕೇಳದೇ ಉಳಿದಿದ್ದ ಮಾತು ಇದ್ದಕ್ಕಿದ್ದಂತೆ ನೆನಪಾಗಿ ಸುರಭಿ ‘ಅಕ್ಕನಿಗೆ ಯಾಕೆ ಈಗ ಮದುವೆ? ನಿಮ್ಮದು ಆಗಿ ಎಂಟು ವರ್ಷದ ನಂತರ?’ ಅಂದಳು
ಚಿತ್ರಾ ಮುಖದ ತುಂಬ ನಗು ಹರಡಿಕೊಳ್ಳುತ್ತಾ ‘ಅದೆಂಥ ಕತೆ ಗೊತ್ತಾ … ನನ್ನ ಗಂಡನಿದ್ದಾನಲ್ಲ ಅವನೊಡನೆ ಅಕ್ಕನಿಗೆ ಮದುವೆ ನಿಶ್ಚಯವಾಗಿತ್ತು’ ಅಂದಳು!
ಸುರಭಿಗೆ ಅರೆಕ್ಷಣ ತಲೆ ಬ್ಲ್ಯಾಂಕ್ ಆದಂತಾಗಿ ಪಿಳಿಪಿಳಿ ನೋಡುತ್ತ ಕುಳಿತಳು

‘ಅದು ಹೇಗಾಯ್ತು ಅಂದರೆ ನಾವೆಲ್ಲ ಜಾಯಿಂಟ್ ಫ್ಯಾಮಿಲಿನಲ್ಲಿದ್ವಿ. ಇವಳು ಆಗ ತುಂಬ ಚೆನ್ನಾಗಿದ್ದಳು. ಗುಂಡುಗುಂಡಗೆ ಕಳೆಯಾಗಿದ್ದಳು. ನಾನು ತುಂಬ ಒಣಕಲಿ. ಮನೆಗೆ ಬಂದವರೆಲ್ಲ ಅವಳನ್ನ ಹೊಗಳ್ತಿದ್ದರು. ಆಗಲೇ ಅವಳಿಗೆ ಮದುವೆ ಮಾಡಬೇಕೆನ್ನುವ ವಿಷಯ ಮನೆಯಲ್ಲಿ ಶುರುವಾಯಿತು. ನನ್ನ ಗಂಡ ಅವಳನ್ನ ನೋಡಕ್ಕೆ ಬಂದ. ಅವನೇ ಮೊದಲನೆಯ ಗಂಡು. ಇವಳನ್ನ ನೋಡಿ ಅಲ್ಲೇ ಹೇಳಿಬಿಟ್ಟ ಮದುವೆ ಆಗ್ತೀನಿ ಅಂತ. ಮದುವೆ ಫಿಕ್ಸ್ ಆಯ್ತು. ಆಮೇಲೆ ಅವನು ಆಗೀಗ ಬರ್ತಿದ್ದ ಇವಳನ್ನ ನೋಡಕ್ಕೆ ಅಂತ. ನಾನು ಎದುರಾದರೆ ಪುಟ್ಟ ಹುಡುಗಿ ಥರ ಮಾತಾಡಿಸ್ತಿದ್ದ. ನನಗೆ ಏನನ್ನಿಸ್ತಿತ್ತು ಅಂದರೆ ನನ್ನ ಮೊಲೆ ತುಂಬ ಸಣ್ಣಗಿದ್ದರಿಂದ ಅವನು ನನ್ನ ಸೀರಿಯಸ್ಸಾಗಿ ತಗೊಳ್ತಿಲ್ಲ ಅಂತ. ಆದರೆ ಅಕ್ಕ ಬಂದರೆ ಮೂವತ್ತೆರಡೂ ಹಲ್ಲು ಬಿಟ್ಟು ಅವಳನ್ನೇ ನೋಡ್ತಾ ನಿಲ್ತಿದ್ದ. ನನಗೆ ಯಾಕೋ ಸಕತ್ ಸಿಟ್ಟು ಬರ್ತಿತ್ತು ಅವರ ಪ್ರೀತಿ ನೋಡಿ…’
ಸುರಭಿ ಮಾತಿಲ್ಲದೇ ಕೇಳಿಸಿಕೊಳ್ಳುತ್ತಿದ್ದಳು
‘ಒಂದಿನ ಎಲ್ಲರೂ ಮದುವೆಗೆ ಹೋಗಿದ್ರು. ನಾನೊಬ್ಳೇ ಇದ್ದೆ ಮನೇಲಿ. ಇವನಿಗೆ ಗೊತ್ತಿಲ್ಲ ಹಾಗಾಗಿ ಬಂದ. ಯಾರೂ ಇಲ್ಲದೆ ಇರೋದು ನೋಡಿ ವಾಪಸ್ ಹೋಗುವವನಿದ್ದ. ಆದರೆ ನಾನೇ ಅವನನ್ನು ಒಳಗೆ ಕರೆದೆ. ಅಕ್ಕನ ಮೇಲೆ ಹೊಟ್ಟೆಯುರಿ ಇತ್ತಲ್ಲ ಅದಕ್ಕೇ ಬುದ್ದಿ ಕಲಿಸಬೇಕನ್ನಿಸಿತು … ಅವನ ಜೊತೆ ಅವತ್ತು ಮಲಗಿಬಿಟ್ಟೆ …’
ಸುರಭಿ ಬೆಚ್ಚಿಬಿದ್ದಳು … ಈ ಪರಿಯ ಅಸೂಯೆ? ಹೀಗೂ ಮಾಡುತ್ತಾರಾ ಯಾರಾದರೂ ಅಕ್ಕನಿಗೆ?
ಚಿತ್ರಾ ದೊಡ್ಡದಾಗಿ ನಗುತ್ತ ‘ಆಮೇಲೆ ಮನೆಯವರ ಹತ್ತಿರ ಹೇಳಿಬಿಟ್ಟೆ ಹೀಗಾಯ್ತು ಅಂತ. ಅಕ್ಕ ಫುಲ್ ಥಂಡಾ. ಸಕತ್ ಅತ್ತಳು. ಮನೆಯಲ್ಲೆಲ್ಲ ಸಿಕ್ಕಾಪಟ್ಟೆ ಗಲಾಟೆ. ಈಗೇನು ಮಾಡಬೇಕು ಅಂತ ಗೊತ್ತಿಲ್ಲದೆ ಎಲ್ಲ ಒದ್ದಾಡ್ತಿದ್ರು. ಆಮೇಲೆ ಒಂದು ತಮಾಷೆ ಆಯ್ತು. ಆ ತಿಂಗಳು ನನ್ನ ಪೀರಿಯಡ್ಸ್ ಯಾಕೋ ಮುಂದಕ್ಕೆ ಹೋಯ್ತು. ಅಮ್ಮ ಗಾಭರಿಯಿಂದ ಕೇಳಿದಾಗ ನಾನು ಯಾರಿಗ್ಗೊತ್ತು, ಬಸುರಿ ಗಿಸರಿ ಆಗಿರಬಹುದು ಅಂದುಬಿಟ್ಟೆ!! ಗುಸುಗುಸು ಅಂತಲೇ ಇಡೀ ಮನೆ ತುಂಬ ಸುದ್ದಿ ಹರಡಿತು. ಅಕ್ಕನ ಕಣ್ಣು ಸದಾ ಕೆಂಪಗೆ, ಅಳುತ್ತಲೇ ಇರ್ತಿದ್ದಳು. ನಾನು ಬಸುರಿ ಇರಬಹುದು ಅಂತ ಹೇಳಿದ್ದಕ್ಕೆ ಗಾಭರಿ ಆಗಿ ಅರ್ಜೆಂಟಲ್ಲಿ ಅವನಿಗೆ ನನಗೆ ಮದುವೆ ಮಾಡಿಬಿಟ್ರು. ಮದುವೆ ಆದ ವಾರಕ್ಕೆ ಪೀರಿಯಡ್ಸ್ ಆಯ್ತು…’ ಜೋರಾಗಿ ನಕ್ಕ ಚಿತ್ರಾಳನ್ನೇ ನೋಡಿದ ಸುರಭಿ ಎಂದಿನಂತೆ ವಿಷಯ ಬದಲಿಸಲು ‘ನೀರು’ ಅಂದಳು

ಆ ನಂತರ ಯಾಕೋ ಮಾತಾಡಬೇಕು ಅನ್ನಿಸುವ ಹುಮ್ಮಸ್ಸು ಸತ್ತು ಹೋಯಿತು
ಎರಡು ದಿನದಿಂದ ಎಳೆದಿದ್ದ ಗೆರೆಗಳನ್ನು ತೋರಿಸಲು ಕವರಿನಿಂದ ಬಟ್ಟೆ ಹೊರತೆಗೆದು ಬಹುಶಃ ಈ ಬಾರಿ ಸರಿಯಿದೆ ಎಂದು ಹೇಳುತ್ತಾಳೆ ಅಂದುಕೊಂಡಳು
ಚಿತ್ರಾ ನೀರು ಇವಳಿಗೆ ಕೊಟ್ಟು ಇವಳ ಕೈಲಿದ್ದ ಬಟ್ಟೆ ತೆಗೆದು ನೋಡಿ ‘ಏನಪ್ಪಾ ನಾನೇನೋ ಎರಡು ದಿನದಲ್ಲಿ ಪರ್ಫೆಕ್ಟ್ ಆಗೇ ಬಿಟ್ಟಿರ್ತೀರಾ ಅಂದುಕೊಂಡೆ. ಆದರೆ ಅಂಥ ಇಂಪ್ರೂವ್‌ಮೆಂಟ್ ಕಾಣಿಸ್ತಿಲ್ಲ. ಇಪ್ಪತ್ತು ದಿನದ ಮೇಲಾಯ್ತು. ನೀವು ಇನ್ನೂ ಚೆನ್ನಾಗಿ ಪ್ರ್ಯಾಕ್ಟೀಸ್ ಮಾಡ್ಬೇಕು … ಗೆರೆ ನೋಡಿ ಹೀಗೆ ಸಣ್ಣಗೆ ಇರಬೇಕು … ತುಂಬ ಸಣ್ಣಗೆ’ ಅನ್ನುತ್ತಲೇ ಗೆರೆಗಳನ್ನೆಳೆಯಲಾರಂಭಿಸಿದಳು
ಬಿಳಿಬಟ್ಟೆಯ ತುಂಬ ಹರಡಿದ್ದ ಗೆರೆಗಳನ್ನು ನೋಡುತ್ತ ಕುಳಿತ ಸುರಭಿಗೆ ಅದ್ಯಾಕೋ ಈಗ ಒಂದು ಚೂರೂ ಅವಮಾನವೆನ್ನಿಸಲಿಲ್ಲ….

14 comments

  1. ಚೆನ್ನಾಗಿದೆ ಎರಡು ಪಾತ್ರಗಳು ಒಂದು ಗೆರೆಯ ಎರಡು end points ಥರ ಇವೆ
    ಅವಮಾನ ಅಭ್ಯಾಸವಾಗಿಬಿಟ್ಟರೆ ಅವರೇ ಸುಖಿಗಳಾ!!!!

  2. ಚೆನ್ನಾಗಿದೆ.. ಮುಗಿದಿದ್ದೇ ಗೊತ್ತಾಗ್ಲಿಲ್ಲ..

  3. ಓದಿದ ಹತ್ತು ನಿಮಿಷ ಸುಮ್ಮನೆ ಕೂತೆ.. ಎಷ್ಟು ಸ್ಪೀಡಾಗಿ ಓದಿದೆನೋ .. ತಲೆಯಲ್ಲಿದ್ದ ಬಾಕಿ ಎಲ್ಲವೂ ಮರೆಯಾಗಿ ಬರಿ ಗೆರೆಗಳಷ್ಟೇ ತಲೆಯಲ್ಲಿ ಓಡಿದ್ದು.. ಪೋಲಿ ಮಾತಾಡುವ ಚಿತ್ರ ಟೀಚರ್ ಪಕ್ಕಾ ಕಾಮಿಡಿ ಐಟಂ ಅನಿಸಿದ್ದು ಪಟಕ್ಕಂತ ಮಾಯವಾಗಿ ಸಣ್ಣದೊಂದು ನಡುಕ ನನ್ನಲ್ಲಿ ಹುಟ್ಟಿದ್ದು ಎದ್ದು ನೀರು ಕುಡಿದೆ.. ಭಾರತೀ…ಹೇಗೆ ಬರಿತಿ ಮಾರಾಯ್ತಿ

    • ಥ್ಯಾಂಕ್ಸ್ ವಿಜಯಕ್ಕ! ಖುಷಿಯಾಯ್ತು

  4. ಎಷ್ಟೊಂದು ಚೆನ್ನಾಗಿ ಬರೆದಿದ್ದೀರಿ

  5. ಅಕ್ಕ ಕಥೆ ಆಕಡೆ ಈಕಡೆ ತಿರುಗೋಕೆ ಬಿಡ್ತಿಲ್ಲ.. ಚೆನ್ನಾಗಿ ಓದಿಸ್ಕೊಳ್ತಿದೆ.. ಹೀಗೂ ಮಾತಾಡ್ತಾರಾ.. ಅನ್ನಿಸ್ತು.. ಗೊತ್ತಿಲ್ಲದ ರೀತಿ, ವಿಚಾರ ಇಲ್ಲೇ ತಿಳಿದದ್ದು.. ಬರಹ ಸೂಪರ್ ಅಕ್ಕ.. 🙂

Leave a Reply